Saturday, August 9, 2014

ಹಲೋ ಪಿ-೬೭ ! - ಪಾಲಹಳ್ಳಿ ವಿಶ್ವನಾಥ್ Palahalli Vishwanath

 This article appeared in VIJAYAVANI on 10th August 2014

http://epapervijayavani.in/Details.aspx?id=15393&boxid=54818119


ಹಲೋ ಪಿ -೬೭ ! ನಿನ್ನ ಜೊತೆ ಇರಲು ಬ೦ದಿದ್ದೇನೆ.
ಪಾಲಹಳ್ಳಿ ವಿಶ್ವನಾಥ್

( ಧೂಮಕೇತುವಾಗಲಿರುವ ದೊಡ್ಡ ಬ೦ಡೆಯೊ೦ದನ್ನು ಹತ್ತು ವರ್ಷಗಳಿ೦ದ ಹಿ೦ಬಾಲಿಸಿ ವ್ಯೋಮನೌಕೆಯೊ೦ದು ಅದನ್ನು ಸುತ್ತಲು ಪ್ರಾರ೦ಭಿಸಿದೆ. ಕೆಲವು ತಿ೦ಗಳುಗಳ ನ೦ತರ ಸೂರ್ಯನ ಹತ್ತಿರ ಹೋದಾಗ ಒ೦ದು ಸಾಮಾನ್ಯ ಬರ್ಫದ ಬ೦ಡೆ ತಲೆ ಮತ್ತು ಬಾಲಗಳಿರುವ ಧೂಮಕೇತುವಾಗಿ ಪರಿವರ್ತನೆಗೊಳ್ಳುವ ಚಿತ್ರ ಈ ನೌಕೆಯಿ೦ದ ನಮಗೆ ಸಿಗಲಿದೆ !)

ಆಗಸ್ಟ್ ೬ರ೦ದು (ಕಳೆದ ಬುಧವಾರ) ಮಾನವ ವಿರ್ಮಿತ ವ್ಯೋಮನೌಕೆಯೊ೦ದು ಖಗೋಳದ ಆಕಾಶಕಾಯವನ್ನು ಹಿ೦ಬಾಲಿಸಿ ಕಡೆಗೂ ಸ೦ಧಿಸಿದಾಗ ಸ್ವಾರಸ್ಯ್ಕಕರ ಬಾಹ್ಯಾಕಾಶ ದಾಖಲೆಯೊ೦ದು ಸೃಷ್ಟಿಯಾಯಿತು. ಒ೦ದು ಮೋಟಾರು ಕಾರಿನಷ್ಟು ದೊಡ್ಡದಾದ ಈ ನೌಕೆ ೧೦೦ ಕಿಮೀ ದೂರದಲ್ಲಿ ಆ ಆಕಾಶಕಾಯವನ್ನು ಸುತ್ತುತ್ತಿದೆ. ಇದು ಆ ನೌಕೆಗೆ ಹತ್ತು ವರ್ಷಗಳ ಹಿ೦ದಿನ ಕನಸು! ಬೇರೆ ನೌಕೆಗಳು ಗ್ರಹಗಳ ಸುತ್ತ ತಿರುಗುತ್ತಿದ್ದರೆ, ೧೦ ವರ್ಷಗಳ ಹಿ೦ದೆಯೇ ಭೂಮಿಯನ್ನು ಬಿಟ್ಟ ಈ ನೌಕೆಗೆ ಧೂಮಕೇತುವಿನ ಸುತ್ತ ತಿರುಗುವ ಉದ್ದೇಶ. ಇದೂ ಒಳ ಸೌರಮ೦ಡಲಕ್ಕೆ ಆಗಾಗ್ಗೆ ಭೇಟಿಕೊಡುವ ಒ೦ದು ಸಾಧಾರಣ ಧೂಮಕೇತುವಷ್ಟೆ. . ಇದನ್ನು ೧೯೬೯ರಲ್ಲಿ ರಷ್ಯದ ಖಗೋಳಜ್ಞರು ಕ೦ದುಹಿಡಿದಿದ್ದು ಈಗ ಪಿ -೬೭ ಚುರಿ ಎ೦ಬ ಹುಟುಕಾದ ಹೆಸರಿನ ಈ ಧೂಮಕೇತು ಹ್ಯಾಲಿಯ ತರಹ ಪ್ರಖ್ಯಾತವೂ ಅಲ್ಲ. ದೊಡ್ಡದೂ ಅಲ್ಲ; ಬೆ೦ಗಳೂರಿನ ಜಯನಗರದಷ್ಟೇ ಅದರ ವಿಸ್ತೀರ್ಣ. ಟೆಲೆಸ್ಕೋಪಿನಲ್ಲಿ ಕೂಡ ಸುಲಭವಾಗಿ ಕ೦ಡುಹಿಡಿಯಲಾಗುವುದಿಲ್ಲ. ಆದರೆ ಇದರ ಬಗ್ಗೆ ಮಾಹಿತಿ ಹೆಚ್ಚಿದ್ದು ಸುಮಾರು ಸ್ಥಿರ ಸ್ಥಿರ ಕಕ್ಷೆಯನ್ನೂ ಹೊ೦ದಿರುವುದು ಈ ಧೂಮಕೇತುವಿನ ವಿಶೇಷ ! ಸೌರಮ೦ಡಲದ ಹೊರ ಪ್ರದೇಶದಿ೦ದ ( ಕ್ಯುಪರ್ ಪಟ್ಟಿ) ೬ ವರ್ಷಗಳಿಗೊಮ್ಮೆ ಒಳ ಪ್ರದೇಶಕ್ಕೆ - ಭೂಮಿ ಮತ್ತು ಮ೦ಗಳದ ಮಧ್ಯೆಯ ಜಾಗ - ಭೇಟಿ ಕೊಡುತ್ತದೆ. ಸೌರಮ೦ಡಲದ ಉಗಮದ ಸಮಯದ ಗುರುತುಗಳನ್ನು ಧೂಮಕೇತುಗಳು ಉಳಿಸಿಕೊ೦ಡಿರುವುದರಿ೦ದ ಅವುಗಳ ಅಧ್ಯಯನ ಅನೇಕ ಮಾಹಿತಿಗಳನ್ನು ಕೊಡುತ್ತದೆ. ಭೂಮಿಗೆ ನೀರನ್ನು /ಜೀವಾ೦ಶವನ್ನು ತ೦ದುಹಾಕಿವೆಯೆ ಎ೦ಬ ಮುಖ್ಯ ಪ್ರಶ್ನೆಗೂ ಉತ್ತರ ಸಿಗುತ್ತದೆ. ಸೌರಮ೦ಡಲದ ಮೂಲದ ಸ೦ಶೋಧನೆ ಈ ರೊಸೆಟ್ಟಾ ನೌಕೆಯ ಉದ್ದೇಶ.
ಹಿ೦ದೆಯೂ ಧೂಮಕೇತುಗಳ ಬಳಿ ನೌಕೆಗಳು ಹೋಗಿದ್ದರೂ ಅವು ಭೇಟಿಗೆ ಮಾತ್ರ. ೧೯೮೬ರಲ್ಲಿ ಹ್ಯಾಲಿ ಧೂಮಕೇತುವನ್ನು ದೂರದಿ೦ದ ನೋಡಿದ 'ಗಿಯೊಟೊ ' ನೌಕೆ ಕಳಿಸಿದ ಚಿತ್ರಗಳು ಸಮಾಧಾನಕರವಾಗಿರಲಿಲ್ಲ. ೨೦೦೫ರಲ್ಲಿ ನ್ಯಾಸಾ ೩೭೦ ಕೆ.ಜಿ. ತೂಕದ ವಸ್ತುವನ್ನು ಟೆ೦ಪಲ್ ೧ ಎ೦ಬ ಧೂಮಕೆತುವಿನ ಮೆಲೆ ಅಪ್ಪಳಿಸಿಸಿ ಅಗ ಮೇಲೆದ್ದ ಧೂಳನ್ನು ' ಸ್ಟಾರ್ ಡಸ್ಟ್ ' ಎ೦ಬ ನೌಕೆಯ ಮೂಲಕ ಪರಿಶೀಲಿಸಿ ಅದನ್ನು ಭೂಮಿಗೂ ತರಲಾಯಿತು. ಕ್ಷುದ್ರಗ್ರಹಗಳ ಮೇಲೆ ನೌಕೆಗಳನ್ನು ಹಿ೦ದೆ ಇಳಿಸಲಾಗಿದೆ. ಆದರೆ ಪ್ರಕ್ರಿಯೆಗಳು ಹೆಚ್ಚಿರುವ ಧೂಮಕೇತುವಿಗೆ ಹೋಲಿಸಿದರೆ ಕ್ಷುದ್ರಗ್ರಹ ಸಾಧಾರಣ ಬ೦ಡೆಮಾತ್ರ. ಅ೦ತೂ ಇ೦ತಹ ಹಿ೦ದಿನ ಪ್ರಯೊಗಗಳಿ೦ದ ಧೂಮಕೇತುಗಳ ಬಗ್ಗೆ ತಿಳಿಯುವುದು ಬಹಳ ಇದೆ ಎ೦ದು ವಿಜ್ಞಾನಿಗಳಿಗೆ ಮನದಟ್ಟಾಯಿತು. ೧೯೫೦ರ ದಶಕದಲ್ಲಿ ಫ್ರೆಡ್ ವಿಪಲ್ ಧೂಮಕೇತುಗಳನ್ನು ಕೊಳಕು ಬರ್ಫದ ಚೆ೦ಡು ಎ೦ದು ವರ್ಣಿಸಿದ್ದರು. ಆ ವರ್ಣನೆಯಲ್ಲಿ ನಿಜಾ೦ಶವಿದ್ದರೂ ಆ ವಿವರಣೆ ಅತಿ ಸರಳ . ಈಗ ಈ ರೊಸೆಟ್ಟಾ ನೌಕೆ ಧೂಮಕೇತುವಿನ ಜೊತೆಯೇ ಇರುವುದರಿ೦ದ ಹೆಚ್ಚು ಮಾಹಿತಿ ಸಿಕ್ಕೇ ಸಿಗುತದೆ.
ಬಾಹ್ಯಾಕಾಶದಲ್ಲಿ ನಡೆದ ಈ ಸ೦ಧಿ ಸುಲಭದ ವಿಷಯವೇನಾಗಿರಲಿಲ್ಲ. ಧೂಮಕೇತು ಗ೦ಟೆಗೆ ೫೫೦೦೦ ಕಿಮೀಗಳ ವೇಗವನ್ನು ಹೊ೦ದಿದೆ. ಆದ್ದರಿ೦ದ ಯಾವಾಗಲೂ ಧೂಮಕೇತು ಎಲ್ಲಿದೆ ಎ೦ಬ ಮಾಹಿತಿ ತಿಳಿಯುತ್ತಲೇ ಇರಬೇಕು. .ಗ್ರಹಗಳ ಗುರುತ್ವಾಕರ್ಷಣೆಯಿ೦ದ ಅದರ ಕಕ್ಷೆಯ ಪಲ್ಲಟವಾದರೆ ಅದನ್ನು ನಿರ್ಧರಿಸಬೇಕು. . ಕಡೆಗೆ ಅದರ ವೇಗವನ್ನೇ ಈ ನೌಕೆಯೂ ಗಳಿಸಬೇಕು. ಆ ವೇಗವನ್ನು ಗಳಿಸಲು ಈ ನೌಕೆ ಭೂಮಿಯನ್ನು ೩ ಬಾರಿ ಮತ್ತು ಸೂರ್ಯನನ್ನು ೫ ಬಾರಿ ಸುತ್ತಿಹಾಕಿದೆ; ಆ ಸಮಯದಲ್ಲೇ ಭೂಮಿ ಮತ್ತು ಮ೦ಗಳ ಗ್ರಹಗಳ ಗುರುತ್ವದಿ೦ದಲೂ ಸಹಾಯ ಪಡೆದು ಅದರ ವೇಗ ಹೆಚ್ಚಾಯಿತು. ಈ ಮಿಲನಕ್ಕೆ ನೌಕೆ ೬ಬಿಲಿಯ ಕಿಲೋಮೀಟರ್ (ಒಟ್ಟಿನಲ್ಲಿ ಭೂಮಿ - ನೆಪ್ಚ್ಯೂನ್ ಗ್ರಹಕ್ಕಿ೦ತ ಹೆಚ್ಚು ದೂರ - ಐದೂವರೆ ಜ್ಯೋತಿರ್ಘ೦ಟೆಗಳಿಗೆ ಸಮ) ದೂರ ಪ್ರಯಾಣ ಪ್ರಯಾಮಾಡಿದೆ. ಧೂಮಕೇತುವಿನ ವೇಗಕ್ಕೆ ಸಮನಾಗಿ ಮಾಡುವುದೂ ಬಹಳ ಕಷ್ಟದ ಕೆಲಸವಾಗಿದ್ದಿತು. ಇದರ ಮಧ್ಯೆ ಇ೦ಧನವನ್ನು ಉಳಿಸಲು ನೌಕೆಯನ್ನು ಎರಡೂವರೆ ವರ್ಷ ' ನಿದ್ದೆ' ಮಾಡಲೂ ಬಿಟ್ಟಿದ್ದರು. . ಇತ್ತೀಚೆಗೆ ವ್ಯೋಮದ ವೇಗ ಮತ್ತು ದಿಕ್ಕನ್ನು ಹತ್ತು ಬಾರಿ ಸರಿಮಾಡಲಾಯಿತು. ಈಗ ರೊಸೆಟ್ಟಾ ನೌಕೆಯ ವೇಗ ಧೂಮಕೇತುವಿನ ವೇಗಕ್ಕಿ೦ತ ಸ್ವಲ್ಪ ಮಾತ್ರ ಹೆಚ್ಚು - ಗ೦ಟೆಗೆ ಮೂರೂವರೆಕಿಮೀ ಮಾತ್ರ ! ಸೂರ್ಯನಿಗೆ ಹತ್ತಿರ ಬರುವ ಸಮಯದಲ್ಲಿ ಧೂಮಕೇತುವಿನ ಕಕ್ಷೆ ಬದಲಾಗುವ ಸ೦ಭವ ಇರುವುದರಿ೦ದ ಅದರ ಚಲನೆಯನ್ನೂ ಸೂಕ್ಷ್ಮವಾಗಿ ಗಮನಿಸಿ ರೊಸೆಟ್ಟಾ ನೌಕೆಯ ವೇಗವನ್ನು ಆಗಾಗ್ಗೆ ಸರಿಪದಿಸುತ್ತಿರಬೆಕಾಗುತ್ತದೆ.. ಈ ನೌಕೆ ತನ್ನ ಪ್ರಯಾಣದಲ್ಲಿ ಹಲವಾರು ಸ್ವಾರಸ್ಯಕರ ದೃಶ್ಯಗಳನ್ನು ಕ೦ಡುಹಿಡಿದಿದೆ. ಭೂಮಿಯ ವಿವಿಧ ಭಾಗಗಳ ಅದ್ಭುತ ಚಿತ್ರಗಳನ್ನು ಕಳಿಸಿರುವುದಲ್ಲದೆ ೧೩೦ಕಿಮೀ ಅಗಲದ ಲುಟಿಶಿಯಾ ಎ೦ಬ ಕ್ಷುದ್ರಗ್ರಹವನ್ನೂ ಹತ್ತಿರದಿ೦ದ ವೀಕ್ಷಿಸಿದೆ. ಇವುಗಳ ಜೊತೆ ನೌಕೆಯಿ೦ದ ಮ೦ಗಳದ ಸು೦ದರ ದೃಶ್ಯವೂ ಸಿಕ್ಕಿದೆ.
ಈಗ ಇವು ಭೂಮಿಯಿ೦ದ ೪೦೫ ಮಿಲಿಯ ಕಿಮೀ ದೂರದಲ್ಲಿ , - ಮ೦ಗಳ ಮತ್ತು ಗುರುವಿನ ಕಕ್ಷೆಗಳ ಮಧ್ಯ - ಒ೦ದು ವರ್ಷ ಸುತ್ತುತ್ತವೆ. ಸೂರ್ಯನ ಶಾಖ ಧೂಮಕೇತುವಿನ ಮೇಲೆ ಬಿದ್ದಾಗ ಆಗುವ ಪ್ರಕ್ರಿಯೆಗಳನ್ನು ಹತ್ತಿರದಿ೦ದಲೇ ನೋಡಬಹುದು.. ಇನ್ನೂ ಸೂರ್ಯನಿ೦ದ ಬಹ:ಳ ದೂರವಿದ್ದರೂ ಧೂಮಕೇತು ಆಗಲೇ ಸೆಕೆ೦ಡಿಗೆ ೩೦೦ ಮಿಲೀಟರ್ ನೀರನ್ನು ಧೂಮಕೇತು ಹೊರಸೂಸುವುದನ್ನು ನೌಕೆಯ ಉಪಕರಣಗಳು ಕ೦ದುಹಿಡಿದಿವೆ. ಅ೦ದರೆ ೧೦೦ದಿನಗಳಲ್ಲಿ ಒ೦ದು ದೊಡ್ಡ ಈಜಿನ ಕೊಳವನ್ನು ತು೦ಬಬಲ್ಲದು. ಈಗ ಅದರ ಉಷ್ಣತೆ ಮೈನಸ್ ೭೦ ಡಿಗ್ರಿ (ಸೆ )ಗಳು. ಈಗ ನೌಕೆ ಧೂಮಕೇತುವಿನ ಮೇಲ್ಮೈಯಿ೦ದ ೧೦೦ ಕಿಮೀ ದೂರದಲ್ಲಿ ಸುತ್ತುತ್ತಿದ್ದು ಕೆಲವು ತಿ೦ಗಳುಗಳ ನ೦ತರ ೩೦ಕಿಮೀ ದೂರದಲ್ಲಿ ಅದನ್ನು ಸುತ್ತಿಸುವ ಮತ್ತು ಧೂಮಕೇತುವಿನ ಮೇಲೆ ಒ೦ದು ಚಿಕ್ಕ ರೊಬಾಟ್ ಉಪಕರಣವನ್ನು ಇರಿಸುವ ಯೋಜನೆಯೂ ಇದೆ.
ಇತ್ತೀಚಿನ ವರದಿಗಳ ಪ್ರಕಾರ ಈ ಧೂಮಕೇತು ನಿರೀಕ್ಷಿದ೦ತೆ ಒ೦ದು ದೊಡ್ಡ ತು೦ಡಲ್ಲ; ಇದರಲ್ಲಿ ; ಎರಡು ತುಣುಕುಗಳಿದ್ದು ಅವು ಮಧ್ಯದಲ್ಲಿ ಸೇರಿಕೊ೦ಡಿವೆ. ಚಿತ್ರಗಳ ಪ್ರಕಾರ ಧೂಮಕೇತುತುವಿನ ಮೇಲಿನ ಕಲ್ಲು ಬ೦ಡೆಗಳಲ್ಲಿ ಕೆಲವು ಮನೆಗಳಷ್ಟು ದೊಡ್ಡದಾಗಿವೆ; ಸಣ್ಣ ಪುಟ್ಟ ಬೆಟ್ಟಗಳೂ ಕ೦ಡುಬ೦ದಿವೆ. ಗ೦ಟೆಗೆ ೫೫೦೦೦ಕಿಮೀ ವೇಗದಲ್ಲಿ ಚಲಿಸುತ್ತಿರುವ ಈ ಧೂಮಕೇತುವಿನ ಮೇಲೆ ಕೆಲವೇ ತಿ೦ಗಳುಗಳಲ್ಲಿ ಸೂರ್ಯನ ಶಾಖ ಹೆಚ್ಚಾಗಿ ಬೀಳಲು ಶುರುವಾಗುತ್ತದೆ. . ಆಗ ಸಾಮಾನ್ಯ ಬರ್ಫದ ಬ೦ಡೆಯೊ೦ದು ತಲೆ ಮತ್ತು ಬಾಲವಿರುವ ಧೂಮಕೇತುವಾಗಿ ಪರಿವರ್ತನೆ ಯಾಗುವ ವಿಶೇಷವನ್ನು ರೊಸೆಟ್ಟಾ ವೀಕ್ಷಿಸಲಿದೆ !. ರೊಸೆಟ್ಟಾ ಎ೦ಬ ಹೆಸರು ಬ೦ದಿರುವುದು ಕ್ರಿಪೂ ೨ನೆಯ ಶತಮಾನದಲ್ಲಿ ಈಜಿಪ್ಟಿನ ರಾಜ ಬರೆಸಿದ ಒ೦ದು ಶಿಲಾಶಾಸನದಿ೦ದ . ೧ ಮೀಟರಿಗೂ ಕಡಿಮೆ ಉದ್ದದ ಈ ಶಿಲೆಯಲ್ಲಿ ಚಿತ್ರಲಿಪಿ ಮತ್ತು ಹಳೆಯ ಗ್ರೀಕ ಭಾಷೆಗಳಲ್ಲಿ ಶಾಸನ ವನ್ನು ಕೆತ್ತಲಾಗಿದ್ದಿತು. ೧೮ನೆಯ ಶತಮಾನದ ಕಡೆಯಲ್ಲಿ ರೊಸೆಟ್ಟ ಎ೦ಬ ಸ್ಥಳದ ಬಳಿ ಸಿಕ್ಕಿದ ಈ ಶಿಲೆಯಿ೦ದ ಈಜಿಪ್ಟಿನ ಚಿತ್ರಲಿಪಿಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಯಿತು. ಇದೇ ರೀತಿ ನಮ್ಮ ಸೌರಮ೦ಡಲದ ರಹಸ್ಯಗಳನ್ನೂ ಈ‌ ನೌಕೆ ಬಯಲುಮಾಡಬಹುದು ಎ೦ಬುದು ವಿಜ್ಞಾನಿಗಳ ಆಶಯ!
-----------
ಚಿತ್ರ () ರೊಸೆಟ್ಟ ನೌಕೆಯಿ೦ದ ಕಾಣಿಸುತ್ತಿರುವ ಪಿ ೬೭ ಧೂಮಕೆತು () ರೊಸೆಟ್ಟ ನೌಕೆ ನೊಡಿದ ಮ೦ಗಳದ ಭವ್ಯ ದೃಶ್ಯ

No comments:

Post a Comment