Monday, May 29, 2017

ರಾಬರ್ಟ್ ಓಪನ್ ಹೈಮರ್ , ಪರಮಾಣು ಬಾ೦ಬಿನ ಬ್ರಹ್ಮ - ಪಾಲಹಳ್ಳಿ ವಿಶ್ವನಾಥ್ Palahalli Vishwanath


ಹೊಸತು - ಜೂನ್ ೨೦೧೭






ರಾಬರ್ಟ್ ಓಪನ್ ಹೈಮರ್ , ಪರಮಾಣು ಬಾ೦ಬಿನ ಬ್ರಹ್ಮ
- ಮೇಧಾವಿ ವಿಜ್ಞಾನಿಯ ಗೊ೦ದಲಮಯ ಜೀವನ -
ಪಾಲಹಳ್ಳಿ ವಿಶ್ವನಾಥ್
-------------------------------------------------------------------------------------------------
ಸಮಯ ೧೯೪೫ ಜುಲೈ . ಸ್ಥಳ ಅಮೆರಿಕದ ಪಶ್ಚಿಮದ ನ್ಯೂಮೆಕ್ಸಿಕೊ ಪ್ರಾ೦ತ್ಯದಲ್ಲಿ ಮರಭೂಮಿಯ ಪ್ರದೇಶ ಅಲಮಗೊರ್ಡೊ ಎ೦ಬ ಪುಟ್ಟ ಊರು, ಹತ್ತಿರದಲ್ಲೆ ಜಗತ್ತಿನ ಬಹಳ ಮುಖ್ಯ ಅಸ್ತ್ರಪರೀಕ್ಷೆಯೊ೦ದು . ಬೆಳಿಗ್ಗೆ ಗ೦ಟೆಗೆ ಪ್ರಾರ೦ಭವಾಗಿ ಒ೦ದು ಆಸ್ಫೋಟನೆ ನಡೆಯಿತು . ೧೦ಮೈಲು ದೂರದಲ್ಲಿದ್ದ ಒಬ್ಬ ವಿಜ್ಞಾನಿ ಪ್ರಕಾರ : “ನನ್ನ ತಲೆಯನ್ನು ಭೂಮಿಯಮೇಲಿಟ್ಟಿದ್ದೆ. ತಕ್ಷಣವೇ ಅದು ಬಿಸಿಯಾಗತೊಡಗಿತು. ತಲೆ ಎತ್ತಿ ನೋಡಿದಾಗ ಬಹಳ ಬೆಳಕಿನ ಸೂರ್ಯನಿದ್ದ೦ತೆ ಕಾಣಿಸಿತು. ದೂರದಲ್ಲಿ ಹೊಗೆಯ ಮೋಡ ಮೇಲೆ ಹೋಗುತ್ತಿತ್ತು. ೫೦ಸೆಕೆ೦ಡುಗಳ ನ೦ತರ ಅಗಾಧ ಶಬ್ದ.”  ಸುಮಾರು ೨೦೦ ಮೈಲುಗಳ ತನಕ ಪ್ರಕಾಶ ಕ೦ಡುಬ೦ದು ಒ೦ದು ಕಿಲೊಮೀಟರ್ ಸುತ್ತ ಎಲ್ಲವೂ ನಾಶವಾಗಿ ಕಿಮೀ ಸುತ್ತ ಕಟ್ಟಡಗಳೆಲ್ಲಾ ಉರುಳಿದವು. ಟ್ರಿನಿಟಿ ಎ೦ಬ ಹೆಸರಿದ್ದ ಪರೀಕ್ಷೆ ಸಫಲವಾಗಿತ್ತು! ಅದನ್ನು ಹತ್ತಿರದಿ೦ದ ವೀಕ್ಷಿಸಿದ ವಿಜ್ಞಾನಿಯಬ್ಬರು ' " ಕೆಲವರು ಅತ್ತರು. ಕೆಲವ್ರು ನಕ್ಕರು, ಬಹಳ ಜನ ಮೌನದಿ೦ದಲೆ ಇದ್ದರು. ಆದರೆ ನನಗೆ ಭಗವದ್ಗೀತೆಯ ಕೃಷ್ಣ ರಾಜಕುಮಾರ ಅರ್ಜುನನಿಗೆ ' ನಿನ್ನ ಕರ್ತವ್ಯವನ್ನು ನೀನು ಮಾಡು ' ಎ೦ದದ್ದು ಜ್ಞಾಪಕ ಬ೦ದಿತು. ಅದಲ್ಲದೆ ಅಲ್ಲಿಯ ಒ೦ದು ಶ್ಲೋಕ " (ಕಾಲೋಸ್ಮಿ..) ನಾನು ಮೃತ್ಯು. ನನ್ನ ಕಾರ್ಯ ವಿನಾಶ " ವನ್ನೂ ನಾನು ಹೇಳಿಕೊ೦ಡೆ ". ಅವನ ಕರ್ತವ್ಯ ಪರಿಪಾಲನೆಗೆ ಗೀತೆಯ ಉಪದೇಶವನ್ನು ಅನುಸರಿಸಿದ ವಿಜ್ಞಾನಿಯಾರು?

-----------------------------------------------------------------------------------------------
() ವಿವಿಧ ಆಸಕ್ತಿಗಳ ವಿಜ್ಞಾನಿ
ಹಿ೦ದಿನ ಕಾಲದಲ್ಲಿ ಕೋಪರ್ನಿಕಸ್, ನ್ಯೂಟನ್,ಇತ್ಯಾದಿ ವಿಜ್ಞಾನಿಗಳಿಗೆ ಅನೆಕ ವಿಷಯಗಳಲ್ಲಿ ಆಸಕ್ತಿ ಇದ್ದಿತು. ಆದರೆ ಈಗಿನ ಕಾಲದಲ್ಲಿ ಇ೦ದಿನ ಪ್ರಪ೦ಚದ ವೈವಿಧ್ಯತೆಗಳಿ೦ದ ವಿದ್ವಾ೦ಸರಿಗೆ ಒಟ್ಟಿಗೆ ಹಲವಾರು ಆಸಕ್ತಿಗಳನ್ನು ನಡೆಸಿಕೊ೦ದುಬರಲು ಆಗುವುದಿಲ್ಲ. ಆದರೂ ಇದಕ್ಕೆ ಅಪವಾವಾಗಿದ್ದವರು ೧೯೦೪ರಲ್ಲಿ ನ್ಯೂಯಾರ್ಕ್ ನಗರದ ಮೇಲ್ವರ್ಗದ ಯೆಹೂದಿ ಕುಟು೦ಬವೊದರಲ್ಲಿ ಹುಟ್ಟಿದ ರಾಬರ್ಟ್ ಓಪನ್ ಹೈಮರ್ ! ಅವರ ತ೦ದೆ ಬಟ್ಟೆಯ ವ್ಯಾಪಾರಿ ಮತ್ತು ತಾಯಿ ಕಲಾವಿದೆ. ನಗರದ ಮ್ಯಾನ್ ಹ್ಯಾಟನ್ ಪ್ರದೇಶದ ದೊಡ್ಡ ಮನೆಯಲ್ಲಿ ಬೆಳೆದರು. ಮನೆಯ ಗೋಡೆಗಳನ್ನು ವಾನ್ಗೋ ಮತ್ತು ಇತರ ಖ್ಯಾತ ಕಲಾಕಾರರ ಚಿತ್ರಗಳ ಮೂಲ ಪ್ರತಿಗಳು ಅಲ೦ಕರಿಸಿದ್ದವು. ೧೭ನೆಯ ವಯಸ್ಸಿನಲ್ಲಿ ಖ್ಯಾತ ಹಾರ್ವರ್ಡ ವಿದ್ಯಾಲಯಕ್ಕೆ ಓದಲು ಹೋದರು . ಅಲ್ಲಿ ಭೌತ್ತವಿಜ್ಞಾನವಲ್ಲದೆ ತತ್ವಶಾಸ್ತ್ರ, ಪೂರ್ವದ ಧಾರ್ಮಿಕ ಗ್ರ೦ಥಗಳು ಇತ್ಯಾದಿಗಳ ಬಗ್ಗೆಯೂ ಅಧ್ಯಯನ ಮಾಡಿ " ಅವರ ಅದ್ಭುತ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದರ೦ತೆ ' ಅನ೦ತರ ೨೨ನೆಯ ವಯಸ್ಸಿನಲ್ಲಿ ಜರ್ಮನಿಯ ಗಾಟ್೦ಗೆನ್ ವಿದ್ಯಾಲಯಕ್ಕೆ ಹೋಗಿ ಖ್ಯಾತ ಕ್ವಾ೦ಟಮ್ ಭೌತಶಾಸ್ತಜ್ಞ ಮ್ಯಾಕ್ಸ್ ಬಾರ್ನ್ ಜೊತೆ ಸ೦ಶೋಧನೆಗಳನ್ನು ನಡೆಸಿ ಅಲ್ಲಿ ಸೆಮಿನಾರುಗಲಲ್ಲಿ ಬಹಳ ಉತ್ಸಾಹದಿ೦ದ ( ಕೆಲವರ ಪ್ರಕಾರ - ಅತಿ ಅತಿ!) ಭಾಗವಹಿಸುತ್ತಿದ್ದರು; ಪಿ.ಎಚ್ ಡಿ ಪರೀಕ್ಷೆಯಲ್ಲಿ ಅವರನ್ನು ಪ್ರಶ್ಜ್ನಿಸಲು ಬ೦ದಿದ್ದ ವಿಜ್ಞಾನಿ " ಸದ್ಯ ಮುಗಿಯಿತಲ್ಲ! ನನ್ನನ್ನೇ ಪ್ರಶ್ನೆ ಮಾಡುವುದರಲ್ಲಿ ಇದ್ದನಲ್ಲ " ಎ೦ದಿದ್ದರ೦ತೆ ! ಅವರು ಮತ್ತು ಮ್ಯಾಕ್ಸ್ ಬಾರ್ನ್ ರ್ನ್ ಒಟ್ಟಿಗೆ ಬರೆದ ಒ೦ದು ಸ೦ಶೋಧನಾ ಲೇಖನ ಕ್ವಾ೦ಟಮ್ ಚಲನಶಾಸ್ತ್ರದಲ್ಲಿ ಬಹಳ ಮಹತ್ವದ್ದು.. ೧೯೨೮ರಲ್ಲಿ ಅಮೆರಿಕಕ್ಕೆ ವಾಪಸ್ಸು ಬ೦ದು ಕ್ಯಾಲಿಫೊರ್ನಿಯದ ಖ್ಯಾತ ವಿದ್ಯಾಲಯಗಳಾದ ಕ್ಯಾಲ್ಟೆಕ್ ಮತ್ತು ಬರ್ಕಲಿ ಯಲ್ಲಿ ಪ್ರಾಧ್ಯಾಪಕರಾದರು. . ೧೯೩೦ರ ದಶಕದಲ್ಲಿ ಕಪ್ಪುಕುಳಿಗಳ ಬಗ್ಗೆ ಚಿ೦ತಿಸಿ ಆ ಸ್ವಾರಸ್ಯಕರ ಪರಿಕಲ್ಪನೆಯ ಪಿತಾಮಹರಾಗಿ ಸ೦ಶೋಧನಾಲೇಖನವನ್ನು ಬರೆದರು ; ಇದನ್ನು ನೊಬೆಲ್ ಪ್ರಶಸ್ತಿಗೆ ತಕ್ಕ ಸ೦ಶೋಧನೆ ಎ೦ದು ಅನೇಕರು ಗುರುತಿಸಿದ್ದಾರೆ. ಭಾರತೀಯ ಸ೦ಸ್ಕೃತಿಯ ಬಗ್ಗೆ ಅಪಾರ ಜ್ಞಾನಗಳಿಸಿದ್ದ ಆರ್ಥರ್ ರೈಡರ್ ರ ಜೊತೆ ಸ್ನೇಹವಿದ್ದು ಭಗವದ್ಗೀತೆಯನ್ನು ಸ೦ಸ್ಕೃತದಲ್ಲಿ ಓದುವಷ್ಟು ಪಾರ೦ಗತರಾಗಿದ್ದರು. ಒ೦ದು ರೈಲ್ವೆ ಪ್ರಯಾಣದಲ್ಲಿ ಕಾರ್ಲ್ ಮಾರ್ಕ್ಸ್ಸರ ಮಹಾಗ್ರಥ ' ದಾಸ್ ಕ್ಯಾಪಿಟಲ್' ಪೂರ್ತಿ ಓದಿ ಮುಗಿಸಿದರ೦ತೆ !
ಅದೆ ಸಮಯದಲ್ಲಿ ಕಮ್ಯೂನಿಸಮ್ಮಿನ ಆದರ್ಶಗಳಿ೦ದ ಳಿ೦ದ ಬಹಳ ಪ್ರಭಾವಿತರಾದರು. ಯೂರೋಪಿನಲ್ಲಿ ನಾಜಿಗಳು ಯೆಹೂದಿಗಳಿಗೆ ಕೊಡುತ್ತಿದ್ದ ಹಿ೦ಸೆ ನೋಡಿಯೋ ಅಥವಾ ಅಮೆರಿಕದ ಭಾರೀ ಪ್ರಮಾಣದ ಆರ್ಥಿಕ ಕುಸಿತಕ್ಕೆ ಪ್ರೆತಿಕ್ರಿಯೆಯೋ ಇದ್ದಿರಬಹುದು ಎ೦ದು ಕೆಲವು ಇತಿಹಾಸಕಾರರ ಅಭಿಪ್ರಾಯ.. ಆ ಸಮಯದಲ್ಲಿ ಅವರಿಗೆ ಜೀನ್ ಟಟ್ಲಾಕ್ ಎ೦ಬ ಯುವತಿಯ ಸ್ನೇಹ ಶುರುವಾಗಿ ೨ ಬಾರಿ ಮದುವೆಯ ಪ್ರಸ್ತಾಪದ ತನಕವೂ ಹೋಗಿದ್ದಿತು. ಆಕೆಯ ಜೊತೆ ಇವರು ಕಮ್ಯೂನಿಸ್ಟ್ ಪಕ್ಷದ ಸಭೆಗಳಿಗೆ ಹೋಗುತ್ತಿದ್ದರು. ಹಾಗೂ ಆ ಪಕ್ಷಕ್ಕೆ ಪರೋಕ್ಷವಾಗಿ ಹಣಸಹಾಯ ಮಾಡುತ್ತಿದ್ದರು; ೧೯೩೭ರಲ್ಲಿ ಅವರ ತ೦ದೆಯ ನಿಧನದ ನ೦ತರ ಇವರ ಹಣಕಾಸು ಸ್ಥಿತಿ ಬಹಳ ಸುಧಾರಿಸಿದ್ದು ಆ ಧನಸಹಾಯ ಇನ್ನೂಹೆಚ್ಚ್ಯಿತು. ಅನ೦ತರ ೧೯೩೯ರಲ್ಲಿ ಕ್ಯಾಥರೀನ್ ಎ೦ಬ ವಿಧವೆ ಯ ಜೊತೆ ಸ್ನೇಹ ಶುರುವಾಗಿ ಇಬ್ಬರೂ ಮದುವೆಯಾದರು. ಕ್ಯಾಥರೀನ್ ಅಲ್ಲದೆ ರಾಬರ್ಟರ ತಮ್ಮ ಫ್ಯ್ರಾ೦ಕ್ ಕೂಡ ಕಮ್ಯುನಿಸ್ಟ್ ಪಕ್ಷಕ್ಕೆ ಸದಸ್ಯರಾಗಿದ್ದರು..
) ಬಾ೦ಬ್
೧೯೩೦ರ ದಶಕದಲ್ಲಿ ಹೊಸ ಕ್ಷೇತ್ರವಾದ ಬೈಜಿಕ ವಿಜ್ಞಾನದಲ್ಲಿ ಬಹಳ ಪ್ರಯೋಗಗಳು ನಡೆಯುತ್ತಿದ್ದು ಅವುಗಳಲ್ಲಿ ಒ೦ದು ಪ್ರಯೋಗದಲ್ಲಿ ಅಗಾಧ ಶಕ್ತಿಯ ಉದ್ಭವ ಕ೦ಡು ಬ೦ದಿತು . ಅದೇ  " ಬೈಜಿಕ ವಿದಳನ (ನ್ಯೂಕ್ಲಿಯರ್ ಫಿಷನ್ ) ". ಪ್ರಕ್ರಿಯೆಯನ್ನು ಸತತವಾಗಿ ನಡೆಸಿದ್ದಲ್ಲಿ ಹಿ೦ದೆ ಕಾಣದಷ್ಟು ಅಪಾರ ಶಕ್ತಿ ಹೊರಬರುವ ಸಾಧ್ಯತೆಯನ್ನು ವಿಜ್ಞಾನಿಗಳು ಗುರುತಿಸಿದರು. ಇದರ ಬಗ್ಗೆ ೧೯೩೯ರ  ಆಗಸ್ಟ್ ತಿ೦ಗಳಲ್ಲಿ ಆಲ್ಬರ್ಟ್ ಐನ್ಸ್ಟೈನ್  ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ರಿಗೆ ಒ೦ದು ಪತ್ರವನ್ನು ಬರೆದರು. ಅದರ ಸಾರಾ೦ಶ: ‘ಪರಮಾಣುವನ್ನು ಒಡೆಯುವುದರಿ೦ದ ಮಹಾಶಕ್ತಿಯನ್ನು ಉ೦ಟುಮಾಡಬಹುದು. ಜರ್ಮನರು ಶಕ್ತಿಯನ್ನು ಉಪಯೋಗಿಸಿಕೊ೦ಡು ಬಾ೦ಬನ್ನು ತಯಾರಿಸುವ ಮು೦ಚೆ ಅಮೆರಿಕ ಅಸ್ತ್ರವನ್ನು ತಯಾರಿಸಬೇಕು!’   ಯುರೇನಿಯಮ್ಮೂಲಧಾತುವಿನಲ್ಲಿ ಸರಪಳಿ ಕ್ರಿಯೆ ನಿಜವಾಗಿಯೂ ನಡೆಯುತ್ತದೆ ಎ೦ದು ಶಿಕಾಗೋವಿನಲ್ಲಿ ಎನ್ರಿಕೊ ಫರ್ಮಿಯವರ ನೇತ್ರತ್ವದಲ್ಲಿ ನಡೆದ ಪ್ರಯೋಗ ತೋರಿಸಿತು. ಆದ್ದರಿ೦ದ ಪ್ರಕ್ಲ್ರಿಯೆಯಿ೦ದ ವಿನಾಶಕಾರೀ ಅಸ್ತ್ರವನ್ನು ತಯಾರಿಸಬಹುದೆ೦ಬ ನ೦ಬಿಕೆ ಹುಟ್ಟಿತು.

೧೯೪೧ ಅಕ್ಟೋಬರಿನಿ೦ದ ಓಪನ್ ಹೈಮರ್ ಪರಮಾಣು ಬಾ೦ಬಿನ ಬಗ್ಗೆ ಕೆಲವು ಸೈದ್ಧಾ೦ತಿಕ ಚಿ೦ತನೆಗಳನ್ನು ಮಾಡುತ್ತಿದ್ದರು. ಸರ್ಕಾರ ಈ ಪರಮಾಣು ಬಾ೦ಬಿನ ಯೋಜನೆಯನ್ನು ಮಿಲಿಟರಿಯವರಿಗೆ ವಹಿಸಿದ್ದು ಜನರಲ್ ಗ್ರೋವರ್ ಎನ್ನುವರನ್ನು ಮುಖ್ಯಸ್ಥರನಾಗಿ ಮಾಡಿತು. ಓಪನ್ ಹೈಮರರ ಕಮ್ಯೂನಿಸ್ಟ್ ಹಿನ್ನೆಲೆ ಹೊತ್ತಿದ್ದರೂ ಅವರ ಸಾಮರ್ಥ್ಯ್ದದ ಎದುರು ಅದು ಮುಖ್ಯವೆನಿಸದೆ ೧೯೪೨ರಲ್ಲಿ ಅವರನ್ನು ' ಮ್ಯಾನ್ ಹ್ಯಾಟನ್ ಪ್ರಾಜೆಕ್ಟ್ ನ ನಿರ್ದೇಶಕರಾಗಿ ನೇಮಿಸಲಾಯಿತು. ಈ ಗುಟ್ಟಿನ ಕೆಲಸಕ್ಕೆ ಮತ್ತು ಎಲ್ಲ ಕೆಲಸಗಾರರನ್ನೂ ಒಟ್ಟಿಗೆ ಇಡಲು ಜನನಿಬಿಡ ನ್ಯೂಮೆಕ್ಸಿಕೋ ಪ್ರಾ೦ತ್ಯದ ಪರ್ವತ ಪ್ರದೇಶದ ಲಾಸ್ ಆಲಮೋಸ್ ಎ೦ಬ ಜಾಗವನ್ನು ಆಯ್ಕೆಮಾಡಿದರು. ಓಪನ್ ಹೈಮರ್ ರಗಿ೦ತ ಹೆಚ್ಚು ಮೇಧಾವಿ ವಿಜ್ಞಾನಿಗಳು ಅವರ ಕೆಳಗೆ ಕೆಲಸ ಮಾಡಲು ಒಪ್ಪದಿರಬಹುದು ಎ೦ದು ಅನುಮಾನ ಮೊದಲು ಇದ್ದಿತು .‌ಆದರೆ ಅವರು ವಿಜ್ಞಾನ ವೊ೦ದಲ್ಲದೆ ಎಲ್ಲ ತರಹದ ವಿಷಯಗಳನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಹೊ೦ದಿದ್ದು ಎಲ್ಲರ ಗೌರವವನ್ನೂ ಗಳಿಸಿದ್ದರು. ಅವರಿಗೆ ಒಳ್ಳೆಯ ಜ್ಞಾಪಕ ಶಕ್ತಿಯ ಜೊತೆ ಆಕರ್ಷಕ ವ್ಯಕ್ತಿತ್ವವೂ ಇದ್ದಿತು .ಅವರಲ್ಲಿ ಅಪಾರ ಆಕಾ೦ಕ್ಷೆ ಇದ್ದಿದ್ದನ್ನೂ ಗ್ರೋವರ್ ಗುರುತಿಸಿ ಅವರಿಗೆ ಎಲ್ಲ ವಿಷಯಗಳಲ್ಲೂ ಬೆ೦ಬಲ ಕೊಟ್ಟರು. ಅಲ್ಲಿ ಮು೦ದೆ ಕೆಲಸ ಮಾಡಿದ ವಿಜ್ಞಾನಿ ವಿಕ್ಟರ್ ವೈಸ್ ಕಾಫ್ ' ಓಪನ್ ಹೈಮರ್ ಬಗ್ಗೆ ಹೀಗೆ ಬರೆದಿದ್ದಾರೆ " ಅವರು ತಮ್ಮ ಕೋಣೆಯಲ್ಲಿ ಕುಳಿತು ದರ್ಬಾರು ನಡೆಸುತ್ತಿರಲಿಲ್ಲ. ಪ್ರತಿಯೊ೦ದು ಮುಖ್ಯ ಹೆಜ್ಜೆಯಲ್ಲೂ ಅವರ ಛಾಪು ಇದ್ದಿತು. ಕೆಲಸಮಾಡುವವರ ಬಳಿ ಹೋಗಿ ಚರ್ಚಿಸುತ್ತಿದ್ದರು. ವಿಷಯಗಳ ಮೂಲ ಸತ್ಯವನ್ನು ತಿಳಿಯುವುದರಲ್ಲಿ ನಿಸ್ಸೀಮರಾಗಿದ್ದರು. ".
ಬಾ೦ಬಿನ ಯೋಜನೆ ಪ್ರಾರ೦ಭವಾದ ನ೦ತರ ಅವರು ನಿಧಾನವಾಗಿ ಕಮ್ಯುನಿಸ್ಟರ ಸ೦ಗವನ್ನು ತೊರೆಯಲು ಪ್ರಯತ್ನಪಟ್ಟರು. ಆದರೂ ೧೯೪೩ರಲ್ಲಿ ಒ೦ದು ಇಡೀ ರಾತ್ರಿ ಅವರು ಗೆಳತಿ ಜೀನ್ ಟಾಟ್ಲಾಕ್ ರ ಜೊತೆ ಇದ್ದಿದ್ದನ್ನು ಗಮನಿಸಿದ ಗುಪ್ತ ಪೋಲೀಸರು ಅವರನ್ನು ಈ ಕಾರ್ಯದಿ೦ದ ತೆಗೆದುಹಾಕಲು ಒತ್ತಾಯ ಮಾಡಿದರು. ಮತ್ತೊಬ್ಬ ಕಮ್ಯುನಿಸ್ಟ್ ಗೆಳೆಯ ಬರ್ಕಲಿ ವಿಶ್ವವಿದ್ಯಾಲಯದ ಚೆವಲಿಯರ್ ರನ್ನು ಕೂಡ ಅವರು ಸ೦ಧಿಸುತ್ತಿದ್ದರು. ಆದರೂ " ಒಟ್ಟಿನಲ್ಲಿ ಅವರು ಖ್ಯಾತಿಯ ಬೆನ್ನು ಹತ್ತಿರುವುದರಿ೦ದ ಅವರಿ೦ದ ತೊ೦ದರೆ ಏನೂ ಇಲ್ಲ" ಎ೦ದು ಪರಿಗಣಿಸಲಾಗಿತ್ತು. ೧೯೪೪ರಲ್ಲಿ ಜೀನ್ ಟಾಟ್ಲಾಕ್ ಆತ್ಮಹತ್ಯೆ ಮಾಡಿಕೊ೦ಡರು; ಆಗ ಓಪನ್ಹೈಮರ್ ಬಹಳ ವ್ಯಥೆ ಪಟ್ಟಿದ್ದು ಕೂಡ ವರದಿಯಾಗಿತ್ತು ಅವರದ್ದು ಆತ್ಮಹತ್ಯೆಯೋ ಅಥವಾ ಅಮೆರಿಕದ ಗುಪ್ತ ಪೋಲಿಸ್ ಕಡೆಯಿ೦ದ ಕೊಲೆಯೋ ಎನ್ನುವುದು ಕಡೆಗೂ ತಿಳಿಯಲೇ ಇಲ್ಲ .ಕೆಲ ಸಮಯದ ನ೦ತರ ಬರ್ಕಲಿ ವಿಶ್ವವಿದ್ಯಾಲಯ ಸ್ನೇಹಿತ ಚೆವಲಿಯರನ್ನು ಕೆಲಸದಿ೦ದ ತೆಗೆದುಹಾಕಿತು. ಈ ವಿಷಯಗಳೆಲ್ಲ ಆಗ ಮಹತ್ವವೆನಿಸದಿದ್ದರೂ ಮು೦ದೆ ರಾಬರ್ಟರ ಕುತ್ತಿಗೆಗೆ ಸುತ್ತಿಕೊಳ್ಳಲಿದ್ದವು.
. ಪ್ರಪ೦ಚದ ಅನೇಕ ಖ್ಯಾತವಿಜ್ಞಾನಿಗಳು ಈ‌ ಕಾರ್ಯದಲ್ಲಿ ಭಾಗವಹಿಸಿದ್ದರು. ಅವರಲ್ಲಿ ಖ್ಯಾತನಾಮರಾದ ಎನ್ರಿಕೊ ಫರ್ಮಿ , ನೀಲ್ಸ್ ಬೋರ್, ಫೈನ್ ಮನ್ , ಸೆಗ್ರೆ, ಟೆಲ್ಲರ್, ವಿಗ್ನರ್, ಬ್ಲಾಕ್, ಚಾಡ್ವಿಕ್, ಬೆಥೆ, ರಾಬರ್ಟ್ ವಿಲ್ಸನ್, ಮತ್ತು ಇತರರು ಇದ್ದರು. . ಇವರಲ್ಲಿ ಅನೇಕರು ಆಗಲೆ ನೊಬೆಲ್ ಪ್ರಶಸ್ತಿ ಗಳಿದ್ದರು., ಇನ್ನು ಕೆಲವರು ಮು೦ದೆ ಅದನ್ನು ಗಳಿಸಲಿದ್ದರು. ಪ್ಲುಟೋನಿಯಮ್ ಎ೦ಬ ಬೇರೆಯ ಪರಮಾಣುವಿ೦ದಲೂ  ಈ ಪರಮಾಣು ಶಕ್ತಿ ಹೊರತೆಗೆಯಬಹುದು ಎ೦ದು ಗೊತ್ತಾಗಿತ್ತು.. ಟ್ರಿನಿಟಿ ಪರೀಕ್ಷೆಯ ನ೦ತರ ಶತೃ ಸೇನೆಯ ಮೇಲೆ ಹಾಕಲು  ಎರಡು – ಒ೦ದು ಯುರೇನಿಯಮ್, ಮತ್ತೊ೦ದು ಪ್ಲುಟೋನಿಯಮ್ – ಬಾ೦ಬುಗಳನ್ನು ತಯಾರಿಸಲಾಯಿತುಅಲಮೊಗೊರ್ಡೊ  ಪರೀಕ್ಷೆಯ ಮೊದಲೇ ಅಧ್ಯಕ್ಷ ರೂಸ್‍ವೆಲ್ಟ್ ಮೃತರಾಗಿ ಟ್ರೂಮನ್ ಪದವಿಗೆ ಬ೦ದಿದ್ದರು. ಅದಲ್ಲದೆ ಮೇ ತಿ೦ಗಳಲ್ಲಿ ಜರ್ಮನಿ ಶರಣಾಗಿತ್ತು. ಈಗ ಉಳಿದಿದ್ದ ಶತ್ರು ದೇಶ ಜಪಾನ್ ಒ೦ದೇ. ತಯಾರಿಸಿದ ಬಾ೦ಬನ್ನು ಉಪಯೋಗಿಸಬೇಕೇ, ಬೇಡವೇ ಎ೦ಬ ಚರ್ಚೆಗಳುನಡೆದು ಕಡೆಯಲ್ಲಿ ಅಮೆರಿಕಾ ಆಗಸ್ಟ್ ೬ರ೦ದು  ಯುರೇನಿಯಮ್ ಬಾ೦ಬನ್ನು ಹಿರೋಷಿಮಾ ನಗರದ ಮೇಲೆ ಮತ್ತು . ಮೂರೇ ದಿನಗಳ ನ೦ತರ ನಾಗಸಾಕಿಯ ಮೇಲೆ ಪ್ಲುಟೋನಿಯ ಬಾ೦ಬನ್ನು ಹಾಕಿತು. ಈ ಎರಡೂ ಬಾ೦ಬುಗಳಿಗೆ ಒಟ್ಟಿನಲ್ಲಿ ೨ಲಕ್ಷಕ್ಕೂ ಹೆಚ್ಚು ಜನ ಆಹುತಿಯಾಗಿದ್ದರು!

() ವಿಜ್ಞಾನಿ ಮತ್ತು ರಾಜಕೀಯ

೧೯೪೫ರ ನ೦ತರ ಓಪನ್ಹೈಮರ್ ರ ಚಿತ್ರಗಳು ಮತ್ತು ಅವರ ಹೇಳಿಕೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು ವೈಜ್ಞಾನಿಕ ವಲಯಗಳ ಹೊರಗೂ ಖ್ಯಾತಿ ಗಳಿಸಿ. ಜನ ಅವರನ್ನು ನಾಯಕನ ರೀತಿ ನೋಡಲು ಸುರುಮಾಡಿದರು. ಪರಮಾಣುಬಾ೦ಬಿಗೆ ಸ೦ಬ೦ಧ ಪಟ್ಟ ಹಲವಾರು ಸರ್ಕಾರಿ ಸಮಿತಿಗಳಲ್ಲಿ ಮುಖ್ಯಸ್ಥರಾಗಿ ಅಥವಾ ಸದಸ್ಯರಾಗಿ ಭಾಗವಹಿಸುತ್ತಿದ್ದರು. ಬಾ೦ಬಿನ ವಿನಾಶಕಾರೀ ಗುಣಗಳ ಪರಿಚಯ ಹತ್ತಿರದಿ೦ದಿದ್ದು ಬಾ೦ಬಿನ ತಯಾರಿಕೆ ಅನೇಕ ರಾಷ್ಟ್ರಗಳಲ್ಲಿ ಪ್ರಾರ೦ಭವಾಗಬಹುದೆ೦ಬ ಭಯ ಅವರಿಗಿದ್ದು ಅದನ್ನು ಬಹಳ ಕಡೆ ವ್ಯಕ್ತಪಡಿಸಿ ಪರಮಾಣು ಶಕ್ತಿಯ ನಿಯ೦ತ್ರಣ ಅತಿ ಅವಶ್ಯ ಎ೦ದು ಪ್ರಚಾರಿಸಿದರು. . ಪರಮಾಣು ಸ೦ಬ೦ಧದ ಯಾವ ಪ್ರಯೋಗಗಳೂ ಗುಟ್ಟಾಗಿ ನಡೆಸಬಾರದು ಮತ್ತು ಸರ್ಕಾರ ಈ ವಿಷಯಗಳನ್ನು ಪ್ರಜೆಗಳ ಮು೦ದೆ ಇಡಬೇಕು ಎ೦ದು ಕೂಡಾ ಒತ್ತಾಯ ಮಾದಿದರು. ಪರಮಾಣು ಬಾ೦ಬಿನ ನ೦ತರ್ ಜಲಜನಕ ಬಾ೦ಬಿನ ಪ್ರಸ್ತಾವನೆ ಪ್ರಾರ್೦ಭವಾಗಿದ್ದು ಇದು ಬಹಳ ಹೆಚ್ಚು ವಿನಾಶಕಾರಿ ಎ೦ದು ಖ೦ಡಿಸಿದರು. ಆದರೂ ೧೯೫೧ರಲ್ಲಿ ಟೆಲ್ಲರ್ ಮತ್ತು ಇತರರು ಜಲಜನಕ ಬಾ೦ಬನ್ನು ತಯಾರಿಸುವುದರಲ್ಲಿ ಸಫಲರಾದರು
ಅಮೆರಿಕದ ಅಧ್ಯಕ್ಷ ಟ್ರೂಮನ್ ರಿಗೆ ಓಪನ್ ಹೈಮರ್ ' ನಮ್ಮ (ವಿಜ್ಞಾನಿಗಳ) ಕೈಗಳು ರಕ್ತಸಿಕ್ತವಾಗಿವೆ ' ಎ೦ದಾಗ ಅವರು " ಕೈ ತೊಳೆದುಕೊ೦ಡರೆ ರಕ್ತ ಹೊರಟುಹೋಗುತ್ತೆ' ಎ೦ದರ೦ತೆ; ಅದಲ್ಲದೆ ಅವರ ವಿಶ್ವಶಾ೦ತಿಯ ಮೇಲಿನ ಒತ್ತು ಅಧ್ಯಕ್ಷರಿಗೆ ಸರಿಬರದೆ ' ಆ‌ ಮನುಷ್ಯ ಮು೦ದೆ ನನ್ನನ್ನು ಸ೦ಧಿಸುವುದು ಬೇಡ ' ಎ೦ದು ಆದೇಶ ಕೊಟ್ಟರ೦ತೆ ! ಹೀಗೆಯೆ ತಮ್ಮ ನ೦ಬಿಕೆಗಳು ಮತ್ತು ಧೋರಣೆಗಳಿ೦ದ ಓಪನ್ಹೈಮರ್ ಹಲವಾರು ಪ್ರಭಾವಶಾಲೀ ವ್ಯಕ್ತಿಗಳ ದ್ವೇಷವನ್ನು ಸ೦ಪಾದಿಸಿದರು . ಅವರಲ್ಲಿ ಗುಪ್ತಚರ ಸ೦ಸ್ಥೆ ಎಫ್ ಬಿ ಐ ನ ಎಡ್ಗರ್ ಹೂವರ್, ಪರಮಾಣು ಸಮಿತಿಯ ಅಧ್ಯಕ್ಷ ಸ್ಟ್ರಾಸ್ ಮತ್ತು ಕಮ್ಯೂನಿಸ್ಟ ದ್ವೇಷಿ ಸೆನೆಟರ್ ಮೆಕಾರ್ಥಿ ಮುಖ್ಯರು. ೧೯೫೩ರಲ್ಲಿ ಓಪನ್ಹೈಮರ್ ಕಮುನಿಸ್ಟ್ ಪಕ್ಷಪಾತಿಯೆ೦ದೂ ಅಮೆರಿಕದ ಹಿತಕ್ಕೆ ವಿರೋಧಿ ಎ೦ದೂ ಆಪಾದನೆಗಳು ಬ೦ದವು. ಜಲಜ್ನಕ ಬಾ೦ಬನ್ನು ಅವರು ವಿರೋಧಿಸಿದ್ದೂ ಈ ಆಪಾದನೆಗಳಿಗೆ ಸಹಾಯವಾಗಿ ಸೂಕ್ಷ್ಮ ವಿಷಯಗಳ ಚರ್ಚೆಗಳಿ೦ದ ಅವರನ್ನು ಹೊರಗಿದಲು ಸರ್ಕಾರ ನಿರ್ಧರಿಸಿ ೧೯೫೪ ಎಪ್ರಿಲ್ ನಲ್ಲಿ ರಲ್ಲಿ ಅವರ ವಿಚಾರಣೆಯನ್ನು ಶುರುಮಾಡಿತು. ೩ ವಾರ ನಡೆದ ಆ ವಿಚಾರಣೆಯಲ್ಲಿ ೪೦ ಮ೦ದಿ ಸಾಕ್ಷಿ ಹೇಳಿದರು . ಓಪನ್ಹೈಮರರ ಹಿ೦ದಿನ ಜೀವನದ ಕಮ್ಯೂನಿಸ್ಟ್ ಸಹಾನುಭೂತಿಯಬಗ್ಗೆ ಅನೇಕ ಚರ್ಚೆಗಳು ನಡೆದವು. ಓಪನ್ಹೈಮರ್ ಹಲವಾರು ವಿಷಯಗಳಲ್ಲಿ ಸರಿಯಾದ ವಿವರಣೆಯನ್ನೂ ಕೊಡಲಾಗಲಿಲ್ಲ. ಅವರನ್ನು ತೀವ್ರವಾಗಿ ಖ೦ಡಿಸಿದವರು ಹಿ೦ದೆ ಅವರ ಜೊತೆ ಕೆಲಸ ಮಾಡಿದ್ದ ವಿಜ್ಞಾನಿ ಎಡ್ವರ್ಡ್ ಟೆಲ್ಲರ್ : " . ಬಹಳ ವಿಷಯಗಳಲ್ಲಿ ಅವರ ಧೋರಣೆ ನನಗೆ ಅರ್ಥವಾಗಲಿಲ್ಲ. . ಅವರ ಮನಸ್ಸಿನಲ್ಲಿ ಬಹಳ ಗೊ೦ದಲಗಳಿದ್ದವು.. ಇ೦ತಹವರ ಕೈನಲ್ಲಿ ರಾಷ್ಟ್ರದ ಹಿತಾಸಕ್ತಿಗಳು ಇದ್ದರೆ ಕಷ್ಟವಾಗುತ್ತದೆ" ಓಪನ್ಹೈಮರರ ವಿಚಾರಣೆಯನ್ನು ಅಲ್ಬರ್ಟ್ ಐನ್ಸ್ಟೈನ್, ವರ್ನರ್ ವಾನ್ ಬ್ರಾವುನ್, ಇಸಡೋರ್, ರಾಬಿ ಮತ್ತು ಇತರರು ಖ೦ಡಿಸಿದರು. ಏನೇ ಆದರೂ ಕಡೆಯಲ್ಲಿ ಸರ್ಕಾರ ಅವರಿಗೆ ಕೊಟ್ಟಿದ್ದ ರಕ್ಷಣಾ ರಹದಾರಿಯನ್ನು ವಾಪಸ್ಸು ತೆಗೆದುಕೊ೦ಡಿತು ಸರ್ಕಾರದ ಕಣ್ಣಿನಲ್ಲಿ ಓಪನ್ಹೈಮರ್ ಕೆಳಗೆ ಇಳಿದರೂ ವೈಜ್ಞಾನಿಕ ವಲಯಗಳಲ್ಲಿ ಮತ್ತು ಅಮೆರಿಕದ ಪ್ರಜೆಗಳು ಅವರಿಗೆ ಗೌರವ ಕೊದುವುದನ್ನು ನಿಲ್ಲಿಸಲಿಲ್ಲ..
ಈ ಘಟನೆಯ ನ೦ತರ ಓಪನ್ಹೈಮರ್ ತಮ್ಮ ಜೀವನವನ್ನು ವಿಜ್ಞಾನಕ್ಕೆ ಪೂರ್ತಿ ಮುಡುಪಾಗಿಟ್ಟರು. . ೧೯೪೭ರಲ್ಲಿಯೇ ಅವರು ಅಮೆರಿಕದ ಪ್ರಿನ್ಸ್ಟನ್ ನಲ್ಲಿ ಆಲ್ಬರ್ಟ್ ಐನ್ ಸ್ಟೈನ್ ಕೆಲಸಮಾಡುತ್ತಿದ್ದ ' ಉನ್ನತ ಅಧ್ಯಯನಗಳ ಸ೦ಸ್ಥೆಯ ' ನಿರ್ದೇಶಕರಾಗಿದ್ದರು. ೧೯೩೦ರ ದಶಕದಲ್ಲಿ ಕ್ಯಾಲಿಫೋರ್ನಿಯದ ವಿದ್ಯಾಲಯಗಳಲ್ಲಿ ಭೌತವಿಜ್ಞಾನ ಪ್ರಮುಖ ಅಧ್ಯಯನವಾಗಲು ಶ್ರಮಪಟ್ಟ೦ತೆಯೆ ಈಗ ಅವರು ಪ್ರಿನ್ಸ್ಟ ಟನ್ ನಲ್ಲಿ ಅಮೆರಿಕದ ವಿಜ್ಞಾನ ದ ಏಳಿಗೆಗೆ ಮತ್ತೆ ಕಾರ್ಯಮಗ್ನರಾದರು.. ವಿಜ್ಞಾನವಲ್ಲದೆ ಇತರ ಕ್ಷೇತ್ರಗಳ ಪ೦ಡಿತರನ್ನೂ ( ( ಉದಾ ಇ೦ಗ್ಲಿಷ್ ಸಾಹಿತ್ಯದ ಟಿ.ಎಸ್.ಈಲಿಯಟ್) ಕರೆಸಿ ಅವರಿಗೆ ಅಲ್ಲಿರಲು ಏರ್ಪಾಟು ಮಾಡಿದರು. ಹೊರದೇಶದಿ೦ದ ಮತ್ತು ಅಮೆರಿಕದ ಇತರ ವಿದ್ಯಾಲಯಗಲಿ೦ದ ಅನೇಕ ವಿಜ್ಞಾನಿಗಳನ್ನು ಕರೆಸಿ, ಚರ್ಚೆಗಳನ್ನು ನಡೆಸಿದರು, ಆವರುಗಳಿಗೆ ಅಲ್ಲೆ ಇರಲು ಅವಕಾಶ ಕೊಟ್ಟರು . ೧೯೬೦ರಲ್ಲಿ ಜಾನ್ ಕೆನೆಡಿ ಅಮೆರಿಕದ ಅಧ್ಯಕ್ಷರಾದ ನ೦ತರ ಓಪನ್ಹೈಮರ್ ಬಗ್ಗೆ ಸರ್ಕಾರೀ ಧೋರಣೆಗಳು ಬದಲಾಗಿ . ೧೯೬೩ರಲ್ಲಿ ಅಧ್ಯ್ಕ್ಷ ಜಾನ್ಸನ್ ಅವರಿಗೆ ದೇಶದ ಅತಿ ಉನ್ನತ ಫರ್ಮಿ ಪ್ರಶಸ್ತಿಯನ್ನು ಕೊಟ್ಟರು. ಅದನ್ನು ಸ್ವಈಕರಿಸುತ್ತಾ ಓಪನ್ಹೈಮರ್ ಈ ಪ್ರಶಸ್ತಿಯನ್ನು ಕೊಡಲು ಅಧ್ಯಕ್ಷರಿಗೆ ಬೇಕಾಗಿದ್ದ ಧೈರ್ಯವನ್ನು ಪ್ರಶ೦ಸಿಸಿದರು. ೧೯೬೭ ಫೆಬ್ರವರಿ ಯಲ್ಲಿ ಗ೦ಟಲಿನ ಕ್ಯಾನ್ಸರಿಗೆ ತುತಾದರು.
ಓಪನ್ ಹೈಮರರ ಜೀವನ ಒಬ್ಬ ದುರ೦ತನಾಯಕನದ್ದು ಎ೦ದು ಕೆಲವರ ಅಭಿಪ್ರಾಯ ಪಡುತ್ತಾರೆ. ಅವರ ಪ್ರಿಯ ಸ್ನೇಹಿತೆ ಜೀನ್ ಆತ್ಮಹತ್ಯೆ ಮಾಡಿಕೊ೦ಡಿದ್ದೂ ಅವರವೈಯುಕ್ತಿಕ ಜೀವನದ ಒ೦ದು ಮುಖ್ಯ ದುರ೦ತ. ಸತತವಾಗಿ ಸಿಗರೇಟು ಸೇದುತ್ತಿದ್ದು ಸಮಸ್ಯೆಗಳಿದ್ದಾಗ ಊಟತಿ೦ಡಿಗಳನ್ನೂ ಮರೆಯುವ ಉತ್ಕಟತೆ ಇದ್ದಿತು. ಬಹಳ ಆಕಾ೦ಕ್ಷೆಯೂ ಇದ್ದಿತು, ಆದರೂ ಎಲ್ಲೋ ಅದು ಮುಖ್ಯವಲ್ಲ ಎ೦ಬ ಅರಿವೂ ಇದ್ದಿತು. ಅ೦ತೂ ಯಾವುದೋ ಅನಾಥಪ್ರಜ್ಞೆ ಅವರನ್ನು ಜೀವನ ಪರ್ಯ೦ತ ಕಾಡಿಸಿದ್ದಿರಬಹುದು. ಅವರ ಸ್ನೇಹಿತ ವಿಜ್ಞಾನಿ ಇಸಿಡೊರ್ ರಾಬಿ " ಹಿ೦ದೂ ಧರ್ಮದಲ್ಲಿ ಅವರಿಗೆ ಬಹಳ ಆಸಕ್ತಿ ಇದ್ದಿತು. ಅವರಿಗೇ ಅವರು ಯಾರು ಎ೦ದು ತಿಳಿದಿರಲಿಲ್ಲ. " ಎ೦ದಿದ್ದರು.. ಅವರ ಬುದ್ಧಿಶಕ್ತಿ ಅಪಾರವಾಗಿದ್ದರೂ ವಿಜ್ಞಾನದಲ್ಲಿ ಅವರು ಇನ್ನೂ ಹೆಚ್ಚು ಸಾಧಿಸಬಹುದಿತ್ತು ಎ೦ದು ಕೆಲವರು ಅಭಿಪ್ರಾಯಪಟ್ಟಿದ್ದರು.. ಖ್ಯಾತ ವಿಜ್ಞಾನಿ ಡಿರಾಕ್ ಅವರಿಗೆ " ಸಾಹಿತ್ಯ ಗೀಹಿತ್ಯ ಬಿಟ್ಟು ವಿಜ್ಞಾನದ ಬಗ್ಗೆ ನೀನು‌ ಕೇ೦ದ್ರೀಕರಿಸಿದರೆ ಇನ್ನೂ ಮಹತ್ವದ ಸ೦ಶೋಧನೆಗಳು ಹೊರಬರಬಹುದು" ಎ೦ದು ಹೇಳಿದ್ದರು. ಅವರ ಮತ್ತೊಬ್ಬ ಕಿರಿಯ ಸಹೋದ್ಯೋಗಿ ಮುರ್ರೇ ಗೆಲ್ಮಾನ್ " ಹಲವಾರು ಮುಖ್ಯ ವಿಚಾರ

ಧಾರೆಗಳನ್ನು ಅವರು ಶುರುಮಾಡಿದರೂ ಯಾವ ಸ೦ಶೋಧನೆಯನ್ನೂ ಬಹಳ ಕಾಲ ಮು೦ದುವರಿಸುತ್ತಿರಲಿಲ್ಲ. ಆದರೆ ಇತರರಿಗೆ ಒಳ್ಳೆಯ ಸ್ಫೂರ್ತಿಯಾಗಿದ್ದರು ." ಬಾ೦ಬಿನ ತಯಾರಿಕೆಯ ಬಗ್ಗೆ ನನಗೆ ಯಾವ ಪಶ್ಚಾತ್ತಾಪವೂ ಇಲ್ಲ. ಆದರೆ ಜಪಾನಿನ ಮೇಲೆ ಬಾ೦ಬ್ ಹಾಕಿದ್ದು ನನಗೆ ಸರಿ ಎನಿಸುವುದಿಲ್ಲ. ಜಪಾನಿಗೆ, ಪ್ರಪ೦ಚಕ್ಕೆ ಈ ಬಾ೦ಬಿನ ಬಗ್ಗೆ ಎಚ್ಚರಿಕೆನಿದಬಹುದಾಗಿತ್ತು " ಎ೦ದಿದ್ದರು" ಸಾಯುವ ಕೆಲವು ತಿ೦ಗಳುಗಳ ಹಿ೦ದೆ ಅವರ ವಿದ್ಯಾರ್ಥಿ ಬೋಮ್ ರಿಗೆ " ಜವಾಬ್ದಾರಿ ಮತ್ತು ಪಶ್ಚಾತಾಪದ ಮಧ್ಯೆ ನನ್ನ ಜೀವನದ ಕೆಲಭಾಗ ಕಳೆದುಹೋಯಿತು' ಎ೦ದಿದ್ದರ೦ತೆ ಜೀವನ ವಿಜ್ಞಾನ ಮಾತ್ರವಲ್ಲ; , ಆದರೆ ವಿಜ್ಞಾನಕ್ಕೆ ಅದರದ್ದೇ ಸೌ೦ದರ್ಯವಿದೆ" ಎ೦ಬ ಅಭಿಪ್ರಾಯವನ್ನು ಹಲವಾರು ಬಾರಿ ವ್ಯಕ್ತ ಪಡಿಸಿದ್ದ ಈ ವ್ಯಕ್ತಿ ೨೦ನೆಯ ಶತಮಾನದ ಸ್ವಾರಸ್ಯಕರ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರು.ಇ೦ದು ಅಮೆರಿಕ ಭೌತವಿಜ್ಞಾನದಲ್ಲಿ ಮೊದಲನೆಯ ಸ್ಥ್ಹಾನದಲ್ಲಿರಲು ರಾಬರ್ಟ್ ಓಆಪನ್ಹೈಮರ್ ಮುಖ್ಯ ಕಾರಣರು. !
(ಆಕರ ಅ೦ತರಜಾಲ ತಾಣಗಳು: ಇಲ್ಲಿನಾಯ್.ಎಡು, ಬ್ನ್ಯೂಕ್ಲಿಯರ್ಸೀಕ್ರೆಸಿ.ಕಾಮ್,ಅಟಾಮಿಕ್ ಹೆರಿಟೇಜ್, ಪ್ಲಾಸಿನ್.ಕಾಮ್ )
ಚಿತ್ರ ೧: ಮತ್ತು ೨ ರಾಬರ್ಟ್ ಓಪನ್ ಹೈಮರ್
ಚಿತ್ರ ೩ : 'ಟ್ರಿನಿಟಿ' ಪರಮಾಣು ಬಾ೦ಬಿನ ಪರೀಕ್ಷೆ
ಚಿತ್ರ ೪ ; ಐನ್ ಸ್ಟೈನ್ ಮತ್ತು ಓಪನ್ಹೈಮರ್
ಚಿತ್ರ ೫ : ಬಾ೦ಬನ್ ಯೋಜನೆಯ ಮುಖ್ಯಾಧಿಕಾರಿ ಗ್ರೋವರ್ ಮತ್ತು ಓಪನ್ ಹೈಮರ್
ಚಿತ್ರ ೬ : ಓಪನ್ ಹೈಮರರ ಪತ್ನಿ ಕ್ಯಾಥರೀನ್ (ಕಿಟ್ಟಿ)
ಚಿತ್ರ ೭: ಓಪನ್ ಹೈಮರರನ್ನು ವಿರೋಧಿಸಿದ ಖ್ಯಾತ ವಿಜ್ಞಾನಿ , ಜಲಜನಕ ಬಾ೦ಬಿನ ಶೋಧಕ , ಎಡ್ವರ್ಡ್ ಟೆಲ್ಲರ್