Sunday, November 10, 2013

ಧೂಮಕೇತುಗಳು - ಅ೦ದಿನಿ೦ದ ಇ೦ದಿನವರೆಗೆ -ಪಾಲಹಳ್ಳಿ ವಿಶ್ವನಾಥ್ - ಹೊಸ ದಿಗ೦ತ (ದೀಪಾವಳಿ) ೨೦೧೩ Palahalli Vishwanath (comets Then and Now -

idu hosa diga0ta 2013 dIpaavaLi sa0chkeyalli prakatavaayitu - appeared in Deepavali edition of HOSA DIGANTHA \ comets then and now


ಧೂಮಕೇತುಗಳು
- ಅ೦ದಿನಿ೦ದ ಇ೦ದಿನವರೆವಿಗೆ
ಪಾಲಹಳ್ಳಿ ವಿಶ್ವನಾಥ್


(ಈ ವರ್ಷ ಒ೦ದು ಹೊಸ ಧೂಮಕೇತು ...ಹೆಸರು ಐಸಾನ್... ಆಕಾಶದಲ್ಲಿ ಅವತರಿಸಲಿದೆ. ಒ೦ದು ವರ್ಷದ ಹಿ೦ದೆ ಕ೦ಡುಹಿಡಿಯಲ್ಪಟ್ಟಿದ್ದು, ನವೆ೦ಬರ್ ಕೊನೆಯಲ್ಲಿ ಸೂರ್ಯನನ್ನು ಮುಟ್ಟಿ ವಾಪಸ್ಸು ಬರುವಾಗ ಇದು ಬಹಳ ಪ್ರಕಾಶಮಾನವಾಗಿರಬಹುದೆ೦ಬ ನಿರೀಕ್ಷೆ ಇದೆ. ಇದನ್ನು ಡಿಸೆ೦ಬರಿನಲ್ಲಿ ಬರೆಗಣ್ಣುಗಳಿ೦ದಲೇ ಅನೇಕ ರಾತ್ರಿಗಳು ನೋಡಬಹುದೋ ಏನೋ ! ಈ ಲೇಖನ ಧೂಮಕೇತುಗಳ ಸ್ವಾರಸ್ಯಕರ ಚರಿತ್ರೆಯತ್ತ ಒ೦ದು ನೋಟವಿತ್ತು ಅನ೦ತರ ವೈಜ್ಞಾನಿಕ ಅ೦ಶಗಳನ್ನು ವಿವರಿಸಿ ಹೊಸ ಧೂಮಕೇತುವಿನ ಬಗ್ಗೆ ಮಾಹಿತಿ ಕೊಡುತ್ತದೆ)

ಅ೦ದು
ಬೆಳಕಿನ ಜೊತೆ ಸುಡುವ ಉರಿಬಿಸಿಲಿಗೂ ಕಾರಣವಾಗುತ್ತಿದ್ದ ದಿನದ ಸೂರ್ಯ ಮರೆಯಾಗುತ್ತಾ ಸ೦ಜೆಯ ತ೦ಪಿನೊ೦ದಿಗೆ ನಿಶೆಯ ಆಕಾಶ ಅನಾವರಣಗೊಳ್ಳುವುದನ್ನು ಆದಿ ಮಾನವರು ಸ೦ತೋಷದಿ೦ದಲೇ ಸ್ವೀಕರಿಸಿದ್ದಿರಬೇಕು. ಹಾಗೂ ಸ್ವಲ್ಪ ಸಮಯದನ೦ತರ ಪ್ರತಿ ರಾತ್ರಿ ರೂಪ ಬದಲುಸುತ್ತಿರುವ ಚ೦ದ್ರ ಅವರಿಗೆ ಆಶ್ಚರ್ಯ ಮತ್ತು ಭಯವನ್ನು ಹುಟ್ಟಿಸಿ ಅವರುಗಳ ಮೆದುಳಿಗೆ ಬಹಳ ಅಯಾಮ ಕೊಟ್ಟಿದ್ದಿರಬೇಕು. ಆದರೆ ಚ೦ದ್ರನ ಕಲೆಗಳು ನಿಯತಕಾಲಿಕ ಎ೦ದು ನಿಧನವಾಗಿ ಅರಿತ ಮೇಲೆ ಆ ವಿದ್ಯಮಾನವನ್ನೇ ಕಾಲದ ಅಳತೆಗೆ ಉಪಯೋಗಿಸುವ ಜಾಣತನ ಮಾಡಿದ. ಅ೦ತೂ ಮತ್ತೆ ಮನುಷ್ಯನ ಪ್ರಪ೦ಚ ಸ್ಥಿರವಾಗತೊಡಗಿತು. ಅದರೆ ಮು೦ದೆ ಆದದ್ದೇನು ? ಆ ಶಾ೦ತತೆಯನ್ನು ಕದಡಿಸಲೋ ಎನೋ ಎ೦ಬ೦ತೆ ವಿಚಿತ್ರ ಆಕಾರದ ಅಕಾಶಕಾಯಗಳು ಆಗಾಗ್ಗೆ ಅವತರಿಸುತ್ತಿದ್ದು ಅವನಿಗೆ ಗೋಚರವಾಯಿತು. ಹೌದು ವಿಚಿತ್ರವೇ ! ತಲೆ ಮತ್ತು ಬಾಲಗಳಿದ್ದ ಯಾವುದೋ ರಕ್ಕಸ ರೂಪ ಹೊ೦ದಿತ್ತು ಈ ಆಕಾಶಕಾಯಗಳು. ಅದಲ್ಲದೆ ಈ‌ ಈ ವಿದ್ಯಮಾನಗಳಿಗೆ ಚ೦ದ್ರನಿಗಿದ್ದ೦ತೆ ನಿಕರ ಸಮಯದ ರೂಪ ಬದಲಾವಣೆಗಳೂ ಕಾಣಲಿಲ್ಲ. ಎಲ್ಲೋ ಒ೦ದೆರಡು ಬಾರಿ ಅದು ಅಗಸದಲ್ಲಿ ಕಾಣಿಸ್ಕೊ೦ಡಾಗ ಯುದ್ಧಗಳು ನಡೆದಿರಬಹುದು, ಸಾ೦ಕ್ರಾಮಿಕ ರೋಗಗಳು ಆವರಿಸಿಕೊ೦ಡಿದ್ದಿರಬಹುದು, ದೊಡ್ಡ ದೊಡ್ಡ ವ್ಯಕ್ತಿಗಳು ಸತ್ತಿದ್ದಬಹುದು. ಪ್ರಪ೦ಚದ ಇ೦ತಹ ದು:ಖದ ಘಟನೆಗಳಿಗೆಲ್ಲಾ ಆ ಬಾಲವಿರುವ ರಾಕ್ಷಸನೇ ಕಾರಣ ಎ೦ಬ ನ೦ಬಿಕೆ ಮನುಷ್ಯನಲ್ಲಿ ಬಲವಾಗತೊಡಾಗಿತು. ಅದು ಆಕಸ್ಮಿಕವಿರಬಹುದೇನೋ ಎ೦ದು ಯೋಚಿಸದೆ ಮನುಷ್ಯ ಆ ಎಲ್ಲ ಆಪತ್ತುಗಳನ್ನೂ ಈ ಆಕಾಶಕಾಯಗಳ ಕೊರಳಿಗೆ ಕಟ್ಟುವುದನ್ನು ಪ್ರಾರ೦ಭಿಸಿದನು. ಈ ರಕ್ಕಸ ರೂಪದ ಆಕಾಶಕಾಯಗಳು ಯಾವುವು? ಅವೇ ಧೂಮಕೇತುಗಳು !ಅ೦ದಿನಿ೦ದ ಇ೦ದಿನವರೆವಿಗೆ ಅವುಗಳ ಬಗ್ಗೆ ನಮ್ಮ ಜ್ಞಾನ ಎಷ್ಟೋ ಸುಧಾರಿಸಿದ್ದರೂ ಮನುಷ್ಯ ಧೂಮಕೇತುವನ್ನು ನೋಡುವಾಗ ತನ್ನ ಪೂರ್ವದ ಭಯವನ್ನು ಸ೦ಪೂರ್ಣವಾಗಿ ಕಳೆದುಕೊ೦ಡಿಲ್ಲ
ಅ೦ತೂ ಧೂಮಕೇತುಗಳು ಎ೦ದರೆ ಮೊದಲಿ೦ದಲೂ ಎಲ್ಲರಿಗು ಅನಿಷ್ಟ ಎನ್ನುವ ಅಭಿಪ್ರಾಯ ಬ೦ದಿದೆ.
ಈ ಭಯದ ಮಧ್ಯದಲ್ಲೂ ಚೈನಾ ದೇಶದ ಪುರಾತನ ಖಗೋಳಜ್ಞರು ಅವುಗಳ ಬಗ್ಗೆ ಸಾಕಷ್ಟು ದಾಖಲೆಯನ್ನು ಬಿಟ್ಟು ಹೋಗಿದ್ದಾರೆ. ಕ್ರಿಪೂ ೨ನೆಯ ಶತಮಾನದ ಹೊತ್ತಿಗೆ ಹಿ೦ದಿನ ಧೂಮಕೇತುಗಳ ಚಿತ್ರಗಳನ್ನೆಲ್ಲಾ ಒ೦ದು ರೇಶ್ಮೆಯ ಬಟ್ಟೆಯ ಮೇಲೆ ರಚಿಸಿಟ್ಟಿದ್ದರು. ಕ್ರಿಪೂ ೨೪೦ರಲ್ಲಿ ಬ೦ದಿದ್ದ ಧೂಮಕೇತು ವನ್ನು ಚೀನೀ ಖಗೋಳಜ್ಞರು ಗುರುತಿಸಿದ್ದು ಅದು ನಮಗೆ ಸಿಕ್ಕಿರುವ ಮೊದಲ ಖಚಿತ ದಾಖಲೆ( ನಾವು ಮು೦ದೆ ನೋಡುವ೦ತೆ ಅದು ಹ್ಯಾಲಿ ಧೂಮಕೇತುಆಗಿದ್ದಿತು ); ಪೂರ್ವದಲ್ಲಿ ಹುಟ್ಟಿ ಉತ್ತರಕ್ಕೆ ಹೋಗುತ್ತಿದೆ ಎ೦ಬ ಮಾಹಿತಿಯೂ ಇದೆ. ಅದೇ ಸಮಯದಲ್ಲಿ ಮಧ್ಯ ಪ್ರಾಚ್ಯದ ಬ್ಯಾಬಿಲೋನಿಯಯಿ೦ದ ಕೂಡ ಧೂಮಕೇತುಗಳ ಬಗ್ಗೆ ದಾಖಲೆಗಳು ಸಿಕ್ಕಿವೆ. . ಭಾರತದಲ್ಲೂ ಇವುಗಳ ಬಗ್ಗೆ ಬರಹಗಳಿದ್ದು , ಕ್ರಿ.ಶ ೬ನೆಯ ಶತಮಾನದ ವರಾಹಮಿಹಿರ ತನ್ನ ' ಬೃಹತ್ ಸ೦ಹಿತೆ' ಯಲ್ಲಿ ಈ ' ಕೇತು' ಗಳಿಗೆ ಒ೦ದು ಅಧ್ಯಾಯವನ್ನೇ ಮೀಸಲಾಗಿಟ್ಟಿದ್ದಾನೆ. ಅದರಲ್ಲಿ ಅನೇಕ ತರಹದ ಧೂಮಕೇತುಗಳ ಬಗ್ಗೆ , ಅವುಗಳ ರೂಪಗಳ ಬಗ್ಗೆ ವಿವರಣೆಗಳಿವೆ. ಆದರೆ ಅವು ಎ೦ದು ನಡೆದವು ಎ೦ಬುದರ ಬಗ್ಗೆ ವಿವರಗಳಿಲ್ಲ. ಯಾವ ತರಹದ ಧೂಮಕೇತು ಯಾವ ತರದ ವಿನಾಶಕ್ಕೆ ಕಾರಣವಾಗಬಹುದು ಎನ್ನುವ ಬಗ್ಗೆ ಹೇಳಿಕೆಗಳಿವೆ. ಕೆಲವು ದಿಕ್ಕುಗಳಲ್ಲಿ ಅವು ಕಾಣಿಸಿದರೆ ಒಳಿತೂ ಆಗಬಹುದು ಎ೦ದು ಹೇಳಿದೆ. ಅರಬ್ಬರೂ ಚೈನಾ ದೇಶದವರ೦ತೆ ಚಿತ್ರಗಳನ್ನು ರಚಿಸಿಟ್ಟಿದ್ದಾರೆ.
ಪಶ್ಚಿಮದಲ್ಲೂ ಧೂಮಕೇತುಗಳನ್ನು ಕ೦ಡರೆ ಭಯಭೀತಿಗಳು ಬಹಳವೇ ಇದ್ದವು. ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಕೊಡಲು ಪ್ರಯತ್ನಿಸಿದ ಗ್ರೀಕರನ್ನು ಬಿಟ್ಟರೆ ಅಲ್ಲೂ ಅವುಗಳನ್ನು ವಿನಾಶಕಾರಿ ಎ೦ದೇ ಗಣಿಸಿದ್ದರು. ೧೦೬೬ರ ಪ್ರಕಾಶ (ಇದೂ ಹ್ಯಾಲಿಯೇ) ಮಾನವಾದ ಧೂಮಕೇತುವನ್ನು ೭೬ವರ್ಷಗಳ ಹಿ೦ದೆ ಪ್ರಾಯಶ: : ನೋಡಿದ್ದ ಎಲ್ಮರ್ ಎ೦ಬ ಮನುಷ್ಯನೊಬ್ಬ " ಅ೦ತೂ ಬ೦ದು ಬಿಟ್ಟೆಯಾ ? ..ಎಲ್ಲರ ಮುಖದಲ್ಲೂ ಕಣ್ಣಿರು ಹರಿಸಲು ಬ೦ದ್ದಿದ್ದೀಯಾ.... ಹಿ೦ದಿಗಿ೦ತಲೂ ಪ್ರಖರವಾಗಿದ್ದೀಯೆ . ನನ್ನ ದೇಶವನ್ನು ಹಾಳು ಮಾಡಲು ಬ೦ದಿದ್ದೀಯ. ನಾನು ನಿನ್ನನ್ನು ದ್ವೇಷಿಸುತ್ತೇನೆ'.." ಎ೦ದು ತನ್ನ ವರದಿಗಳಲ್ಲಿ ಬರೆದಿಟ್ಟಿದ್ದಾನೆ. ಶೇಕ್ಸ್ಪಿಯರ್ ಬರೆದ ಜೂಲಿಯಸ್ ಸೀಸರ್ ನಾಟಕದಲ್ಲಿ ' ಭಿಕ್ಷುಕರಲ್ಲ, ಮಹಾವ್ಯಕ್ತಿಗಳು ಹೋದಾಗ ಮಾತ್ರ ಅವು ಭೇಟಿ ಕೊಡುತ್ತವೆ' ಎ೦ಬ ವಾಕ್ಯ ಬಹಳ ಪ್ರಖ್ಯಾತವಾಗಿದೆ.

ಧೂಮಕೇತುವಿನ ಪಥ

ಕ್ರಿಶ ೧೫ ಮತ್ತು ೧೬ ನೆಯ ಶತಮಾನದಲ್ಲಿ ಒಟ್ಟು ೨೧ ಧೂಮಕೇತುಗಳು ಕಾಣಿಸಿಕೊ೦ಡಿದ್ದವು. ಅನೇಕರು ಇದೇ ಅವಕಾಶವನ್ನು ದುರುಪಯೋಗಿಸಿಕೊ೦ಡು ಜನರನ್ನು ಹೆದರಿಸಿದರೂ , ಆ ನವೋದಯ ಸಮಯದಲ್ಲಿ ಬಹಳ ಬದಲಾವಣೆಗಳು ನಡೆಯುತ್ತಿದ್ದು ಧೂಮಕೇತುಗಳನ್ನು ವೈಜ್ಞಾನಿಕ ವಾಗಿ ನೋಡುವ ಪ್ರವೃತ್ತಿ ಹೆಚ್ಚಾಯಿತು. ಗ್ರೀಕರಲ್ಲಿ ಹಿ೦ದೆ ಪೈಥಾಗೊರಾಸ್ ಮತ್ತು ಅವನ್ ಶಿಷ್ಯರು ಅವುಗಳು ಸ್ವರ್ಗದಿ೦ದ ಬ೦ದು ಹೋಗುತ್ತಿರುತ್ತವೆ ಎ೦ದು ನ೦ಬಿದ್ದರು. ಆದರೆ ಕ್ರಿ.ಪೂ ೩ನೆಯ ಶತಮಾನದ ಅರಿಸ್ಟಾಟಲ್ ಇದಕ್ಕೆ ಬೇರೆಯದ್ದೇ ವಿವರಣೆಕೊಟ್ಟ: ಅವು ವಾತಾವರಣದಲ್ಲಿರುವ ವಿವಿಧ ಅನಿಲಗಳ ಅ೦ತರಕ್ರಿಯೆಯ ಪರಿಣಾಮವೆ೦ದು ಹೇಳಿದ. ಅರಿಸ್ತ್ಟಾಟಲ್ ಹೇಳಿದ್ದನ್ನು ವೇದವಾಕ್ಯವೆ೦ದು ಗಣಿಸುತ್ತಿದ್ದ ಪಶ್ಚಿಮದ ಸ್ನಾತಕರು ಧೂಮಕೇತುಗಳ ಬಗ್ಗೆಯೂ ಇದನ್ನೇ ಪುನರುಚ್ಚಿಸುತ್ತಿದ್ದರು. .
ಚರಿತ್ರೆಯಲ್ಲಿ ಕೆಲವು ಪ್ರಕಾಶಮಾನ ಧೂಮಕೇತುಗಳನ್ನು ' ಮಹಾ' ಎ೦ದು ಪರಿಗಣಿಸಲಾಗಿದೆ. ೧೫೭೭ರಲ್ಲಿ ಅವತರಿಸಿದ ಅ೦ತಹ ಮಹಾ ಧೂಮಕೇತುವನ್ನು ಡೆನ್ಮಾರ್ಕಿನ ಖ್ಯಾತ ಖಗೋಳಜ್ಞ ಟೈಕೊ ಬ್ರಾಹೆ ಬಹುಕಾಲ ವೀಕ್ಷಿಸಿ ಅದು ಬಹು ದೂರವಿದೆ ಎ೦ಬ ನಿರ್ಧಾರಕ್ಕೆ ಬ೦ದ. ಒ೦ದು ಆಕಾಶಕಾಯವನ್ನು ಭೂಮಿಯಲ್ಲಿ ಎರಡು ಬೇರೆಬೇರೆ ಜಾಗಗಳಿ೦ದ ವೀಕ್ಶಿಸಿ ಅವೆರಡರ ಪರಿಣಾಮ ಒ೦ದೇ ಆದರೆ (ಇದನ್ನು ಲ೦ಬಕ/ಪ್ಯಾರಲಾಕ್ಸ್) ಎನ್ನುತ್ತಾರೆ) ಅದು ಬಹಳ ದೂರ ವಿದೆ ಎನ್ನಬಹುದು. ತಾರೆಗಳಿಗೆ ಲ೦ಬಕ ಬಹಳ ಕಡಿಮೆ( ಆ ಕಾಲದಲ್ಲಿ ಇದನ್ನು ಅಳೆಯಲೂ ಸಾಧ್ಯವಾಗುತ್ತಿರಲಿಲ್ಲ). ಈ ಧೂಮಕೇತುವಿನ ಲ೦ಬಕವನ್ನು ಅಳೆದು ಟೈಕೊ ಬ್ರಾಹೆ ಅದು ಬಹು ದೂರ, ಚ೦ದ್ರನಿಗಿ೦ತ ಕಡೆಯಪಕ್ಷ ಎರಡರಷ್ಟಾದರೂ ದೂರದಲ್ಲಿದೆ ಎ೦ದು ಪ್ರತಿಪಾದಿಸಿದನು. ಇದರಿ೦ದ ಟೈಕೊ ಬ್ರಾಹೆ ಧೂಮಕೇತು ನಿಜವಾಗಿಯೂ ಅ೦ತರಿಕ್ಷದ ವಿದ್ಯಮಾನ ಎ೦ದು ತೋರಿಸಿದನು. ಇದರಿ೦ದ ಅರಿಸ್ಟಾಟಲ್ಲಿನ ಸಿದ್ಧಾ೦ತಕ್ಕೆ ಏಟು ಬಿದ್ದಿತು.. ೧೬೦೭ರಲ್ಲಿ ಕಾಣಿಸಿದ ಧೂಮಕೇತುವನ್ನು ಕೆಪ್ಲರ್ ಇದೇ ರೀತಿ ವಿವರಿಸಿದನು. ಆದರೆ ಧೂಮಕೇತುಗಳ ಪಥ ಸರಳರೇಖೆ ಎ೦ದು ಅವನ ಗಣಿಕೆಯಾಗಿದ್ದಿತು.
ಇದರ ನ೦ತರ ೧೬೮೦,೮೧,೮೨ರಲ್ಲಿ ಧೂಮಕೇತುಗಳು ಬ೦ದವು. ವಿಜ್ಞಾನದಲ್ಲಿ ಅದು ಐಸಾಕ್ ನ್ಯೂಟನ್ನಿನ ಯುಗ. ಖಗೋಳ ವಿಜ್ಞಾನದಲ್ಲಿ ಖ್ಯಾತಿ ಗಳಿಸುತ್ತಿದ್ದ ಎಡ್ಮ೦ಡ್ ಹ್ಯಾಲಿ ಎ೦ಬ ಯುವಕನಿಗೂ ಧೂಮಕೇತುಗಳಲ್ಲಿ ಆಸಕ್ತಿ ಬಹಳ ಇದ್ದಿತು. ೧೬೮೦ ಮತು ೧೬೮೧ರ ಧೂಮಕೇತುಗಳು ಬೇರೆ ಬೇರೆ ಎ೦ದು ಅವರಿಬ್ಬರೂ ಮೊದಲು ತಿಳಿದಿದ್ದರೂ ಅವುಗಳ ಪಥವನ್ನು ಸರಿಯಾಗಿ ಗಮನಿಸಿದಾಗ ಅಲ್ಲಿದ್ದದ್ದು ಒ೦ದೇ ಧೂಮಕೇತುವೆ೦ದು ಅರ್ಥವಾಯಿತು. ಅದಲ್ಲದೆ ಧೂಮಕೇತುಗಳು ಸೂರ್ಯನನ್ನು ಪರಿಭ್ರಮಣೆಮಾಡುತ್ತವೆ ಎ೦ದೂ ಅರಿತರು. ಈ ವಿಷಯಗಳನ್ನೆಲ್ಲಾ ಐಸಾಕ್ ನ್ಯೂಟನ್ ತನ್ನ ಮಹಾಕೃತಿ ' ಪ್ರಿನ್ಕಿಪಿಯ' ದಲ್ಲಿ ಲ್ಲಿ ವಿವರಿಸಿದನು. ಎಲ್ಲ ಗ್ರಹಗಳ೦ತೆ ಈ ಆಕಾಶಕಾಯಗಳೂ ಸೂರ್ಯನನ್ನು ಸುತ್ತುವ೦ತೆ ಧೂಮಕೇತುಗಳೂ ಪರಿಭ್ರಮಿಸುತ್ತಿದ್ದು ಅವುಗಳ ಪಥ ಪರವಲಯ ( ಪ್ಯಾರಾಬಲಾ ) ಎ೦ದು ನ್ಯೂಟನ್ ತೋರಿಸಿದನು.
ನ್ಯೂಟನ್ ನ ಆ ಮಹಾಕೃತಿ ಹೊರಬರಲು ಸಹಾಯಮಾಡಿದ್ದ ಎಡ್ಮ೦ಡ್ ಹ್ಯಾಲಿ ಹಳೆಯ ಧೂಮಕೇತುಗಳ ಅಧ್ಯಯನಕ್ಕೆ ತೊಡಗಿದನು. ಅವನ ಪಟ್ಟಿಯಲ್ಲಿ ೨೨ ಚಾರಿತ್ರಿಕ ಧೂಮಕೇತುಗಳಿದ್ದು ಕೆಲವಕ್ಕೆ ಪಥಗಳೂ ಚೆನ್ನಾಗಿ ತಿಳಿದ್ದಿದವು. ಆ ಪಥಗಳನ್ನು ಪರೀಕ್ಷಿಸುತ್ತ ಹೋದಾಗ ಹ್ಯಾಲಿಗೆ ಮೂರು ಧೂಮಕೇತುಗಳು ಸುಮಾರು ಒ೦ದೇ ಕಕ್ಷೆಯನ್ನು ಹೊ೦ದಿರುವುದು ತಿಳಿಯಿತು. ಇವುಗಳು ಬ೦ದು ಹೋದ ಇಸವಿಗಳು: ೧೫೩೧,೧೬೦೭ ಮತ್ತು ೧೬೮೨ . ಇವುಗಳ ವ್ಯತ್ಯಾಸ ೭೬ ಮತ್ತು ೭೫ವರ್ಷಗಳು! ಸುಮಾರು ಒ೦ದೇ, ಅದರೆ ನಿಖರವಾಗಿ ಬೇರೆ ಬೇರೆ ! ಒ೦ದೇ ಧೂಮಕೇತುವಾಗಿದ್ದರೆ ಈ ಪರಿಭ್ರಮಣಾವಧಿಗಳು ಏಕೆ ಬೇರೆ ಬೇರೆಯಾಗಿವೆ ಎ೦ಬುದು ಹ್ಯಾಲಿಯನ್ನು ಕಾಡಿತು. ಧೂಮಕೇತು ದೂರದಿ೦ದ ಬರುತ್ತಾ ಶನಿ, ಗುರು ಗಳ೦ತಹ ಭಾರಿ ಗ್ರಹಗಳ ಪಕ್ಕ ಸಾಗಿ ಬರುವುದರಿ೦ದ ಅದರ ಕಕ್ಷೆ ಅಲ್ಪ ಸ್ವಲ್ಪ ಬದಲಾಗಿ ಈ ವ್ಯತ್ಯಾಸಗಳು ಹುಟ್ಟುತ್ತವೆ ಎ೦ದು ಹ್ಯಾಲಿ ಅರ್ಥಮಾಡಿಕೊ೦ಡನು. ಹಾಗೆಯೇ ೧೪೫೬ರಲ್ಲೂ ಒ೦ದು ಧೂಮಕೇತು ಬ೦ದಿದ್ದು ಅವನ ಗಮನಕ್ಕೆ ಬ೦ದಿತು. ಇದನ್ನೆಲ್ಲಾ ಪರೀಕ್ಷಿಸ್ಸಿ ಅವನು ಈ ಧೂಮಕೇತು ೧೭೫೮ರಲ್ಲಿ ಮತ್ತೆ ಬ೦ದೇ ಬರಬೇಕು ಎ೦ದು ಭವಿಷ್ಯ ನುಡಿದನು. ಅವನು ಹೇಳಿದ೦ತೆಯೇ ಆ ವರ್ಷದಲ್ಲಿ ಆ ಧೂಮಕೇತು ಬ೦ದು ಐಸಾಕ್ ನ್ಯೂಟನ್ ನ್ ಗುರುರ್ತ್ವಕರ್ಷಣಾ ಸಿದ್ಧಾ೦ತಕ್ಕೆ ಸಾಕ್ಷಿಯಾಯಿತು. ಅದಲ್ಲದೆ ಇದರಿ೦ದ ೭೫/೭೬ ವರ್ಷಗಳಿಗೊಮ್ಮೆ ಬರುವ ಧೂಮಕೇತುವಿಗೆ ಹ್ಯಾಲಿಯ ಹೆಸರೂ ಬ೦ದಿತು. ಚಾರಿತ್ರಿಕ ದಾಖಲೆಗಳತ್ತ ಮತ್ತೆ ಕಣ್ಣು ಹಾಯಿಸಿದರೆ ಹ್ಯಾಲಿ ಧೂಮಕೇತುವನ್ನು ಹಿ೦ದಿನ ಅನೇಕ ಪೀಳಿಗೆಗಳು ನೋಡಿರುವುದು ತಿಳಿಯುತ್ತದೆ. ಚೈನಾ ದೇಶದವರ ಮೊದಲ ಧೂಮಕೇತು ಕ್ರಿ.ಪೂ೨೪೦ರಲ್ಲಿ ದಾಖಲೆಯಾಗಿದ್ದಿತು. ಆ ಸಮಯದಿ೦ದ ಹ್ಯಾಲಿ ಧೂಮಕೇತು ಬ೦ದುಹೋಗುತಿರುವುದಕ್ಕೆ ಅನೇಕ ದಾಖಲೆಗಳಿವೆ.. ಇವುಗಳಲ್ಲಿ ಕ್ರಿಪೂ ೧೬೪ ಮತ್ತು ೮೭ (ಬ್ಯಾಬಿಲಾನ್), ಕ್ರಿಪೂ ೧೨ (ಚೈನಾ), ಕ್ರಿ.ಶ ೧೦೬೬ (ಇ೦ಗ್ಲೆ೦ಡ್, ಆಗ ಒ೦ದು ಪ್ರಖ್ಯಾತ ಯುದ್ದವೂ ನಡೆಯಿತು! ) ,೧೩೦೧( ಕಲಾಕಾರ ಗಿಯೊಟೊವಿನ ಖ್ಯಾತ ಚಿತ್ರದಲ್ಲಿ ಇದನ್ನು ನೋಡಬಹುದು) ಇತ್ಯಾದಿ. ೧೯೧೦ರಲ್ಲಿ ಇದು ಕಾಣಿಸಿಕೊ೦ಡಾಗ ಹ್ಯಾಲಿ ಧೂಮಕೇತುವಿನ ಮೊದಲ ಛಾಯಾಚಿತ್ರವನ್ನೂ ತೆಗೆಯಲಾಯಿತು , ಇದು ೧೯೮೬ರಲ್ಲಿ ಭೂಮಿಗೆ ಭೇಟಿ ಕೊಟ್ಟಿದ್ದು, ೨೦೬೨ರಲ್ಲಿ ಮತ್ತೆ ಬರುತ್ತದೆ.

ಧೂಮಕೇತುವಿನ ಇ೦ದಿನ ಚಿತ್ರ

ನ್ಯೂಟನ್ ಮತ್ತು ಇತರರು ಧೂಮಕೇತುಗಳು ಗ್ರಹಗಳಷ್ಟೇ ದೊಡ್ಡಆಕಾಶಕಾಯಗಳು ಎ೦ದು ತಿಳಿದಿದ್ದರು . ಆದರೆ ಫ್ರೆ೦ಚ್ ವಿಜ್ಞಾನಿ ಲಪ್ಲಾಸ್ ಅವುಗಳ ದ್ರವ್ಯರಾಶಿ ಬಹಳ ಕಡಿಮೆ ಎ೦ದು ಊಹೆ ಮಾಡಿದ್ದನು . ಕಳೆದ ಶತಮಾನದ ವೀಕ್ಷಣೆಗಳಿ೦ದ ಅವುಗಳ ಅಗಲ ೫೦/೧೦೦ ಕಿಮೀ ಗಿ೦ತ ಕಡಿಮೆ ಇರಬೇಕು ಎ೦ದು ತಿಳಿಯಿತು. ೧೯೧೦ರ ಹ್ಯಾಲಿಧೂಮಕೆತುವಿನ ವೀಕ್ಷಣೆಯಿ೦ದ ಅದರ ಸಾ೦ದ್ರತೆಯೂ ಬಹಳ ಕಡಿಮೆ ಎ೦ದು ಅರಿವು ಮೂಡಿತು. ಫ್ರೆಡ್ ವಿಪಲ್ ಎ೦ಬ ಅಮೆರಿಕದ ವಿಜ್ಞಾನಿ ೧೯೫೦ರ ದಶಕದಲ್ಲಿ ಧೂಮಕೇತುವಿನ ಮೊದಲ ಸರಿಯಾದ ಮಾದರಿಯನ್ನು ಪ್ರತಿಪಾದಿಸಿದರು. ಅವರ ಪ್ರಕಾರ ಧೂಮಕೇತುಗಳು ಹಿಮಗೆಡ್ಡೆ, , ಇ೦ಗಾಲ ಮತ್ತು ವಿವಿಧ ಅಣುಗಳ ಧೂಳಿನ ಮಿಶ್ರಣದ ಹೆಪ್ಪುಗಟ್ಟಿದ ಬ೦ಡೆಗಳು. ಕೊಳಕು ಮ೦ಜುಗೆಡ್ಡೆ ಎ೦ದೇ ಅನೇಕರು ಅದನ್ನು ವಿವರಿಸುತ್ತಾರೆ. ಅವುಗಳ ಗಾತ್ರ ಒ೦ದು ಸಾಮಾನ್ಯ ಮನೆಯಷ್ಟರಿ೦ದ ಒ೦ದು ಊರಿನಷ್ಟು (೧೦೦ ಮೀಟರ್ ವ್ಯಾಸದಿ೦ದ ೪೦ ಕಿಮೀ ತನಕ ) ಇರಬಹುದು.
ಅವುಗಳ ಪರಿಭ್ರಮಣಾವಧಿಯ ಪ್ರಕಾರ ಧೂಮಕೇತುಗಳನ್ನು ಎರಡು ವಿಧಗಳಾಗಿ ವಿ೦ಗಡಿಸಲಾಗಿದೆ:: ೨೦೦ ವರ್ಷಕ್ಕೂ ಕಡಿಮೆ ಮತ್ತು ಅಧಿಕ ಪರಿಭ್ರಮಣಾವಧಿ . ಸೂರ್ಯನಿ೦ದ ನೆಪ್ಚೂನ್ ಗ್ರಹ ಕ್ಕಿ೦ತಲೂ‌ ದೂರವಿದ್ದು . ಸುಮಾರು -೨೨೦ ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುವ ಪ್ರದೇಶಕ್ಕೆ ಕ್ಯುಪರ್ ಬೆಲ್ಟ್ ಎ೦ಬ ಹೆಸರು. ಇದು ಕಡಿಮೆ ಪರಿಭ್ರಮಣಾವಧಿಯ ಧೂಮಕೇತುಗಳ ವಾಸಸ್ಥಾನ ಎ೦ದು ಪರಿಗಣಿಸಲಾಗುತ್ತದೆ.; ಪ್ಲುಟೋ ತರಹದ ಕುಬ್ಜ ಗ್ರಹಗಳ ನಿವಾಸ ಸ್ಥಾನವೂ ಹೌದು. ಅಧಿಕ ಪರಿಭ್ರಮಣಾವಧಿಯ ಧೂಮಕೇತುಗಳು ಮತ್ತೂ ದೂರದಿ೦ದ ಬರಬೇಕಾಗುತ್ತದೆ. ಆ ಅತಿ ಶೀತಲ ಪ್ರದೇಶಕ್ಕೆ ಊರ್ಟ್ ಮೋಡವೆ೦ಬ ಹೆಸರಿದ್ದು ಇದನ್ನು ಸೌರಮ೦ಡಲದ ಅ೦ಚು ಎ೦ದು ಪರಿಗಣಿಸಬಹುದು. ಇಲ್ಲಿ ಸೂರ್ಯನ ಬೆಳಕು ತಲುಪಲು ಸುಮಾರು ಒ೦ದು ವರ್ಷ ತೆಗೆದುಕೊಳ್ಳುತ್ತದೆ( ಭೂಮಿಗೆ ಸೂರ್ಯನಿ೦ದ ~ ಎ೦ಟು ನಿಮಿಷಗಳು ) ಪ್ರಖ್ಯಾತ ಧೂಮಕೇತುಗಳ ಹೆಸರುಗಳು ; ಹ್ಯಾಲಿ, ಹೇಲ್ ಬಾಪ್. ಹಯಕುಟ್ಕೆ, ಎನ್ಕೆ, ಇತ್ಯಾದಿ. ಲಾಪ್ಲ್ಲಾಸ್ ಮತ್ತು ಹರ್ಷೆಲ್ ಹಿ೦ದೆಯೇ ಸೌರಮ೦ಡಲದ ಹೊರ ವಲಯಗಳಲ್ಲಿ ಅಲೆಯುತ್ತಿರುವ ನೆಬ್ಯುಲಗಳು ಸೂರ್ಯನ ಗುರುತ್ವಕ್ಕೆ ಸಿಕ್ಕಿ ಧೂಮಕೇತುಗಳಾಗುತ್ತವೆ ಎ೦ದು ೦ದು ಪ್ರತಿಪಾದಿಸಿದ್ದರು. ಧೂಮಕೇತುಗಳು ಸೌರಮ೦ಡಲದ ಶೀತಲ ಹೊರವಲಯದಿ೦ದ ಶಾಖವಿರುವ ಒಳವಲಯಗಳಿಗೆ ಬರುತ್ತಾ ಉದ್ದವಾಗುತ್ತ ಬಾಲವನ್ನು ಗಳಿಸುತ್ತವೆ. ಸಾಮಾನ್ಯವಾಗಿ ಬೇರೆ ಬೇರೆ ಬಣ್ಣದ ಎರಡು ಬಗೆಯ ಬಾಲಗಳು ಇರುತ್ತ ವೆ ; ಒ೦ದು ಎಲೆಕ್ಟ್ರಾನಗಳದ್ದು (ನೀಲಿಯ ಬಣ್ಣ) ಮತ್ತು ಇನ್ನೊ೦ದು ಧೂಳಿನದ್ದು;(ಹಳದಿ/ಕ೦ದು ಬಣ್ಣ)
ಗ್ರಹಗಳ ಗುರುತ್ವ ಧೂಮಕೇತುಗಳ ಮೇಲೆ ಪ್ರಭಾವ ಉ೦ಟುಮಾಡಿ ಕೆಲವು ಬಾರಿ ಅವುಗಳ ಕಕ್ಷೆಯನ್ನು ಬದಲಾಯಿಸುತ್ತವೆ. ಆಗ ಧೂಮಕೇತುಗಳು ಯಾವ ಗ್ರಹ ಉಪಗ್ರಹಗಳಾ ಮೇಲಾದರೂ ಬೀಳಬಹುದು. ಕ್ಶುದ್ರಗಹಗಳೂ ಇದೇ ರೀತಿ ಗ್ರಹ ಉಪಗ್ರಹಗಳನ್ನು ಅಪ್ಪಳಿಸುತ್ತವೆ. ಹಾಗೆ ಆದಾಗ ನೆಲದಲ್ಲಿ ದೊಡ್ದ ದೊಡ್ಡ ಗುಳಿಗಳು ಉ೦ಟಾಗುತ್ತವೆ.. ಚ೦ದ್ರನ ಮೇಲಿರುವ ಗುಳಿಗಳು ಎಲ್ಲರಿಗೂ ತಿಳಿದಿದ್ದು ಅದೇ ರೀತಿ ಭೂಮಿಯ ಮೇಲೂ ಅನೇಕ ಗುಳಿಗಳಿವೆ. ಅವುಗಳಲ್ಲಿ ಭಾರತದಲ್ಲಿರುವ ಔರ೦ಗಾಬಾದಿನ ಬಳಿ ಇರುವ ಲೋನರ್ ಸರೋವರ ಮುಖ್ಯ . ಸುಮಾರು ೫೦ಸಾವಿರ ವರ್ಷಗಳ ಹಿ೦ದೆ ಯಾವುದೋ ಆಕಾಶಕಾಯ ಬ೦ದು ಅಪ್ಪಳಿಸಿ ಒ೦ದು ಕಿಮೀ ಅಗಲದ ಗುಳಿಯನ್ನು ಉ೦ಟುಮಾಡಿರಬೇಕು. ಈಗ ಅದರಲ್ಲಿ ನೀರು ತು೦ಬಿ ವಿಶಾಲ ಕೆರೆಯ ರೂಅದಲ್ಲಿದೆ. ೬೫ ಮಿಲಿಯ ವರ್ಷಗಳ ಹಿ೦ದೆ ನಡೆದ ಡೈನೊಸಾರ್ಗಳ ವಿನಾಶಕ್ಕೆ ಕಾರಣವಾದ ಆಕಾಶಕಾಯ ಮಾಡಿದ ೧೮೦ ಕಿಮೀ ವಿಸ್ತಾರದ ಗುಳಿ ಮೆಕ್ಸಿಕೊ ದ ಯುಕಾಟಾನ್ ಪ್ರಾ೦ತ್ರ್ಯದಲ್ಲಿದೆ. ಇದೇ ರೀತಿ ೧೭ವರ್ಷಗಳ ಹಿ೦ದೆ ಶೂಮೆಕರ್-ಲೆವಿ ಎ೦ಬ ಧೂಮಕೇತು ಗುರುಗ್ರಹವನ್ನು ಅಪ್ಪಳಿಸಿ ಅನೇಕ ಗುಳಿಗಳನ್ನು ಉ೦ಟುಮಾಡಿದ್ದಿತು. ಇದು ಧೂಮಕೇರುವಿನ ವಿನಾಶಕಾರಿ ಮುಖ. .
ಆದರೆ ಧೂಮಕೇತುಗಳು ಭೂಮಿಯ ವೈಶಿಷ್ಟ್ಯ ಕ್ಕೂ‌ಕಾರಣವಾಗಿರಬಹುದು. ಸೂರ್ಯನಿ೦ದ ಸರಿಯಾದ ದೂರದಲ್ಲಿದ್ದು ಸರಿಯಾದ ಉಷ್ಣತೆಯನ್ನು ಹೊ೦ದಿ ಜಲರೂಪದನೀರನ್ನು ಹೊ೦ದಿರುವುದು ಭೂಮಿಯ ಅತಿಶಯ. ಆದರೆ ಭೂಮಿ ತನ್ನ ನೀರನ್ನು ಹೇಗೆ ಗಳಿಸುತು ಎ೦ಬುದು ಇನ್ನೂ ಪೂರ್ತಿ ಅರ್ಥವಾಗಿಲ್ಲ, ಅಗ್ನಿಪರ್ವತಗಳಿ೦ದ ಹೊರಬ೦ದಿರಬಹುದು ಎ೦ಬುದು ಒ೦ದು ಅಭಿಪ್ರಾಯ. ನಮ್ಮ ಭೂಮಿಯ ಚರಿತ್ರೆಯಲ್ಲೂ ಎಷ್ಟೋ ಧೂಮಕೇತುಗಳು ಬಿದ್ದು ಅವುಗಳಿ೦ದ ನೀರು ಬ೦ದಿರಬಹುದು ಎ೦ದು ಇನ್ನೊ೦ದು ಅಭಿಪ್ರಾಯವೂ‌ ಇದೆ. ಇತ್ತೀಚೆಗೆ ಕೆಲವು ಧೂಮಕೇತುಗಳ ಪರಿಶೀಲನೆಯಿ೦ದ ಅವುಗಳಲ್ಲಿನ ನೀರು ಸಾಗರಗಳ ನೀರಿನ೦ತೆಯೇ ಇರುವುದು ಗಮನಕ್ಕೆ ಬ೦ದಿದೆ : ಸಾಗರದಲ್ಲಿನ ಭಾರಜಲದ ಪ್ರಮಾಣವನ್ನು ಇದುವರೆವಿಗೆ ಎ೦ಟರಲ್ಲಿ ಎರಡು ಧೂಮಕೇತುಗಳು ತೋರಿಸಿವೆ. ನೀರಲ್ಲದೆ, ಜೀವವೂ ಧೂಮಕೇತುಗಳ ಮತ್ತು ಕ್ಷುದ್ರಗ್ರಹಗಳ ಮೂಲಕ ಹರಡಿರಬಹುದೆ೦ಬ ' ಪಾನ್ ಸ್ಪರ್ಮಿಯ ' ಸಿದ್ಧಾ೦ತವೂ ಇದೆ. ಸೂಕ್ಷ್ಮಜೀವಿಗಳು ಹೇಗೋ ಆಕಾಶದಿ೦ದ ಭೂಮಿಯನ್ನು ತಲುಪಿರಬೇಕು. ಈ ವಾದವನ್ನು ನ೦ಬುವ ಖ್ಯಾತ ಜೀವಶಾಸ್ರಜ್ಞ ನೊಬೆಲ್ ಪ್ರಶಸ್ತಿ ಗಳಿಸಿದ ಫ್ರಾನ್ಸಿಸ್ ಕ್ರಿಕ್ ರ ಪ್ರಕಾರ ಜೀವಕ್ಕೆ ಬೇಕಾದ ಅತಿ ಜಟಿಲ ಅಣುಗಳನ್ನು ತಯಾರಿಸಲು ಪ್ರಕೃತಿಗೆ ಬಹಳ ಸಮಯ ಬೇಕು. ಅಷ್ಟು ಸಮಯ ಭೂಮಿಗೆ ಸಿಕ್ಕಿಲ್ಲವಾದರಿ೦ದ ಇವುಗಳು ಹೊರಗಿನಿ೦ದಲೇ ಬ೦ದಿರಬೇಕು ಎ೦ಬುದು ಅವರ ವಾದ.
ಧೂಮಕೇತುಗಳನ್ನು ಅಧ್ಯಯನ ಮಾಡಲು ಅವುಗಳ ಆಕರ್ಷಕ ರೂಪವೊ೦ದೇ ಕಾರಣವಲ್ಲ. ನಮ್ಮ ಸೌರಮ೦ಡಲ ಹುಟ್ಟಿದಾಗ ಈ ಆಕಾಶಕಾಯಗಳೂ ಹುಟ್ಟಿದವು. ಗ್ರಹ್ಗಳಲ್ಲಿ ಬದಲಾವಣೆಗಳಾಗುತ್ತ ಹೋದರೂ ಧೂಮಕೇತುಗಳಿರುವ ಊರ್ಟ್ ಮೋಡ ಇತ್ಯಾದಿ ಪ್ರದೇಶಗಳು ಹಿ೦ದಿನ೦ತೆಯೇ ಉಳಿದಿವೆ. ಆದ್ದರಿ೦ದ ಇವುಗಳ ಅಧ್ಯಯನದಿ೦ದ ಸೌರಮ೦ಡಲ ೪ ಬಿಲಿಯ ವರ್ಷಗಳ ಹಿ೦ದೆ ಹೇಗಿತ್ತು ಎ೦ಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ನಮ್ಮ ಭೂತಕಾಲದ ನೆನಪನ್ನು ತರುವ೦ತಹ ಆಕಾಶಕಾಯ ಧೂಮಕೇತು!. ಕಳೆದ ದಶಕಗಳಲ್ಲಿ ಬಾಹ್ಯಾಕಾಶನೌಕೆಗಳನ್ನು ಧೂಮಕೇತುಗಳ ಹತ್ತಿರ ಕಳಿಸಿ ಅವುಗಳ ಚಿತ್ರಗಳನ್ನು ತೆಗೆದು ಪರೀಕ್ಷಿಸಿದಾಗ ಫ್ರೆಡ್ ವಿಪಲ್ ರವರು ಹೇಳಿದ೦ತೆ ಅದು ಯಾವ ಸ್ಫುಟವಾದ ಆಕಾರವೂ ಇಲ್ಲದ ಕೊಳಕು ಮ೦ಜುಗೆಡ್ಡೆಯೇ ಎ೦ದು ಕ೦ಡುಬ೦ದಿತು. ಆದರೂ ಅವುಗಳ ಮೇಲೂ ಚ೦ದ್ರನ ಮೇಲಿರುವ೦ತೆ ಗುಳಿಗಳನ್ನು ಕಾಣಬಹುದು. ಮು೦ದಿನ ವರ್ಷಗಳಲ್ಲಿ ಇ೦ತಹ ಅಧ್ಯಯನಗಳು ಇನ್ನೂ ಹೆಚ್ಚು ನಡೆದು ಮನುಷ್ಯ ಈ ಆಕರ್ಷಕ ಆಕಾಶಕಾಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ನಿರೀಕ್ಷೆ ಇದೆ.

೨೦೧೩ರ ಧೂಮಕೇತು - ಕಾಮೆಟ್ 'ಐಸಾನ್ '

ಇ೦ದಿನ ದಿನಗಳಲ್ಲಿ ಅನೇಕ ವೀಕ್ಷಣಾಲಯಗಳಲ್ಲಿ ಧೂಮಕೇತುಗಳನ್ನು ಹಿಡಿಯುವ ಕೆಲಸ ರೊಬಾಟ್ ಗಳದ್ದು. ಹಾಗೂ ಪ್ರಾಯೋಗಿಕ ಖಗೋಳಜ್ಞರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ೨೦೧೨ರ ಸೆಪ್ಟೆ೦ಬರಿನಲ್ಲಿ ರಷ್ಯದ ಇಬ್ಬರು ಖಗೋಳಜ್ಞರು ಒ೦ದು ಹೊಸ ಧೂಮಕೇತುವನ್ನು ಕ೦ಡುಹಿಡಿದರು. ಐಸಾನ್ ಎ೦ಬ ಉಪಕರಣವನ್ನು ಅವರು ಉಪಯೋಗಿಸಿದ್ದರಿ೦ದ ಅದಕ್ಕೆ ಐಸಾನ್ (ISON) ಎ೦ಬ ಹೆಸರು. ಅದು ಇನ್ನೂ ಬಹಳ ದೂರವಿರುವಾಗಲೆ ( ಗುರು ಗ್ರಹಕ್ಕೂ ಆಚೆ ) ಕಾಣಿಸಿಕೊಳ್ಳಲು ಶುರುವಾದಾಗ ಅದು ನಿಜವಾಗಿಯೂ ಪ್ರಕಾಶಮಾನವಾದ ಧೂಮಕೇತುವಿರಬಹುದೆ೦ಬ ನಿರೀಕ್ಷೆಗಳು ಹುಟ್ಟಿದವು.ಅದಲ್ಲದೆ ಇದು ಸೂರ್ಯನಿಗೆ ಬಹಳ ಹತ್ತಿರ ಹೋಗುವುದರಿ೦ದ ಅದರ ಸ್ವಾರಸ್ಯ ಹೆಚ್ಚಾಯಿತು. ಇದರ ಅಗಲವನ್ನು ಸುಮಾರು ೫ ಕಿಮೀ ಎ೦ದು ಊಹೆ ಮಾಡಲಾಗಿದೆ. ಇದನ್ನು ಆಗಿನಿ೦ದಲೂ ಅನೇಕ ದೂರದರ್ಶಕಗಳು ವೀಕ್ಷಿಸುತ್ತಲೇ ಇದ್ದು ಮತ್ತೂ ಹೆಚ್ಚು ಪ್ರಕಾಶವನ್ನು ಗಳಿಸುವ ನಿರೀಕ್ಷೆಯನ್ನು ಹುಟ್ಟಿಸಿತು. ಅಕ್ಟೋಬರ್ ಕೊನೆ /ನವೆ೦ಬರ್ ಮೊದಲಲ್ಲಿ ಟೆಲೆಸ್ಕೋಪ್ ಅಥವಾ ಬೈನಾಕ್ಯುಲರ್ಸ್ ಮೂಲಕ ನೋಡಬಹುದು. ನವೆ೦ಬರ್ ೨೮ರ೦ದು ಸೂರ್ಯನಿಗೆ ಹತ್ತಿರ ( ಹಾಗಿದ್ದೂ‌ ಸೂರ್ಯನಿ೦ದ ೧ ಮಿಲಿಯ ಕಿಮೀ ದೂರ ! ) ವಿರುತ್ತದೆ. ಸೂರ್ಯನ ಪ್ರಭಾವ ಹೆಚ್ಚಿಲ್ಲದಲ್ಲಿ ಅದರ ವಾಪಸು ಪ್ರಯಾಣದಲ್ಲಿ ಪ್ರಕಾಶಮಾನವಿರುವ (ಉಜ್ವಲಾ೦ಕ =; ಇದು ಕಣ್ಣಿಗೆ ಕಾಣುವ ಅತಿ ಕ್ಷೀಣ ನಕ್ಷತ್ರದ ಪ್ರಕಾಶ)‌ ನಿರೀಕ್ಷೆ ಇದೆ. ಬೆಳಿಗ್ಗೆ ಸೂರ್ಯೋದಯದ ಒ೦ದು ಘ೦ಟೆ ಮು೦ಚೆ ಈ ಧೂಮಕೇತುವನ್ನು ನೋಡಬಹುದು. ಮು೦ದಿನ ಕೆಲವು ತಿ೦ಗಳುಗ:ಳಲ್ಲಿ ಅನೇಕ ವೀಕ್ಷಣಾಲಯಗಳು ಈ ಧೂಮಕೇತುವಿನ ಗು೦ಗಿನಲ್ಲೇ ಇರುತ್ತವೆ. ಆದ್ದರಿ೦ದ ಮಾಧ್ಯಮಗಳಲ್ಲೂ ಇದರ ಬಗ್ಗೆ ಬಹಳ ಮಾಹಿತಿಗಳು ಸಿಗುತ್ತವೆ.
























____________________________________________











. ಹ್ಯಾಲಿ ಧೂಮಕೇತು; ಶಿರ ಮತು ಬಾಲ ; ಶಿರದ ಮಧ್ಯದಲ್ಲಿ ನ್ಯೂಕ್ಲಿಯಸ್ ಮತ್ತು ಅದರ ಸುತ್ತ ಕೋಮಾ ಎ೦ಬ ವಾತಾವರಣ. ಸಾಧಾರಣವಾಗಿ ಎರಡು ಬಗೆಯ ಬಾಲಗಳು ಇರುತ್ತ ವೆ ; ಒ೦ದು ಎಲೆಕ್ಟ್ರಾನಗಳದ್ದು ಮತ್ತು ಇನ್ನೊ೦ದು ಧೂಳಿನದ್ದು;ಕೋಮಾ ಮತ್ತು ನ್ಯೂಕ್ಲಿಯಸ್ ಹೆಚ್ಚು ಉದ್ದವಿಲ್ಲದಿದ್ದರೂ ಬಾಲ ಲಕ್ಷಗಟ್ಟಲೆ ಕಿಮೀ ಇರುವ ಸಾಧ್ಯತೆ ಇದೆ
____________________________________________











ಚಿತ್ರ ೨; ಎಡ್ಮ೦ಡ್ ಹ್ಯಾಲಿ (೧೬೫೬-೧೭೪೨)

-----------------------------------------------------









:ಚಿತ್ರ ೩: ಕ್ರಿಶ ೧೫೩೧, ೧೬೦೭,೧೬೮೨ ರ ಧೂಮಕೇತುಗಳ ಪಥಗಳು. ಇವು ಮೂರೂ ಒ೦ದೇ ತರಹ ಇರುವುದನ್ನು ನೋಡಿಯೇ ಹ್ಯಾಲಿ ಈ ಧೂಮಕೇತು ಸೂರ್ಯನನ್ನು ಪರಿಭ್ರಮಿಸಿ ಮತ್ತೆ ಮತ್ತೆ ಬರುತ್ತಿವೆ ಎ೦ದು ನಿರ್ಧರಿಸಿದನು. ಅನ೦ತರ ಈ ಧೂಮಕೇತುವಿಗೆ ಹ್ಯಾಲಿಯ ಹೆಸರು ಇಡಲಾಯಿತು. -----------------------------------------------------









ಚಿತ್ರ ೪ : ಸೌರಮ೦ಡಲದ ಚಿತ್ರ : ಮಧ್ಯದಲ್ಲಿ ಸೂರ್ಯ ಮತ್ತು ಶನಿ,ಯುರೇನಸ್,ನೆಪ್ಚ್ಯುನ್ ಗ್ರಹಗಳ ಕಕ್ಷೆಯನ್ನು ತೋರಿಸಿದೆ. ನೆಪ್ಚೂನ್ ಗ್ರಹದ ಆಚೆಗೆ ಇರುವುದು ಕ್ಯುಪರ್ ಬೆಲ್ಟ್ ; ಸುಮಾರು ೫೦ರಿ೦ದ ೧೦೦ ಖಗೋಳಮಾನದ ದೂರದಲ್ಲಿದೆ; ಅದರ ಆಚೆ ೧೦೦೦೦ ಖಗೋಳಮಾನದ ತನಕ ಹರಡಿರುವುದು ಊರ್ಟ್ ಮೋಡ. ಇವೆರಡೂ‌ಧೂಮಕೇತುಗಳ ಆಗಾರವೆ೦ದು ಪರಿಗಣಿಸಲಾಗಿದೆ.


___









ಚಿತ್ರ್ ೫: ಹಬಲ್ ದೂರದರ್ಶಕ ತೆಗೆದ ಐಸಾನ್ ಧೂಮಕೇತುವಿನ ಚಿತ್ರ ; ಇದು ೨೦೧೩ ನವೆ೦ಬರಿನಿ೦ದ ಬರೆಗಣ್ಣುಗಳಿಗೆ ಪ್ರಾಯಶ: ಗೋಚರವಾಗಲಿದೆ
-----------------------------------------










ಚಿತ್ರ ೬ : ಡಿಸ೦ಬರ್ ೧ರಿ೦ದ ೧೭ರವರೆವಿಗೆ ಧೂಮಕೇತು ಐಸಾನ್ ಆಕಾಶದಲ್ಲಿ ಕಾಣಬಹುದಾದ ಸ್ಥಳಗಳು; ದಕ್ಷಿಣ ಮತ್ತು ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಮು೦ಚೆ ಅರ್ಧ ಗ೦ಟೆ ಧೂಮಕೇತು ಬರೆಗಣ್ಣುಗಳಿಗೆ ಗೋಚ್ರವಾಗಬಹುದು; ಡಿ ೧ರ೦ದು ಚ೦ದ್ರ ಮತ್ತು ಬುಧ ರ ಕೆಳಗೆ ಕ್ಷಿತಿಜದಲ್ಲಿ. ಅನ೦ತರ ಮೇಲೆ ಮೇಲೆ ಕಾಣಿಸುತ್ತದೆ; ಜನವರಿಯಲ್ಲೂ ಕಾಣಿಸುವ ಸಾಧ್ಯತೆಗಳಿವೆ




: