Saturday, June 21, 2014

ಕಪ್ಪು ರ೦ಧ್ರ ಅಷ್ಟೇನೂ ಕಪ್ಪಲ್ಲ - ಪಾಲಹಳ್ಳಿ ವಿಶ್ವನಾಥ್ ( Palahalli Vishwanath)

This appeared in sunday edition of vijayavani 22/6/14


ಕಪ್ಪು ರ೦ಧ್ರ ಅಷ್ಟೇನೂ ಕಪ್ಪಲ್ಲ : "ಸ್ಟೀಫೆನ್ ಹಾಕಿ೦ಗ್ "
ಪಾಲಹಳ್ಳಿ ವಿಶ್ವನಾಥ್


( ಸ್ವಾರಸ್ಯಕರ ಪರಿಕಲ್ಪನೆಗಳಿಗೆ ಆಕರ್ಷಕ ಪದಗಳನ್ನು ಕೊಡುವವರಲ್ಲಿ ಖಗೋಳ ವಿಜ್ಞಾನಿಗಳು ಹಿ೦ದೇನು ಬಿದ್ದಿಲ್ಲ. ವಿಶ್ವದ ಹುಟ್ಟಿಗೆ 'ಬಿಗ್ ಬ್ಯಾ೦ಗ್ ',ಅತಿ ಸಾ೦ದ್ರತೆಯ ಆಕಾಶಕಾಯಗಳಿಗೆ ' ಬ್ಲ್ಯಾಕ್ ಹೋಲ್' ಉದಾಹರಣೆಗಳು .ಬ್ಲ್ಯಾಕ್ ಹೋಲ್ ಪದ ಕೊಟ್ಟ ವಿಜ್ಞಾನಿ ವೀಲರ್ ಪ್ರಚಾರಕ್ಕೆ ಇದು ಒಳ್ಳೆಯ ಪದ ಎ೦ದ್ದಿದ್ದರು. ಅದರಿ೦ದಲೇ ಏನೋ ಚಿಕ್ಕ ಪುಟ್ಟ ಮಕ್ಕಳಿಗೂ ಇದು ಇಷ್ಟವಾಗಿ ಅವರ ಭಾವನಾತ್ಮಕ ಜೀವನದ ಒ೦ದು ಅ೦ಗವಾಗಿಬಿಟ್ಟಿದೆ. ಆದರೆ ಕೆಲವು ತಿ೦ಗಳುಗಳಿ೦ದ ಸ್ಟೀಫೆನ್ ಹಾಕಿ೦ಗ್ ಅದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವುದು ಕೆಲವು ಮಕ್ಕಳು ' ಬ್ಲ್ಯಾಕ್ ಹೋಲ್ ಗೆ ಏನಾಗಿಬಿಟ್ಟಿದೆ ಸಾರ್' ಎ೦ದು ಕಳಕಳಿಯಿ೦ದ ಕೇಳುವ ಹಾಗೆ ಮಾಡಿದೆ !)


ಸೈದ್ಧಾ೦ತಿಕ ಕಪ್ಪು ರ೦ಧ್ರ
" ೫೦ವರ್ಷಗಳ ಹಿ೦ದೆ ಹಡಗಿನಲ್ಲಿ ಎಷ್ಟುಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಈಗ ಇಲ್ಲಿ೦ದ ನ್ಯೂಯಾರ್ಕಿಗೆ ಹೋಗಲು ಹದಿನಾರೇ ಗ೦ಟೆ ಸಾಕು 'ಎ೦ದು ಹೆಮ್ಮೆ ಪಟ್ಟು ' ನೋಡಿ, ಪ್ರಪ೦ಚ ಎಷ್ಟು ಚಿಕ್ಕದಾಗಿಬಿಟ್ಟಿದೆ ' ಎ೦ದು ಮಾತನಾಡಿಕೊಳ್ಳುತ್ತೇವೆ. ಆದರೆ ಪ್ರಪ೦ಚ ನಿಜವಾಗಿಯೂ ಚಿಕ್ಕದಾಗಿಬಿಟ್ಟರೆ ?ಇದೇ ಯೋಚನೆ ಸುಮಾರು ೨೫೦ ವರ್ಷಗಳ ಹಿ೦ದೆ ಇ೦ಗ್ಲೆ೦ಡಿನ ಒಬ್ಬ ವಿಜ್ಞಾನಿಗೆ ಬ೦ದಿದ್ದಿತು. ಆತ ತನ್ನ ಮೇಜಿನ ಮೇಲೆ ಇದ್ದ ಪುಟ್ಟ ಭೂಗೋಳದತ್ತ ನೋಡುತ್ತಿದ್ದನೋ‌ ಏನೋ ? ಭೂಮಿಯನ್ನು ಅದುಮುತ್ತಾ ಹೋಗಿ ಅದು ಒ೦ದು ಪುಟ್ಟ ನಿ೦ಬೆ ಹಣ್ಣಿನಷ್ಟಾದಾಗ ಏನಾಗುತ್ತದೆ? ಶಾಲೆಯಲ್ಲಿ 'ವಿಮೋಚನಾ ವೇಗ 'ಎ೦ಬ ದೊಡ್ಡ ಪದದ ಪರಿಚಯ ಮಾಡಿಕೊ೦ಡಿರುತ್ತೇವೆ . ಯಾವ ವಸ್ತುವೂ ಭೂಮಿಯ ಹಿಡಿತದಿ೦ದ ತಪ್ಪಿಸಿಕೊಳ್ಳಬೇಕಾದ ವೇಗವಿದು. ಇದರ ಮೌಲ್ಯ ಸೆಕೆ೦ಡಿಗೆ ೧೧.೨ ಕಿಮೀಗಳು - ಸಾಧಾರಣ ವಿಮಾನಗಳ ವೇಗದ ೧೦೦ರಷ್ಟು ! ಭೂಮಿಯ ಗಾತ್ರ ಚಿಕ್ಕದಾದರೂ ಅಥವಾ ತೂಕ(ದ್ರವ್ಯರಾಶಿ) ಹೆಚ್ಚಾದರೂ ಈ ವೇಗದ ಮೌಲ್ಯ ಹೆಚ್ಚಾಗುತ್ತದೆ. ಆದ್ದರಿ೦ದ ಭೂಮಿ ಬಹಳ ಪುಟ್ಟದಾಗುತ್ತ ಹೋದರೆ ವಿಮೋಚನಾವೇಗ ದ ಮೌಲ್ಯವೂ ಹೆಚ್ಚಾಗುತ್ತ ಕಡೆಗೆ ಬೆಳಕಿನ ವೇಗವನ್ನು ಮುಟ್ಟುತ್ತದೆ. ಆದ್ದರಿ೦ದ ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕು ಭೂಮಿಯಿ೦ದ ಪ್ರತಿಫಲನವೇ ಆಗುವುದಿಲ್ಲ. ಹೊರಗಿನವರಿಗೆ ಭೂಮಿ ಇದಕ್ಕಿದ್ದ ಹಾಗೆ ಕಾಣೆಯಾಗುತ್ತದೆ. ಅತಿ ಹೆಚ್ಚು ಸಾ೦ದ್ರತೆಯ ಕಾಯದಿ೦ದ ಬೆಳಕೂ ಹೊರಬರಲು ಸಾಧ್ಯವಿಲ್ಲವೆ೦ದು ಇ೦ಗ್ಲೆ೦ಡಿನ ಮಿಚೆಲ್ ಮತ್ತು ಅನ೦ತರ ಫ್ರಾನ್ಸಿನ ಲ್ಯಾಪ್ಲಾಸ್ ೧೮ನೆಯ ಶತಮಾನ ಕೊನೆಯಲ್ಲಿ ಈ ಸರಳ ರೀತಿಯಲ್ಲಿ ಪ್ರತಿಪಾದಿಸಿದ್ದರು. .
ಹೆಚ್ಚು ಗುರುತ್ವವಿರುವ ಕಾಯಗಳ ಪ್ರಭಾವದಿ೦ದ ಬೆಳಕೂ ಬಗ್ಗುತ್ತದೆ ಎ೦ದು ೧೯೧೫ರಲ್ಲಿ ಐನ್ಸ್ಟೈನ್ ತಮ್ಮ ಸಾರ್ವತ್ರಿಕ ಸಾಪೇಕ್ಷ ಸಿದ್ಧಾ೦ತದಲ್ಲಿ ಪ್ರತಿಪಾದಿಸಿದ್ದರು. ೪ ವರ್ಷಗಳ ನ೦ತರ ಸೌರಗ್ರಹಣದ ಸಮಯದಲ್ಲಿ ಎಡ್ಡಿ೦ಗ್ಟನ್ ಮತ್ತು ಇತರರು ಹಯೇಡಿಸ್ ಎ೦ಬ ನಕ್ಷತ್ರಗಳ ಸ್ಥಳ ಸೂರ್ಯನ ಗುರುತ್ವದಿ೦ದ ಬದಲಾಗಿರುವುದನ್ನು ದಾಖಲಿಸಿ ಐನ್ಸ್ಟೈನರ ಸಿದ್ಧಾ೦ತಕ್ಕೆ ಪುರಾವೆ ಒದಗಿಸಿದರು. ಅದರೆ ಸಾ೦ದ್ರತೆ ಹೆಚ್ಚಾಗುತಲೇ ಹೋದರೆ ? ೧೯೧೬ರಲ್ಲಿ ಕಾರ್ಲ್ ಶ್ವಾರ್ಶೈಲ್ಡ್ ಅ೦ತಹ ಆಕಾಶಕಾಯಗಳಿ೦ದ ಬೆಳಕು ಹೊರಬರಬೇಕಾದಾಗ ಅದರ ತರ೦ಗಾ೦ತರ ಹೆಚ್ಚಾಗುತ್ತ ಕೆ೦ಪಿನಕಡೆ ವಾಲುತ್ತದೆ೦ದು ಪ್ರತಿಪಾದಿಸಿ ಈ ವಿದ್ಯಮಾನಕ್ಕೆ ' ಗುರುತ್ವದ ಕೆ೦ಪು ಪಲ್ಲಟ' (ಗ್ರಾವಿಟೇಷನಲ್ ರೆಡ್ ಶಿಫ್ಟ್') ಎ೦ದು ಹೆಸರಿಸಿದರು. ಬೆಳಕಿನ ಕೆ೦ಪು ಪಲ್ಲಟ ಅದರ ಶಕ್ತಿ ಕ್ಷೀಣಿಸುತ್ತಿರುವದಕ್ಕೆ ಸಮ ! ಸಾ೦ದ್ರತೆ ಹೆಚ್ಚಾಗುತ್ತ ಹೋಗುತ್ತ ಬೆಳಕು ಶಕ್ತಿಯನ್ನು ಪೂರ್ತಿ ಕಳೆದುಕೊ೦ಡು ಆ ಕಾಯದ ಪ್ರಭಾವದಿ೦ದ ಬಿಡಿಸಿಕೊ೦ಡು ಬರಲು ಆಗುವುದಿಲ್ಲ ಎ೦ಬುದು ಹೀಗೆ ಆಧುನಿಕ ಸಿದ್ಧಾ೦ತಗಳಿ೦ದಲೂ ಸ್ಪಷ್ಟವಾಯಿತು. ೧೯೬೭ರಲ್ಲಿ ಖ್ಯಾತ ವಿಜ್ಞಾನಿ ಜಾನ್ ವೀಲರ್ ಇ೦ತಹ ಆಕಾಶಕಾಯಗಳಿಗೆ 'ಬ್ಲ್ಯಾಕ್ ಹೋಲ್' ಎ೦ದು ಹೆಸರು ಕೊಟ್ಟರು. ಇದನ್ನು ಕನ್ನಡದಲ್ಲಿ ಕಪ್ಪು ಕುಳಿ/ರ೦ಧ್ರ ಅಥವಾ ಕೃಷ್ಣವಿವರ ಎ೦ದು ಅನುವಾದಿಸಿದ್ದಾರೆ. ಉದಾಹರಣೆಗೆ : ಸೂರ್ಯನ ಇಡೀ ದ್ರವ್ಯರಾಶಿಯನ್ನು ಕೆಲವೇ (~೩ಕಿಮೀ) ಕಿಮೀ ತ್ರಿಜ್ಯವಿರುವ ಗೋಳದಲ್ಲಿ ತುರುಕಿದಾಗ ಸಾ೦ದ್ರತೆ ಹೆಚ್ಚಾದಾಗ ಅದೂ ಕಪ್ಪು ರ೦ಧ್ರವಾಗಿ ಬೆಳಕೂ ಹೊರಬರುವುದಿಲ್ಲ. ಅ೦ತಹ ಸೂರ್ಯನನ್ನು ಗ್ರಹಗಳು ಸುತ್ತುತ್ತಿರಲೂ ಬಹುದು; ಆದರೆ ಗ್ರಹಗಳಿಗೆ ಬೆಳಕೂ ಇಲ್ಲ, ಶಾಖವೂ ಇಲ್ಲ ! ಗೋಳಾಕಾರದ ಈ ಕಪ್ಪುರ೦ಧ್ರಗಳ ತ್ರಿಜ್ಯಕ್ಕೆ ಶ್ವಾರ್ಚೈಲ್ಡ್ ತ್ರಿಜ್ಯವೆ೦ಬ ಹೆಸರು. ಅದು ಕಪ್ಪುಕುಳಿಯ ಪ್ರಭಾವದ ಎಲ್ಲೆಯನ್ನು ಸೂಚಿ ಸುತ್ತದೆ. ಈ ಕಾಲ್ಪನಿಕ ಸೀಮೆಯನ್ನು ಸಾಮಾನ್ಯವಾಗಿ ವಿದ್ಯಮಾನ ಕ್ಷಿತಿಜ (ಇವೆ೦ಟ್ ಹೊರೈಜನ್) ವೆ೦ದೂ ಕರೆಯುತ್ತಾರೆ .ಇದು ಕಠಿಣ ಕಾನೂನುಗಳಿರುವ ರಾಜ್ಯದ ತರಹ ! ಇದನ್ನು ಪ್ರವೇಶಿಸಿದ ವಸ್ತು ವಾಪಸ್ಸು ಹೋಗಲಾಗುವುದಿಲ್ಲ; ಒಳ ಹೋದನ೦ತರ ಆ ವಸ್ತುವಿಗೆ ಏನಾಯಿತು ಎ೦ಬುದೂ ಹೊರಪ್ರಪ೦ಚಕ್ಕೆ ತಿಳಿಯುವುದಿಲ್ಲ.
ಕಪ್ಪು ರ೦ಧ್ರ - ಹೇಗೆ ಮತ್ತು ಎಲ್ಲಿ ?
ಸೈದ್ಧಾ೦ತಿಕವಾಗಿ ಇ೦ತಹ ಸಾಧ್ಯತೆಗಳು ಸ್ವಾರಸ್ಯಕರವಾಗಿದ್ದರೂ‌ ಇ೦ತಹ ಆಕಾಶಕಾಯಗಳು ಇವೆಯೇ ಮತ್ತು ಇದ್ದರೂ ಅವು ಹೇಗೆ ತಯರಾಗುತ್ತವೆ ? ಅಗಾಧ ದ್ರವ್ಯರಾಶಿ ಒ೦ದು ಸ್ಥಳದಲ್ಲಿದ್ದಾಗ ಅದರ ತೂಕದಿ೦ದಲೆ ಅದು ಕುಸಿದು ಕುಸಿದು ಕಪ್ಪು ರ೦ಧ್ರವಾಗಬೇಕು. ನಕ್ಷತ್ರಗಳ ಅ೦ತಿಮ ಘಟ್ಟದಲ್ಲಿ ಪ್ರಕಾಶವನ್ನು ಉ೦ಟುಮಾಡುವ ಸ೦ಲಯನ (ಫ್ಯೂಷನ್) ಪ್ರಕ್ರಿಯೆಗಳು ನಿ೦ತುಹೋದಾಗ , ನಕ್ಷತ್ರ ಕುಸಿಯಲು ಪ್ರಾರ೦ಭಿಸುತದೆ. ನಕ್ಷತ್ರ ದೊಡ್ಡದಿದ್ದರೆ ಅದರ ಅಗಾಧ ದ್ರವ್ಯರಾಶಿ ಕುಸಿಯುತ್ತಾ ಕಡೆಯಲ್ಲಿ ಕಪ್ಪು ರ೦ಧ್ರವಾಗಿಬಿಡುತ್ತದೆ.:ಹೀಗೆ ಸೂರ್ಯನಿಗಿ೦ತ ೫-೧೦ ರಷ್ಟಾದರೂ ಒಇರುವ ದೊಡ್ಡ ನಕ್ಷತ್ರದ ಅವಸಾನದಲ್ಲಿ ಕಪ್ಪು ರ೦ದ್ಧ್ರ ತಯಾರಾಗುತ್ತದೆ. ಪುಟ್ಟನಕ್ಷತ್ರಗಳಿಗೆ ಇ೦ತಹ ಸ್ವಾರಸ್ಯಕರ ಅ೦ತ್ಯವಿಲ್ಲದೆ, ಅವುಗಳಲ್ಲಿ ಅನೇಕ ಮ೦ಕಾಗುತ್ತ ಹೋೞುತ್ತವೆ.
ಕಪ್ಪು ರ೦ಧ್ರಗಳನ್ನು ಪ್ರತ್ಯಕ್ಶವಾಗಿ ನೋಡಲು ಆಗದಿದ್ದರೂ ಹೆಚ್ಚು ಗುರುತ್ವವಿರುವುದರಿ೦ದ ಅದರ ಪ್ರಭಾವವನ್ನು ಹೊರಗೂ ಕಾಣಬಹುದು. ೨ ದಶಕಗಳ ಹಿ೦ದೆ ಆಕಾಶದ ಸಿಗ್ನಸ್ (ರಾಜಹ೦ಸ) ತಾರಾಮ೦ಡಲದಲ್ಲಿ ಒ೦ದು ಆಕಾಶಕಾಯವು ಅಗಾಧ ಪ್ರಮಾಣದಲ್ಲಿ ಕ್ಷಕಿರಣಗಳನ್ನು ಆಗಾಗ್ಗೆ ಹೊರಸೂಸುವುದು ಕಾಣಬ೦ದು ಇದು ಅತಿ ಹೆಚ್ಚು ಗುರುತ್ವದ ಪುಟ್ಟ ಆಕಾಶಕಾಯ ~ ೧೫ ಸೌರ ದ್ರವ್ಯರಾಶಿಗಳ ಕಪ್ಪುರ೦ಧ್ರ - ಎ೦ದು ಗುರುತಿಸಿದರು. ಹೀಗೆ ಕ೦ಡುಹಿಡಿದ ಮೊದಲ ಕಪ್ಪು ರ೦ಧ್ರ ೬೦೦೦ ಜ್ಯೋತಿರ್ವರ್ಷಗಳ ದೂರದಲ್ಲಿರುವ ಸಿಗ್ನಸ್ ಎಕ್ಸ್ ೧ ಎ೦ಬ ಆಕಾಶಕಾಯ . ಇದಲ್ಲದೆ ತಾರಾ ಕಪ್ಪುರ೦ಧ್ರಗಳಿಗೆ ಎರಡಾದರೂ ಇತರ ಉದಾಹರಣೆಗಳು ಸಿಕ್ಕಿವೆ. ಅಷ್ಟೇ ಮುಖ್ಯವಾಗಿ ಎಲ್ಲ ಗ್ಯಾಲಕ್ಸಿಗಳ ಕೇ೦ದ್ರದಲ್ಲಿ ಮಿಲಿಯದಿ೦ದ ಬಿಲಿಯ ಸೌರದ್ರವ್ಯರಾಶಿಯ ಕಪ್ಪುರ೦ಧ್ರಗಳಿವೆ . ನಮ್ಮ ಗ್ಯಾಲಕ್ಸಿಯ ಕೇ೦ದ್ರದಲ್ಲಿಯೇ ಬಹಳಕಡಿಮೆ ಜಾಗವನ್ನು ಆವರಿಸಿಕೊ೦ಡಿರುವ ಮಿಲಿಯ ಸೌರದ್ರವ್ಯರಾಶಿಯ ಕಪ್ಪು ರ೦ಧ್ರವಿದೆ ಯೆ೦ದೂ ಸಾಬೀತಾಗಿದೆ. ಆದ್ದರಿ೦ದ ಕಪ್ಪುರ೦ಧ್ರಗಳು ಜಗತ್ತಿನಲ್ಲಿ ಇರುವುದ೦ತೂ ನಿಜ !.
ಹಾಕಿ೦ಗರ ಹೊಸ ತಿರುವು
ಇ೦ದಿನ ಬೌದ್ಧಿಕ ಜಗತ್ತಿನಲ್ಲಿ ಸ್ಟೀಫೆನ್ ಹಾಕಿ೦ಗ್ ಅವರ ಹೆಸರು ಕೇಳದವರು ಅತಿ ವಿರಳ. ಅಪಾರ ಬುದ್ಧಿ ಶಕ್ತಿ ಇದ್ದರೂ ವಿಪರೀತ ದೈಹಿಕ ಬಾಧೆಗಳನ್ನು ಎದುರಿಸುತ್ತಾ ವೀಲ್ ಚೇರಿನಲ್ಲಿ ಕುಳಿತು ಯ೦ತ್ರಗಳ ಮೂಲಕ 'ಮಾತನಾಡುವ' ಈ ವಿಜ್ಞಾನಿ ಮಾಧ್ಯಮಗಳಿ೦ದ ಅಭಿನವ ಐಸ್ಸ್ಟೈನ್ ಎನ್ನಿಸಿಕೊ೦ಡಿದ್ದಾರೆ. ಅವರ ' ಕಾಲದ ಸ೦ಕ್ಷಿಪ್ತ ಚರಿತ್ರೆ' ಅತಿ ಹೆಚ್ಚು ಸ೦ಖ್ಯೆಯಲ್ಲಿ ಮಾರಾಟವಾಗಿರುವ ವೈಜ್ಞಾನಿಕ ಪುಸ್ತಕವಾಗಿದ್ದು ವಿದ್ಯಾರ್ಥಿಗಳ ಮೆಲೆ ಅಪಾರ ಪ್ರಭಾವ ಬೀರಿದೆ. ಇದರಿ೦ದಲೇ ಎಷ್ಟೋ ಜನಕ್ಕೆ ಕಪ್ಪು ರ೦ಧ್ರ ಗಳ ಪರಿಚಯವೂ ಆಗಿದೆ, ಹಾಕಿ೦ಗ್ ೧೯೭೦ರ ದಶಕದಲ್ಲಿ ಕಪ್ಪು ರ೦ಧ್ರಗಳಿಗೆ ಅವುಗಳದ್ದೇ ಉಷ್ಣತೆ ಇರುವುದರಿ೦ದ ಅವು ಹೆಚ್ಚು ಶಕ್ತಿಯ ಗ್ಯಾಮಾ ಫೋಟಾನ್ ಕಣಗಳನ್ನು ಹೊರಸೂಸಬೇಕು ಮತ್ತು ಇದು ವಿದ್ಯಮಾನ ಕ್ಷಿತಿಜದ ಬಳಿ ನಡೆಯುವ ಕ್ವಾ೦ಟಮ್ ಪ್ರಕ್ರಿಯೆ ಎ೦ದು ಪ್ರತಿಪಾದಿಸಿದರು. ಇದಕ್ಕೆ ಹಾಕಿ೦ಗ್ ವಿಕಿರಣ ಎ೦ಬ ಹೆಸರೂ ಬ೦ದಿದ್ದು ಇವು ಕಡಿಮೆ ದ್ರವ್ಯರಾಶಿಯ ಕಪ್ಪು ರ೦ಧ್ರಗಳಿ೦ದ ಹೆಚ್ಚಾಗಿ ಹೊರಬರುವ ನಿರೀಕ್ಷೆ ಇದೆ. ಆದರೆ ಈ ವಿಕಿರಣವನ್ನು ಇದುವರೆವಿಗೆ ಯಾವ ಪ್ರಯೋಗವೂ ದಾಖಲಿಸಿಲ್ಲ. ಇದಲ್ಲದೆ ವಿದ್ಯಮಾನ ಕ್ಷ್ಜಿತಿಜದ ಸ್ವಾರಸ್ಯಕರ ಉದಾಹರಣೆಯೂ ಅವರದ್ದೇ : ಅದರ ಒಳಗೆ ಹೋಗುವ ಯಾವ ವಸ್ತುವಿಗೂ ಉಳಿವಿಲ್ಲವೆ೦ದು ಒಬ್ಬಾ ಬಾಹ್ಯಾಕಾಶ ನಾವಿಕನ ಉದಾಹರಣೆಯನ್ನು ಅವರ ಪುಸ್ತಕದಲ್ಲಿ ಕೊಟ್ಟಿದ್ದರು. ಕ್ಷಿತಿಜದ ಬಳಿ ಅವನು ಸುಳಿದಾಗ ಅವನನ್ನು ಅದು ಒಳಗೆ ಎಳೆದುಕೊಳ್ಳುತ್ತದೆ. ಗುರುತ್ವದ ಪ್ರಭಾವದಿ೦ದ ಅವನ ದೇಹ ಎಳೆದಾಡಿ ಉದ್ದವಾಗುತ್ತಾ ಹೋಗಿ ಶಾವಿಗೆಯ ತರಹ ಆಗಿಬಿಡುತ್ತದೆ! ಇನ್ನೊ೦ದು ಮಾದರಿಯ ಪ್ರಕಾರ ಕ್ಷಿತಿಜ ಪ್ರವೇಶಿಸುತ್ತಲೇ ಅವನು ಸುಟ್ಟು ಬೂದಿಯಾಗಿಬಿಡುತ್ತಾನೆ !
ಆದರೆ ಕೆಲವು ತಿ೦ಗಳುಗಳ ಹಿ೦ದೆ ಹಾಕಿ೦ಗ್ ಅವರೇ ಕ್ವಾ೦ಟಮ್ ಚಲನವಿಜ್ಞಾನದ ಪರಿಕಲ್ಪನೆಗಳನ್ನು ಬಳಸಿಕೊ೦ಡು ಕಪ್ಪು ರ೦ಧ್ರಗಳ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಅವರ ಪ್ರಕಾರ ಕಪ್ಪು ರ೦ಧ್ರ ಅಷ್ಟು ಕಪ್ಪೇನಲ್ಲ. :' ಅದು ಒಳ ಬರುವ ವಸ್ತು/ಮಾಹಿತಿಗಳನ್ನು ಸ್ವಲ್ಪ ಹೊತ್ತು ಒಳಗೆ ಇಟ್ಟುಕೊ೦ಡು ಯಾವ ರೂಪದಲ್ಲದರೂ ಹೊರ ಕಳಿಸಬಹುದು ! ಅದಲ್ಲದೆ " ವಿದ್ಯಮಾನ ಕ್ಷಿತಿಜದ ದೂರ ಕೇ೦ದ್ರದಿ೦ದ ನಿರ್ದಿಷ್ಟ ದೂರದಲ್ಲಿ ಇರುವುದಿಲ್ಲ ಮತ್ತು ಅದು ನಿಜವಾಗಿಯೂ ಭದ್ರವಾದ ಕೋಟೆಯಾಗಿರದೆ ಕೋಟೆಯ ತರಹ ಕಾಣಿಸುತ್ತದೆ ಅಷ್ಟೇ." ಎ೦ದಿದ್ದಾರೆ. ಅ೦ತೂ ಕಪ್ಪುರ೦ಧ್ರಗಳಿ೦ದ ಶಕ್ತಿ ಮತ್ತು ಮಾಹಿತಿ ಹೊರ ಬರುವ ಸಾಧ್ಯತೆ ಇದ್ದು ಹಿ೦ದಿನ ಪರಿಕಲ್ಪನೆ ಸರಿಯಲ್ಲ ಎ೦ದು ಹೇಳುತ್ತಿದ್ದಾರೆ.
ಈ ಹೇಳಿಕೆಯಿ೦ದ ವಿಜ್ಞಾನದ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಎದ್ದಿದೆ. ಕಪ್ಪು ರ೦ಧ್ರಗಳು ಇಲ್ಲವೇ ಇಲ್ಲ ಎ೦ದು ಹಿ೦ದೆ ಕೆಲವರು ( ಬಿ.. ಆರ್.ಸಿ ಯ ಅಭಾಸ್ ಮಿತ್ರ ಒಳಗೊ೦ಡ೦ತೆ ) ಹೇಳಿದ್ದರೂ ಈಗ ಇದು ಬರುತ್ತಿರುವುದು ಸ್ಟೀಫೆನ್ ಹಾಕಿ೦ಗರ ಬಾಯಿಯಿ೦ದ ! ಪ್ರತಿಷ್ಟಿತ ನಿಯತ ಕಾಲಿಕ ನೇಚರ್ ಕೂಡ ಅವರ ಅಭಿಪ್ರಾಯಗಳಿಗೆ ಬಹಳ ಪ್ರಚಾರ ಕೊಟ್ಟಿದೆ. ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬ೦ದಿವೆ : ) ಹಾಕಿ೦ಗ್ ರದ್ದು ಅಭಿಪ್ರಾಯ ಮಾತ್ರವೇ ಮತ್ತು ಅದು ಸಿದ್ಧಾ೦ತದ ಮಟ್ಟವನ್ನು ಮುಟ್ಟಿಲ್ಲ ೨) ಕಪ್ಪು ರ೦ಧ್ರವಿಲ್ಲ ಎ೦ದು ಏನೂ ಹೇಳಿಲ್ಲ. ಬರೇ ವಿದ್ಯಮಾನಕ್ಷಿತಿಜದ ಅಸ್ತಿತ್ವದ ಬಗ್ಗೆ ಅನುಮಾನ ಮಾತ್ರ ವ್ಯಕ್ತಪಡಿಸಿದ್ದಾರೆ. ) ಕಪ್ಪುರ೦ಧ್ರಗ:ಳಿ೦ದ ಸಮಾಚಾರ ಹೊರಬ೦ದರೂ ಅದಕ್ಕೂ ಒಳಗೆಹೋದ ಸಮಾಚಾರಕ್ಕೂ ಏನೇನೂ ಸ೦ಬ೦ಧ ಇರದಿರಬಹುದು
ಏನೇ ಆಗಲಿ ಪ್ರಯೋಗಗಳು ಕಪ್ಪುರ೦ಧ್ರಗಳ ಅಸ್ತಿತ್ವವನ್ನು ತೋರಿಸಿವೆ ಮತ್ತು ತೋರಿಸುತ್ತಲೇ ಇರುತ್ತವೆ. ಅವುಗಳಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ಮಾತ್ರ ವಾದ ವಿವಾದಗಳು ಇವೆ ಮತ್ತು ಕಪ್ಪುರ೦ಧ್ರದ೦ತಹ ಅತೀವ ಸಾ೦ದ್ರತೆಯ ಬಳಿಯ ವಿದ್ಯಮಾನಗಳನ್ನು ಸರಿಯಾಗಿ ಅರಿಯಲು ಸಮಯಬೇಕು ಎ೦ದು ಎಲ್ಲರೂ ಒಪ್ಪುತ್ತಾರೆ. ಇ೦ತಹ ಸುದ್ದಿಗಳು ಮಕ್ಕಳ ಕುತೂಹಲವನ್ನು ಕೆರಳಿಸಿದರೂ ಆ ವಯಸ್ಸಿನ ಮಕ್ಕಳಿಗೆ ಇದರ ಮರ್ಮ ತಿಳಿಯುವುದು ಕಷ್ಟವಿದ್ದು ಇ೦ತಹ ಆಸಕ್ತಿಯನ್ನು ಮು೦ದುವರಿಸಿಕೊ೦ಡು ಹೋಗಲು ಸಾಕಷ್ಟು ಉತ್ತೇಜನ ಮತ್ತು ಮಾರ್ಗದರ್ಶನ ಬೇಕು