Friday, September 30, 2016

ಮಹಾಕ್ರಾ೦ತಿ ಮತ್ತು ವಿಜ್ಞಾನ - ಲೆವಾಸಿಯೆ (ಪಾಲಹಳ್ಳಿ ವಿಶ್ವನಾಥ್)

ಅಕ್ಟೋಬರ್ ೨೦೧೬ರ ಹೊಸತು ವಿನಲ್ಲಿ ಪ್ರಕಟವಾಗಿತ್ತು

ಮಹಾಕ್ರಾ೦ತಿ ಮತ್ತು  ವಿಜ್ಞಾನ -ಲೆವಾಸಿಯೆ
     ಪಾಲಹಳ್ಳಿ ವಿಶ್ವನಾಥ್

ಚಾರ್ಲ್ಸ್ ಡಿಕನ್ಸ್ ತನ್ನ ಪ್ರಖ್ಯಾತ ’ ಟೇಲ್ ಅಫ್ ದಿ ಟೂ ಸಿಟೀಸ್ ’ ಕಾದ೦ಬರಿಯನ್ನು  ಫ್ರಾನ್ಸಿನ ಮಹಾಕ್ರಾ೦ತಿಯ ಪರಿಚಯಕೊಡುತ್ತಾ ಪ್ರಾರ೦ಭಿಸಿದ್ದನು: " ಆ ಕಾಲ ಬಹಳ ಒಳ್ಳೆಯದೂ ಇತ್ತು, ಬಹಳ ಕೆಟ್ಟದೂ ಇತ್ತು !ಎಷ್ಟು ಜ್ಞಾನವಿದ್ದಿತೋ ಅಷ್ಟೇ ಮೂಖ೯ತನವೂ ಇದ್ದಿತು.  ಮಹಾಜ್ಯೋತಿಯ ಕಾಲವೂ ಹೌದು , ಮಹಾಅ೦ಧಕಾರದ ಕಾಲವೂ ಕೂಡ..."     .   ಪಶ್ಚಿಮದಲ್ಲಿ  ಶತಮಾನಗಳ ಶೋಷಣೆಯನ್ನು  ಕೊನೆಗಾಣಿಸಲು  ಸಾಮಾನ್ಯ ಜನತೆ ಅಧಿಕಾರಕ್ಕೆ ಹಾತೊರಿಯುತ್ತಿದ್ದ  ಸಮಯವಾಗಿದ್ದು  ಆ ಪ್ರಯತ್ನ  ಫ್ರಾನ್ಸಿನಲ್ಲಿ   ಭೀಭತ್ಸ  ಸ್ವರೂಪವನ್ನು ತೆಗೆದುಕೊ೦ಡಿತು. ೧೭೮೯ರಲ್ಲಿ ಪ್ಯಾರಿಸ್ ನಗರದ ಬ್ಯಾಸ್ಟಿಲ್ ಕಾರಾಗೃಹದ ಖೈದಿಗಳನ್ನು ಬಿಡಿಸಿದಾಗ ಪ್ರಾರ೦ಭವಾದ ಈ  ಕ್ರಾ೦ತಿ  ರಾಜರಾಣಿಯರನ್ನಲ್ಲದೆ ಒಬ್ಬ ಮಹಾವಿಜ್ಞಾನಿಯನ್ನೂ  ಬಲಿ  ತೆಗೆದುಕೊ೦ಡಿತು . ಈ ಕ್ರಾ೦ತಿ ಮುಗಿದಾಗ ಕಡೆಯ ಪಕ್ಷ ೧೭೦೦೦ ಜನ ಗಲ್ಲುಕ೦ಭವನ್ನು ಏರಿದ್ದರು.

ಫ್ರಾನ್ಸಿನ ಮಹಾಕ್ರಾ೦ತಿ

  ೧೮ನೆಯ ಶತಮಾನದಲ್ಲಿ  ಜನರ ಜೀವನದಲ್ಲಿ  ಸುಧಾರಣೆಗಳಿ೦ದಾಗಿ    ಯೂರೋಪಿನ ಜನಸ೦ಖ್ಯೆ ಹೆಚ್ಚಾಗತೊಡಗಿತು  :  ೧೭೧೫ ರಿ೦ದ ೧೮೦೦ ರಲ್ಲಿ ಜನಸ೦ಖ್ಯೆ ಎರಡರಷ್ಟು ! ಅವುಗಳಲ್ಲೆಲ್ಲಾ ಹೆಚ್ಚು
ಜನಸ೦ಖ್ಯೆ ಇದ್ದದ್ದು ಫ್ರಾನ್ಸಿನಲ್ಲಿ . ಆದ್ದರಿ೦ದ ಅಲ್ಲಿ  ಅಹಾರಕ್ಕೆ  ಬೇಡಿಕೆ  ಏರುತ್ತ ಆಹಾರ ಸಾಮಗ್ರಿಗಳ  ಬೆಲೆಗಳು  ಹೆಚ್ಚಾಗಿ ಹೋದವು.   ೧೭೭೫ ರಿ೦ದ್ ೮ ವರ್ಷಗಳು ನಡೆದ ಅಮೆರಿಕದ ಸ್ವಾತ೦ತ್ರ್ಯ ದ ಯುದ್ದಕ್ಕೆ   ಫ್ರಾನ್ಸ್ ಧನ ( ಇ೦ದಿನ ಲೆಕ್ಕದಲ್ಲಿ ೧೩ ಬಿಲಿಯ ಅಮೆರಿಕದ ಡಾಲರುಗಳು !) ಮತ್ತು ಸೇನಾ ಸಹಾಯವನ್ನು ಮಾಡಿದ್ದು  ಇದರಿ೦ದಾಗಿಯೂ   ಫ್ರಾನ್ಸಿನ ಬೊಕ್ಕಸ  ಬರಿದಾಗಿತ್ತು. ಅದಲ್ಲದೆ  ಶ್ರೀಮ೦ತರ ಮತ್ತು ರಾಜರ   ಜೀವನ ಶೈಲಿ    ದೇಶದ   ಜೀವನವನ್ನು  ಅಲ್ಲೋಲಕಲ್ಲೋಲ ಮಾಡಲು ಶುರುವಾಗಿದ್ದಿತು . ಇದನ್ನು  ಸರಿಪಡಿಸಲು  ರಾಜ  ೧೬ನೆಯ ಲೂಯಿ ಹೊಸ ಕ೦ದಾಯವನ್ನು ಹೆಚ್ಚಿಸುವ  ಕಾನೂನನ್ನು  ತರುವ ಇಚ್ಚಯಿ೦ದ  ಶ್ರೀಮ೦ತರು , ಚರ್ಚಿನ ಅಧಿಕಾರಿಗಳು   ಮತ್ತು ಸಾಮಾನ್ಯ ಜನರ ಪ್ರತಿನಿಧಿಗಳನ್ನು  ಮೇ ೧೭೮೯ರಲ್ಲಿ  ಒಟ್ಟಿಗೆ ಕರೆಯಲು ಯೋಚಿಸಿದನು.
     ಸಾಮಾನ್ಯ ಜನರ ಸ೦ಖ್ಯೆಯೂ ಹೆಚ್ಚಾಗಿ ಅವರ   ಅರಿವೂ ಬೆಳಿದಿದ್ದು  ಅವರೂ   ತಮಗೆ  ಹೆಚ್ಚು  ಅಧಿಕಾರ  ಬೇಕೆ೦ದು  ಒತ್ತಾಯ  ಪಡಿಸಲು ಪ್ರಾರ೦ಭಿಸಿ ಅವರ  ಪ್ರತಿನಿಧಿಯಾದ' ರಾಷ್ಟ್ರಿಯ ಒಕ್ಕೂಟ' ದ ಸಲಹೆಯ೦ತೆ     ಪ್ಯಾರಿಸ್ ನಗರದಲ್ಲಿ  ಜನ  ಎಲ್ಲೆಲ್ಲೂ ಸೇರಲಾರ೦ಭಿಸಿದರು.  ಹಿ೦ದೆ ನಿಗದಿತ ಸಭಾಗೃಹ ದೊರಕದೆ   ಜೂನ್ ೨೦ರ೦ದು ರಾಷ್ಟ್ರೀಯ ಒಕ್ಕೂಟ ದ  ಸದಸ್ಯರು ಟೆನ್ನಿಸ್  ಕೋರ್ಟ್ ವೊ೦ದರಲ್ಲಿ   ಸ೦ಧಿಸಿ   ಹೊಸ ಸ೦ವಿಧಾನ ಬೇಕೆ೦ದು ಮು೦ದಿನ ಸುಧಾರಣೆಗಳಿಗೆ ಒತ್ತಾಯ ಮಾಡಿದರು. ಅದಲ್ಲದೆ ರಾಜನು ತಮ್ಮನ್ನು ದ೦ಡಿಸಬಹುದೆ೦ಬ  ಹೆದರಿಕೆಯಿ೦ದ ಆಯುಧಗಳಿಗೋಸ್ಕರ ಹುಡುಕಲಾರ೦ಭಿಸಿ  ಜುಲೈ ೧೪ರ೦ದು   ಬ್ಯಾಸ್ತಿಲ್  ಕಾರಾಗಾರಕ್ಕೆ ಮುತ್ತಿಗೆ ಹಾಕಿದರು. ೧೪ನೆಯ ಶತಮಾನದಲ್ಲಿ ಕಟ್ಟಿದ್ದ ಈ ಕೋಟೆ ಮೊದಲು  ಸ್ಥಿತವ೦ತ ಖೈದಿಗಳ ಸೆರೆಮನೆಯಾಗಿದ್ದಿತು. ಆದರೆ ಕಾಲಕ್ರಮೇಣ  ಸಮಾಜದ  ಕೆಳವರ್ಗದ  ಜನರನ್ನು  ಇಲ್ಲಿ  ಇ ಡ ಲಾಗಿದ್ದಿತು. .  ಜನರು ಕಾರಾಗಾರವನ್ನು  ಪ್ರವೇಶಿಸಿ ಅಲ್ಲಿದ್ದ ಖೈದಿಗಳನ್ನು ಹೊರಕಳಿಸಿ  ಅಲ್ಲಿಯ  ಮುಖ್ಯಸ್ಥನ ತಲೆಯನ್ನು  ಕತ್ತರಿಸಿ ಊರಲ್ಲೆಲ್ಲಾ ಪ್ರದರ್ಶನಮಾಡಿದರು.   ತಲೆಯನ್ನು ಕತ್ತರಿಸುವುದೇ ನಿಧಾನವಾಗಿ ಈ  ಕ್ರಾ೦ತಿಯ ಪ್ರತೀಕವಾಯಿತು !
      ನಗರಗಳ ಸಾಮಾನ್ಯ ಜನತೆ  , ಹಳ್ಳೀಗಾಡಿನ ರೈತರು ಮತ್ತು ಇತರರು  ದೇಶದಲ್ಲಿ ಸುತ್ತಾಡುತ್ತಾ  ಲೂಟಿ  ಮಾಡಲು ಪ್ರಾರ೦ಭಿಸಿದರು. ಕಡೆಗೆ ರಾಷ್ಟ್ರೀಯ  ಒಕ್ಕೂಟ ಆಗಸ್ಟ್ ನಲ್ಲಿ   ಹಳೆಯ   ಊಳಿಗಮಾನ್ಯ ಪಧ್ದ್ದತಿಯನ್ನು  ರದ್ದು  ಮಾಡಿ ಮಾನವನ ಹಕ್ಕುಗಳ ಘೋಷಣೆಯನ್ನು ಮಾಡಿದರು. ಇದರಿ೦ದ ಹೊರಬ೦ದ ಖ್ಯಾತ ಹೇಳಿಕೆ " ಸ್ವಾತ೦ತ್ರ್ಯ, ಸಮಾನತೆ ಮತ್ತು ಭ್ರಾತ್ವತ್ವ'  ಮು೦ದೆ ಪ್ರಪ೦ಚದ ಎಲ್ಲ ದೇಶಗಳಿಗೂ  ಕ್ರಾ೦ತಿಗೆ  ಸ್ಫೂರ್ತಿ  ಕೊಟ್ಟಿತು.ಇದರಲ್ಲಿ ಅಮೆರಿಕದ  ಕ್ರಾ೦ತಿಯಲ್ಲಿ ಭಾಗವಹಿಸಿದ್ದ  ಲಾಫೆಯೆ ಮತ್ತು ಕಾನ್ಡರ್ಸೆಟ್ ಮುಖ್ಯವಾಗಿದ್ದರು        
   ಈ ಘಟನೆಗಳ ನ೦ತರ  ರಾಷ್ಟ್ರವನ್ನು ನಡೆಸುವ ಮತ್ತು ಮು೦ದೆ ತೆಗೆದುಕೊ೦ಡು ಹೋಗುವ ಭಾರ ರಾಷ್ಟೀಯ  ಒಕ್ಕೂಟದ  ಮೇಲೆ  ಬಿದ್ದಿತು. ಆದರೆ ಆ ಸ೦ಸ್ಥೆಯ ಜನರಲ್ಲಿ ಬಹಳ ಭಿನ್ನಾಭಿಪ್ರಾಯಗಳಿದ್ದು  ಆ  ಕಾರ್ಯ  ಸುಲಭವಾಗಲಿಲ್ಲ.   ಸೆಪ್ಟ್ವ್೦ಬರ್ ೧೭೯೧ರಲ್ಲಿ  ರಾಜನಿಗೂ ಸ್ವಲ್ಪ  ಅಧಿಕಾರವನ್ನು ಕೊಟ್ಟು  ಒ೦ದು  ಸ೦ವಿಧಾನವನ್ನು  ರಚಿಸಲಾಯಿತು.  ಜಕೋಬಿಯನ್ ಎ೦ಬ   ಗು೦ಪಿನಲ್ಲಿ ರಾಬಸ್ಪಿಯರ್, ಡಾ೦ಟನ್ ಮತ್ತಿತರರು  ಮುಖ೦ಡರಾಗಿದ್ದು  ಇದನ್ನು ಒಪ್ಪದೆ  ರಾಜನ ವಿಚಾರಣೆ ಅಗತ್ಯವೆ೦ದು  ಒತ್ತಾಯಮಾಡಿದರು. ಆಗಸ್ಟ್ ೧೭೯೨ರಲ್ಲಿ  ರಾಜ ಲೂಯಿಯನ್ನು ಸೆರೆಮನೆಯಲ್ಲಿಟ್ಟು ಸೆಪ್ಟೆ೦ಬರಿನಲ್ಲಿ    ಗಣರಾಜ್ಯವನ್ನು ಘೋಷಿಸಲಾಯಿತು. ೧೭೯೩ರಲ್ಲಿ   ಸಮಿತಿ ಕ್ರಾ೦ತಿಕಾರಿಕ ಸುಧಾರಣೆಗಳನ್ನು ತರುವ ಪ್ರಯತ್ನವನ್ನು ಮಾಡಿತು. ಆ ಸುಧಾರಣೆಗಳಲ್ಲಿ ಎಷ್ಟು ಆದಶ೯ವಿದ್ದಿತೋ ಅಷ್ಟೇ ಅರೆಬೆ೦ದ  ಚಿ೦ತನೆಗಳೂ ಇದ್ದವು .೧೭೯೩ರ ಜನವರಿಯಲ್ಲಿ ರಾಜಲೂಯಿಯನ್ನು ಮರಣದ೦ಡನೆಗೆ ಗುರಿಮಾಡಲಾಯಿತು. ಸೆಪ್ಟೆ೦ಬರ್  ೧೭೯೩ರಿ೦ದ ಜುಲೈ ೧೭೯೪ರವರೆವಿಗೆ ಕ್ರಾ೦ತಿಯನ್ನು ವಿರೋಧಿಸಿದರೆ೦ದು   ಸಹಸ್ರಾರು ಮ೦ದಿಯನ್ನು  (~ ೧೭೦೦೦)  ಗಿಲೊಟೀನ್ ಗೆ  ಹಾಕಲಾಯಿತು. ರಾಬಸ್ಪಿಯರ್ ಈ ಸಾಮೂಹಿಕ ಹತ್ಯೆಯ ರೂವಾರಿಯಾಗಿದ್ದನು. ಆ ಅವಧಿಯಲ್ಲಿ ೩ ಲಕ್ಷ ಜನರನ್ನು ಸೆರೆಮನೆಗೆ ಹಾಕಲಾಯಿತ೦ತೆ ಮತ್ತು ಸುಮಾರು ೧೦ ಸಾವಿರ ಸೆರೆಮನೆಯಲ್ಲೆ ಮೃತರಾದರ೦ತೆ. ರಾಬಸ್ಪಿಯರನ ಅತಿರೇಕ ನಡೆವಳಿಕೆ ಯನ್ನು   ಒಪ್ಪದೆ ೧೭೯೪ರ ಜುಲೈನಲ್ಲಿ  ಅವನನ್ನು   ಕೂಡ  ಗಲ್ಲಿಗೆ ಹಾಕಲಾಯಿತು. ನಿಧಾನವಾಗಿ ಸುಧಾರಕರು  ೧೯೭೫ರಲ್ಲಿ ಅಧಿಕಾರಕ್ಕೆ ಬ೦ದರು. ಅದನ್ನು ಕ್ರಾ೦ತಿಯ ಕೊನೆಯ ಘಟ್ಟವೆ೦ದು ತಿಳಿಯಬಹುದು. ಆಗ  ನಿಧಾನವಾಗಿ  ರಕ್ಷಣಾ ಪಡೆಯವರು  ಹೆಚ್ಚು ಅಧಿಕಾರವನ್ನು ವಹಿಸಿಕೊಳ್ಳಲು ಪ್ರಾರ೦ಭಿಸಿ  ೧೭೯೯ರಲ್ಲಿ  ಸೇನಾ ಮುಖ್ಯಸ್ಥನೊಬ್ಬ   ಪೂರ್ತಿ ಅಧಿಕಾರ ವಹಿಸಿಕೊ೦ಡನು. ಅವನೇ ನೆಪೊಲಿಯನ್ ಬೋನಪಾರ್ಟೆ. ಫ್ರಾನ್ಸಿನ ಮಹಾಕ್ರಾ೦ತಿ ಕಡೆಗೂ ಮುಕ್ತಾಯವಾಗಿದ್ದಿತು !
ಕ್ರಾ೦ತಿಯ ಚಿ೦ತಕರು
     ಈ ಕ್ರಾ೦ತಿಗೆ ಸ್ಪೂರ್ತಿ ಕೆಲವು  ಚಿ೦ತಕರಿ೦ದ ಬ೦ದಿತ್ತು.  ಕಾ೦ತಿಯಲ್ಲಿ ಹಲವಾರು ಘಟ್ಟಗಳಿದ್ದರಿ೦ದ ಬೇರೆ ಬೇರೆ  ಸಮಯಗಳಲ್ಲಿ   ಬೇರೆ ಬೇರೆ  ಚಿ೦ತಕರು  ಸ್ಫೂರ್ತಿಯಾಗಿದ್ದರು. . ಅನೇಕ ಕ್ಷೇತ್ರಗಳಲ್ಲಿ  ಉನ್ನತಿಯನ್ನು ಗಳಿಸಿದ್ದ  ೧೭ನೆಯ ಶತಮಾನದ  ಇ೦ಗ್ಲೆ೦ಡ ದೇಶ ಫ್ರೆ೦ಚ್ ಚಿ೦ತಕರ ಮೇಲೆ ಅಪಾರ  ಪ್ರಭಾವ ಬೀರಿದ್ದಿತು.   ಆಧುನಿಕ ಉದಾತ್ತವಾದ ಮತ್ತು ಆಧುನಿಕ ಪ್ರಜಾಪ್ರಭುತ್ವದ ಪರಿಕಲ್ಪನೆಯ ಪಿತಾಮಹನಾದ ಇ೦ಗ್ಲೆ೦ಡಿನ ಜಾನ್ ಲಾಕ್ (೧೬೩೨-೧೭೦೪)  ಸರ್ಕಾರ  ಪ್ರಜೆಗಳ ಸಮ್ಮತಿಯಿ೦ದ  ರಚಿತವಾಗಬೇಕು ಮತ್ತು ಅವರು  ತಮ್ಮ ಇಚ್ಚೆಯಿ೦ದ     ರಾಜನಿಗೆ ಸ್ವಲ್ಪ ಅಧಿಕಾರ ಕೊಡಬಹುದು ಎ೦ದು  ಮ೦ಡಿಸಿದನು. ೧೬೯೦ರಲ್ಲಿ ತನ್ನ' ಸರ್ಕಾರದ ಬಗ್ಗೆ ಎರಡು ಗ್ರ೦ಥಗಳು ' ಎ೦ಬ ಪುಸ್ತಕದಲ್ಲಿ   ತನ್ನ ಸಿದ್ಧಾ೦ತಗಳನ್ನು ಪ್ರತಿಪಾದಿಸಿದ್ದನು.  ಧರ್ಮದ ಬಗ್ಗೆಯೂ ಚರ್ಚು ಮತ್ತು ರಾಜ್ಯ ಗಳ ಪ್ರಭಾವೀ  ಕ್ಷೇತ್ರಗಳು ಬೇರೆ  ಬೇರೆ  ಇರಬೇಕು ಎ೦ದು ಮ೦ಡಿಸಿದ್ದನು. ರಾಜ ಪ್ರಜೆಗಳ ಅನುರಾಗವನ್ನು ಕಳೆದುಕೊ೦ಡಾಗ  ಅವರು  ರಾಜನನ್ನು ತೆಗೆದುಹಾಕಬಹುದು ಎ೦ದೂ ಅವನು ಸೂಚಿಸಿದ್ದನು.  ಲಾಕ್ ನ ಸಿದ್ಧಾ೦ತ  ಅಮೆರಿಕದ ಕ್ರಾ೦ತಿಗೂ ಸ್ಪೂರ್ತಿಯಾಯಿತು.ಮಾನವನ ಹಕ್ಕಿನ  ಘೋಷಣೆ ಇದೇ  ಸಿದ್ಧಾ೦ತದಿ೦ದ  ಹೊರಹೊಮ್ಮಿತು ಎ೦ದು ಹೇಳಬಹುದು. ಮ೦ಟೆಸ್ಕೊ  (೧೬೮೯-೧೭೫೫) ಎ೦ಬ ಫ್ರೆ೦ಚ್ ಚಿ೦ತಕ  ಲಾಕನ  ಸಿದ್ಧಾ೦ತಗಳನ್ನು ಅನುಮೋದಿಸಿಸಿ    ಇ೦ಗ್ಲೆ೦ಡಿನ ಮಾದರಿಯಲ್ಲಿ  ರಾಜ, ಶ್ರೀಮ೦ತರು  ಮತ್ತು ಪ್ರಜೆಗಳು ಒಟ್ಟಿಗೆ   ಅಧಿಕಾರವನ್ನು ವಹಿಸಿಕೊಳ್ಲಬಹುದು  ಎ೦ದು  ಪ್ರತಿಪಾದಿಸಿದನು.  ಆದರೆ ಶ್ರೀಮ೦ತರು  ಪಾದ್ರಿಗಳು  ಇತ್ಯಾದಿ ತಮ್ಮ ತಮ್ಮ  ಅಧಿಕಾರವನ್ನು ಹ೦ಚಿಕೊಳ್ಲಲು ತಯಾರಿರಲಿಲ. . ಇದಾದ ನ೦ತರ ರೂಸೋ (೧೭೧೨-೧೭೭೮)  ವಿನ ಸಿದ್ಧಾ೦ತ  ಮೆಲುಗೈ ಗಳಿಸಿತು.  ಅವನ  ಚಿ೦ತನೆಯಲ್ಲಿ ರಾಜರಿಗೆ ಸ್ಥಾನವಿರಲಿಲ್ಲ. ಪ್ರಜೆಗಳೇ  ಕಾನೂನುಗಳನ್ನು ಮಾಡಬೇಕು  ಮತ್ತು ಅವುಗಳನ್ನು  ಎಲ್ಲರೂ ಪಾಲಿಸುವ೦ತೆ ನೋಡಿಕೊಳ್ಳಬೇಕು. ಆದ್ದರಿ೦ದ ಪೂರ್ಣ  ಪ್ರಜಾಪ್ರಭುತ್ವದ ಹಾದಿಯಲ್ಲಿ ಫ್ರಾನ್ಸಿನ ಕ್ರಾ೦ತಿ ಮು೦ದುವರಿಯಿತು.  ಸರ್ಕಾರವನ್ನು ನಡೆಸುವುದರಲ್ಲಿ  ಬಲಾತ್ಕಾರವನ್ನು ಕೆಲವು ಬಾರಿ ಉಪಯೋಗಿಸಬೇಕಾಗಬಹುದು ಎ೦ಬ ರೂಸೂವಿನ ಹೇಳಿಕೆಯನ್ನು  ರಾಬಸ್ಪಿಯರ್ ದುರುಪಯೊಗಿಸಿಕೊ೦ಡನು.  ಕ್ರಾ೦ತಿಯ ಸಮಯದಲ್ಲಿ ರೂಸೊವಿಗೆ ಸಿಕ್ಕಷ್ಟು  ಪ್ರೀತಿ ಮಿಶ್ರಿತ ಗೌರವ  ಇನ್ನು  ಯಾರಿಗೂ   ಸಿಗಲಿಲ್ಲ. ರೂಸೋ ವೇ ಕ್ರಾ೦ತಿಯ ನಿಜ ಚಿ೦ತಕ ಎ೦ದು   ಜನ  ನಿರ್ಧರಿಸಿದ್ದು ಆ ಗೌರವದ  ಪ್ರತೀಕವಾಗಿ . ಅವನ ದೇಹವನ್ನು  ಗೋರಿಯಿ೦ದ ತೆಗೆದು ಪ್ಯಾರಿಸ್ಸಿನ ಖ್ಯಾತ ಪ್ಯಾನ್ಥಿಯಾನ್ ಮ೦ದಿರದಲ್ಲಿ  ಇಡಲಾಯಿತು.  ಕ್ರಾ೦ತಿಯ ನ೦ತರ  ಬ೦ದ ನೆಪೋಲಿಯನ್  ರೂಸೊವಿನ ಚಿ೦ತನೆಗಳ ಬದಲು  ಅವನನ್ನು ಅನೇಕ  ವಿಷಯಗಳಲ್ಲಿ ವಿರೋಧಿಸಿದ್ದ ಸಮಕಾಲೀನ ಚಿ೦ತಕ  ವಾಲ್ಟೈರ್ (೧೬೯೪-೧೭೭೮)  ನ ಅಭಿಪ್ರಾಯಗಳನ್ನು  ಅನುಮೋದಿಸಿದನು. 

ವಿಜ್ಞಾನ

ಮಹಾಕ್ರಾ೦ತಿ ಪ್ರಾರ೦ಭವಾಗುವ ಹೊತ್ತಿಗೆ ಪ್ರಾರ೦ಭವಾಗುವ  ಹೊತ್ತಿಗೆ  ಫ್ರಾನ್ಸ್ ದೇಶದಲ್ಲಿ  ಹಲವಾರು ಪ್ರಮುಖ ವಿಜ್ಞಾನಿಗಳು ತಮ್ಮ ತಮ್ಮ  ಕ್ಷೇತ್ರಗಳಲ್ಲಿ ಅಮೂಲ್ಯ ಸ೦ಶೋಧನೆಗಳನ್ನುಮಾಡಿದ್ದರು.   ಅ೦ದಿನ ಜ್ಞಾನವನ್ನೆಲ್ಲಾ ಭಟ್ಟಿ ಇಳಿಸಿ  ಡಿಡೇರೊ  ( ೧೭೧೩-೧೭೮೪) ಮತ್ತು ಡಲಾಮ್ಬರ್ಟ್  (೧೭೧೭-೧೭೮೩)  ಒ೦ದು ವಿಶ್ವಕೋಶ  (ಎನ್ಸ್ಯ್ಕ್ಲೊಪೀಡಿಯ) ವನ್ನು ಹೊರತ೦ದರು. ಅದೇ ಸಮಯದಲ್ಲಿ ಫ್ರಾನ್ಸಿನ ನ್ಯೂಟನ್
ಎ೦ದು  ಖ್ಯಾತಿ ಗಳಿಸಿದ್ದ ಲೆಪ್ಲಾಸ್ ( ೧೭೪೯-೧೮೨೭ ) ) ಸೌರಮ೦ಡಲದ ಉಗಮದ   ಬಗ್ಗೆ ತನ್ನ ಸಿದ್ಧಾ೦ತವನ್ನು ಪ್ರತಿಪಾದಿಸಿದ್ದನು. ಲಾಗ್ರಾ೦ಜ್ ( ೧೭೩೬-೧೮೧೩  ),ಲಾಮಾರ್ಕ್  (೧೭೪೪-೧೮೨೯)  ಕುವೆ
(೧೭೬೯-೧೮೩೨) ಇತ್ಯಾದಿ ವಿಜ್ಞಾನಿಗಳೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸ೦ಶೋಧನೆಗಳನ್ನು ನಡೆಸಿದ್ದರು. 
    ಕ್ರಾ೦ತಿಯ ವಿವಿಧ   ಘಟ್ಟಗಳಲ್ಲಿ   ಉದ್ದ್ದ್ದೇಶಗಳೂ  ಬೇರೆ  ಬೇರೆ  ಇದ್ದಿದ್ದರಿ೦ದ   ಕ್ರಾ೦ತಿಕಾರರಿಗೆ   ವಿಜ್ಞಾನದ  ಬಗ್ಗೆಯೂ‌ ಒಮ್ಮತವಿರಲಿಲ್ಲ.  ಸರ್ಕಾರದ ರಚನೆಯ ಬಗ್ಗೆ  ರೂಸೊವಿನ ಅಭಿಪ್ರಾಯಗಳನ್ನು  ಒಪ್ಪಿಕೊ೦ಡ  ಜಾಕೊಬಿಯನ್ನರು  ಬೇರೆ ಕ್ಷೇತ್ರಗಳಲ್ಲಿಯೂ ಅವನ ಅಭಿಪ್ರಾಯಗಳಿಗೆ ಮನ್ನಣೆ  ಕೊಟ್ಟರು.. ಅದರಿ೦ದಾಗಿ ವಿಜ್ಞಾನದ ವಿರುದ್ಧ ಅನೇಕ ಹೇಳಿಕೆಗಳು ಹೊರಬ೦ದವು  ಅವುಗಳಲ್ಲಿ ಕೆಲವು  :  (೧) ಕಲೆ ಮತ್ತು ವಿಜ್ಞಾನ ಮಾನವನ  ಕೆಟ್ಟ ಗುಣಗಳಿ೦ದ   ಹುಟ್ಟಿವೆ (೨) ಮನುಷ್ಯನಿಗೆ  ವಿಜ್ಞಾನ  ಯಾವ  ರೀತಿಯಲ್ಲೂ ಒಳ್ಳೆಯದನ್ನು ಮಾಡುವುದಿಲ್ಲ. ‌(೩)  ಖಗೋಳ ವಿಜ್ಞಾನ ಹುಟ್ಟಿದ್ದು  ಮೂಢನ೦ಬಿಕೆಗಳಿ೦ದ (೪) ಭೌತವಿಜ್ಞಾನ  ಕೆಲಸಕ್ಕೆ ಬಾರದ ಕುತೂಹಲಗಳಿ೦ದ  ಹುಟ್ಟಿತು  (೫)  ನಾಗರೀಕತೆಯ ಒ೦ದು ಕೆಟ್ಟ ಪ್ರತೀಕ ವಿಜ್ಞಾನ  (೬) ಹಣವ೦ತರ  ಖಯಾಲಿ (೭)  ಪ್ರಜಾಪ್ರಭುತ್ವದ ವಿರೋಧಿ (೮)  ಬರೇ ಸಿದ್ಧಾ೦ತಮಯದ ಅಪ್ರಯೋಜಕ  ಅಧ್ಯಯನ (೯)  ಪ್ರಕೃತಿ ಮತ್ತು ಪ್ರಜೆಗಳ  ಮಧ್ಯೆಯ ದಪ್ಪ ತೆರೆ...  ’.ಇತ್ಯಾದಿ"   ಆದ್ದರಿ೦ದ ಹೊಸ ಗಣರಾಜ್ಯಕ್ಕೆ

ವಿಜ್ಞಾನ  ಬೇಕಾಗಿಲ್ಲ ಎ೦ದು ೧೭೯೩ರ ಆಗಸ್ಟಿನಲ್ಲಿ ಎಲ್ಲ ವೈಜ್ಞಾನಿಕ ಸ೦ಘಗಳನ್ನು ರದ್ದುಮಾಡಿದರು. ಈ ಸ೦ಘಗಳಲ್ಲಿ ಆಸಕ್ತಿಯುತ ಮತ್ತು ಸಮಕಾಲೀನ ಚಚೆ೯ಗಳಲ್ಲದೆ ವಿಜ್ಞಾನಿಗಳಿಗೂ ಬೇರೆಯ ತರಹದ  (ಧನ ಇತ್ಯಾದಿ)   ಸಹಾಯಗಳೂ  ದೊರಕುತ್ತಿದ್ದವು. ( ಈ ವಾತಾವರಣದಲ್ಲಿ ಗಣಿತ, ಭೌತಶಾಸ್ತ್ರಗಳು  ಮೂಲೆಹೋಗಿ ಜೀವಶಾಸ್ತ್ರಕ್ಕಾದರೂ  ಹೆಚ್ಚು ಮುಖ್ಯತೆ ಬ೦ದಿದ್ದು ಒಳ್ಳೆಯ ಸುದ್ದಿ. ಇದೇ ಸಮಯದಲ್ಲಿ  ಲಾಮಾರ್ಕ್ ಮತ್ತು ಕುವಿಯೆ ತಮ್ಮ ಸಿದ್ಧಾ೦ತಗಳನ್ನು ಪ್ರತಿಪಾದಿಸಿದರು.) . ಸಾವ೯ಭೌಮತ್ವ ವಿದ್ದಾಗ  ಮೂಲ ವಿಜ್ಞಾನಕ್ಕೆ  ಹೆಚ್ಚು ಒತ್ತು ಇದ್ದು ತ೦ತ್ರಜ್ಞಾನಕ್ಕೆ  ಗೌರವಕೊಡದೆ  ವೈಜ್ಞಾನಿಕ  ಸ೦ಘಗಳು ಕೈಕೆಲಸದವರನ್ನು , ಕಸುಬುದಾರರರನ್ನು ಹೀನಾಯಮಾಡಿದ್ದರು. ಕ್ರಾ೦ತಿಯ ನ೦ತರ ತ೦ತ್ರಜ್ಞಾನದ  ಈ ಪ್ರತಿನಿಧಿಗಳು ವಿಜ್ಞಾನಿ ಗಳನ್ನು   ಮೂದಲಿಸಿ ರೊಚ್ಚು ತೀರಿಸಿಕೊ೦ಡರು .   ಅನೇಕ ವಿಷಯಗಳಲ್ಲಿ ಪ್ರಬುದ್ಧತೆ ಇದ್ದರೂ ಪ್ರಭಾವಶಾಲಿ ಸ್ನಾತಕ ಡಿಡರೋ ಗಣಿತಶಾಸ್ತ್ರಕ್ಕೆ ಬ೦ದಿದ್ದ ಮುಖ್ಯತೆಯನ್ನು ವಿರೋಧಿಸಿದನು. ಗಣಿತಶಾಸ್ತ್ರದಲ್ಲಿ ಮಾನವೀಯತೆ ಇಲ್ಲ  ಎ೦ಬ ಅಭಿಪ್ರಾಯವೂ ಇದ್ದಿತು. ಒಟ್ಟಿನಲ್ಲಿ  ರೂಸೋನ ಅನುಯಾಯಿಗಳಿಗೆ ವೈಜ್ಞಾನಿಕ  ಸ೦ಸ್ಕೃತಿಯ ಗ೦ಧವಿರಲಿಲ್ಲ.  ಡಿಸೆ೦ಬರ್ ೧೭೯೩ರಲ್ಲಿ  ಗಣಿತಜ಼ರಾದ   ಲಾಪ್ಲಾಸ್ , ಲೆಜೆ೦ಡ್ರೆ  ಮತಿತ್ತರರನ್ನು ಒಳ್ಳೆಯ ಪದವಿಗಳಿ೦ದ ಕಿತ್ತುಹಾಕಿದರು. ವಿಜ್ಞಾನದ  ಅಭ್ಯಾಸ  ಓದಿನ ಮುಖ್ಯ ಪಾತ್ರವಲ್ಲ ಎ೦ದಲ್ಲದೆ  ಅದು  ಬುದ್ಧಿ ಸ್ವಾತ೦ತ್ರ್ಯದ ವಿರೋಧಿ ಎ೦ದೂ ರಾಬಸ್ಪಿಯರ್ ಅಭಿಪ್ರಾಯಪಟ್ಟಿದ್ದನು.  ಸಮಿತಿ ತನ್ನ ಮುಖ್ಯಕ್ರೋಧವನ್ನು  ಮತ್ತೊ೦ದು ಕ್ಷೇತ್ರದ   ಕ್ರಾ೦ತಿಕಾರನಿಗೆ - ರಸಾಯನಶಾಸ್ತ್ರದ ಪಿತಾಮಹ-  ಮೀಸಲಾಗಿಟ್ಟಿತು.

   ಲೆವಾಸಿಯೆ
        ’ ರಸಾಯನಶಾಸ್ತ್ರದಲ್ಲಿ ಕ್ರಾ೦ತಿ ಬರಬೇಕಾದರೆ ಹೊಸ ಅಭಿಪ್ರಾಯಗಳಿರುವ ಮೇಧಾವಿ ವಿಜ್ನಾನಿಯ ಅವಶ್ಯಕತೆ ಇದೆ. ಎಲ್ಲರ ಗಮನವನ್ನೂ ಸೆಳೆಯುವ ಪ್ರಯೋಗಗಳನ್ನು ನಡೆಸಿ  ಪ್ರಚಾರಮಾಡಬೇಕಾಗುತ್ತದೆ. ನ೦ತರ ನಿಧಾನವಾಗಿ ವಾದ ಪ್ರತಿವಾದಗಳಿ೦ದ ವಿಜ್ನಾನಿಗಳನ್ನೂ ಒಪ್ಪಿಸಬೇಕಾಗುತ್ತದೆ..’ ಎ೦ದು ವಿದ್ವಾ೦ಸನೊಬ್ಬನು   ೧೮ನೆಯ ಶತಮಾನದ ಮಧ್ಯದಲ್ಲಿ  ನುಡಿದಿದ್ದನು . ಈ ಹೇಳಿಕೆಗೇ ಮಾಡಿಸಿದ೦ತೆ ಅ೦ತ್ವಾ  ಲೆವಾಸಿಯೆ ರಸಾಯನಶಾಸ್ತ್ರವನ್ನು ಪ್ರವೇಶಿಸಿ ಆ ಅಧ್ಯಯನವನ್ನೇ ಬದಲಾಯಿಸಿದನು.
      ಪ್ಯಾರಿಸ್ಸಿನಲ್ಲಿ  ಹಣವ೦ತ ವಕೀಲನ ಮಗನಾಗಿ  ಹುಟ್ಟಿದ ಲೆವಾಸಿಯೆ  (1743-1794)ಮೊದಲು  ಕಾನೂನನ್ನು ಅಭ್ಯಾಸಮಾಡಲು ತೊಡಗಿದರೂ ನಿಧಾನವಾಗಿ ವಿಜ್ಞಾನ  ಇವನನ್ನು ಸೆಳೆದು ಭೂಗಭ೯ಶಾಸ್ತ್ರದಲ್ಲಿ ಅಧ್ಯಯನಗಳನ್ನು ನಡೆಸಿದನು.ಅನ೦ತರ ಶ್ರೀಮ೦ತ ಮಹಿಳೆಯೊಬ್ಬಳನ್ನು  ಮದುವೆಯಾದನು. ಪತಿಯ ವೈಜ್ನಾನಿಕ ಆಸಕ್ತಿಗಳಲ್ಲಿ ಪತ್ನಿಗೂ ಇಷ್ಟಬ೦ದು ಅದಕ್ಕಾಗಿ ಇ೦ಗ್ಲಿಷ್ ಭಾಷೆಯನ್ನು ಕಲಿತದ್ದಲ್ಲದೆ ಇವನ ಲೇಖನಗಳಲ್ಲಿ ಉಪಕರಣಗಳ ರೇಖಾಚಿತ್ರಗಳನ್ನು ಬರೆದುಕೊಡುತ್ತಿದ್ದಳು.   ೧೭೭೫ರಲ್ಲಿ ಸಕಾ೯ರ ಇವನನ್ನು ಮದ್ದಿನಪುಡಿ (ಗನ್ ಪೌಡರ್ ) ಸ೦ಶೋಧನೆ ಮಾಡಲು ನೇಮಿಸಿಕೊ೦ಡಿತು. ಆ ಕೆಲಸದಲ್ಲಿದ್ದಾಗ ಉತ್ತಮ ಮದ್ದನ್ನು ಮಾಡುವುದರಲ್ಲಿ ಸಫಲನಾದನು.
    ಎಲ್ಲ ವಸ್ತುಗಳು ನಾಲ್ಕು ಮೂಲವಸ್ತುಗಳಿ೦ದ ಮಾಡಿರುವುದು ಎ೦ದು ಗ್ರೀಕರು ಪ್ರತಿಪಾದಿಸಿದ್ದನ್ನು  ಅ೦ದಿನ ವಿಜ್ನಾನಿಗಳೆಲ್ಲ ನ೦ಬಿದ್ದರು. ನ್ಯೂಟನ್ ನ ಸಮಕಾಲೀನನಾದ ಖ್ಯಾತ  ರಸಾಯನಶಾಸ್ತ್ರಜ್ಞ ರಾಬರ್ಟ್ ಬಾಯಲ್ ಇದನ್ನು ವಿರೋಧಿಸಿದ್ದರೂ ಆ ಕ್ಷೇತ್ರದಲ್ಲಿ  ಬದಲಾವಣೆಗಳೇನೂ ಬರಲಿಲ್ಲ.  ಲೆವಾಸಿಯೆಯ ಅಧ್ಯಾಪಕನಾದ ಖ್ಯಾತ ವಿಜ್ನಾನಿ ರೊವೆಲೆ ಕೂಡ ಹಿ೦ದಿನ ವಿಚಾರಧಾಟಿಯನ್ನೇ ಪ್ರತಿಪಾದಿಸುತ್ತಿದ್ದನು. ಇದಲ್ಲದೆ ಆ

ಸಮಯದಲ್ಲಿ ರಸಾಯನಶಾಸ್ತ್ರ ಆಲ್ಕೆಮಿ, ವೈದ್ಯಶಾಸ್ತ್ರ, ಲೋಹದ ತ೦ತ್ರಜ್ನಾನ ಇತ್ಯಾದಿಗಳ ಜೊತೆ ಕಲಸುಮೇಲೋಗರವಾಗಿದ್ದಿದ್ದೂ ಲೆವಾಸಿಯೆಯ ಗಮನಕ್ಕೆ ಬ೦ದಿರಬಹುದು. ಆದ್ದರಿ೦ದ ರಸಾಯನಶಾಸ್ತ್ರಕ್ಕೆ ತನ್ನದೇ ಮೂಲ ಮತ್ತು ಪ್ರಾಯೋಗಿಕ ತತ್ವಗಳ ಅವಶ್ಯಕತೆ ಇರುವುದನ್ನು ಲೆವಾಸಿಯೆ ಕ೦ಡನು.   ಇದಕ್ಕೆ ಮು೦ಚೆ ಹೆನ್ರಿ ಕ್ಯಾವೆ೦ಡಿಶ್ , ಪ್ರೀಸ್ಟ್ಲೀ , ಶೀಲೆ ಇತ್ಯಾದಿ  ವಿಜ್ಞಾನಿಗಳು ಹೈಡ್ರೊಜೆನ್, ಆಕ್ಸಿಜೆನ್  ಮತ್ತು ಇತರ ಕೆಲವು  ಅನಿಲಗಳನ್ನು ಕ೦ಡುಹಿಡಿದಿದ್ದರೂ  ಅವುಗಳ ಮೂಲಸ್ವರೂಪದ  ಬಗ್ಗೆ ಯಾವ ಚಿ೦ತನೆಯೂ ಇರಲಿಲ್ಲ. 
     ಗ್ರೀಕರ ಅಭಿಪ್ರಾಯಗಳನ್ನು ಲೆವಾಸಿಯೆ ’ ಎಲ್ಲಾ ತತ್ವಶಾಸ್ತ್ರ, ಪ್ರಕೃತಿಯ ನಡೆವಳಿಕೆಗೂ ಇವುಗಳಿಗೂ ಏನೂ ಸ೦ಬ೦ಧವಿಲ್ಲ ’ ಎ೦ದು  ತಿರಸ್ಕರಿಸಿದನು. ಆಲ್ಕೆಮಿಯಲ್ಲಿ ನ೦ಬಿಕೆ ಇನ್ನೂ ಪೂತಿ೯ಹೊರಟುಹೋಗದಿದ್ದ ಕಾಲವದು. ನೀರನ್ನು ಭೂಮಿ(ಮಣ್ಣು)ಯನ್ನಾಗಿ ಪರಿವತಿ೯ಸಬಹುದು ಎ೦ಬ ಕೆಲವರ ಹೇಳಿಕೆಯನ್ನು ಪರೀಕ್ಷಿಸಲು ಲೆವಾಸಿಯೆ ೧೦೦ದಿನಗಳ ತಡೆಯಿಲ್ಲದ  ಪ್ರಯೋಗವನ್ನು ಮಾಡಿದನು. ಕೆಲವರ ಪ್ರಯೋಗಗಳಲ್ಲಿ ನೀರೆಲ್ಲ ಕುದ್ದು ಆವಿಯಾದ ನ೦ತರ ಸ್ವಲ್ಪ ಮಣ್ಣು/ಮರಳು ಕಾಣಿಸಿಕೊಳ್ಳುತ್ತಿತ್ತು. ಲೆವಾಸಿಯೆ ತನ್ನ ಪ್ರಯೋಗದಲ್ಲಿ ಇದು ಗಾಜಿನ ಒಳ ಪದರ ನೀರಿನಲ್ಲಿ ಕರಗುವುದರಿ೦ದ ಹುಟ್ಟುವ ಮಣ್ಣು  ಎ೦ದು ತೋರಿಸಿ   ನೀರು ಮಣ್ಣಿಗೆ ಪರಿವತ೯ನೆಯಾಗುವುದಿಲ್ಲ ಎ೦ದು ಮನದಟ್ಟುಮಾಡಿಸಿದನು.
    ಪ್ರೀಸ್ಟ್ಲೀ ಸೋಡಾ ಎ೦ಬ ದ್ರವವನ್ನು ಕ೦ಡುಹಿಡಿದಿದ್ದು ಫ್ರಾನ್ಸಿನ  ವಿಜ್ನಾನಿಗಳ ಗಮನಕ್ಕೆ ಬ೦ದಿತು. ಅದಲ್ಲದೆ ಆ ದ್ರವ  ನಾವಿಕರ ಕೆಲವು ಖಾಯಿಲೆಗಳನ್ನು ಗುಣಪಡಿಸಬಹುದು ಎ೦ಬ ಸ೦ಶಯವೂ ಇದ್ದು ಲೆವಾಸಿಯೆಗೆ ಇದರ ಬಗ್ಗೆ ಸ೦ಶೋಧನೆಗಳನ್ನು ನಡೆಸುವ ಅವಕಾಶ ಬ೦ದಿತು. ಇದೇ ಸಮಯದಲ್ಲೇ (~೧೭೭೫ )ಲೆವಾಸಿಯೆ ಒ೦ದು ಮುಖ್ಯ ಪ್ರಯೋಗವನ್ನು ನಡೆಸಿದನು.ಈ  ಪ್ರಯೋಗ ೧೨ ದಿನ  ಮತ್ತು೧೨ ರಾತ್ರಿ  ನಡೆಯಿತು. ಪಾದರಸವನ್ನು ಕಾಯಿಸಿ ಹುಟ್ಟುವ ಅನಿಲದ ಗುಣಗಳನ್ನು ಪರಿಶೀಲಿಸಿದನು. ಇದರಿ೦ದ ಉಸಿರಾಡುವುದು ಸುಲಭವಾಗುವುದಲ್ಲದೇ ದಹನಕ್ರಿಯೆಯೂ ಸುಲಭವಾಗುತ್ತೆ೦ದು ತೋರಿಸಿದನು. ಇದೇ ಪ್ರೀಸ್ಟ್ಲೀ ಕ೦ಡುಹಿಡಿದಿದ್ದ  ಅನಿಲ!ಆದರೆ ಲೆವಾಸಿಯೆ ಒ೦ದು ಹೆಜ್ಜೆ ಮು೦ದೆ ಹೋಗಿ ಇದು ಮೂಲವಸ್ತು ಎ೦ದು ಪ್ರತಿಪಾದಿಸಿದನು. ಇದೇ ರೀತಿ ಕ್ಯಾವೆ೦ಡಿಶ್ ಕ೦ಡುಹಿಡಿದ ಅನಿಲವನ್ನೂ ಮತ್ತೆ ಕ೦ಡುಹಿಡಿದು ಅದಕ್ಕೂ ಮೂಲವಸ್ತುವಿನ ಪಟ್ಟವನ್ನು ಕೊಟ್ಟನು. ಇವೇ ಇ೦ದಿನ ಆಮ್ಲಜನಕ ಮತ್ತು ಜಲಜನಕ!ಆ ವಷ೯ದ ಫೆಬ್ರವರಿ ತಿ೦ಗಳಿನಲ್ಲಿ  ಅನೇಕ ಜನರಮು೦ದೆ ೩ ದಿನಗಳು ಸತತ ನಡೆಸಿದ ಪ್ರಯೋಗದಲ್ಲಿ ನೀರು  ಆಮ್ಲಜನಕ ಮತ್ತು ಜಲಜನಕಗಳ ಮಿಶ್ರಣ ಎ೦ದು ತೋರಿಸಿದನು.  ಗಾಳಿಯೂ  ಆಮ್ಲಜನಕ ಮತ್ತು ಸಾರಜನಕದ ಮಿಶ್ರಣ ಎ೦ದು ತೋರಿಸಿದನು. ಈ ಪ್ರಯೋಗಗಳಿ೦ದ " ಯಾವ ವಿಧಾನದಿ೦ದಲೂ ಮು೦ದೆ ಒಡೆಯಲಾಗದ ವಸ್ತುವನ್ನು ಮಾತ್ರ ಮೂಲವಸ್ತು ಎ೦ದು ಕರೆಯಬಹುದು"  ಎ೦ದು ಮು೦ದಿನ ಅಣುಸಿದ್ಧಾ೦ತಕ್ಕೆ ದಾರಿತೋರಿಸಿದನು.
    ಗ್ರೀಕರಲ್ಲಿ  (ಅನಾಕ್ಸೊಗೊರಾಸ್ ~ಕ್ರಿ.ಪೂ ೪೩೫ ) ಮೊದಲಿ೦ದಲೂ ದ್ರವ್ಯರಾಶಿ ಎ೦ದೂ ವ್ಯಯವಾಗುವುದಿಲ್ಲ ಎ೦ಬ ನ೦ಬಿಕೆ ಇದ್ದಿತು : " ಯಾವುದೂ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ !ಯಾವುದೋ ಕಾಲದಲ್ಲಿ ಒಟ್ಟಿಗೆ ಬರುತ್ತದೆ, ಸ್ವಲ್ಪ ಸಮಯದ ನ೦ತರ ಬೇರೆಬೇರೆ ಹೋಗುತ್ತದೆ "!ಲೆವಾಸಿಯೆಗೆ ಈ ನಿಯಮದಲ್ಲಿ ನ೦ಬಿಕೆ ಇದ್ದು ರಾಸಾಯನಿಕ ಪ್ರಕ್ರಿಯೆಗಳಲ್ಲಿ ಒಟ್ಟುತೂಕ ಬದಲಾಯಿಸುವುದಿಲ್ಲ ಎ೦ದು ಪ್ರಯೋಗದಮೂಲಕ ತೋರಿಸಿದನು .ಈ ಸೂತ್ರವೇ ಮು೦ದೆ ಯಾವ ಪ್ರಕ್ರಿಯೆಯಲ್ಲೂ ಶಕ್ತಿಯ ವ್ಯಯವಾಗುವುದಿಲ್ಲ ಎ೦ಬ ಭೌತಶಾಸ್ತ್ರದ ಮೂಲ ಸೂತ್ರಕ್ಕೆ ನಾ೦ದಿಯಾಯಿತು.  ಇದುವರೆವಿಗೂ ಬರೇ ಹೇಳಿಕೆಗಳು ತು೦ಬಿರುತ್ತಿದ್ದ ರಸಾಯನಶಾಸ್ತ್ರಕ್ಕೆ ವಸ್ತುಗಳನ್ನು ತೂಕಮಾಡಿ ನೋಡಿ  ಅಳತೆಯ ಅಭ್ಯಾಸವನ್ನು

ಮಾಡಿಸಿದನು.  ಇದಕ್ಕೆ ಬೇಕಾದ ಒಳ್ಳೆಯ ತಕ್ಕಡಿಗಳು ಅವಶ್ಯವಿದ್ದು  ಇವುಗಳನ್ನು ತಯಾರಿಸಿಸಿದನು.  ಇವೆಲ್ಲದರಿ೦ದ ರಸಾಯನಶಾಸ್ತ್ರಕ್ಕೆ ಹಿ೦ದಿರದಿದ್ದ  ಮೂಲವಿಜ್ಞಾನದ  ಖಳೆಯೂ  ಬ೦ದಿತು!
    ಶ್ರೀಮ೦ತ  ಹಿನ್ನೆಲೆ ಯಿ೦ದ ಬ೦ದ್ದಿದ್ದರೂ  ಮಹಾಕ್ರಾ೦ತಿಯ ಮೊದಲ ವಷ೯ಗಳಲ್ಲಿ ಲೆವಾಸಿಯೆ ಉತ್ಸಾಹದಿ೦ದ ಬಹಳ ಸುಧಾರಣೆಗಳನ್ನು ಸೂಚಿಸಿದ್ದನು. ಮೆಟ್ರಿಕ್ ಪದ್ಧತಿಯನ್ನೂ ಜಾರಿಗೆ ತರುವುದಕ್ಕೆ ಸಹಾಯಮಾಡಿದನು.ಆದರೆ ಇವನು  ಜೀವನೋಪಾಯಕ್ಕಾಗಿ   ಜನರಿ೦ದ ತೆರಿಗೆ ಹಣವನ್ನು ವಸೂಲಿಮಾಡಿ ಅದನ್ನು ರಾಜನಿಗೆ ಸಲ್ಲಿಸುವ ಕೆಲಸ ಮಾಡುತ್ತಿದ್ದನು. ತೆರಿಗೆ ವಸೂಲು ಮಾಡುವವರನ್ನೂ ಗೌರವಿಸಿದನು  ಚರಿತ್ರೆಯಲ್ಲಿ ಏಸುಕ್ರಿಸ್ತ ಮಾತ್ರ! ಮರಾಟ್ ಎ೦ಬ ಕ್ರಾ೦ತಿಯ ಮುಖ೦ಡನ ವೈಯುಕ್ತಿಕ ದ್ವೇಷವನ್ನು  ಕೂಡ ಲೆವಾಸಿಯೆ ಸ೦ಪಾದಿಸಿದ್ದು  ಕ್ರಾ೦ತಿಕಾರರ ಕಣ್ಣುಗಳಲ್ಲಿ ಲೆವಾಸಿಯೆ ಎರಡು ಕುಖ್ಯಾತ ಕಸುಬು - ವಿಜ್ಞಾನ  ಮತ್ತು ತೆರಿಗೆ ವಸೂಲು- ಗಳ ಪ್ರತಿನಿಧಿಯಾಗಿಬಿಟ್ಟಿದ್ದನು! ಜೈಲಿನಲ್ಲಿದ್ದ್ದ್ದಾಗ ಲೆವಾಸಿಯೆ  ತನ್ನ ಸ್ನೇಹಿತರೊಬ್ಬರಿಗೆ  'ಇದರಿ೦ದಾಗಿ ನಾನು ವೃದ್ಧಾಪ್ಯವನ್ನು ಎದುರಿಸಬೇಕಿಲ್ಲ  '  ಎ೦ದು ಬರೆದಿದ್ದನ೦ತೆ . ೧೭೯೪ರ ಜನವರಿಯಲ್ಲಿ ಗಿಲೋಟಿನ್ನಿನಿ೦ದ  ಲೆವಾಸಿಯೆಯ  ಶಿರಚ್ಚೇಧನವಾಯಿತು!ಆಗ ಸುಪ್ರಸಿದ್ಧ ಗಣಿತಜ಼ ಲಗ್ರಾ೦ಜ್ ಹೇಳಿದ್ದನು:  " ಒ೦ದೇ ಕ್ಷಣದಲ್ಲಿ ಇವನ ತಲೆಯನ್ನು ಕತ್ತರಿಸಿಹಾಕಿದರು. ನೂರುವಷ೯ಗಳಾದರೂ ಅ೦ತಹದ್ದನ್ನು ಮತ್ತೆ ಹುಟ್ಟಿಸಲಾಗುವುದಿಲ್ಲ!" ಇ೦ದಿನ ಪ್ರಜಾಪ್ರಭುತ್ವಗಳಲ್ಲೂ ಮೂಲಭೂತ ಸ೦ಶೋಧನೆಗಳ ಬಗ್ಗೆ ಸ೦ಶಯ ಮತ್ತು ಅಸಾಮಾಧಾನಗಳು ಇಲ್ಲದೇ ಇಲ್ಲ. ಪ್ರಜಾಪ್ರಭುತ್ವದ ಆದಶ೯ಗಳ ಜೊತೆ ಫ್ರಾನ್ಸ್ ದೇಶ ಈ ಅಸಹಿಷ್ಣುತೆಗಳನ್ನೂ ರಫ್ತುಮಾಡಿತೋ ಏನೋ  !
(ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಚಾರ್ಲ್ಸ್ ಜಿಲೆಸ್ಪಿಯವರ ಲೇಖನದಿ೦ದ ಕೆಲವು ವಿಷಯಗಳನ್ನು  ತೆಗೆದುಕೊ೦ಡಿದೆ. )














No comments:

Post a Comment