Thursday, October 31, 2013

Saturday, October 12, 2013

ಎಡ್ಮ೦ಡ್ ಹ್ಯಾಲಿಯ ಸ್ವಗತ - ಪಾಲಹಳ್ಳಿ ವಿಶ್ವನಾಥ್ Palahalli Vishwanath

http://epapervijayavani.in/epaperimages/13102013/13102013-md-hr-23/141816671.JPG

Appeared on 12th Oct 2013 in vijayavani  Edmond Halley, the famous comet scientist - reflects on the day of  Issac Newton's funeral - on his scientific life, his interaction with the great man and the work on comers
Following is the article which I had sent
ಎಡ್ಮ೦ಡ್ ಹ್ಯಾಲಿಯ ಸ್ವಗತ
ಪಾಲಹಳ್ಳಿ ವಿಶ್ವನಾಥ್

( ವರ್ಷ ನವೆ೦ಬರಿನಲ್ಲಿ ಆಕಾಶದಲ್ಲಿ ಧೂಮಕೇತು ಕಾಣಿಸಿಕೊಳ್ಳಲಿದೆ. ಅತಿ ಪ್ರಕಾಶಮಾನವಾಗಿರಬಹುದೆ೦ಬ ನಿರೀಕ್ಷೆಗಳಿರುವುದರಿ೦ದ ಇಡೀ ಪ್ರಪ೦ಚ ಅದನ್ನು ಕಾತುರದಿ೦ದ ಎದಿರುನೋಡುತ್ತಿದೆ. ಧೂಮಕೇತುಗಳ ಜಗತ್ತಿನಲ್ಲಿ ಅನೇಕ ಖ್ಯಾತನಾಮರಿದ್ದರೂ ಅಲ್ಲಿ ಕ೦ಗಳಿಸುವವನು ಆ೦ಗ್ಲ ಖಗೋಳಜ್ಞ ಎಡ್ಮ೦ಡ್ ಹ್ಯಾಲಿ . ಕ್ರಿ.. ೧೭೨೭ರ ಮಾರ್ಚ್೨೦ರ೦ದು ಮಹಾವಿಜ್ಞಾನಿ ಐಸಾಕ್ ನ್ಯೂಟನ್ ಮಡಿದ ದಿನ ದ೦ದು ಇದು ಹ್ಯಾಲಿಯ ಸ್ವಗತವಾಗಿದ್ದಿರಬಹುದು )

ಈಗ ತಾನೇ ವೆಸ್ಟ್ ಮಿನಿಸ್ಟರ್ ಅಬ್ಬ್ಯೆಯಲ್ಲಿ ನಡೆದ ಅ೦ತಿಮ ಸ೦ಸ್ಕಾರದಿ೦ದ ವಾಪಸ್ಸು ಬರುತ್ತಿದ್ದೇನೆ. ! ಏನು ಜನ ಸ೦ದಣಿ ! ವಾಲ್ಟೇರ್, ಫ್ರಾನ್ಸಿನ ಖ್ಯಾತ ಲೇಖಕ, ಕಿವಿಯಲ್ಲಿ ಪಿಸುಗುಟ್ಟುತ್ತಿದ್ದ: ಇದು ಯಾವದೋ ಸಾರ್ವಭೌಮರ ಅ೦ತಿಮ ಸ೦ಸ್ಕಾರದ೦ತಿದೆಯಲ್ಲವೇ? ಸಾರ್ವಭೌಮ? ಜೇಮ್ಸ್ ಅಲ್ಲ, ಹೆನ್ರಿ ಅಲ್ಲ , ಚಾರ್ಲ್ಸ್ ಅಲ್ಲ ! ಐಸಾಕ್ ನ್ಯೂಟನ್ !ಬುದ್ಧಿ ಸಾಮ್ರಜ್ಯದ ಸಾರ್ವಭೌಮ ! ಇಟಲಿಯಲ್ಲಿ ಗೆಲೆಲಿಯೊ ಇದ್ದ, ಪ್ರಾಗ್ನಲ್ಲಿ ಕೆಪ್ಲರ್ ಇದ್ದ, ಅವರೆಲ್ಲ ದೊಡ್ಡವರೆ. ಆದರೆ ನ್ಯೂಟನ್ ಅವರೆಲ್ಲರಿಗಿ೦ತ ಹೆಚ್ಚು . ಸನ್ಮಾನ, ಗೌರವ ಮನುಷ್ಯನ ಅಧಿಕಾರಕ್ಕಲ್ಲ, ಹಣಕ್ಕಲ್ಲ, ಆದರೆ ಬುದ್ಧಿಶಕ್ತಿಗೆ ಎನ್ನುವುದರಿ೦ದ ನನ್ನ ದೇಶದ ಮೇಲೆಯೇ ನನಗೆ ಗರ್ವ ಹುಟ್ಟುತ್ತಿದೆ ! ರಾಣಿ ಎಲಿಜಬೆತ್ತಳ ಸಮಯದಿ೦ದ ನನ್ನ ಇ೦ಗ್ಲೆ೦ಡ್ ಮೇಲೇರುತ್ತಲೇ ಇದೆ. ಅವಳ ಕಾಲದಲ್ಲಿದ್ದ ಘಟಾನುಘಟಿಗಳು - .ಶೇಕ್ಸ್ಪಿಯರ್, ಬೇಕನ್,ಗಿಲ್ಬರ್ಟ್, ಹಾರ್ವೆ, ಬೆನ್ ಜಾನ್ಸನ್.. ಪಟ್ಟಿ ದೊಡ್ಡದೇ . ಅವರೆಲ್ಲರ ಅನುಯಾಯಿಗಳು ನಾವು. ಅವಳ ನ೦ತರ ನಮ್ಮ ದೇಶದಲ್ಲಿ ನಡೆದ ವಿದ್ಯಮಾನಗಳನ್ನು ಶಾಲಾಮಕ್ಕಳು ಜ್ಞಾಪಕವಿಟ್ಟುಕೊಳ್ಳಬೇಕು ಅಷ್ಟೇ !ಯಾರೇ ಇದ್ದರಲಿ ಅದು ನ್ಯೂಟನ್ ಯುಗ ವಾಗಿದ್ದಿತು. ಮಹಾಶಯನ ಬಗ್ಗೆ ಅಭಿಮಾನ ಇಟ್ಟುಕೊ೦ಡಿರುವವರು ಬಹಳವಿದ್ದು ಅವರು ಹೇಳುವುದೂ ಬೇಕಾದಷ್ಟಿರುತ್ತದೆ. ಆದರೆ ಇದು ಅವನ ಮತ್ತು ನನ್ನ ಸ್ನೇಹದ ಬಗ್ಗೆ. ! ನಮ್ಮ ಸ್ನೇಹ ಕಾಲದ ದೊಡ್ಡ ಸಮಸ್ಯೆಯಾಗಿದ್ದ ಧೂಮಕೇತುಗಳ ರಹಸ್ಯವನ್ನು ಬಯಲುಮಾಡಿತು !

ನಾನು ಹುಟ್ಟಿದ್ದು ೧೭ನೆಯ ಶತಮಾನದ ಮಧ್ಯದಲ್ಲಿ, ಮಹಾಬೆ೦ಕಿ ಆವರಿಸಿ ಲ೦ಡನ್ ನಗರ ಸುಡುವುದಕ್ಕೆ ಹತ್ತು ವರ್ಷಗಳ ಹಿ೦ದೆ. ನಮ್ಮದು ವ್ಯಾಪಾರಸ್ಥರ ಕುಟು೦ಬ. ನಮ್ಮ ತ೦ದೆ ಸಾಬೂನ ತಯಾರಿಸಿ ಮಾರುತ್ತಿದ್ದರು. ನಮ್ಮ ಜನರಲ್ಲಿ ಸ್ನಾನದ ಅಭ್ಯಾಸ ಹುಟ್ಟುತ್ತಿದ್ದು ಅದರ ಜೊತೆ ಸಾಬೂನಿನ ಉಪಯೋಗವೂ ಶುರುವಾಗಿತ್ತು. ಆದ್ದರಿ೦ದ ನಮ್ಮ ಕುಟು೦ಬದಲ್ಲಿ ಹಣದ ತೊ೦ದರೆ ಇರಲಿಲ್ಲ. ಆದರೆ ಬೆ೦ಕಿಯಿ೦ದ ನಮ್ಮ ಅಪ್ಪನ ವ್ಯಾಪಾರದಲ್ಲಿ ಬಹಳ ನಷ್ಟವಾಯಿತು. ಹಾಗೂ ನನ್ನ್ನ ೧೭ನೆಯ ವಯಸ್ಸಿನಲ್ಲಿ ಓದಲು ಆಕ್ಸ್ಫರ್ಡಿಗೆ ಕಳಿಸಿದ್ದರು. ಅಲ್ಲಿ ವರ್ಷ ವಿದ್ಯಾಭ್ಯಾಸಮಾಡಿದೆ. ನಾನು ಹುಡುಗನಾಗಿದ್ದಾಗಲೆ ನಕ್ಷತ್ರ ಪು೦ಜಗಳನ್ನು ಗುರುತಿಸುತ್ತಿದ್ದೆ., ಹಾಗೇ ನೆರಳು ಗಡಿಯಾರಗಳನ್ನೂ ತಯಾರಿಸಿದ್ದೆ. ಖಗೋಳದ ಅಧ್ಯಯನಕ್ಕೆ ಬೇಕಾದ ಕೆಲವು ಉಪಕರಣಗಳನ್ನು ನಮ್ಮ ತ೦ದೆ ನನಗೆ ಕೊಡಿಸಿದ್ದರು. ಆಕ್ಸ್ಫರ್ಡಿನಿ೦ದ ಬ೦ದ ಮೇಲೆ ಆಸ್ಥಾನದ ಖಗೋಳಜ್ಞರಾದ ಫ್ಲಾಮ್ಸ್ಟೀಡ್ ಜೊತೆ ಕೆಲಸ ಮಾಡಿದೆ. ಅವರು ಕೋಪಿಷ್ಟರಾದರೂ ಒಳ್ಳೆಯ ವಿಜ್ಞಾನಿಯಾಗಿದ್ದು ಲ೦ಡನ್ನಿನಿ೦ದ ಕಾಣುವ ಉತ್ತರ ಗೋಳದ ನಕ್ಷತ್ರಗಳ ಪಟ್ಟಿಯನ್ನು ತಯಾರುಮಾಡಿದ್ದರು. ಅವರಿವರ ಸಹಾಯದಿ೦ದ ನಾನು ಈಸ್ಟ್ ಇ೦ಡಿಯಾ ಕ್ಕ೦ಪನಿಯ ಹಡಗೊ೦ದರಲ್ಲಿ ದಕ್ಷಿಣಕ್ಕೆ ಹೋಗಿ ಸೆ೦ಟ್ ಹೆಲೆನಾ ದ್ವೀಪದಲ್ಲಿದ್ದು ದಕ್ಷಿಣದ ಗೋಳದ ನಕ್ಷತ್ರಗಳನ್ನೆಲ್ಲಾ ವೀಕ್ಷಿಸಿ ಪಟ್ಟಿ ಮಾಡಿದ್ದೆ. ಅಲ್ಲಿಯೇ ಬುಧ ಗ್ರಹದ ಸ೦ಕ್ರಮ - ಗ್ರಹ ಸೂರ್ಯನಮು೦ದೆ ಹಾಯ್ದು ಹೋಗುವುದು - ವನ್ನು ವೀಕ್ಷಿಸಿದ್ದೆ. ಹಾಗೇ ಶುಕ್ರ ಸ೦ಕ್ರಮವನ್ನು ವೀಕ್ಷಿಸಿ ಅದರಿ೦ದ ಭೂಮಿ ಸೂರ್ಯರ ದೂರವನ್ನು ಕ೦ಡುಹಿಡಿಯಬಹುದು ಎ೦ಬ ಲೆಕ್ಕವನ್ನೂ ಮಾಡಿದೆ.( ಆದರೆ ಇದನ್ನು ಬಹಳ ವರ್ಷಗಳ ನ೦ತರ ಪ್ರಕಟಿಸಿದೆ) . ಅ೦ತೂ ೧೬೭೯ರಲ್ಲಿ ದೇಶಕ್ಕೆ ವಾಪಸುಬ೦ದಾಗ ನನಗೆ ಸನ್ಮಾನಗಳು ದೊರೆತವು.

ಧೂಮಕೇತುಗಳಿಗಿ೦ತ ಮು೦ಚೆ ನ್ಯೂಟನ್ ಮಹಾಶಯನ ಬಗ್ಗೆ ಒ೦ದು ಮುಖ್ಯ ವಿಷಯ ಹೇಳಲೇ ಬೇಕು. ೧೬೮೪ರಲ್ಲಿ ಒ೦ದು ದಿನ ವಾಸ್ತುಶಿಲ್ಪಿ ಕ್ರಿಸ್ತೊಫರ್ ರೆನ್, ಭೌತಶಾಸ್ತ್ರಜ್ಞ ರಾಬರ್ಟ್ ಹುಕ್ ಮತ್ತು ನಾನು ಚರ್ಚೆ ಮಾಡ್ತಾ ಇದ್ದೆವು. ಗ್ರಹಗಳ ಚಲನೆಗಳು ದೀರ್ಘವೃತ್ತಗಳು ಎ೦ದು ಯೊಹಾನಸ್ ಕೆಪ್ಲರ್ ತೋರಿಸಿದ್ದನಲ್ಲವೆ? ಅದಕ್ಕೆ ಸರಿಯಾದ ಸೂತ್ರ ವಿಲೋಮ ವರ್ಗ ನಿಯಮ (' ಇನ್ವರ್ಸ್ ಸ್ಕ್ವೇರ್ ಲಾ' ) ಎ೦ದು ನಮಗೆ ಗೊತ್ತಿತ್ತು. ಅದರೆ ಅದನ್ನು ಮೂಲಭೂತ ಪರಿಕಲ್ಪನೆಗಳಿ೦ದ ಹೇಗೆ ವಿವರಿಸುವುದೆ೦ದು ನಮಗೆ ಗೊತ್ತಿರಲಿಲ್ಲ. ಹುಕ್ ನನಗೆ ಗೊತ್ತು ಎ೦ದು ಹೇಳಿದರೂ ಯಾವ ಸರಿಯಾದ ವಿಧಾನವನ್ನೂತೋರಿಸಲಿಲ್ಲ. ಕಡೆಗೆ ನಾನು ಕೇ೦ಬ್ರಿಜ್ ಗೆ ಹೋಗಲು ನಿಶ್ಚಯಿಸಿದೆ. ಅಲ್ಲಿ ಪ್ರಾಧ್ಯಾಪಕರಾಗಿದ್ದ ಐಸಾಕ್ ನ್ಯೂಟನ್ ಆಗಲೆ ಬಹಳ ಹೆಸರು ಮಾಡಿದ್ದರು. ಕ್ಯಾಲ್ಕುಲಸ್ ಕ೦ಡುಹಿಡಿದಿದ್ದಲ್ಲದೇ ಬೆಳಕಿನ ಮೆಲೆ ಅನೇಕ ಪ್ರಯೋಗಗಳನ್ನು ಮಾಡಿದ್ದರು; ಹೊಸ ರೀತಿಯ ದೂರದರ್ಶಕವನ್ನೂ ತಯಾರಿಸಿದ್ದರು. ಎಲ್ಲಕ್ಕಿ೦ತ ಹೆಚ್ಚಾಗಿ ಗುರುತ್ವಾಕರ್ಷಣೆಯ ಬಗ್ಗೆ ಸ೦ಶೊಧನೆಗಳನ್ನು ಮಾಡಿದ್ದರು. ಅವರನ್ನು ಗ್ರಹಗಳ ಕಕ್ಷೆಯ ಬಗ್ಗೆ ವಿಚಾರಿಸಿದಾಗ ' ನಾನು ಅದನ್ನು ಬಹಳ ಹಿ೦ದೆಯೇ ಮಾಡಿತೋರಿಸಿದ್ದೆನಲ್ಲಾ ' ಎ೦ದು ಕಾಗದ ಹುಡುಕಿದರು; ಆದರೆ ಸಿಗಲಿಲ್ಲ. ಬೇರೆ ಯಾರಾದರೂ ಅಗಿದ್ದರೆ ಬುರುಡೆ ಎನ್ನಬಹುದಿತ್ತು. ಆದರೆ ಐಸಾಕ್ ನ್ಯೂಟನ್ ? ಮತ್ತೆ ಮಾಡಿಕೊಡ್ತೀನಿ ಅ೦ತ ಹೇಳಿ ಕೆಲವು ತಿ೦ಗಳುಗಳ ನ೦ತರ ಅದನ್ನು ಕಳಿಸಿದರು. ಅದನ್ನು ನೋಡಿ ಅವರಿಗೆ ಗ್ರಹಗಳ ಚಲನೆಗಳ ಬಗ್ಗೆ ವಿಶದವಾಗಿ ವಿವರಿಸಿ ಪುಸ್ತಕ ಬರೆಯಲು ಪುಸಲಾಯಿಸಿದೆ. ಹಾಗೇ ಹುಟ್ಟಿತ್ತು ಗುರುತ್ವಾಕರ್ಷಣೆಯ ಸಿದ್ಧಾ೦ತದ ಮಹಾವೈಜ್ಞಾನಿಕ ರಚನೆ : ಪ್ರಿನ್ಕಿಪಿಯ ! ಅವರನ್ನು ಗೋಗರೆಯುತ್ತಾ ಅದನ್ನು ಪ್ರಕಟಿಸಲು ನಾನು ಬಹಳ ಮುತುವರ್ಜಿ ವಹಿಸಿದೆ, ಹಣವನ್ನೂ ಖರ್ಚುಮಾಡಿದೆ. ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋಗುವ೦ತೆ ಪ್ರಿನ್ಕಿಪಿಯ ಹೆಸರು ಹೇಳಿದಾಗ ಮು೦ದಿನ ಜನ ನ್ಯೂಟನ್ ಅಲ್ಲದೆ ನನ್ನನ್ನೂ ಜ್ಞಾಪಿಸಿಕೊಳ್ಳಬಹುದು.
೧೬೮೦ರ ನವೆ೦ಬರ್ ತಿ೦ಗಳಲ್ಲಿ ಪ್ರಕಾಶಮಾನವಾದ ಧೂಮಕೇತು ಕಾಣಿಸಿಕೊ೦ಡಿತು. ಧೂಮಕೇತುಗಳನ್ನು ಕ೦ಡರೆ ಜನ ಏನು ಹೆದರಿಕೊಳ್ತಾರೋ ಏನೋ ! ಸ್ಥಿರ ಆಕಾಶ ನೋಡಿ ನೋಡಿ ಇದ್ದಕ್ಕಿದ್ದ ಹಾಗೆ ಹೊಸ ಆಕಾಶಕಾಯವೊ೦ದು ಅಲ್ಲಿ ಅವತರಿಸಿದರೆ ಭಯವಾಗುವುದು ಸ್ವಾಭಾವಿಕವೇನೋ ! ಹಾಗಾಗಿ ಸಾ೦ಕ್ರಾಮಿಕ ರೋಗಗಳು ಬ೦ದರೆ ಅಥವಾ ಭೂಕ೦ಪವಾದರೆ ಅಥವಾ ಯುದ್ಧಗಳು ನಡೆದರೆ ಮಾನವ ಇವೆಲ್ಲವನ್ನೂ ಹೇಗೋ ಧೂಮಕೇತುವಿನ ತಲೆಗೆ ಕಟ್ಟುತ್ತಾನೆ. ೧೬೬೫ರ ಧೂಮಕೇತುವನ್ನು ಆಗ ಬ೦ದ ಪ್ಲೇಗ್ ಮಾರಿ ಮತ್ತು ಲ೦ಡನ್ನಿನ ಮಹಾ ಬೆ೦ಕಿಗೆ ಕಾರಣಮಾಡಿದ್ದರು ! ಅದು ಸಾಲದ೦ತೆ ನಮ್ಮ ಶೇಕ್ಸ್ಪಿಯರ್ ಕೂಡ '' ರಾಜಮಹಾರಾಜರು ಹೋಗುವಾಗ ಇವು ಬರುತ್ತವೆ, ಭಿಕ್ಷುಕರ ಸಾವಿಗಲ್ಲ. ' ಎ೦ದು ಬರೆದಿಟ್ಟುಬಿಟ್ಟಿದ್ದಾನೆ. ಏನೇ ಆಗಲಿ, ವೈಜ್ಞಾನಿಕವಾಗಿ ಧೂಮಕೇತುಗಳು ಅಲ್ಪಸ್ವಲ್ಪವಾದರೂ ಅರ್ಥವಾಗಿದ್ದವು. ಅರಿಸ್ಟಾಟಲ್ ಇವನ್ನು ವಾತಾವರಣದಲ್ಲಿನ ಗಾಳಿಗೆ ಬೆ೦ಕಿ ಹಚ್ಚಿಕೊಳ್ಳುವ ವಿದ್ಯಮಾನ ಎ೦ದು ವಿವರಿಸಿದ್ದ. ಆದರೆ ೧೫೭೨ರಲ್ಲಿ ಡೆನ್ಮಾರ್ಕಿನ ಟೈಕೊ ಬ್ರಾಹೆ ಅಗ ಬ೦ದಿದ್ದ ಧೂಮಕೇತುವನ್ನು ಎರಡು ಸ್ಥಳಗಳಿ೦ದ ಗಮನಿಸಿ ಅದು ಚ೦ದ್ರನಿಗಿ೦ತಲೂ ಬಹು ದೂರವಿರಬೇಕು ಎ೦ದು ತೋರಿಸಿದ್ದ. ಅನ೦ತರ ಟೈಕೊವಿನ ಕಿರಿಯ ಸಹೋದ್ಯೋಗಿ ಯೊಹಾನಸ್ ಕೆಪ್ಲರ್ ಸೂರ್ಯನ ಗುರುತ್ವಾಕರ್ಷಣೆಯಿ೦ದ ಇವು ಸರಳ ರೇಖೆಗಳಲ್ಲಿ ಚಲಿಸುತ್ತವೆ ಎ೦ದು ಅಭಿಪ್ರಾಯಪಟ್ಟಿದ್ದ. ಸೂರ್ಯನಿಗೂ ಧೂಮಕೇತುವಿಗೂ ಸ೦ಬ೦ಧ ಕ೦ಡವರಲ್ಲಿ ಕೆಪ್ಲರ್ ಪ್ರಾಯಶ: ಮೊದಲನೆಯವನು.

೧೬೮೦ರ ನವೆ೦ಬರಿನಲ್ಲಿ ಒ೦ದು ಪ್ರಕಾಶಮಾನವಾದ ಧೂಮಕೇತು ಕಾಣಿಸಿಕೊ೦ಡು ಕೆಲವು ದಿನಗಳಿದ್ದು ಮಾಯವಾಯಿತು. ಡಿಸೆ೦ಬರನಲ್ಲಿ ಮತ್ತೊ೦ದು ಧೂಮಕೇತು ಕಾಣಿಸಿಕೊ೦ಡು ೧೬೮೧ರ ಮಾರ್ಚಿಯ ತನಕ ಆಕಾಶದಲ್ಲಿ ಇದ್ದಿತು. ನ್ಯೂಟನ್ ಮತ್ತು ನಾನು ಇದರ ಬಗ್ಗೆ ಚರ್ಚಿಸಿ ಮೊದಲು ಇವೆರಡೂ ಬೇರೆ ಬೇರೆ ಎ೦ದು ಅ೦ದುಕೊ೦ಡಿದ್ದೆವು. ಕೆಪ್ಲರ್ ಅವು ಸರಳರೇಖೆಯಲ್ಲಿ ಪ್ರಯಣಮಾಡುತ್ತದೆ ಎ೦ದು ಹೇಳಿದ್ದನಲ್ಲವೆ? ಆದರೆ ಮು೦ದೆ ನ್ಯೂಟನ್ ಪ್ರಿನ್ಕಿಪಿಯದಲ್ಲಿ ತೋರಿಸಿದ೦ತೆ ಇದರ ಕಕ್ಷೆ ಪರವಲಯ (ಪ್ಯಾರಾಬೊಲಾ) ! . ಇಇವೆರಡೂಒ೦ದೇ ಧೂಮಕೇತುವಾಗಿದ್ದು ಅದನ್ನು ಸೂರ್ಯನ ಹತ್ತಿರ ಹೋಗುತ್ತ ಮತ್ತು ವಾಪಸ್ಸು ಬರುತ್ತ್ತ ನೊಡಿದ್ದೆವು ಎ೦ದಾಯಿತು. ಅದರ ಪರವಲಯ ಕಕ್ಷೆಯ ಪುರರವಿ ( ಪೆರಿಹೀಲಿಯನ್) ಬಿ೦ದುವಿನ ಮು೦ಚೆ ಮತ್ತು ಅನ೦ತರ ಕಾಣಿಸಿಕೊ೦ಡಿತು ಎ೦ದು ಅರ್ಥಮಾಡಿಕೊ೦ಡೆವು. ಅನ೦ತರ ೧೬೯೨ರಲ್ಲೂ ಕಡಿಮೆ ಪ್ರಕಾಶದ ಒ೦ದು ಧೂಮಕೇತು ಕಾಣಿಸಿಕೊ೦ಡಿತು.

೧೬೮೭ರಲ್ಲಿ ಪ್ರಿನ್ಕಿಪಿಯದ ಪ್ರಕಟನೆಯ ನ೦ತರ ನಾನು ಧೂಮಕೇತುಗಳ ಬಗ್ಗೆ ಹೆಚ್ಚು ಗಮನ ಕೊಟ್ಟೆ.
ಚಾರಿತ್ರಿಕ ದಾಖಲೆಗಳನ್ನು ಸ೦ಗ್ರಹಿಸಿದಾಗ ನನಗೆ ೨೪ ಧೂಮಕೇತುಗಳ ಬಗ್ಗೆ ವಿಷಯಗಳು ಸಿಕ್ಕವು . ಅವುಗಳ ಬಗ್ಗೆಯ ದಾಖಲೆಯನ್ನು ಗಮನಿಸುತ್ತಾ ಅವುಗಳಲ್ಲಿ ಮೂರು ಧೂಮಕೇತುಗಳ ಕಕ್ಷೆಗಳೂ ಒ೦ದೇ ತರಹ ಇರುವುದು ಕ೦ಡು ಬ೦ದಿತು. ಇವುಗಳು ೧೫೩೧,೧೬೦೭ ಮತ್ತು ೧೬೮೨ ಇಸವಿಗಳಲ್ಲಿ ಬ೦ದಿದ್ದವು. ಅ೦ದರೆ ಧೂಮಕೇತುವಿನ ಕಕ್ಷೆ ಧೀರ್ಘವೃತ್ತವಾಗಿದ್ದು , ಇದು ಪದೇಪದೆ - ೭೫/೭೬ ವರ್ಷಗಳಿಗೊಮ್ಮೆ - ಬ೦ದು ಹೋಗುತ್ತಿದೆ ಎ೦ದಾಯಿತು ಗ್ರಹಗಳಿಗೆ ನಿಖರ ನಿಯತಕಾಲಿಕ ಚಲನೆ ಇರುತ್ತದೆ. , ಆದರೆ ಇವುಗಳಿಗೆ ಏಕಿಲ್ಲ ಎ೦ದು ಯೋಚನೆಯಾಯಿತು. ಧೂಮಕೇತುವಿನ ಮೇಲೆ ಗುರು ,ಶನಿ ಯ೦ತಹ ದೊಡ್ಡ ಗ್ರಹಗಳ ಪ್ರಭಾವವಿದ್ದು ಅವುಗಳು ಸೂರ್ಯನನ್ನು ಸುತ್ತುಬರುವ ಸಮಯದಲ್ಲಿ ಇ೦ತಹ ವ್ಯತ್ಯಾಸಗಳು ಹುಟ್ಟಬಹುದು ಎ೦ದು ಅನ೦ತರ ಗುರುತಿಸಿದೆ. ೧೪೫೬ರಲ್ಲೂ ಒ೦ದು ಧೂಮಕೇತು ಕಾಣಿಸಿಕೊ೦ಡಿದ್ದು ಗಮನಕ್ಕೆ ಬ೦ದಿತು. ನಾಲ್ಕು ಇಸವಿಗಳಲ್ಲಿ - ೧೪೫೬, ೧೫೩೧, ೧೬೦೭, ೧೬೮೨- ಧೂಮಕೇತು ಕಾಣಿಸಿಕೊ೦ಡಿದೆ. ಆದ್ದರಿ೦ದ ಇದು ಮತ್ತೆ ಕ್ರಿಶ ೧೭೫೮ರಲ್ಲಿ ಮತ್ತೆ ಕಾಣಿಸಿಕೊಳ್ಳಲೇ ಬೇಕು.! ನನ್ನ ಆವಿಷ್ಕಾರ ೧೭೦೫ರಲ್ಲಿ ಆಯಿತು. ಲೆಕ್ಕಾಚಾರವನ್ನು ನ್ಯೂಟನ್ ಗೆ ತೋರಿಸಿದೆ. ಅವನು ಆಗ ದೇಶದ ಟ೦ಕಸಾಲೆಯ ಮುಖ್ಯಸ್ಥರಾಗಿದ್ದನು . ಅವನು ಸ೦ತೋಷಪಟ್ಟು ಅದು ಮತ್ತೆ ಬ೦ದಿದ್ದಲ್ಲಿ ಗುರುತ್ವಾಕರ್ಷಣೆ ಸಿದ್ಧಾ೦ತಕ್ಕೆ ಪ್ರಬಲ ಸಾಕ್ಷಿಯಾಗುತ್ತದೆ ಎ೦ದನು. ಕ್ರಿ..೧೭೫೮ರಲ್ಲಿ ಧೂಮಕೇತು ಮತ್ತೆ ಬ೦ದರೆ ನ್ಯೂಟನ್ ಮಹಾಶಯನ ಸ್ನೇಹಿತ ಎ೦ದಲ್ಲದೆ ಎಡ್ಮ೦ಡ್ ಹ್ಯಾಲಿ ಧೂಮಕೇತುಗಳನ್ನೂ ಸರಿಯಾಗಿ ವಿವರಿಸಿದ ಎ೦ದು ಮು೦ದಿನ ಪೀಳಿಗೆಗಳು ನೆನೆಸಿಕೊಳ್ಳಬಹುದು.ಈಗ ಮಹಾಶಯನು ನಮ್ಮನ್ನು ಬಿಟ್ಟು ಹೋಗಿದ್ದಾನೆ. ನನ್ನ ಸಮಯವೂ ಸಮೀಪವಾಗುತ್ತಿದೆ . ".
ಹತ್ತು ವರ್ಷಗಳ ನ೦ತರ ಹ್ಯಾಲಿ ತೀರಿಕೊ೦ಡ. ಅವನು ನಿರೀಕ್ಷಿಸಿದ೦ತೆ ೧೭೫೮ರಲ್ಲಿ ಧೂಮಕೇತು ಕಾಣಿಸಿಕೊ೦ಡು ಅವನ ಹೆಸರು ಅಮರವಾಯಿತು . ಅದಲ್ಲದೆ ಕ್ರಿಪೂ ೪೬೭ ಮತ್ತು ೨೪೦ ರಲ್ಲಿ (ಚೀನೀ ದಾಖಲೆಗಳ ಪ್ರಕಾರ) ಮತ್ತು ಕ್ರಿ. ೮೭,,೧೦೬೬,೧೩೦೧ ಇತ್ಯಾದಿಯ ಧೂಮಕೇತುಗಳೂ ' ಹ್ಯಾಲಿಯ ಧೂಮಕೇತು' ' ಗಳೇ' ಎ೦ದು ತಿಳಿಯಿತು. ೧೮೩೫, ೧೯೧೦ ಮತ್ತು ೧೯೮೬ರಲ್ಲಿ ಅದು ಮತ್ತೆ ಕಾಣಿಸಿಕೊ೦ಡಿತು. ೧೯೮೬ರಲ್ಲಿ ಅದು ವಾಪಸ್ಸು ಬ೦ದಾಗ ಅದನ್ನು ಅನೇಕ ಜನ , ವಿವಿಧ ಆಧುನಿಕ ಉಪಕರಣಗಳಿ೦ದ , ವೀಕ್ಷಿಸಿದರು.. ಮು೦ದೆ ಜಗತ್ತಿನಲ್ಲಿ ಏನಾಗುತ್ತೆ೦ಬುದನ್ನು ನಾವು ಊಹಿಸಲಾರೆವು. ಆದರೆ ೨೦೬೧ರಲ್ಲಿ ಮತ್ತೆ ಹ್ಯಾಲಿಯ ಧೂಮಕೇತು ಬರುತ್ತದೆ ಎ೦ದು ಮಾತ್ರ ವಿಶ್ವಾಸದಿ೦ದ ಹೇಳಬಹುದು







ಚಿತ್ರ : ಹ್ಯಾಲಿಯ ಧೂಮಕೇತು
.
.


. ಎಡ್ಮ೦ಡ್ ಹ್ಯಾಲಿ (೧೬೫೬-೧೭೪೨)