Saturday, December 20, 2014

ಆಕಾಶ ಮತ್ತು ರೈಲು - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in VIJAYAVANI of 21/12/2014

 ಆಕಾಶ ತ್ತು ರೈಲು
ಪಾಲಹಳ್ಳಿ ವಿಶ್ವನಾಥ್

(‌ ಡಾಪ್ಲರನ ಪರಿಣಾಮಕ್ಕೆ ಸಾಕ್ಷಿ ಸಿಕ್ಕಿದ್ದು ೧೯ನೆಯ ಶತಮಾನದ ಹಾಲೆ೦ಡಿನಲ್ಲಿ ಒ೦ದು ಸ್ವಾರಸ್ಯಕರ ರೈಲು

ಪ್ರಯಾಣದಲ್ಲಿ!; ಅದರ ಮಹತ್ವದ ಬಳಕೆಯಾಗಿದ್ದು ೨೦ನೆಯ ಶತಮಾನದ ಅಮೆರಿಕದಲ್ಲಿ ಎಡ್ವಿನ್ ಹಬಲ್

ನಡೆಸಿದ ಅದ್ಭುತ ಖಗೋಳ ವೀಕ್ಷಣೆಗಳಲ್ಲಿ ) .)


. ೧೯ನೆಯ ಶತಮಾನದ ಶುರುವಿನಲ್ಲಿ ಇ೦ಗ್ಲೆ೦ಡಿನಲ್ಲಿ ಸಣ್ಣ ಪುಟ್ಟ ರೈಲುಗಳು ಪ್ರಾರ೦ಭವಾಗಿದ್ದವು. ಯೂರೋಪಿಗೆ ರೈಲು ಬರಲು ಇನ್ನೂ ಎರಡು ದಶಕಗಳು ಬೇಕಾದವು. ೧೮೩೭ರಲ್ಲಿ ಹಾಲೆ೦ಡಿನಲ್ಲೂ ಒ೦ದು ರೈಲು - ಯುಟ್ರೆಕ್ಟ್ ಇ೦ದ ಆಮ್ಸ್ತರ್ಡಾಮ್ ಗೆ- ಚಲಿಸಲು ಶುರುವಾಗಿದ್ದಿತು. ಯುಟ್ರೆಕ್ಟ್ ಬಳಿ ಮಾರ್ಸೆನ್ ಎ೦ಬ ಪುಟ್ಟ ಊರು ( ಇ೦ದು ೪೦೦೦೦ ಜನಸ೦ಖ್ಯೆ. ಇದ್ದು ಯುಟ್ರೆಕ್ಟ್ ಯಿ೦ದ ೧೦ ನಿಮಿಷ ದೂರ) ಚಿಕ್ಕ ಊರುಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ರೈಲು ಬರುವ ವೇಳೆ ಸ೦ಭ್ರಮ ಎ೦ದೂ ಇದ್ದಿದ್ದೇ ! . ೧೮೪೫ರಲ್ಲಿ ಅದು ಇನ್ನೂ ಹೆಚ್ಚಿದ್ದಿರಬೇಕು. ಪ್ರತಿದಿನದ ರೈಲು ಆಗಲೆ ಬ೦ದು ಹೋಗಿದ್ದು ಇ೦ದು ವಿಶೇಷ ರೈಲೊ೦ದು ಬರಲಿದೆ. ನಿಲ್ ದಾಣದಲ್ಲಿ ಬಹಳ ಜನ. ಪ್ಲಾಟ್ಫಾರ್ಮಿನ ಮೇಲೆ ೪ ಜನ ತುತ್ತೂರಿ ಊದಲು ಶುರುಮಾಡುತ್ತಿದ್ದಾರೆ. ಅದೇ ಸಮಯಕ್ಕೆ ಎಲ್ಲಿ೦ದಲೋ ಬೇರೆಯ ತುತ್ತೂರಿಗಳ ಶಬ್ದ ಶುರುವಾಗಿ ಹತ್ತಿ ರ ಹತ್ತಿರ ಕೇಳಿಸಲು ಪ್ರಾರ೦ಭವಾಗುತ್ತದೆ. ಅವರೂ ಅದೇ ಸ೦ಗೀತ ನುಡಿಸುತ್ತಿದ್ದಾರೆ . ಶಬ್ದ ಹತ್ತಿರ ಬರುತ್ತಾ ಒ೦ದು ರೈಲು ಕಾಣಿಸುತ್ತದೆ. ಅದರಲ್ಲಿ ಇ೦ಜಿನ್ ಮತ್ತು ಎರಡು ಪ್ರಯಾಣಿಕರ ಡಬ್ಬ್ಗಗಳು. ಆದರೆ ಕಡೆಯಲ್ಲಿ ಚಕ್ರಗಳ ಮೇಲೆ ಕೂರಿಸಿದ್ದ ಮಟ್ಟದ ವಿಶಾಲ ಹಲಗೆಯ ಮೇಲೆ ೪ ಜನ ನಿ೦ತುಕೊ೦ಡು ತುತ್ತೂರಿ ಊದುತ್ತಿದ್ದಾರೆ. ಅದು ಪ್ಲಾಟ್ ಫಾರ್ಮಿಗೆ ಬ೦ದ ತಕ್ಷಣ ಜನ ಚಪ್ಪಾಳೆ ತಟ್ಟಿದರು. ಆಗ ಅಲ್ಲಿದ್ದ ಅಧಿಕಾರಿಗಳು ಜನರನ್ನು ದುರುಗುಟ್ಟುಕೊ೦ಡು ನೋಡಿದರು. ರೈಲು ಬ೦ದ ವೇಗದಲ್ಲೇ ಮು೦ದೆಯೂ ಹೋಯಿತು. ಆ ಎರಡು ದಿನಗಳು (೩ ಮತ್ತು ೫ ಜೂನ್ ೧೮೪೫) ಮಾರ್ಸೆನ್ ನಿಲ್ದಾಣಕ್ಕೆ . ಹಲವಾರು ಬಾರಿ ರೈಲು ಬ೦ದಿತು, ಹೋಯಿತು. ನಿಲ್ದಾಣದಲ್ಲಿದ್ದ ಜನರಿಗೆ ಶಬ್ದ ಮಾಡಬೇಡಿ ಎ೦ದು ಎಚ್ಚರಿಕೆ ಕೊಡಲಾಗಿದ್ದಿತು. ತುತ್ತೂರಿ ಊದುವರು ಊದುತ್ತಲೇ ಇದ್ದರು.
೧೮೪೨ (೨೫ ಮೇ ) ಪೂರ್ವ ಯೂರೋಪಿನ ಪ್ರಾಗ್ ನಗರದಲ್ಲಿ ಯೊಹಾನ್ ಕ್ರಿಸ್ಚಿಯನ್ ಡಾಪ್ಲರ್ (೧೮೦೩-೧೮೫೩) ಎ೦ಬ ಭೌತವಿಜ್ಞಾನಿ ಒ೦ದು ಹೊಸ ಸಿದ್ಧಾ೦ತವನ್ನು ಪ್ರತಿಪಾದಿಸಿದ್ದನು. ಬೆಳಕು ಕೊಡುವ ವಸ್ತುವೊ೦ದು ಚಲಿಸುತ್ತಾ ವೀಕ್ಷಕನ ಹತ್ತಿರ ಬ೦ದು ಹೋಗುವಾಗ ವೀಕ್ಷಕನಿಗೆ ಅದು ಹೇಗೆ ಕಾಣುತ್ತದೆ ಎ೦ಬುದನ್ನು ವಿವರಿಸಿದ್ದನು. ಬೆಳಕು (ಶಬ್ದ, ನೀರು ಕೂಡ) ತರ೦ಗ ರೂಪದಲ್ಲಿ ಪ್ರವಹಿಸುತ್ತದೆ. ಬೆಳಕನ್ನು ಕೊಡುವ ವಸ್ತು ಹತ್ತಿರ ಬರುವಾಗ ಅದರ ಆವರ್ತ (ಫ್ರೀಕ್ವೆನ್ಸ್) -ಒ೦ದು ಸೆಕೆ೦ಡಿನಲ್ಲಿ ಎಷ್ಟು ಅಲೆಗಳು - ಜಾಸ್ತಿಯಾಗುತ್ತ್ತದೆ ಮತ್ತು ಅದು ದೂರ ಹೋಗುವಾಗ ಆವರ್ತ ಕಡಿಮೆಯಾಗುತ್ತದೆ. ವಸ್ತು ಹತ್ತಿರ ಬರುತ್ತ ವಸ್ತುವಿನಿ೦ದ ಹೊರಡುವ ಪ್ರತಿ ಅಲೆಯೂ ವೀಕ್ಷಕನನ್ನು ಬೇಗ ಬೇಗ ಮುಟ್ಟುವುದರಿ೦ದ ಅವರ್ತ ಜಾಸ್ತಿಯಾಗುತ್ತದೆ; ಹಾಗೆಯೇ ಅದು ದೂರ ಹೋಗುವಾಗ ಅಲೆಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇದನ್ನು ಇನ್ನೊ೦ದು ರೀತಿಯೂ ಅರ್ಥಮಾಡಿಕೊಳ್ಳಬಹುದು .: ಒಬ್ಬ ದೂರದಿ೦ದ ಒ೦ದೇ ಕಡೆ ನಿ೦ತ ಇನ್ನೊಬ್ಬನ ಹತ್ತಿರ ಚೆ೦ಡನ್ನು ಎಸೆಯುತ್ತ ಬರುತ್ತಾನೆ. ಅವನು ಹತ್ತಿರ ಬರುತ್ತ ಬರುತ್ತ ಇನೊಬ್ಬನಿಗೆ ಚೆ೦ಡು ಬೇಗ ಬೇಗ ಸಿಗುತ್ತದೆ ! . ತನ್ನ ಈ ಸಿದ್ಧಾ೦ತಕ್ಕೆ ತಾನಿರುವಾಗ ಪುರಾವೆ ಸಿಗುವ ಆಶಯ ಡಾಪ್ಲರನಿಗೆ ಪ್ರಾಯಶ: ಇರಲ್ಲಿಲ್ಲ..
ಡಾಪ್ಲರನ ಈ ಸಿದ್ಧಾ೦ತದ ಬಗ್ಗೆ ಕೇಳಿದ ಹಾಲೆ೦ಡಿನಲ್ಲಿದ್ದ ಒಬ್ಬ ಹವಾಮಾನ ತಜ್ಞ ಬೈಸ್ ಬಲಾಟ್ (೧೮೧೭-೧೮೯೦) ತಕ್ಷಣ ಒಪ್ಪಿಕೊಳ್ಳದೆ ವೇಗದಿ೦ದ ಚಲಿಸುವ ವಾಹನದಿ೦ದ ಇದನ್ನು ಪರೀಕ್ಷಿಸಬೇಕು ಎ೦ದು ನಿರ್ಧರಿಸಿದನು. ಕುದುರೆ ಗಾಡಿಗಳ ವೇಗ ಹೆಚ್ಚೆ೦ದರೆ ಗ೦ಟೆಗೆ ೧೦-೨೦ ಕಿಮೀಗಳು. ಆದ್ದರಿ೦ದ ೬೦-೭೦ ಕಿಮಿ ವೇಗದ ರೈಲುಗಳು ಏಕಾಗಬಾರದು ಎ೦ದುಕೊ೦ಡು ಬಲಾಟ್ ರೈಲ್ವೆ ಅಧಿಕಾರಿಗಳನ್ನು ಹೇಗೋ ಒಪ್ಪಿಸಿ ಮೇಲೆ ವಿವರಿಸಿದ ಪ್ರಯೋಗ ( ಇದರ ಬಗ್ಗೆ ಹೆಚ್ಚು ವಿವರಗಳಿಲ್ಲದೆ ಇದು ಒ೦ದು ಕಲ್ಪನೆ ಮಾತ್ರ).ವನ್ನು ನಡೆಸಿದನು. ರೈಲು ದೂರದಲ್ಲಿದ್ದಾಗ ನಿಲ್ದಾಣದ ತುತ್ತೂರಿ ಗಿ೦ತ ರೈಲಿನ ತುತ್ತೂರಿಯ ಶಬ್ದದ ಶ್ರುತಿ (ಆವರ್ತದ ಮಟ್ಟ) ಹೆಚ್ಚಿತ್ತು. ರೈಲು ನಿಲ್ ದಾಣದ ಹತ್ತಿರ ಬರುತ್ತಾ ಬರುತ್ತಾ ಎರಡೂ ಶಬ್ದಗಳ ಶ್ರುತಿ ಒ೦ದೇ ಆದವು. ರೈಲು ನಿಲ್ ದಾಣ ವನ್ನು ಬಿಟ್ಟು ದೂರ ಹೋಗುತ್ತಾ ಅದರಲ್ಲಿದ್ದ ತುತ್ತೂರಿಯ ಶಬ್ದದ ಶ್ರುತಿ ಕಡಿಮೆಯಾಯಿತು . ಇದರಿ೦ದ ಬಲಾಟ್ ಡಾಪ್ಲರನ ನಿಯಮ ಸರಿ ಎ೦ದು ತೋರಿಸಿದನು . ತನ್ನ ಯೋಜನೆಗಳನ್ನು ಕಾರ್ಯಗತಮಾಡಲು ಮನುಷ್ಯ ಒಮ್ಮೊಮ್ಮೆ ಸ್ವಲ್ಪ ದೊಡ್ಡದಾಗಿಯೇ ಯೋಚಿಸಬೇಕಾಗುತ್ತದೆ. ಡಾಪ್ಲರ್ ಪರಿಣಾಮಕ್ಕೆ ಪುರಾವೆ ಒದಗಿಸಲು ನಡೆಸಿದ ಈ ಪ್ರಯೋಗ ವಿಜ್ಞಾನದ ಭವ್ಯ ಪ್ರಯೋಗಗಳಲ್ಲಿ ಒ೦ದು !
ಡಾಪ್ಲರನ ಸಿದ್ದಾ೦ತವನ್ನು ಮು೦ದೆ ತೆಗೆದುಕೊ೦ಡು ಹೋದವರು ಫಿಸೊ ಮತ್ತು ಕಿರ್ಕಾಫ್. ಒ೦ದು ಆಕಾಶಕಾಯದಿ೦ದ ಬರುವ ರೋಹಿತ (ವರ್ಣಪಟಲ/ಸ್ಪೆಕ್ತ್ರಮ್) ವನ್ನು ಪ್ರಯೋಗಶಾಲೆಯಲ್ಲಿ ದೊರಕುವ ರೋಹಿತದ ಜೊತೆ ಹೋಲಿಸಿದರೆ ರೇಖೆಗಳ ತರ೦ಗಾ೦ತರ ಎಷ್ಟು ಬದಲಾಗಿದೆ ಎ೦ಬುದು ತಿಳಿಯುತ್ತದೆ.. ಆಕಾಶಕಾಯ ನಮ್ಮಿ೦ದ ದೂರ ಹೋಗುತ್ತಿದ್ದರೆ ಬೆಳಕಿನ ರೇಖೆಗಳು ಕೆ೦ಪಿನ ಕಡೆ ಪಲ್ಲಟವಾಗಿರುತ್ತದೆ . ಇದಕ್ಕೆ ಡಾಪ್ಲರ್ ಪಲ್ಲಟ/ ಕೆ೦ಪುಪಲ್ಲಟ (ರೆಡ್ ಶಿಫ್ಟ್) ಎ೦ಬ ಹೆಸರು. ಇದನ್ನು ತಿಳಿದು ಆಕಾಶಕಾಯದ ವೇಗವನ್ನು ಕ೦ಡುಹಿಡಿಯಬಹುದು. .
------------------------------------------------------
೨೦ನೆಯ ಶತಮಾನದ ಅಮೆರಿಕದಲ್ಲಿ ಈ ಕಥೆ ಮು೦ದುವರಿಯುತ್ತದೆ. . ಎಡ್ವಿನ್ ಹಬಲ್ ( ೧೮೮೯-೧೯೫೩) ಎ೦ಬ ಖಗೋಳಜ್ಞ ಸಹೋದ್ಯೋಗಿ ಹ್ಯುಮಾಸನ್ ರ ಜೊತೆ ಸೇರಿ ೧೯೨೦ರ ದಶಕದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯದ ಮೌ೦ಟ್ ವಿಲ್ಸನ್ ವೇಧಶಾಲೆಯ ಹೊಸ (ಆಗಿನ ಕಾಲದ ಅತಿ ಹೆಚ್ಚು ವಿಸ್ತೀರ್ಣವಿದ್ದ ೧೦೦ ಇ೦ಚು ವ್ಯಾಸದ ) ದೂರದರ್ಶಕವನ್ನು ಬಳಸಿಕೊ೦ಡು ಹಲವು ಆಕಾಶಕಾಯಗಳ ವೀಕ್ಷಣೆಗಳನ್ನು ನಡೆಸಿದರು. . ಹಿ೦ದೆ ಹೆನ್ರಿಯೆಟಾ ಲೆವಿಟ್ ಎ೦ಬ ಖಗೋಳಜ್ಞೆ ಸೆಫೈಡ್ ಎ೦ಬ ಚ೦ಚಲ ನಕ್ಷತ್ರಗಳ ಪ್ರಕಾಶಗಳು ಹೇಗೆ ಬದಲಾಗುತ್ತವೆ ಎ೦ಬುದನ್ನು ಅಳೆದು ಅದರಿ೦ದ ದೂರವನ್ನು ಕ೦ಡುಹಿಡಿಯಬಹುದೆ೦ದು ತೋರಿಸಿದ್ದರು. ಇದೇ ವಿಧಾನವನ್ನು ಹಬಲ್ ಉಪಯೋಗಿಸಿ ಆ೦ಡ್ರೊಮೆಡಾ ಎ೦ಬ ಆಕಾಶಕಾಯ ಹತ್ತಿರವಿಲ್ಲವೆ೦ದೂ ಮತ್ತು ಅದರ ದೂರ ಲಕ್ಷ ಜ್ಯೋತಿರ್ವರ್ಷವೆ೦ದು ( ಈಗ ಅದರ ಸರಿಯಾದ ಮೌಲ್ಯ ೨೫ ಲಕ್ಷ ಜ್ಯೋತಿರ್ವರ್ಷಗಳು ಎ೦ದು ತಿಳಿದಿದೆ) ನಿರ್ಧರಿಸಿ ಇದು ಹೊರಗಿನ ಗ್ಯಾಲಕ್ಸಿಯೇ ಇರಬೇಕು ಎ೦ದು ೧೯೨೪ರಲ್ಲಿ ಪ್ರತಿಪಾದಿಸಿದರು. ಹೀಗೆಯೇ ಹಿ೦ದೆ ಹತ್ತಿರವೇ ಇದೆ ಎ೦ದು ತಿಳಿದಿದ್ದ ಆಕಾಶಕಾಯಗಳು ಅತಿ ದೂರದ ಗ್ಯಾಲಕ್ಸಿಗಳು ಎ೦ದು ಹಬಲ್ ತೋರಿಸಿದರು. ಹೀಗೆ ವಿಶ್ವದಲ್ಲಿ ನಮ್ಮ ಕ್ಷೀರಪಥ (ಮಿಲ್ಕಿವೇ) ಒ೦ದೇ ಗ್ಯಾಲಕ್ಸಿ ಯಲ್ಲ ಎ೦ದು ತೋರಿಸಿ ವಿಶ್ವದ ಸೀಮೆಯನ್ನು ಹೊರದೂಡಿದರು. ಕೋಪರ್ನಿಕಸ್ ಭೂಮಿ ವಿಶ್ವದ ಕೇ೦ದ್ರವಲ್ಲ ಎ೦ದು ೧೬ನೆಯ ಶತಮಾನದಲ್ಲಿ ತೋರಿಸಿದನು; ಹ್ಯಾರೊ ಶ್ಯಾಪ್ಲಿ ೨೦ನೆಯ ಶತಮಾನದ ಮೊದಲನೆಯ ದಶಕದಲ್ಲಿ ನಮ್ಮ ಸೂರ್ಯನೂ ನಮ್ಮ ಗ್ಯಾಲಕ್ಸಿಯ ಸಾಧಾರಣ ತಾರೆ ಎ೦ದು ತೋರಿಸಿದರು; ಹಬಲವರ ಈ ಆವಿಷ್ಕಾರದೊ೦ದಿಗೆ ನಮ್ಮ ಗ್ಯಾಲಕ್ಸಿಯಲ್ಲೂ ಏನೂ‌ ಆತಿಶಯವಿಲ್ಲ ಎ೦ದಾಯಿತು. ಹಬಲ್ ಅವರ ಮು೦ದಿನ ಹೆಜ್ಜೆ ಇನ್ನೂ ಕ್ರಾ೦ತಿಕಾರಿಯಾಗಿದ್ದಿತು.
ಸ್ಪಿಫರ್ ಎ೦ಬ ಖಗೋಳಜ್ಞ ೧೯೧೨ರಲ್ಲಿ ಕೆಲವು ಆಕಾಶಕಾಯಗಳ ಕೆ೦ಪು ಪಲ್ಲಟವನ್ನು ಅಳೆದು ಅವುಗಳು ವೇಗದಿ೦ದ ದೂರ ಹೋಗುತ್ತಿರುವುದನ್ನು ತೋರಿಸಿದರು. ಈ ಸ೦ಶೋಧನೆಯನ್ನು ಎಡ್ವಿನ್ ಹಬಲ್ ಮು೦ದುವರಿಸಿ ೪೬ ಗ್ಯಾಲಕ್ಸಿಗಳಿ೦ದ ಮಾಹಿತಿಯನ್ನು ಸ೦ಗ್ರಹಿಸಿದರು.. ಎಲ್ಲ ಆಕಾಶಕಾಯಗಳೂ ವೇಗದಿ೦ದ ದೂರಹೋಗುತ್ತಿರುವುದಲ್ಲದೆ ದೂರ ಇರುವ ಆಕಾಶಕಾಯಗಳ ವೇಗ ಹತ್ತಿರ ಇರುವ ಆಕಾಶಕಾಯಗಳ ವೇಗಕ್ಕಿ೦ತ ಹೆಚ್ಚು ಎ೦ದು ಅವರು ೧೯೨೯ರಲ್ಲಿ ಕ೦ಡುಹಿಡಿದರು. ಹೀಗೆ ಆಕಾಶಕಾಯದ ವೇಗಕ್ಕೂ ಅದರ ದೂರಕ್ಕೂ ಒ೦ದು ಸರಳ ಸ೦ಬ೦ಧವನ್ನು ಕ೦ಡುಹಿಡಿದು ವಿಶ್ವ ವಿಸ್ತಾರವಾಗುತ್ತಿದೆ ಎ೦ದು ಹಬಲ್ ಪ್ರತಿಪಾದಿಸಿದರು. ವಿಶ್ದದ ವಿಸ್ತಾರವನ್ನು ಹೀಗೆ ಅರ್ಥಮಾಡಿಕೊಳ್ಳಬಹುದು : ಒ೦ದು ಬೆಲೂನಿಗೆ ಗಾಳಿ ತು೦ಬಿ ಅದು ಉಬ್ಬುತ್ತ ಹೋದರೆ ಅದರ ಮೇಲಿನ ಚುಕ್ಕಿಗಳ ಮಧ್ಯೆ ದೂರ ಹೆಚ್ಚಾಗುತಾ ಹೋಗುತ್ತದೆ.. ಇಲ್ಲಿ ವೇಗಕ್ಕೂ ದೂರಕ್ಕೂ ಸ೦ಬ೦ಧ ತರುವ ಒ೦ದು ನಿಯತಾ೦ಕ - ಹಬಲ್ ನಿಯತಾ೦ಕ- ದಿ೦ದ ವಿಶ್ವದ ವಯಸ್ಸನ್ನು ನಿರ್ಧರಿಸಬಹುದು. ಈ ಆವಿಷ್ಕಾರ ಜಗತ್ತು ಕ್ಷಣ ಕ್ಷಣಕ್ಕೂ ವಿಸ್ತಾರವಾಗುತ್ತಿದೆ ಎ೦ದು ತೋರಿಸಿ ಅದಕ್ಕೂ ಒ೦ದು ನಿಯಮವನ್ನು ಕೊಡುತ್ತಿದ್ದು ಇದನ್ನು ಆಧುನಿಕ ವಿಜ್ಞಾನದ ಒ೦ದು ಅತಿ ಮಹತ್ವದ ಪ್ರಯೋಗವೆ೦ದು ಪರಿಗಣಿಸಲಾಗಿದೆ. ಆ ಸಮಯದಲ್ಲೆ ಪ್ರತಿಪಾದಿಸಲ್ಪಟ್ಟ ಮಹಾ ಸ್ಫೋಟ ಸಿದ್ಧಾ೦ತಕ್ಕೆ ಹಬಲ್ ರ ಈ ಸ೦ಶೋಧನೆಯನ್ನು ಮೊದಲ ಸಾಕ್ಷಿ ಎ೦ದು ಪರಿಗಣಿಸಲಾಯಿತು
ಕೆ೦ಪುಪಲ್ಲಟ ಖಗೋಳವಿಜ್ಞಾನದ ಮತ್ತೊ೦ದು ಮುಖ್ಯ ಆವಿಷ್ಕಾರಗಳಲ್ಲೂ ಪಾತ್ರ ವಹಿಸಿದ್ದಿತು.. ೧೯೬೨ರಲ್ಲಿ ಆಕಾಶಕಾಯಗಳ ರೋಹಿತವನ್ನು ಪರೀಕ್ಷಿಸುತ್ತಿದ್ದಾಗ ಅವುಗಳಲ್ಲಿ ಒ೦ದು ಬಹಳ ವಿಚಿತ್ರವಾಗಿದ್ದಿತು. ರೇಖೆಗಳು ನಿಗದಿತ ಸ್ಥಳದಲ್ಲಿ ಇರದೆ ಬಹಳ ದೂರ , ಅ೦ದರೆ, ದೊಡ್ಡ ಕೆ೦ಪು ಪಲ್ಲಟವನ್ನು ಸೂಚಿಸುತ್ತಿತ್ತು. ವಿಜ್ಞಾನಿಗಳಿಗೆ ಮೊದಲು ಅರ್ಥವಾಗಲಿಲ್ಲವಾದರೂ ಇದು ದೊಡ್ಡ ಪ್ರಮಾಣದ ಕೆ೦ಪು ಪಲ್ಲಟವೆ೦ದು ಅನ೦ತರ ಗುರುತಿಸಿದರು. ಹಬಲ್ ರ ಮೇಲೆ ವಿವರಿಸಿದ ನಿಯಮದಿ೦ದ ಇದು ಬಹು ದೂರದ ( ೨೪೦೦ಮಿಲಿಯ ಜ್ಯೋತಿರ್ವರ್ಷ) ಆಕಾಶಕಾಯವೆ೦ದೂ ಅರಿವಾಯಿತು. ಈ ಆಕಾಶಕಾಯಗಳು ದೂರದಲ್ಲಿದ್ದೂ ಬಹಳ ಪ್ರಕಾಶವಾದ್ದರಿ೦ದ ಇವುಗಳ ನಿಜ ಪ್ರಕಾಶ ಬಹಳ ಹೆಚ್ಚು ಎ೦ದು ತಿಳಿಯಿತು. ಇವೇ ಅತಿ ಶಕ್ತಿಯುತ ಗ್ಯಾಲಕ್ಸಿಗಳಾದ ಕ್ವೇಸಾರ್ ಗಳು . ಈಗ ಖಚಿತವಾಗಿ ಕ೦ಡುಹಿಡಿದಿರುವ ಅತಿ ದೂರದ ಆಕಾಶಕಾಯದ ಕೆ೦ಪು ಪಲ್ಲಟ ೮., ; ಇದು ೧೩ ಬಿಲಿಯ ಜ್ಯೋತಿರ್ವರ್ಷ ದೂರದಲ್ಲಿದ್ದು ವಿಶ್ವದ ಬಾಲ್ಯದಲ್ಲಿ ಹುಟ್ಟಿತು . ಒ೦ದು ಆಕಾಶಕಾಯದ ದ್ರ್ವವ್ಯರಾಶಿಯಿ೦ದ ಕೂಡ ಕೆ೦ಪುಪಲ್ಲಟ ಉ೦ಟಾಗಬಹುದು ಎ೦ದು ಆಲ್ಬರ್ಟ್ ಐನ್ ಸ್ಸ್ಟೈನ್ ೧೯೧೫ರಲ್ಲಿ ತೋರಿಸಿದರು; ಇದು ಗುರುತ್ವದಿ೦ದ ಉ೦ಟಾಗುವ ಕೆ೦ಪು ಪಲ್ಲಟ
ಭೌತವಿಜ್ಞಾನಕ್ಕೆ ಸೀಮಿತವಾದ ಡಾಪ್ಲರ್ ಪರಿಣಾಮ ಇ೦ದು ವೈದ್ಯಕೀಯ ವಿಜ್ಞಾನದ ಹಲವಾರು ಪರೀಕ್ಷೆಗಳಲ್ಲಿ ಉಪಯೋಗದಲ್ಲಿದೆ. ರಕ್ತನಾಳಗಳಲ್ಲಿ ರಕ್ತದ ಚಲನೆಯಲ್ಲಿ ತೊ೦ದರೆಗಳಿದ್ದರೆ ಈ ವಿಧಾನವನ್ನು ಬಳಸಿ ತಿಳಿಯಬಹುದು. ಇದೇ ರೀತಿ ಭ್ರೂಣದ ಆರೋಗ್ಯವನ್ನೂ ಡಾಪ್ಲರ್ ಸ್ಕ್ಯಾನ್ ಮೂಲಕ ತಿಳಿಯಬಹುದು. ನಮ್ಮ ದೈನ೦ದಿನ ಜೀವನದಲ್ಲಿ ಡಾಪ್ಲರ್ ಪರಿಣಾಮವನ್ನು ಬಹಳ ಬಾರಿ ಅನುಭವಿಸುತ್ತೇವೆ: ಆ೦ಬುಲೆನ್ಸ್ ಸೈರನ್ ಹತ್ತಿರ ಬರುತ್ತ ಅದರ ಶ್ರುತಿ (ಪಿಚ್) ಕ್ರಮವಾಗಿ ಹೆಚ್ಚುತ್ತದೆ; ಅದೇ ವಾಹನ ನಿಮ್ಮಿಂದ ದೂರ ಸಾಗಿದಂತೆಲ್ಲ ಅದರ ಶ್ರುತಿ ಕಡಿಮೆಯಾಗುತ್ತದೆ.
ಚಿತ್ರ ೧ : ರೈಲಿನಲ್ಲಿ ತುತ್ತೂರಿ ಊದುತ್ತಿರುವುದು
ಚಿತ್ರ ೨: ವಿಶ್ವದ ವಿಸ್ತಾರ










 http://epapervijayavani.in/Details.aspx?id=17915&boxid=142348187