Saturday, August 22, 2015

ಆಲ್ಬರ್ಟ್ ಐನ್ ಸ್ಟೈನರ ಮಡದಿಯರು - ಪಾಲಹಳ್ಳಿ ವಿಶ್ವನಾಥ್ - Palahalli Vishwanth

this appeared in Sep 2015 edition  of TUSHARA  , kannada monthly



ಆಲ್ಬರ್ಟ್ ಐನ್ ಸ್ಟೈನರ ಮಡದಿಯರು

ಪಾಲಹಳ್ಳಿ ವಿಶ್ವನಾಥ್

(೬೦ ವರ್ಷಗಳ ಹಿಂದೆ ೧೯೫೫ರ ಏಪ್ರಿಲ್ ನಲ್ಲಿ ತೀರಿಹೋದ ಶತಮಾನದ ಮಹಾ ಮೆಧಾವಿ ಆಲ್ಬರ್ಟ್ ಐನ್ ಸ್ಟೈನ್ ಅನೇಕ ವಿಷಯಗಳಲ್ಲಿ ಆದರ್ಶ ವ್ಯಕ್ತಿಯಾಗಿದ್ದ ರೂ ತನ್ನ ಕುಟುಂಬದವರ ಬಗ್ಗೆ ಸೌಜನ್ಯದಿಂದ ವರ್ತಿಸಲಿಲ್ಲ ..)

೨೦ನೆಯ ಶತಮಾನದ ಆದಿಯಲ್ಲಿ ಸರಕಾರೀ ಕಚೇರಿಯ ಗುಮಾಸ್ತನೊಬ್ಬ ತನ್ನ ಕ್ರಾ೦ತಿಕಾರಿ ಸಿದ್ಧಾ೦ತಗಳೊ೦ದಿಗೆ ಭೌತವಿಜ್ಞಾನವನ್ನು ಅಲುಗಾಡಿಸಿದನು. ಅವನ ಪ್ರತಿಭೆಯಿ೦ದಾಗಿ ಭೌತವಿಜ್ಞಾನದ ಸಾಮ್ರಾಟನೆನಿಸಿಕೊ೦ಡಿದ್ದ ಐಸಾಕ್ ನ್ಯೂಟನ್ ತನ್ನ ಸಿ೦ಹಾಸನದಲ್ಲಿ ಅವನಿಗೂ ಜಾಗಮಾಡಿಕೊಡಬೇಕಾಯಿತು. ಆ ಮೇರು ವಿಜ್ಞಾನಿಯೇ ಆಲ್ಬರ್ಟ್ ಐನ್ಸ್ ಟೈನ್ . ೨೦ನೆಯ ಶತಮಾನದ ವಿಜ್ಞಾನದ ಮೇಲಲ್ಲದೆ ಅ೦ದಿನ ಪ್ರಪ೦ಚದ ರಾಜಕೀಯ, ಸಾಮಾಜಿಕ ಮತ್ತು ಬೌದ್ಧಿಕ ವಿದ್ಯಮಾನಗಳ ಮೇಲೆ ಪ್ರಭಾವ ಬೀರಿದರು. ಅಮೆರಿಕದ ಪ್ರತಿಷ್ಟಿತ ನಿಯತಕಾಲಿಕ ಟೈಮ್ ಪತ್ರಿಕೆ ನಡೆಸಿದ ಅಭಿಪ್ರಾಯ ಸ೦ಗ್ರಹಣೆಯ ಪ್ರಕಾರ ೨೦ನೆಯ ಶತಮಾನದ ಮಹಾವ್ಯಕ್ತಿಗಳ ಪಟ್ಟಿಯಲ್ಲಿ ಇವರು ಮತ್ತು ಗಾ೦ಧೀಜಿ ಎಲ್ಲರಿಗಿ೦ತ ಮೇಲಿದ್ದರು. ಆಲ್ಬರ್ಟ್ ಐನ್ಸ್ಟ ಟೈನರ ಕೌಟು೦ಬಿಕ ಜೀವನದ ಬಗ್ಗೆ ಇದು ಒ೦ದು ಪುಟ್ಟ ನೋಟ.
೧೪ ಮಾರ್ಚ್ ೧೮೭೯ರಲ್ಲಿ ಜರ್ಮನಿಯ ಉಲ್ಮ್ ನಗರದ ಮಧ್ಯ ದರ್ಜೆಯ ಯೆಹೂದಿ ವರ್ತಕ ಕುಟು೦ಬದಲ್ಲಿ ಆಲ್ಬರ್ಟ್ ಐನ್ ಸ್ಟೈನರ ಜನ್ಮವಾಯಿತು . ವರ್ಷಗಳಾದ ತನಕ ಮಾತೇ ಆಡದಿದ್ದ ಆಲ್ಬರ್ಟ್ ಬೆಳೆಯುತ್ತ ಯಾರ ಸ೦ಗವನ್ನೂ ಅಪೇಕ್ಷಿಸದೆ ಒಬ್ಬನೇ ಕಾಲ ಕಳೆಯುತ್ತಿದ್ದ. ಶಾಲೆಯಲ್ಲಿ ಅಧಿಕ ಸ೦ಖ್ಯೆಯಲ್ಲಿದ್ದ ಕ್ರೈಸ್ತ ಹುಡುಗರ ಮಧ್ಯೆ ಯೆಹೂದಿಯಾಗಿದ್ದು ತಾನು ಪರಕೀಯ ಎನ್ನುವ ಭಾವ್ನನೆ ಬ೦ದಿತು . ಶಾಲೆಯಲ್ಲೂ ಅನೇಕ ಸಹಪಾಠಿಗಳ ಮತ್ತು ಅಧ್ಯಾಪಕರ ನಡೆವಳಿಕೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. " ಜನ ಎ೦ದರೆ ನನಗೆ ಅಷ್ಟ್ಟಕ್ಕಷ್ಟೆ !" ಎ೦ದು ಮು೦ದೆ ಹೇಳಿದ್ದರು .
೧೮೯೬ರಲ್ಲಿ ಆಲ್ಬರ್ಟ್ ಐನ್ ಸ್ಟೈನ್ ರಿಗೆ ೧೭ ವರ್ಷಗಳಾಗಿದ್ದವು. ಆಗ ಅವರ ಜೀವನದಲ್ಲಿ ಮುಖ್ಯವಾದದ್ದು ಭೌತವಿಜ್ಞಾನ ಮತ್ತು ಸ೦ಗೀತ. ಜರ್ಮನಿಯಿ೦ದ ಸ್ವಿಟ್ಜರ್ಲೆ೦ಡಿನ ಝುರಿಕ್ ಗೆ ಬ೦ದು ಇಟೀಹೆಚ್ ವಿದ್ಯಾಲಯದಲ್ಲಿ ವಿಜ್ಞಾನದ ಅಭ್ಯಾಸವನ್ನು ಪ್ರಾರಂಭಿಸಿದರು. ಆಲ್ಬರ್ಟ್ ಗೆ ಅಲ್ಲಿಯ ಶಿಕ್ಷಣದ ಬಗ್ಗೆ ಬಹಳ ಅಸಮಾಧಾನವಾಗಿದ್ದು ಅದನ್ನು ಖ೦ಡಿಸುತ್ತಲೂ ಇದ್ದರು. ಅಲ್ಲಿಯ ಪ್ರಾಧ್ಯಾಪಕರೊಬ್ಬರು " ನೀನು ಬಹಳ ಬುಧ್ಧಿವ೦ತ; ಆದರೆ ಏನನ್ನೂ ಕೇಳಿಸಿಕೊಳ್ಳಲು ತಯಾರಿಲ್ಲ " ಎ೦ದು ಛೀಮಾರಿ ಹಾಕಿದ್ದರು. ವಯಸ್ಸಿನಲ್ಲಿ ಆಲ್ಬರ್ಟ್ ಸ್ವಲ್ಪ ಉದ್ಧಟತನದಿ೦ದಲೇ ವರ್ತಿಸಿರಬಹುದು. ಚಿಕ್ಕ ವಯಸ್ಸು,, ಬುದ್ಧಿ ವ೦ತ ಹುಡುಗ, ತನಗೆ ಎಲ್ಲ ಗೊತ್ತಿದೆ ಎನ್ನುವ ಜ೦ಭವೂ ಇದ್ದಿರಬಹುದು.

ಐನ್ಸ್ಟೈನರಿಗೆ ಬಟ್ಟೆಬರೆಗಳಲ್ಲಿ ಮೊದಲಿ೦ದಲೂ ಹೆಚ್ಚು ಆಸಕ್ತಿ ಇರದೆ ನಮಗೆ ಪರಿಚಿತ ಚಿತ್ರಗಳಲ್ಲಿ ಕಾಣಿಸುವ ದೊಗಳೆ ಬಟ್ಟೆಯ, ಕೂದಲು ಸರಿಯಾಗಿ ಬಾಚಿಕೊಳ್ಳದ ವಿಜ್ಞಾನಿ ಆಗಲೇ ರೂಪಗೊಳ್ಳುತ್ತಿದ್ದರೊ ಏನೊ ! ಆದರೂ ಅವನನ್ನು ಗು೦ಗುರುಕೂದಲಿನ ಹೊಳೆಯುವ ಕಣ್ಣುಗಳ ಸು೦ದರ ಹುಡುಗ ಎ೦ದು ಬಣ್ಣಿಸುವವರೂ ಇದ್ದರು.
ಆ ಸು೦ದರ ಹುಡುಗನಿಗೆ ಮಾರು ಹೋದವಳು ಮಿಲೇವಾ ಮರಿಕ್ ಎ೦ಬ ಸರ್ಬಿಯ ದೇಶದ ಯುವತಿ; ಸಿರಿವ೦ತರ ಮನೆತನ ದಿ೦ದ ಬ೦ದ ಆಕೆ ಅವನಿಗಿಂತ ೪ ವರ್ಷ ದೊಡ್ಡವರಾಗಿದ್ದು ಅವರ ತ೦ದೆ ಸರ್ಕಾರೀ ಕೆಲಸದಲ್ಲಿದ್ದರು. ಅಲ್ಲಿಗೆ ಬರುವ ಮೊದಲು ಸರ್ಬಿಯದ ಶಾಲೆಗಳಲ್ಲಿ ಮಿಲೆವಾ ಮೊದಲ ದರ್ಜೆಯ ವಿದ್ಯಾರ್ಥಿಯಾಗಿದ್ದರು. ಝ್ಯುರಿಕ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ ನ೦ತರ ವೈದ್ಯಶಾಸ್ತ್ರ ಓದುವ ಆಸಕ್ತಿ ಇದ್ದಿತು. ಆದರೆ ಮಿಲೇವಾ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಅಧ್ಯಯನಗಳಿಗೆ ಬದಲಾಯಿಸಿಕೊ೦ಡರು. ಅದೇ ಸಮಯದಲ್ಲಿ ಆಕೆ ಆಲ್ಬರ್ಟ್ನರನ್ನು ಸಂಧಿಸಿದರು. ಜೊತೆಯೆ ಓದುತ್ತಿದ್ದು ವಿಜ್ಞಾನದಲ್ಲೂ ಬಹಳ ಅಸಕ್ತಿ ಇದ್ದು ಒಳ್ಳೆಯ ಸ್ನೇಹಿತರೂ ಆದರು. ಐನ್ ಸ್ಟೈನ್ ಮತ್ತು ಮಿಲೇವಾರ ಪತ್ರವ್ಯವಹಾರಗಳಲ್ಲಿ ಮೊದಲು ಬಹಳ ಔಪಚಾರಿಕತೆ ಇದ್ದು ಭೌತಶಾಸ್ತ್ರದ ಬಗ್ಗೆ ಹೆಚ್ಚು ಪ್ರಸ್ತಾಪಗಳಿರುತ್ತಿದ್ದವು. ಹಾಗೆಯೇ ನಿಧಾನವಾಗಿ ಸ್ನೇಹ ಪ್ರೇಮದತ್ತ ತಿರುಗಿತು. ಮಿಲೇವಾರ ಭೌತವಿಜ್ಞಾನದ ಆಸಕ್ತಿ ಐನ್ ಸ್ಟೈನರನ್ನು ಆಕೆಯ ಕಡೆ ಸೆಳೆಯಿತು . ಅವರ ಸಹಪಾಠಿಗಳಿಗೆ ಮಿಲೆವಾರ ರೂಪದಲ್ಲಾಗಲೀ ವ್ಯಕ್ತಿತ್ವದಲ್ಲಾಗಲೀ ವಿಶೇಷವೇನೂ ಕಾಣಲಿಲ್ಲವಾದ್ದರಿಂದ ಆ ಸುಂದರ ಯುವಕ ಈಕೆಯಲ್ಲಿ ಏನು ಕಂಡನೋ ಎಂದು ಅವರು ಮಾತಾಡಿಕೊಳ್ಳುತ್ತಿದ್ದೂ ಉಂಟು. ಆದರೆ ಮಿಲೇವಾರಲ್ಲಿ ಉತ್ಕಟತೆ ಮತ್ತು ಆಳವಾಗಿ ಯೋಚಿಸುವ ಮನೋಭಾವವಿದ್ದು ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ಇದ್ದಿತು. ಅಂತೂ ಮುಂದೆ ಶತಮಾನ ಪುರುಷನಾಗುವ ಮಹಾ ವಿಜ್ಞಾನಿ ಈಕೆಯನ್ನು ಬಹಳ ಇಷ್ಟಪಟ್ಟಿದ್ದರು !

ಆಲ್ಬರ್ಟರ ಕುಟು೦ಬಕ್ಕೆ ಇದು ಇಷ್ಟವಿರಲಿಲ್ಲ. ಕಾಲೇಜಿನಿಂದ ಮಗ ಮನೆಗೆ ಹೋದಾಗ ನಾನು ಅವಳನ್ನು ಮದುವೆಯಾಗುತ್ತೇನೆ ಎಂದು ಅವನು ಹೇಳಿದ್ದನ್ನು ಕೇಳಿ ತಾಯಿ ಪೌಲೀನ್ ಅಳುತ್ತ " ಅವಳು ನಿನ್ನ ತರಹ ಒಂದು ಪುಸ್ತಕ ಆಷ್ಟೆ ! ನಿನಗೆ ಬೇಕಾಗಿರುವುದು ಒಬ್ಬ ಹೆಂಡತಿ" ಎ೦ದರು. ಮಿಲೇವಾ ದೊಡ್ದವರೆ೦ದೂ ಮತ್ತು ಅವರ ಸಂಸ್ಕೃತಿ ಬೇರೆ ಎಂಬ ವಿರೋಧಗಳೂ ಬ೦ದವು. ತಂದೆತಾಯಿಯ ವಿರೋಧ ಆಲ್ಬರ್ಟನ ಮನಸ್ಸನ್ನು ಇನ್ನೂ ಗಟ್ಟಿ ಮಾಡಿತು. ಕಡೆಗೆ ಆಲ್ಬರ್ಟ್ ಗೆ ಬರ್ನ್ ನಗರದ ಹಕ್ಕು ಪತ್ರ ಕಛೇರಿಯಲ್ಲಿ (ಪೇಟೆಂಟ್ ಆಫೀಸ್) ಕೆಲಸ ಸಿಗಬಹುದೆಂದು ತಿಳಿದನಂತರ ಅವರಿಬ್ಬರೂ ಅಲ್ಪ್ಸ್ ಪರ್ವತದ ಖ್ಯಾತ ಸುಂದರ ಸರೋವರ ಕೋಮೋನಲ್ಲಿ ಸ೦ಧಿಸಿ ಸ್ವಲ್ಪ ಸಮಯ ಕಳೆದಾಗ ಮಿಲೆವಾ ಗರ್ಭಿಣಿಯಾದರು. ಆಲ್ಬರ್ಟರ ಮನೆಯವರಿಗೆ ವಿಷಯ ತಿಳಿಯಲೇ ಇಲ್ಲ. ಜನವರಿ ೧೯೦೨ರಲ್ಲಿ ಮಿಲೇವಾರ ಊರಿನಲ್ಲಿ ಅವರಿಬ್ಬರಿಗೆ ಒ೦ದು ಹೆಣ್ಣು ಮಗು ಹುಟ್ಟಿ ಅದನ್ನು ಯಾರಿಗೋ ದತ್ತು ಕೊಟ್ಟುಬಿಟ್ಟರು. ಆಲ್ಬರ್ಟ್ ತಮ್ಮ ಮಗಳನ್ನು ನೋಡಲೇ ಇಲ್ಲ: ೧೯೦೨ರಲ್ಲಿ ಆಲ್ಬರ್ಟನ ತಂದೆ ಅವರ ಮದುವೆಗೆ ಒಪ್ಪಿ.ಗೆ ಕೊಟ್ಟ ನಂತರ ೧೯೦೩ ಜನವರಿಯಲ್ಲಿ ಇಬ್ಬರೂ ಮದುವೆಯಾಗಿ ಮುಂದಿನ ವರ್ಷ ಮೊದಲ ಮಗ ಹಾನ್ಸ್ ಹುಟ್ಟಿದ
೧೯೦೫ರಲ್ಲಿ ಆಲ್ಬರ್ಟ್ ಐನ್ ಸ್ಟೈನ್ ನಾಲ್ಕು ಸಂಶೋಧನಾ ಲೇಖನಗಳಲ್ಲಿ ಅತಿ ಕ್ರಾ೦ತಿಕಾರಿ ಪರಿಕಲ್ಪನೆಗಳನ್ನು ಪ್ರಸ್ತಾವಿಸಿದ್ದರು. ವಿಜ್ಞಾನ ಪ್ರಪಂಚವನ್ನೆ ಅಲುಗಾಡಿಸಿದ ಸಿದ್ಧಾ೦ತಗಳಿಗೆ ( ಉದಾ: ವಿಶೇಷ ಸಾಪೇಕ್ಷ ಸಿದ್ಧಾ೦ತ, ಫೋಟಾನ್ ಪರಿಕಲ್ಪನೆ,) ಮಿಲೇವಾ ಎಷ್ಟು ಕಾರಣರಿದ್ದರೋ ತಿಳಿಯದು. ಆದರೂ ಅವುಗಳ ಬಗ್ಗೆ ಮಿಲೇವಾರ ಬಳಿ ಆಗಾಗ್ಗೆ ಚರ್ಚಿಸುತ್ತಿದ್ದು ಅವರು ಪತಿಗೆ ಸ್ಫೂರ್ತಿಯಾಗಿದ್ದಿರಬೇಕು. ಸ೦ಶೋಧನೆಗಳಿ೦ದ ಆಲ್ಬರ್ಟ್ ಐನ್ ಸ್ಟೈನ್ ವಿಜ್ಞಾನ ಜಗತ್ತಿನಲ್ಲಿ ಮನೆಮಾತಾಗಲು ಪ್ರಾರಂಭಿಸಿದರು. ೧೯೦೯ರಲ್ಲಿ ಅವರಿಗೆ ಝ್ಯುರಿಕ್ ನಲ್ಲಿಯೇ ಪ್ರಾಧ್ಯಾಪಕ ಹುದ್ದೆ ಸಿಕ್ಕಿ, ಒಂದು ವರ್ಷದ ನಂತರ ಅವರ ಎರಡನೆಯ ಮಗ ಎಡ್ವರ್ಡ ಹುಟ್ಟಿದ.ಮುಂದಿನ ಎರಡು ವರ್ಷಗಳು ಐನ್ ಸ್ಟೈನ್ ಸಂತೋಷದಿಂದ ಕೆಲಸ ಮಾಡಿಕೊಂಡಿದ್ದರು. ಮಕ್ಕಳ ಜೊತೆ ಆಟವಾಡುತ್ತಾ ಕುಟುಂಬವನ್ನು ಚೆನ್ನಾಗಿಯೂ ನೋಡಿ ಕೊಳ್ಳುತ್ತಿದ್ದರು.
೧೯೧೧ರಲ್ಲಿ ಐನ್ ಸ್ಟೈನ್ ಕುಟು೦ಬ ಸಮೇತ ಬೊಹೀಮಿಯದ ಪ್ರಾಗ್ ನಗರಕ್ಕೆ ಹೋಗಿ ಅಲ್ಲಿಯ ವಿದ್ಯಾಲಯದಲ್ಲಿ ಕೆಲಸ ಮಾಡಿದರು. ಅವರ ಎರಡನೆಯ ಮಹಾ ಸಿದ್ಧಾ೦ತ ಸಮಯದಲ್ಲಿ ರೂಪುಗೊಳ್ಳುತ್ತಿತ್ತು. ಪ್ರಾಗ್ನಲ್ಲಿ ಅವರಿಗೆ ಇಬ್ಬರು ಸಾಹಿತಿಗಳ - ಫ್ರಾನ್ಸ್ ಕಾಫ್ಕ ಮತ್ತು ಮ್ಯಾಕ್ಸ್ ಬಾಡ್- ಪರಿಚಯವಾಯಿತು . ಬಾಡ್ ತನ್ನ ಕಾದ೦ಬರಿಯೊ೦ದರಲ್ಲಿ ಐನ್ ಸ್ಟೈನರನ್ನು ಪರೋಕ್ಷವಾಗಿ ವರ್ಣಿಸಿದ್ದನು :" ಅವನಿಗೆ ಹೃದಯವಿಲ್ಲ, ಪ್ರೀತಿ ಗೀತಿ ಅರ್ಥವಾಗುತ್ತಿರಲಿಲ್ಲ !" ಇಂತಹ ಗಂಡನೊಂದಿಗೆ ಬಾಳುತ್ತಾ ಮಿಲೇವಾರಲ್ಲಿ ಮೊದಲಿಂದಲೂ ಇದ್ದ ಮನೋ ಖಿನ್ನತೆ ಹೆಚ್ಚಾಯಿತು. ಪ್ರಾಗ್ ನಗರಕ್ಕೆ ಬರಲು ಮಿಲೇವಾ ಮೊದಲೇ ಇಷ್ಟಪಟ್ಟಿರಲಿಲ್ಲ; ಅಲ್ಲಿಗೆ ಬ೦ದ ಮೇಲ೦ತೂ ಅಲ್ಲಿಯ ಜನಜೀವನವೂ ಅವರಿಗೆ ಇಷ್ಟವಾಗಲಿಲ್ಲ. ಗಂಡ ಹೆಚ್ಚು ಖ್ಯಾತಿ ಗಳಿಸುತ್ತಾ ಹೆಂಡತಿಗೆ ತಾನೂ ವಿಜ್ಞಾನಿಯಾಗುವ ಕನಸು ಒಡೆದುಹೋಗಿದ್ದು ಅವರ ದಾಂಪತ್ಯ ಜೀವನ ದಲ್ಲಿ ಅಸಮಾಧಾನ ಹೊಗೆಯಾಡಲು ಶುರುವಾಯಿತು. ಪತ್ನಿಯ ಅಸಮಾಧಾನಕ್ಕೆ ಉತ್ತರವಾಗಿಯೇನೋ "ರಾತ್ರಿ ಕೆಲಸ ಮಾಡಿ ಬ೦ದ ನ೦ತರ ಕುಳಿತು ಲೋಕಾ ಭಿರಾಮ ಮಾತಾಡಲು ಅಗುವುದಿಲ್ಲ" ಎ೦ದಿದ್ದರು. ಇದನ್ನೆ ಮಿಲೇವಾ ಸ್ನೇಹಿತೆಯೊಬ್ಬರಿಗೆ ಬರೆದ ಪತ್ರದಲ್ಲಿ ನೊಡಬಹುದು : " ನನ್ನ ಗಂಡನಿಗೆ ವಿಜ್ಞಾನ ಬಹಳ ಮುಖ್ಯ, ಕುಟು೦ಬದ ಪರಿವೆ ಇದ್ದರೆ ಅದು ನಂತರ ಮಾತ್ರ '. ಅ೦ತೂ ಹಿಂದೆ ಆಗಾಗ್ಗೆ ಮಾತ್ರ ಇದ್ದ ವಿರಸ ಈಗ ಇನ್ನೂ ಹೆಚ್ಚಾಯಿತು. ಐನ್ ಸ್ಟೈನ್ ವಿಜ್ಞಾನದಲ್ಲಿ ಮುಳುಗಿದ್ದು ಐನ್ಸ್ ಟೈನ್ ಕುಟು೦ಬ ಮತ್ತೆ ಝ್ಯುರಿಕ್ ಗೆ ವಾಪಸ್ಸು ಬಂದರೂ ಮನೆಯಲ್ಲಿನ ವಾತಾವರಣ ಸುಧಾರಿಸಲಿಲ್ಲ.
೧೯೧೨ ರಲ್ಲಿ ಐನ್ಸ್ಟಟೈನ್ ವಿಜ್ಞಾನದ ಸ೦ಬ೦ಧವಾಗಿ ಬರ್ಲಿನ್ ನಗರಕ್ಕೆ ಬೇಟಿಯಿತ್ತಾಗ ತಮ್ಮ ಹತ್ತಿರದ ಸ೦ಬ೦ಧಿ (ಕಸಿನ್) ಎಲ್ಸಾರನ್ನು ಭೇಟಿ ಮಾಡಿದರು. ಚಿಕ್ಕ೦ದಿನಲ್ಲಿ ಇಬ್ಬರೂ ಒಟ್ಟಿಗೆ ಆಡುತ್ತಿದ್ದು ಹಳೆಯ ದಿನಗಳನ್ನು ಜ್ಞಾಪಿಸ್ಕೊ೦ಡರು. ಬೆಳೆಯುತ್ತಾ ಮ್ಯುನಿಕ್ ನಲ್ಲಿ ಇದ್ದಾಗ ಆಗಾಗೆ ಸ೦ಧಿಸುತ್ತಿದ್ದರು. ಎಲ್ಸಾ ಅವರ ೧೮ನೆಯ ವರ್ಷದಲ್ಲಿ ಲೊವೆನ್ಥಾಲ್ ಎ೦ಬುವವರನ್ನು ಮದುವೆಯಾಗಿದ್ದು ೧೯೦೮ರಲ್ಲಿ ಅವರಿ೦ದ ವಿಚ್ಛೇದನ ತೆಗೆದುಕೊ೦ಡು ಅನ೦ತರ ಅವರ ಇಬ್ಬರು ಹೆಣ್ಣುಮಕ್ಕಳೊ೦ದಿಗೆ ಬರ್ಲಿನ್ ನಲ್ಲಿ ವಾಸವಾಗಿದ್ದರು. ಭೇಟಿಯೊ೦ದಿಗೆ ಐನ್ಸ್ ಟೈನರ ಹೊಸ ಪ್ರೇಮ ಪ್ರಕರಣ ಶುರುವಾ ಗಿ ವಿಷಯ ನಿಧಾನವಾಗಿ ಮಿಲೆವಾರಿಗೂ ತಿಳಿಯಿತು. ಐನ್ಸ್ಟೈನರ ಕೀರ್ತಿ ಹಬ್ಬುತ್ತ ಅವರಿಗೆ ಹಲವಾರು ವಿಶ್ವವಿದ್ಯಾಲಯಗಳಿ೦ದ ಕೆಲಸ ಮಾಡಲು ಅಹ್ವಾನಗಳು ಬರುತ್ತಿದ್ದವು. ೧೯೧೩ ಜುಲೈ ನಲ್ಲಿ ಜರ್ಮನಿಯ ಖ್ಯಾತ ವಿಜ್ಞಾನಿ ಮ್ಯಾಕ್ಸ್ ಪ್ಲಾ೦ಕ್ ಝ್ಯುರಿಕ್ ನಗರಕ್ಕೆ ಬ೦ದು ಬರ್ಲಿನ್ ವಿಶ್ವವಿದ್ಯಾಲಯವನ್ನು ಸೇರಲು ಆಮ೦ತ್ರಣ ಕೊಟ್ಟರು. ಅವರ ಆಹ್ವಾನವನ್ನು ಒಪ್ಪಿಕೊ೦ಡು ೧೯೧೪ರಲ್ಲಿ ಐನ್ ಸ್ಟೈನ್ ಬರ್ಲಿನ್ ನಗರಕ್ಕೆ ಬ೦ದ ಮೇಲೆ ಮಿಲೇವಾ ಮತ್ತು ಮಕ್ಕಳು ಕೆಲವು ತಿ೦ಗಳು ಅವರ ಜೊತೆ ಅಲ್ಲಿದ್ದರು. ಸಮಯದಲ್ಲಿ ಮಿಲೇವಾ ಅಲ್ಲಿ ಇರಲು ಐನ್ ಸ್ಟೈನ್ ವಿಚಿತ್ರ ಮತ್ತು ಕ್ರೂರ ಶರತ್ತುಗಳನ್ನು ವಿಧಿಸಿದರು.. ಶರತ್ತುಗಳನ್ನು ಹಾಕಿದ್ದೇ ಒ೦ದು ದೊಡ್ಡತಪ್ಪು; ಅದಲ್ಲದೆ ಸ್ವಲ್ಪವೂ ಆತ್ಮೀಯತೆ ಇಲ್ಲದೆ ಅವುಗಳಲ್ಲಿ ಪತ್ನಿ ಯನ್ನು ಮನೆಯ ಪರಿಚಾರಿಕೆಗಿ೦ತ ಕಡೆಯಾಗಿ ನೋಡಿದ್ದರು. ಗಂಡನ ಇಂತಹ ನಡೆವಳಿಕೆಯಿ೦ದ ಮಿಲೆವಾ ಮತ್ತು ಮಕ್ಕಳು ಝ್ಯುರಿಕ್ ಗೆ ವಾಪಸ್ಸು ಹೋಗಿದ್ದರಲ್ಲ್ಲಿ ಹೆಚ್ಚೇನಿಲ್ಲ !ಆಗ ರೈಲ್ವೆ ನಿಲ್ ದಾಣಕ್ಕೆ ಹೋದ ಐನ್ ಸ್ಟೈನ್ " .ನಾನು ಚಿಕ್ಕ ಹುಡುಗನ ತರಹ ಅಳುತ್ತಿದ್ದೆ" ಎ೦ದು ಹೇಳಿದ್ದರು. . ನಿಧಾನವಾಗಿ ಇದು ಸರಿಪಡಿಸಲಾಗದ ಸ೦ಬ೦ಧ ಎ೦ದು ಮಿಲೇವಾರಿಗೆ ಅರಿವಾಗಿರಬೇಕು. ಅ೦ತೂ ೧೯೧೯ ಫೆಬ್ರವರಿಯಲ್ಲಿ ಅವರಿಗೆ ವಿಚ್ಛೇದನ ಸಿಕ್ಕಿತು . ೧೯೧೫ರಿ೦ದ ಮಿಲೆವಾ ಮತ್ತು ಮಕ್ಕಳಿಗೆ ಹಣ ಕೊಡುತ್ತಿದ್ದು ೧೯೨೨ರಲ್ಲಿ ನೊಬೆಲ್ ಪ್ರಶಸ್ತಿ ಬಂದ ನಂತರ ಅದರಲ್ಲಿ ದೊಡ್ಡ ಮೊತ್ತವನ್ನೂ ಅವರಿಗೆ ಕೊಟ್ಟರು ( ಐನ್ಸ್ಟೈನರಿಗೆ ಎಷ್ಟು ಆತ್ಮ ವಿಶ್ವಾಸವಿತ್ತೆ೦ದರೆ ಪ್ರಶಸ್ತಿ ಬರುವುದಕ್ಕೆ ಬಹಳ ಮು೦ಚೆಯೆ ಅದರ ಧನವನ್ನು ಮಿಲೆವಾಗೆ ಕೊಡುತ್ತೇನೆ ಎ೦ದು ಹೇಳಿದ್ದರು) . ಮುಂದಿನ ಎರಡು ದಶಕಗಳು ಮಿಲೇವಾ ಅನಾರೋಗ್ಯದಲ್ಲೇ ಇದ್ದು ಝ್ಯುರಿಕ್ ನಲ್ಲಿ ೧೯೪೮ರಲ್ಲಿ ಮೃತರಾದರು.
ಐನ್ಸ್ತೈನ್ ಬರ್ಲಿನ್ ನಲ್ಲಿಯೇ ಇದ್ದಿದ್ದರಿ೦ದ ಎಲ್ಸಾ ಮತ್ತು ಅವರ ಸಂಬಂಧ ಬೆಳೆಯುತ್ತ ಹೋಯಿತು. ಇದೇ ಸಮಯದಲ್ಲಿ ಅವರ ಎರಡನೆಯ ಮಹಾಸಿದ್ಧಾಂತದ ತಯಾರಿ ನಡೆಯುತ್ತಿತ್ತು. ತಮ್ಮ ವೈಜ್ಞಾನಿಕ ಸಂಶೋಧನೆಗಳ ತೀವ್ರತೆ ಜಾಸ್ತಿಯಾಗುತ್ತಿದ್ದಾಗ ಎಲ್ಸಾರ ಸ೦ಗದಲ್ಲಿ ಒಂದು ರೀತಿಯ ಶಾ೦ತತೆ ಅವರನ್ನು ಆವರಿಸುತ್ತಿತ್ತು. ಎಲ್ಸಾರಿಗೆ ತಮ್ಮ ಸಂಶೋಧನೆಗಳ ಬಗ್ಗೆ " ನನ್ನ ಮನಸ್ಸಿನಲ್ಲಿ ಮಹತ್ವ ವಿಷಯಗಳು ತು೦ಬಿಕೊ೦ಡಿವೆ. ಸದಾ ಕಾಲ ನಾನು ವಿ ಷಯಗಳ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಇವು ಭೌತವಿಜ್ಞಾನದಲ್ಲಿ ಹಿ೦ದೆ ಯಾರೂ ಮಾಡದ೦ತಹ ಆವಿಷ್ಕಾರಗಳು " ಎಂದು ಬರೆದಿದ್ದರು. ಎಲ್ಸಾ ಜೊತೆ ಇರುವುದು ಅವರಿಗೆ ಇಷ್ಟವಾದರೂ ಮದುವೆಯಾಗುವುದು ಅವರ ಮನಸ್ಸಿನಲ್ಲಿ ಇರಲಿಲ್ಲ : " ನಾನು ಬಂಧನಕ್ಕೆ ಸಿಕ್ಕಿಹಾಕಿಕೊಳ್ಳಬಾರದು; ನನ್ನ ಜೀವನ ಸಂಕುಚಿತವಾಗುತ್ತದೆ; ಅದಲ್ಲದೆ ನನ್ನ ಮಕ್ಕಳಿಗೆ ಇದು ಒಳ್ಳೆಯದಲ್ಲ. ಎಲ್ಸಾಳ ಕಣ್ಣೀರಿಗೆ ನಾನು ಬಗ್ಗಬಾರದು. ನಾನು ಹೀಗೆಯೇ ಇರಬೇಕು" .ಆದರೆ ಎಲ್ಸಾರಿಗೆ ವಿವಾಹ ಬೇಕಿದ್ದಿತು. ೧೯೧೭ರ ಪ್ರಾರಂಭದಲ್ಲಿ ಅವರ ಅರೋಗ್ಯ ಕೆಟ್ಟು ಹೋದಾಗ ಎಲ್ಸಾ ಅವರನ್ನು ಚೆನ್ನಾಗಿ ನೋಡಿಕೊಂಡರು. ೧೯೧೯ರಲ್ಲಿ ಮಿಲೇವಾರಿಂದ ವಿಛ್ಚೇದನ ಪಡೆದುನ೦ತರ ಆಲ್ಬರ್ಟ್ ಎಲ್ಸಾ ರನ್ನು ಮದುವೆಯಾದರು.
" ನನ್ನ ಮೊದಲ ಹೆಂಡತಿಗೆ ವಿಜ್ಞಾನ ಗೊತ್ತಿತ್ತು.ಆದರೆ ಸದ್ಯ ಎರಡನೆಯವಳಿಗೆ ಅದು ಗೊತ್ತಿಲ್ಲ" ಎಂದು ಅಲ್ಬರ್ಟ್ ಕೆಲವು ಬಾರಿ ಹೇಳಿದ್ದರು. ವಿಜ್ಞಾನ ಗೊತ್ತು ಎನ್ನುವುದು ಮಿಲೆವಾರ ಆಕರ್ಷಣೆಯಾಗಿತ್ತು; ಅದು ಗೊತ್ತಿರಲಿಲ್ಲ ಎನ್ನುವುದು ಎಲ್ಸಾರ ಆಕರ್ಷಣೆಯಾಗಿದ್ದಿತು ! ೧೯೧೯ರಲ್ಲಿ ಅವರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾ೦ತಕ್ಕೆ ಪುರಾವೆ ಸಿಕ್ಕ ನಂತರ ಐನ್ ಸ್ಟೈನರ ಖ್ಯಾತಿ ಪ್ರಪ೦ಚದಲ್ಲೆಲ್ಲಾ ಹರಡಿತು. ಅದಲ್ಲದೆ ವಿಶ್ವಶಾ೦ತಿ, ಯೆಹೂದಿ ಪ್ರಶ್ನೆ ಇತ್ಯಾದಿ ವಿಷಯಗಳ ಬಗ್ಗೆ ಐನ್ ಸ್ಟೈನ್ ಧೈರ್ಯವಾಗಿ ಮಾತನಾಡತೊಡಗಿ ಅವರ ವರ್ಚಸ್ಸು ಬಹಳ ಹೆಚ್ಚಾಗತೊಡಗಿತು. ತಮ್ಮ ಖ್ಯಾತಿಯಿ೦ದಾಗಿ ಐನ್ ಸ್ಟೈನ್ ಅನೇಕ ದೇಶಗಳಿಗೆ ಭೇಟಿಕೊಡುತ್ತಿದ್ದರು. ಎಲ್ಸಾ ಯಾವಾಗಲೂ ಇವರ ಜೊತೆ ಪ್ರಯಾಣಮಾಡುತ್ತಿದ್ದರು. ೧೯೩೧ರಲ್ಲಿ ಅವರನ್ನು ನೋಡಿದ ಖ್ಯಾತ ನಟ ಚಾರ್ಲಿ ಚಾಪಲಿನ್ " ಜೀವನದಲ್ಲಿ ಅತ್ಯ೦ತ ಉತ್ಸಾಹವಿರುವ ಮಹಿಳೆ; ಖ್ಯಾತ ವ್ಯಕ್ತಿಯ ಪತ್ನಿಯಾಗಿರುವುದು ಅವರಿಗೆಇಷ್ಟವಾಗಿತ್ತು ಮತ್ತು ಅದನ್ನು ತೋರಿಸಲು ಹಿ೦ಜರಿಯುತ್ತಿರಲಿಲ್ಲ" ಎ೦ದಿದ್ದರು. ಇ೦ತಹ ವಿಶ್ವ ವಿಖ್ಯಾತ ವ್ಯಕ್ತಿಯನ್ನು ನೊಡಿಕೊಳ್ಳುವುದು ಸುಲಭದ ಕೆಲಸವೇನಾಗಿರಲಿಲ್ಲ . ಹಾಗೂ ಎಲ್ಸಾ ಒಳ್ಳೆಯ ಗೃಹಿಣಿಯಾಗಿ , ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಗಂಡನಿಗೆ ತಲೆನೋವು ಬರುವಂತಹ ವಿಷಯಗಳನ್ನೆಲ್ಲಾ ನೋಡಿಕೊಂಡು ಅವರ ಕೆಲಸದಲ್ಲಿ ನಿರತರಾಗಿರಲು ಅವಕಾಶ ಮಾಡಿಕೊಟ್ಟಿದ್ದರು. ಐನ್ಸ್ಟಟೈನ್ ಹಲವಾರು ಪ್ರೇಮ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಎಲ್ಸಾ ಇದನ್ನು ಸಹಿಸಿಕೊ೦ಡಿದ್ದರೂ ಅವರಿಗೆ ಅದು ಇಷ್ಜ್ಟವಿರಲಿಲ್ಲ. " ನಾವು ಅವರನ್ನು ಒಟ್ಟಾಗಿ ನೋಡಬೇಕಾಗುತ್ತದೆ. ಅವರು ಬಹಳ ಉದಾತ್ತ ವ್ಯಕ್ತಿ. ಆದರೆ ಅವರ ಜೊತೆಯ ಜೀವನ ಕೆಲವು ಬಾರಿ ಸುಸ್ತುಮಾಡಿಬಿಡುತ್ತದೆ " ಎಂದು ಹೇಳಿದ್ದರು. ಮತ್ತೊಮ್ಮೆ " ಮೇಧಾವಿಯ ಪತ್ನಿಯದ್ದು ಸುಲಭ ಜೀವನವಲ್ಲ. ನನ್ನ ಜೀವನ ನನ್ನದಾಗಿರಲಿಲ್ಲ.ದಿವಸದ ಪ್ರತಿ ನಿಮಿಷವೂ ನನ್ನ ಪತಿಗೆ ಕೊಟ್ಟೆ". ೧೯೩೩ರಲ್ಲಿ ಅಮೆರಿಕಕ್ಕೆ ವಲಸೆ ಹೋದ ನಂತರ ಎಲ್ಸಾ ವರ್ಷಗಳು ಬದುಕಿದ್ದರು. ಹಸನ್ಮುಖಿ ಮಹಿಳೆ ೧೯೩೬ರಲ್ಲಿ ತೀರಿಹೋದರು. ಅವರ ಕಡೆಯ ದಿನಗಳಲ್ಲಿ ಆಲ್ಬರ್ಟ್ ಸದಾ ಅವರೊ೦ದಿಗೇ ಇದ್ದರ೦ತೆ. ಅದಾದ ನಂತರ ಅವರ ಕಡೆಯ ಎರಡು ದಶಕಗಳನ್ನು ಆಲ್ಬರ್ಟ್ ಐನ್ ಸ್ಟೈನ್ ಏಕಾಂಗಿಯಾಗಿಯೆ ಕಳೆದರು. ಬಹಳ ಆತ್ಮೀಯರಾಗಿದ್ದ ತಂಗಿ ಮಾಯಾ ಕೆಲವು ವರ್ಷಗಳು ಅವರ ಜೊತೆ ಇದ್ದು ನಿಧನರಾದರು. . ಅನ೦ತರ ಮಲಮಗಳು ಮಾರ್ಗೊ ಮತ್ತು ಕಾರ್ಯದರ್ಶಿ ಹೆಲೆನ್ ಅವರ ಜೀವನದಲ್ಲಿ ಏರುಪೇರುಗಳಿಲ್ಲದಂತೆ ನೋಡಿಕೊಂಡರು. ೧೯೫೫ರ ಏಪ್ರಿಲ್ ತಿ೦ಗಳಲ್ಲಿ ಪ್ರಿನ್ಸ್ ಟನ್ ನಗರದಲ್ಲಿ ಐನ್ ಸ್ಟೈನ್ ನಿಧನರಾದರು
ಮಿಲೆವಾರಿ೦ದ ಆಲ್ಬರ್ಟ್ ಐನ್ಸ್ಟೈನರಿಗೆ ಬ್ಬರು ಮಕ್ಕಳಿದ್ದರು : () ೧೯೦೪ರಲ್ಲಿ ಹುಟ್ಟಿದ ಹಾನ್ಸ್ ಆಲ್ಬರ್ಟ್ . ಚಿಕ್ಕ೦ದಿನಲ್ಲಿ ತ೦ದೆಯನ್ನು ಇಷ್ಟ ಪಡೆದಿದ್ದರೂ ಅನಂತರ ತ೦ದೆಯ ಜೊತೆ ಒಳ್ಳೆಯ ಸ೦ಬ೦ಧವನ್ನಿಟ್ಟುಕೊ೦ಡಿದ್ದನು. ಬರ್ಕಲಿ ವಿದ್ಯಾಲಯದಲ್ಲಿ ಇ೦ಜನಿಯರಿಂಗ್ ಪ್ರಾಧ್ಯಾಪಕನಾಗಿ ಅಮೆರಿಕದಲ್ಲಿದ್ದು ತ೦ದೆ ಸತ್ತ ೧೮ ವರ್ಷಗಳ ನಂತರ ನಿಧನವಾದರು () ೧೯೧೦ರಲ್ಲಿ ಹುಟ್ಟಿದ ಎಡ್ವರ್ಡ .ಮೊದಲು ಅಪಾರ ಪ್ರತಿಭೆ ತೋರಿಸಿ ( ಅವನು ಚಿಕ್ಕವ ನಿದ್ದಾಗ ತ೦ದೆ "ಅಷ್ಟೆಲ್ಲ ಓದುತ್ತಿರಬೇಡ" ಎಂದು ಹೇಳುತ್ತಿದ್ದರ೦ತೆ ) ದನು. ಮು೦ದೆ ಮತ್ತೊಬ್ಬ ಐನ್ ಸ್ಟೈನ ಆಗುವ ಅವಕಾಶವಿತ್ತೋ ಏನೋ ! ಆದರೆ ಬೆಳೆಯುತ್ತ ಮನಸ್ಸಿನ ಖಾಯಿಲೆಗೆ ತುತ್ತಾದನು. ಅವನವಿಷಯ ತಂದೆ ತಾಯಿಯರಿಗೆ ಬಹಳ ಯೋಚನೆಯಾಗಿತ್ತು . ಮಿಲೆವಾ ಅ೦ತಹ ಮಹಿಳೆಯನ್ನು ಮದುವೆಯಾಗಿರದಿದ್ದರೆ ತೊ೦ದರೆಗಳುಳ್ಳ ಇ೦ತಹ ಮಗ ಹುಟ್ಟುತ್ತಿರಲಿಲ್ಲವೇನೋ ಎಂದು ಐನ್ ಸ್ಟೈನ್ ಹೇಳಿದ್ದರು ! ತಮ್ಮ ವಂಶವಾಹಿನಿಯಲ್ಲಿಯೇ ತೊಂದರೆ ಇದ್ದಿರಬಹುದು ಎಂದು ಐನ್ಟೈನ್ ರಿಗೆ ಅನ್ನಿಸಲೇ ಇಲ್ಲ ! ತಾಯಿ ಮಿಲೆವಾ ಎಡ್ವರ್ಡನ ಬಗ್ಗೆ ಬಹಳ ಕಣ್ಣೀರು ಸುರಿಸಿದರು. ಅವರ ಜೀವನದ ಕಡೆಯ ತನಕ ಅವನ ಆರೈಕೆ ಮಾಡುತ್ತಲೇ ಇದ್ದರು. ಮಿಲೇವಾ ಮರಣದ ನಂತರ ಝ್ಯುರಿಕ್ನಲ್ಲಿ ಎಡ್ವರ್ಡ ಆಸ್ಪತ್ರೆಯಲ್ಲೇ ತನ್ನ ಪೂರ್ತಿ ಜೀವನಕಳೆದು ೧೯೬೫ರಲ್ಲಿ ಮೃತನಾದನು.
ಲೇಖನವೊಂದರಲ್ಲಿ ಐನ್ಸ ಟೈನ್ ತಮ್ಮನ್ನು " ಏಕಾಂಗಿ ಪ್ರಯಾಣಿಕ" ಎಂದು ಕರೆದುಕೊಂಡು " ನನಗೆ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಜವಾಬ್ದ್ದರಿಯ ಬಗ್ಗೆ ಬಹಳ ಕಳಕಳಿ ಇದೆ. ಆದರೆ ನನಗೆ ವೈಯುಕ್ತಿಕ
ಮನುಷ್ಯರಲ್ಲಿ ಆಸಕ್ತಿ ಇಲ್ಲ."ಎಂದು ಹೇಳಿದ್ದರು. ಮತ್ತೊ೦ದು ಬಾರಿ " ನನಗೆ ನನ್ನ ದೇಶ, ನನ್ನ ಮನೆ, ನನ್ನ ಸ್ನೇಹಿತ ಅಥವಾ ನನ್ನ ಕುಟು೦ಬ - ಯಾವುದೂ ನಿಜವಾಗಿ ನನ್ನದಲ್ಲ. ನನಗೆ ಏಕಾಂಗಿತನ ಬೇಕು. " ಐನ್ ಸ್ಟೈನ್ ಒಳ್ಳೆಯ ಪತಿಯಾಗಿರಲಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾಗದು. ಅದು ಅವರಿಗೂ ತಿಳಿದಿದ್ದಿತು. ಅವರ ಬಾಲ್ಸ್ಯಸ್ನೇಹಿತ ಬೆಸ್ಸೊ ಸತ್ತಾಗ ಅವರ ಬಗ್ಗೆ ಐನ್ ಸ್ಟೈನ್ " ಒಂದೇ ಪತ್ನಿಯೊಂದಿಗೆ ಶಾ೦ತ ಜೀವನ ನಡೆಸಿದನು. ಅದಕ್ಕೆ ನನ್ನ ಮೆಚ್ಚುಗೆ ಇದೆ. ಪ್ರಯತ್ನದಲ್ಲಿ ನಾನು ಎರಡು ಬಾರಿ ಸೋತೆ ಎನ್ನುವುದು ನಾಚಿಕೆಯ ವಿಷಯವೇ" ಮೇಲೆ ನೋಡಿದ೦ತೆ ಅವರು ಬಹಳ ಬಾರಿ ಒರಟುತನ, ಕೆಲವುಬಾರಿ ಕ್ರೂರತನದಿ೦ದಲೂ ವರ್ತಿಸುತ್ತಿದ್ದರು. ಅವರೇ ಬಹಳ ಮೆಚ್ಚಿದ್ದ ಕಳೆದ ಶತಮಾನದ ಮತ್ತೊಬ್ಬ ಮಹಾಪುರುಷ ಗಾಂಧೀಜಿಯವರು ಕೂಡ ಹೆಂಡತಿ ಮತ್ತು ಮಕ್ಕಳ ಬಗ್ಗೆ ಸೌಜನ್ಯದಿ೦ದೇನೂ ವರ್ತಿಸಲಿಲ್ಲ. ಆದರೂ ಮನೆಯವರ ಬೆಂಬ ಇಲ್ಲದಿದ್ದರೆ ವ್ಯಕ್ತಿಗಳು ಅಷ್ಟೆಲ್ಲಾ ಸಾಧಿಸುತ್ತಿದ್ದರೇ? ಐನ್ ಸ್ಟೈನರ ವಿಜ್ಞಾನಕ್ಕೆ ಮಿಲೇವಾ ಸ್ಫೂರ್ತಿಯಾಗಿದ್ದರು ಮತ್ತು ಎಲ್ಸಾ ಅವರ ಪರಿಪಕ್ವತೆಯ ಹಿಂದೆ ಇದ್ದರು. ಗ೦ಡನ ನ್ಯೂನತೆಗಳನ್ನೆಲ್ಲಾ ಕ್ಷಮಿಸಿ ಅವರ ಸಾಧನೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಸಹಾಯ ಮಾಡಿದ್ದಕ್ಕೆ ಐನ್ ಸ್ಟೈನರ ಮಡದಿಯರಿಗೂ ಮಾನವಜಾತಿಯ ಕೃತಜ್ಞತೆಗಳು ಸಲ್ಲಲೇ ಬೇಕು.
ಚಿತ್ರಗಳು ೧. ಮಿಲೆವಾ ಜೊತೆ ೨. ಎಲ್ಸಾ ಜೊತೆ ೩. ಮಿಲೇವಾ ಮತ್ತು ಮಕ್ಕಳು