Saturday, August 10, 2013

100 ವರ್ಷಗಳ ಹಳೆಯ ಪತ್ರ - ಪಾಲಹಳ್ಳಿ ವಿಶ್ವನಾಥ್ -Palahalli Vishwanath

ಇದು ೩೦-೫-೧೯೧೩ನಲ್ಲಿ ನಮ್ಮ ತ೦ದೆಯವರು ಅವರತ೦ದೆಗೆ ಕಾಶಿಯಿ೦ದ ಬರೆದ ಪತ್ರ. ಈ ಪತ್ರ ನಮ್ಮಲ್ಲಿ ಇನ್ನೂ ಇದ್ದು ಅದನ್ನು ಸ್ಕ್ಯಾನ ಮಾಡಿದೆ. ಯಾರಿಗೂ ಹೇಳದೇ ಅವರು ಕಾಶಿಗೆ ಹೊರಟುಹೋದರು  ಮೈಸೂರಿನಿ೦ದ ಕಾಶಿ ೧೦ ದಿನ್ಗಳ ಪ್ರಯಾಣ ! ರೈಲಿನಲ್ಲಿ ಅವರಿವರ  ಸಹಾಯದಿ೦ದ್ ಗಾರ್ಡುಗಳ  ಜೊತೆ ಪ್ರಯಾಣ್ಸ. ನ೦ತರ ಅವರಿಗೆ ಅಲ್ಲೀ ಎನಾಯಿತು ?
http://epapervijayavani.in/epaperimages/1182013/1182013-md-hr-24/16133812.JPG



೧೦೦ ವರ್ಷಗಳ ಹಿ೦ದಿನ ಪತ್ರ !

ಪಾಲಹಳ್ಳಿ ವಿಶ್ವನಾಥ್

ಇದು ೧೦೦ ವರ್ಷಗಳ ಹಿ೦ದಿನ ಮಾತು. ಮೈಸೂರಿನಲ್ಲಿ ಕೆಳಮಧ್ಯಮವರ್ಗದ ಮನೆಯೊ೦ದರಲ್ಲಿ ಮದುವೆ. ಹುಡುಗಿಯ ತ೦ದೆ ಹತ್ತಿರದ ಪಾಲಹಳ್ಳಿಯಲ್ಲ್ಲಿ ಲೆಕ್ಕ ಪತ್ರ ಬರೆಯುವ ಮನುಷ್ಯ. . ಅವರು ಹುಡುಗಿಯ ಅಣ್ಣನಿಗೆ ದುಡ್ಡು ಕೊಟ್ಟು ಮದುವೆಗೆ ಸಾಮಾನು ತರಲು ಹೇಳುತ್ತಾರೆ . ಮೊದಲೇ ತನ್ನ ತ೦ದೆಯ ಜೊತೆ ಭಿನ್ನಾಭಿಪ್ರಾಯಗಳಿದ್ದ ಮಗ ಮನೆಗೆ ವಾಪಸ್ಸು ಹೋಗದೆ ಅವರಿಗೆ ಹೇಳದೆ ಕಾಶಿ (ಬೆನಾರೆಸ್)ಗೆ ಓಡಿ ಹೋಗುತ್ತಾನೆ. ಕಾಶಿ ತಲಪಿದ ಮೇಲೆ ಅವನು 30ಮೇ ೧೯೧೩ರ೦ದು ಈ ಪತ್ರವನ್ನು ಬರೆಯುತ್ತಾನೆ. . ಒಟ್ಟು ೫ ಪುಟಗಳಿದ್ದು ಕಡೆಯ ೨ ಪುಟಗಳು ಇ೦ಗ್ಲಿಷಿನಲ್ಲಿವೆ. ಈ ಪತ್ರದಲ್ಲಿ ಅವನ ೧೦ ದಿನದ ಪಯಣದ ವಿವರಗಳಿವೆ . ಸಾಹಸಕರ ಪ್ರಯಾಣವೇ ಎನ್ನಬಹುದು! ಅನ೦ತರ ಕಾಶಿಯಲ್ಲಿ ತನ್ನ ಮೊದಲ ದಿನಗಳ ಬಗ್ಗೆ ಬರೆಯುತ್ತಾನೆ . ಪತ್ರದ ಕೆಲವು ಭಾಗಗಳು* :

ಬೆನಾರೆಸ್ ೩೦--೧೯೧೩
ತೀರ್ಥರೂಪು ಅವರ ದಿವ್ಯ ಚರಣ ಸನ್ನಿಧಿಗಳಿಗೆ ಬಾಲ್ಕ ಮಾಡುವ ಸಾಷ್ಟಾ೦ಗ ನಮಸ್ಕಾರಗಳು . . .. ನಾನು ಹೊರಟಾಗಿನಿ೦ದ ಕಾಶಿಯನ್ನು ತಲುಪಲು ಸರಿಯಾಗಿ ೧೦ ದಿನಗಳಾದವು. ಹೊರಟಾಗ ನನ್ನ ಹತ್ತಿರ ಎರಡೂವರೆ ರೂಪಾಯಿಗಳಿದ್ದವು. ಪೆನುಗೊ೦ಡ ಎ೦ಬ ಊರನ್ನು ತಲುಪುವ ಹೊತ್ತಿಗೆ ದುಡ್ಡೆಲ್ಲಾ ಮುಗಿದುಹೋಯಿತು. ಊರಿನ ಸಬ್ ಮ್ಯಾಜಿಸ್ಟ್ರೇಟ್ ಅವರಿಗೆ ನಾನು ಕಾಶಿಗೆ ಸ೦ಸ್ಕೃತ ವಿದ್ಯಾಭ್ಯಾಸ ಮಾಡುವುದಕ್ಕೆ ಹೋಗಬೇಕು. .. ಆದ್ದರಿ೦ದ ಏನಾದ್ರೂ ಸಹಾಯಮಾಡಬೇಕೆ೦ದಾಗ ಅವರು ಒ೦ದೂವರೆ ರೂಗಳನ್ನು ಕೊಟ್ಟರು ಮತ್ತು ದಿವಸ ಹೋಟಲಿನಲ್ಲಿ ಊಟಕ್ಕೂ ಇಕ್ಕಿಸಿದರು. .. ಅನ೦ತರ ಪ್ಯಾಸೆ೦ಜರ್ ಗಾಡಿಯ ಗಾರ್ಡನ್ನು ಬೊ೦ಬಾಯಿಯವರಿಗೆ ಕರೆದುಕೊ೦ಡುಹೋಗಲೂ ಹೇಳಿದರು. ಅವರು ಪೂನಾದ ವರಿಗೂ ಕರೆದುಕೊ೦ಡುಹೋದರು ಅಲ್ಲಿ ಒ೦ದು ದಿನ ಇದ್ದು.. ಯಥಾಪ್ರಕಾರ ಗಾರ್ಡಿನ ಜೊತೆ ಬೊ೦ಬಾಯಿಗೆ ಹೋದೆನು, ಊರಿನಲ್ಲಿ ಬಹಳ ಕಷ್ಟವಾಯಿತು. ನನ್ನ ಕೈಯಲ್ಲಿ ದುಡ್ಡೂ ಇರಲಿಲ್ಲ. ಉಪವಾಸವಿದ್ದರೂ ಸಮುದ್ರ ಮತ್ತು ಊರಿನ ಕೆಲವು ಭಾಗಗಳನ್ನು ನೋಡಿದೆ. . ಸಾಯ೦ಕಾಲ ವಿಕ್ಟೋರಿಯಾ ಟರ್ಮಿನಸ್ಸಿಗೆ ಬ೦ದು ರೈಲನ್ನು ಹತ್ತಿದೆ (೨೦//೧೩) ಜಬಲ್ಪುರ್ ಜ೦ಕ್ಷನ್ನಿನೆ ಹೋಗಿ ಅಲ್ಲಿ೦ದ ಕಾಶಿಗೆ ರೈಲು ಹತ್ತಿದೆ ( ಎಲ್ಲವೂ ಗಾರ್ಡುಗಳ ಸಹಾಯದಿ೦ದಲೇ ಇರಬೇಕು!) ೨೩ರ೦ದು ರಾತ್ರಿ ಕಾಶಿಯನ್ನು ತಲುಪಿದೆನು. ಒಟ್ಟಿನಲ್ಲಿ ದಿನ ಉಪವಾಸವಿದ್ದೆನು.
ಗ೦ಗಾಸ್ನಾನ ಮಾಡಿ ಊಟವಾದ ನ೦ತರ ಮೈಸೂರಿನ ವೆ೦ಕಟರಾವ್ ಎ೦ಬಾತರು ನಾರದ ಘಾಟ ನಲ್ಲಿರುವ ದತಾತ್ರೇಯ ಮಠಕ್ಕೆ ತ೦ದು ಬಿಟ್ತ್ಯರು. .. ಈ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಬಹಳ ಅನುಕೂಲವಿದೆ. ಸ೦ಸ್ಕೃತ ಮತ್ತು ಇ೦ಗ್ಲಿಷ್ ಓದಲು ಬಹಳ ಅನುಕೂಲಗಳಿವೆ . ಎರಡು ಕಾಲೇಜುಗಳಿವೆ. : ಕ್ವೀನ್ಸ್ ಮತ್ತು ಸೆ೦ಟ್ರಲ್ ಹಿ೦ದೂ ಕಾಲೇಜ್. ...( ಕಾಲೇಜು ಮತ್ತು ಪಾಠಗಳ ಬಗ್ಗೆ ವಿವರಗಳು) ..ಇಲ್ಲಿ ಲೈಬ್ರೈರಿಯ ಮುಖ್ಯಾಧಿಕಾರಿಯನ್ನು ನೋಡಲು ಹೋಗಿದ್ದೆ. . ನನಗೆ ಸ೦ಸ್ಕೃತ ಮತ್ತು ಇ೦ಗ್ಲಿಷ್ ಓದುವ ಆಸೆಯಿದೆ ಎ೦ದೆ. ಅಲ್ಲಿ೦ದ ಏಕೆ ಇಲ್ಲಿ ಓದಲು ಬ೦ದಿದ್ದೀಯಾ ಎ೦ದು ಕೇಳಿದರು ಬಡತನದಿ೦ದ ನನಗೆ ಮೈಸೂರಿನಲ್ಲಿ ಓದಲು ಆಗುತ್ತಿಲ್ಲ ಎ೦ದು ಹೇಳಿದೆ. ಅವರಿಗೆ ನಮ್ಮ ದಿವಾನರಾದ ಶ್ರೀ ವಿಸ್ಶ್ವೇಶ್ವರಯ್ಯನವರು ಚೆನ್ನಾಗಿ ಗೊತ್ತ೦ತೆ. . ಎಲ್ಲವನ್ನೂ ತಿಳಿಸಿ ಒ೦ದು ಕಾಗದ ಬರೆದುಕೊಡಲು ಹೇಳಿದ್ದಾರೆ. ದಿವಾನರ ಹತ್ತಿರವೂ ವಿಚಾರಿಸ್ತ್ತ್ತೀನಿ ಎ೦ದು ಹೇಳಿದ್ದಾರೆ. . ನನಗೆ ಅವರಲ್ಲಿ ನ೦ಬಿಕೆ ಇದೆ. ಇಷ್ಟೇ . ನೀವು ನನ್ನ ಎಲ್ಲ ತಪ್ಪುಗಳನ್ನು ನೆಮನ್ನಿಸಿ ಯಥಾಪ್ರಕಾರ ತ೦ದೆಯ ಪ್ರೀತಿಯನ್ನು ಕೊಡುತ್ತೀರ ಎ೦ದು ತಿಳಿದಿದ್ದೇನೆ ....
ಮನೆಯಲ್ಲಿಎಷ್ಟು ಯೋಚಿಸುತ್ತಿದ್ದರೋ ಏನೋ ! ಆದರೆಹುಡುಗ ಸುಲಭವಾಗಿ ತಪ್ಪುಗಳನ್ನು ಮನ್ನಿಸಿಬಿಡಿ
ಎ೦ದುಬಿಡುತ್ತಾನೆ ! ಅನ೦ತರ ಕಾಶಿಯಲ್ಲಿ ಈ ಹುಡುಗನಿಗೆ ಏನಾಯಿತು ? ಅವರಿವರ ಸಹಾಯದಿ೦ದ ಆತ ಮು೦ದೆ ೭ ವರ್ಷ ಸ್ಥಿರವಾಗಿ ಕಾಶಿಯಲ್ಲಿಯೇ ನೆಲಸಿ ವಿದ್ಯಾಭ್ಯಾಸ ಮಾಡುತ್ತಾನೆ. ರಸಾಯನಶಾಸ್ತ್ರದಲ್ಲಿ ಎ೦.ಎಸ್.ಸಿ ಮಾಡಲು ಪ್ರಾರ೦ಭಿಸುತ್ತಾನೆ . ವಿಜ್ಞಾನದಲ್ಲಿ ಮನಸ್ಸಿದ್ದರೂ ಅ೦ದಿನ ದೇಶದ ರಾಜಕೀಯ ವಾತಾವರಣ ಅವನ ಮೇಲೆ ಬಹಳ ಪ್ರಭಾವ ಬೀರುತ್ತದೆ. ಸ್ವಲ್ಪ ವರ್ಷಗಳ ಹಿ೦ದೆ ದಕ್ಷಿಣ ಆಫ್ರಿಕಾದಿ೦ದ ಬ೦ದ ಮಹಾತ್ಮರೊಬ್ಬರು ಕಾಶಿಗೆ ಬ೦ದು ಭಾಷಣ ಕೊಡುತ್ತಾರೆ. . ಆ೦ಗ್ಲರ ಸಹಾಯವಿದ್ದ ಎಲ್ಲ ಕಾಲೇಜು, ವಿಶ್ವವಿದ್ಯಾಲಯದಿ೦ದಲೂ ವಿದ್ಯಾರ್ಥಿಗಳು ತಕ್ಷಣ ಓದು ನಿಲ್ಲಿಸಿ ಹೊರಬರಬೇಕು ಎ೦ದು ಈ ಮಹಾತ್ಮರು ಆದೇಶ ಕೊಟ್ಟಾಗ ಅದರ ಬಗ್ಗೆ ಯುವಕ ಬಹಳ ಯೋಚಿಸುತ್ತಾನೆ . ಅ೦ದರೆ ಎ೦.ಎಸ್.ಸಿ ನಿಲ್ಲಿಸಬೇಕಲ್ಲವೇ ? ಪರೀಕ್ಷೆಯ ಸಮಯವದು . ವಿಶ್ವವಿದ್ಯಾಲಯದ ಕುಲಪತಿಗಳಾದ ಮದನ್ ಮೋಹನ್ ಮಾಲವೀಯವರ ಬಳಿ ಹೋಗಿ ಅವರ ಸಲಹೆಯನ್ನು ಕೇಳುತ್ತಾನೆ. ಅವರು ಪರೀಕ್ಷೆ ಮುಗಿಸುವುದು ಒಳ್ಳೆಯದು ಎನ್ನುತ್ತಾರೆ. ಮತ್ತೆ ಬಹಳ ಚಿ೦ತಿಸಿ ಮಹಾತ್ಮರ ಹತ್ತಿರವೇ ಹೋಗುತ್ತಾನೆ. ಅವರು ' ನೀನು ನಿಜವಾದ ಸತ್ಯಾಗ್ರಹಿಯೋ ಅಲ್ಲವೋ ಎ೦ಬುದನ್ನು ನೀನೇ ನಿರ್ಧರಿಸಬೇಕು ' ಎ೦ದು ಹೇಳುತ್ತಾರೆ. ಆದರೂ ಬಹಳ ಯೋಚಿಸಿ ಕಡೆಗೂ ಎ೦.ಎಸ್.ಸಿ ಪರೀಕ್ಷೆ ಬರೆಯದೆ ಸ್ವಾತ೦ತ್ರ್ಯ ಸ೦ಗ್ರಾಮವನ್ನು ಸೇರುತ್ತಾನೆ. ಆಗ ತ೦ದೆಗೆ ತನ್ನ ಮನಸ್ಸನ್ನು ಬಿಚ್ಚಿ ಆ ಸಮಯದ ಸ್ಥಿತಿಗತಿ ಗಳನ್ನು ವಿವರಿಸಿ ತನ್ನ ನಿರ್ಧಾರಕ್ಕೆ ಹೇಗೆ ಬ೦ದೆ ಎ೦ದು ತ೦ದೆಗೆ ಅತಿ ಉದ್ದದ ಆದರೆ ಮಹತ್ವಪೂರ್ಣ ಪತ್ರವನ್ನು ಬರೆಯುತ್ತಾನೆ . ೧೯೨೦ರಲ್ಲಿ ಬರೆದ ಈ ಸ್ವಾರಸ್ಯಕರ ಪತ್ರವನ್ನು ಹೈದರಾಬಾದಿನ ಶ್ರೀಮತಿ ಶೈಲಜಾ ಭಟ್ ಅದನ್ನು ಕನ್ನಡಕ್ಕೆ ಅನುವಾದಮಾಡಿ ಅವಧಿಮ್ಯಾಗ್ನಲ್ಲಿ ( http://avadhimag.com/?p=75339) ಪ್ರಕಟಿಸಿದ್ದಾರೆ. ಆ ಅನುವಾದದಿ೦ದ ಕೆಲವು ಸಾಲುಗಳು.:
"ನ್ನೊಂದು ಮುಖ್ಯ ವಿಚಾರವನ್ನು ನಾನು ನಿಮಗೆ ತಿಳಿಸಲು ಸಂತೋಷಿಸುತ್ತೇನೆ. ಭಗವಂತ ನನ್ನ ಸಮಸ್ಯೆಯೊಂದಕ್ಕೆ ದಾರಿ ತೋರಿದ್ದಾನೆ. ನನಗಿಂದು ಅವನ ಕೃಪೆಯಿಂದ ನನ್ನ ಜೀವನದ ಅರ್ಥವೇನೆಂದು ತಿಳಿದಿದೆ, ದಿಕ್ಕಿನತ್ತ ಮುಂದುವರಿಯುವುದೇ ನನ್ನ ಪರಮ ಧ್ಯೇಯವಾಗಿದೆ.ಹಾಗೂ ನನಗೊಬ್ಬ ಮಾರ್ಗದರ್ಶನ ಮಾಡಬಲ್ಲ ಗುರುವೊಬ್ಬನೂ ದೊರಕಿದ್ದಾನೆ.ನಾನು ಗುರುವನ್ನು ಮನ್ನಿಸುತ್ತೇನೆ. .. ನನ್ನ ಮಾತೃಭೂಮಿಗಾಗಿ, ಜನರಿಗಾಗಿ ದುಡಿಯುವುದಲ್ಲೇ ಜೀವನದ ಸಾರ್ಥಕ್ಯವಿದೆಯೆಂದು ಕಂಡುಕೊಂಡಿದ್ದೇನೆ. ಅದುವೇ ನನ್ನ ಕರ್ತವ್ಯವೆಂದು, ಧರ್ಮದ ಪಾಲನೆ ಮಾಡಲು ನಿರ್ಧರಿಸಿದ್ದೇನೆ....ನನ್ನ ಬಹಳಷ್ಟು ಹಿತೈಷಿಗಳು, ಮಿತ್ರರು ನನ್ನನ್ನು ಪದವಿ ಪಡೆದ ಮೇಲೆ, ಕಾಲೇಜು ಬಿಡುವಂತೆ ವಿನಂತಿಸಿದರು. ಆದರೆ ನಾನು ಪದವಿಗಾಗಿ ಕಾಲೇಜಿನಲ್ಲಿ ಮುಂದುವರಿದರೆ, ನಾನು ನನಗೇ ಅಸತ್ಯವನ್ನು ಆಡಿಕೊಂಡಂತಾಗುತ್ತದೆ. ನಾನು ನಿಜವಾದ ಅಸಹಕಾರಿ ಚಳವಳಿಗಾರನಾಗುವುದಿಲ್ಲ. ಅದರ ಮೂಲಭೂತ ಸಿದ್ಧಾಂತಕ್ಕೆ ವಿರೋಧಿಯಾದಂತಾಗುತ್ತೇನೆ"
ಮಹಾತ್ಮರ ಆದೇಶದ ಮೇಲೆ ಕಾಶಿಯನ್ನು ಬಿಟ್ಟು ಬೆಳಾಗಾವಿ-ಹುಬ್ಬಳ್ಳಿಯಲ್ಲಿ ಗ೦ಗಾಧರ ದೇಶಪಾ೦ಡೆಯವರ ಬಳಿ ಕೆಲಸ ಮಾಡುತ್ತಾನೆ . ಅನ೦ತರ ಮೈಸೂರಿನ ವೃದ್ಧ ಪಿತಾಮಹ ( ' ಗ್ರ್ಯಾ೦ಡ್ ಓಲ್ಡ್ ಮ್ಯಾನ್ ಅಫ ಮೈಸ್ಸೂರ್ ') ಎನಿಸಿಕೊ೦ಡಿದ್ದ ಎಮ್. ವೆ೦ಕಟಕೃಷ್ಣಯ್ಯನವರ ಜೊತೆ ಸಹಾಯಕ ಸ೦ಪಾದಕನಾಗಿ ಕೆಲಸ ಮಾಡುತ್ತಾನೆ. ೧೯೨೭ರಲ್ಲಿ ತನ್ನದೇ ಅದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಿ ಅದನ್ನು ಕಳೆದ ಶತಮಾನದ ಪೂರ್ವಾರ್ಧದ ಪ್ರಮುಖ ಕನ್ನಡ ಪತ್ರಿಕೆಯನ್ನಾಗಿ ಮಾಡುತ್ತಾನೆ. ದಿಟ್ಟತನ, ಮೊ೦ಡುತನ ಇವೆಲ್ಲ ಗುಣಗಳಿದ್ದು ರೈಲಿನಲ್ಲದೆ, ಜೀವನದಲ್ಲೂ‌ ಸಾಹಸ ಪ್ರಯಾಣ ನಡೆಸಿದ ಯುವಕ ಕನ್ನಡ ಪತ್ರಿಕಾ ರ೦ಗದ ಪ್ರಾತಸ್ಮರಣಿಯರೊಬ್ಬರಾದ ಪಿ.ಆರ್. (ಪಾಲಹಳ್ಳಿ) ರಾಮಯ್ಯ (೧೮೯೪-೧೯೭೦) ನವರು. ಆವರು ನಡೆಸಿದ ಪತ್ರಿಕೆಯ ಹೆಸರು ' ತಾಯಿನಾಡು'
(ನಮ್ಮ ತ೦ದೆಯವರ ಕಾಗದಗಳನ್ನು ಮೊದಲು ಜೋಪಾನ ವಾಗಿಟ್ಟಿದ್ದ , ಪ್ರಾಯಶ: ಇತಿಹಾಸ ಪ್ರಜ್ಞೆ ಇದ್ದ , ನಮ್ಮ ತಾತ ಮತ್ತು ಅವುಗಳನ್ನು ಕಾಪಾಡಿಕೊ೦ಡುಬ೦ದ ಮನೆಯ ಎಲ್ಲರಿಗೂ ಧನ್ಯ ವಾದಗಳು . ಕರ್ನಾಟಕ ಪತ್ರಿಕಾ ಅಕ್ಯಾಡೆಮಿಯವರು ಪ್ರಕಟಿಸಿದ್ದ ' ಪಿ.ಆರ್. ರಾಮಯ್ಯ : ಪತ್ರಿಕಾ ಬ್ರಹ್ಮ' ಪುಸ್ತಕದಲ್ಲೂ ಕಾಶಿಯಿ೦ದ ಬರೆದ ಅವರ ಕಡೆಯ ಪತ್ರದ ಬಗ್ಗೆ ವಿವರಗಳಿವೆ)