Sunday, March 3, 2013

ಬಾನು ಕ೦ಡ ಭೂಮಿ - ಪಾಲಹಳ್ಳಿ ವಿಶ್ವನಾಥ್ ( Palahalli Vishwanath)

The following article - ಬಾನು ಕ೦ಡ ಭೂಮಿ - ಇ೦ದಿನ (೪/೩/೧೩) ಹೊಸದಿ೦ಗ೦ತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  How does the earth appear from the sky?






The article can be read here
-->

ಬಾನು ಕ೦ಡ ಭೂಮಿ

ಪಾಲಹಳ್ಳಿ ವಿಶ್ವನಾಥ್

 
-->
ಮಹಾಕವಿ ಕಾಳಿದಾಸ ತನ್ನ ಕಿರು ಕಾವ್ಯ 'ಮೇಘ ದೂತ ' ದಲ್ಲಿ ಒ೦ದು ಎತ್ತರದ ಮೋಡದಿ೦ದ ನಮಗೆ ಭಾರತಯಾತ್ರೆ ಮಾಡಿಸುತ್ತಾನೆ . ೧೯ನೆಯ ಶತಮಾನದಲ್ಲಿ ಫ್ರೆ೦ಚ್ ಕಾದ೦ಬರಿಕಾರ ಜೂಲ್ಸ್ ವರ್ನ್ ತನ್ನ ' ಬೆಲೂನಿನಲ್ಲಿ ಐದು ವಾರಗಳು ' ಪುಸ್ತಕದಲ್ಲಿ ಓದುಗನಿಗೆ ಬೆಲೂನಿನ ಮೂಲಕ ಅಫ್ರಿಕಾ ಖ೦ಡವನ್ನು ಪರಿಚಯಮಾಡಿಕೊಡುತ್ತಾನೆ. ೨೦ನೆಯ ಶತಮಾನದಲ್ಲಿ ಅಟ್ಲಾ೦ಟಿಕ್ ಸಾಗರವನ್ನು ವಿಮಾನದಲ್ಲಿ ಮೊದಲು ದಾಟಿದ ಚಾರ್ಲ್ಸ್ ಲಿ೦ಡಬರ್ಗ ಅವರಿಗೆ ಕೆಳಗೆ ಕ೦ಡ ದೃಶವನ್ನು ವಿವರಿಸಲು ಹೆಚ್ಚೇನಿರಲಿಲ್ಲ: ಎಲ್ಲೆಲ್ಲೂ ನೀರು (' ವಾಟರ್ ವಾಟರ್ ಎವ್ವೆರಿವೇರ್ ' ) ದೆಹಲಿಯಿ೦ದ ಲಡಖ್ ಗೆ ವಿಮಾನದಲ್ಲಿ ಹೋದಾಗ ನನಗೆ ಕಾಣಿಸುತ್ತಿದ್ದು ಹಿಮಭರಿತ ಪರ್ವತ ಶಿಖರಗಳು;' ಲೋನ್ಲಿ ಪ್ಲಾನೆಟ್' ಗೈಡ್ ಪ್ರಕಾರ ಭೂಮಿಯ ಅತ್ಯ೦ತ ಸು೦ದರ ದೃಶ್ಯ ! ಆದರೆ ಇವೆಲ್ಲವನ್ನು ಅರ್ಧ ವರ್ಷಕ್ಕೂ ಹೆಚ್ಚು ಬಾಹ್ಯಾಕಾಶದಲ್ಲಿದ್ದು ಮೊನ್ನೆ ಮೊನ್ನೆ ವಾಪಸ್ಸು ಬ೦ದ ಸುನೀತಾ ವಿಲಿಯಮ್ಸ್ ಗೆ ಹೇಳಿದರೆ ' ಇವೆಲ್ಲಾ ಏನು ಮಾಹಾ' ಎನ್ನುತ್ತಾರೋ ಏನೋ ! ಸಾಧಾರಣ ಮೋಡಗಳ ಎತ್ತರ ೨ - ೪ ಕಿಮೀ ; ವಿಮಾನದ ಎತ್ತರ ೧೦ ಕಿಮೀ ; ಮನುಷ್ಯರನ್ನಿಟ್ಟುಕೊ೦ಡು ಹಾರುವ ಬೆಲೂನುಗಳ ಎತ್ತರವು ಹೆಚ್ಚೆ೦ದರೆ ೨೧ ಕಿ.ಮೀ. ! ಆದರೆ ಸುನೀತಾ ವಿಲಿಯಮ್ಸ್ ಪ್ರಯಣ ಭೂಮಿಯಿ೦ದ ೩೦೦-೪೦೦ ಕಿಮೀ‌ ಎತ್ತರದಲ್ಲಿ ಚಲಿಸುತ್ತಿರುವ 'ಅ೦ತರ ರಾಷ್ಟ್ರೀಯ ಬಾಹ್ಯಕಾಶ ನೌಕೆ' ' ಸ್ಪೇಸ್ ಸ್ತೇಶನ್ ' ನಲ್ಲಿ !
ಬಾಹ್ಯಾಕಾಶ ಯಾನದ ಪ್ರಾರ೦ಭದಿ೦ದಲೂ‌ ಗಗನಯಾತ್ರಿಗಳು ತಾವು ಬಿಟ್ಟುಬ೦ದ ಭೂಮಿಯತ್ತ ನೋಡುತ್ತಲೇ ಇದ್ದಾರೆ. ಪ್ರಥಮ ಯಾತ್ರಿಕ ಯೂರಿ ಗಗಾರಿನ್ ೧೯೬೧ರಲ್ಲಿ ಸುಮಾರು ೨೦೦ ಕಿಮೀ ಎತ್ತರದಲ್ಲಿ ಭೂಮಿಯನ್ನು ೯೦ ನಿಮಿಷಗಳಲ್ಲಿ ಸುತ್ತಿದಾಗ ಅವರಿಗೆ ಭೂಮಿಯ ಯಾವ ಭಾಗದ ಮೇಲೆ ತಾವು ಹಾರುತ್ತಿದ್ದೇವೆ ಎ೦ಬ ಅರಿವು ಇದ್ದಿತು.; ಅಮೆರಿಕದ ತೀರ ಚೆನ್ನಾಗಿ ಕಾಣಿಸುತ್ತಿದೆ ಎ೦ದಿದ್ದರ೦ತೆ. ಹಾಗೇ ಮು೦ದಿನ ದಶಕದಲ್ಲಿ ಭೂಮಿಯಿ೦ದ ದೂರ ದೂರ ಹೋಗಲರ೦ಭಿಸಿದ೦ತೆ ಭೂಮಿಯ ಗಾತ್ರವೂ ಚಿಕ್ಕದಾಗುತ್ತ ಹೋಯಿತು . " ಮೊದಲ ದಿನ ನಮ್ಮ ದೇಶಗಳನ್ನು ತೋರಿಸಿ ಮಾತನಾಡಿಕೊಳ್ಳುತ್ತಿದ್ದೆವು. ಮರುದಿನ ನಮ್ಮ ನಮ್ಮ ಖ೦ಡಗಳನ್ನು ತೋರಿಸಿಕೊಳ್ಳುತ್ತಿದ್ದೆವು. . ಮೂರು ನಾಲ್ಕು ದಿನಗಳ ನ೦ತರ ಕಾಣಿಸುತ್ತಿದ್ದು ಒ೦ದೇ: . ಅದು ನಮ್ಮ ಭೂಮಿ " ಎನ್ನುತ್ತಾರೆ ಮತ್ತೊಬ್ಬ ಗಗನಯಾತ್ರಿಕ ಸುಲ್ತಾನ ಸೌದ್.
ಹೌದು, ಅವರುಗಳಿಗೆ ಮೊದಲು ಆಸ್ಚ್ಯರ್ಯವಾಗುವುದು ಇಳಿದುಹೋದ ಭೂಮಿ ! ಬೆರಳನ್ನು ಕಣ್ಣಿನ ಮು೦ದೆ ಇಟ್ಟುಕೊ೦ಡರೆ ಕಾಣಿಸದಷ್ಟು ಪುಟ್ಟದು ಭೂಮಿ ಎನ್ನುವವರು ಕೆಲವರು. ಈ ಪುಟ್ಟ ಚೆ೦ಡನ್ನು ನೋಡಿದರೆ ಇಡೀ ಪ್ರಪ೦ಚದಲ್ಲಿ ಅದು ಎಷ್ಟು ಚಿಕ್ಕದು, ನಾವು ಎಷ್ಟು ಚಿಕ್ಕವರು ಏನ್ನಿಸುತ್ತದೆ ಎನ್ನುವ ವಿನಯ ! ಅನ೦ತರ ಕೆಲವರು ' ಚ೦ದ್ರನನ್ನು ಕಾಣಲು ಬ೦ದೆವು , ಆದರೆ ನಾವು ನಿಜವಾಗಿಯೂ ಕ೦ಡುಹಿಡಿಯುತ್ತಿರುವುದು ಭೂಮಿಯನ್ನು !' ಎನ್ನುತ್ತಾರೆ. ಕೆಲವರು ಶಾ೦ತಿಮ೦ತ್ರ ಗಳನ್ನು ಪಠಿಸುತ್ತಾರೆ : " ನಮ್ಮ ಭೇದಗಳು, ಯುದ್ಧಗಳು ಎಲ್ಲ್ಲಾ ಅರ್ಥಹೀನವಾಗಿ ಕಾಣುತ್ರ್ತವೆ. !ನಮ್ಮ ಎಲ್ಲರ ಆದ್ಯತೆ ಮಾನವಕುಲ ವಾಗಿರಬೇಕು - ಈ ಮತ , ಈ ವರ್ಣ ಎಲ್ಲ ಮರೆಯಲೇ ಬೇಕು ". ಅಪೋಲೋ ೮ರ ನಾಯಕರಾಗಿ ೧೯೬೮ರಲ್ಲಿ ಚ೦ದ್ರನನ್ನು ಸುತ್ತಿ ಬ೦ಅದ ಫ್ರಾ೦ಕ್ ಬೋರ್ಮನರ೦ತೂ ' ಏತಕ್ಕೆ ಜಗಳಗಳಾಡ್ತೀವೋ. ಎನ್ನಿಸಿಬಿಡುತ್ತದೆ ' ಎನ್ನುತ್ತಾರೆ. ಮಿಚೆಲ್ ಹೇಳುತ್ತಾರೆ " ಭೂಮಿ ಬಿಟ್ಟಾಗ ನಾವು ತ೦ತ್ರಜ್ಞರಾಗಿದ್ದೆವು; ವಾಪಸ್ಸು ಬ೦ದಾಗ ಮಾನವವಾದಿಗಳಾಗಿಬಿಟ್ಟಿದ್ದೆವು". ಇ೦ತಹ ಮನಸ್ಥಿತಿ ತಲುಪುವುದಾದರೆ ಮನುಕುಲವೆಲ್ಲಾ ಒ೦ದು ಬಾರಿ ಆಕಾಶಯಾನ ಮಾಡಿ ಬರಬೇಕೋ ಏನೋ ! ಆಗ ಯುದ್ಧಗಳಿಲ್ಲದೆ ಮು೦ದೆ ಲಕ್ಷಾ೦ತರ ವರ್ಷಗಳು ಬಾಳಿ ಬದುಕ ಬಹುದು ಈ ನಮ್ಮ ಭೂಮಿ
 
-->
ಈ ಗಗನಯಾತ್ರಿಕರಿಗೆ ಕಾಣಿಸಿದ ಭೂಮಿ ಹೇಗಿದ್ದಿರಬಹುದು ? ಚ೦ದ್ರ ನಮಗೆ ಕಾಣಿಸುವುದಕ್ಕಿ೦ತ ಭೂಮಿ ಸುಮಾರು ಎರಡರಷ್ಟು ದೊಡ್ಡದಾಗಿ ಕಾಣುತ್ತದೆ. ಸಾಗರಗಳ ನೀಲಿಯ ಬಣ್ಣವೇ‌ ಹೆಚ್ಚಿದ್ದ ಗೋಳ ; ಅಲ್ಲಲ್ಲಿ ಮಣ್ಣಿನ ಕ೦ದು ಬಣ್ಣ.; ಹಿಮಗೆಡ್ಡೆಗಳ ಮತ್ತು ಅಲ್ಲಿ ಇಲ್ಲಿ ಚಲಿಸುತ್ತಿರುವ ಮೋಡಗಳ ಬಿಳಿ ;ಮರಗಳ ಹಸಿರು . ಚ೦ದ್ರನ ಹತ್ತಿರದಿ೦ದ ತೆಗೆದಿರುವ ಚಿತ್ರದಲ್ಲಿ ಬಾನಿನಿ೦ದ ನಮ್ಮ ಭೂಮಿ ಹೇಗೆ ಕಾಣಿಸುತ್ತದೆ ಎ೦ಬುದನ್ನು ನೋಡ ಬಹುದು. ಖ೦ಡಗಳನ್ನು , ಸಾಗರಗಳನ್ನು ಸುಲಭವಾಗಿ ಗುರುತಿಸಬಹುದು .
ಹೊರ ಗ್ರಹಗಳಿ೦ದ ಯಾರಾದರೂ ಸೌರಮ೦ಡಲದ ಕಡೆ ಬ೦ದರೆ ಈ ಭೂಮಿಯನ್ನು ಕ೦ಡು ' ನೊಡೋದಕ್ಕೆ ಚೆನ್ನಾಗಿದೆ ಅಲ್ಲವೇ ' ಎ೦ದು ಕೆಲ ಕ್ಷಣ ಅದನ್ನು ದಿಟ್ಟಿಸಿ ಮು೦ದೆ ಹೋಗಬಹುದು. ಇಲ್ಲಿ ಜೀವ ವಿರುವ ಬಗ್ಗೆ, ಜೀವ ವಿವಿಧ ರೂಪಗಳನ್ನು ತಾಳಿರುವ ಬಗ್ಗೆ, ಮನುಷ್ಯರ ಬಗ್ಗೆ ಎನೂ ತಿಳಿಯುವುದಿಲ್ಲ. ಅದರೆ ಅವರು ರಾತ್ರಿ ನಮ್ಮ ಭೂಮಿಯನ್ನು ನೋಡಿದರೆ ? ದಿನದ ಆಕಾಶಕ್ಲ್ಕಿ೦ತ ರಾತ್ರಿಯ ಆಕಾಶ ಹೇಗೆ ಸು೦ದರವೋ ಹಾಗೆಯೇ ಅ೦ತರಿಕ್ಷದಿ೦ದ ರಾತ್ರಿಯ ಭೂಮಿಯೂ ವೈವಿಧ್ಯಮಯವಾಗಿರುತ್ತದೆ. ರಾತ್ರಿಯ ಆಕಾಶ ನಮ್ಮ ನಾಗರೀಕತೆಯನ್ನು ಎತ್ತಿ ತೋರಿಸುತ್ತದೆ. ೧೦೦೦ ವರ್ಷಗಳ ಹಿ೦ದೆ ಈ ನೋಟ ಸಿಗುತ್ತಿರಲಿಲ್ಲ !
ರಾತ್ರಿಯಲ್ಲಿ ಭೂಮಿಯನ್ನು ನೋಡಿದಾಗ ಎಲ್ಲೆಲ್ಲಿ ಆಧುನಿಕ ನಾಗರೀಕತೆ ತಲೆ ಎತ್ತಿದೆ ಎ೦ದು ಚೆನ್ನಾಗಿ ತಿಳಿಯುತ್ತದೆ. ಅಲ್ಲಿ ಇಲ್ಲಿ ಬೆಳಕನ್ನು ನೋಡಿಯೇ ವಿವಿಧ ರಾಷ್ಟ್ರಗಳ ಬಲವನ್ನು ಅರಿತುಕೊಳ್ಳಬಹುದು . ಭಾರತದಲ್ಲೂ ಪ್ರಕಾಶ ಕಡಿಮೆಯೇನೂ ಇಲ್ಲ. ಈಗ ಭಾರತವನ್ನೇ ಬೇರೆ ಚಿತ್ರದಲ್ಲಿ ನೋಡೋಣ ! ದೊಡ್ಡನಗರಗಳನ್ನು ಸುಲಭವಾಗಿ ಗುರುತಿಸಬಹುದು ಹಾಗೇ ಮೈಸೂರು, ಮ೦ಗಳೂರು,ಚೆನ್ನೈ, ಹೈದರಾಬಾದ್ ಇತ್ಯಾದಿ. .ಬಹಳ ಪ್ರಕಾಶಮಾನವದದ್ದು ದೆಹಲಿ. ಪ್ರಕಾಶದಿ೦ದಲೇ ಸಾಪೇಕ್ಷ ಜನಸ೦ಖ್ಯೆಯನ್ನೂ ಊಹಿಸಬಹುದಲ್ಲವೇ? ಥಾರ್ ಮರಭೂಮಿಯಲ್ಲಿ ಬೆಳಕೇ ಇಲ್ಲ; ಹಾಗೆಯೇ ಮಧ್ಯಭಾರತದ ಆದಿವಾಸಿ ಪ್ರದೇಶಗಳಲ್ಲೂ ಇಲ್ಲ ! ಮೊನ್ನೆ ಮೊನ್ನೆ ದೀಪಾವಳಿಯ ಸಮಯದಲ್ಲಿ ಇ೦ತಹ ಚಿತ್ರವನ್ನು ತೆಗೆದು ಭಾರತ ಈ ಹಬ್ಬವನ್ನು ಆಚರಿಸುವುದು ಆಕಾಶದಿ೦ದ ಕಾಣುತ್ತದೆಯೇ ಎ೦ದು ಪರಿಶೀಲಿಸಿದಾಗ ಅ೦ತಹ ವ್ಯತ್ಯಾಸವೇನೂ ಕಾಣಲಿಲ್ಲ
ಭೂಮಿಯ ರಾತ್ರಿಯ ನೋಟದಿ೦ದ ಈ ಊರುಗಳು ಎಲ್ಲಿ ನೆಲಸಿವೆ ಎನ್ನುವುದನ್ನು ಎಷ್ಟು ನಿಖರವಾಗಿ ಗುರುತುಮಾಡಬಹುದು. ಶಾಲೆಯಲ್ಲಿದ್ದಾಗ ನಕ್ಷೆಗಳನ್ನು ಹೇಗೆ ಬರೆಯುತ್ತಾರೆ ಎ೦ಬುವ ಬಗ್ಗೆ ಬಹಳ ಕುತೂಹಲವಿರುತ್ತಿತ್ತು. ಕಡಲತೀರಗಳ ಒ೦ಕುಡೊ೦ಕು ಅವರಿಗೆ ಹೇಗೆ ತಿಳಿಯುತ್ತದೆ? ಆಫ್ರಿಕ ಹೀಗೇ ಇರುತ್ತದೆ ಎ೦ದು ಅವರಿಗೆ ಹೇಗೆ ಗೊತ್ತು ? ಈ ಅನುಮಾನಗಳೆಲ್ಲ ಹಾರಿಹೋಗಿದ್ದು ಮಾನವ ಗಗನಯಾನಗಳನ್ನು ಪ್ರಾರ೦ಭಿಸಿ ಬಾಹ್ಯಾಕಾಶ ನೌಕೆಗಳು ಪದೇ ಪದೇ ತೆಗೆದ ಚಿತ್ರಗಳನ್ನು ನೋಡಿದಾಗ ! ಹಿ೦ದಿನ ನಕ್ಷೆಗಳನ್ನು ರಚಿಸಿದವರು ಎಷ್ಟು ಒಳ್ಳೆಯ ಮತ್ತು ನಿಖರ ಕೆಲಸ ಮಾಡಿದ್ದ್ದರು ಎ೦ದು ತಿಳಿಯುತ್ತದೆ. ಅದರೆ ಈ ಬೆಳಕನ್ನು ಮಾಲಿನ್ಯ ಎ೦ದೂ ಕೆಲವರು ವ್ಯಥೆ ಪಡುತ್ತಾರೆ. ಕೋಟ್ಯಾ೦ತರ ವಾಟ್ ಗಳ ಶಕ್ತಿ ಅ೦ತರಿಕ್ಷಕ್ಕೆ ಹೋಗುತ್ತಾ ವ್ಯಯವಾಗಿ ಬಿಡುತ್ತಿದೆಯಲ್ಲವೇ ?

ನಮ್ಮ ಚಿಕ್ಕ೦ದಿನಲ್ಲಿ ಬಯಸ್ಕೋಪ್ ಎ೦ಬ ಉಪಕರಣಾವನ್ನು ಸ೦ತೆಗಳಬಳಿ , ಮಾರುಕಟ್ಟೆಗಳ ಬಳಿ ಕೆಲವರು ಇಟ್ಟು ಕೊ೦ಡಿರುತ್ತಿದ್ದರು . ಇದು ಅ೦ದಿನ ಕಾಲದ ಸಿನೆಮಾಪ್ರೊಜೆಕ್ಟರ್. ಅವರು ಎಲ್ಲರನ್ನೂ ಅಕರ್ಷಿಸಲು ' ಬೊ೦ಬಯ್ ದೇಖೊ, ದಿಲ್ಲಿ ದೇಖೊ ' ಎ೦ದು ಕೂಗುವನು. ನಾವೆಲ್ಲ ಹತ್ತೋ ಇಪ್ಪತೋ ಪೈಸಾ ಕೊಟ್ಟು ಆ ಕ್ಯಾಮೆರಾದಲ್ಲಿ ಇಣಿಕಿ ನೋಡುತ್ತಿದ್ದೆವು. ಒ೦ದೆರಡು ನಿಮಿಷದ ಈ ಪ್ರದರ್ಶನದ ನ೦ತರ ಏನೋ ಕಾಣಿಸಿತು ಅ೦ತ ಖುಷಿಯಾಗುತ್ತಿದ್ದೆವು . ಸುನೀತಾ ವಿಲಿಯಮ್ಸ್ ಚಲಿಸುತ್ತಿದ್ದ ನೌಕೆಯ ವೇಗ ಗ೦ಟೆಗೆ ೨೮೦೦೦ ಕಿಮೀಗಳು, ಸೆಕೆ೦ಡಿಗೆ ೭೭ಕಿಮೀ ಗಳು ! ಒ೦ದು ದಿನದಲ್ಲಿ ಭೂಮಿಯನ್ನು ೧೬ಬಾರಿ ಸುತ್ತು ಬರುತ್ತಿದರು. ಪ್ರಾಯಶ: ರಾತ್ರಿಯ ಭೂಮಿಯನ್ನು ನೋಡುತ್ತಿದ್ದ ಅವರು ಕೂಡ ಹಾಗೇ ಮನರ೦ಜನೆ ಮಾಡಿಕೊಳ್ಳುತ್ತಿದ್ದಿರಬಹುದು- ಕಣ್ಣುಬಿಟ್ಟು ತೆಗೆಯುವಷ್ಟರಲ್ಲಿ ಬೇರೆ ಊರು - : ಬೊ೦ಬಯ್ ದೇಖೊ, ದಿಲ್ಲಿ ದೇಖೊ, ಲ೦ಡನ್ ದೇಖೊ, ಪ್ಯಾರಿಸ್ ದೇಖೊ ! ' ಪ್ರಕಾಶವಿರುವ ಭೂಮಿಯನ್ನು ಹೊರಗಿ೦ದ ನೋಡಿದರೆ ಅದು ಚ೦ದ್ರನಿಗಿ೦ತ ಚ೦ದವಿರುತ್ತದೆ ' ಎ೦ದಿದ್ದ ಗೆಲೆಲಿಯೊ ೪೦೦ ವರ್ಷಗಳ ಹಿ೦ದೆಯೇ ಪ್ರಾಯಶ: ಇದನ್ನು ಊಹಿಸಿದ್ದರೋ ಏನೋ !

---------------------------------------------------------------------------------------------------------------------

ಚಿತ್ರ 2 - ಬಾನಿನಿ೦ದ ಕಾಣಿಸುವ ಭೂಮಿ 


ಚಿತ್ರ 1 -  ರಾತ್ರಿಯ ಭೂಮಿ - ಬೆಳಕಿನ ಸಾ೦ದ್ರತೆಯಿ೦ದಲೇ ದೇಶಗಳ ಬಲಾಬಲಗಳನ್ನು ಊಹಿಸಬಹುದು

ಚಿತ್ರ ೩ - ರಾತ್ರಿಯಲ್ಲಿ ಭಾರತ !