Sunday, November 25, 2012

ಕಾಸ್ಮಿಕ್ ಕಿರಣಗಳ ಮೂಲ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಈ ಲೇಖನ- ಕಾಸ್ಮಿಕ್ ಕಿರಣಗಳ ಮೂಲ - ವಿಜಯವಾಣೀ ಪತ್ರಿಕೆಯಲ್ಲಿ ೧೮ ನವೆ೦ಬರ್ ೨೦೧೨ರ೦ದು ಪ್ರಕಟವಾಗಿದ್ದಿತು



-->
ವಿಶ್ವಕಿರಣಗಳ ಮೂಲ ?

ಪಾಲಹಳ್ಳಿ ವಿಶ್ವನಾಥ್

ಕೆಲವು ತಿ೦ಗಳುಗಳ ಹಿ೦ದೆ ಜನರ ಮೇಲೆ ' ದೇವಕಣ'ದ ಸಮ್ಮೋಹನಾಸ್ತ್ರ ಅವರಿಸಿದ್ದಾಗ , ಎಲ್್ಎಚ್.ಸಿ (ಲಾರ್ಜ್ ಹ್ಯಾಡ್ರಾನ್ ಕೊಲೈಡರ್) ಎ೦ಬ ಯ೦ತ್ರ ಬಹಳ ಸುದ್ದಿ ಮಾಡಿತ್ತು. ಜಗತ್ತಿನ ಅತಿ ಹೆಚ್ಚು ಶಕ್ತಿ ಕೊಡುವ ಶಕ್ತಿವರ್ಧಕ ಯ೦ತ್ರ (' ಆಕ್ಸಿಲರೆಟರ್') ಎ೦ದು ಮಾನವನ ಈ ಸಾಧನೆಯನ್ನು ಮಾಧ್ಯಮಗಳು ಜ೦ಭದಿ೦ದ ಹೊಗಳುತ್ತಿದ್ದವು. ಆದರೆ ಇದನ್ನೆಲ್ಲ ನೊಡಿದ ಪ್ರಕೃತಿಯ ಮೊಗದಲ್ಲಿ ಒ೦ದು ಚಿಕ್ಕ ನಗೆ ಮೂಡಿರಬೇಕು ! ಏಕೆ೦ದರೆ ಅದಕ್ಕಿ೦ತ ಕೋಟಿಪಾಲು ಹೆಚ್ಚು ಶಕ್ತಿಯ ಕಣಗಳಿರುವ ಆಗಾರಗಳ ಒಡತಿ ಆವಳು ! ಆ ಕಣಗಳ ಹೆಸರು - ವಿಶ್ವಕಿರಣ ('ಕಾಸ್ಮಿಕ್ ರೇಸ್') . ಈ ಶಕ್ತಿಯುತ ಕಣ್ಗಳ ಮೂಲವೇನು? ಯಾವ ವಿಶೇಷ ಅಕಾಶಕಯ (ಪಲ್ಸಾರ್/ ಕ್ವೇಸಾರ್/ ಇತ್ಯಾದಿ ) ಈ ಕಿರಣಗಳನ್ನು ಉತ್ಪಾದಿಸುತ್ತಿದೆ ? ಓದಿ ನೋಡಿ ..

೨೦ನೆಯ ಶತಮಾನದ ಆದಿಯಲ್ಲಿ ಭೌತವಿಜ್ಞಾನಿಗಳ ಮುಖ್ಯ ಆಸಕ್ತಿ ಇದ್ದದ್ದು ವಿಕಿರಣ ಪಟುತ್ವದಲ್ಲಿ (ರೇಡಿಯೊ ಆಕ್ಟಿವಿ). ಕೆಲವು ಮೂಲವಸ್ತುಗಳು ಕಣಗಳನ್ನು ಹೊರಸೂಸುವ ಈ ಪ್ರಕ್ರಿಯೆಯನ್ನು ಬೆಕೆರಲ್ ಎ೦ಬುವವರು ಕ೦ಡುಹಿಡಿದಿದ್ದು ದೊಡ್ಡ ತಲೆಗಳಾದ ಮೇಡಮ್ ಕ್ಯೂರಿ, ರುಧರ್ಫೋರ್ಡ್ ಇತ್ಯಾದಿ ವಿಜ್ಞಾನಿಗಳೆಲ್ಲಾ ಈ ಸ೦ಶೋಧನೆಯಲ್ಲೇ ಮುಳುಗಿದ್ದರು. ಆದರೆ ವಿಕಿರಣಶೀಲ ವಸ್ತು ಹತ್ತಿರವಿದಿದ್ದರೂ ಅವರ ಉಪಕರಣಗಳಲ್ಲಿ ಬೇರೆ ಯಾವುದೋ ಕಣಗಳ ಗುರುತುಗಳು ಕ೦ಡುಬರುತ್ತಿದ್ದವು. ಯಾವುದೋ ರೇಡಿಯೊ ಸ್ಟೇಷನ್ನಿಗೆ ಹುಡುಕುತ್ತಿರುವಾಗ ಅಸ೦ಬದ್ಧ ಶಬ್ದ ಬರುವತರಹ ಈ ' ನಾಯ್ಸ ' ಎಲ್ಲಿ೦ದ ಬರುತ್ತಿದೆ ಎನ್ನುವ ತಲೆನೋವು ಎಲ್ಲರನ್ನೂ ಕಾಡಿಸುತ್ತಿದ್ದು ಅದು ಭೂಮಿಯಿ೦ದ ಹೊರಬರುವ ಕಣಗಳಿರಬಹುದೆ೦ಬ ಅನುಮಾನ ಬ೦ದಿತು. ಹಾಗಿದ್ದಲ್ಲಿ ಭೂಮಿಯಿ೦ದ ದೂರ ಹೋದರೆ ಈ ಬಾಧೆ ಕಡಿಮೆಯಾಬಬೇಕಲ್ಲವೇ? ವಿಜ್ಞಾನಿಯೊಬ್ಬರು ತಮ್ಮ ಉಪಕರಣವನ್ನು ಆಗ ಇನ್ನೂ ಹೊಸದೆನಿಸಿಕೊ೦ಡಿದ ಪ್ಯಾರಿಸ್ ನಗರದ ಐಫೆಲ್ ಗೋಪುರದ ಮೇಲೆ ತೆಗೆದು ಕೊ೦ಡುಹೋದರೂ ಕಣಗಳ ಸ೦ಖ್ಯೆ ಕಡಿಮೆಯೇನೂ ಆಗಲಿಲ್ಲ. ಆಗ ಆಸ್ಟ್ರಿಯ ದೇಶದ ಸಾಹಸಿ ಯುವಕ ನೊಬ್ಬ ಈ ಪ್ರಯೋಗಗಳಿಗೆ ಉಪಕರಣಗಳನ್ನು ಬೆಲೂನಿನಲ್ಲಿ ಅ೦ತರಿಕ್ಷಕ್ಲ್ಕೆ ತೆಗೆದುಕೊ೦ಡುಹೋಗಲು ನಿರ್ಣಯಿಸಿದನು . ಅವನು ೧೯೧೦ರಿ೦ದ ೧೯೧೩ರವರೆವಿಗೆ ೧೦ ಬಾರಿ ಬೆಲೂನ್ ಯಾತ್ರೆ ಮಾಡಿ ಈ ಕಣಗಳು ಭೂಮಿಯಿ೦ದ ಬರುತ್ತಿಲ್ಲವೆ೦ದು ಕ೦ಡುಹಿಡಿದು ಆಕಾಶದಿ೦ದಲೇ ಇವುಗಳು ಬರುತ್ತಿರಬೇಕು ಎ೦ದು ಸಾಧಿಸಿದನು. ಈ ಸ೦ಶೋಧನೆಗೆ ಆ ಯುವಕ ವಿಕ್ಟರ್ ಹೆಸ್ ಅವರಿಗೆ ೧೯೩೬ರಲ್ಲಿ ನೊಬೆಲ್ ಪ್ರಶಸ್ತಿಯೂ ದೊರಕಿತು !ಅವುಗಳು ಬೆಳಕಿನ ಮತ್ತೊ೦ದು ಅವತಾರವಿರಬಹುದೆ೦ಬ ಅನುಮಾನ ಮೊದಲು ಇದ್ದಿದ್ದ್ದರಿ೦ದ ಕಿರಣವೆ೦ಬ ಹೆಸರು ಕೊಟ್ಟಿದ್ದರೂ ಅವು ಕಣಗಳೇಎ೦ದು ಅನ೦ತರ ಸಾಬಿತಾಯಿತು.
ಆಕಾಶದಿ೦ದ ಬೆಳಕಲ್ಲದೇ ಕಣಗಳೂ ಬರುತ್ತಿದ್ದದ್ದು ಆಶ್ಚರ್ಯವನ್ನು ಉ೦ಟುಮಾಡಿತು. ಈ ಕಣಗಳು (ಮುಖ್ಯವಾಗಿ ಧನ ವಿದ್ಯುದ೦ಶವಿರುವ ಪ್ರೋಟಾನ್ ಕಣಗಳು)ಭೂಮಿಯ ವಾತಾವರಣವನ್ನು ಅಪ್ಪಳಿಸಿದಾಗ ಪ್ರಕ್ರಿಯೆಗಳು ನಡೆದು ಅನೇಕ ಹೊಸ ಕಣಗಳು ಹುಟ್ಟುತ್ತವೆ. ಈ ಮೊದಲ ಪೀಳಿಗೆಯ ಕಣಗಳು ಮತ್ತೆ ಪ್ರಕ್ರಿಯೆಗಳನ್ನು ನಡೆಸಿದಾಗ ಹೊಸ ಕಣಗಳು ಹುಟ್ಟುತ್ತಾ ಹೋಗುತ್ತವೆ. ಹೀಗೆ ಕೆಲವಾರು ಪೀಳಿಗೆಗಳ ಕಣಗಳನ್ನು ಸುರಿಮಳೆ (ಶವರ್ಸ್) ಎ೦ದು ಕರೆಯುತ್ತಾರೆ. ಈ ಕಣಗಳ ನಿರ೦ತರ ಮಳೆಯಲ್ಲಿ ಭೂಮಿಯಲ್ಲಿ ಹುಟ್ಟಿರುವ ಪ್ರಾಣಿಗಳೆಲ್ಲಾ ಆದಿಯಿ೦ದ ತೋಯುತ್ತಿದ್ದು ಮಾನವನ ವಿಕಾಸವೂ ಈ ಮಳೆಯಲ್ಲೇ ನಡೆದಿದೆ ! ಪ್ರತಿ ಸೆಕೆ೦ಡಿನಲ್ಲಿ ಸುಮಾರು ನೂರಾದರೂ ವಿಶ್ವಕಿರಣಗಳ ಕಣಗಳು ನಮ್ಮ ತಲೆಯ ಮೂಲಕ ದೇಹವನ್ನು ಪ್ರವೇಶಿಸುತ್ತಿರುತ್ತವೆ. . ಛತ್ರಿ ಹಿಡಿದರೆ ಕೂಡ ಅದನ್ನು ತೂರಬಲ್ಲವು ಈ ಕಣಗಳು !.
೧೯೩೫ರ ಹೊತ್ತಿಗೆ ಮನುಷ್ಯನಿಗೆ ಮೂರು ಮುಖ್ಯ ಕಣಗಳ ಪರಿಚಯವಾಗಿದ್ದಿತು - ಅವು ಎಲೆಕ್ಟ್ರಾನ್, ಪ್ರೊಟಾನ್ ಮತ್ತು ನ್ಯೂಟ್ರಾನ್ ; ಋಣ, ಧನ ಮತ್ತು ಶೂನ್ಯ ವಿದ್ಯುದ೦ಶದ ಕಣಗಳು . ಇವೆಲ್ಲಾ ಪರಮಾಣುವಿನ ಒಳಗಿನ ಕಣಗಳು . ಆದರೆ ಮಾನವನ ಕುತೂಹಲ ಇಷ್ಟಕ್ಕೇ ನಿಲ್ಲದೆ ಇತರ ಕಣಗಳ ಅವಶ್ಯಕತೆಗಳನ್ನು ಸಿದ್ಧಾ೦ತಗಳು ಪ್ರತಿಪಾದಿಸಿದವು . ಮು೦ದಿನ ಮೂರು ದಶಕಗಳಲ್ಲಿ ಇ೦ತಹ ಕೆಲವು ಕಣಗಳು ವಿಶ್ವಕಿರಣಗಳ ಸುರಿಮಳೆಗಳಲ್ಲಿ ಕ೦ಡುಬ೦ದವು. ಅವುಗಳ ಹೆಸರೂ ಅಸಾಧಾರಣ - ಪೈ ಮೇಸಾನ್, ಕೆ ಮೇಸಾನ್, ಮ್ಯುಯಾನ್, ನ್ಯೂಟ್ರಿನೊ, ಪಾಸಿಟ್ರಾನ್ ಇತ್ಯಾದಿ. ಹೀಗೆ ಈ ವಿಶ್ವಕಿರಣಗಳ ಅಧ್ಯಯನ ಕಣವಿಜ್ಞಾನಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿತು. . ಹೋಮಿ ಭಾಭಾರವರ ನಾಯಕತ್ವದಲ್ಲಿ ಭಾರತ ವಿಶ್ವಕಿರಣಗಳ ಅಧ್ಯಯನದಲ್ಲಿ ಅನೇಕ ಮುಖ್ಯ ಸ೦ಶೋಧನೆಗಳನ್ನು ನಡೆಸಿದೆ , ಈ ಲೇಖನದಲ್ಲಿ ವಿಶ್ವಕಿರಣಗಳ ಮೂಲದ ಬಗ್ಗೆ ನಡೆಯುತ್ತಿರುವ ಸ೦ಶೋಧನೆಗಳನ್ನು ಮಾತ್ರ ವಿವರಿಸಿದೆ.
ಈ ಶಕ್ತಿಯುತ ವಿಶ್ವಕಿರಣಗಳು ಎಲ್ಲಿ೦ದ ಬರುತ್ತಿವೆ ? ಸೂರ್ಯನ೦ತಹ ಸಾಧಾರಣ ತಾರೆಗಳು ಇವನ್ನು ಉತ್ಪಾದಿಸಲು ಆಗುವುದಿಲ್ಲ. ಆದ್ದರಿ೦ದ ಇವು ಯಾವುದೋ ವಿಶೇಷ ಆಕಾಶಕಾಯಗಳಲ್ಲಿ ತಯಾರಾಗಲೇಬೇಕು. ಆದರೆ ಈ ಕಣಗಳಿಗೆ ವಿದ್ಯುದ೦ಶವಿರುವುದರಿ೦ದ ಅವು ಗ್ಯಾಲಕ್ಸಿಗಳ ಮತ್ತು ತಾರೆಗಳ ಮದ್ಯದಲ್ಲಿರುವ ಅಯಸ್ಕಾ೦ತೀಯ ಕ್ಷೇತ್ರಗಳಲ್ಲಿ ಚಲಿಸಿ ಚದುರಿ ಚದುರಿ ತಮ್ಮ ಮೂಲದ ಗುರುತನ್ನು ಕಳೆದುಕೊ೦ಡುಬಿಟ್ಟಿರುತ್ತವೆ.. ಆದ್ದರಿ೦ದ ಉಪಕರಣಗಳಲ್ಲಿ ನೋಡಿದರೆ ಆಕಾಶದ ಎಲ್ಲ ಕಡೆಗಳಿ೦ದಲೂ ಬರುವ ಹಾಗೆ ಕಾಣಿಸುತ್ತದೆ. ಈ ಪ್ರಶ್ನೆಗೆ ಉತ್ತರ ಕೊಡಲು ಹುಟ್ಟಿಕೊ೦ಡ ಒ೦ದು ಹೊಸ ಅಧ್ಯಯನದ ಹೆಸರು ಗ್ಯಾಮಾ ಕಿರಣ ಖಗೋಳ ವಿಜ್ಞಾನ (ಗ್ಯಾಮಾ ರೇ ಅಸ್ಟ್ರಾನಮಿ ).ಆಕಾಶಕಾಯಗಳಲ್ಲಿ ತಯಾರಾಗುವ ವಿಶ್ವಕಿರಣಗಳು ಸಮೀಪದಲ್ಲೇ ಪ್ರಕ್ರಿಯೆ ನಡೆಸಿ ಇತರ ಕಣಗಳನ್ನು ಹುಟ್ಟಿಸಿದಾಗ ಆ ಕಣಗಳಲ್ಲಿ ಕೆಲವು ಕ್ಷಯಿಸಿ ಗ್ಯಾಮಾ ಕಿರಣಗಳು ಹುಟ್ಟುತ್ತವೆ. ಗ್ಯಾಮಾ ಕಣ ಶಕ್ತಿಯುತ ಬೆಳಕಾದ್ದರಿ೦ದ ಶೂನ್ಯ ವಿದ್ಯುದ೦ಶವಿದ್ದ್ದು ಅಯಸ್ಕಾ೦ತಿಯ ಕ್ಶೇತ್ರಗಳಿ೦ದ ಯಾವ ಪರಿಣಾಮವೂ ಇಲ್ಲದೆ ನೇರವಾಗಿ ಭೂಮಿಗೆ ಬರುತ್ತದೆ. ಅ೦ದರೆ ಅವುಗಳಿಗೆ ತಮ್ಮ ಮೂಲದ ಮಾಹಿತಿ ಇದ್ದೇ ಇರುತ್ತದೆ. ಅವು ನಮ್ಮ ವಾತಾವರಣವನ್ನು ಪ್ರವೇಶಿಸಿ ಉ೦ಟುಮಾಡುವ ಸುರಿಮಳೆಯ ಕಣಗಳನ್ನು ಉಪಯೋಗಿಸಿಕೊ೦ಡು ಅವುಗಳ ಮೂಲವನ್ನು ಕ೦ಡು ಹಿಡಿಯಬಹುದು. ಈ ಕಣಗಳು ಭೂಮಿಯ ವಾತಾವರಣದಲ್ಲಿ ಚಲಿಸುವಾಗ ಚೆರೊ೦ಕೋವ್ ಬೆಳಕು ಎ೦ಬ ವಿಶೇಷ ಬೆಳಕನ್ನು ಉತ್ಪಾದಿಸುತ್ತವೆ . ದೊಡ್ಡ ದೊಡ್ಡ ಕನ್ನಡಿಗಳನ್ನು ದೂರದರ್ಶಕಗಳ ತರಹ ಉಪಯೋಗಿಸಿ ಅ ಬೆಳಕನ್ನು ಹಿಡಿದು ಅದು ಆಕಾಶದ ಯಾವ ಭಾಗದಿ೦ದ ಬರುತ್ತಿದೆ ಎ೦ದು ಗುರುತಿಸಬಹುದು .
----------------------------------------------------
(ಇದನ್ನು ಬೇರೆ ಕಡೆ ತೋರಿಸಬಹುದು ) _ನಿರ್ವಾತ ಪ್ರದೆಶದಲ್ಲಿ ಬೆಳಕಿನ ವೇಗವನ್ನು ಯಾವ ಕಣವೂ ಮೀರಿಸಲಾಗುವುದಿಲ್ಲವಾದರೂ ಬೆಳಕು ಒ೦ದುಮಾಧ್ಯಮ (ನೀರು, ಗಾಳಿ ,ಗಾಜು ಪ್ಲಾಸ್ಟಿಕ್ ಇತ್ಯಾದಿ) _ವನ್ನು ಪ್ರವೇಶಿಸಿದಾಗ ಅದರ ವೇಗ ಕಡಿಮೆಯಾಗುತ್ತದೆ. ಅದೇ ಮಾಧ್ಯಮವನ್ನು ಪ್ರವೇಶಿಸುವ ಕಣಕ್ಕೆ ಬೆಳಕಿಗಿ೦ತ ಹೆಚ್ಚು ವೇಗವಿರುವ ಸಾಧ್ಯತೆಗಳಿವೆ. ಹಾಗೆ ಆದಾಗ ಈ ಚೆರ್೦ಕೋವ್ ಬೆಳಕು (ಮುಖ್ಯವಾಗಿ ನೀಲಿಯ ಬಣ್ಣ) ಹೊರಬರುತ್ತದೆ. ಈ ಬೆಳಕನ್ನು ವಿಮಾನಗಳು ಶಬ್ದದ ವೇಗಕ್ಕಿ೦ತ ಅಧಿಕ ವೇಗದಿ೦ದ ಹೋಗುವಾಗ ಹುಟ್ಟುವ ' ಸಾನಿಕ್ ಬೂಮ್' ಗೆ ಹೋಲಿಸುತ್ತಾರೆ. ಈ ಪ್ರಕ್ರಿಯನ್ನು ಮೊದಲು ಪ್ರತಿಪಾದಿಸಿದ ರಷ್ಯದ ವಿಜ್ಞಾನಿ ಚೆರೆ೦ಕೋವ್ ಅವರಿಗೆ ಈ ಸ೦ಶೋಧನೆಗೆ ೧೯೫೮ರಲ್ಲಿ ನೊಬೆಲ್ ಬಹುಮಾನವೂ ಬ೦ದ್ದಿದ್ದಿತು .
----------------------------------------------------
ಕೆಲವು ದಶಕಗಳಿ೦ದ ಈ ಪ್ರಯೋಗಗಳು ನಡೆಯುತ್ತಿದ್ದರೂ ಕಳೆದ ದಶಕದಲ್ಲಿ ಅನೇಕ ಸುಧಾರಣೆಗಳು ನಡೆದು ಸ್ವಾರಸ್ಯಕರ ಮಾಹಿತಿಗಳು ದೊರಕಿವೆ . ಪಶ್ಚಿಮದಲ್ಲಿ ಹಲವಾರು ಕಡೆ ಈ ಗ್ಯಾಮಾ ರೇ ಖಗೋಳ ವಿಜ್ಞಾನದ ಅಧ್ಯಯನ ನಡೆಯುತ್ತಿದೆ. ಭಾರತದಲ್ಲಿ ಮೊದಲು ಊಟಿ, ಗುಲ್ಮಾರ್ಗ್, ಪಚ್ಮಾರಿ ಮತ್ತು ಮೌ೦ಟ್ ಅಬು ವಿನಲ್ಲಿ ಈ ಪ್ರಯೋಗಗಳು ನಡೆಯಿತ್ತಿದ್ದು . ಈಗ ಭಾರತದ ಉತ್ತರದ ಲಡಖ್ ಪ್ರಾ೦ತ್ಯದ ಹಿಮಾಲಯ ಪರ್ವತ ಪ್ರದೇಶದಲ್ಲಿ ಮು೦ದುವರಿಯುತ್ತಿವೆ. ಅಲ್ಲಿಯ ಮುಖ್ಯ ನಗರ ೩೩೦೦ ಮಿಟರ್ ಎತ್ತರದ ಲೇಹ್ ಯಿ೦ದ ಆಗ್ನೇಯ ದಿಕ್ಕಿನಲ್ಲಿ ಸುಮಾರು ೨೫೦ ಕಿಮೀ ದೂರವಿರುವ ಹನ್ಲೆ ಗ್ರಾಮದ (ಚೈನಾ ಗಡಿಯ ಬಳಿ) ಹತ್ತಿರ ಕಳೆದ ಕೆಲವು ವರ್ಷಗಳಿ೦ದ ಈ ಖಗೋಳ ವಿಜ್ಞಾನದ ಅಧ್ಯಯನ ನಡೆಯುತ್ತಿದೆ. . ೪೩೦೦ ಮೀಟರ್ ಎತ್ತರದಲ್ಲಿರುವ ಈ ವೇಧಶಾಲೆಯ ಹತ್ತಿರವೇ ಭಾರತೀಯ ಖಭೌತವಿಜ್ಞಾನ ಸ೦ಸ್ಥೆ (. . ) ೧೨ ವರ್ಷಗಳ ಹಿ೦ದೆ ಸ್ಥಾಪಿಸಿದ ೨ ಮೀಟರ್ ವ್ಯಾಸದ ದೂರದರ್ಶಕವೂ ಇದೆ. ' ಆಪ್ಟಿಕಲ್ ' ದೂರದರ್ಶಕ ಪ್ರಪ೦ಚದ ಅತಿ ಉನ್ನತ ಪ್ರದೇಶದ ದೂರದರ್ಶಕ ಎ೦ದು ಹೆಸರು ಗಳಿಸಿದೆ

ಬೆ೦ಗಳೂರಿನ ಭಾರತೀಯ ಖಭೌತವಿಜ್ಞಾನ ಕೇ೦ದ್ರ, , ಮು೦ಬಯಿಯ ಟಾಟಾ ಮೂಲಭೂತ ಅಧ್ಯಯನ ಸ೦ಸ್ಥೆ, ಮತ್ತು ಕಲ್ಕತ್ತದ ಸಹಾ ಬೈಜಿಕ ಸ೦ಶೋಧನಾ ಕೇ೦ದ್ರ, ಭಾಗವಹಿಸುತ್ತಿರುವ ಈ ಗ್ಯಾಮಾ ಖಗೋಳ ವಿಜ್ಞಾನದ ಪ್ರಯೋಗಗಳಿಗೆ ಹ್ಯಾಗರ್ ಎ೦ಬ ಹೆಸರು. ಹಿಮಾಲಯದ ಅತಿ ಉನ್ನತ ಪ್ರದೆಶದಲ್ಲಿ ನಡೆಸುತ್ತಿರುವುದರಿ೦ದ ವಾತಾವರಣದ ದುಷ್ಪರಿಣಾಮಗಳು ಕಡಿಮೆಯಿದ್ದು ಕೆಳ ಪ್ರದೇಶಗಳಲ್ಲಿ ಇರದ ಕೆಲವು ಪ್ರಯೋಜನಗಳನ್ನು ಈ ವೇಧಶಾಲೆ ಹೊ೦ದಿದೆ. ಅದಲ್ಲದೆ ಕಣಗಳು ಉ೦ಟುಮಾಡುವ ಚೆರೊ೦ಕೋವ್ ಬೆಳಕು ಕೂಡ ಕಡಿಮೆ ಹೀರಲ್ಪಟ್ಟಿರುತ್ತದೆ. . ಇದುವರೆವಿಗೆ ಇಲ್ಲಿಯ ಮತ್ತು ಇತರ ಸ೦ಶೋಧನೆಗಳಿ೦ದ ಗ್ಯಾಮಾ ಕಣಗಳನ್ನು ಕೊಡುವ ಅನೇಕ ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟಿವೆ. ಇವುಗಳಲ್ಲಿ ಜಗತ್ತಿನ ಅತಿ ಶಕ್ತಿಯುತ ಪ್ರಕ್ರಿಯೆಗಳು ನಡೆಯುತ್ತಿರುವುದಕ್ಕೆ ಈ ಗ್ಯಾಮಾ ಕಿರಣಾಗಳು ಸಾಕ್ಷಿ . ಸೂಪರ್ನೋವಾ ಅವಶೇಶಗಳು, ಕ್ವೇಸಾರ್ ತರಹದ ಅಗಾಧ ದ್ರವ್ಯರಾಶಿಯ ಕಪ್ಪು ಕುಳಿಗಳಿರುವ ಅತಿ ಶಕ್ತಿಯುತ ಗ್ಯಾಲಕ್ಸಿ ಕೇ೦ದ್ರಗಳು ಇತ್ಯಾದಿ ಆಕಾಶಕಾಯಗಳಿ೦ದ ಗ್ಯಾಮಾ ಕಿರಣಗಳು ಕ೦ಡುಹಿಡಿಯಾಲ್ಪಟ್ಟಿವೆ. . ಬೇರೆಯ ಪ್ರಕ್ರಿಯೆಗಳೂ ಈ ಗ್ಯಾಮಾ ಕಿರಣಗಳನ್ನು ಉ೦ಟುಮಾಡುವ ಸಾಧ್ಯತೆ ಇರುವುದರಿ೦ದ ಈ ಆಕಾಶಕಾಯಗಳು ವಿಶ್ವಕಿರಣಗಳ ಮೂಲ ಎ೦ದು ಹೇಳಲಾಗುತ್ತಿಲ್ಲ. ಅ೦ತೂ ಅವಿಷ್ಕಾರದ ನೂರು ವರ್ಷ ಕಳೆದರೂ ಈ ವಿಶ್ವಕಿರಣಗಳ ಮೂಲವನ್ನು ಇನ್ನೂ ತಿಳಿಯಲಾಗಿಲ್ಲ ! ಈ ಪ್ರಯೋಗಗಳಲ್ಲಿ ಇನ್ನೂ ಅನೇಕ ಸುಧಾರಣೆಗಳು ನಡೆಯುತ್ತಿರುವುದರಿ೦ದ ಈ ಪ್ರಶ್ನೆ ಗೆ ಶೀಘ್ರದಲ್ಲೇ ಉತ್ತರ ದೊರಕಬಹುದು !



No comments:

Post a Comment