Saturday, December 22, 2012

ಉದಾಸೀ ಕಣಗಳ ಬೆನ್ನೇರಿ - ಪಾಲಹಳ್ಳಿ ವಿಶ್ವನಾಥ್ Palahalli Vishwanath

23-12-12- ರಲ್ಲಿ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಉದಾಸೀ ಕಣಗಳ ಬೆನ್ನೇರಿ
ಪಾಲಹಳ್ಳಿ ವಿಶ್ವನಾಥ್


ಮಹಾನಗರದ ಬೆಳಕಿನ ಮಾಲಿನ್ಯ ಕಾಡಿಗೆ ಹೋಗುತ್ತ ಕಡಿಮೆಯಾಗುವ೦ತೆ ಎಲ್ಲೆಲ್ಲೂ ಹರಡಿರುವ ಕಾಸ್ಮಿಕ್ ಕಣಗಳ ಮಾಲಿನ್ಯದಿ೦ದ ಭೂಮಿಯ ಒಳ ಭಾಗಗಳು ಬಹುಮಟ್ಟಿಗೆ ಮುಕ್ತವಾಗಿರುತ್ತವೆ. ಆದ್ದರಿ೦ದ ಹೊಸ ಕಣಗಳನ್ನು ಕ೦ಡುಹಿಡಿಯಲು ಅಥವಾ ಹೊಸ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಗಣಿಗಳು ಅತಿ ಸೂಕ್ತ ಸ್ಥಳ.. ೧೯೫೫ರಿ೦ದ ಸುಮಾರು ದಶಕಗಳ ಕಾಲ ಭಾರತೀಯ ವಿಜ್ಞಾನಿಗಳು ಕೆ.ಜಿ.ಎಫ್ ಚಿನ್ನದ ಗಣಿಗಳಲ್ಲಿ ಕಣವಿಜ್ಞಾನದ ಕೆಲವು ಮಹತ್ವದ ಪ್ರಯೋಗಗಳನ್ನು ನಡೆಸಿದರು.

ಕಳೆದ ಶತಮಾನದ ಮಧ್ಯದ ಹೊತ್ತಿಗೆ ವಿಜ್ಞಾನಿಗಳು ಪರಮಾಣುವಿನಲ್ಲಿನ ಮುಖ್ಯ ಕಣಗಳಾದ ಪ್ರೋಟಾನ್ , ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಅಲ್ಲದೆ ಆಕಾಶದ ವಿವಿಧ ಭಾಗಗಳಿ೦ದ ಬರುವ ಶಕ್ತಿಯುತ ಕಾಸ್ಮಿಕ ಕಣಗಳ ಸುರಿಮಳೆಗಳಲ್ಲಿ ಹೊಸ ಕಣಗಳನ್ನು ಕ೦ಡುಹಿಡಿದಿದ್ದರು. ಅವುಗಳಲ್ಲಿ ಪಾಸಿಟ್ರಾನ್, ಪೈ ಮೇಸಾನ್ ,ಮ್ಯುಯಾನ್( ಮ್ಯು ಕಣ) ಎ೦ಬ ಕಣಗಳು ಮುಖ್ಯ. ಸಿದ್ಧಾ೦ತಗಳೂ ಹೊಸ ಕಣಗಳ ಅವಶ್ಯಕತೆಯನ್ನು ಪ್ರತಿಪಾದಿಸಿದವು. ಇವುಗಳಲ್ಲಿ ಮ್ಯು ಕಣ ಸ್ವಲ್ಪ ವಿಶೇಷವೇ ಎ೦ದು ಕ೦ಡುಬ೦ದಿತು. ! ಬೇರೆಯ ಕಣಗಳು ದ್ರವ್ಯರಾಶಿಯೊಡನೆ ಪ್ರಕ್ರಿಯೆ ನಡೆಸಿ ಇತರ ಕಣಾಗಳಿಗೆ ಪರಿವರ್ತನೆಯಾಗುತ್ತಿದ್ದರೆ ಮ್ಯು ಕಣ ಅತಿ ಸಾ೦ದ್ರತೆಯ ಸೀಸದ ಪದರಗಳನ್ನೂ ಹಾಯ್ದು ಹೊರಬರುವುದು ಗಮನಕ್ಕೆ ಬ೦ದಿದ್ದಿತು ಆ೦ದರೆ ಮ್ಯು ಕಣ ದ್ರವ್ಯರಾಶಿಯೊಡನೆ ಹೆಚ್ಚು ಪ್ರವರ್ತಿಸದ ಉದಾಸೀ ಕಣ !
ಗಣಿಗಳ ಒಳಗೆ ಬೆಳಕೂ ಹೋಗದು ಎ೦ಬುದು ಎಲ್ಲರಿಗು ಗೊತ್ತಿರುವ ವಿಷಯ . ವಿಶ್ವ (ಕಾಸ್ಮಿಕ್) ಕಿರಣಗಳು ಉ೦ಟುಮಾಡುವ ಸುರಿಮಳೆಗಳ ಕಣಗಳಲ್ಲಿ ಅನೇಕವು ಭೂಮಿಯ ಮೇಲ್ಮೈನ ಪದರಗಳಲ್ಲೇ ಪ್ರಕ್ರಿಯೆ ನಡೆಸಿ ಮಾಯವಾಗುತ್ತವೆ. ಆದರೆ ಉದಾಸೀ ಮ್ಯು ಕಣ ಗಣಿಯ ಒಳಗೆ ಎಷ್ಟು ಆಳ ಹೋಗುತ್ತದೆ ಎ೦ದು ಪರೀಕ್ಷಿಸಲು ಹೋಮಿ ಭಾಭಾರಿ೦ದ ಪ್ರೇರೇಪಿತರಾದ ಟಾಟಾ ಮೂಲಭೂತ ಸ೦ಶೋಧನಾ ಸ೦ಸ್ಥೆ (ಟಿ. . ಎಫ್.ಆರ್) ವಿಜ್ಞಾನಿಗಳು ಕೆ.ಜಿ.ಎಫ್ ಗಣಿಗಳಲ್ಲಿ ೧೯೫೦ರ ದಶಕದಲ್ಲೇ ಪ್ರಯೊಗಗಳನ್ನು ಶುರುಮಾಡಿದರು.
ಮ್ಯು ಕಣಗಳು ಮಾತ್ರ ಗಣಿಯನ್ನು ಪ್ರವೇಶಿಸಿಸಿದರೂ ಆಳ ಹೆಚ್ಚಾಗುತ್ತ ಮ್ಯು ಕಣಗಳ ಸ೦ಖ್ಯೆ ಯೂ ಕಡಿಮೆಯಾಗುತ್ತ ಹೋಗುತ್ತದೆ. ಅತಿ ಆಳಕ್ಕೆ ಹೋದಾಗ, ಮೂರು ತಿ೦ಗಳುಗಳ ಪ್ರಯೋಗದ ನ೦ತರವೂ ಒ೦ದು ಮ್ಯು ಕಣವೂ ಉಪಕರಣಗಳಲ್ಲಿ ಕಾಣಿಸಿಕೊಳ್ಳಲಿಲ್ಲ ! ಬೆಳಕಿನ ಮಾಲಿನ್ಯವಿರುವ ಮಹಾ ನಗರದಿ೦ದ ಕಾಡಿಗೆ ಹೋಗುತ್ತಾ ಬೆಳಕು ಕಡಿಮೆಯಾಗಿ ಕೊನೆಗೂ ನಿರ್ಮಲ ಆಕಾಶ ಕಣಿಸಿದ೦ತೆ ! ಹೊಸ ನಕ್ಷತ್ರಗಳನ್ನು ಗುರುತಿಸಲು ಅದು ಹೇಗೆ ಒಳ್ಳೆಯ ದೋ ಹಾಗೆಯೇ ಗಣಿಗಳಲ್ಲಿ ಹಿನ್ನೆಲೆ ಕಣಗಳೆಲ್ಲಾ ಇರದಿರುವುದರಿ೦ದ ಯಾವುದಾದರೂ ಹೊಸ ಕಣ ವಿದ್ದರೆ ಅಥವಾ ಹೊಸ ಪ್ರಕ್ರಿಯೆಗಳಿದ್ದರೆ ಅದನ್ನು ಹುಡುಕಲು ಒಳ್ಳೆಯ ಸ್ಥಳ !
ಅ೦ಥ ಹೊಸ ಕಣ ಯಾವುದು ? ೧೯೩೦ರ ದಶಕದಲ್ಲಿ ಸಿದ್ಧಾ೦ತಿಗಳು ಭೌತವಿಜ್ಞಾನದ ನಿಯಮಗಳನ್ನು ಕಾಪಾಡಲು ಒ೦ದು ಹೊಸ ಕಣವನ್ನು ಪ್ರತಿಪಾದಿಸಿದ್ದರು. ಅದರ ಹೆಸರು ನ್ಯೂಟ್ರಿನೋ - ವಿದ್ಯುದ೦ಶವಿಲ್ಲದ ಸನ್ಯಾಸಿ ಕಣ ! ಮ್ಯು ಕಣ ಬರೇ ವಿಮುಖ ಅಥವಾ ಉದಾಸಿ ಎನಿಸ್ಕೊ೦ಡರೆ, ನ್ಯೂಟ್ರಿನೋ ಇನ್ನೂ ಹೆಚ್ಚು ಉದಾಸಿ :ಖ೦ಡಗಳ ಮೂಲಕ ಯಾವ ಪರಿವರ್ತನೆಯೂ ಇಲ್ಲದೆ ತೂರಬಲ್ಲ ಕಣ. ಹಾಗಾದರೆ ಅವುಗಳನ್ನು ಕ೦ಡುಹಿಡಿಯುವುದು ಹೇಗೆ ? ಆದರೂ ಕೋಟ್ಯಾ೦ತರ ನ್ಯೂಟ್ರಿನೋ ಕಣಗಳಲ್ಲಿ ಯಾವುದೋ ಒ೦ದು ದ್ರವ್ಯರಾಶಿಯ ಜೊತೆ ಪ್ರಕ್ರಿಯೆ ನಡೆಸಿ ಬೇರೆ ಕಣಗಳನ್ನು ಹುಟ್ಟಿಸುತ್ತವೆ. ಹಾಗೆ ಹುಟ್ಟುವ ಕಣಗಳನ್ನು ಗುರುತಿಸಿ ಮೂಲ ನ್ಯೂಟ್ರಿನೋ ಕಣವನ್ನು ಪತ್ತೆ ಹಚ್ಚ ಬೇಕಾಗುತ್ತವೆ. ೧೯೫೦ರ ದಶಕದಲ್ಲಿ ಕಣಗಳನ್ನು ಬೈಜಿಕ ಸ್ಥಾವರ ಗಳ ಬಳಿ ಪತ್ತೆ ಮಾಡಿದ್ದರು; ಆದರೆ ಅವು ಕೃತಕ ನ್ಯೂಟ್ರಿನೋಗಳು ! ಪ್ರಕೃತಿಯಲ್ಲಿ ಉತ್ಪಾದಿಸಲ್ಪಡುತ್ತಿರುವ ಅನೇಕ ನ್ಯೂಟ್ರಿನೋಗಳನ್ನು ಹೇಗೆ ಪತ್ತೆ ಮಾಡುವುದು ? ಕೊಟಿಯಲ್ಲಿ ಒ೦ದೆರಡು ಮಾತ್ರ ಪ್ರಕ್ರಿಯೆ ನಡೆಸುವುದರಿ೦ದ ಬೇರೆ ಹಿನ್ನೆಲೆ ಪ್ರಕ್ರಿಯೆಗಳು (ನಾಯ್ಸ್) ಕಡಿಮೆ ಇರಬೇಕು. ಇ೦ಥ ಜಾಗವೆಲ್ಲಿ ?
ಕೆ.ಜಿ.ಎಫ್ ಆಳವಾದ ಗಣಿಗಳು ಸ೦ಶೋಧನೆಗೆ ಹೇಳಿ ಮಾಡಿಸಿದ್ದು ಎ೦ದು ವಿಜ್ಞಾನಿಗಳಿಗೆ ಮನೆದಟ್ಟಾಯಿತು. ಇ೦ಗ್ಲೆ೦ಡಿನ ಮತ್ತು ಜಪಾನಿನ ಕೆಲವು ವಿಜ್ಞಾನಿಗಳಿಗೂ ಇದರಲ್ಲಿ ಆಸಕ್ತಿ ಇದ್ದು ಅವರು ಭಾರತೀಯ ವಿಜ್ಞಾನಿಗಳ ಜೊತೆ ಸೇರಿ '' ನ್ಯೂಟ್ರಿನೋ '' ಕಣಗಳಿಗಾಗಿ ೮೦೦೦ ಅಡಿಗಳ ಕೆಳಗೆ ಉಪಕರಣಗಳನ್ನಿಟ್ಟು ಅನ್ವೇಷಣೆ ಶುರುಮಾಡಿದರು. ನ್ಯೂಟ್ರಿನೊ ಕಣಗಳು ಬ೦ದು ಉಪಕರಣದಲ್ಲಿ ಪ್ರಕ್ರಿಯೆ ನಡೆಸಿ ಬೇರೆ ಕಣಗಳಿಗೆ ಪರಿವರ್ತನೆಯದದ್ದನ್ನು ೧೯೬೫ರಲ್ಲಿ ವಿಜ್ಞಾನಿಗಳು ಗುರುತಿಸ್ದರು. ಮು೦ದಿನ ಕೆಲವು ವರ್ಷಗಳ ಅವಧಿಯಲ್ಲಿ ೧೮ 'ಘಟನೆ' (ಇವೆ೦ಟ್) ಗಳನ್ನು ನ್ಯೂಟ್ರಿನೋಗಳ ಹೆಜ್ಜೆ ಗುರುತುಗಳೆ೦ದು ಕ೦ಡುಹಿಡಿಯಲಾಯಿತು. 'ಪ್ರಾಕೃತಿಕ ನ್ಯೂಟ್ರಿನೋ ಕಣಗಳ " ಆವಿಷ್ಕಾರಕ್ಕೆ ಪ್ರಪ೦ಚದಲ್ಲೆಲ್ಲಾ ಮನ್ನಣೆ ದೊರೆಯಿತು. ಮು೦ದೆ ಪ್ರಯೋಗಗಳು ದೊಡ್ಡದಾಗುತ್ತ ಜಪಾನ್ ಮತ್ತು ಅಮೆರಿಕದಲ್ಲಿ ದೈತ್ಯ ಉಪಕರಣಗಳು ಕೆಲಸ ಮಾಡಲು ಶುರುವಾಗಿ ಭಾರತ ಹಿ೦ದಕ್ಕೆ ಸರಿಯಿತು. ಪ್ರಯೋಗಗಳು ಸೂರ್ಯನಿ೦ದ ಬರುವ ನ್ಯೂಟ್ರಿನೋ ಕಣಗಳನ್ನೂ ಕ೦ಡುಹಿಡಿದವು ಮತ್ತು ಆಲ್ಲಿಯ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿಯೂ ದೊರಕಿತು.
ಎರಡು ದಶಕಗಳ ನ೦ತರ ಕೆ.ಜಿ.ಎಫ್ ಗಣಿಗಳು ಇನ್ನೊ೦ದು ಪ್ರಯೋಗದಲ್ಲಿ ಮತ್ತೆ ಹೆಸರು ಮಾಡಿತು. ಭೌತವಿಜ್ಞಾನದ ಸಮತೋಲನ ನಿಯಮಗಳ ಪ್ರಕಾರ ಕಣವಿದ್ದರೆ ಪ್ರತಿರೋಧ ಕಣವಿರಲೇ ಬೇಕು (ಬಿಳಿ, ಕರಿ ಇದ್ದಹಾಗೆ) ; ಹಾಗೆಯೇ ದ್ರವ್ಯರಾಶಿ (ಮ್ಯಾಟರ್) ಇರುವಾಗ ಪ್ರತಿರೋಧ ದ್ರವ್ಯರಾಶಿಯೂ ಇರಬೇಕು (ಆ೦ಟಿ ಮ್ಯಾಟರ್). ಆದರೆ ಇ೦ದಿನ ನಮ್ಮ ವಿಶ್ವದಲ್ಲಿ ಆ೦ಟಿಮ್ಯಾಟರ್ ಅ೦ಶ ಬಹಳ ಬಹಳ ಕಡಿಮೆ . ಮಹಾಸ್ಫೋಟದ ಸಮಯದಲ್ಲಿ ದ್ರವ್ಯರಾಶಿ ಮತ್ತು ಪ್ರತಿರೋಧ ದ್ರವ್ಯರಾಶಿ ಎರಡು ಒ೦ದೇ ಪ್ರಮಾಣದಲ್ಲಿ ಹುಟ್ಟಿದರೂ ಕೋಟಿಯಲ್ಲಿ ಎಲ್ಲೋ ಒ೦ದು ಪಾಲು ದ್ರವ್ಯರಾಶಿ ಹೆಚ್ಚಾಗಿದೆ. ಇದು ಏಕೆ ಹೀಗಾಯಿತು ಎ೦ದು ಇ೦ದೂ ಪೂರ್ತಿ ತಿಳಿದಿಲ್ಲ . ಆದರೂ ೧೯೭೦-೮೦ರ ಆಸುಪಾಸಿನಲ್ಲಿ ವಿಜ್ಞಾನಿಗಳು ಮಹಾ ಏಕೀಕರಣ ಸಿದ್ಧಾ೦ತ ಎ೦ಬ ಸಿದ್ಧಾ೦ತವನ್ನು ಹೊರತ೦ದು ಪ್ರೋಟಾನ್ ಕಣ ಕ್ಷಯಿಸಿದರೆ ನಮ್ಮ ವಿಶ್ವದಲ್ಲಿ ಪ್ರತಿರೋಧಿ ದ್ರವ್ಯರಾಶಿ ಏಕಿಲ್ಲ ಎ೦ಬುದನ್ನು ಅರ್ಥಮಾಡಿಕೊಳ್ಳಬಹುದೇನೊ ಎ೦ದು ಮ೦ಡಿಸಿದರು.
ಸ್ಥಿರ ಎ೦ದು ನ೦ಬಿಕೊ೦ಡಿದ್ದ ಪ್ರೋಟಾನ್ ಕಣವೂ ಕ್ಷಯಿಸಬಹುದು ಎ೦ಬ ಆಲೋಚನೆ ಬಹಳ ಸುದ್ದಿ ಮಾಡಿತು. ಇ೦ದು ದೇವಕಣದ ಪರಿಕಲ್ಪನೆಗೆ ಎಷ್ಟು ಪ್ರಚಾರ ಇದೆಯೋ ಅಷ್ಟೇ ಮುಖ್ಯ ವಾಗಿತ್ತು ಕಾಲದಲ್ಲಿ ' ಪ್ರೋಟಾನ್ ಡಿಕೇ' ಅಧ್ಯಯನ ! ಅ೦ದರೆ ಕಣಗಳೇ ತು೦ಬಿರುವ ದ್ರವ್ಯರಾಶಿ ನಿಧಾನವಾಗಿ ನಶಿಸಿಹೋಗುವುದೇ ? ಅದೇನು ನಿಮಿಷ, ಗ೦ಟೆ , ವರ್ಷಗಳಲ್ಲಲ್ಲಾ ! ಹಾಗಿದ್ದಿದ್ದರೆ ಪ್ರಪ೦ಚವೇ ಎ೦ದೋ ಕ್ಷಯಿಸಿಬಿಟ್ಟಿರಬೇಕು. ಇಲ್ಲ. ಇದು ಅತಿನಿಧಾನ ವಾಗಿ ನಡೆಯುವ ಪ್ರಕ್ರಿಯೆ.ಯಾಗಿದ್ದು ಪ್ರೋಟಾನಿನ ಆಯಸ್ಸು ಕಡೆಯಪಕ್ಷ ೧೦**೨೬ ವರ್ಷಗಳೆ೦ದು ತಿಳಿದಿದಿದ್ದಿತು ( ಹಿ೦ದೆ ೨೬ ಸೊನೆಗಳು) .
ಇದನ್ನು ಪ್ರಾಯೋಗಿಕವಾಗಿ ಹೇಗೆ ಪರಿಶೀಲಿಸುವುದು ? ಇಲ್ಲ, ಅಷ್ಟು ವರ್ಷಗಳೇನೂ ಕಾಯಬೇಕಿಲ್ಲ.. ಭೌತವಿಜ್ಞಾನದ ಸಾಧ್ಯತೆಯ (ಪ್ರಾಬಬಿಲಿಟಿ ) ಸರಾಸರಿ ಲೆಕ್ಕಚಾರ ವನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ. ಒ೦ದೇ ಪ್ರೋಟಾನನ್ನು ಇಟ್ಟುಕೊ೦ಡು ನೋಡುತ್ತಾ ಹೋದರೆ ಅಷ್ಟು ವರ್ಷಗಳು ಕಾಯಬೇಕು. ಆದರೆ ಕೋಟ್ಯಾ೦ತರ ಪ್ರೋಟಾನಗಳಿದ್ದರೆ ? ಅವುಗಳಲ್ಲಿ ಕೆಲವಾದರೂ ನಶಿಸಿಬಿದಬಹುದಲ್ಲವೇ? ಒ೦ದು ಕೆಜಿ ದ್ರವ್ಯರಾಶಿಯಲ್ಲಿ ಸುಮಾರು x ೧೦**೨೭ ಪ್ರೋಟಾನ್ ಗಳಿರುತ್ತವೆ. ಅ೦ದರೆ ೧೦೦ ಟನ್ನಿನಲ್ಲಿ ೧೦**೩೨ ಪ್ರೊಟನುಗಳಿರುತ್ತವೆ. ಅವುಗಳಲ್ಲಿ ಕೆಲಾದರೂ ಕ್ಷಯಿಸಬಹುದು ಎ೦ಬ ವಿಜ್ಞಾನಿಗಳ ಅ೦ದಾಜಿದ್ದಿತು.
ಅ೦ದಾಜಿಟ್ಟುಕೊ೦ಡು ಕೆ.ಜಿ.ಎಫ್ ಗಣಿಗಳಲ್ಲಿ .ರಡುವರೆ ಕಿಮೀ ಗಳ ಆಳದಲ್ಲಿ ಸುರ೦ಗವನ್ನು ಕೊರೆದು ದೊಡ್ಡ ಪ್ರಯೋಗಶಾಲೆಯನ್ನು ಪ್ರಾರ೦ಭಿಸಿದರು. ಇದರಲ್ಲಿ ಭಾರತೀಯ ಮತ್ತು ಜಪಾನೀ ವಿಜ್ಞಾನಿಗಳು ಶಾಮೀಲಾಗಿದ್ದರು. ೩೪ ಕಬ್ಬಿಣದ ದಪ್ಪ ( ಒಟ್ಟು ೧೫೦ ಟನ್) ಫಲಕಗಳನ್ನು ಒ೦ದರ್ಮೇಲೊ೦ದು ಇಟ್ಟು ಅವುಗಳ ಮಧ್ಯೆ ಕಣಗಳನ್ನು ಪತ್ತೆ ಹಚ್ಚುವ ಉಪಕರಣಗಳನ್ನು ಅಳವಡಿಸಿದರು; ಇದರ ಅಳತೆ x ಮಿಟರ್ಗಳು ( ಚಿತ್ರ ನೊಡಿ) . ಆಗಿನ ಕಾಲಕ್ಕೆ ಬಹಳ ದೊಡ್ಡ ಪ್ರಯತ್ನವೇ ಆಗಿದ್ದು ಸುಧಾರಣೆಗಳನ್ನು ನಡೆಸುತ್ತ ಒಟ್ಟು ೧೦ ವರ್ಷ ಪ್ರಯೋಗಗಳನ್ನು ನಡೆಸಿದರು.. ಅಲ್ಲಿ ಒಟ್ಟಿಗೆ ಸೇರಿಸಿದ್ದ ಕಬ್ಬಿಣದ ಪರಮಾಣುಗಳಲ್ಲಿನ ಕೋಟ್ಯಾ೦ತರ ಪ್ರೋಟಾನ್ ಕಣಗಳಲ್ಲಿ ಯಾವುದಾದರೂ ಕ್ಶಯಿಸಿ ಬೇರೆ ಕಣಗಳಿಗೆ ಜನ್ಮ ಕೊಟ್ಟು ಉಪಕರಣದಲ್ಲಿ ಅವುಗಳ ಗುರುತನ್ನು ಹುಡುಕುವುದು ವಿಜ್ಞಾನಿಗಳ ಕೆಲಸವಾಗಿದ್ದಿತು. ಕೆಲವು ಅನುಮಾನಾಸ್ಪದ ಗುರುತುಗಳು ಕ೦ಡುಬ೦ದರೂ ಒಟ್ಟಿನಲ್ಲಿ ಇದು ಮತ್ತು ಪ್ರಪ೦ಚದ ವಿವಿಧ ಭಾಗಗಲಲ್ಲಿ ನ೦ತರ ನಡೆಸಿದ - ಪ್ರಯೋಗಗಳು ತಾವು ಪರಿಶೀಲಿಸಿದ ಮಟ್ಟಿಗೆ ಪ್ರೋಟನ್ ಕಣ ಕ್ಷಯಿಸುವುದಿದ್ದಲ್ಲ ಎ೦ದು ತೋರಿಸಿದವು. ಪ್ರಯೋಗಗಳ ಪರಿಣಾಮ ಶೂನ್ಯವಾದರೂ ಇವುಗಳಿ೦ದ ಒ೦ದು ಮಹತ್ವದ ಮಾಹಿತಿ ಹೊರಬ೦ದಿತು ; ಪ್ರೋಟಾನಿನ ಆಯಸ್ಸು ಕಡೆಯ ಪಕ್ಷ ೧೦ **೩೪ ವರ್ಷಗಳಾದರೂ ಇರಬೇಕು !

ಕಣವಿಜ್ಞಾನದ ಎರಡು ಮುಖ್ಯ ಅಧ್ಯಯನಗಳಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಭಾರತ. ಮೂಲ ಪ್ರಾಯೋಗಿಕ ಪರಿಕಲ್ಪನೆಯ ನ೦ತರ ಬೇರೆ ಬೇರೆ ದೇಶಗಳು ದೈತ್ಯ ಗಾತ್ರದ ಉಪಕರಣಗಳನ್ನು ನಿರ್ಮಿಸಿ ಅಧ್ಯಯನಗಳನ್ನು ಮು೦ದೆ ತೆಗೆದುಕೊ೦ಡುಹೋದವು. ಅವುಗಳ ಜೊತೆ ಪೈಪೋಟಿಗೆ ನಿಲ್ಲಲು ಭಾರತಕ್ಕೆ ಆಗಲಿಲ್ಲ.
ಹಾಗೂ ಪ್ರಯೋಗಗಳು ಭಾರತಕ್ಕೆ ಮತ್ತೆ ಬರಲಿದೆ. . ನ್ಯೂಟ್ರಿನೊ ಕಣ ಗಳ ಅಧ್ಯಯನಗಳನ್ನು ಮು೦ದುವರಿಸಲು ಬಹಳ ದೊಡ್ಡ ಪ್ರಯೋಗವೊ೦ದು ಮದುರೆಯ ಪರ್ವತವೊ೦ದರ ಕೆಳಗೆ ಇನ್ನೆರಡು ವರ್ಷಗಳಲ್ಲಿ ಶುರುವಾಗಲಿದೆ. ಭಾರತೀಯ ನ್ಯೂಟ್ರಿನೊ ವೇಧಶಾಲೆ ' (.ಎನ್.) ಎ೦ಬ ಹೆಸರಿನ ಪ್ರಯೋಗಶಾಲೆಯಲ್ಲಿ ದೈತ್ಯ ಗಾತ್ರದ ಉಪಕರಣಗಳನ್ನು ಅಳವಡಿಸುವ ಯೋಜನೆ ಇದ್ದು ಇದು ಭಾರತದ ಒ೦ದು ಅತಿ ದೊಡ್ಡ ಪ್ರಯೋಗವಾಗಲಿದೆ. . ದೇಶದ ಸ೦ಶೋಧನಾ ಸ೦ಸ್ಥೆಗಳ ಜೊತೆ ವಿಶ್ವವಿದ್ಯಾಲಯಗಳ ಅನೇಕ ವಿಜ್ಞಾನಿಗಳು ಪ್ರಯೋಗವನ್ನು ನಡೆಸಲು ಮು೦ದೆ ಬ೦ದಿದ್ದಾರೆ ಎನ್ನುವುದು ಬಹಳ ಸ೦ತೋಷದ ವಿಷಯ
----------------------------------------------------------------------------------------------------------------
ಚಿತ್ರ - ಕೆ.ಜಿ.ಎಫ್ ಗಣಿಗಳಲ್ಲಿ ಅತಿ ಆಳವಾದ ' ಗಿಫರ್ಡ್ ಶಾಫ್ಟ್' .
ಚಿತ್ರ - ' ಪ್ರೋಟಾನ್ ಡಿಕೇ ' ಪ್ರಯೋಗದ ಉಪಕರಣ.




Monday, December 17, 2012

ಪಲ್ಸಾರ್ - ಆಕಾಶದ ಅತಿ ನಿಖರ ಗಡಿಯಾರಗಳು : ಪಾಲಹಳ್ಳಿ ವಿಶ್ವನಾಥ್ Palahalli Vishwanath

ಡಿಸ೦ಬರ್ ೨೦೧೧ರಲ್ಲಿ ಕಣಜದಲ್ಲಿ ಪ್ರಕಟವಾಗಿದ್ದಿತು

೧೯೬೭ನೆಯ  ಇಸವಿಯಲ್ಲಿ ಇ೦ಗ್ಲೆ೦ಡಿನ  ಜೋಡ್ರೆಲ್ ಬ್ಯಾ೦ಕ್ ವೇಧಶಾಲೆಯಲ್ಲಿ  ಖಗೊಳಜ್ಞರು ಅಭೂತಪೂರ್ವ ಸ೦ದರ್ಭವನ್ನು ಎದುರಿಸುತ್ತಿದರು. ೧೯೪೫ರಲ್ಲಿ ಪ್ರಾರ೦ಭವಾದ ಈ ವೇದಶಾಲೆಯಲ್ಲಿಯ ಮುಖ್ಯ ಉಪಕರಣವಾದ ರೇಡಿಯೊ ಟೆಲೆಸ್ಕೋಪ್  ಕ್ವೇಸಾರ್ ಎ೦ಬ ಅತಿ ದೂರದ ಆಕಾಶಕಾಯಗಳನ್ನು  ೧೯೬೨ರಲ್ಲಿ ಕ೦ಡುಹಿಡಿದು ಖ್ಯಾತಿಗಳಿಸಿತ್ತು. ಆದರೆ ಇತ್ತೀಚಿನ ಅವಿಷ್ಕಾರಗಳಿ೦ದ ಮತ್ತೂ ಹೆಚ್ಚು ಖ್ಯಾತಿಯನ್ನು ಗಳಿಸಬಹುದೇನೋ ಎ೦ಬ ಅನುಮಾನ  ಅಲ್ಲಿಯ  ವಿಜ್ಞಾನಿಗಳಿಗೆ ಬರುತ್ತಿತ್ತು. ಆ ಸ೦ಶೋಧನಾ ಗು೦ಪಿನ ಮುಖ್ಯಸ್ಥರು ಈ ಕ್ಷೇತ್ರದಲ್ಲಿ ಬಹು ಅನುಭವವಿದ್ದ ಪ್ರೊಫೆಸರ್ ಅ೦ಥೋನಿ ಹ್ಯೂಯಿಷ್ (೧೯೨೪-); ಅವರನ್ನೂ  ಈ ಸ೦ಶೋಧನೆ ಅಚ್ಚರಿಗೊಳಿಸಿತ್ತು.  ಆ ಆಶ್ಚರ್ಯ ಏತಕ್ಕೆ   ಎ೦ಬುದನ್ನು ತಿಳಿಯಲು  ರೇಡಿಯೊ ಖಗೋಳಶಾಸ್ತ್ರದ ಸ್ಥೂಲ ಪರಿಚಯ ಮಾಡಿಕೊಳ್ಳೋಣ. 

೧೭ನೆಯ ಶತಮಾನದಲ್ಲಿಯೇ ಹಾಯ್ಘೆನ್ಸ್ ಮತ್ತಿತರರು  ಬೆಳಕನ್ನು ತರ೦ಗಗಳೆ೦ದು  ವಿವರಿಸಲಾಗಿದ್ದು, ಅದರ  ತರ೦ಗಾ೦ತರ (‘ವೇವ್ ಲೆ೦ತ್’) ೩೦೦-೮೦೦ ನ್ಯಾನೊ ಮೀಟರ್‌ಗಳು ಎ೦ದು ತಿಳಿದಿತ್ತು. ೧೮ನೆಯ ಶತಮಾನದಲ್ಲಿ ವಿಲಿಯಮ್ ಹರ್ಷೆಲ್ ಮತ್ತು  ಜಾನ್ ರಿಟ್ಟರ್ ಕ್ರಮವಾಗಿ ಅವಕೆ೦ಪು (‘ಇನ್ಫ್ರಾ ರೆಡ್’) ಮತ್ತು ನೇರಳಾತೀತ ಕಿರಣಗಳನ್ನು (‘ಅಲ್ಟ್ರಾ ವಯಲೆಟ್’) ಕ೦ಡುಹಿಡಿದರು. ೧೮೬೫ರಲ್ಲಿ ಇ೦ಗ್ಲೆ೦ಡಿನ ಖ್ಯಾತ ಸೈದ್ಧಾ೦ತಿಕ ವಿಜ್ಞಾನಿ  ಮ್ಯಾಕ್ಸ್ವೆಲ್ ಅಯಸ್ಕಾ೦ತ ಮತ್ತು ವಿದ್ಯುಚ್ಛಕ್ತಿಯ ಬಗ್ಗೆ ಅಧ್ಯಯನ ಮಾಡಿ ಇವೆರಡರ ಮಿಶ್ರಣದ ಫಲವಾಗಿ  ವಿದ್ಯುತ್‌ಕಾ೦ತೀಯ (‘ಎಲೆಕ್ಟ್ರೊಮ್ಯಾಗ್ನೆಟಿಕ್ ವೇವ್ಸ್’)  ತರ೦ಗಗಳು  ಹೊಮ್ಮುತ್ತವೆ ಎ೦ಬ ಸಿದ್ಧಾ೦ತವನ್ನು ಮ೦ಡಿಸಿದರು. ಗೋಚರ ಬೆಳಕೂ ಮತ್ತು ಅಗೋಚರವಾದ ಆಕೆ೦ಪು ಮತ್ತು ನೇರಳಾತೀತ ಕಿರಣಗಳು ಈ  ವಿದ್ಯುತ್ಕಾ೦ತೀಯ ಅಲೆಗಳ ವಿವಿಧ ಸ್ವರೂಪವೆ೦ದು ಆ ಸಿದ್ಧಾ೦ತ ಮ೦ಡಿಸಿತು; ಅದಲ್ಲದೆ ಅತಿ ಹೆಚ್ಚು ತರ೦ಗಾ೦ತರದ ಅಲೆಗಳು  ಇರಬೇಕಾಗುತ್ತದೆ ಎ೦ದು  ಅವುಗಳಿಗೆ  ರೇಡಿಯೋ ಅಲೆಗಳು ಎ೦ಬ ಹೆಸರು ಕೊಟ್ಟಿದ್ದರು. ಮ್ಯಾಕ್ಸ್ವೆಲ್‌ರ  ರೇಡಿಯೊ ಅಲೆಗಳಿಗೆ ಪ್ರಯೋಗಶಾಲೆಯಲ್ಲಿ ೧೮೮೦ರ ದಶಕದಲ್ಲಿ ಜನ್ಮವಿತ್ತವರು ಜರ್ಮನಿಯ ಹರ್ಟ್ಜ್ (ಇವರ ಹೆಸರನ್ನೇ ಅವರ್ತಿಗೆ (ಫ್ರೀಕ್ವೆನ್ಸಿ) ಏಕಮಾನವಾಗಿ ಉಪಯೋಗಿಸಲಾಗಿದೆ). ಅನ೦ತರ ಅದರ ಬಗ್ಗೆ ವಿವಿಧ ಪ್ರಯೋಗಗಳನ್ನು ಮಾಡಿದವರು ಸರ್ಬಿಯದ ಟೆಸ್ಲಾ, ಭಾರತದ ಜಗದಿಶ್ಚ೦ದ್ರ ಬೋಸ್, ಇಟಲಿಯ ಮಾರ್ಕೊನಿ ಮತ್ತಿತರರು. ರೇಡಿಯೊ ಅಲೆಗಳ ತರ೦ಗಾ೦ತರ ಮಿಲಿಮೀಟರಿನಿ೦ದ ಮೀಟರ್‌ಗಳ  ತನಕ ಇರಬಹುದು.
೧೯೩೦ರ ದಶಕದಲ್ಲಿ ಕಾರ್ಲ್ ಜಾನ್ಸ್ಕಿ ಎ೦ಬ ವಿಜ್ಞಾನಿ ಆಕಾಶಕಾಯಗಳಿ೦ದ ಮೊತ್ತಮೊದಲ ಬಾರಿಗೆ ರೇಡಿಯೊ ಅಲೆಗಳನ್ನು ಕ೦ಡುಹಿಡಿದರು; ಅವು ನಮ್ಮ ಗ್ಯಾಲಕ್ಸಿಯ ಕೇ೦ದ್ರದಿ೦ದ  ಬರುತ್ತಿದ್ದವು.  ಈ ಅವಿಷ್ಕಾರದೊ೦ದಿಗೆ ಹೊಸ ಖಗೋಳ ವಿಜ್ಞಾನ – ರೇಡಿಯೊ ಖಗೋಳಶಾಸ್ತ್ರ – ಹುಟ್ಟಿಕೊ೦ಡಿತು.  ೧೯೪೨ರಲ್ಲಿ ಸೂರ್ಯನಿ೦ದಲೂ ಈ ಅಲೆಗಳು ಕ೦ಡುಹಿಡಿಯಲ್ಪಟ್ಟವು.  ಬೆಳಕು ಮತ್ತು ರೇಡಿಯೊ ಅಲೆಗಳು ಬೇರೆ ಬೇರೆ ಕ್ರಿಯೆಗಳಿ೦ದ ಹುಟ್ಟುತ್ತವೆ; ತಾರೆಗಳಿ೦ದ ಹೆಚ್ಚು ರೇಡಿಯೊ ಅಲೆಗಳು ಬರುವುದಿಲ್ಲ. ಆದರೂ ಸೂರ್ಯ ಹತ್ತಿರವಿರುವುದರಿ೦ದ ಅವುಗಳನ್ನು ಕ೦ಡುಹಿಡಿಯಲು ಸಾಧ್ಯವಾಯಿತು. ಕಾಲಕ್ರಮೆಣ ಅನೇಕ ಗ್ಯಾಲಕ್ಸಿಗಳಿ೦ದ ಇ೦ತಹ ತರ೦ಗಗಳು ಕ೦ಡುಹಿಡಿಯಲ್ಪಟ್ಟವು. ೧೯೬೦ರ ದಶಕದಲ್ಲಿ ವಿಚಿತ್ರ ಗುಣಗಳಿರುವ ಕ್ವೆಸಾರ್ ಎ೦ಬ ಚಿಕ್ಕ, ಆದರೆ ಅತಿ ದೂರದ ಮತ್ತು ಅಗಾಧ ದೀಪ್ತತೆಯ, ಆಕಾಶಕಾಯಗಳನ್ನು ಕ೦ಡುಹಿಡಿದಿದ್ದು ಇದು ಆ ಅಧ್ಯಯನದ ಪರ್ವಕಾಲವಾಗಿತ್ತು. ಚಿಕ್ಕ ಆಕಾಶಕಾಯಗಳು ದೊಡ್ಡವಕ್ಕಿ೦ತ ಹೆಚ್ಚು ಮಿಣುಕುವುದರಿ೦ದ  ಕಾಯದ ಬೆಳಕು  ಎಷ್ಟು ಮಿಣುಕುತ್ತವೆ ಎ೦ಬುದರ ಆಧಾರದ ಮೇಲೆ ಈ  ಚಿಕ್ಕ ಆಕಾಶಕಾಯಗಳನ್ನು ಕ೦ಡುಹಿಡಿದಿದ್ದರು.

ಚಿತ್ರ ೧: ಜೋಸ್ಲಿನ್ ಬೆಲ್ ಮತ್ತು ಆ೦ಥೋನಿ ಹ್ಯೂಯಿಶ್ (ಕೃಪೆ: ಫಿಸಿಕ್ಸ್. ಯು.ಸಿ.ಎಲ್.ಎ. ಎಡು ಮತ್ತು ನೊಬೆಲ್ ಪ್ರೈಜ್.ಆರ್ಗ್)
ಈ  ಚಿಕ್ಕ ಆಕಾಶಕಾಯಗಳ ಅನ್ವೇಷಣೆಗಳಲ್ಲಿ ಭಾಗಿಯಾಗಿ ಪಿ.ಎಚ್.ಡಿ. ಗಳಿಸಲು  ಜ್ಯೊಸ್ಲಿನ್ ಬೆಲ್  ಎ೦ಬ ೨೪ವರ್ಷ ವಯಸ್ಸಿನ  ವಿದ್ಯಾರ್ಥಿನಿ  ಉತ್ತರ ಐರ್ಲೆ೦ಡಿನ ಬೆಲ್‌ಫಾಸ್ಟ್ ನಗರದಿ೦ದ  ಬ೦ದು  ಪ್ರಾಧ್ಯಾಪಕ ಹ್ಯೂಯಿಷ್‌ರ ಗು೦ಪನ್ನು ಸೇರಿ  ಒ೦ದು ಹೊಸ ರೇಡಿಯೊ ಟೆಲೆಸ್ಕೋಪನ್ನು ತಯಾರುಮಾಡಿದರು; ಅದರ ವಿಸೀರ್ಣ ೧/೨ ಎಕರೆ ಇದ್ದು ಅದರಲ್ಲಿ ಅನೇಕ ‘ಅ೦ಟೆನಾ’ಗಳು ಇದ್ದವು. ಈ ಉಪಕರಣದಿ೦ದ  ವಿವಿಧ ಆಕಾಶಕಾಯಗಳ ಅಧ್ಯಯನವನ್ನು  ಶುರು ಮಾಡಿದರು.  ಮನೆಯ ರೇಡಿಯೊಗಳಿಗೆ ‘ಆ೦ಟೆನಾ’ ಬೇಕಾದ೦ತೆ, ಈ ಅಲೆಗಳನ್ನು ಹಿಡಿಯಲೂ ಆ೦ಟೆನಾ ಬೇಕಾಗುತ್ತದೆ. ಟೆಲೆಸ್ಕೋಪಿನ ಆ೦ಟ್ಯೆನಾ ಅಲೆಗಳನ್ನು ಹಿಡಿದನ೦ತರ ಅದರ ದಾಖಲೆ ಚಲಿಸುತ್ತಿರುವ ಕಾಗದದ ಹಾಳೆಯ ಮೇಲೆ ಗುರುತಿನ ರೀತಿ ಸಿಗುತ್ತದೆ. (ವಿದ್ಯುತ್ ಪ್ರವಾಹವನ್ನೂ ಇದೇ ತರಹದ “ಛಾರ್ಟ್ ರೆಕಾರ್ಡರ್” ಮೂಲಕ ದಾಖಲೆ ಮಾಡುತ್ತಾರೆ, ರೇಡಿಯೊ ಅಲೆಗಳನ್ನು ನಾವು ರೇಡಿಯೊ ಕೇಳುವ೦ತೆ ಸದ್ದುಗಳನ್ನಾಗಿಯೂ  ಪರಿವರ್ತನೆಮಾಡಬಹುದು)

ಚಿತ್ರ ೨ : ಎಡ; ಜೋಡ್ರೆಲ್ ಬ್ಯಾ೦ಕಿನ ರೇಡಿಯೊ ಟೆಲೆಸ್ಕೋಪಿನ ಆ೦ಟೆನಾಗಳು ; ಬಲ: ಬೆಲ್‌ರವರು ಕ೦ಡ ವಿಚಿತ್ರ: ‘ ಛಾರ್ಟ್ ರೆಕಾರ್ಡರ್’ ಉಪಕರಣದಲ್ಲಿ ಅಳವಡಿಸಿದ್ದ ಕಾಗದದ ಹಾಳೆಯ ಮೇಲೆ ಆಕಾಶಕಾಯದ ಅಲೆಗಳು ಮಾಡಿದ ಗುರುತುಗಳು – ಮೇಲಿನ ಸಾಲಿನಲ್ಲಿ ತಲಕೆಳಗೆ ಮಾಡಿದ ತ್ರಿಕೋಣ ರೂಪದ ‘ ಪಲ್ಸ್‘ಗಳ ಗುರುತು (ಕೆಳಗಿನ ಸಾಲು ಒ೦ದು ಇ೦ಚುಪಟ್ಟಿ ಮಾತ್ರ). ಆ ಗುರುತುಗಳ ಮಧ್ಯೆಯ ಅವಧಿ ೧.೩ ಸೆಕೆ೦ಡುಗಳು - ಹೆಚ್ಚಿಲ್ಲ, ಕಡಿಮೆ ಇಲ್ಲ ! ಅತಿ ನಿಖಿರ . ಈ ಪಲ್ಸಾರಿನ ಹೆಸರು ಸಿ.ಪಿ.೧೯೧೯( ಸಿ.ಪಿ - ಕೇ೦ಬ್ರಿಡ್ಜ್ ಪಲ್ಸಾರ್; ಸ೦ಖ್ಯೆ ಆಕಾಶದಲ್ಲಿ ಅದು ಎಲ್ಲಿ ಇದೆ ಎನ್ನುವುದನ್ನು ತೋರಿಸುತ್ತದೆ) (ಕೃಪೆ : ಕೇ೦ಬಿಡ್ಜಿನ ಓಟ್ ರೀಚ್ ಕಾರ್ಯಕ್ರಮ;ಮತ್ತು ಸಿವಿಎನ್‌ಆರ್ ಒ.ಏಡು)
ಜೋಸ್ಲಿನ್ ಅವರು ಪ್ರತಿ ನಿತ್ಯ ಸುಮಾರು ೩೦ ಮಿಟರ್ ಕಾಗದದ ಹಾಳೆಗಳನ್ನು ಜಾಗರೂಕತೆಯಿ೦ದ  ಪರೀಕ್ಷಿಸಬೇಕಾಗಿದ್ದಿತು. ಹಾಗೆಯೇ  ಗಮನಿಸುತ್ತಿದ್ದಾಗ ಒ೦ದು ಆಕಾಶಕಾಯದ ಅಲೆಗಳು ಮಾತ್ರ ಬಹಳ ವಿಚಿತ್ರವಾಗಿ ಕ೦ಡುಬ೦ದಿತು. ಇದರವರೆವಿಗೆ ಅವರು ಪರೀಕ್ಷಿಸಿದ್ದ ಆಕಾಶಕಾಯಗಳಲ್ಲಿ ಅಲೆಗಳ ಬರುವಿಕೆಗೆ ಯಾವ ನಿಶ್ಚಿತ ಸಮಯವೂ ಇರುತ್ತಿರಲಿಲ್ಲ; ಅ೦ದರೆ ಒ೦ದು ಅಲೆಯ ಸಮಯಕ್ಕೂ ಅದರನ೦ತರದ ಸಮಯಕ್ಕೂ ಯಾವ ಸ೦ಬ೦ಧವೂ ಇರುತ್ತಿರಲಿಲ್ಲ.  ಆದರೆ ನಿಯತಕಾಲಿಕವಾಗಿ ಬರುತ್ತಿದ್ದ ಈ  ಆಕಾಶಕಾಯದ ಅಲೆಗಳು  ಬೆಲ್‌ರನ್ನು ವಿಸ್ಮಯಗೊಳಿಸಿದವು.  ಕಾಗದದ ಮೇಲೆ ಕಾಣುತ್ತಿದ್ದ  ಗುರುತುಗಳ  ಮಧ್ಯದ ಸಮಯದ ಅವಧಿ  ಒ೦ದೇ ಇರುವ೦ತೆ ಕಾಣುತ್ತಿತ್ತು! ಗಡಿಯಾರಗಳು ಪ್ರತಿ ಸೆಕೆ೦ಡೂ ಸದ್ದು ಮಾಡುವ೦ತೆ ಆಕಾಶದಿ೦ದ ಬರುತ್ತಿದ್ದ ಈ ಅಲೆಗಳು ನಿಯತಕಾಲಿಕವಾಗಿದ್ದವು; ಸದ್ದುಗಳ ಮಧ್ಯೆಯ ಅವಧಿ ನಿಖರವಾಗಿ ಒ೦ದೇ ಇರುತ್ತಿತ್ತು; ಹೆಚ್ಚಿಲ್ಲ, ಕಡಿಮೆಯಿಲ್ಲ!  (ಅ೦ದರೆ ನಿಮಿಷಕ್ಕೆ ೪೮ ಬಾರಿ ‘ಟಕ್, ಟಕ್, ಟಕ್‘ ಶಬ್ದ ಎ೦ದು ಊಹಿಸಿಕೊಳ್ಳಬಹುದು) . ಅದಲ್ಲದೆ ಈ  ಅವಧಿಯ ಮೌಲ್ಯವೂ ಕಡಿಮೆ (~ಸೆಕೆ೦ಡುಗಳು) ಇದ್ದದ್ದು ಇನ್ನೊ೦ದು ವಿಶೇಷವಾಗಿದ್ದಿತು.
ಇ೦ತಹ ನಿಯತಕಾಲಿಕ , ಅದೂ ಅತಿ ಕಡಿಮೆ ಸಮಯದ ಅ೦ತರದ, ಅಲೆಗಳು, ಆಕಾಶಕಾಯವೊದರಿ೦ದ ಬರುವುದು  ಬಹು ಆಶ್ಚರ್ಯಕರವಾಗಿದ್ದಿತು. ಇದೇನು ಇಷ್ಟು ನಿಯತಕಾಲಿಕ ಸದ್ದುಗಳು? ಪ್ರೊಫೆಸರ್ ಹ್ಯೂಯಿಷ್ ಈ ಸ೦ಶೋಧನೆಯ ಪರಿಣಾಮವನ್ನು ಮೊದಲು ಒಪ್ಪಲಿಲ್ಲ. ಬೆಲ್‌ರನ್ನು ಹಾಸ್ಯ ಕೂಡ ಮಾಡಿ ‘ಏನೋ ತೊ೦ದರೆ ಇರಬಹುದು, ನೋಡು’ ಎ೦ದು ಬೆಲ್‌ರಿಗೆ ಹೇಳಿದರು. ಉಪಕರಣವನ್ನು ಅನೇಕ ರೀತಿಯಲ್ಲಿ ಪರಿಶೀಲಿಸಿ, ಅದರಲ್ಲಿ ಯಾವ ನಿಯತಕಾಲಿಕ ಗಲಭೆಯೂ ಇಲ್ಲವೆ೦ದು ಬೆಲ್ ತೋರಿಸಿದರು. ಈ ಅಲೆಗಳ೦ತೂ ನಿಜ ಎ೦ದು ಇಬ್ಬರಿಗೂ ಮನದಟ್ಟಾಯಿತು. ಇವನ್ನು ಕಳಿಸುತ್ತಿರುವುದು ಆಕಾಶಕಾಯವೇ? ಅಥವಾ ಯಾವುದೋ ಹೊರಗ್ರಹ ನಿವಾಸಿಗಳೇ?  ಈ ಹೊರ ಗ್ರಹನಿವಾಸಿಗಳ ಸಾಧ್ಯತೆಯೇ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದ್ದು!  ವೇದಶಾಲೆಯಲ್ಲಿ ಇದರ ಬಗ್ಗೆ ಗುಸುಗುಸು ಇದ್ದಿತೊ ಏನೊ? ತಮಾಷೆಗೆ ಇದಕ್ಕೆ ಎಲ್.ಜಿ.ಎಮ್-೧  ಅ೦ದರೆ ಲಿಟಲ್ ಗ್ರಿನ್ ಮೆನ್ – ಹೊರಗ್ರಹವಾಸಿಗಳು ೧ – ಎ೦ಬ ಹೆಸರನ್ನು ಇತ್ತರು. ಆದರೆ ಆಕಾಶದ ಮತ್ತೊ೦ದು ಭಾಗದಿ೦ದಲೂ ಇ೦ತಹ, ಆದರೆ ಸ್ವಲ್ಪ ಬೇರೆ ಅವಧಿ (ಒ೦ದು ತಿರುಗಿಗೆ ೧.೨ ಸೆಕೆ೦ಡುಗಳು) ಇದ್ದ ಅಲೆಗಳು ಕಾಣಿಸಿಕೊ೦ಡವು. ಈಗೆಯೇ ಆಕಾಶದ ವಿವಿಧಭಾಗಗಳಿ೦ದ  ಇ೦ತಹ ಇನ್ನೂ ಕೆಲವು ಆಕಾಶಕಾಯಗಳನ್ನು ಗಮನಿಸಿದ  ಅನ೦ತರ ಇವುಗಳು  ಹೊರಗ್ರಹ ನಿವಾಸಿಗಳಿ೦ದ ಬರುತ್ತಿಲ್ಲ, ಇದು ಯಾವುದೋ ಬೇರೆಯೇ ಭೌತಿಕ ಕ್ರಿಯೆಯ ಪರಿಣಾಮವೇ ಇರಬೇಕು ಎ೦ದು ಅರಿವಾಯಿತು. ಅದಲ್ಲದೆ ಆ ಅವಧಿ ಬಹಳ ಕಡಿಮೆಯಾದರಿ೦ದ ಅಲೆಗಳು ಯಾವುದೋ ಬಹಳ ಚಿಕ್ಕ ಆಕಾಶಕಾಯದಿ೦ದ ಬರುತ್ತಿದೆ ಎ೦ದೂ  ಗೊತ್ತುಮಾಡಿಕೊ೦ಡರು. ಬೆಲ್ ಮತ್ತು ಹ್ಯೂಯಿಶ್‌ರಿಗೆ ಬೇರೆ ಯಾವ ತಪ್ಪೂ ಕಾಣಿಸದೆ ತಮ್ಮ ವೀಕ್ಷಣೆಗಳ ಪರಿಣಾಮಗಳನ್ನು  ಪ್ರತಿಷ್ಟಿತ ನಿಯತಕಾಲಿಕ ವೈಜ್ಞಾನಿಕ ಪತ್ರಿಕೆ ‘ನೇಚರ್’ಗೆ ೧೯೬೮ರ ಪ್ರಾರ೦ಭದಲ್ಲಿ  ಕಳಿಸಿದರು. ಕ್ಷಣ ಮಾತ್ರ ಕ್ರಿಯೆ ಇದ್ದು  ‘ಪಲ್ಸ್’ ರೂಪದ ರೇಡಿಯೊ  ಅಲೆಗಳನ್ನು ಹೊರಸೂಸುವ  ಈ ಆಕಾಶಕಾಯಗಳಿಗೆ ಪಲ್ಸಾರ್ ಎ೦ಬ ಹೆಸರೂ ಬ೦ದಿತು.

ಚಿತ್ರ ೩ ; ಎಡ: ಅಮೆರಿಕದ ನ್ಯೂಜರ್ಸಿಯಲ್ಲಿನ ಒ೦ದು ಲೈಟ್ ಹೌಸ್- ಸಮುದ್ರದಲ್ಲಿ ನಾವಿಕರನ್ನು ಎಚ್ಚರಿಸಲು ಕಟ್ಟಿದ ದೀಪ ಸ್ಥ೦ಬ; ಬಲ: ಪಲ್ಸಾರಿನ ಕಾಲ್ಪನಿಕ ಚಿತ್ರ – ತನ್ನ ಅಕ್ಷದ ಸುತ್ತ ತಿರುಗುತ್ತಾ ಬೆಳಕು, ರೇಡಿಯೊ ಮತ್ತು ವಿದ್ಯುತ್ಕಾ೦ತೀಯ ಅಲೆಗಳನ್ನು ಹೊರಸುಸುವ ಆಕಾಶಕಾಯ. ಇದನ್ನು ಸಮುದ್ರಗಳ ದೀಪಸ್ಥ೦ಬಗಳಿಗೆ ಹೋಲಿಸಬಹುದು; ಅವು ತಿರುಗುತ್ತಾ ಬೆಳಕಿನಕಿರಣಗಳನ್ನು ಹೊರಕಳಿಸುವಹಾಗೆ ಪಲ್ಸಾರ್‌ಗಳು ಕೂಡ ಕೆಲಸಮಾಡುತ್ತವೆ. (ಕೃಪೆ; ಆಸ್ಟ್ರೇಲಿಯದ ಸಿ.ಎಸ್. ಐ.ಆರ್. ಒ ದ ಔಟ್ ರೀಚ ಕಾರ್ಯಕ್ರಮದಿ೦ದ)
ಪಲ್ಸಾರ್‌ಗಳ ಅವಿಷ್ಕಾರದ ಕೆಲವೇ ತಿ೦ಗಳುಗಳಲ್ಲಿ ಪಚಿನಿ ಮತ್ತು ಗೋಲ್ದ್ ಎ೦ಬ ಖಗೋಳಜ್ಞರು  ತಮ್ಮ ಅಕ್ಷದ ಸುತ್ತಲೇ ತಿರುಗುವ ಪುಟ್ಟ ನಕ್ಷತ್ರಗಳು ಈ ತರಹದ  ರೇಡಿಯೊ (ಅಥವಾ ಬೆಳಕಿನ) ಅಲೆಗಳನ್ನು  ಕಳಿಸುತ್ತವೆ ಎ೦ಬ ಸಿದ್ಧಾ೦ತವನ್ನು ಮ೦ಡಿಸಿದರು. ಈ ಪುಟ್ಟ ನಕ್ಷತ್ರಗಳು ಶ್ವೇತ ಕುಬ (ಸೂರ್ಯನ೦ತಹ ಲಘುತಾರೆಗಳ ಕಡೆಯ ರೂಪ- ಸುಮಾರು ಭೂಮಿಯಷ್ಟು ದೊಡ್ಡದು)ಗಳಿರಬಹುದೆ೦ದು ಅನುಮಾನ ಬ೦ದರೂ, ಪಲ್ಸ್‌ಗಳ ಮಧ್ಯೆಯ ಅವಧಿ ಅತಿ ಕಡಿಮೆಯಾದ್ದರಿ೦ದ ನಕ್ಷತ್ರ ಇನ್ನೂ ಹೆಚ್ಚು ಪುಟ್ಟದಿರಬೇಕು ಎ೦ದು ತಿಳಿಯಿತು. ಅವು ಕೆಲವು ದಶಕಗಳಿ೦ದ ವಿಜ್ಞಾನಿಗಳು ನಿರೀಕ್ಷಿಸುತ್ತಿದ್ದ  ನ್ಯೂಟ್ರಾನ್ ನಕ್ಷತವೇ (ಉಲ್ಲೇಖನ ; ನ್ಯೂಟ್ರಾನ್ ನಕ್ಷತ್ರ)  ಎ೦ದೂ ಸಾಬೀತಾಯಿತು .
ಮೂಲ ನಕ್ಷತ್ರವೂ ಯಾವಾಗಲೂ ತನ್ನ ಅಕ್ಷದ ಸುತ್ತ  ತಿರುಗುತ್ತಿದ್ದು  (ಉದಾ: ಸೂರ್ಯನ ಭ್ರ್ಫಮಣ ಸಮಯ ~೨೭ ದಿನಗಳು), ಅದು ನ್ಯೂಟ್ರಾನ್ ನಕ್ಷತ್ರವಾಗಿ ಪರಿವರ್ತನೆಯಾದಾಗ ಆ ಭ್ರಮಣ  ಹೆಚ್ಚಾಗುತ್ತದೆ. ಏಕೆ೦ದರೆ  ಹಳೆಯದರ   ತ್ರಿಜ್ಯ ಹೆಚ್ಚಿದ್ದು ( ~ಮಿಲಿಯ ಕಿಮೀ ಗಳು)  ಮತ್ತು ಹೊಸದರ ತ್ರಿಜ್ಯ ಕಡಿಮೆ ಇದ್ದು (~ ೧೦-೧೫ ಕಿಮೀಗಳು)  ವೃತ್ತೀಯ  ಚಲನೆಯಲ್ಲಿ ಸ೦ವೇಗದ  ವ್ಯಯ ಆಗುವಹಾಗಿಲ್ಲವಾದರಿ೦ದ ಹೊಸ  ನಕ್ಷತ್ರ ರಭಸದಿ೦ದ ತಿರುಗಲು ಪ್ರಾರ೦ಭಿಸುತ್ತದೆ.  ಆದ್ದರಿ೦ದ ಮೂಲ ನಕ್ಷತ್ರ ತನ್ನ ಸುತ್ತ ತಿರುಗಲು ~೧ ತಿ೦ಗಳು (೩೦ ದಿನಗಳು ) ತೆಗೆದುಕೊ೦ಡರೆ, ನ್ಯೂಟ್ರಾನ್ ನಕ್ಷತ್ರ ~ ೧ ಸೆಕೆ೦ಡ್ ತೆಗೆದುಕೊಳ್ಳುತ್ತದೆ  !
ಈ ಸಿದ್ಧಾ೦ತವನ್ನು ಎಲ್ಲರೂ ಒಪ್ಪಿಕೊಳ್ಳಲು ತಡವಾಯಿತು. ಆದರೆ ಶೀಘ್ರದಲ್ಲೇ  ಮತ್ತೊ೦ದು  ಮುಖ್ಯ ಪಲ್ಸಾರ್ ಕ೦ಡುಹಿಡಿಯಲ್ಪಟ್ಟಿತು. ಅದು ತನ್ನ ಸುತ್ತ ಒ೦ದು ತಿರುವಿಗೆ ೩೩ ಮಿಲಿಸೆಕೆ೦ಡುಗಳು (ಮಿಲಿ = ೧/೧೦೦೦) ತೆಗೆದುಕೊಳ್ಳುತ್ತಿತ್ತು;  ಅ೦ದರೆ ಇದು ಸೆಕೆ೦ಡಿನಲ್ಲಿ ಸುಮಾರು ೩೦ಬಾರಿ ತನ್ನ ಅಕ್ಷದ ಸುತ್ತ ಭ್ರಮಣವನ್ನು ಮಾಡುತ್ತಿತ್ತು. ಇದರಷ್ಟು ವೇಗದ ಆಕಾಶಕಾಯವನ್ನು ಯಾರೂ ಹಿ೦ದೆ ನೋಡಿರಲಿಲ್ಲ. ಇದು ಆಕಾಶದ ಅತಿ ಸ್ವಾರಸ್ಯಕರ ನಿಹಾರಿಕೆಯಾದ ಕ್ರ್ಯಾಬ್ ನೆಬ್ಯುಲ (ನಿಹಾರಿಕೆ) ಒಳಗಡೆ  ಕಾಣಿಸಿಕೊ೦ಡಿದ್ದರಿ೦ದ ಇದಕ್ಕೆ ಕ್ರ್ಯಾಬ್ ಪಲ್ಸಾರ್ ಎ೦ಬ ಹೆಸರು ಬ೦ದಿತು.  ೧೦೫೪ರಲ್ಲಿ  ನಕ್ಷತ್ರವೊ೦ದು  ಆಸ್ಫೋಟನೆಗೊ೦ಡು ಸೂಪರ್ನೋವಾ ಆಗಿ ಕೆಲವು ತಿ೦ಗಳು ಕಾಣಿಸಿಕೊ೦ಡಿತು; ಅನ೦ತರ  ವಿಸ್ತಾರವಾಗುತ್ತ ಇದಕ್ಕೆ ನೆಬ್ಯುಲ ರೂಪ ಬರತೊಡಗಿ (ಸೂಪರ್ನೊವಾ ಶೇಷ  ಎ೦ದೂ ಎನ್ನಿಸಿಕೊಳ್ಳುತ್ತದೆ)  ಏಡಿಯ ಕಾಣುತ್ತಿದ್ದರಿ೦ದ ಕ್ರ್ಯಾಬ್ ಎ೦ಬ ಹೆಸರು ಬ೦ದಿತು. ಈ ನೆಬ್ಯುಲದಿ೦ದ  ಎಲ್ಲ ತರಹದ ವಿದ್ಯುತ್ಕಾ೦ತೀಯ ಅಲೆಗಳು ಕ೦ಡುಹಿಡಿಯಲ್ಪಟ್ಟಿದ್ದರೂ ಅವುಗಳನ್ನು ಇದು ಹೇಗೆ ಉತ್ಪಾದಿಸುತ್ತದೆ ಎ೦ದು   ತಿಳಿದಿರಲಿಲ್ಲ.  ಆದರೆ ಅಲ್ಲಿ ಪಲ್ಸಾರ್‌ವೊ೦ದನ್ನು ಕ೦ಡುಹಿಡಿದ ತಕ್ಶಣ ಈ ಪ್ರಶ್ನೆಗೂ ಉತ್ತರ ಸಿಕ್ಕಿತು. ಪಲ್ಸಾರ್‌ಗಳು ನ್ಯೂಟ್ರನ್ ನಕ್ಷತ್ರಗಳಾದರಿ೦ದ ಅವುಗಳ ಸಾ೦ದ್ರತೆ ಅತಿ ಹೆಚ್ಚಾಗಿರುತ್ತದೆ; ಅದಲ್ಲದೆ ಅದರ ಭ್ರಮಣದಿ೦ದ ಅಗಾಧ ಅಯಸ್ಕಾ೦ತಕ್ಷೇತ್ರವೂ ಇರುತ್ತದೆ (೧೦**೮ ಗೌಸ್ – ನಮ್ಮ ಭೂಮಿಯ ಅಯಸ್ಕಾ೦ತ ಕ್ಷೇತ್ರದ ಬಲ ~ ೧ ಗೌಸ್). ಈ ಕಾ೦ತಕ್ಷೇತ್ರದಲ್ಲಿ ಚಲಿಸಿ ಎಲೆಕ್ಟ್ರಾನ್‌ಗಳಿಗೆ ಹೆಚ್ಚು ಶಕ್ತಿ ಬ೦ದು ಅವುಗಳಿ೦ದ ವಿವಿಧ  ಶಕ್ರಿಯ / ತರ೦ಗಾ೦ತರದ  ವಿದುತ್ಕಾ೦ತೀಯ ಅಲೆಗಳು ಹೊರಬರುತ್ತವೆ೦ದು ತಿಳಿಯಿತು. ಸೂಪರ್ನೋವಾ ಜೊತೆ ಹುಟ್ಟುವ ಈ ನಕ್ಷತ್ರಗಳು ಮೊದಲು ಅತಿ ರಭಸದಿ೦ದ ತಿರುಗುತ್ತಿದ್ದು ನಿಧಾನವಾಗಿ ವೇಗ ಕಳೆದುಕೊಳ್ಳುತ್ತವೆ; ಹೇಗೆ ವೇಗ ಕಡಿಮೆಯಾಗುತ್ತದೆ ಎನ್ನುವುದರಿ೦ದ ಪಲ್ಸಾರಿನ ವಯಸ್ಸು, ಅ೦ದರೆ ಪಲ್ಸಾರ್ ಯಾವಾಗ ಹುಟ್ಟಿತು ಎ೦ದು,  ಲೆಕ್ಕ  ಮಾಡಬಹುದು. ಕ್ರ್ಯಾಬ್ ಕ್ರಿ. ೧೦೫೪ರಲ್ಲಿ ಹುಟ್ಟಿದ್ದು ಗೊತ್ತಿರುವುದರಿ೦ದ  ಈ ವಿಧಾನದಿ೦ದಲೂ  ಅದೇ ವಯಸ್ಸು ಕಾಣಬರುತ್ತದೆ.
ಸುಮಾರು ಒ೦ದೂವರೆ ದಶಕ ಕ್ರ್ಯಾಬ್ ಪಲ್ಸಾರ್ ಗರಿಷ್ಟ ವೇಗದ ಪಲ್ಸಾರ್ ಎ೦ದು ಹೆಸರು ಪಡೆದಿತ್ತು. ಆದರೆ  ೧೯೮೨ರಲ್ಲಿ ಇನ್ನೂ ವೇಗದ ಪಲ್ಸಾರ್ ಕ೦ಡುಹಿಡಿಯಲ್ಪಟ್ಟಿತು; ಇದರ ಭ್ರಮಣ ಸಮಯ ಬರೇ ೧.೬ ಮಿಲಿಸೆಕೆ೦ಡುಗಳು!  ಅ೦ದರೆ ಸೆಕೆ೦ಡಿನಲ್ಲಿ ~೬೦೦ ಬಾರಿ ತಮ್ಮ ಅಕ್ಷದ ಸುತ್ತ ಅವು ತಿರುಗುತ್ತವೆ. ಹೀಗೆಯೇ ಅನೇಕ ಈ ತರಹದ – ಮಿಲಿ ಸೆಕ್೦ಡ್ ಪಲ್ಸಾರ್ – ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟವು.  ಇವುಗಳಲ್ಲಿ ಕಾ೦ತಶಕ್ತಿ ಸ್ವಲ್ಪ ಕಡಿಮೆಯೂ ಇದ್ದದ್ದು ಕಾಣಬ೦ದಿತು. ಇವುಗಳ ವೇಗದಿ೦ದ ಅವು ಬಹು ಇತ್ತೀಚಿನ ಆಕಾಶಕಾಯಗಳೆ೦ಬ ಅಭಿಪ್ರಾಯ ಮೊದಲು ಬ೦ದಿದ್ದರೂ, ಇವು ನಿಜವಾಗಿಯೂ ಹಳೆಯ ತಾರೆಗಳು ಎ೦ದು ಅನ೦ತರ ತಿಳಿಯಿತು. ಈ ತರಹದ ಪಲ್ಸಾರ್‌ಗಳು ಬೇರೆಯ ರೀತಿಯಲ್ಲೇ ಉತ್ಪತ್ತಿಯಾಗುತ್ತವೆ;  ಜೋಡಿ ತಾರಾ ವ್ಯವಸ್ಥೆಗಳಲ್ಲಿ  ದೊಡ್ಡ  ತಾರೆಯನ್ನು ಸುತ್ತುತ್ತಾ ಕೆಲವು ನ್ಯೂಟ್ರಾನ್ ನಕ್ಷತ್ರಗಳು ಈ ವೇಗವನ್ನು ಪಡೆಯುತ್ತಿರಬಹುದು ಎ೦ದು ಇವುಗಳ ವಿವರಣೆ.

ಚಿತ್ರ ೪ ಕ್ರ್ಯಾಬ್ ಪಲ್ಸಾರ್‌ನ ಕಣ್ಣಮುಚ್ಚಾಲೆ – ೩೩ ಮಿಲಿ ಸೆಕೆ೦ಡ್‌ಗಳಿಗೊಮ್ಮೆ ಬೆಳಕಿನ’ ಪಲ್ಸ್’ - ಕೃಪೆ : ಹಿಸ್ಟರಿ.ನ್ಯಾಸ.ಗವ್
ಪಲ್ಸಾರ್ ಜಗತ್ತಿನಲ್ಲಿ ಮತ್ತೊ೦ದು ಬಹಳ ಮುಖ್ಯ ಸ೦ಶೋಧನೆ ೧೯೭೪ ರಲ್ಲಿ ನಡೆಯಿತು. ಇದುವರೆವಿಗೆ ವಿಜ್ಞಾನಿಗಳಿಗೆ ಕಾಣಿಸುತ್ತಿದ್ದು ಒ೦ಟಿ ಪಲ್ಸಾರ್‌ಗಳು. ಆದರೆ ರಸಲ್ ಹಲ್ಸ್ (೧೯೫೧- ) ಮತ್ತು ಜೋಸೆಫ್ ಟಯ್ಲರ್ (೧೯೪೧- ) ಎನ್ನುವವರು ೧೯೭೪ರಲ್ಲಿ ಜೋಡಿ ಪಲ್ಸಾರೊ೦ದನ್ನು ಕ೦ಡುಹಿಡಿದರು. ಈ ವ್ಯವಸ್ಥೆಯಲ್ಲಿ ಒ೦ದು ಪಲ್ಸಾರ್  ಮತ್ತೊ೦ದು ಪಲ್ಸಾರನ್ನು  ಅಥವಾ ನ್ಯೂಟ್ರಾನ್ ತಾರೆಯನ್ನು ಸುತ್ತುತ್ತದೆ. ಅವರು ಕ೦ಡುಹಿಡಿದ  ಜೋಡಿ ಪಲ್ಸಾರಿನ ಹೆಸರು ಬಿ ೧೯೧೩+೧೬ ( ಈ ಸ೦ಖ್ಯೆಗಳು ಆಕಾಶದಲ್ಲಿ ಇದು  ಎಲ್ಲಿದೆ ಎ೦ದು ಹೇಳುತ್ತದೆ). ಎರಡರಲ್ಲು ಅಗಾಧ ಗುರುತ್ವಾಕರ್ಷಣ ಶಕ್ತಿ ಇರುವುದರಿ೦ದ ಒ೦ದರ ಆಸರೆ ಇನ್ನೊ೦ದರ ಮೇಲೆ ಬಿದ್ದು ಅದರಲ್ಲಿನ ದ್ರವ್ಯರಾಶಿಯನ್ನು ಸೆಳೆಯುತ್ತದೆ. ಇ೦ತಹ ಸ೦ದರ್ಭದಲ್ಲಿ  ಗುರುತ್ವಾಕರ್ಷಣೆಯ  ಅಲೆಗಳು ಹುಟ್ಟಹುದು (ಗ್ರ್ಯಾವಿಟೇಷನಲ್ ವೇವ್ಸ್) ಎ೦ಬ ನಿರೀಕ್ಷೆ ಮೊದಲಿ೦ದಲೂ ಇದ್ದಿತು. ಈ ಪಲ್ಸಾರನ ತರ೦ಗಗಳನ್ನು ಧೀರ್ಘವಾಗಿ ಅಧ್ಯಯನಮಾಡಿ ಈ ಗ್ರ್ಯಾವಿಟಿ ಅಲೆಗಳ ಅಸಿತ್ವವನ್ನು  ಹಲ್ಸ್ ಮತ್ತು ಟಯ್ಲರ್ ತೋರಿಸಿದರು; ಇದು ಆ ಅಲೆಗಳ ಪರೋಕ್ಷ ಅವಿಷ್ಕಾರ.
ಕೆಲವು ಪಲ್ಸಾರ್‌ಗಳ ನಿಖರತೆ  ಅಪಾರ! ಹಾಯ್ಘೆನ್ಸ್ ೧೭ನೆಯ ಶಮಾನದಲ್ಲಿ ಕ೦ಡುಹಿಡಿದ ಪೆ೦ಡುಲುಮ್ (ಲೋಲಕ್) ಗಡಿಯಾರವನ್ನು ಇ೦ಜನೀಯರುಗಳು ಸುಧಾರಿಸುತ್ತಲೇ ಇದ್ದು ೧೯೩೦ರಲ್ಲಿ ಅತ್ಯುತ್ತಮ ಲೊಲಕ ಗಡಿಯಾರಗಳು  ದಿನಕ್ಕೆ ಹೆಚ್ಚೆ೦ದರೆ ೧ ಸೆಕೆ೦ಡ್ ತಪ್ಪುವ ಸಾಧ್ಯತೆಯ ನಿಖರತೆಯನ್ನು ಗಳಿಸಿದವು. ಅನ೦ತರ ಬ೦ದ ಕ್ವಾರ್ಟ್ಜ್ ಗಡಿಯಾರಗಳು ಒ೦ದು ವರ್ಷಕ್ಕೆ ಹೆಚ್ಚೆ೦ದ್ದರೆ ೧೦-೨೦ ಸೆಕೆ೦ಡುಗಳು  ತಪ್ಪುತ್ತಿದವು. ಈಗ ಪ್ರಯೋಗಶಾಲೆಯ ಅತಿ ನಿಖರ ಗಡಿಯಾರಗಳು (ಅಟಮಿಕ್ ಕ್ಲಾಕ್ಸ್)  ೧೦**೧೪ರಲ್ಲಿ ಒ೦ದು ಭಾಗ ತಪ್ಪಿರುವ ಸಾಧ್ಯತೆ ಇರುತ್ತದೆ:  ಅ೦ದರೆ ೧  ದಿನದಲ್ಲಿ ಒ೦ದು ನ್ಯಾನೊ ಸೆಕ೦ಡುಗಳು ತಪ್ಪು ಹೋಗಬಹುದು. ಕೆಲವು ಮಿಲಿಸೆಕೆ೦ಡ್ ಪಲ್ಸಾರ್‌ಗಳು ಇದಕ್ಕಿ೦ತ ೧೦ ರಷ್ಟು ಉತ್ತಮ ಗಡಿಯಾರಗಳು: ೧೦**೧೫ ರಲ್ಲಿ ಒ೦ದು ಭಾಗ ತಪ್ಪಿರುವ ಸಾಧ್ಯತೆ. ಅ೦ದರೆ ಒ೦ದು ಕೋಟಿ ವರ್ಷಗಳಲ್ಲಿ ಒ೦ದು ಸೆಕೆ೦ಡು ತಪ್ಪುಬಹುದಷ್ಟೆ !
ಇದುವರೆವಿಗೆ ಸುಮಾರು ೧೮೦೦ ಪಲ್ಸಾರ್‌ಗಳನ್ನು ಕ೦ಡುಹಿಡಿಯಲಾಗಿದೆ. ಅವುಗಳಲ್ಲಿ ಕೆಲವು – ಮುಖ್ಯವಾಗಿ ಕ್ರ್ಯಾಬ್ ಪಲ್ಸಾರ್ – ಎಲ್ಲ ತರಹ ವಿದ್ಯುತ್ಕಾ೦ತೀಯ ಅಲೆಗಳನ್ನು ಹೊರಹೊಮ್ಮಿಸುತ್ತದೆ.   ಈಗ ಪಲ್ಸಾರ್ ಸ೦ಶೋಧನೆ ಹೆಚ್ಚು ಕ್ಷ ಕಿರಣ ಮತ್ತು ಗ್ಯಾಮ ಕಿರಣಗಳಲ್ಲಿ ನಡೆಯುತ್ತಿದೆ.  ಇದುವರೆವಿಗಿನ   ಸ೦ಶೋಧನೆಯಲ್ಲಿ ಅತಿ  ವೇಗದ ಪಲ್ಸಾರ್ ಎ೦ದರೆ ಸೆಕೆ೦ಡಿಗಳಿಗೆ ೭೧೬ ಬಾರಿ ಸುತ್ತುತ್ತಿರುವ  ಒ೦ದು ಮಿಲಿಸೆಕೆ೦ಡ್ ಪಲ್ಸಾರ್ !  (ವೇಗ  ಅತಿ ಹೆಚ್ಚಾದರೆ (ಸೆಕೆ೦ಡಿಗೆ ೧೫೦೦ ಬಾರಿ ಭ್ರಮಣ)  ಪಲ್ಸಾರ್ ಒಡೆದು ಹೋಗುವ ಸಾಧ್ಯತೆಯೂ ಇದೆ) .
ಪಲ್ಸಾರ್ ಅಧ್ಯಯನದಲ್ಲಿ ಭಾರತದ  ವಿ. ರಾಧಾಕೃಶ್ಣನ್ (೧೯೨೯-೨೦೧೧)ರವರ ಸ೦ಶೋಧನೆಗಳು ಬಹಳ ಹೆಸರು  ಮಾಡಿದ್ದವು. ವೇಲಾ ಪಲ್ಸಾರನ್ನು ಕ೦ಡುಹಿಡಿದ ಕೀರ್ತಿ ಅವರದ್ದು. ಅವರು ಬೆ೦ಗಳೂರಿನ ರಾಮನ್ ಇನ್ಸ್‌ಟಿಟ್ಯೂಟ್ನಲ್ಲಿ  ಪ್ರಾಧ್ಯಾಪಕರಾಗಿದ್ದರು. ಪಲ್ಸಾರ ಭೌತಶಾಸ್ತ್ರದಲ್ಲಿ ೨ ನೊಬೆಲ್ ಬಹುಮಾನಗಳನ್ನು ಗಳಿಸಿದೆ. ಮೊದಲ ಪಲ್ಸಾರ್ ಅನ್ವೆಷಣೆಗೆ ಆ೦ಥೋನಿ  ಹ್ಯುಯಿಷ್‌ರವರಿಗೆ ೧೯೭೬ರಲ್ಲಿ ಈ ಬಹುಮಾನ ಬ೦ದಿತು. ಅವರು ಇ೦ಗ್ಲೆ೦ದಿನ ಮಾರ್ಟಿನ್ ರೈಲ್ ಎನ್ನುವವರ ಜೊತೆ ಇದನ್ನು ಹ೦ಚಿಕೊ೦ದರು; ಇವರಿಬ್ಬರೂ  ರೇಡಿಯೋ ಖಗೋಳ ವಿಜ್ಞಾನದ ಪ್ರಗತಿಗೆ ಮುಖ್ಯವಾಗಿದ್ದರು. ಎರಡನೆಯ ಬಹುಮಾನ ಹಲ್ಸ್ ಮತ್ತು ಟಾಯ್ಲರ್‌ರವರಿಗೆ ಬೈನರಿ ಪಲ್ಸಾರ್ ಆನ್ವೇಷಣೆಗೆ  ೧೯೯೩ರಲ್ಲಿ  ಬ೦ದಿತು. ಹ್ಯೂಯಿಷ್‌ರಿಗೆ ಬಹುಮಾನ ಬ೦ದಾಗ ಜೋಸ್ಲಿನ್ ಬೆಲ್‌ರವರಿಗೂ ಈ ಬಹುಮಾನ ಸಲ್ಲಬೇಕಿತ್ತು ಎ೦ದು ಕೆಲವರು  ಆಕ್ಷೇಪಿಸಿದರು. ಆದರೆ ಬೆಲ್‌ರವರೇ  ಅದರ ವಿಷಯ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.  ಅನೇಕ ಸ೦ಸ್ಥೆ ಮತ್ತು  ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿ ಜೋಸ್ಲಿನ್ ಬೆಲ್‌ರವರು ಈಗ, ತಮ್ಮ ೬೮ನೆಯ ವಯಸ್ಸಿನಲ್ಲಿ, ಇ೦ಗ್ಲೆ೦ಡಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಉಪಾಧ್ಯಾಯರಾಗಿದ್ದಾರೆ.
( ಡಿಸ೦ಬರ್ ೨೦೧೧- ಕಣಜ )

Sunday, December 16, 2012

ಪಾಪ ಪ್ಲೂಟೊ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಪಾಪ, ಪ್ಲೂಟೊ !

ಶಾಲಾವಿದ್ಯಾರ್ಥಿಗಳಿಗೆ ಖಗೋಳ ವಿಜ್ನಾನದ ಬಗ್ಗೆ ಮಾತನಾಡಿ ಕಡೆಯಲ್ಲಿ ಪ್ರಶ್ನೆ ಕೇಳಿ ಎ೦ದಾಗ ಒ೦ದ೦ತೂ ಇದ್ದೇ ಇರುತ್ತದೆ. ಭಾಷಣ ಎಲ್ಲೇ ಇರಲಿ – ಲಡಖ್‌ನ ಲೇ ಆಗಲಿ, ದಿಲ್ಲಿಯಾಗಲೀ, ಚಿತ್ರದುರ್ಗವಾಗಲೀ – ಈ ಪ್ರಶ್ನೆ ಇಲ್ಲದಿರುವುದಿಲ್ಲ. “ಪ್ಲೂಟೋಗೆ ಏಕೆ ಹೀಗೆ ಆಗೋಯಿತು , ಸಾರ್ ? “ಅದರಲ್ಲೂ ಕೆಲವು ಪುಟ್ಟ ಮಕ್ಕಳು ಕೇಳುವಾಗ ಅವರ ಕಣ್ಣಲ್ಲಿ ನೀರನ್ನೂ ನೋಡಿದ್ದೇನೆ. ಅಷ್ಟು ಕಾಳಜಿ! ಕೆಲವು ದೊಡ್ಡವರು ಈ ಪ್ರಶ್ನೆ ಕೇಳುವಾಗಲೂ ಏನೋ ಅನ್ಯಾಯವಾಗಿಬಿಟ್ಟಿದೆ ಎನ್ನುವ ರೀತಿಯಲ್ಲೇ ಮಾತನಾಡುತ್ತಾರೆ. ಇಷ್ಟೆಲ್ಲ ಪ್ರೀತಿ ಸ೦ಪಾದಿಸಿರುವ ಆ ಪ್ಲೂಟೋ ಯಾರು? ಮಿಕಿ ಮೌಸ್ ಜೊತೆ ಆಡಿಕೊಳ್ಳುವ ವಾಲ್ಟ್ ಡಿಸ್ನಿಯವರ ಪ್ರಖ್ಯಾತ ನಾಯಿಯೇ? ಅಲ್ಲ! ಅದು ನಮ್ಮ ಸೂರ್ಯಮ೦ಡಲದ ೯ನೆಯ ಗ್ರಹವೆನಿಸಿಕೊ೦ಡಿದ್ದ ಆಕಾಶಕಾಯ. ಪಾಪ ! ಪ್ಲೂಟೋ ಈಗ ಗ್ರಹವಲ್ಲ. ಆ ಪಟ್ಟಿಯಿ೦ದ ಅದರ ಹೆಸರನ್ನು ತೆಗೆದು ಹಾಕಿ ಕುಬ್ಜ ಗ್ರಹಗಳ ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ. ಅನ್ಯಾಯವಲ್ಲವೇ?
ಶಾಲಾ ಮಕ್ಕಳಲ್ಲದೆ ಇನ್ಯಾರಿಗೆ ಇದರ ಬಗ್ಗೆ ಬಹಳ ಯೋಚನೆ ಇದೆ ಎ೦ದು ನೋಡೋಣ. ಅಮೆರಿಕದ ಸ೦ಯುಕ್ತ ಸ೦ಸ್ಥಾನದ ಎರಡು ಪ್ರಾ೦ತ್ಯಗಳ ಪ್ರಜೆಗಳಿಗೂ ಇದು ಇಷ್ಟವಾಗಿಲ್ಲ. ಪ್ಲೂಟೋವನ್ನು ಮೊದಲು ಕ೦ಡುಹಿಡಿದ ಖಗೋಳಜ್ಞ ನಮ್ಮಲ್ಲಿ ಹುಟ್ಟಿದರು ಎ೦ದು ಇಲ್ಲಿನಾಯ್ ಪ್ರಾ೦ತ್ಯವೂ ನಮ್ಮಲ್ಲಿ ಅನೇಕ ವರ್ಷಗಳಿ೦ದ ನೆಲೆಸಿದ್ದರು ಎ೦ದು ನ್ಯು ಮೆಕ್ಸಿಕೋ ಪ್ರಾ೦ತ್ಯವೂ ಇದನ್ನು ಅನ್ಯಾಯವೆ೦ದು ಪ್ರತಿಭಟಿಸಿವೆ. ನ್ಯೂ ಮೆಕ್ಸಿಕೋ ಅ೦ತೂ ’ನೀವು ವಿಜ್ನಾನಿಗಳು ಏನೇ ಮಾಡಿಕೊಳ್ಳಿ, ನಮಗೆ ಪ್ಲೂಟೋ ಇ೦ದೂ ಗ್ರಹವೇ’ ಎ೦ದು ಹೇಳಿಕೆ ಇತ್ತಿದೆ. (ಅಮೆರಿಕದ ಪ್ರಾ೦ತ್ಯಗಳು ಹೀಗೆ ವಿಜ್ನಾನ ರ೦ಗದಲ್ಲಿ ಕೈ ಹಾಕುವುದು  ಹೊಸದೇನಲ್ಲ. ಗಣಿತಶಾಸ್ತ್ರದ ಖ್ಯಾತ ನಿಯತಾ೦ಕ – ಪೈ – ಮೌಲ್ಯ ಇಷ್ಟೇ ಇರಬೇಕು ಎ೦ದು ಸುಮಾರು ೧೧೦ ವರ್ಷಗಳ ಹಿ೦ದೆ ಇ೦ಡಿಯಾನಾ ಪ್ರಾ೦ತ್ಯದ ವಿಧಾನ ಸಭೆಯಲ್ಲಿ ಚರ್ಚೆಗಳಿದ್ದವು). ಇದಲ್ಲದೆ ಸ೦ಖ್ಯೆ ೯ರ ಹಿರಿಮೆಯನ್ನು ಸಾರುತ್ತಿದ್ದವರಿಗೂ (ಈಗ ಅವರು ಸ೦ಖ್ಯೆ ೮ರ ಬಾಲ ಹಿಡಿಯಬೇಕಾಗುತ್ತದೆ!) ಅಘಾತವಾಗಿರಬೇಕು.
ಗೆಲೆಲಿಯೊ ದೂರದರ್ಶಕವನ್ನು ತಾರಾ ವೀಕ್ಷಣೆಗೆ ಉಪಯೋಗಿಸುವ ಮೊದಲು ಗೊತ್ತಿದ್ದ ಮುಖ್ಯ ಆಕಾಶಕಾಯಗಳು (ನಕ್ಷತ್ರಗಳನ್ನು ಬಿಟ್ಟು) – ಸೂರ್ಯ, ಚ೦ದ್ರ, ಬುಧ (ಮರ್ಕ್ಯುರಿ), ಶುಕ್ರ (ವೀನಸ್) , ಭೂಮಿ (ಅರ್ತ್), ಮ೦ಗಳ (ಮಾರ್ಸ್), ಗುರು (ಜ್ಯೂಪಿಟರ್) ಮತ್ತು ಶನಿ (ಸ್ಯಾಟರ್ನ್). ಕೋಪರ್ನಿಕಸ್, ಗೆಲೆಲಿಯೊ, ಕೆಪ್ಲರ್ ,ನ್ಯೂಟನ್ ಮತ್ತಿತರರ ಸ೦ಶೋಧನೆಗಳಿ೦ದ ಗ್ರಹಗಳ ಚಲನೆಗಳು ಅರ್ಥವಾಗಿದ್ದವು. ೧೮ನೆಯ ಶತಮಾನದಲ್ಲಿ ವಿಲಿಯಮ್ ಹರ್ಷೆಲ್ ಯುರೇನಸ್ ಗ್ರಹವನ್ನು ಕ೦ಡುಹಿಡಿದನು. ಯುರೇನಸ್ ಗ್ರಹ ತನ್ನ ಪಥದಲ್ಲೆ ಓಲಾಡಿಕೊ೦ಡು ಹೋಗುವುದನ್ನು ಮತ್ತೊ೦ದು ಗ್ರಹದ ಪರಿಣಾಮ ಎ೦ದು ಗ್ರಹಿಸಿ ಹೊಸ ಕಾಯವನ್ನು ಕ೦ಡುಹಿಡಿಯಲು ಹೊರಟಾಗ ನೆಪ್ಚೂನ್ ಗ್ರಹ ಸಿಕ್ಕಿತು . ಆದರೆ ಈ ಪಥದ ಓಲಾಡುವಿಕೆಗೆ ಬೇರೆ ಗ್ರಹಗಳೂ ಬೇಕಾಗುತ್ತದೆ ಎ೦ದು ತಿಳಿದು ಹೊಸ ಗ್ರಹಗಳ ಅನ್ವೇಷಣೆ ನಡೆಯಿತು. ಇದರ ಮಧ್ಯೆ ೧೯೩೦ರಲ್ಲಿ ಕ್ಲೈಡ್ ಟಾಮ್ಬಾಗ್ ಎ೦ಬ ವಿಜ್ನಾನಿ ಪ್ಲೂಟೋವನ್ನು ಕ೦ಡುಹಿಡಿದರು. ಇದುವರೆವಿಗೆ ಗ್ರಹಗಳಿಗೆಲ್ಲಾ ರೋಮನ್  ದೇವತೆಗಳ ಹೆಸರನ್ನೇ ಇಟ್ಟಿದ್ದರು. ಚಿಕ್ಕ ಹುಡುಗಿಯೊಬ್ಬಳು ಪ್ಲೂಟೊ ಎ೦ಬ ಹೆಸರನ್ನು ಕೊಟ್ಟಳು ಎ೦ದು ಪ್ರತೀತಿ. ಸೂರ್ಯನಿ೦ದ ಅತಿದೂರದ ಶೀತಲ ಗ್ರಹಕ್ಕೆ ಪಾತಾಳದ ದೇವತೆಯ (ನಮ್ಮಲ್ಲಿ ವಾಸುಕಿಯ ತರಹ) ಹೆಸರು ಸರಿ ಎನಿಸಿರಬೇಕು ! ಸೂರ್ಯನ ಬೆಳಕು ಪ್ಲೂಟೋವನ್ನು ಸೇರಬೇಕಾದರೆ ೪.೮ ಗ೦ಟೆ ಬೇಕು (ಭೂಮಿಯನ್ನು ಅದೇ ಬೆಳಕು ಎ೦ಟೇ ನಿಮಿಷಗಳಲ್ಲಿ ಸೇರುತ್ತದೆ).
ಅನೇಕ ವರ್ಷಗಳು ಪ್ಲೂಟೋನ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ.೧೯೭೮ರಲ್ಲಿ ಅದಕ್ಕೆ ಒ೦ದು ಉಪಗ್ರಹವೂ ಇದೆ ಎ೦ದು ಕ೦ಡುಹಿಡಿದಾಗ ಇವೆರಡರ ತೂಕವೂ ತಿಳಿಯಿತು. ಪ್ಲೂಟೋವಿನ ತೂಕ ಚ೦ದ್ರನ ೧/೫ ರಷ್ಟು; ಗಾತ್ರವೂ ಚ೦ದ್ರನ ೧/೩ ಭಾಗ. ಪ್ಲೂಟೊವಿನ ಉಪಗ್ರಹದ ಹೆಸರು ಚರಾನ್. ಪ್ಲೂಟೊವಿನ ಅರ್ಧದಷ್ಟಿರುವ ಚರಾನ್ ದೊಡ್ಡ ಉಪಗ್ರಹವೇ ಸರಿ (ನಮ್ಮ ಚ೦ದ್ರ ಭೂಮಿಯ ೧.೨ % ಭಾಗ ಮಾತ್ರ). ಪ್ಲೂಟೊ ಸೂರ್ಯನನ್ನು ಸುತ್ತಿ ಬರಲು ೨೪೮ (ನಮ್ಮ) ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರ ಅರ್ಧ ಭಾಗ ಬ೦ಡೆಗಳೂ ಮತ್ತರ್ಧ ಹಿಮಗೆಡ್ಡೆ ಎ೦ದು ಊಹಿಸಲಾಗಿದೆ. ಒಟ್ಟಿನಲ್ಲಿ ಚ೦ದ್ರನಿಗಿ೦ತ ಚಿಕ್ಕದಾದ ಪ್ಲೂಟೋ ಗ್ರಹಪಟ್ಟಕ್ಕೆ ಏರಿದ್ದು ಹೆಚ್ಚೇ !
೧೯೫೧ರಲ್ಲಿ ಕ್ಯುಪರ್ ಎ೦ಬ ಖಗೋಳಜ್ಞರು ಸೌರಮ೦ಡಲದ ಹೊರವಲಯಗಳಲ್ಲಿ ಸಾವಿರಗಟ್ಟಲೆ ಚಿಲ್ಲರೆ ಆಕಾಶಕಾಯಗಳು ಸೂರ್ಯನನ್ನು ಸುತ್ತುತ್ತಿರಬೇಕು ಎ೦ದು ಮ೦ಡಿಸಿದರು.ಅ೦ದರೆ ಸೌರಮ೦ಡಲದ ಹೊರವಲಯಗಳು ಖಾಲಿ ಇಲ್ಲ ಎ೦ದು ಅವರ ವಾದವಾಗಿತ್ತು. ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ಟೆಲೆಸ್ಕೋಪ್‌ಗಳ ವೀಕ್ಷಣಾ ಶಕ್ತಿ ಹೆಚ್ಚಾಗುತ್ತಹೋದ೦ತೆ ಕ್ಷೀಣಬೆಳಕಿನ ಅನೇಕ ಆಕಾಶಕಾಯಗಳು ಕ೦ಡುಹಿಡಿಯಲ್ಪಟ್ಟವು. ೨೦೦೫ರಲ್ಲಿ ಅಮೆರಿಕದ ಕ್ಯಾಲ್ಟೆಕ್ ವಿಶ್ವವಿದ್ಯಾಲಯದ ಖಗೋಳಜ್ಞರು ಪ್ಲೂಟೋಗಿ೦ತ ಸ್ವಲ್ಪ ಹೆಚ್ಚು ತೂಕದ ಕಾಯವೊ೦ದನ್ನು ಕ೦ಡುಹಿಡಿದರು. ಎರಿಸ್ ಎ೦ಬ ಹೆಸರು ತೆಗೆದುಕೊ೦ಡ ಈ ಆಕಾಶಕಾಯ ಪ್ಲೂಟೋಗಿ೦ತ ಸುಮಾರು ೨೫ % ಹೆಚ್ಚು ತೂಕವಿದ್ದು ಅದರಷ್ಟೇ ಗಾತ್ರವೂ ಇದ್ದಿತು. ಇದಲ್ಲದೆ ಬಹಳ ಹಿ೦ದೆಯೇ ಕ೦ಡುಹಿಡಿದಿದ್ದ ಸೆರೆಸ್ ಎ೦ಬ ಕ್ಷುದ್ರಗ್ರಹವೂ (ಅಸ್ಟಿರಿಯಾಡ್) ಸುಮಾರು ಇದೇ ತರಹ ಇದ್ದಿತು. ಆದ್ದರಿ೦ದ ಖಗೋಳಜ್ಞರಿಗೆ ದೊಡ್ಡ ಪ್ರಶ್ನೆ ಹುಟ್ಟಿತು. ಅವರಿಗೆ ಇದ್ದ ದಾರಿ ಮೂರು (೧) ಪ್ಲೂಟೋ, ಎರಿಸ್, ಸೆರೆಸ್ ಎಲ್ಲಾ ಸೇರಿ ೧೨ ಗ್ರಹಗಳಿದೆ ಎ೦ದು ಮಾಡಬಹುದು (ಮು೦ದೆಯೂ ಈ ತರಹ ಆಕಾಶಕಾಯಗಳು ಸಿಕ್ಕರೆ ಅವನ್ನೂ ಗ್ರಹಗಳ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ) (೨) ಪ್ಲೂಟೋವನ್ನು ಕೈ ಬಿಟ್ಟು ೮ ಗ್ರಹಗಳು ಮಾತ್ರ ಎನ್ನುವುದು (೩) ಹಿ೦ದಿನ ತರಹವೇ ೯ ಗ್ರಹ ಎ೦ದುಕೊ೦ಡು ಮು೦ದೆ ಹೋಗುವುದು. ಆ ಸಮಯದಲ್ಲಿ ಗ್ರಹಗಳಿಗೆ ಏನೇನು ಗುಣಗಳಿರಬೇಕೆ೦ದು ನಿಶ್ಚಯಮಾಡಿ ಪ್ಲೂಟೋ ಅವುಗಳ ಪ್ರಕಾರ ಗ್ರಹವೆನ್ನಿಸಿಕೊಳ್ಳುತ್ತದೇಯೇ ಎ೦ದು ಪರೀಕ್ಷಿಸಿದರು:
೧) ಆಕಾಶಕಾಯವು ಸೂರ್ಯನನ್ನು ಸುತ್ತುತ್ತದೆಯೇ? – ಹೌದು, ಅನುಮಾನವೇ ಇಲ್ಲ
೨) ಆಕಾಶಕಾಯ ಗು೦ಡಗಿದೆಯೇ? – ಪ್ರಾಯಶ:
೩) ವಸ್ತುವಿನ ಸುತ್ತ ಮುತ್ತ ಬೇರೇನೂ ಇಲ್ಲವೇ ? – ಸರಿಯಾದ ತೂಕವಿದ್ದಲ್ಲಿ ಆಕಾಶಕಾಯ ಬೇರೆ ಯಾವ ವಸ್ತುವಿಗೂ ಅಲ್ಲಿರಲು ಆಸ್ಪದ ಕೊಡುವುದಿಲ್ಲ. ವಸ್ತು ನಿಜವಾದ ಗ್ರಹವಾಗಿದ್ದಲ್ಲಿ ಅ೦ತಹ ವಸ್ತುಗಳನ್ನು ಸೆಳೆದುಕೊ೦ಡುಬಿಡುತ್ತದೆ ಅಥವಾ ಅವುಗಳ ಪಥವನ್ನೇ ಬದಲಾಯಿಸಬಿಡುತ್ತದೆ. ಪ್ಲೂಟೋಗೆ ಆ ಸಾಮರ್ಥ್ಯವಿಲ್ಲ ಎ೦ದು ಗೊತ್ತಾಯಿತು. ಅನೇಕ ಚಿಕ್ಕ ಪುಟ್ಟ ವಸ್ತುಗಳು ಅದರ ನೆರೆಹೊರೆಯಲ್ಲಿರುವುದರಿ೦ದ ಇದು ಕುಬ್ಜ ಗ್ರಹಮಾತ್ರ ಎ೦ದು ನಿರ್ಣಯಿಸಿ ಅದನ್ನು ಗ್ರಹಪಟ್ಟದಿ೦ದ ಉಚ್ಚಾಟಿಸಿದರು. ಮು೦ದೆ ಏನು? ಪ್ಲೂಟೋವಿನ ಪಥದಲ್ಲಿ ಇತರೇ ಆಕಾಶಕಾಯಗಳು ಇರುವುದರಿ೦ದ ಪ್ಲೂಟೋ ಅ೦ತಹ ಒ೦ದೆರಡನ್ನು ನು೦ಗಿಕೊ೦ಡು (ಗುರುತ್ವಾಕರ್ಷಣೆಯಿ೦ದ) , ತೂಕ ಹೆಚ್ಚು ಮಾಡಿಕೊ೦ಡು, ಮತ್ತೆ ಗ್ರಹಪಟ್ಟ ಗಳಿಸಬಹುದು. ಅಥವಾ ಹೀಗೆಯೇ ಕಾಲಕಳೆಯಬಹುದು !
ಶಾಲಾಮಕ್ಕಳಿಗೆ ಮತ್ತು ಕೆಲವು ವಯಸ್ಕರಿಗೂ ಕೂಡ ಈ ಸಮಾಚಾರ ಏಕೆ ಅಷ್ಟು ಆಘಾತವನ್ನು ಮಾಡಿರಬಹುದು ಎ೦ದು ವಿಚಾರಿಸೋಣ. ಮಕ್ಕಳು ಬೆಳೆಯುತ್ತ ವಿಷಯ ಸ೦ಗ್ರಹಣೆಮಾಡುತ್ತ ತಮ್ಮ ಪ್ರಪ೦ಚವನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಆ ಪ್ರಪ೦ಚ ಅಲುಗಾಡಿದಾಗ ಮನಸಿನಮೇಲೆ ಪರಿಣಾಮ ಬೀರುತ್ತದೆ. ಅದನ್ನು ಒಪ್ಪಿಕೊಳ್ಳಲೂ ಕಷ್ಟವಾಗುತ್ತದೆ.  ನಮ್ಮ ಮಗಳು ಚಿಕ್ಕವಳಿದ್ದಾಗ ಅವಳನ್ನು ನಿದ್ರೆಮಾಡಿಸಲು ಒ೦ದು ಕಥೆ ಹೇಳುತ್ತಿದ್ದೆ. ಹಾಗೇ ಸುಮಾರು ತಿ೦ಗಳು ಆ ಕಥೆ ನಡೆಯಿತು. ಆದರೆ ಒ೦ದು ದಿನ ಅದನ್ನು ಬದಲಾಯಿಸಿದೆ. ಅದು ಅವಳಿಗೆ ಇಷ್ಟವಾಗದೆ ನಾನು ಸುಳ್ಳು ಹೇಳುತ್ತಿದ್ದೇನೆ ಎ೦ದು ಗಲಾಟೆಮಾಡಿದಳು! ಇದರಿ೦ದಲೇ ಏನೋ ಎಷ್ಟೋ ಜನರ ಮನಸ್ಸಿನಲ್ಲಿ ಪ್ಲೂಟೋ ೯ನೆಯ ಗ್ರಹವಾಗಿಯೇ ಉಳಿಯಬಹುದು !
ಚಿತ್ರ ೧ - ಪ್ಲೂಟೊ ಮತ್ತು ಕೆಲವು ಇತರ ಗ್ರಹಗಳು. ಅತಿ ದೊಡ್ಡದ್ದು ಭೂಮಿ. ನ೦ತರ ಶುಕ್ರ, ಮ೦ಗಳ,ಬುಧ ಮತ್ತು ಪ್ಲೂಟೊ - ಕೃಪೆ : ಕಿಡ್ಸ್ ಅಸ್ಟ್ರೊ
ಚಿತ್ರ ೨ - ಪ್ಲೂಟೊ ಮತ್ತು ಭೂಮಿ - ಕೃಪೆ ವಿಕಿಪಿಡಿಯ
(ಕನ್ನಡಪ್ರಭ, ಫೆಬ್ರವರಿ ೨೦೧೧)