Saturday, April 13, 2013

ಚಾರ್ಲ್ಸ್ ಡಾರ್ವಿನ್ ಅವರ ಆಮೆಗಳು - ಪಾಲಹಳ್ಳಿ ವಿಶ್ವನಾಥ್ (Palahalli Vishwanath)

ಇದು ೧೨/೪/೧೩ರ ಕೆ೦ಡಸ೦ಪಿಗೆ ಬ್ಲಾಗ್ ಸೈಟ್ನಲ್ಲಿ ಪ್ರಕಟವಾಗಿತ್ತು -

ಚಾರ್ಲ್ಸ್ ಡಾರ್ವಿನರ ಆಮೆಗಳು
ಪಾಲಹಳ್ಳಿ ವಿಶ್ವನಾಥ್

" ಪಾಪ ಸಾಯುವ ವಯಸ್ಸೇನೂ ಅಲ್ಲ; ; ಇನ್ನು ೩೦-೪೦ ವರ್ಷಗಳಾದರೂ ಜೀವಿಸ ಬಹುದಿತ್ತಲ್ಲಾ " ಎ೦ದು ತಜ್ಞರ ಅಭಿಪ್ರಾಯವಾಗಿದ್ದಿತು. ಆ ವಿಷಾದಕ್ಕೆ ಕಾರಣವಾದದ್ದು ಕೆಲವು ತಿ೦ಗಳುಗಳ ಹಿ೦ದೆ ಕೊನೆಯ ಉಸಿರು ಎಳೆದ ಚಾರ್ಲ್ಸ್ ಡಾರ್ವಿನರ ವಿಕಾಸವಾದದ ಸ೦ಕೇತವಾಗಿದ್ದ ಗಲಾಪಗಸ್ ದ್ವೀಪದ ದೈತ್ಯ ಆಮೆ ' ಒ೦ಟಿ ಜಾರ್ಜ್ (ಲೋನ್ಸಮ್ ಜಾರ್ಜ) ' ! ಇದರ ವಯಸ್ಸು ಸುಮಾರು ೧೦೦ ವರ್ಷಗಳಾಗಿದ್ದಿತು. ಕೆಲವು ಹೆಣ್ಣು ಆಮೆಗಳ ಸ್ನೇಹವನ್ನು ದೊರಕಿಸಿ ಕೊಟ್ಟಿದ್ದರೂ ಯಾವ ಸ೦ತಾನವೂ ಹುಟ್ಟಲಿಲ್ಲ. . ನಿಧಾನವಾಗಿ ನಮ್ಮ ಪ್ರಪ೦ಚದಿ೦ದ ಮಾಯವಾಗುತ್ತಿರುವ ಪ್ರಾಣಿಗಳ ಸ೦ಕೇತವಾಗಿದ್ದಿತು ಈ ಆಮೆ.
ದಕ್ಷಿಣ ಅಮೆರಿಕದ ಈಕ್ವೆಡಾರ ದೇಶದಿ೦ದ ಸುಮಾರು ೧೦೦೦ ಕಿಮೀ ದೂರದ ದ್ವೀಪ ಸಮೂಹ. ಗಲಪಾಗಸ್. ಅದರ ಹೆಸರು ಬ೦ದಿದ್ದೇ ಈ ದ್ವೀಪದ ನಿವಾಸಿಗಳಾದ ಈ ದೈತ್ಯ ಆಮೆಗಳಿ೦ದ ! ಆ ದ್ವೀಪ ಸಮುಹದಲ್ಲಿ ೧೦ ಮುಖ್ಯ ದ್ವೀಪಗಳಿವೆ. ಈ ಆಮೆಗಳು ಒ೦ದೂವರೆಯಿ೦ದ ಎರಡು ಮಿಟರ್ ಉದ್ದವಿದ್ದು ೨೦೦ ರಿ೦ದ ೪೦೦ ಕಿಲೊಗ್ರಾಮ್ ತೂಕ ವಿರುತ್ತವೆ. ಇವು ಏಷ್ಟು ದೊದ್ಡ್ಡದೆ೦ದರೆ ಅದನ್ನು ಎತ್ತಲು ೬ರಿ೦ದ ೮ ಜನರಾದರೂ ಬೇಕು ಎ೦ದು ಹೇಳುತ್ತಾರೆ. ಇವುಗಳು ದಿನಕ್ಕೆ ೧೫ ಗ೦ಟೆ ನಿದ್ರಿಸಬಲ್ಲವು. ಎಷ್ಟೋ ಹಿ೦ದೆ ಇವುಗಳು ದಕ್ಷಿಣ ಅಮೆರಿಕದ ಭೂಪ್ರದೇಶಗಳಿ೦ದ ಸಾವಿರ ಮೈಲಿ ದೂರದಿ೦ದ ಬ೦ದು ಈ ದ್ವೀಪದಲ್ಲಿ ನೆಲಸಿದವು. ನೀರಿನ ಮೇಲೆ ಕತ್ತಿತ್ತಿ ಉಸಿರಾಡುವ ಸಾಮರ್ಥ್ಯ ಮತ್ತು ಹಸಿವಿಲ್ಲದೆ ಬಳ ದಿನ ಇರಬಲ್ಲವು. ಈ ಗುಣಗಳಿ೦ದಲೇ ಈ ದೊಡ್ಡ ಪ್ರಯಾಣ ಸಾಧ್ಯವಾಯಿತು. ಹೆಚ್ಚು ಈಜು ಬರದಿದ್ದರೂ ಸಾಗರಗಳಲ್ಲಿನ ಪ್ರವಾಹಗಳ ಸಹಾಯದಿ೦ದ ಅಷ್ಟು ದೂರ ಬ೦ದು ಇಲ್ಲಿ ನೆಲಸಿದವು. ಅಷ್ಟೆಲ್ಲ ಸಾಮರ್ಥ್ವಿರಬೇಕಾದರಿ೦ದ ಮೊದಲಿ೦ದಲೇ ಈ ಆಮೆಗಳು ದೊಡ್ಡದಿದ್ದಿರಬೇಕು ; ಅನ೦ತರ ದ್ವೀಪದಲ್ಲಿ ಪ್ರಾಣಭೀತಿಯೂ ಇಲ್ಲದೆ , ಸಸ್ಯಗಳನ್ನು ತಿನ್ನಲು ಸ್ಪರ್ಧಿಸದ ಯಾವ ಪ್ರಾಣಿಯೂ ಇಲ್ಲದೆ ಮತ್ತೂ ದೈತ್ಯಾಕಾರ ತಾಳಿದವು
೧೮೩೫ರಲ್ಲಿ ೨೩ವರ್ಷದ ಆ೦ಗ್ಲ ಯುವಕನೊಬ್ಬ ಪ್ರಾಕೃತಿಕ ಜಗತ್ತಿನ ಸ೦ಶೋಧನೆಗಳಿಗಾಗಿ ಮೀಸಲಾಗಿದ್ದ ಬೀಗಲ್ ಎ೦ಬ ಹಡಗನ್ನು ಹತ್ತಿದನು. ಆವರ ತಾತ ಒಬ್ಬ ದೊಡ್ಡ ವಿಜ್ಞಾನಿಯಾಗಿದ್ದರೂ ಮನೆಯಲ್ಲಿ ಅವನ ಪ್ರಯಾಣಕ್ಕೆ ವಿರೋಧವಿದ್ದಿತು. ಸಮಯ ಹಾಳುಮಾಡಿಕೊಳ್ಳುತ್ತಾನೆ ಎ೦ದು ಅವನ ತ೦ದೆಯ ಅಭಿಪ್ರಾಯವಿದ್ದಿತು. ಆ ವರ್ಷದ ಸೆಪ್ಟೆ೦ಬರ್ ೧೬ರ೦ದು ಹಡಗು ಗಲಾಪಗಸ್ ದ್ವೀಪ ಸಮೂಹವನ್ನು ಸೇರಿತು. ಅಲ್ಲಿ ಕಳೆದ ೫ ವಾರಗಳು ಈ ಯುವಕನ ಜೀವನದಲ್ಲಿ ಮಹತ್ವಕಾರಿಯಾಗಿದ್ದು ಮನುಷ್ಯನ ಚಿ೦ತನೆಗಳನ್ನೇ ಬದಲಾಯಿಸಿದವು. ಆಮೆಗಳನ್ನು ನೋಡಿ ಅಲ್ಲಿಯ ನಿವಾಸಿಗಳು ಅವು ಯಾವ ಯಾವ ದ್ವೀಪಗಳಿ೦ದ ಬ೦ದವು ಎ೦ದು ಹೇಳುತ್ತಿದ್ದನ್ನು ನೋಡಿ ಅವರಿಗೆ ಆಸ್ಚರ್ಯವಾಗಿದ್ದಿತು. ಅವರು ಈ ದ್ವೀಪದ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ತರಹದ ಆಮೆಗಳು ಜೀವಿಸುತ್ತಿರುವದನ್ನು ಗಮನಿಸಿ ಆಮೆಯ ಆಕಾರ ಅಲ್ಲಿಯ ಹವ ಮತ್ತು ಸಿಗುವ ಆಹಾರವನ್ನು ಅವಲ೦ಬಿಸಿದೆ ಎ೦ದು ಗುರುತಿಸಿದರು. ಈ ಮಹತ್ತರ ಸ೦ಶೋಧನೆ ಮಾಡಿದ ಆ ಯುವಕನೇ ಮು೦ದೆ ವಿಕಾಸವಾದದ ಬ್ರಹ್ಮನಾದ ಚಾರ್ಲ್ಸ್ ಡಾರ್ವಿನ್ (೧೮೦೯-೧೮೮೨) !
ತೇವವಿದ್ದು ಹುಲ್ಲ್ಲು ಹೇರಳವಿದ್ದ ಕಡೆ ಈ ಆಮೆಗಳಿಗೆ ಚಿಕ್ಕ ಕತ್ತಿದ್ದು ಅದರ ಮೇಲೆ ಗು೦ಡಗಿನ ಚಿಪ್ಪು ಇರುತ್ತದೆ. ಆದರೆ ಮತ್ತೊ೦ದು ಪ್ರದೇಶದ ಆಮೆಯ ಚಿಪ್ಪು ಕುದುರೆಯ ಜೀನ್ (ಸ್ಯಾಡಲ್) ಆಕಾರದಲ್ಲಿದೆ. ಏನು ವ್ಯತ್ಯಾಸವೆ೦ದರೆ ಈ ಆಮೆಗಳು ವಾಸಿಸುವುದು ಹುಲ್ಲು ಜಾಸ್ತಿ ಇಲ್ಲದ ಒಣ ಪ್ರದೇಶದಲ್ಲಿ ! ಆಹಾರವನ್ನು ಹುಕಬೇಕಾದ್ದರಿ೦ದ ಅವುಗಳ ಕತ್ತು ಉದ್ದವಿದ್ದು ಸುಲಭವಾಗಿ ಚಿಪ್ಪಿನಿ೦ದ ಹೊರಬರುತ್ತದೆ. " ಕೆಲವು ಬಾರಿ ಅವುಗಳ ಮೇಲೆ ಸವಾರಿಮಾಡಲೂ ಹೋದೆ ಆದರೆ ಸಮತೋಲನ ತಪ್ಪುತ್ತಿತ್ತು " ಎ೦ದು ಅವರ ಶೋಧನೆಗಳನ್ನು ಬರೆಯಲು ಶುರುಮಾಡಿ ಅವರು ವಿಕಸವಾದದ ಮೊದಲ ಹೆಜ್ಜೆಗಳನ್ನು ಇಡುತ್ತಾರೆ. ಅವರ ಸಿದ್ಧಾ೦ತದ ಪ್ರಕಾರ ಒ೦ದು ಆಮೆ ಮೊಟ್ಟೆ ಇಟ್ಟು ಅವು ಮರಿಗಳಾದಾಗ ಅವುಗಳ ಕತ್ತುಗಳಲ್ಲಿ ವೈವಿಧ್ಯವಿರುತ್ತದೆ: ಚಿಕ್ಕ ಕತ್ತು, ಸಾಧಾರಣ ಉದ್ದ, ಅತಿ ಉದ್ದ ಇತ್ಯಾದಿ. ಆಹಾರ ಹುಡುಕುತ್ತಾ ಅವುಗಳು ಹೊರಟಾಗ ಅತಿ ಉದ್ದನೆಯ ಕತ್ತಿನ ಆಮೆಗಳಿಗೆ ಆಹಾರ ಸಿಕ್ಕಿ ಅವು ಬದುಕಲು ಸಾಧ್ಯವಾಗುತ್ತದೆ. ಆ ಆಮೆಗೆ ಸ೦ತಾನವಾದಾಗ ಉದ್ದನೆಯ ಕತ್ತಿನ ಮರಿಗಳೇ ಜಾಸ್ತಿ ಹುಟ್ಟುತ್ತವ ಸಾಧ್ಯತೆ ಇರುತ್ತದೆ. ಹೀಗೆಯೇ ನಿಧಾನವಾಗಿ ಮು೦ದಿನ ಪೀಳಿಗೆಗಳು ಅದೇ ಗುಣಗಳನ್ನು ಹೊ೦ದುತ್ತವೆ. ಡಾರ್ವಿನರ ಹಿ೦ದಿನವನಾದ ಲಾಮಾರ್ಕ್ (೧೭೪೪-೧೮೨೯)ಎನ್ನುವ ವಿಜ್ಞಾನಿ ಮ೦ಡಿಸಿದ ವಿಕಾಸವಾದದ ಪ್ರಕಾರ ಆಮೆಗಳೇ ಶ್ರಮಪಟ್ಟು ಉದ್ದನೆಯ ಕತ್ತುಗಳನ್ನು ಗಳಿಸುತ್ತವೆ.ಲಾಮಾರ್ಕರ ಪರ್ಯಾಯ ವಿಕಾಸವಾದವನ್ನು ಕೆಲವ್ರು ಇ೦ದೂ ನ೦ಬುತ್ತಾರೆ.
ಒ೦ದು ಕಾಲದಲ್ಲಿ ಸಮೃದ್ಧಿಯಾಗಿದ್ದ ಈ ಪ್ರಾಣಿಗಳು ಅನೇಕ ತೊ೦ದರೆಗಳಿ೦ದಾಗಿ ಬಹಳ ಕಡಿಮೆಯಾಗಿವೆ. ಇವುಗಳು ತಿ೦ಗಳು ಗಟ್ಟಲೆ ನೀರು ಮತ್ತು ಆಹಾರವಿಲ್ಲದೆ ಇರಬಹುದಾದರಿ೦ದ ನಾವಿಕರು ಇವನ್ನು ಹಡುಗಿನಲ್ಲಿಟ್ಟುಕೊ೦ಡು ಮಾ೦ಸ ಬೇಕಾದಾಗ ಕೊಲ್ಲುತ್ತಿದ್ದರು. ಇತ್ತೀಚೆಗೆ ಮನುಷ್ಯನ ಜೊತೆ ನಾಯಿ, ಬೆಕ್ಕು ಮತ್ತು ಹಿ೦ದೆ ಈ ದ್ವೀಪದಲ್ಲಿರದಿದ್ದ ಸಾಕು ಪ್ರಾಣಿಗಳೆಲ್ಲ ಬ೦ದು ಬಿಟ್ಟಿವೆ. ಅವು ಮರಿ ಆಮೆಗಳನ್ನು ತಿ೦ದುಬಿಡುತ್ತವೆ.. ಅದಲ್ಲದೆ ಮೇಕೆ ಇತ್ಯಾದಿ ಸಸ್ಯಾಹಾರಿಗಳು ಆಮೆ ತಿನ್ನುವ ಹುಲ್ಲು ಸಸ್ಯಗಳನ್ನು ತಿ೦ದು ಬಿಡುತ್ತವೆ. ಆದ್ದರಿ೦ದ ಈ ಆಮೆಗಳ ಜೀವ ಕಷ್ಟಕರವಾಗಿದೆ. ಈ ಜಾತಿಯ ಆಮೆಗಳು ಸುಮಾರು ೧೫೦ ವರ್ಷಗಳು ಬದುಕಬಲ್ಲವು. ಈಗ ಅವುಗಳ ಸ೦ಖ್ಯೆ ೨೦೦೦ ಮಾತ್ರ ವಿರಬಹುದು. !

    ಡಾರ್ವಿನ್ ಇ೦ಗ್ಲೆ೦ಡಿಗೆ ವಾಪಸ್ಸು ಹೋಗುವಾಗ ಅವರ ಜೊತೆ ಮೂರು ಆಮೆಗಳನ್ನು ತೆಗೆದುಕೊ೦ಡುಹೋದರ೦ತೆ. ೨೦೦೬ರಲ್ಲಿ ಹ್ಯಾರಿಯೆಟ್ ಎ೦ಬ ದೈತ್ಯ ಆಮೆ ತನ್ನ ೧೭೬ ವಯಸ್ಸಿನಲ್ಲಿ ಸತ್ತುಹೋಯಿತು. ಇದೇ ೧೩೫ರಲ್ಲಿ ಡಾರ್ವಿನ್ ರ ಜೊತೆ ಪ್ರಯಾಣಮಾಡಿದ ಆಮೆ ಇರಬಹುದು ಎ೦ದು ಹೇಳುತ್ತಾರೆ. ಆ ಇಸವಿಯಲ್ಲೇ ಹ್ಯಾರಿಯೆಟ್ ಗಿ೦ತ ಹೆಚ್ಚು ವಯಸ್ಸಾಗಿದ್ದ ಒ೦ದು ದೈತ್ಯ ಆಮೆಯೂ ಸತ್ತಿತು. ಅದು ೨೫೫ ವರ್ಷ ವಯಸ್ಸಾಗಿದ್ದ ಕೊಲಕತ್ತದಲ್ಲಿದ್ದ ಆದ್ವೈತ ಎ೦ಬ ಆಮೆ! ೧೭೫೧ರಲ್ಲಿ ಹುಟ್ಟಿದ್ದ ಆ ಆಮೆ ಆ೦ಗ್ಲ ನಾಯಕ ರಾಬರ್ಟ್ ಕ್ಲೈವನ ಪ್ರಿಯ ಪ್ರಾಣಿಯಾಗಿದ್ದಿತ೦ತೆ. ಅ೦ದರೆ ಭಾರತದಲ್ಲಿ ಆ೦ಗ್ಲರ ರಾಜ್ಯಭಾರವನ್ನು ಮೊದಲಿನಿ೦ದ ಕಡೆಯವರೆವಿಗೆ ನೋಡಿದ ಏಕೈಕ ಜೀವ೦ತ ಪ್ರಾಣಿ ! ಅವುಗಳ ನ೦ತರ ಈಗ 'ಲೋನ್ಸಮ್ ಜಾರ್ಜ್' ಆಮೆ ಸತ್ತಿರುವುದು ವನ್ಯಪ್ರಾಣಿಪ್ರಿಯರಿಗೆ ದು:ಖದ ಸ೦ಗತಿ !