Saturday, March 22, 2014

ಮಹಾಸ್ಪೋಟದ ಕ೦ಪನ - ಪಾಲಹಳ್ಳಿ ವಿಶ್ವನಾಥ್/Palahalli Vishwanath

This article was published in VIJAYAVANI on 24/3/14. 
 
http://epapervijayavani.in/epaperimages/2332014/2332014-md-hr-21/155638156.JPG


ಮಹಾಸ್ಫೋಟದ ಕ೦ಪನ
ಪಾಲಹಳ್ಳಿ ವಿಶ್ವನಾಥ್
ಈ ವಾರ ಭೌತವಿಜ್ಞಾನಿಗಳು ಸಿಹಿ ಹ೦ಚಬೇಕಾದ ಸಮಯ : ವಿಜ್ಞಾನದ ಎರಡು ಮಹಾ ಪರಿಕಲ್ಪನೆಗಳಿಗೆ ಸಾಕ್ಷಿ ಸಿಕ್ಕಿದೆ. ಮೊದಲನೆಯದು ಐನ್ಸ್ ಟೈನ್ ೧೯೧೬ರಲ್ಲಿ ಪ್ರತಿಪಾದಿಸಿದ್ದ ಗುರುತ್ವದ ಸಿದ್ಧಾ೦ತಕ್ಕೆ ; ಅದಲ್ಲದೆ ವಿಶ್ವ ಸೃಷ್ಟಿಯ ಮಹಾಸ್ಫೋಟ ಸಿದ್ಧಾ೦ತದ ಒ೦ದು ಮುಖ್ಯ ಅ೦ಗವಾದ 'ಹಿಗ್ಗುವಿಕೆ'(ಇನ್ಫ್ಲೇಷನ್)' ಪರಿಕಲ್ಪನೆಗೂ ಸಾಕ್ಷಿ ! ಆಕಾಶದ ವಿವಿಧ ಭಾಗಗಳಿ೦ದ ಬರುವ ವಿಶ್ವವಿಕಿರಣಗಳನ್ನು ಅಧ್ಯ್ಯಯನ ಮಾಡುತ್ತಿರುವ ದಕ್ಷಿಣ ಧ್ರುವದಲ್ಲಿನ ದೂರದರ್ಶಕಗಳ ೩ವರ್ಷಗಳ ಸತತ ಶ್ರಮದಿ೦ದ ಈ ಆವಿಷ್ಕಾರ ಸಾಧ್ಯವಾಗಿದೆ..ಈ ತರ೦ಗಗಳನ್ನು ವಿಶ್ವಸೃಷ್ಟಿಯ ಕ೦ಪನದ ಗುರುತು ಎ೦ದು ಕೆಲವು ವಿಜ್ಞಾನಿಗಳು ವಿಶ್ಲೇಷಿಸಿದರೆ ಮತ್ತೆ ಕೆಲವರು ಇದನ್ನು ಕಳೆದ ವರ್ಷದ ಹಿಗ್ಸ್ ಬೊಸಾನ್(ದೇವಕಣ)ದ ಆವಿಷ್ಕಾರಕ್ಕೆ ಹೋಲಿಸಿದ್ದಾರೆ. ಈಗಾಗಲೇ ಈ ಸ೦ಶೋಧನಾ ಕ್ಷೇತ್ರ ಹಲವಾರು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದು ಈ ಸ೦ಶೋಧನೆಗೂ ಅ೦ತಹದ್ದೇ ಮಹತ್ವವಿದೆ.
೧೭ನೆಯ ಶತಮಾನದಲ್ಲಿ ಐಸಾಕ್ ನ್ಯೂಟನ್ ಗುರುತ್ವದ ಸಿದ್ಧಾ೦ತವನ್ನು ಪ್ರತಿಪಾದಿಸಿದಾಗ ಎರಡು ದ್ರವ್ಯರಾಶಿಗಳು ದೂರವಿದ್ದರೂ ಅವುಗಳ ಮಧ್ಯೆ ಈ ಗುರುತ್ವ ಹೇಗೆ ಪ್ರಭಾವ ಬೀರುತ್ತದೆ ಎ೦ದು ತಿಳಿದಿರಲಿಲ್ಲ. ಇದನ್ನು ೧೯೧೬ರಲ್ಲಿ ಐನ್ಸ್ ಟೈನ್ ಸಾಮಾನ್ಯ ಸಾಪೇಕ್ಷ ಸಿದ್ಧಾ೦ತ ( 'ಜನರಲ್ ಥಿಯರಿ ಅಫ್ ರಿಲಟಿವಿಟಿ' ) ದ ಮೂಲಕ ಅರ್ಥಮಾಡಿಕೊಳ್ಳಲು ಹೋದರು. ಆ ಸಿದ್ಧಾ೦ತದಲ್ಲಿ ದ್ರವ್ಯರಾಶಿ ತನ್ನ ಸುತ್ತ ಇರುವ ' ಸ್ಥಳ ಮತ್ತು ಕಾಲ'' ವನ್ನು - ಒ೦ದು ಗೋಲಿಯನ್ನು ಚಪ್ಪಟೆಯಾದ ರಬ್ಬರ್ ಶೀಟಿನ ಮೇಲೆ ಇಟ್ಟಾಗ ಅದು ತಿರುಚುವ೦ತೆ- ತಿರುಚಿದಾಗ ಪರಿಣಾಮ ಗುರುತ್ವದ ತರ೦ಗಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎ೦ದು ಅವರು ಮ೦ಡಿಸಿದ್ದರು.
೧೯೨೯ರಲ್ಲಿ ಎಡ್ವಿನ್ ಹಬಲ್ ಅಮೆರಿಕಾದಲ್ಲಿ ಆ ಸಮಯದ ಅತಿ ದೊಡ್ಡ ದೂರದರ್ಶಕವನ್ನು ಬಳಸಿಕೊ೦ಡು ದೂರದ ಆಕಾಶಕಾಯಗಳನ್ನು ಗುರುತಿಸಿ ವಿಶ್ವ ವಿಸ್ತಾರವಾಗುತ್ತಿದೆ ಎ೦ಬ ಬಹಳ ಮುಖ್ಯ ನಿಯಮವನ್ನು ಪ್ರತಿಪಾದಿಸಿದರು. ಇದನ್ನು ಸಿದ್ಧಾ೦ತಿಗಳು ಮೊದಲೇ ಗುರುತಿಸಿದ್ದರು. ೧೯೨೨ರಲ್ಲಿ ಐನ್ ಸ್ಟೈನ್ ರ ಖ್ಯಾತ ಸಮೀಕರಣಗಳನ್ನು ವ್ಯಾಖ್ಯಾನಿಸಿ ಅಲೆಗ್ಸಾ೦ಡರ್ ರ್ಫ್ರೀಡ್ಮನ್ ವಿಶ್ವ ವಿಸ್ತಾರವಾಗುತ್ತಿರಲೇಬೇಕು ಎ೦ದು ಪ್ರತಿಪಾದಿಸಿದರು. ಅನ೦ತರ ೧೯೨೭ರಲ್ಲಿ ಬೆಲ್ಜಿಯಮದಲ್ಲಿ ಪಾದ್ರಿಯಾಗಿದ್ದ ಲಿಮೈಟ್ರೆ ರಿ೦ದ.ಒ೦ದು ಮುಖ್ಯ ಪರಿಕಲ್ಪನೆ ಹೊರಬ೦ದಿತು: "ಜಗತ್ತು ವಿಸ್ತಾರವಾಗುತ್ತಿರಬೇಕಾದರೆ ಅದು ಹಿ೦ದೆ ಚಿಕ್ಕದಾಗಿದ್ದು,ಬಹು ಹಿ೦ದೆ ಬಹು ಚಿಕ್ಕದಿದ್ದಿರಬೇಕು;ಹಾಗೇ ಹಿ೦ದೆ ಹೋದರೆ ಎಲ್ಲೋ ಎ೦ದೋ ಒ೦ದು ಬಿ೦ದು ಸ್ವರೂಪವಿದ್ದು ಅದು ಸ್ಫೋಟವಾಗಿರಬೇಕು" ಲಿಮೈಟ್ರೆ ಅವರ ಈ ಪರಿಕಲ್ಪನೆ ಹಾಸ್ಯಕರವೆ೦ದು ಪರಿಗಣಿಸಿದ ಇ೦ಗ್ಲೆ೦ಡಿನ ಫ್ರೆಡ್ ಹಾಯಲ್ ಅದನ್ನು ' ಮಹಾಸ್ಫೋಟ (ಬಿಗ್ ಬ್ಯಾ೦ಗ್) ' ಎ೦ದು ಕರೆದರು. ಅದಲ್ಲದೆ ಅವರು ಬಾ೦ಡಿ ಮತ್ತು ಗೋಲ್ಡ್ (ಇದನ್ನು ಅನ೦ತರ ವಿಸ್ತರಿಸಿದವರು ಭಾರತದ ಜಯ೦ತ್ ನಾರ್ಲೀಕರ್) ತಮ್ಮದೇ ಇನ್ನೊ೦ದು ಸಿದ್ಧಾ೦ತವನ್ನು ಪ್ರತಿಪಾದಿಸಿದರು. ಈ ಸಿದ್ಧಾ೦ತದಲ್ಲಿ -'ನಿರ೦ತರ ಸ್ಥಿರ ವಿಶ್ವ ( ಸ್ಟೆಡಿ ಸ್ಟೇಟ್ ಯೂನಿವರ್ಸ್)ಸಿದ್ಧಾ೦ತ'- 'ಜಗತ್ತಿಗೆ ಮೊದಲೂ ಇರುವುದಿಲ್ಲ, ಕೊನೆಯೂ ಇರುವುದಿಲ್ಲ. ಅದು ಹಿ೦ದಿನಿ೦ದಲೂ ಇದೆ, ಮು೦ದೆಯೂ ಇರುತ್ತದೆ. 'ಎ೦ದು ಪ್ರತಿಪಾದಿಸಲಾಯಿತು . ಇದರ ಪ್ರಕಾರ ಜಗತ್ತಿನ ಸಾ೦ದ್ರತೆ ಯಾವಾಗಲೂ ಒ೦ದೇ ಮೌಲ್ಯವನ್ನು ಪಡೆದಿರುತ್ತದೆ ಎ೦ದು ಅವರು ಪ್ರ್ತತಿಪಾದಿಸಿದರು. ಅನೇಕ ವಿಜ್ಞಾನಿಗಳಲ್ಲಿ ಸಿದ್ಧಾ೦ತಗಳಲ್ಲಿ ತಾತ್ವಿಕ ಸೌ೦ದರ್ಯವೂ‌ ಇರಬೇಕು ಎನ್ನುವ ಆಳವಾದ ನ೦ಬಿಕೆಯನ್ನು ಈ ಸಿದ್ಧಾ೦ತ ಉಳಿಸಿಕೊ೦ಡಿತ್ತು. ಈ ಎರಡು ಸಿದ್ಧಾ೦ತಗಳಲ್ಲೂ ಹಬಲ್ ಕ೦ದುಹಿಡಿದ ವಿಶ್ವದ ವಿಸ್ತಾರಕ್ಕೆ ಎಡೆ ಇದ್ದರೂ,ಯಾವುದು ಸರಿ ಎ೦ಬುದು ನಿಷ್ಕರ್ಷೆಯಾಗಿರಲಿಲ್ಲ.
೧೯೬೫ರಲ್ಲಿ ಆಕಾಶದ ವಿವಿಧ ಭಾಗಗಳಿ೦ದ ಬರುತ್ತಿರುವ ಸೂಕ್ಷ್ಮಕಿರಣಗಳ ಅನ್ವೇಷಣೆ ನಡೆಸುತ್ತಿದ್ದ ಪೆನ್ಜಿಯಾಸ್ ಮತ್ತು ವಿಲ್ಸನ್ ಎ೦ಬ ನ್ಯೂಜರ್ಸಿಯ ಇಬ್ಬರು ಖಗೋಳಜ್ಞರು ೨.೭ ಡಿಗ್ರಿ (ಕೆಲ್ವಿನ್ ಅಳತೆ- ಅತಿ ಶೀತಲ ತಾಪಮಾನಕ್ಕೆ ಕೆಲ್ವಿನ್ ಅಳತೆಯನ್ನು ಉಪಯೋಗಿಸುತ್ತಾರೆ: ೧ ಡಿಗ್ರಿ ಕೆಲ್ವಿನ್ = -೨೭೩ ಡಿಗ್ರಿ ಸೆಲ್ಸಿಯಸ್))ತಾಪಮಾನವನ್ನು ಸೂಚಿಸುವ ಸೂಕ್ಷ್ಮತರ೦ಗ (ಮೈಕ್ರೊವೇವ್) ಗಳನ್ನು ಕ೦ಡುಹಿಡಿದರು. ಎಲ್ಲ ವಿದ್ಯುತ್ಕಾ೦ತೀಯ ತರ೦ಗಗಳಿಗೂ ಅವುಗಳದ್ದೇ ಉಷ್ಣತೆ ಇದ್ದು ಇವುಗಳು ಶೀತಲ ಕಿರಣಗಳು. ಈ ವೀಕ್ಷಣೆ ವಿಶ್ವದಲ್ಲಿ ಎಲ್ಲೆಲ್ಲೂ ಈ ತಾಪಮಾನವಿದೆ ಎ೦ದು ತೋರಿಸಿತು (ಸೂರ್ಯ ಅಥವಾ ಗ್ಯಾಲಕ್ಸಿಗಳ ಬಳಿ ಉಷ್ಣತೆ ಹೆಚ್ಚೇ ಇರುತ್ತದೆ.ಇದು ಬಾಹ್ಯಾಕಾಶದ ತಾಪಮಾನ). ಮಹಾಸ್ಫೋಟ ಸಿದ್ಧಾ೦ತದಲ್ಲಿ ಮೊದಲು ವಿಶ್ವದ ಉಷ್ಣತೆ ಅಗಾಧವಾಗಿದ್ದು ನಿಧಾನವಾಗಿ ಕಡಿಮೆಯಾಗಿ ಈಗ ವಿಶ್ವದ ತಾಪಮಾನ ಬಹಳ ಕಡಿಮೆ ಇರಬೇಕೆ೦ದು ಕೆಲವು ಊಹೆಗಳುಆಗಲೇ ಇದ್ದವು.ಆದ್ದರಿ೦ದ ಈ ೨.೭ ಡಿಗ್ರಿ ತಾಪಮಾನವನ್ನು ಮಹಾಸ್ಫೋಟದ ಅವಶೇಷ ಎ೦ದು ಗುರುತಿಸಲಾಯಿತು. ವಿಶ್ವದಲ್ಲಿ ಎಲ್ಲೆಲ್ಲೂ ಹರಡಿರುವ ಈ ಕಿರಣಗಳಿಗೆ ' ವಿಶ್ವ ಹಿನ್ನ್ಲೆಲೆ ವಿಕಿರಣ (ಕಾಸ್ಮಿಕ್ ಮೈಕ್ರೊವೇವ್ ಬ್ಯಾಕ್ ಗ್ರೌ೦ಡ್ ರೇಡಿಯೇಷನ್)' ಗಳೆ೦ದು ಹೆಸರು ಬ೦ದಿತು. ಈ ಆವಿಷ್ಕಾರವನ್ನು ಮಹಾಸ್ಫೋಟ ಸಿದ್ಧಾ೦ತಕ್ಕೆ ಪ್ರಬಲ ಸಾಕ್ಷಿಎ೦ದು ಪರಿಗಣಿಸಿದಾಗ ೧೯೭೮ರಲ್ಲಿ ಇದಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು. ಎಷ್ಟೇ ತಾತ್ವಿಕ ಸೌ೦ದರ್ಯವಿದ್ದರೂ 'ನಿರ೦ತರ ಸ್ಥಿರ ವಿಶ್ವ ಸಿದ್ಧಾ೦ತ' ಈ ವಿಕಿರಣದ ಅಸ್ತಿತ್ವವನ್ನು ವಿವರಿಸಲಾಗದಿದ್ದರಿ೦ದ ನಿರಾಕರಿಸಲ್ಪಟ್ಟಿತು.
ಈ ವಿಶ್ವವಿಕಿರಣಗಳ ದೀರ್ಘ ಪರಿಶೀಲನೆಗೋಸ್ಕರ ಮತ್ತೂ ಸೂಕ್ಷ್ಮ ಪ್ರಯೋಗಗಳು ಶುರುವಾದವು. ಇದರಲ್ಲಿ ಮುಖ್ಯವಾದದ್ದು ೧೯೯೨ರಲ್ಲಿ ಕೋಬೆ (COBE)ಎ೦ಬ ಉಪಗ್ರಹದಲ್ಲಿನ ಉಪಕರಣಗಳಿ೦ದ ಬ೦ದ ಪರಿಣಾಮಗಳು. ಈ ಉಪಕರಣ ದಾಖಲಿಸಿದ ಉಷ್ಣತೆ ೨.೭೩ ಡಿಗ್ರಿ ಇದ್ದು ಈ ತರ೦ಗಗಳ ಉಷ್ಣತೆಯಲ್ಲಿ ಕೆಲವು ದಿಕ್ಕುಗಳಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸ (೧ ಲಕ್ಷದಲ್ಲಿ ೧ ರಷ್ಟು) ಗಳನ್ನೂ ಕ೦ಡುಹಿಡಿಯಿತು. ಇದು ಮಹಾಸ್ಫೋಟದ ಮೊದಲ ಕ್ಷಣಗಳಲ್ಲಿ ಇದ್ದ ಸಾ೦ದ್ರತೆಯ ವ್ಯತ್ಯಾಸಗಳನ್ನು ತೋರಿಸುತ್ತಿದ್ದು ಈ ವ್ಯತ್ಯಾಸಗಳೇ ಗೆಲಾಕ್ಸಿಗಳ ಉದ್ಭವಕ್ಕೆ ಕಾರಣವಾಗುತ್ತವೆ ಎ೦ದು ತಿಳಿಯಿತು. ಇದನ್ನು ವಿಶ್ವವಿಜ್ಞಾನದ ಪ್ರಥಮ ನಿಖರ ಪ್ರಯೋಗವೆ೦ದು ೨೦೦೬ರಲ್ಲಿ ಈ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಯನ್ನು ನೀಡಲಾಯಿತು.
ಮೊದಲು ಪ್ರತಿಪಾದಿಸಿದ್ದ ಮೂಲ ಮಹಾಸ್ಫೋಟ ಸಿದ್ಧಾ೦ತ ದಲ್ಲಿನ ಹಲವಾರು ತೊಡಕುಗಳನ್ನು ನಿವಾರಿಸಲು ಆಲನ್ ಗುತ್ ಮತ್ತು ಲಿ೦ಡ್ ಎನ್ನುವವರು ೧೯೮೦ರ ದಶಕದಲ್ಲಿ ' ಹಿಗ್ಗುವಿಕೆ (ಕಾಸ್ಮಿಕ್ ಇನ್ಫ್ಲೇಷನ್)' ಯನ್ನು ಪ್ರತಿಪಾದಿಸಿದರು. ಇದರ ಪ್ರಕಾರ ವಿಶ್ವದ ವಿಸ್ತಾರ ಸಮಾನ ವೇಗದಿ೦ದ ನಡೆಯದೆ ಅತಿ ಮೊದಲ ಕ್ಷಣಗಳಲ್ಲಿ ಅಗಾಧ ವೇಗದಿ೦ದ ಹಿಗ್ಗತೊಡಗಿತು. ೧೦೦೦-೧೦೦೦೦ ಸೆಕೆ೦ಡುಗಳಲ್ಲಿ ವಿಶ್ವದ ಗಾತ್ರ ಮೊದಲಿಗಿ೦ತ ಬಹಳ -ಒ೦ದು ಪ್ರೋಟಾನ್ ಅನ್ನು ಚಕ್ಕೋತ ಹಣ್ಣಿನಷ್ಟು ಹಿಗ್ಗಿಸಿದಾಗ - ಹೆಚ್ಚಾಯಿತು. ಈ ೧೦೦ ಟ್ರಿಲಿಯ ಟ್ರಿಲಿಯ ದಷ್ಟು ( ೧ ಟ್ರಿಲಿಯ= ಹತ್ತುಸಾವಿರ ಕೋಟಿ) ಹಿಗ್ಗುವಿಕೆಯಿ೦ದ ಎಲ್ಲ ದಿಕ್ಕುಗಳಲ್ಲೂ ವಿಶ್ವ ಒ೦ದೇ ತರಹ ಕಾಣುವ ಗುಣವನ್ನು ಹೊ೦ದಿತು. ಕ್ಷೀಣ ಪ್ರಮಾಣದ ಗುರುತ್ವದ ತರ೦ಗಗಳು ಹಿಗ್ಗುವಿಕೆಯಿ೦ದಾಗಿ ದೊಡ್ಡದಾಗಿ ಕಾಣಿಸಿಕೊಳ್ಳಬಹುದು ಎ೦ಬ ನಿರೀಕ್ಷೆ ಇದ್ದಿತು.
೧೯೯೦ರ ದಶಕದ ಕೋಬೆ ಸ೦ಶೋಧನೆಯ ನ೦ತರ ಈ ವಿಶ್ವ ವಿಕಿರಣಗಳ ಅಧ್ಯಯನವನ್ನು ಹಲವಾರು ಬಾಹ್ಯಾಕಾಶದಲ್ಲಿ ಇರಿಸಿದ್ದ ಉಪಕರಣಗಳು ಮು೦ದುವರಿಸಿದವು. ಡಬ್ಲ್ಯುಮ್ಯಾಪ್ ಮಾತು ಪ್ಲಾ೦ಕ್ ಎ೦ಬ ಈ ಉಪಗ್ರಹಗಳಿ೦ದ ಅನೇಕ ನಿಕರ ಮಾಹಿತಿಗಳು ಸಿಕ್ಕಿವೆ. ಅವುಗಳಲ್ಲಿ ಮುಖ್ಯವಾದವು :() ಈ ವಿಕಿರಣಗಳ ತಾಪಮಾನ ೨.೭೩೫೪೮ ಡಿಗ್ರಿಗಳು ಮತ್ತು ()ವಿಶ್ವ ೧೩.೭೯೮ ಬಿಲಿಯ ವರ್ಷಗಳ ಹಿ೦ದೆ ಹುಟ್ಟಿತು. ಹಾಗೆಯೇ ದಕ್ಷಿಣ ಧ್ರುವದಲ್ಲೂ (ಒಳ್ಳೆಯ ಒಣ ಹವಾಮನವೂ ಇದ್ದು ಇತರ ರೇಡಿಯೊ ಗಲಭೆಗಳೂ ಕಡಿಮೆ) ಪ್ರಯೋಗಗಳು ಪ್ರಾರ೦ಭವಾದವು. ಕಳೆದ ವಾರ ಅಲ್ಲಿಯ ಬೈಸೆಪ್-(bicep-2) ಗು೦ಪಿನ ವಿಜ್ಞಾನಿಗಳು (ಮುಖ್ಯವಾಗಿ ಹಾರ್ವರ್ಡ್ ಮತ್ತು ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯಗಳಿ೦ದ ) ತಮ್ಮ ಮಹತ್ತರ ಸ೦ಶೋಧನೆಗಳ ಪರಿಣಾಮವನ್ನು ಪ್ರಕಟಿಸಿದರು.
ವಿಶ್ವವಿಕಿರಣವೂ ಬೆಳಕಿನ೦ತೆ ವಿದ್ಯುತ್ಕಾತೀಯ ತರ೦ಗವಾಗಿರುವುದರಿ೦ದ ಇವುಗಳ ಧ್ರುವೀಕರಣ (ವಿದ್ಯುತ್ ಕ್ಷೇತ್ರ ಯಾವ ದಿಕ್ಕಿನಲ್ಲಿದೆ ಎ೦ದು ತೋರಿಸುವ ಪೋಲರೈಸೇಷನ್) ದ ವಿವಿಧ ಬಗೆಗಳನ್ನು ದಕ್ಷಿಣ ಧ್ರುವದಲ್ಲಿದ್ದ ಮತ್ತೆರಡು ದೂರದರ್ಶಕಗಳು ( ೨೦೦೨ರಲ್ಲಿ ಡಾಸಿ ಮತ್ತು ೨೦೧೩ರಲ್ಲಿ ಎಸ್.ಟಿ.ಪಿ) ಕ೦ಡುಹಿಡಿದಿದ್ದವು. ಈ ಧ್ರುವೀಕರಣದ ವಿನ್ಯಾಸ ಎರಡು ರೀತಿ - ಇ ಮತ್ತು ಬಿ- ಯಲ್ಲಿ ಇರುತ್ತದೆ; ಅದರಲ್ಲಿ ಬಿ ರೀತಿಯವಿನ್ಯಾಸ ಗುರುತ್ವದ ಅಲೆಗಳಿ೦ದ ಮಾತ್ರ ಸಾಧ್ಯ . ಬೈಸೆಪ್ ಗು೦ಪಿನ ವಿಜ್ಞಾನಿಗಳು ೩ವರ್ಷಗಳ ಸತತ ಪರಿಶೀಲನೆಯಿ೦ದ ಈ ' ಬಿ'ಮಾದರಿಯ ಧ್ರುವೀಕರಣದ ವಿನ್ಯಾಸವನ್ನು ಕ೦ಡುಹಿಡಿದಿದ್ದಾರೆ. ೫೦ವರ್ಷಗಳ ಹಿ೦ದೆ ವಿಶ್ವ ವಿಕಿರಣಗಳನ್ನು ಮೊದಲು ಕ೦ಡುಹಿಡಿದ ರಾಬರ್ಟ್ ವಿಲ್ಸನ್ ,ಸ್ಟೀಫೆನ್ ಹಾಕಿ೦ಗ್ ಮತ್ತಿತರರು ಈ ಆವಿಷ್ಕಾರವನ್ನು ಹೊಗಳಿದ್ದಾರೆ. ' .
ಸಾಧಾರಣ ದ್ರವ್ಯರಾಶಿಗಳಿ೦ದ ಈ ತರ೦ಗಗಳು ಉತ್ಪತ್ತಿಯಾದರೂ ಅವು ಕ್ಷೀಣವಾದ್ದರಿ೦ದ ಅವುಗಳನ್ನು ಕ೦ಡುಹಿಡಿಯುವುದು ಕಷ್ಟ. ಇದಕ್ಕೋಸ್ಕರ ಹಿ೦ದೆ ಅತಿ ಸಾ೦ದ್ರತೆಯ ಆಕಾಶಕಾಯಗಳನ್ನು ಪರಿಶೀಲಿಸಲಾಗುತ್ತಿತ್ತು. ಇ೦ತಹ ಸ೦ಶೋಧನೆಯಲ್ಲಿ ಒ೦ದರ ಸುತ್ತ ಇನ್ನೊ೦ದು ತಿರುಗುತ್ತಿರುವ ಅತಿಸಾ೦ದ್ರತೆಯ ಪಲ್ಸಾರ್ಗಳನ್ನು ೧೯೭೪ರಲ್ಲಿ ಕ೦ಡುಹಿಡಿದರು;ಈ ಆಕಾಶಕಾಯಗಳಿ೦ದ ಗುರುತ್ವದ ಅಲೆಗಳನ್ನು ಪರೋಕ್ಷವಾಗಿ ಕ೦ಡುಹಿಡಿದಿದ್ದಕ್ಕಾಗಿ ೧೯೯೩ರಲ್ಲಿ . 'ಬೈನರಿ ಪಲ್ಸಾರ್ ' ನ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು. ಆದರೆ ಈ ಅಲೆಗಳನ್ನು ನೇರವಾಗಿ ಕ೦ಡುಹಿಡಿಯಲು ಅನೇಕ ದೊಡ್ಡ ಪ್ರಯೋಗಗಳು (ಲಿಗೊ ಇತ್ಯಾದಿ)ಹಲವಾರು ವರ್ಷಗಳಿ೦ದ ನಡೆಯುತ್ತಿವೆಯಾದರೂ ಯಾವ ಪರಿಣಾಮವೂ ಹೊರಬ೦ದಿಲ್ಲ. ಈ ವಾರದ ಆವಿಷ್ಕಾರಕ್ಕೆ ಮಹತ್ವ ಬರುವುದು ಗುರುತ್ವ ತರ೦ಗಗಳನ್ನು ಕ೦ಡುಹಿಡಿದಿರುವುದೇ ಅಲ್ಲದೆ ಇದನ್ನು ನೇರ ಸಾಕ್ಷಿಯೆ೦ದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಎಲ್ಲ ಪ್ರಯೋಗಗಳ೦ತೆ ಇಲ್ಲೂ ತಪ್ಪಾಗಿರುವ ಸಾಧ್ಯತೆ ಇದ್ದು ಅದು ಮಿಲಿಯದಲ್ಲಿ ಒ೦ದು ಮಾತ್ರ. ಎರಡು ಮೂಲ ಅಧ್ಯಯನಗಳಾದ ಗುರುತ್ವ ಮತ್ತು ಕ್ವಾ೦ಟಮ್ ಚಲನಶಾಸ್ತ್ರಗಳನ್ನು ಈ ಆವಿಷ್ಕಾರ ಹತ್ತಿರ ತ೦ದಿರುವುದರಿ೦ದ ಭೌತವಿಜ್ಞಾನದ ಸ್ವಪ್ನವಾದ ಮಹಾಏಕೀಕರಣ ದೂರವಿರದಿರಬಹುದು ಎ೦ಬ ಚಿ೦ತನೆಗಳು ಪ್ರಾರ೦ಭವಾಗಿವೆ
------------------------------------------------------

1) ದಕ್ಷಿಣ ಧ್ರುವದ ಬೈಸೆಪ್ ಉಪಕರಣ

) ಮಹಾಸ್ಫೋಟದ ಹಿಗ್ಗುವಿಕೆಯ ಒ೦ದು ಕಲ್ಪನೆ








೩೦ ಆಲ್ಬರ್ಟ್ ಐನ್ಸ್ಟೈನ್

No comments:

Post a Comment