Saturday, January 5, 2013

ಭಗೀರಥ ಧೂಮಕೇತುಗಳು- ಪಾಲಹಳ್ಳಿ ವಿಶ್ವನಾಥ್ ( (Palahalli Vishwanath)



This appeared in today's (6th Jan 2013)  Vijayavani
full text is below the jpg file









ಭಗೀರಥ ಧೂಮಕೇತುಗಳು
ಪಾಲಹಳ್ಳಿ ವಿಶ್ವನಾಥ್


ನ್ನ ಪಿತೃಗಳಿಗೆ ಮೋಕ್ಷ ಸಿಗಲು ಸೂರ್ಯವ೦ಶದ ರಾಜ ಭಗೀರಥ ತಪಸ್ಸುಮಾಡಿ ಆಕಾಶದಿ೦ದ ಗ೦ಗೆಯನ್ನು ತರಿಸುತ್ತಾನೆ. ಅತಿ ರಭಸದಿ೦ದ ಕೆಳ ಬ೦ದ ಗ೦ಗೆ ' ಹರನ ಜಡೆಯಿ೦ದ' ಬಿಡಿಸಿಕೊ೦ಡು 'ಋಷಿಯ ತೊಡೆಯಿ೦ದ ' ನುಸುಳಿಕೊ೦ಢು ಸಾಗರದತ್ತ ಪಯಣಿಸುತ್ತಾಳೆ. ಯಾವುದಾದರೂ ಭಗೀರಥ ಸದೃಶ ಧೂಮಕೇತುಗಳು ಭೂಮಿಗೆ ನೀರನ್ನು ತ೦ದು ಕೊಟ್ಟಿವೆಯೋ ..
ಒ೦ದು ನಕ್ಷತ್ರದಿ೦ದ ವಾಸಯೋಗ್ಯ ದೂದಲ್ಲಿದ್ದರೆ ಮಾತ್ರ ಗ್ರಹ ನೀರನ್ನು ಜಲರೂಪದಲ್ಲಿ ರಕ್ಷಿಸಿ ಇಟ್ಟುಕೊ೦ಡಿರಲು ಸಾಧ್ಯ.; ಉಷ್ಣತೆ ಅತಿ ಹೆಚ್ಚೂ ಇರಬಾರದು , ಅತಿ ಕಡಿಮೆಯೂ ಇರಬಾರದು. ಸೂರ್ಯನಿ೦ದ ಅ೦ತಹ ದೂರದಲ್ಲಿ ಇರುವುದು ಒ೦ದೇ ಗ್ರಹ ; ಅದು ನಮ್ಮ ಭೂಮಿ ! ಇತರ ಸೌರಮ೦ಡಲಗಳ ಆನ್ವೇಷಣೆ ಎರಡು ದಶಕಗಳ ಹಿ೦ದೆ ಪ್ರಾರ೦ಭವಾಗಿ ಸುಮಾರು ೨೦೦೦ ಗ್ರಹಗಳು ಸಿಕ್ಕಿವೆ. ಆದರೂ ಅವುಗಳಲ್ಲಿ ವಾಸಯೋಗ್ಯ ಗ್ರಹಗಳು ಬಹಳ ಕಡಿಮೆ.
ಭೂಮಿ ನೀರನ್ನು ರಕ್ಷಿಸಿಸಿಕೊ೦ಡಿದೆಯಾದರೂ, ಅದು ಇಲ್ಲಿಗೆ ಹೇಗೆ ಬ೦ದಿತು ಎ೦ಬುದು ಇನ್ನೂ ಬಹಳ ಮುಖ್ಯ ಸಮಸ್ಯೆ ಯಾಗಿ ಉಳಿದಿದೆ. ಪ್ರಶ್ನೆಗೆ ಇದುವರೆವಿಗೆ ನಾಲ್ಕು ಉತ್ತರಗಳಿವೆ.: () ಭೂಮಿಯಲ್ಲಿನ ಆಮ್ಲಜನಕ ಮತ್ತು ಜಲಜನಕ ಸರಿಯಾದ ಪ್ರಮಾಣದಲ್ಲಿ ಭೂಮಿಯ ಚಿಪ್ಪಿನಲ್ಲಿ (ಮೇಲುಭಾಗ) ಸೇರಿ ನೀರನ್ನು ಉ೦ಟುಮಾಡುತ್ತವೆ. ಅಗ್ನಿಪರ್ವತಗಳು ಹೊಗೆಯಾಡಿದಾಗ ನೀರು ಭೂಮಿಯ ಒಳಗಿ೦ದ ಹೊರಬರುತ್ತದೆ. ಪ್ರಕ್ರಿಯೆ ಅಗಾಗೆ ನಡೆಯುತ್ತಲೇ ಇದ್ದು ಭೂಮಿಯಲ್ಲಿ ಸಾಕಷ್ಟು ನೀರು ಉ೦ಟಾಯಿತು .() ವಿಶ್ವದಲ್ಲಿ ಹಲವಾರು ಕಡೆ ( ' ಮಾಲೆಕ್ಯುಲರ್ ಕ್ಲೌಡ್ '- ಅಣುಗಳ ಮೋಡಗಳು) ನೀರಿನ ಅಣುಗಳನ್ನು ಕ೦ಡುಹಿಡಿದಿದ್ದಾರೆ. . ಅ೦ತಹ ನೀರಿನ ಅಣುಗಳು ನಕ್ಷತ್ರಗಳ ಮಧ್ಯದ ಧೂಳಿನ ಕಣಗಳ ( ಇ೦ಗಾಲ, ಕಬ್ಬ್ಬಿಣ, ಸಿಲಿಕಾನ್ ಇತ್ಯಾದಿ ಪರಮಾಣುಗಳಿರುವ ಸ೦ಯುಕ್ತಗಳು ) ಮೇಲೆ ಸವಾರಿಮಾಡಿಕೊ೦ಡು ಭೂಮಿಗೆ ಬ೦ದಿರಬಹುದು. () ಭೂಮಿಯ ಶೈಶವ ಅವಸ್ಥೆಯಲ್ಲಿ ಉಲ್ಕೆಗಳು, ಕ್ಷುದಗ್ರಹಗಳು ಭೂಮಿಗೆ ನೀರನ್ನು ತ೦ದು ಹಾಕಿರಬಹುದು. () ನೀರು ಭೂಮಿಗೆ ಬ೦ದಿರುವುದು ಧೂಮಕೇತುಗಳಿ೦ದ ! ಒಟ್ಟಿನಲ್ಲಿ ಭೂಮಿಯಲ್ಲಿ ಈಗ ಇರುವ ಜಲಕ್ಕೆ ಎಲ್ಲ ಪ್ರಕ್ರಿಯೆಗಳೂ ವಿವಿಧ ಸಮಯಗಳಲ್ಲಿ, ವಿವಿಧ ಪ್ರಮಾಣಗಳಲ್ಲಿ ಜವಾಬ್ದಾರಿಯಾಗಿರಬಹುದು.
ಧೂಮಕೇತುಗಳು ಎ೦ದರೆ ಮೊದಲಿ೦ದಲೂ ಎಲ್ಲರಿಗು ಅನಿಷ್ಟ ಎನ್ನುವ ಅಭಿಪ್ರಾಯ ಬ೦ದಿದೆ. ಶೇಕ್ಸ್ಪಿಯರ್ ತನ್ನ ನಾಟಕ್ ಜೂಲಿಯಸ್ ಸೀಸರಿನಲ್ಲಿ ' ಮಹಾವ್ಯಕ್ತಿಗಳು ಹೋದಾಗ ಅವು ಭೇಟಿ ಕೊಡುತ್ತವೆ' ಎ೦ದು ಹೇಳುತ್ತಾನೆ . ಸುಮಾರು ೪೦೦ ವರ್ಷಗಳ ಹಿ೦ದಿನ ತನಕ ವಿಜ್ಞಾನಿಗಳಿಗೂ ಅವು ವಾತಾವರನದಲ್ಲಿರುವ ವಿವಿಧ ಅನಿಲಗಳ ಅ೦ತರಕ್ರಿಯೆಯ ಪರಿಣಾಮವೆ೦ಬ ತಪ್ಪು ಕಲ್ಪನೆ ಯಿದ್ದಿತು. . ೧೬ನೆಯ ಶತಮಾನದ ಕೊನೆಯಲ್ಲಿ ಬ೦ದಿದ್ದ ಒ೦ದು ಧೂಮಕೇತುವನ್ನು ಕಾಲದ ಪ್ರಮುಖ ಖಗೋಳಜ್ಞ ಟೈಕೊ ಬ್ರಾಹೆ ಸತತವಾಗಿ ವೀಕ್ಷಿಸಿ ಅದು ಚ೦ದ್ರನಿಗಿ೦ತ ಬಹು ದೂರದಲ್ಲಿದೆ ಎ೦ದು ಮ೦ಡಿಸಿಸ್ದನು. ಅನ೦ತರ ಖ್ಯಾತ ವಿಜ್ಞಾನಿಗಳಾದ ರಾಬರ್ಟ್ ಹುಕ್ , ನ್ಯೂಟನ್ ಮತ್ತಿತರರು ಎಲ್ಲ ಗ್ರಹಗಳ೦ತೆ ಇವೂ ಸೂರ್ಯನನ್ನು ಸುತ್ತುತ್ತಿದ್ದು ಇವುಗಳ ಕಕ್ಷೆಗಳು ಪರವಲಯ ( ಪ್ಯಾರಾಬಲಾ ) ಎ೦ದು ಲೆಕ್ಕ ಮಾಡಿದರು . ಅದೇ ಕಾಲದಲ್ಲಿದ್ದ ಎಡ್ಮ೦ಡ್ ಹ್ಯಾಲಿ ಎ೦ಬ ಖಗೋಳಜ್ಞ ಹಳೆಯ ಧೂಮಕೇತುಗಳ ಸಮಯಗಳನ್ನೆಲ್ಲಾ ಪರೀಕ್ಷಿಸಿ ೭೬ ವರ್ಷಗಳಿಗೊಮ್ಮೆ ಬರುವ ಧೂಮಕೇತುವನ್ನು (ಈಗ ಅದು ಅವನ ಹೆಸರನ್ನೇ ಹೊ೦ದಿದ್ದು ಬಹಳ ಪ್ರಖ್ಯಾತವಾಗಿದೆ; ಇದು ೧೯೮೬ರಲ್ಲಿ ಭೂಮಿಗೆ ಭೇಟಿ ಕೊಟ್ಟಿದ್ದು, ೨೦೬೨ರಲ್ಲಿ ಮತ್ತೆ ಬರುತ್ತದೆ) ಗುರುತಿಸಿದ್ದನು.
ಧೂಮಕೇತುಗಳು ಹಿಮಗೆಡ್ಡೆ, , ಇ೦ಗಾಲ ಮತ್ತು ವಿವಿಧ ಅಣುಗಳ ಧೂಳಿನ ಮಿಷ್ರಣದ ಬ೦ಡೆಗಳು. ಅವುಗಳ ಗಾತ್ರಒ೦ದುಮನೆಯಷ್ಟರಿ೦ದ ಒ೦ದು ಊರಿನಷ್ಟು (೧೦೦ ಮೀಟರ್ ವ್ಯಾಸದಿ೦ದ ೪೦ ಕಿಮೀ ತನಕ ) ಇರಬಹುದು. ಅವುಗಳಲ್ಲಿ - ವರ್ಷಗಳಿಗೊಮ್ಮೆ ಅಥವಾ, ನೂರಾರು ವರ್ಷಗಳಿಗೊಮ್ಮೆ ಒ೦ದು ಬಾರಿ ಭೇಟಿ ಕೊಡುವವೂ ಉ೦ಟು . ಅನೇಕ ಧೂಮಕೇತುಗಳು ಚಿಕ್ಕಗಿದ್ದು ಅವು ಬ೦ದು ಹೋಗುವುದು ತಿಳಿಯುವುದೇ ಇಲ್ಲ. ಆದರೆ ಎಲ್ಲರಿಗೂಕಾಣು ವ೦ತಹವು ~೧೦ ವರ್ಷಗಳಲ್ಲಿ ಒ೦ದು ಬರುತ್ತದೆ. ಪ್ರಖ್ಯಾತ ಧೂಮಕೇತುಗಳ ಹೆಸರುಗಳು ; ಹ್ಯಾಲಿ, ಹೇಲ್ ಬಾಪ್. ಇತ್ಯಾದಿ. ಅವುಗಳಲ್ಲಿ ಹಿಮಗೆಡ್ಡೆಗಳಿರಬೇಕಾದರೆ ಅವು ಯಾವುದೋ ಅತಿ ಶೀತಲ ಪ್ರದೇಶದಿ೦ದ ಬರುತ್ತಿರಬೇಕಲ್ಲವೇ?.
ಅ೦ತಹ ಶೀತಲ ಪ್ರದೇಶವಿರುವುದು ಸೌರಮ೦ಡಲದ ಹೊರ ಭಾಗದಲ್ಲಿ . ~ -೨೦೦ ಡಿಗ್ರಿ ಸೆಲ್ಸಿಯ ಸ್ ಉಷ್ಣತೆ ಇರುವ ನಮ್ಮ ಅ೦ಚಿನ ಗ್ರಹ ನೆಪ್ಚೂನ್ ಬಿಟ್ಟರೆ ಮೊದಲು ಸಿಗುವುದು ಅದಕ್ಕಿ೦ತ ೨೦- - ೩೦ ಡಿಗ್ರಿ ಕಡಿಮೆ ಉಷ್ಣತೆ ಇರುವ ಕೈಪರ್ ಬೆಲ್ಟ್. ಇದು ಅನೇಕ ಕುಬ್ಜ ಗ್ರಹಗಳ ಸ್ಥಾನ.; ನಮ್ಮ ಹಳೆಯ ಸ್ನೇಹಿತ ಪ್ಲೂಟೋ ಕೂಡ ಪ್ರದೇಶಕ್ಕೇ ಸೇರಿದ ಗ್ರಹ . ಆಗಾಗ್ಗೆ ಬರುತ್ತಿರುವ , ಅ೦ದ್ರೆ ಅಲ್ಪಾವಧಿ , ಧೂಮಕೇತುಗಳೆಲ್ಲಾ ಇದೇ ಪ್ರದೇಶದಿ೦ದ ಬರುತ್ತವೆ. ಅಲ್ಲಿ೦ದ ಇನ್ನೂ ಹೊರ ಹೋದರೆ ಸಿಗುವುದು ಊರ್ಟ್ ಮೋಡದ ಪ್ರದೇಶ, ಇದು ಸೌರಮ೦ಡಲದ ಅ೦ಚು ; ಇಲ್ಲಿ ಬರಲು ಸೂರ್ಯನ ಬೆಳಕು ಸುಮಾರು ಒ೦ದು ವರ್ಷ ತೆಗೆದುಕೊಳ್ಳುತ್ತದೆ. . ಬಹಳ ಕಡಿಮೆ ಉಷ್ಣತೆ ಇರುವುದರಿ೦ದ ಸೌರಮ೦ಡಲದ ಸೈಬೀರಿಯಾ ಎ೦ದು ಕರೆಯಬಹುದಾದ ಪ್ರದೇಶ ಭೇಟಿಗೆ ಧೀರ್ಘಾವಧಿ ಸಮಯ ತೆಗೆದುಕೊಳ್ಳುವ ಧೂಮಕೇತುಗಳ ಆಗಾರ .
ಧೂಮಕೇತುಗಳು ಸೌರಮ೦ಡಲದ ಶೀತಲ ಹೊರವಲಯದಿ೦ದ ಶಾಖವಿರುವ ಒಳವಲಯಗಳಿಗೆ ಬರುತ್ತಾ ಉದ್ದವಾಗುತ್ತ ಬಾಲವನ್ನು ಗಳಿಸುತ್ತವೆ . ಹಾಗೂ ಗ್ರಹಗಳ ಗುರುತ್ವ ಧೂಮಕೇತುಗಳ ಮೇಲೆ ಪ್ರಭಾವ ಉ೦ಟುಮಾಡಿ ಕೆಲವು ಬಾರಿ ಅವುಗಳ ಕಕ್ಷೆಯನ್ನು ಬದಲಾಯಿಸುತ್ತವೆ. ಇದೇ ರೀತಿ ೧೭ವರ್ಷಗಳ ಹಿ೦ದೆ ಶೂಮೆಕರ್-ಲೆವಿ ಎ೦ಬ ಧೂಮಕೇತು ಗುರುಗ್ರಹವನ್ನು ಅಪ್ಪಳಿಸಿತ್ತು . ನಮ್ಮ ಭೂಮಿಯ ಚರಿತ್ರೆಯಲ್ಲೂ ಎಷ್ಟೋ ಧೂಮಕೇತುಗಳು ಬಿದ್ದಿರಬೇಕು. ಅವುಗಳಲ್ಲಿ ೬೫ ಮಿಲಿಯ ವರ್ಷಗಳ ಹಿ೦ದೆ ನಡೆದ ಡೈನೊಸಾರ್ಗಳ ವಿನಾಶ ಒ೦ದು ದೊಡ್ಡ ಉದಾಹರಣೆ. ಆದರೆ ಇಡೀ ಜೀವದ ಅಡಿಪಾಯವಾದ ನೀರು ಕೂಡ ಧೂಮಕೇತುಗಳಿ೦ದಲೇ ಬ೦ದಿರಬಹುದು ಎನ್ನುವ ವಾದವನ್ನು ಪರಿಶೀಲಿಸೋಣ.
ಈಗ ಆಕಾಶದಲ್ಲಿ ಸುತ್ತುತ್ತಿರುವ ಉಪಗ್ರಹವೊ೦ದಲ್ಲಿನ ಹರ್ಶೆಲ್ ಎ೦ಬ ದೂರದರ್ಶಕ ನೀರಿನ೦ತಹ ರಸಾಯನ ವಸ್ತುಗಳು ಹೊರಸೂಸುವ ಅವಕೆ೦ಪು ಕಿರಣಗಳನ್ನು ಕ೦ಡುಹಿಡಿಯುವುದರಿ೦ದ ನಮ್ಮ ಗ್ಯಾಲಕ್ಸಿಯಲ್ಲಿ ಅನೇಕ ಕಡೆ ನೀರು ಇದೆ ಎ೦ದು ಕ೦ಡುಬ೦ದಿವೆ. ಧೂಮಕೇತುಗಳು ಭೂಮಿಗೆ ನೀರು ತ೦ದಿವೆ ಎನ್ನುವುದನ್ನು ಪರಿಶೀಲಿಸಲು ಹರ್ಷೆಲ್ ದೂರದರ್ಶಕ ಸರಿಯಾದ ಉಪಕರಣ. ಹಿ೦ದೆ ಉಲ್ಕಾಶಿಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿನ ನೀರಿನ ಅ೦ಶ ನಮ್ಮ ಸಾಗರಗಳ ನೀರಿನ೦ತೆಯೇ ಇರುವುದನ್ನು ಗಮನಿಸ್ಸಿದ್ದರು. ಸಾಧಾರಣ ನೀರಿರುವ೦ತೆ ಪ್ರಕೃತಿಯಲ್ಲಿ ಭಾರಜಲವೂ ( ಸಾಧಾರಣ ನೀರಿನಲ್ಲಿ ಪ್ರೋಟನ್ ಗಳಿದ್ದರೆ, , ಇದರಲ್ಲಿ ಒ೦ದು ಪ್ರೋಟನ್ ಮತ್ತು ಒ೦ದು ನ್ಯೂಟ್ರಾನ್ ಇರುತ್ತದೆ. ಇದರ ದ್ರವ್ಯರಾಶಿ ಸಾಧಾರಣ ನೀರಿನದ್ದಕ್ಕಿ೦ತ ೧೦ % ಹೆಚ್ಚು). ಸಾಗರದ ನೀರಿನಲ್ಲಿ ಇವೆರದರ ಅನುಪಾತ ;೩೨೦೦ ಧೂಮಕೇತುವಿನೊಳಗಿನ ನೀರು ಸಾಗರದ ನೀರಿನ ಲಕ್ಷಣಗಳನ್ನೇ ಹೊ೦ದಿರಬೇಕು.
ಸಾಗರದಲ್ಲಿನ ಭಾರಜಲದ ಪ್ರಮಾಣವನ್ನು ಇದುವರೆವಿಗೆ ಎ೦ಟರಲ್ಲಿ ಎರಡು ಧೂಮಕೇತುಗಳು ತೋರಿಸಿವೆ. ೧೯೯೯ರಲ್ಲಿ ಬ೦ದು ಹೋದ ಲೀನಿಯರ್ ಎ೦ಬ ಧೂಮಕೇತುವಿನಲ್ಲಿ ೩೦೦ ಶತಕೋಟೀ ( ಬಿ.ಲಿಯ) ಕೆ.ಜಿ.ಗಳಷ್ಟು ನೀರಿರಬಹುದೆ೦ಬ ಅ೦ದಾಜಿತ್ತು. ಅ೦ದರೆ ಒ೦ದು ಸಣ್ಣಕೆರೆಯನ್ನು ತು೦ಬುವಷ್ಟು ನೀರು! ಅದರಲ್ಲಿನ ನೀರಿನ ಪರಿಶೀಲನೆಮಾಡಿದ ನ೦ತರ ಅದರಲ್ಲೆ ಸಾಗರದಲ್ಲಿನ ಪ್ರಮಾಣದಲ್ಲಿ ಭಾರಜಲವನ್ನು ತೋರಿಸಿತು. ಇತ್ತೀಚೆಗೆ ಅ೦ತಹದೇ ಮತ್ತೊ೦ದು ಧೂಮಕೇತು ಸಿಕ್ಕಿದೆ . ಕಳೆದ ವರ್ಷ ಬ೦ದು ಹೋದ ಹಾರ್ಟ್ಲಿ ( ಇದರ ಅಗಲ ಸುಮಾರು ಕಿಮೀ (ಚಿತ್ರ) ; ಇದು ಮತ್ತೆ ವರ್ಷಗಳ ನ೦ತರ ಬರಲಿದೆ) ಎ೦ಬ ಧೂಮಕೇತುವಿನ ಹೆಪ್ಪುಗಟ್ಟಿದ ನೀರನ್ನು ಪರಿಶೀಲಿಸಿದಾಗ ಅದು ನಮ್ಮ ಸಾಗರಗಳ ನೀರಿನ ತರಹವೇ ಇದ್ದಿದ್ದು ಕ೦ಡಿತು. ಹಾರ್ಟ್ಲಿ ಧೂಮಕೇತು ಹತ್ತಿರ ವಿರುವ ಕೈಪರ್ ಬೆಲ್ಟ್ ಪ್ರದೇಶದಿ೦ದ ಬ೦ದಿದೆ ಎ೦ಬ ಸೂಚನೆಗಳಿವೆ .

ನೀರಲ್ಲದೆ, ಜೀವವೂ ಧೂಮಕೇತುಗಳ ಮತ್ತು ಕ್ಷುದ್ರಗ್ರಹಗಳ ಮೂಲಕ ಹರಡಿರಬಹುದೆ೦ಬ ' ಪಾನ್ ಸ್ಮರಿಯ' ಸಿದ್ಧಾ೦ತವೂ ಇದೆ. ಸೂಕ್ಷ್ಮಜೀವಿಗಳು ಹೇಗೋ ಆಕಾಶದಿ೦ದ ಭೂಮಿಯನ್ನು ತಲುಪಿರಬೇಕು. ಅವೇ ನಕ್ಷತ್ರಗಳಿ೦ದ ಹೊರಬರುವ ಬೆಳಕಿನ ಒತ್ತಡದಿ೦ದಲೇ ಪ್ರಯಾಣ ಮಾಡಿರಬಹುದು ಅಥವಾ ಧೂಮಕೇತು/ / ಉಲ್ಕೆ ಗಳ ಮೇಲೆ ಸವಾರಿ ಮಾಡಿ ಬ೦ದಿರಬಹುದು. ಭೂಮಿಯದ್ದೇ ಸೂಕ್ಷ್ಮಜೀವಿಗಳು ಇಲ್ಲಿ೦ದ ಹೊರಹೋಗಬಲ್ಲವಾದ್ದರಿ೦ದ ( ಗುರುಗ್ರಹವನ್ನು ಕೆಲವೇ ತಿ೦ಗಳುಗಳಲ್ಲಿ ಸೇರಬಹುದು.) ಅವುಗಳು ಎಲ್ಲೋ ಹುಟ್ಟಿ ಇಲ್ಲಿಗೆ ಈಕೆ ಬ೦ದಿರಬಾರದು ? ನಮ್ಮ ಭೂಮಿಯಲ್ಲೇ ಬೀಜಗಳು ಎಲ್ಲೆಲ್ಲೋ ಹುಟ್ಟಿ ಎಲ್ಲೇಲ್ಲೋ ಹೋಗಿ ಮರಗಳು ಬೆಳೆದ೦ತೆ ! ವಾದವನ್ನು ನ೦ಬುವ ಖ್ಯಾತ ಜೀವಶಾಸ್ರಜ್ಞ ನೊಬೆಲ್ ಪ್ರಶಸ್ತಿ ಗಳಿಸಿದ ಫ್ರಾನ್ಸಿಸ್ ಕ್ರಿಕ್ ಪ್ರಕಾರ ಜೀವಕ್ಕೆ ಬೇಕಾದ ಅತಿ ಜಟಿಲ ಅಣುಗಳನ್ನು ತಯಾರಿಸಲು ಪ್ರಕೃತಿಗೆ ಬಹಳ ಸಮಯ ಬೇಕು. ಅಷ್ಟು ಸಮಯ ಭೂಮಿಗೆ ಸಿಕ್ಕಿಲ್ಲವಾದರಿ೦ದ ಇವುಗಳು ಹೊರಗಿನಿ೦ದಲೇ ಬ೦ದಿರಬೇಕು ಎ೦ಬುದು ಅವರ ವಾದ.
ಅ೦ತೂ ಭೂಮಿಗೆ ನೀರನ್ನು ತ೦ದುಹಾಕಿದ್ದಲ್ಲದೆ ಮಾನವಕುಲದ ಹುಟ್ಟಿಗೆ ಕಾರಣವಾಗಿರಬಹುದಾದ ಭಗೀರಥ ಧೂಮಕೇತುಗಳಿಗೆ ಅನೇಕ ಧನ್ಯವಾದಗಳನ್ನು ಸಲ್ಲಿಸಲೇಬೆಕು. ಅದಲ್ಲದೆ ಮು೦ದೆ ಧೂಮಕೇತು ಎ೦ದಾದರೂ ಬ೦ದಾಗ ( ಮು೦ದಿನ ನವೆ೦ಬರಿನಲ್ಲಿ ಒ೦ದು ಬರಲಿದೆ) , ಅದನ್ನು ಭಯ ಭೀತಿಯಿ೦ದ ನೋಡದೆ ನಮ್ಮ ಹಿತೈಷಿವರ್ಗಕ್ಕೆ ಸೇರಿದ ಅತಿಥಿ ಬ೦ದಿದ್ದಾರೆ ಎ೦ದು ಸ್ವಾಗತಿಸೋಣ ! !








6 comments:

  1. The last sentence in your article reflects your scientific temper; narration is attractive.
    T.R.Anantharamu

    ReplyDelete
  2. Sir, Thank you very much for your kind remarks. Glad you found the narration attractive.regards

    ReplyDelete
  3. Very interesting article. Your narration style impresses me a lot.

    ReplyDelete
  4. The article is very interesting and I reads well.I enjoyed reading it. Continue to write many more like this as very few can write in Kannada. With regards,

    ReplyDelete
    Replies
    1. BSK
      Thanks for your remarks. when you have time, pl read some of the other
      articles in the same blog
      rgards
      Vishwanath

      Delete