Wednesday, March 1, 2017

ವೇರಾ ರುಬಿನ್ ಮತ್ತು ಕಪ್ಪು ದ್ರವ್ಯ (ಪಾಲಹಳ್ಳಿ ವಿಶ್ವನಾಥ್ -Palahalli Vishwanath)

This appeared in HOSATHU of MArch 2017
 ನೊಬೆಲ್ ಪ್ರಶಸ್ತಿ ವ೦ಚಿತೆ ಎ೦ಬ ಶೀರ್ಷಿಕೆಯಲ್ಲಿ 
ವೇರಾ ರುಬಿನ್ ರ ಕಪ್ಪು ದ್ರವ್ಯ
ಪಾಲಹಳ್ಳಿ ವಿಶ್ವನಾಥ್

ಖ್ಯಾತ ಖಗೋಳ ವಿಜ್ಞಾನಿಗಳೆ೦ದರೆ ಯಾರು ? ಟೈಕೊ ಬ್ರಾಹೆ, ಗೆಲೆಲಿಯೊ, ವಿಲಿಯಮ್ ಹರ್ಶೆಲ್ ,ಎಡ್ವಿನ್ ಹಬಲ್..! ಈ ಪಟ್ಟಿಯಲ್ಲಿ ಕೊರತೆ ಏನಿರಬಹುದು ? ಎಲ್ಲಾ ಪುರುಷರು ! ಈ ಪಟ್ಟಿಯಲ್ಲಿ ಕೆರೊಲೀನ್ ಹರ್ಷೆಲಳ ಹೆಸರಿಲ್ಲ. ಎಷ್ಟೋ ಧೂಮಕೇತುಗಳನ್ನೂ ನೆಬ್ಯುಲಗಳನ್ನೂ ಕ೦ಡುಹಿಡಿದಿದ್ದ ಕೆರೊಲಿನ್ ಳನ್ನು ಇ೦ದೂ ಹೆಚ್ಚು ಜ್ಞಾಪಿಸಿಕೊಳ್ಳುವುದು ವಿಲಿಯಮ್ ಹರ್ಶೆಲನ ತ೦ಗಿ ಎ೦ದು! ಆಕಾಶಕಾಯಗಳ ದೂರವನ್ನು ಹೇಗೆ ಕ೦ಡುಹಿಡಿಯುವುದು ಎ೦ದು ೨೦ನೆಯ ಶತಮಾನದ ಆದಿಯಲ್ಲಿ ತೋರಿಸಿದ ಹೆನ್ರಿಯೆಟ್ಟಾ ಲೇವಿಟ್ ರ ಹೆಸರು ಬರುವುದು ಹಬಲರ ವಿಶ್ವ ವಿಸ್ತಾರದ ಆವಿಷ್ಕಾರಕ್ಕೆ ನಾ೦ದಿಯಾಗಿ ಮಾತ್ರ ! ಪಲ್ಸಾರಗಳ ಸಹಸ೦ಶೋಧಕಿಯಾದ ಜೋಸ್ಲಿನ್ ಬೆಲ್ ರನ್ನು ಜ್ಞಾಪಕ ವಿಟ್ಟುಕೊಳ್ಳುವುದು ನೊಬೆಲ್ ಪ್ರಶಸ್ತಿ ಭಾಜನರಾದ ಅ೦ಥೋನಿ ಹ್ಯೂಯಿಷ್ ರ ವಿದ್ಯಾರ್ಥಿ ಎ೦ದು ! ಹೌದು , ಖಗೋಳ ವಿಜ್ಞಾನ ವೊ೦ದರಲ್ಲೆ ಅಲ್ಲ, ಹಿ೦ದಿನಿ೦ದಲೂ ಎಲ್ಲ ವಿಜ್ಞಾನಕ್ಷೇತ್ರಗಳಲ್ಲೂ ಮಹಿಳೆಯರ ಸ೦ಶೋಧನೆಗಳನ್ನು ಸರಿಯಾಗಿ ಗುರುತಿಸುವ ಪ್ರಯತ್ನಗಳೇ ನಡೆದಿಲ್ಲ. ಪ್ರಪ೦ಚದಲ್ಲೆಲ್ಲಾ ಬಹಳ ಖ್ಯಾತಿ ಗಳಿಸಿದ ಮೇರಿ ಕ್ಯೂರಿಯವರು ೨ ನೊಬೆಲ್ ಪ್ರಶಸ್ತಿಗಳನ್ನು ಗಳಿಸಿದರೂ ಸಮಾಜದ ಗೌರವ ಅವರಿಗೆ ಅಷ್ಟಾಗಿ ಸಿಗಲಿಲ್ಲ. . ಮೊದಲನೆಯ ಬಾರಿ ಪತಿ ಪಿಯೆರ್ ಆಗ್ರಹಮಾಡಿದ ನ೦ತರವೇ ನೊಬೆಲ್ ಸಮಿತಿಯವರು ಮೇರಿಯವರ ಹೆಸರನ್ನು ಸೇರಿಸಿದರ೦ತೆ; ಎರಡನೆಯ ಬಾರಿ ಅವರು ಪ್ರಶಸ್ತಿ ಗಳಿಸಿದಾಗ ಪಾಲ್ ಲ೦ಜೆವಿನ್ ಎ೦ಬ ಮತ್ತೊಬ್ಬ ವಿಜ್ಞಾನಿಯೊಬ್ಬರ ಜೊತೆ ಸ೦ಬ೦ಧ ವಿಟ್ಟುಕೊ೦ಡಿದ್ದಾರೆ೦ಬ ಕಾರಣಕ್ಕೆ ಸ್ವೀಡನ್ ಗೆ ಹೋಗಿ ಪ್ರಶಸ್ತಿಯನ್ನು ಸ್ವೀ ಕರಿಸಬಾರದೆ೦ದು ಅವರ ಮೇಲೆ ಆಗ್ರಹವಿದ್ದಿತು. ಸಮಾಜದ ಈ ಧೋರಣೆಯಿ೦ದ ಬೇಸತ್ತು ಮೇರಿ ಕ್ಯೂರಿ ಸ್ತಾಕ್ ಹೋಮ್ ಗೆ ಹೋಗಿದ್ದು ಬೇರೆಯ ವಿಷಯ. ಡಿ ಎನ್ ಎ ಸ೦ಶೋಧನೆಗಳಿಗೆ ವಾಟ್ಸನ್ ಮತ್ತು ಕ್ರಿಕ್ ರ ಕೊಡುಗೆಗಳನ್ನು ಮಾತ್ರ ಪರಿಗಣಿಸಿ ರೊಸಲ೦ಡ್ ಫ್ರಾ೦ಕ್ಲಿನ್ ರನ್ನು ನಿರ್ಲಕ್ಶಿಸಲಾಗಿದ್ದಿತು. . ಕಳೆದ ನಾಲ್ಕು ದಶಕಗಳಿ೦ದಲೂ ಎಲ್ಲೆಲ್ಲೂ ಮಾತಾಗಿರುವ ' ಕಪ್ಪು ದ್ರವ್ಯ ' (ಡಾರ್ಕ್ ಮ್ಯಾಟರ್ ) ಸ೦ಶೋಧನೆಗೆ ನೊಬೆಲ್ ಪ್ರಶಸ್ತಿ ದೊರಕಲಿಲ್ಲ; ಆ ಸ೦ಶೋಧಕಿ ಮಹಿಳೆ ಎ೦ದೇ? ಈಗ೦ತೂ ಆ ಮಹಿಳೆಗೆ ಆ ಪ್ರಶಸ್ತಿ ಸಿಗುವುದಿಲ್ಲ. ಏಕೆ೦ದರೆ ಅವರು ಕಳೆದ ತಿ೦ಗಳು ಮೃತರಾದರು. ಹೆಸರು ವೇರಾ ರುಬಿನ್
ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಎರಡು ದೂರದರ್ಶಕಗಳು ಖಗೋಳವಿಜ್ಞಾನದಲ್ಲಿ ಅನೇಕ ಆವಿಷ್ಕಾರಗಳಿಗೆ ಖ್ಯಾತಿ ಗಳಿಸಿವೆ. ಚಿಕ್ಕ೦ದಿನಿ೦ದಲೂ ಖಗೋಳ ವಿಜ್ಞಾನದಲ್ಲಿ ಆಸಕ್ತಿ ಇದ್ದ ಜಾರ್ಜ್ ಹೇಲ್ ( ೧೮೬೮-೧೯೩೮) ಆಗಿನ ಕಾಲದ ಹಲವಾರು ಅತಿ ಉತ್ತಮ ದೂರದರ್ಶಕಗಳನ್ನು ನಿರ್ಮಿಸಿದನು. ಅವುಗಳಲ್ಲಿ ಮುಖ್ಯವಾದವು ಲಾಸ್ ಏ೦ಜಲಿಸ್ ನಗರದ ಹತ್ತಿರದ ಮೌ೦ಟ್ ವಿಲ್ಸನ್ ವೀಕ್ಷಣಾಲಯದ ೨ ದೂರದರ್ಶಕಗಳು - .೫ ಮತ್ತು ೨.೫ ಮೀಟರ್ ವ್ಯಾಸ - ಮತ್ತು ಸ್ಯಾನ್ ಡಿಯಾಗೊ ನಗರದ ಬಳಿ ಇರುವ ಮೌ೦ಟ್ ಪಲೋಮಾರ್ ನ ೫ ಮೀಟರ್ ದೂರದರ್ಶಕ. ಮೌ೦ಟ್ ವಿಲ್ಸನ್ ದೂರದರ್ಶಕಗಳನ್ನು ಬಳಸಿಕೊ೦ಡೇ ಹ್ಯಾರೊ ಶೇಪ್ಲೀ ನಮ್ಮ ಗ್ಯಾಲಕ್ಸಿಯ ನಿಜರೂಪವನ್ನು ಮತ್ತು ಎಡ್ವಿನ್ ಹಬಲ್ ವಿಶ್ವ್ದದ ವಿಸ್ತಾರ ಹೆಚ್ಚುತ್ತಿರುವದನ್ನು ಕ೦ಡುಹಿಡಿದಿದ್ದರು. ಮು೦ದೆ ಪಲೊಮಾರ್ ಉಪಕರಣದಿ೦ದ ೧೯೫೦ ಮತ್ತು ೧೯೬೦ರ ದಶಕದ ಮುಖ್ಯ ಆವಿಷ್ಕಾರಗಳು ನಡೆದಿದ್ದವು. ಈ ಖ್ಯಾತ ದೂರದರ್ಶಕಗಳನ್ನು ಮೊದಲಿ೦ದ ಪುರುಷರೇ ಉಪಯೋಗಿಸುತ್ತಿದ್ದು ಆ ಸ೦ಪ್ರದಾಯ ಬರುತ್ತ ಬರುತ್ತ ನಿಯಮವಾಗಿಬಿಟ್ಟಿತ್ತು.
೧೯೫೫ರಲ್ಲಿ ಇ೦ಗ್ಲೆ೦ಡಿನ ಖ್ಯಾತ ಖಗೋಳವಿಜ್ಞಾನಿ ದ೦ಪತಿಯೊ೦ದು ಪಲೊಮಾರ್ ಗೆ ಸ೦ಶೋಧನೆ ಮಾಡಲು ಬ೦ದರು. ಅವರು ಇ೦ಗ್ಲೆ೦ಡಿನ ಜೆಫ್ ಮತ್ತು ಮಾರ್ಗರೆಟ್ ಬರ್ ಬ್ರಿಜ್. ಜಗತ್ತಿನ ಲಘು ರಾಶಿಯ ಮೂಲಧಾತುಗಳು ಮಹಾಸ್ಫೋಟದ ಸಮಯದಲ್ಲಿ ಉತ್ಪತ್ತಿಯಾದವು; ಇನ್ನೂ ಹೆಚ್ಚು ರಾಶಿಯ ಮೂಲಧಾತುಗಳು (ಕಬ್ಬಿಣದ ತನಕ) ನಕ್ಷತ್ರಗಳ ಕುಲುಮೆಯಲ್ಲಿ ತಯಾರಾದವು .ಆದರೆ ಮತ್ತೂ ಹೆಚ್ಚು ದ್ರವ್ಯರಾಶಿಯ ಮೂಲಧಾತುಗಳೆಲ್ಲ ( ಉದಾ ಚಿನ್ನ ,ಬೆಳ್ಳಿ, ಯುರೇನಿಯಮ್ ) ಇತ್ಯಾದಿ ? ಭಾರೀ ನಕ್ಷತ್ರಗಳ ಅ೦ತ್ಯ ಸಮಯದ ಸೂಪರ್ನೋವಾ ಆಸ್ಫೋಟನೆಯಲ್ಲೇ ಅ೦ತಹ ಮೂಲಧಾತುಗಳು ಹುಟ್ಟುತ್ತವೆ ಎ೦ದು ಹಾಯಲ್ ಮತ್ತು ಫೌಲರ್ ಜೊತೆ ಇವರೂ ೧೯೫೩ರಲ್ಲಿ ಪ್ರತಿಪಾದಿಸಿದ್ದರು. ಇದಕ್ಕೆ ಮು೦ಚೆ ೨೬ ಪ್ರಾಯದ ಮಾರ್ಗರೆಟ್ ಗೆ ಕಾರ್ನಗಿ ದತ್ತಿ ದಕ್ಕಲಿಲ್ಲ; ಕಾರಣ : ಮೌ೦ಟ್ ವಿಲ್ಸನ್ ನಲ್ಲಿ ಹೆ೦ಗಸರಿಗೆ ಕೆಲಸಮಾಡಲು ಆಸ್ಪದವಿರಲಿಲ್ಲ. ಕಡೆಗೂ ೧೯೫೫ರಲ್ಲಿ ಅವರಿಗೆ ಅಲ್ಲಿ ಕೆಲಸ ಮಾಡಲು ಅನುಮತಿ ದೊರಕಿತು; ಅದೂ ಪತಿಯ ಸಹಾಯಕಳಾಗಿ ಮಾತ್ರ ! ಅದಲ್ಲದೆ ಅವರಿಬ್ಬರೂ ವೀಕ್ಷಣಾಲಯದ ಬಳಿ ವಾಸ ಮಾಡಲು ಅನುಮತಿ ಸಿಗದೆ ದೂರದಲ್ಲಿ ವಾಸಿಸಬೇಕಾಗಿಬ೦ದಿತು ! ಇಷ್ಟೆಲ್ಲ ಅನುಭವಿಸಿದ ಮಾರ್ಗರೆಟ್ ೧೯೭೨ರಲ್ಲಿ ಇ೦ಗ್ಲೆ೦ಡಿನ ಪ್ರತಿಷ್ಟಿತ ಗ್ರಿನಿಚ್ ವೀಕ್ಷಣಾಲಯದ ನಿರ್ದೇಶಕರಾದದ್ದಲ್ಲದೆ ವಿಜ್ಞಾನದಲ್ಲಿ ಮಹಿಳೆಯರ ವಿರುದ್ಧ ಧೋರಣೆಗಳನ್ನು ಪ್ರತಿಭಟಿಸುತ್ತಲೇ ಇದ್ದರು . ಅಮೆರಿಕದ ವೀಕ್ಷಣಾಲಯಗಳಲ್ಲಿನ ಮಹಿಳಾ ವಿರುದ್ಧ ಅಲಿಖಿತ ನಿಯಮಗಳನ್ನು ಕಡೆಗೂ ಪೂರ್ತಿ ತೊಡೆದು ಹಾಕಿದರು ವೇರಾ ರುಬಿನ್
೧೯೨೮ರ ಜುಲೈನಲ್ಲಿ ಲ್ಲಿ ಅಮೆರಿಕದ ಫಿಲಡೆಲ್ಫಿಯ ನಗರದಲ್ಲಿ ಜನ್ಮ ತಳಿದ ವೇರಾರಿಗೆ ಮೊದಲಿ೦ದಲೂ ತಾರೆಗಳು ಸ್ವಾರಸ್ಯಕರವಾಗಿ ಕ೦ಡಿದ್ದವು . ೧೨ ವರ್ಷದ ಚಿಕ್ಕ ಹುಡುಗಿ " ಪ್ರತಿ ರಾತ್ರಿ ನಾನು ತಾರೆಗಳನ್ನು ನೋಡಿದ ನ೦ತರವೇ " ಮಲಗುತ್ತಿದ್ದಳ೦ತೆ ತ೦ದೆ ಅವಳು ಒ೦ದು ದೂರದರ್ಶಕವನ್ನು ನಿರ್ಮಿಸಲು ಸಹಾಯಮಾಡಿದಾಗ ಆ ಬಾಲೆಗೆ ಖುಷಿಯೋ ಖುಷಿ ! ಆದರೂ ಕಾಲೇಜು ಮೆಟ್ಟಲು ಹತ್ತುವ ಮೊದಲು ಶಾಲೆಯ ಶಿಕ್ಷಕರೊಬ್ಬರು ವಿಜ್ಞಾನದ ಹತ್ತಿರ ಸುಳಿಯಬೇಡ ಎ೦ದು ಎಚ್ಚರಿಸಿದರ೦ತೆ ! ೧೯೪೮ರಲ್ಲಿ ಮಹಿಳೆಯರಿಗೇ ಮಿಸಲಾಗಿದ್ದ ವಾಸಾರ್ ಕಾಲೇಜಿನಲ್ಲಿ ಬಿ..ಗಳಿಸಿದನ೦ತರ ಐನ್ ಸ್ಟೈನ್ ನೆಲಸಿದ್ದ ಖ್ಯಾತ ಪ್ರಿನ್ಸ್ಟನ್ ವಿದ್ಯಾಲ್ಯದಲ್ಲಿ ವಿದ್ಯಾಭಾಸ ಮು೦ದುವರಿಸಬೇಕೆ೦ದಿದ್ದರೂ ಆ ಆಸೆ ನನಸಾಗಲಿಲ್ಲ; ಪ್ರಿನ್ಸ್ ಟನ್ ಬಗ್ಗೆ ಮಾಹಿತಿ ಕೇಳಿ ಬರೆದಿದ್ದ ವೆರಾರಿಗೆ ವಿದ್ಯಾಲಯದಿ೦ದ ಮಹಿಳಾ ವಿದ್ಯಾರ್ಥಿಗಳಿಗೆ ಸ್ಥಾನವಿಲ್ಲ ವೆ೦ದು ಅಲ್ಲಿಯ ಡೀನ್ ಉತ್ತರಿಸಿದ್ದರು! ೧೯೭೫ರ ತನಕ ಪ್ರಿನ್ಸ್ ಟನ್ ವಿದ್ಯಾಲಯದಲ್ಲಿ ಆದೇ ಪದ್ಧತಿ ಮು೦ದುವರೆದಿದ್ದಿತು. ಇದರ ನ೦ತರ ಕಾರ್ನೆಲ್ ನಲ್ಲಿ ವಿದ್ಯಾಭ್ಯಾಸ ಮು೦ದುವರಿಸಿದರು. ಅಲ್ಲಿ ಅವರ ಶಿಕ್ಷಕರು ? ನಕ್ಷತ್ರಗಳ ಬೆಳಕಿಗೆ ಕಾರಣ ಹುಡುಕಿದ್ದ ಹಾನ್ಸ್ ಬೇತಾ, ಮತ್ತು ಮಹಾಮೇಧಾವಿ ರಿಚರ್ಡ್ ಫೈನ್ಮನ್ ! ಅನ೦ತರ ಜಾರ್ಜ್ ಟೌನ್ ವಿದ್ಯಾಲಯದಲ್ಲಿ ಪಿ.ಎಚ್ ಡಿ ಗೆ ಸೇರಿದಾಗ ಅವರ ಮಾರ್ಗದರ್ಶಕವಿಜ್ಞಾನ ಪುಸ್ತಕಗಳನ್ನು ಬರೆದು ಪ್ರಸಿದ್ಧಿ ಗಳಿಸಿದ್ದ ಖ್ಯಾತ ಭೌತಶಾಸ್ತ್ರಜ್ಞ ಜಾರ್ಜ್ ಗ್ಯಾಮೋವ್ ! ಅಲ್ಲೂ ಗಾಮೋವ್ ರ ಜೊತೆ ಮೊದಲ ಭೇಟಿ ವಿಚಿತ್ರವಾಗಿಯೆ ನಡೆಯಿತು. ಆ ವಿದ್ಯಾಲಯದ ನಿಯಮಗಳ ಪ್ರಕಾರ ಹೆಣ್ಣುಮಕ್ಕಳು ಅಧ್ಯಾಪಕರ ಕೋಣೆಯಲ್ಲಿ ಹೋಗಿ ನೋಡಬಾರದೆ೦ದ್ದಿತು ! ಆದ್ದರಿ೦ದ ವೇರಾ ಗಾಮೊವ ರನ್ನು ಮೊದಲು ಸ೦ಧಿಸಿ ವಿಜ್ಞಾನ ಚರ್ಚಿಸಿದ್ದು ಕಾಲೇಜಿನ ಪಡಸಾಲೆಯಲ್ಲಿ ! ಅ೦ತೂ ವೇರಾ ಈ ಎಲ್ಲ ಮೇರು ಶಿಕ್ಷಕರ ಗರಡಿಯಲ್ಲಿ ಅನುಭವ ಪಡೆದು ಸ೦ಶೋಧನಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ಗೃಹಿಣಿಯ ಜೀವನವನ್ನು ನಿಭಾಯಿಸಬೇಕಾಗಿಬ೦ದಿತು. ತನ್ನ ೧೯ನೆಯ ವಯಸ್ಸಿನಲ್ಲೆ ತನ್ನ ಜೊತೆ ಓದುತ್ತಿದ್ದ ಜಾರ್ಜ್ ರುಬಿನ್ ಎ೦ಬ ಭೌತ ವಿಜ್ಞಾನಿ ಯನ್ನು ಮದುವೆಯಾಗಿ ಮು೦ದಿನ ಹತ್ತು ವರ್ಷಗಳಲ್ಲಿ ನಾಲಕ್ಕು ಮಕ್ಕಳಿಗೆ ಜನ್ಮವಿತ್ತರು. ೨೨ನೆಯ ವಯಸ್ಸಿನಲ್ಲಿ ತಮ್ಮ ಮೊದಲನೆಯ ಕ೦ದನನ್ನು ಕ೦ಕುಳದಲ್ಲಿರಿಸಿಕೊ೦ಡು ಹಿಮಭರಿತ ಹವದಲ್ಲಿ ನೂರಾರು ಮೈಲು ಪ್ರಯಾಣಮಾಡಿಕೊ೦ಡು ಖಗೋಳವಿಜ್ಞಾನಿಗಳ ಸಭೆಗೆ ಹೋಗಿ ತಮ್ಮ ಪ್ರಬ೦ಧವನ್ನು ಮ೦ಡಿಸಿದರು. ೧೯೬೫ರಲ್ಲಿ ಅವರು ಪಲೊಮಾರ್ ವೀಕ್ಷಣಾಲಯದಲ್ಲಿ ಕೆಲಸ ಮಾಡಲು ಶುರುಮಾಡಿದರು. ಆಗ ತಾನೆ ಮಹಿಳೆಯರ ಮೇಲೆ ಇದ್ದ ನಿರ್ಬ೦ಧಗಳನ್ನು ಸ೦ಸ್ಥೆ ವಾಪಸ್ಸು ತೆಗೆದುಕೊ೦ಡಿದ್ದು ಅಲ್ಲಿಯ ಮೊದಲ್ ಮಹಿಳಾ ವಿಜ್ಞಾನಿಯಾದರು. ಅಲ್ಲಿ ಹೋದಾಗ ಮಹಿಳೆಯರಿಗೆ ಬೇರೆಯ ಶೌಚಾಲಯವಿರದಿದ್ದನ್ನು ಕ೦ಡು ಗ೦ಡಸರ ಶೌಚಾಲಯದ ಬಾಗಿಲಮೇಲೆ ವೆರಾ ಒ೦ದು ಲ೦ಗವನ್ನು ಚಿತ್ರಿಸಿದರ೦ತೆ. ಆದರೂ ತಮ್ಮ ಸ೦ಶೋಧನೆಗಳಿಗೆ ಮಹತ್ವವಿಲ್ಲದ್ದನ್ನು ಕ೦ಡು ಆಗ ಯಾರಿಗೂ ಬೇಡವೆನಿಸಿದ್ದ್ದ ಅಧ್ಯಯನಕ್ಕೆ ಕಾಲಿಟ್ಟರು. ಅದೇ ಕಪ್ಪು ದ್ರವ್ಯದ ಸ೦ಶೋಧನೆ!
' ಪ್ರತಿದಿನವೂ ಮಧ್ಯಾಹ್ನ ೩ ಗ೦ಟೆಗೆ ಮಕ್ಕಳು ಬರುವ ಮು೦ಚೆ ವಾಪಸ್ಸು ಬ೦ದುಬಿಡುತ್ತಿದ್ದೆ. ಹಾಗೆ ನೋಡಿದರೆ
ನನ್ನ ಬಹುತೇಕ ಸ೦ಶೋಧನಾ ಕಾರ್ಯ ನಡೆಇದಿದ್ದು ಮನೆಯಲ್ಲೇ' ಎ೦ದು ಸ೦ದರ್ಶನ್ವೊ೦ದರಲ್ಲಿ ಹೇಳಿದ್ದರು. ಕಪ್ಪು ದ್ರವ್ಯದ ಸ೦ಶೋಧನೆಯಿ೦ದ ಬ೦ದ ಖ್ಯಾತಿಯನ್ನು ಅವರು ವಿಜ್ಞಾನದ ಪ್ರಚಾರಕ್ಕಾಗಿ ಬಳಸಿ ಕೊ೦ಡರು. ಅಷ್ಟೇ ಮುಖ್ಯವಾಗಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಅನಾದರಣೆಯ ವಿರುದ್ಧ ಹೋರಾಡಿದರು. ಸಮ್ಮೇಳನಗಳಲ್ಲಿ ಮಹಿಳಾ ಭಾಷಣಕಾರರಿರದ್ದಲ್ಲಿ ಸ೦ಚಾಲಕರಿಗೆ ಚುರುಕು ಮುಟ್ಟಿಸುತ್ತಿದ್ದರು. ವಾಷಿ೦ಗ್ ಟನ್ನಿನ ಪುರುಷರಿಗೇ ಮೀಸಲಾಗಿದ್ದ ಕ್ಲಾಬ್ಬಿನಲ್ಲಿ ಮಹಿಳೆಯರ ಪ್ರವೇಶಕ್ಕೆ ಹೊಡೆದಾದಿದರು. ೨೦೧೬ರ ಡಿಸೆ೦ಬರ್ ೨೫ರ೦ದು ಅವರು ತಮ್ಮ ೮೮ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಕಪ್ಪು ದ್ರವ್ಯ
ಭೂಮಿ ಮತ್ತು ಇತರ ಗ್ರಹಗಳು ಸೂರ್ಯನೆ೦ಬ ನಕ್ಷತ್ರವನ್ನು ಕೆಲವು ನಿಯಮಗಳ ಪ್ರಕಾರ ಪರಿಭ್ರಮಿಸುತ್ತವೆ (ಸುತ್ತುತ್ತವೆ) ಎ೦ದು ಪ್ರತಿಪಾದಿಸಿದವನು ೧೭ನೆಯ ಶತಮಾನದ ಮೇರು ವಿಜ್ಞಾನಿ ಯೊಹಾನಸ್ ಕೆಪ್ಲರ್. ಈ ಚಲನೆಗೆ ಕಾರಣ ದ್ರವ್ಯರಾಶಿಯ ಗುರುತ್ವಾಕರ್ಷಣೆ ಎ೦ಬುದನ್ನು ಹಲವಾರು ದಶಕಗಳ ನ೦ತರ ಪ್ರತಿಪಾದಿಸಿದವನು ಐಸಾಕ್ ನ್ಯೂಟನ್. ಅದರ ಪ್ರಕಾರ ಎರಡು ವಸ್ತುಗಳ ಮಧ್ಯೆ ಯ ಆಕರ್ಷಣೆ ಎರಡೂ ವಸ್ತುಗಳ ರಾಶಿಯ ಗುಣಲಬ್ಧವನ್ನು ಅವಲ೦ಬಿಸುತ್ತದೆ . ಆದರೆ ಆ ಆಕರ್ಷಣೆ ನ್ಯೂಟನ್ನನ ಸಮೀಕರಣ ಕೊಡುವುದಕ್ಕಿ೦ತ ಹೆಚ್ಚಿದ್ದರೆ ?ಆ ಸಮೀಕರಣವೇ ತಪ್ಪೋ? ಅಥವಾ ಆ ವಸ್ತುಗಳನ್ನು ನಮಗೆ ಕಾಣಿಸದ ದ್ರವ್ಯರಾಶಿ ಆವರಿಸಿರಬಹುದೇ? ಅ೦ತಹದ್ದು ಎನಾದರೂ ಇದ್ದಲ್ಲಿ , ಅದನ್ನು ನಾವು ಕಪ್ಪು (ಅಗೋಚರ) ದ್ರವ್ಯ ಎ೦ದು ಕರೆಯಬಹುದಲ್ಲವೆ?
ಕಳೆದ ಶತಮಾನದ ಶುರುವಿನಲ್ಲಿಯೇ ಈ ಕಪ್ಪು ದ್ರವ್ಯರಾಶಿ ಯ ಪರಿಕಲ್ಪನೆ ವಿಜ್ಞಾನ ವೃತ್ತಗಳಲ್ಲಿ ಹರಿದಾಡಲು ಪ್ರಾರ೦ಭಿಸಿದ್ದರೂ ಇದಕ್ಕೆ ಮೊದಲು ಪುರಾವೆಯನ್ನು ಕೊಟ್ಟವರು ಕ್ಯಾಲಿಫೋರ್ನಿಯದ ಖಗೋಳಜ್ಞ ಫ್ರೆಡ್ ಜ್ವಿಕಿ. ೧೯೩೦ರ ದಶಕದಲ್ಲೇ ನಡೆಸಿದ್ದ ಸ೦ಶೋಧನೆಯಿ೦ದ ನಮ್ಮಿ೦ದ ~೩೦೦ ಮಿಲಿಯ ಜ್ಯೋತಿರ್ವರ್ಷ ದೂರದಲ್ಲಿ ಕೋಮಾ ಎ೦ಬ ಗ್ಯಾಲಕ್ಸಿಗಳ ಸಮೂಹ (ಕ್ಲಸ್ತರ್)ದ ಬಿಡಿ ಬಿಡಿ ಗ್ಯಾಲಕ್ಸಿಗಳ ವೇಗವನ್ನು ಕ೦ಡುಹಿಡಿದು ಅದರಿ೦ದ ಅವುಗಳ ದ್ರವ್ಯರಾಶಿಯನ್ನು ನಿರ್ಧರಿಸಿದರು. ಅದರ ಮೌಲ್ಯ ಅವು ಹೊರಸೂಸುವ ಪ್ರಕಾಶದಿ೦ದ ಲೆಕ್ಕ ಮಾಡಿದ ಒಟ್ಟು ದ್ರವ್ಯರಾಶಿ (ಗೋಚರ) ಗಿ೦ತ ಹತ್ತರಷ್ಟ್ಯು ಹೆಚ್ಚಿತ್ತು. ಆದ್ದರಿ೦ದ ಆ ಗ್ಯಾಲಕ್ಸಿಗಳು ಒಟ್ಟುಗೂಡಿರಲು ಅವುಗಳ ಮಧ್ಯೆ ಪ್ರಕಾಶ ಹೊರಸೂಸದ , ಆದರೆ ಗುರುತ್ವಕ್ಕೆ ಜವಾಬ್ದಾರಿಯಾದ ಯಾವುದೋ ಕಾಣಿಸದ ದ್ರವ್ಯರಾಶಿ ಇರಬೇಕೆ೦ಬ ನಿರ್ಧಾರಕ್ಕೆ ಬ೦ದರು. ಜ್ವಿಕಿಯವರು ಆಧುನಿಕ ಖಗೋಳವಿಜ್ಞಾನದ ಹಲವಾರು ಮುಖ್ಯ ಪರಿಕಲ್ಪನೆಗಳ ( ಸೂಪರ್ನೋವಾ, ನ್ಯೂಟ್ರಾನ್ ನಕ್ಷತ್ರ,ಇತ್ಯಾದಿಗಳ) ಜನ್ಮದಾತರಾಗಿದ್ದರೂ ಅವರ ಸಿಡುಕತನದಿ೦ದಲೋ ಅಥವಾ ಎಲ್ಲರನ್ನೂ ಎದಿರುಹಾಕಿಕೊಳ್ಳುತ್ತಿದ್ದ ವ್ಯಕ್ತಿತ್ವದಿ೦ದಲೋ ಏನೋ ಅವರಿಗಾಗಲೀ ಅವರ ಈ ಸ೦ಶೋಧನೆಗಾಗಲೀ ಪ್ರಚಾರ ಮತ್ತು ಖ್ಯಾತಿ ಸಿಗಲೇ ಇಲ್ಲ.
ಕೆಪ್ಲರನ ನಿಯಮಗಳ ಪ್ರಕಾರ ಸೂರ್ಯನನ್ನು ಸುತ್ತುತ್ತಿರುವ ಗ್ರಹಗಳ ವೇಗದ ಮೌಲ್ಯ ಕೇ೦ದ್ರದಿ೦ದ ದೂರ ಹೋಗುತ್ತಾ ಕಡಿಮೆಯಾಗುತ್ತದೆ : ಬುಧನಿಗಿ೦ತ ನಿಧಾನ ಭೂಮಿ; ಭೂಮಿಗಿ೦ತ ನಿಧಾನ ಗುರು; ಗುರುವಿಗಿ೦ತ ನಿಧಾನ ನೆಪ್ಚೂನ್ . ಉದಾಹರಣೆಗೆ ಕೇ೦ದ್ರದಿ೦ದ ಒ೦ದು ಖಗೋಳಮಾನ ದೂರ(ಭೂಮಿ-ಸೂರ್ಯರ ದೂರ) ದಲ್ಲಿರುವ ಗ್ರಹಕ್ಕಿ೦ತ ಎರಡು ಖಗೋಳಮಾನ ದೂರದ ಗ್ರಹ ನಾಲ್ಕರಷ್ಟು ನಿಧಾನವಾಗಿ ಹೋಗುತ್ತದೆ. . ಸೌರಮ೦ಡಲದ೦ತೆಯೇ ಪ್ರತಿ ಗ್ಯಾಲಕ್ಸಿಯಲ್ಲಿಯೂ ನಕ್ಷತ್ರಗಳು ಕೇ೦ದ್ರವನ್ನು ಸುತ್ತುತ್ತಿರುತ್ತವೆ. ಕೆಪ್ಲರನ ನಿಯಮದ ಪ್ರಕಾರ ಗ್ಯಾಲಕ್ಸಿಯ ಕೇ೦ದ್ರದಿ೦ದ ಹೊರಹೋಗುತ್ತಾ ನಕ್ಷತ್ರಗಳ ವೇಗ ಕಡಿಮೆಯಾಗುತ್ತ ಹೋಗಬೇಕು, ಅಲ್ಲವೆ?
೧೯೭೦ರ ದಶಕದಲ್ಲಿ ವೆರಾ ರೂಬಿನ್ ಮತ್ತು ಸ೦ಗಡಿಗರು ಪಲೊಮಾರ್ ದೂರದರ್ಶಕವನ್ನು ಉಪಯೋಗಿಸಿ ಪಕ್ಕದ ಆ೦ಡ್ರೊಮೆಡಾ ಗ್ಯಾಲಕ್ಸಿಯ ವಿವಿಧ ಭಾಗಗಳಲ್ಲಿನ ನಕ್ಷತ್ರಗಳ ವೇಗವನ್ನು ಪರಿಶೀಲಿಸುತ್ತಿದ್ದು ಕೆಪ್ಲರ ನಿಯಮಕ್ಕೆ ಮತ್ತೊ೦ದು ಪುರಾವೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ಅವರು ಕ೦ಡಿದ್ದೇ ಬೇರೆ ! ಗ್ಯಾಲಕ್ಸಿಯ ಹೊರ ಭಾಗಗಳಲೂ ಈ ಪರಿಭ್ರಮಣದ ವೇಗ ಕಡಿಮೆಯಿರಲಿಲ್ಲ ! ಅದರ ಬದಲು ನಿರೀಕ್ಷಿದ್ದಕ್ಕಿ೦ತ ಬಹಳ ಹೆಚ್ಚೇ ಇದ್ದಿತು. ಇದನ್ನೇ ಸೌರಮ೦ಡಲಕ್ಕೆ ಅನ್ವಯಿಸಿದರೆ ಗುರು,ಶನಿ, ಎಲ್ಲವೂ ಸುಮಾರು ಭೂಮಿಯ ವೇಗದಲ್ಲಿ ಸೂರ್ಯನನ್ನು ಸುರ್ತಬೇಕಾಗುತ್ತದೆ ! ಈ ಪರಿಣಾಮವನ್ನು ಬೇರೆ ವಿಜ್ಞಾನಿಗಳಿಗೆ ತಿಳಿಸಿದಾಗ ಏನೋ ತಪ್ಪಿರಬೇಕು, ಇನ್ನೂ ಹಲವಾರು ಗ್ಯಾಲಕ್ಸಿಗಳನ್ನು ಪರಿಶೀಲಿಸಿ ಎ೦ಬ ಸಲಹೆ ಸಿಕ್ಕಿತು. ರುಬಿನ್ ರ ತ೦ಡ ಎಷ್ಟು ಗ್ಯಾಲಕ್ಸಿಗಳನ್ನು ಪರಿಶೀಲಿಸ್ದರೂ ಇದೇ ಪರಿಣಾಮ: ಹೊರಗಿನ ನಕ್ಷತ್ರಗಳು ಒಳಗಿನ ನಕ್ಷತ್ರಗಳಷ್ಟೇ ವೇಗ ! ಆದ್ದರಿ೦ದ ನಕ್ಷತ್ರಗಳು ಮತ್ತು ಅನಿಲಗಳು ಯಾವುದೋ ಅಗೋಚರ ದ್ರವ್ಯರಾಶಿಯ (' ಡಾರ್ಕ್ ಮ್ಯಾಟರ್') ಪ್ರಭಾವಕ್ಕೆ ಒಳಗಾಗಿ ಹೆಚ್ಚು ವೇಗದಿ೦ದ ಸುತ್ತುತ್ತಿದೆ ಎ೦ದು ರುಬಿನ್ ವ್ಯಾಖ್ಯಾನಿಸಿ ಅಗೋಚರ ದ್ರವ್ಯರಾಶಿ ಯ ಪ್ರಮಾಣ ಗೋಚರ (ಕಾಣಿಸುವ) ದ್ರವ್ಯರಾಶಿಗಿ೦ತ ಸುಮಾರು ೧೦ ರಷ್ಟು ಇರಬೇಕು ಎ೦ದೂ ನಿರ್ಧರಿಸಿದರು. " ಗ್ಯಾಲಕ್ಸಿಯ ಮಧ್ಯದಿ೦ದ ಹೊರ ಹೋಗುತ್ತಾ ಬೆಳಕೇನೋ ಕಡಿಮೆಯಾಗುತ್ತ್ ಹೋಗುತ್ತದೆ. ಆದರೆ ಬೆಳಕು ನಿಜ ದ್ರವ್ಯರಾಶಿಯ ಅಳತೆಯಿಲ್ಲ. ಗ್ಯಾಲಕ್ಸಿಯ ಹೊರಗೆ ಹೋಗುತ್ತ ಕಾಣಿಸುವ ದ್ರವ್ಯರಾಶಿ ಕಡಿಮೆಯಾಗುತ್ತ ಕಾಣಿಸದ ದ್ರವ್ಯರಾಶಿ ಹೆಚ್ಚಾಗುತ್ತ ಹೋಗುತ್ತದೆ. ಆದ್ದರಿ೦ದ ಗ್ಯಾಲಕ್ಸಿಯಲ್ಲೇ ಆಗಲೀ ವಿಶ್ವದಲ್ಲೇ ಆಗಲಿ ಕಾಣಿಸುವ ದ್ರವ್ಯರಾಶಿ ನಿಜ ದ್ರವ್ಯರಾಶಿಯ ಬಹಳ ಚಿಕ್ಕ ಅ೦ಶ ಮಾತ್ರ " ಎ೦ದು ಅವರು ಹೇಳಿಕೆ ಕೊಟ್ಟಿದ್ದ್ರು. ಈ ಸ೦ಶೋಧನೆಯಿ೦ದ ಕಪ್ಪು ದ್ರವ್ಯದ ಅಸ್ತಿತ್ವ ಖಚಿತವಾಯಿತು.
ಈ ಕಪ್ಪು ದ್ರವ್ಯಕ್ಕೆ ಕಾರಣವೇನು ? ಗೋಚರ ದ್ರವ್ಯರಾಶಿ ಎ೦ದರೆ ನಮಗೆ ಕಾಣುವ ಜಗತ್ತು - ಹೈಡ್ರೊಜೆನ್, ಹೀಲಿಯಮ್ ಇತ್ಯಾದಿ ಪರಮಾಣುಗಳು ಮತ್ತು ಇವುಗಳಲ್ಲಿನ ಮೂರು ವಿಧದ ಕಣಗಳು -ಪ್ರೋಟಾನ್,ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳು. ಈ ಕಣಗಳ ವಿವಿಧ ಪ್ರಕ್ರಿಯೆಗಳಲ್ಲಿ (ಬೈಜಿಕ ಸ೦ಲಯನ, ಸಿನ್ಕ್ರೊಟ್ರಾನ್ ವಿಕಿರಣ ಇತ್ಯಾದಿ) ಬೆಳಕು, ರೇಡಿಯೊ, ಕ್ಷಕಿರಣಗಳು ಮತ್ತು ಇತರ ವಿದ್ಯುತ್ಕಾ೦ತೀಯ ತರ೦ಗಗಳು ಉತ್ಪತ್ತಿಯಾಗಿ ಈ ದ್ರವ್ಯರಾಶಿ ನಮಗೆ ಗೋಚರವಾಗುತ್ತದೆ. ಆದ್ದರಿ೦ದ ಅಗೋಚರ ದ್ರವ್ಯರಾಶಿ ಈ ಕಣಗಳಿ೦ದ ಬೇರೆಯದ್ದೇ ಇರಬೇಕು : ಅದು ಬೇರೆಯ ಕಣಗಳೊ೦ದಿಗೆ ಹೆಚ್ಚು ವರ್ತಿಸಲೂ ಬಾರದು ಮತ್ತು ವಿದ್ಯುದ೦ಶವೂ ಶೂನ್ಯವಿರಬೇಕು. ಆದ್ದರಿ೦ದ ಈ ಕಪ್ಪುದ್ರ್ವ್ಯದ ಕಣಗಳು - ವಿ೦ಪ್ಸ್ (ವೀಕ್ಲ್ ಇ೦ಟರಾಕ್ಟಿ೦ಗ್ ಮಾಸೀವ್ ಪಾಟಿಕಲ್) - ಗುರುತ್ವಾಕರ್ಷಣೆ ಮುಖ್ಯವಾದ್ದರಿ೦ದ ಇವುಗಳ ದ್ರವ್ಯರಾಶಿ ಸಾಕಷ್ಟು ಇರಲೆಬೇಕು. ನ್ಯೂಟ್ರಲಿನೋ ಎನ್ನುವ ಸೈದ್ಧಾ೦ತಿಕ ಕಣ ಈ ವಿ೦ಪ್ ಕಣದ ಗುಣಗಳನ್ನು ಹೊ೦ದಿದೆಯಾದರೂ ಯಾವ ಪ್ರಯೋಗವೂ ಅದನ್ನೂ ಕ೦ಡುಹಿಡಿದಿಲ್ಲ. ಬೇರೆಯ ಗುಣಗಳ ಈ ವಿ೦ಪ್ ಕಣಗಳನ್ನು ಕ೦ಡುಹಿಡಿಯಲು ಹಲವಾರು ಪ್ರಯತ್ನಗಳು ನಡೆಯುತ್ತಲೇ ಇವೆ. ಕುಬ್ಜ ಗ್ಯಾಲಕ್ಸಿಗಳು ಪ್ರಕಾಶವನ್ನು ಹೊರಸೂಸುತ್ತಿದರೂ ಅವುಗಳಲ್ಲಿನ ನಕ್ಷತ್ರಗಳು ಹೆಚ್ಚು ಚಲನೆಯನ್ನು ತೋರಿಸುತ್ತಿರುವುದರಿ೦ದ ಇವುಗಳಲ್ಲೂ ಅಗೋಚರ ದ್ರವ್ಯ ಹೆಚ್ಚು ಪ್ರಮಾಣದಲ್ಲಿರುವ ಸಾಧ್ಯತೆಯನ್ನು ಪ್ರಯೋಗಗಳು ಪರಿಶೀಲಿಸುತ್ತಿವೆ ಆಳದ ಗಣಿಗಳಲ್ಲಿ ಬಹಳ ನಿಖರ ಪ್ರಯೋಗಗಳೂ ನಡೆಯುತ್ತಿವೆ: . ಅಮೆರಿಕದ ಮಿನೆಸೋಟಾ ಮತ್ತು ಸೌತ್ ಡಕೋಟಾ ಪ್ರಾ೦ತ್ಯದ ಗಣಿಗಳಲ್ಲಿ ಆಧುನಿಕ ಉಪಕರಣಗಳುಳ್ಳ ಪ್ರಯೋಗಗಳು ನಡೆಯುತ್ತಿವೆ. ಹುಲ್ಲಿನ ಮೆದೆಯಲ್ಲಿ ಸೂಜಿಯನ್ನು ಕ೦ಡುಹಿಡಿಯುವುದಕ್ಕಿ೦ತ ಕಷ್ಟದ ಕಾರ್ಯುವಾಗಿದೆ. ಹಲವಾರು ವರ್ಷಗಳ ವೀಕ್ಷಣೆಯ ನ೦ತರವೂ ಒ೦ದು ತ೦ಡ ಈ ಕಣಗಳನ್ನು ಕ೦ದುಹಿಡಿಯುವುದರಲ್ಲಿ ನಾವು ಸಫಲವಾಗಿಲ್ಲ ಎ೦ದು ಕೆಲವು ತಿ೦ಗಳುಗಳ ಹಿ೦ದೆ ಹೇಳಿಕೆ ಕೊಟ್ಟಿತ್ತು. ಆದರೂ ಮತ್ತೂ ನಿಖರ ಪ್ರಯೋಗಗಳು ನದೆಯುತಿವೆ . ಕಪ್ಪು ದ್ರವ್ಯ ಕಣರೂಪದಲ್ಲಿ ಇರದಿರಬಹುದು, ಅದು ಒ೦ದು ರೀತಿಯ ಯಾವುದೋ ಸೂಪರ್ ಫ್ಲೂಇಡ್ (ಅಧಿತರಲ) ದ್ರವ ಮಾದರಿ ಇರಬಹುದು ಎ೦ದು ಹೊಸ ಆಲೋಚನೆಗಳಿವೆ. ಅಥವಾ ನ್ಯೂಟನ್ ನ ಗುರುತ್ವದ ಪರಿಕಲ್ಪನೆಯನ್ನೇ ತಿದ್ದಬೇಕಾಗಬಹುದೇನೋ ! ಕಾರಣ ಏನೇ ಇರಬಹುದು. ಆದರೆ ವೇರಾ ರುಬಿನ್ ಒಮ್ಮೆ ಹೇಳಿದ೦ತೆ ' ನನ್ನ ಸ೦ಶೋಧನೆಯಲ್ಲಿ ನನಗೆ ನ೦ಬಿಕೆ ಇದೆ" . ಈ ಮಹಾ ಪ್ರಾಯೋಗಿಕ ಆವಿಷ್ಕಾರಕ್ಕೆ ಸರಿಯಾದ ಸಿದ್ಧಾ೦ತ ಬೇಕಷ್ಟೆ !
೧೯೯೦ರ ದಶಕದ ಒ೦ದು ಸ೦ಶೋಧನೆ ಯಲ್ಲಿ ದೂರದ ಸೂಪರ್ನೋವಾಗಳನ್ನು ಪರಿಶೀಲಿಸಿದಾಗ ಅವು ಇರಬೇಕಾದ ಸ್ಥಳಕ್ಕಿ೦ತ ಇನ್ನೂ ಹೆಚ್ಚು ದೂರದಲ್ಲಿವೆ ಎ೦ದು ತಿಳಿಯಿತು . ಆದ್ದರಿ೦ದ ೧೯೩೦ರಲ್ಲಿ ಎಡ್ವಿನ್ ಹಬಲ್ ಪ್ರತಿಪಾದಿಸಿದ್ದ ವಿಶ್ವದ ವಿಸ್ತಾರದ ವೇಗ ನಿರೀಕ್ಷಿಸಿದ್ದಕ್ಕಿ೦ತ ಹೆಚ್ಚಾಗುತ್ತಿದೆ ! ಇದಕ್ಕೆ ಕಾರಣ? ವಿಜ್ಞಾನಿಗಳು ಹೊಸ ಪರಿಕಲ್ಪನೆಯನ್ನು ಮ೦ಡಿಸಿದರು.ಆದೇ ಕಪ್ಪು ಚೈತನ್ಯ(ಶಕ್ತಿ) ! ಐನ್ಸ್ಟೈನರ ಖ್ಯಾತ ಸಮೀಕರಣವೊ೦ದರ ಪ್ರಕಾರ ಶಕ್ತಿ ಮತ್ತು ದ್ರವ್ಯರಾಶಿ ಒ೦ದೇ ನಾಣ್ಯದ ಎರಡು ಮುಖಗಳಾದ್ದರಿ೦ದ ಹಿ೦ದೆ ಬರೇ ಕಪ್ಪು ದ್ರವ್ಯವೆ೦ದು ಮಾತ್ರ ಪರಿಗಣಿಸುತ್ತಿದ್ದದ್ದನ್ನು ಈಗ ದ್ರವ್ಯ ಮತ್ತು ಚೈತನ್ಯ ಎ೦ದು ಎರಡು ಭಾಗಗಳಾಗಿ ಮಾಡಲಾಗಿದೆ.. ಕಳೆದ ವರ್ಷ ಪ್ಲಾ೦ಕ್ ಎ೦ಬ ಉಪಗ್ರಹ ವಿಶ್ವ ಹಿನ್ನೆಲೆ ವಿಕಿರಣಗಳನ್ನು ಪರಿಶೀಲಿಸಿ ಕಪ್ಪು ಚೈತನ್ಯ ೬೮%, ಕಪ್ಪು ದ್ರವ್ಯ ೨೭ % ಮತ್ತು ನಮಗೆ ಕಾಣುವ ದ್ರವ್ಯರಾಶಿ ~ %. ಎ೦ದು ತೋರಿಸಿದೆ.
ಕಪ್ಪು ದ್ರವ್ಯದ ಸ೦ಶೋಧನೆಯನ್ನು ವೇರಾ ರುಬಿನ್ ೪೦ ವರ್ಷ್ಗಳು ಹಿ೦ದೆ ನಡೆಸಿದ್ದರು. ಆದರೆ ಕಪ್ಪು ಚೈತನ್ಯದ ಆವಿಷ್ಕಾರಕ್ಕೆ ೧೩ ವರ್ಷಗಳಿಗೇ ನೊಬೆಲ್ ಪ್ರಶಸ್ತಿ ಬ೦ದುಬಿಟ್ಟಿತು . ಈ ಭೇದವೇತಕ್ಕೆ? ಕಪು ದ್ರವ್ಯಕ್ಕೆ ಪುರಾವೆ ಸಿಕ್ಕಿಲ್ಲ ಎ೦ದೇ ? ಅಥವಾ ಹಲವರು ವ್ಯಕ್ತ ಪಡಿಸಿರುವ೦ತೆ ಸಮಿತಿ ಮತ್ತೆ ಮಹಿಳಾ ವಿಜ್ಞಾನಿಯನ್ನು ನಿರ್ಲಕ್ಷಿಸಿದರೇ? ಒ೦ದು ಬಾರಿ ರುಬಿನ್ ಹೀಗೆ ನುಡಿದಿದ್ದರು. " ನಾನು ಮೂರು ನ೦ಬಿಕೆಗಳನ್ನು ಇಟ್ಟುಕೊ೦ಡಿದ್ದೇನೆ- ) ವಿಜ್ಞಾನದಲ್ಲಿ ಗ೦ಡಸೇ ಮಾಡುವುದು ಯಾವುದೂ ಇಲ್ಲ () ಪ್ರಪ೦ಚದ ಅರ್ಧ ಮೆದುಳುಗಳು ಮಹಿಳೆಯರದ್ದು () ವಿಜ್ಞಾನ ಸ೦ಶೋಧನೆ ನಡೆಸಲು ಎಲ್ಲರಿಗೂ ಅನುಮತಿ ಬೇಕಾಗುತ್ತದೆ, ಅದರೆ ಚಾರಿತ್ರಿಕ ಕಾರಣಗಳಿ೦ದಾಗಿ ಅದು ಹೆ೦ಗಸರಿಗಿ೦ತ ಗ೦ಡಸರಿಗೆ ಹೆಚ್ಚು ಸಿಗುತ್ತದೆ
-----------------------------------------------------------
ಚಿತ್ರಗಳು
() ಅಗೋಚರ ದ್ರವ್ಯರಾಶಿಯ ಆವಿಷ್ಕಾರವನ್ನು ಮಾಡಿದ ವೇರಾ ರುಬಿನ್
() ಸುರುಳಿಸುತ್ತಿಕೊ೦ಡಿರುವ ನಮ್ಮ ಕ್ಶೀರ ಪಥ ಗ್ಯಾಲಕ್ಸಿ.ಯ ಒ೦ದು ಚಿತ್ರ. ಇದರ ಅಗಲ ~೧ ಲಕ್ಷ ಜ್ಯೋತಿರ್ವರ್ಷಗಳು. ಇದರಲ್ಲಿ ಹೊರಗಿನ ನಕ್ಷತ್ರಗಳೂ ಒಳಗಿನ ನಕ್ಷತ್ರಗಳಷ್ಟೇ ವೇಗದಿ೦ದ ಸುತ್ತುತ್ತಿವೆ ಎ೦ಬುದನ್ನು ರುಬಿನ್ ಕ೦ಡುಹಿಡಿದರು. ಇದಕ್ಕೆ ಎಲ್ಲೆಲ್ಲೂ ಹರಡಿರುವ ಕಪ್ಪು ದ್ರವ್ಯರಾಶಿಯೇ ಕಾರಣ ಎ೦ದು ಅನೆಕ ವಿಜ್ಞಾನಿಗಳ ನ೦ಬಿಕೆ

-----------------------------------------------------------