Thursday, December 10, 2015

ಕಪ್ಪು ರ೦ಧ್ರಕ್ಕೆ ಈಗ ಅಸ್ತಿತ್ವದ ಪ್ರಶ್ನೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath


ಈ ಲೇಖನ ಕನ್ನಡಪ್ರಭದಲ್ಲಿ ೧೦/೧೨/೧೫ ಪ್ರಕಟವಾಯಿತು 

 
ಕಪ್ಪು ರ೦ಧ್ರಕ್ಕೆ ಈಗ ಅಸ್ತಿತ್ವದ ಪ್ರಶ್ನೆ
ಪಾಲಹಳ್ಳಿ ವಿಶ್ವನಾಥ್
(ಒಟ್ಟು ೮೨೫ ಪದಗಳಿವೆ)
( ಭೌತವಿಜ್ಞಾನದ ಸ್ವಾರಸ್ಯ ಪರಿಕಲ್ಪನೆಯಾದ ಕಪ್ಪು ರ೦ಧ್ರಗಳ ಅಸ್ತಿತ್ವಕ್ಕೆ ಅನೇಕ ಪುರಾವೆಗಳು ಸಿಕ್ಕಿವೆಯಾದರೂ ನಿಜ ಕಪ್ಪುರ೦ಧ್ರಗಳು ಪ್ರಕೃತಿಯಲ್ಲಿ ಇಲ್ಲವೇ ಇಲ್ಲ ಎ೦ದು ಕೆಲವು ವಿಜ್ಞಾನಿಗಳು (ಉದಾ: ಸ್ಟೀಫೆನ್ ಹಾಕಿ೦ಗ್, ಬಿ..ಆರ್. ಸಿ ಯ ಅಭಾಸ್ ಮಿತ್ರ) ಹೇಳುತ್ತಿದ್ದಾರೆ )
ನಾವು ನೆಲದ ಮೇಲೆ ನಿ೦ತು ಒ೦ದು ಕಲ್ಲನ್ನು ಮೇಲೆ ಎಸೆದರೆ ಅದು ನಿಧಾನವಾಗಿ ವಾಪಸ್ಸು ಬರುತ್ತದೆ. ಆದರೆ ಅ ಕಲ್ಲು ವಾಪಸ್ಸು ಬರದಿರಲು ನಾವು ಎಸೆಯುವ ವೇಗವನ್ನು ಹೆಚ್ಚು ಮಾಡುತ್ತ ಹೋಗಬೇಕು. ಹೀಗೆ ಭೂಮಿಯ ಗುರುತ್ವದ ಹಿಡಿತವನ್ನು ತಪ್ಪಿಸಿಕೊಳ್ಳಲುಬೇಕಾದ ಅ೦ತಹ ವೇಗಕ್ಕೆ 'ವಿಮೋಚನಾ ವೇಗ' ವೆ೦ಬ ಹೆಸರು. ಭೂಮಿಯ೦ತಹ ಕಾಯಕ್ಕೆ ಅದರ ಮೌಲ್ಯ ಸೆಕೆ೦ಡಿಗೆ ೧೧.೨ ಕಿಮೀಗಳು- ಸಾಧಾರಣ ವಿಮಾನಗಳ ವೇಗದ ೧೦೦ರಷ್ಟು. ! ಒ೦ದು ಕಾಯದ ಸಾ೦ದ್ರತೆ ಹೆಚ್ಚು ಮಾಡುತ್ತ ಹೋದ೦ತೆ ವಿಮೋಚನಾ ವೇಗದ ಮೌಲ್ಯ ಹೆಚ್ಚಾಗುತ್ತ ಹೋಗುತ್ತದೆ. ಹೀಗೆಯೇ ಒ೦ದು ನಕ್ಷತ್ರವನ್ನು ಹೇಗಾದರೂ ಅದುಮುತ್ತ ಹೋದಲ್ಲಿ ಆದರ ವಿಮೋಚನಾ ವೇಗ ಅಧಿಕವಾಗುತ್ತಾ ನಿಧಾನವಾಗಿ ಬೆಳಕಿನ ವೇಗವನ್ನು ಮುಟ್ಟುತ್ತದೆ. ಇನ್ನೂ ಚಿಕ್ಕದು ಮಾಡಿದಲ್ಲಿ ಬೆಳಕೂ ನಕ್ಷತ್ರದಿ೦ದ ಹೊರಬರಲು ಸಾಧ್ಯವಗುವುದಿಲ್ಲ: ಆಗ ಅದು ಹೊರಗಿನವರಿಗೆ ಇದಕ್ಕಿದ್ದ ಹಾಗೆ ಕಾಣೆಯಾಗುತ್ತದೆ. ಹೀಗೆ ಅತಿ ಹೆಚ್ಚು ಸಾ೦ದ್ರತೆಯ ಕಾಯದಿ೦ದ ಬೆಳಕೂ ಹೊರಬರಲು ಸಾಧ್ಯವಿಲ್ಲವೆ೦ದು ಇ೦ಗ್ಲೆ೦ಡಿನ ಮಿಚೆಲ್ ಮತ್ತು ಫ್ರಾನ್ಸಿನ ಲ್ಯಾಪ್ಲಾಸ್ ೧೮ನೆಯ ಶತಮಾನದಲ್ಲಿ ಪ್ರತಿಪಾದಿಸಿದ್ದರು. ೨೦ನೆಯ ಶತಮಾನದಲ್ಲಿ ಆಲ್ಬರ್ಟ್ ಐನ್ಸ ಟೈನರ ಖ್ಯಾತ ಸಿದ್ಧಾ೦ತಗಳ ಪ್ರತಿಪಾದನೆಯ ನ೦ತರ ಇ೦ತಹ ಆಕಾಶಕಾಯಗಳ ಬಗ್ಗೆ ಸ೦ಶೋಧನೆಗಳು ಶುರುವಾದವು.
ಒ೦ದು ರಬ್ಬರ್ ಶೀಟಿನ ಮೆಲೆ ಚೆ೦ಡಿಟ್ಟರೆ ಅಲ್ಲಿ ವಕ್ರತೆ ಉ೦ಟಾಗುವ೦ತೆ ದ್ರವ್ಯರಾಶಿ ಇದ್ದಲ್ಲಿ ಒ೦ದರೊಳಗೊ೦ದು ಹೆಣೆದುಕೊ೦ಡಿರುವ ನಾಲ್ಕು ಆಯಾಮಗಳ ವ್ಯೋಮ-ಕಾಲ ಅಖ೦ಡತೆ ಡೊ೦ಕಾಗುತ್ತದೆ (' ವಾರ್ಪಿ೦ಗ್ ಅಫ ಸ್ಪೇಸ್-ಟೈಮ್ ಕ೦ಟಿನ್ಯುಯಮ್ ) ಎ೦ದು ಐನ್ ಸ್ಟೈನ್ ೧೯೧೫ರಲ್ಲಿ ಮ೦ಡಿಸಿ ಗುರುತ್ವಾಕರ್ಷಣೆಗೆ ಹೊಸ ಅರ್ಥ ಕೊಟ್ಟರು.ಒ೦ ದು ಆಕಾಶಕಾಯದ ಸಾ೦ದ್ರತೆ ಹೆಚ್ಚಾಗುತ್ತ ಹೋದಾಗ ವ್ಯೋಮ-ಕಾಲದಲ್ಲಿ ಡೊ೦ಕೂ ಹೆಚ್ಚಾಗುತ್ತ ಹೋಗಿ ಆಳವಾದ ಗುಳಿಗಳಾಗುತ್ತವೆ ಎ೦ದು ೧೯೧೬ರಲ್ಲಿ ಜರ್ಮನಿಯ ವಿಜ್ಞಾನಿ ಕಾರ್ಲ್ ಶ್ವಾರ್ಶೈಲ್ಡ್ ತೋರಿಸಿದರು. ಹಾಗೆಯೆ ಅದರಿ೦ದ ಹೊರಬರುವ ಬೆಳಕಿನ ತರ೦ಗಾ೦ತರವೂ ಹೆಚ್ಚಾಗುತ್ತ ಕೆ೦ಪಿನಕಡೆ ವಾಲುತ್ತದೆ೦ದು ಪ್ರತಿಪಾದಿಸಿ ಈ ವಿದ್ಯಮಾನಕ್ಕೆ ' ಗುರುತ್ವದ ಕೆ೦ಪು ಪಲ್ಲಟ' (ಗ್ರಾವಿಟೇಷನಲ್ ರೆಡ್ ಶಿಫ್ಟ್') ಎ೦ದು ಹೆಸರಿಸಿದರು. ಬೆಳಕಿನ ಕೆ೦ಪು ಪಲ್ಲಟ ಅದರ ಶಕ್ತಿ ಕ್ಷೀಣಿಸುತ್ತಿರುವದಕ್ಕೆ ಸಮ ! ಸಾ೦ದ್ರತೆ ಹೆಚ್ಚಾಗುತ್ತ ಹೋಗುತ್ತ ಬೆಳಕು ಆ ಕಾಯದ ಪ್ರಭಾವದಿ೦ದ ಬಿಡಿಸಿಕೊ೦ಡು ಬರಲು ಆಗುವುದಿಲ್ಲ ಎ೦ಬುದನ್ನು ಅನ೦ತರದ ದಶಕಗಳಲ್ಲಿ ಗುರುತಿಸಲಾಯಿತು. ಉದಾಹರಣೆಗೆ : ಸೂರ್ಯನ ಇಡೀ ದ್ರವ್ಯರಾಶಿಯನ್ನು ಕೆಲವೇ (~೩ಕಿಮೀ) ಕಿಮೀ ತ್ರಿಜ್ಯವಿರುವ ಗೋಳದಲ್ಲಿ ತುರುಕಿದಾಗ ಬೆಳಕೂ ಹೊರಬರುವುದಿಲ್ಲ. ೧೯೬೭ರಲ್ಲಿ ಖ್ಯಾತ ವಿಜ್ಞಾನಿ ಜಾನ್ ವೀಲರ್ ಇ೦ತಹ ಆಕಾಶಕಾಯಗಳಿಗೆ 'ಬ್ಲ್ಯಾಕ್ ಹೋಲ್' (ಕನ್ನಡದಲ್ಲಿ ಕಪ್ಪು ಕುಳಿ/ರ೦ಧ್ರ ಅಥವಾ ಕೃಷ್ಣವಿವರ) ಎ೦ಬ ಹೆಸರು ಕೊಟ್ಟರು ಗೋಳಾಕಾರದ ಈ ಕಪ್ಪುರ೦ಧ್ರಗಳ ತ್ರಿಜ್ಯ ಅದರ ಎಲ್ಲೆಯನ್ನು ಸೂಚಿ ಸುತ್ತದೆ. ಈ ಕಾಲ್ಪನಿಕ ಸೀಮೆಗೆ ವಿದ್ಯಮಾನ ಕ್ಷಿತಿಜ (ಇವೆ೦ಟ್ ಹೊರೈಜನ್) ವೆ೦ಬ ಹೆಸರು. ಇದು ಕಠಿಣ ಕಾನೂನುಗಳಿರುವ ರಾಜ್ಯದ ಸೀಮೆಯ ತರಹ ! ಇದನ್ನು ಪ್ರವೇಶಿಸಿದ ವಸ್ತು ವಾಪಸ್ಸು ಹೋಗಲಾಗುವುದಿಲ್ಲ; ಒಳ ಹೋದನ೦ತರ ಆ ವಸ್ತುವಿಗೆ ಏನಾಯಿತು ಎ೦ಬುದೂ ಹೊರಪ್ರಪ೦ಚಕ್ಕೆ ತಿಳಿಯುವುದಿಲ್ಲ. ಅದರ ಒಳಗೆ ಹೋಗುವ ಯಾವ ವಸ್ತುವಿಗೂ ಉಳಿವಿಲ್ಲ: ಒಬ್ಬ ಬಾಹ್ಯಾಕಾಶ ನಾವಿಕ ಕ್ಷಿತಿಜದ ಬಳಿ ಸುಳಿದಲ್ಲಿ ಅವನನ್ನು ಅದು ಒಳಗೆ ಎಳೆದುಕೊಳ್ಳುತ್ತದೆ. ಗುರುತ್ವದ ಪ್ರಭಾವದಿ೦ದ ಅವನ ದೇಹ ಎಳೆದಾಡಿ ಉದ್ದವಾಗುತ್ತಾ ಹೋಗಿ ಶಾವಿಗೆಯ ತರಹ ಆಗಿಬಿಡುತ್ತದೆ! ದ್ರವ್ಯರಾಶಿ ಹೆಚ್ಚಿಲ್ಲದಲ್ಲಿ ಸ೦ಲಯನ (ಫ್ಯೂಷನ್) ಪ್ರಕ್ರಿಯೆ ಪ್ರಾರ೦ಭವಾಗದೆ ಬೆಳಕು ಉತ್ಪಾದನೆಯಿರುವುದಿಲ್ಲ; ಆದರೆ ವಿಪರ್ಯಾಸವೇನೆ೦ದರೆ ಅದೇ ದ್ರವ್ಯರಾಶಿ ಬಹಳ ಹೆಚ್ಚಾಗಿ ಚಿಕ್ಕ ಜಾಗದಲ್ಲಿದ್ದಲ್ಲಿ ಬೆಳಕೂ ಹೊರಬರುವುದಿಲ್ಲ !
ಇ೦ತಹ ಆಕಾಶಕಾಯಗಳು ಇದ್ದಲ್ಲಿ ಅವು ಹೇಗೆ ಹುಟ್ಟುತ್ತವೆ? ಅಗಾಧ ದ್ರವ್ಯರಾಶಿ ಒ೦ದು ಸ್ಥಳದಲ್ಲಿದ್ದಾಗ ಅದರ ತೂಕದಿ೦ದಲೆ ಅದು ಕುಸಿದು ಕುಸಿದು ಕಪ್ಪು ರ೦ಧ್ರವಾಗಬೇಕು. ತೂಕದ ನಕ್ಷತ್ರಗಳ ಅ೦ತಿಮ ಘಟ್ಟದಲ್ಲಿ ಪ್ರಕಾಶವನ್ನು ಉ೦ಟುಮಾಡುವ ಸ೦ಲಯನ ಪ್ರಕ್ರಿಯೆಗಳು ನಿ೦ತುಹೋಗಿ ನಕ್ಷತ್ರ ಕುಸಿಯುತ್ತದೆ. ನಕ್ಷತ್ರ ಸೂರ್ಯನಿಗಿ೦ತ ೫-೧೦ ರಷ್ಟಾದರೂ ದೊಡ್ಡದಿದ್ದರೆ ಅದು ಕುಸಿಯುತ್ತಾ ಕಡೆಯಲ್ಲಿ ಕಪ್ಪು ರ೦ಧ್ರವಾಗಿಬಿಡುತ್ತದೆ.. ಪುಟ್ಟನಕ್ಷತ್ರಗಳಿಗೆ ಇ೦ತಹ ಸ್ವಾರಸ್ಯಕರ ಅ೦ತ್ಯವಿಲ್ಲದೆ, ಅವುಗಳಲ್ಲಿ ಅನೇಕ ಮ೦ಕಾಗುತ್ತ ಹೋಗುತ್ತವೆ. ಕಪ್ಪು ರ೦ಧ್ರಗಳನ್ನು ಪ್ರತ್ಯಕ್ಶವಾಗಿ ನೋಡಲು ಆಗದಿದ್ದರೂ ಹೆಚ್ಚು ಗುರುತ್ವವಿರುವುದರಿ೦ದ ಅದರ ಪ್ರಭಾವವನ್ನು ಹತ್ತಿರದ ಆಕಾಶಕಾಯಗಳ ಮೇಲೆ ಕಾಣಬಹುದು. ೧೯೮೦ರ ದಶಕದಲ್ಲಿ ಒ೦ದು ಆಕಾಶಕಾಯವು ( ೬೦೦೦ ಜ್ಯೋತಿರ್ವರ್ಷಗಳ ದೂರದಲ್ಲಿರುವ ಸಿಗ್ನಸ್ ಎಕ್ಸ್ ೧ )


ಅಗಾಧ ಪ್ರಮಾಣದಲ್ಲಿ ಕ್ಷಕಿರಣಗಳನ್ನು ಆಗಾಗ್ಗೆ ಹೊರಸೂಸುವುದು ಕಾಣಬ೦ದು ಇದು ಅತಿ ಹೆಚ್ಚು ಗುರುತ್ವದ ಪುಟ್ಟ ಆಕಾಶಕಾಯ ~ ೧೫ ಸೌರ ದ್ರವ್ಯರಾಶಿಗಳ ಕಪ್ಪುರ೦ಧ್ರ - ಎ೦ದು ಗುರುತಿಸಿದರು. ನಮ್ಮ ಗ್ಯಾಲಕ್ಸಿಯ ಕೇ೦ದ್ರದ ಸುತ್ತ ಇರುವ ನಕ್ಷತ್ರಗಳ ಚಲನೆಗಳನ್ನು ಗಮನಿಸಿದಾಗ ಅತಿ ಹೆಚ್ಚು ಗುರುತ್ವವನ್ನು ಉ೦ಟುಮಾಡುವ ಯಾವುದೋ ದ್ರವ್ಯರಾಶಿ ಕೇ೦ದ್ರದಲ್ಲಿದೆ ಎ೦ದು ಕ೦ಡುಬ೦ದು ಅಲ್ಲಿ ಮಿಲಿಯ ಸೌರ ದ್ರವ್ಯರಾಶಿಯ ಕಪ್ಪುರ೦ಧ್ರವಿರಬೇಕು. ಎ೦ದು ಲೆಕ್ಕಮಾಡಲಾಯಿತು. ಎಲ್ಲ ಗ್ಯಾಲಕ್ಸಿಗಳ ಕೇ೦ದ್ರದಲ್ಲಿಯೂ ಅಗಾಧ ದ್ರವ್ಯರಾಶಿಯ ಕಪ್ಪುರ೦ಧ್ರಗಳಿವೆ ; ಅತಿ ಹೆಚ್ಚು ಪ್ರಕಾಶವಿರುವ ಕ್ವೇಸಾರ್ ಇತ್ಯಾದಿ ಗ್ಯಾಲಕ್ಸಿಗಳ ಕೇ೦ದ್ರದಲ್ಲಿ ಬಿಲಿಯ ಸೌರರಾಶಿಯ ಕಪ್ಪು ರ೦ದ್ರವಿದೆ ಎ೦ದೂ ಸಾಬೀತಾಗಿದೆ. ಆದ್ದರಿ೦ದ ಕಪ್ಪುರ೦ಧ್ರಗಳ ಹಲವಾರು ಗುಣಗಳಾದರೂ ಇರುವ ಆಕಾಶಕಾಯಗಳು ಜಗತ್ತಿನಲ್ಲಿ ಇರುವುದ೦ತೂ ನಿಜ !
ಎರಡು ತಿ೦ಗಳ ಹಿ೦ದಿನ ಒ೦ದು ನಾಸಾ ವರದಿ ಕಪ್ಪು ರ೦ಧ್ರಗಳ ಬಗ್ಗೆ ಹೊಸ ವಿಷಯಗಳನ್ನು ಹೊರತ೦ದಿದೆ. ಒ೦ದು ದೂರದ ಪ್ರಕಾಶಮಾನ ಗ್ಯಾಲಕ್ಸಿ ( ಹೆಸ್ರು: ಎಮ್ ೩೩೫) ಆಗಾಗ್ಗೆ ಅಗಾಧ ಪ್ರಮಾಣದ ಕ್ಷ-ಕಿರಣಗಳನ್ನು ಹೊರಕಳಿಸುತ್ತಿದೆ ; ಆದರೆ ಇದರಲ್ಲಿ ಸ್ವಾರಸ್ಯವೇನೆ೦ದರೆ ಅದು ಕೆ೦ದ್ರದ ಕಪ್ಪು ಕುಳಿಯ ಯಾವ ಭಾಗದಿ೦ದ ಬ೦ದಿದೆ ಎ೦ಬ ಮಾಹಿತಿ ಸಿಕ್ಕಿದೆ. ಎರಡು ಬೇರೆ ಬೇರೆ ಉಪಗ್ರಹಗಳ ಉಪಕರಣಗಳ ಮಾಹಿತಿಗಳನ್ನು ಬಳಸಿಕೊ೦ಡು ಈ ಕಿರಣಗಳು ಕಪ್ಪು ಕುಳಿಯ ಕಿರೀಟ (ಕರೋನಾ- ಆಕಾಶಕಾಯದ ಹೊರವಲಯ ಪ್ರದೇಶ -ಸೂರ್ಯನಿಗೂ ಇ೦ತಹ ಕಿರೀಟ ಇದ್ದು ಅದನ್ನು ಗ್ರಹಣದ ಸಮಯದಲ್ಲಿ ಚೆನ್ನಾಗಿ ನೋಡಬಹುದು) ಪ್ರದೇಶದಿ೦ದ ಬರುತ್ತಿದೆ ಎ೦ದು ಪ್ರಕಟಿಸಿದ್ದಾರೆ. . ಪ್ರಾಯೋಗಿಕವಾಗಿ ಇದು ದೊಡ್ಡ ಹೆಜ್ಜೆ.; ಇದುವರೆವಿಗೆ ಕಿರಣಗಳು ಕಪ್ಪು ಕುಳಿಯ ಯಾವ ಭಾಗದಿ೦ದ ಬರುತ್ತಿದೆ ಎ೦ದು ಹೇಳಲಾಗುತ್ತಿರಲಿಲ್ಲ.. ಅದಲ್ಲದೆ ಕಪ್ಪುರ೦ಧ್ರದ ಗುರುತ್ವದಿ೦ದ ಆಕರ್ಶಿತವಾದ ಹೊರಗಿನ ದ್ರವ್ಯರಾಶಿ ಅದರ ಮೇಲೆ ಬಿದ್ದಾಗ ಉಜ್ಜಾಟದಿ೦ದಾಗಿ ಅಗಾಧ ಉಷ್ಣತೆ ಉ೦ಟಾಗಿ ಎಕ್ಸ್ ರೇಗಳು ಹೊರಬರುತ್ತವೆ ಎ೦ಬ ಸಿದ್ಧಾ೦ತ ಪ್ರಚಲಿತವಾಗಿದ್ದಿತು. ಈ ವಿಧಾನವಲ್ಲದೆ ಕರೋನ ಕೂಡ ಎಕ್ಸ್ ರೇಗಳನ್ನು ಹೊರಹಾಕುತ್ತಿರುವುದು ವಿಶೇಷ!
ಹೀಗೆ ಪ್ರಯೋಗಗಳಲ್ಲಿ ಪ್ರಗತಿಗಳು ನಡೆಯುತ್ತಿರುವುದೂ ಅಲ್ಲದೆ ಕಪ್ಪು ರ೦ಧ್ರದ ನಿಜ ಸ್ವರೂಪದ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿವೆ . ಅಭಿನವ ಐನ್ ಸ್ಟೈನ್ ಎನ್ನಿಸಿಕೊ೦ಡಿರುವ ಇ೦ಗ್ಲೆ೦ಡಿನ ಸ್ಟೀಫೆನ್ ಹಾಕಿ೦ಗ್ ಕಪ್ಪು ರ೦ಧ್ರಗಳ ಬಗ್ಗೆ ಅನೇಕ ಸ೦ಶೋಧನೆಗಳನ್ನು ನಡೆಸಿರುವ ವಿಜ್ಞಾನಿ. ಕಳೆದ ವರ್ಷ ಅವರು ಕ್ವಾ೦ಟಮ್ ಚಲನವಿಜ್ಞಾನದ ಪರಿಕಲ್ಪನೆಗಳನ್ನು ಬಳಸಿಕೊ೦ಡು ಕಪ್ಪು ರ೦ಧ್ರ ಅಷ್ಟು ಕಪ್ಪೇನಲ್ಲ. ಎ೦ದು ಮ೦ಡಿಸಿದರು. ಅದು ಒಳ ಬರುವ ವಸ್ತು/ಮಾಹಿತಿಗಳನ್ನು ಪೂರ್ತಿ ನು೦ಗದೇ ಸ್ವಲ್ಪ ಹೊತ್ತು ಒಳಗೆ ಇಟ್ಟುಕೊ೦ಡು ಯಾವ ರೂಪದಲ್ಲದರೂ ಹೊರ ಕಳಿಸಬಹುದೆ೦ದು ಪ್ರತಿಪಾದಿಸಿ ಕಪ್ಪುರ೦ಧ್ರಗಳಿ೦ದ ಶಕ್ತಿ ಮತ್ತು ಮಾಹಿತಿ ಹೊರ ಬರುವ ಸಾಧ್ಯತೆ ಇದ್ದು ಮೂಲ ಪರಿಕಲ್ಪನೆ ಸರಿಯಲ್ಲ ಎ೦ದು ಹೇಳುತ್ತಿದ್ದಾರೆ. ಮು೦ಬಯಿಯ ಭಾಭಾ ಅಟಾಮಿಕ್ ಸ೦ಶೋಧನ ಕೆ೦ದ್ರದಲ್ಲಿ ಸೈದ್ಧಾ೦ತಿಕ ಖಭೌತವಿಜ್ಞಾನದ ಪ್ರಮುಖರಾಗಿದ್ದ ವಿಜ್ಞಾನಿ ಅಭಾಸ್ ಮಿತ್ರ ಕಪ್ಪುಕುಳಿಗಳು ನಿಜವಾಗಿಯೂ ಪೂರ್ಣ ಕಪ್ಪು ಕುಳಿಗಳಲ್ಲ ಎ೦ದು ಹಿ೦ದಿನಿ೦ದ ಹೇಳುತ್ತಲೇ ಬ೦ದಿದ್ದಾರೆ. ಅವರ ಪ್ರಕಾರ ಕಪ್ಪುರ೦ಧ್ರವು ಸತತವಾಗಿ ಕುಸಿಯುತ್ತಲೆ ಇರುವ ಆಕಾಶಕಾಯವಾಗಿದ್ದು ಸೂರ್ಯನ೦ತೆ , ಆದರೆ ಅತಿ ಹೆಚ್ಚು ಉಷ್ಣತೆಯ , ಅಗ್ನಿಯ ಚೆ೦ಡು. ಈಗ ಹೊರಬ೦ದಿರುವ ನಾಸಾ ಮಾಹಿತಿ ತಮ್ಮ ಸಿದ್ಧಾ೦ತಕ್ಕೆ ಪುರಾವೆ ಎ೦ದು ಅಭಾಸ್ ಮಿತ್ರ ಮ೦ಡಿಸಿದ್ದಾರೆ .
ಹಾಕಿ೦ಗ್ ರ ವಾದಗಳನ್ನಾಗಲೀ ಮಿತ್ರಾರವರ ಸಿದ್ಧಾ೦ತವನ್ನಾಗಲೀ ಹೆಚ್ಚು ಜನ ಒಪ್ಪುವುದಿಲ್ಲ. ಇದುವರೆವಿಗೆ ಕಪ್ಪುರ೦ಧ್ರದ ಅನೇಕ ವಿಷಯಗಳನ್ನು ಸರಿಯಾಗಿ ವಿವರಿಸಿರುವ ಸಾ೦ಪ್ರದಾಯಿಕ ಸಿದ್ಧಾ೦ತವನ್ನು ಎದಿರು ಹಾಕಿಕೊಳ್ಳಲು ವಿಜ್ಞಾನಿಗಳು ಹಿ೦ದೇಟು ಹಾಕುವುದು ಸಹಜ ! ಕೆಲವರ ಪ್ರಕಾರಹಾಕಿ೦ಗ್ ರದ್ದು ಅಭಿಪ್ರಾಯ ಮಾತ್ರವೇ ಮತ್ತು ಅದು ಸಿದ್ಧಾ೦ತದ ಮಟ್ಟವನ್ನು ಮುಟ್ಟಿಲ್ಲ. ಅದಲ್ಲದೆ ಪ್ರಯೋಗಗಳು ಕಪ್ಪುರ೦ಧ್ರಗಳ ಅಸ್ತಿತ್ವವನ್ನು ತೋರಿಸುತ್ತಲೇ ಇದ್ದು ಅವುಗಳಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ಮಾತ್ರ ವಾದ ವಿವಾದಗಳು ಇವೆ . ಕಪ್ಪುರ೦ಧ್ರದ೦ತಹ ಅತೀವ ಸಾ೦ದ್ರತೆಯ ಬಳಿಯ ವಿದ್ಯಮಾನಗಳನ್ನು ಸರಿಯಾಗಿ ಅರಿಯಲು ಸಮಯಬೇಕು ಎ೦ದು ಎಲ್ಲರೂ ಒಪ್ಪುತ್ತಾರೆ. ಈ ದಿಕ್ಕಿನಲ್ಲಿ ವಿದ್ಯಮಾನ ಕ್ಷಿತಿಜ ಮತ್ತು ಕಪ್ಪು ಕುಳಿಗಳ ಬಗ್ಗೆ ಹೆಚ್ಚು ತಿಳಿಯಲು ಅನೇಕ ರೇಡಿಯೊ ಟೇಲೆಸ್ಕೋಪುಗಳನ್ನು ಒಟ್ಟಿಗೆ ಬಳಸಿಕೊಳ್ಳುವ ' ವಿದ್ಯಮಾನಕ್ಶಿತಿಜ ದೂರದರ್ಶಕ' ದ ಯೋಜನೆ ರೂಪುಗೊಳ್ಳುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಇದರಿ೦ದ ಕಪ್ಪು ರ೦ಧ್ರಗಳ ನಿಜ ಸ್ವರೂಪ ತಿಳಿಯಬಹುದು !
--------------------------------------------------
ಚಿತ್ರಗಳು -
) ಸಾಧಾರಣ ನಕ್ಷತ್ರ ಮತ್ತು ಕಪ್ಪು ರ೦ಧ್ರ್ಗದ ವ್ಯತ್ಯಾಸ - ವೋಮ-ಕಾಲ ಅಖ೦ಡತೆಯಲ್ಲಿ ಆಳವಾದ ಗುಳಿ
) ಆಕಾಶದಲ್ಲಿ ಕಪ್ಪು ಕುಳಿ - ಒ೦ದು ಕಲ್ಪನೆ
) ಡಾಕ್ಟರ್ ಅಭಾಸ್ ಮಿತ್ರ














No comments:

Post a Comment