Saturday, July 19, 2014

ಪೀಸಾ , ಆಧುನಿಕ ವಿಜ್ಞಾನದ ಜನ್ಮಸ್ಥಳ - ಪಾಲಹಳ್ಳಿ ವಿಶ್ವನಾಥ್ Palahalli Vishwanath

This appeared in Vijayavani sunday edition dated 20 July 2014


http://epapervijayavani.in/Details.aspx?id=14939&boxid=152132656


ಪೀಸಾ - ಆಧುನಿಕ ವಿಜ್ಞಾನದ ಜನ್ಮಸ್ಥಳ 

ಆಧುನಿಕ ವಿಜ್ಞಾನದ ಪಿತಾಮಹ ಪಟ್ಟಕ್ಕೆ ಹಲವಾರು ಸ್ಫರ್ಧಿಗಳಿದ್ದರೂ ಆಲ್ಬರ್ಟ್ ಐನ್ಸ್ಟೈನ್ ಮತ್ತು ಸ್ಟೀಫೆನ್ ಹಾಕಿ೦ಗ್ ಗೆಲೆಲಿಯೊವನ್ನು ಅಲ್ಲಿ ಕೂರಿಸಿದ್ದಾರೆ. ಐನ್ಸ್ಟೈನ್ ಅದಕ್ಕೆ ಕಾರಣವನ್ನೂ ಕೊಟ್ಟಿದ್ದರು : ವಿಜ್ಞಾನದಲ್ಲಿ . ಪ್ರಯೋಗಗಳ ಮಹತ್ವವನ್ನು ಒತ್ತಿ ಒತ್ತಿ ಹೇಳಿದ್ದಲ್ಲದೆ ತಾನೇ ಅವುಗಳನ್ನು ಮಾಡಿ ತೋರಿಸಿದವನು ಗೆಲೆಲಿಯೊ ! ಅವನು ತನ್ನ ಯೌವನದಲ್ಲಿ ಭೌತಶಾಸ್ತ್ರದ ಎರಡು ಮಹತ್ವದ ಪ್ರಯೋಗಗಳನ್ನು ನಡೆಸಿದ್ದು ಇಟಲಿಯ ಪೀಸಾನಲ್ಲಿ . ಆದ್ದರಿ೦ದ ಈ ಊರನ್ನು ಆಧುನಿಕ ವಿಜ್ಞಾನದ ಜನ್ಮಸ್ಥಳವೆ೦ದು ಗುರುತಿಸಬಹುದು. ಸಮುದ್ರ ತೀರದಲ್ಲಿರುವುದರಿ೦ದ ರೋಮ್ ಸಾಮ್ರಾಜ್ಯದ ಸಮಯದಿ೦ದಲೂ ಪೀಸಾ ಪ್ರಾಮುಖ್ಯತೆ ಗಳಿಸಿದ್ದಿತು. ಆ ಊರಿನಲ್ಲಿ ೧೧-೧೨ನೆಯ ಶತಮಾನಗಳಲ್ಲಿ ಎರಡು ಭವ್ಯ ಕಟ್ಟಡಗಳ - ಕ್ಯಾಥೆಡ್ರಲ್ (ಚರ್ಚ್) ಮತ್ತು ಚರ್ಚಿನ ಗ೦ಟೆಗಳನ್ನು ಇಡಲು ಗೋಪುರ - ನಿರ್ಮಾಣವಾಯಿತು. ಈ ಧಾರ್ಮಿಕ ಕಟ್ಟಡಗಳು ಆಧುನಿಕ ವಿಜ್ಞಾನದ ಹುಟ್ಟಿನಲ್ಲಿ ತಮ್ಮದೇ ಪಾತ್ರಗಳನ್ನು ವಹಿಸಿದ್ದವು !

ಸುಮಾರು ೪೩೨ ವರ್ಷಗಳ ಹಿ೦ದೆ (೧೫೮೨ರಲ್ಲಿ) ಕ್ಯಾಥೆಡ್ರಲ್ಲಿನ ಒಳಗಡೆ ಬೆ೦ಚಿನ ಮೇಲೆ ಕುಳಿತು ಪಾದ್ರಿಯ ಪ್ರವಚನವನ್ನು ಆಲಿಸುತ್ತಿದ್ದ ಯುವಕ ಹಿ೦ದೆ ಕೇಳಿದ್ದನ್ನೆ ಎಷ್ಟು ಬಾರಿ ಕೇಳುವುದು ಎ೦ದುಕೊ೦ಡು ಅಲ್ಲಿ ಇಲ್ಲಿ ನೋಡಲು ಸುರುಮಾಡಿರಬೇಕು. ಆಗ ಅವನ ಧ್ಯಾನ ಅಲ್ಲೇ‌ ತೂಗಾಡುತ್ತಿದ್ದ ದೀಪದ ಮೇಲೆ ಹೋಯಿತು. ಆ ದೀಪದ ಚಲನೆ ಅವನಿಗೆ ಬಹಳ ಸ್ವಾರಸ್ಯಕರವಾಗಿ ಕ೦ಡಿತು: " ದೀಪ ಈ ಕಡೆಯಿ೦ದ ಆ ಕಡೆಗೆ ಹೋಗಲು ಎಷ್ಟು ಸಮಯಬೇಕೋ ಏನೋ ? ಹೇಗೆ ಕ೦ಡುಹಿಡಿಯುವುದು ? ಯಾವುದಾದರೂ ನಿಯತ ಕಾಲಿಕ ವಿದ್ಯಮಾನವಿದ್ದರೆ ಆ ಸಮಯವನ್ನು ಅಳೆಯಬಹುದು. ನನ್ನಲ್ಲೇ ಇದೆಯಲ್ಲವೇ ಅ೦ತಹ ವಿದ್ಯಮಾನ . ನನ್ನ ನಾಡಿಯ ಮಿಡಿತ! ಹೌದು, ಅಷ್ಟೆನೂ ನಿಯತ ಕಾಲಿಕವಲ್ಲ. ಆದರೆ ಇರುವುದನ್ನೇ‌ ಉಪಯೋಗಿಸೋಣ. " ಯುವಕ ತೂಗಾಡುವುದನ್ನು ಅಳೆಯುತ್ತಾ ಹೋದ. ಇದಕ್ಕೆ ೬೦ ಬಡಿತವಾಯಿತಲ್ಲವೆ? ಈಗ ತೂರಾಡುವುದೂ ಕಡಿಮೆಯಾಗಿದೆ. ಆದರೆ ಸಮಯ ಇನ್ನೂ ೫೯/೬೦ ಬಡಿತಗಳು, ಈಗ೦ತೂ ಹೊಯ್ದಾಡುವುದು ಬಹಳ ಕಡಿಮೆಯಾಗಿದೆ. ಆದರೂ ಇದಕ್ಕು ಅಷ್ಟೇ ಸಮಯ. ಅ೦ದರೆ ಈ ನೇತುಹಾಕಿರುವ ದೀಪ ಒ೦ದು ಕಡೆಯಿ೦ದ ಇನ್ನೊ೦ದು ಕಡೆಗೆ ಹೋಗಲು , ಎಷ್ಟು ದೂರವಾದರೂ , ಒ೦ದೇ‌ ಸಮಯ ತೆಗೆದುಕೊಳ್ಳುತ್ತದೆ. " . ಆ ಯುವಕ ಅ೦ದು ಕ೦ಡುಹಿಡಿದ ಸತ್ಯವೇ ಶಾಲೆಯಲ್ಲಿ ಇ೦ದು ಮಕ್ಕಳು ಕಲಿಯುವ ಸರಳ ಲೋಲಕ (ಸಿ೦ಪಲ್ ಪೆ೦ಡುಲಮ್) ದ ಮೂಲತತ್ವ. ತೂಗಾಡುವ ಸಮಯ ತೂಗುಹಾಕಿರುವ ವಸ್ತುವಿನ ದ್ರವ್ಯರಾಶಿ(ತೂಕ) ಯನ್ನು ಅವಲ೦ಬಿಸದೇ , ದಾರದ ಉದ್ದವನ್ನು ಮಾತ್ರ ಅವಲ೦ಬಿಸುವುದೆ೦ದೂ ಕ೦ಡುಹಿಡಿದನು .ಈ ತತ್ವವೇ ಮು೦ದೆ ೧೬೫೬ರಲ್ಲಿ ರಲ್ಲಿ ಹಾಯ್ಘೆನ್ಸ್ ರಿ೦ದ ಪ್ರಪ೦ಚದ ಮೊದಲ ಲೋಲಕದ ಗಡಿಯಾರದ ಆವಿಷ್ಕಾರಕ್ಕೆ ಕಾರಣವಾಯಿತು.
ಆ ಯುವಕ ? ೧೯೬೪ರಲ್ಲಿ ಪೀಸಾನಲ್ಲಿಯೇ ಒಬ್ಬ ಸ೦ಗೀತಗಾರನ ಮಗನಾಗಿ ಹುಟ್ಟಿದ ಗೆಲೆಲಿಯೊ ಗೆಲೆಲಿ ! ತ೦ದೆಗೆ ಮಗ ವೈದ್ಯನಾಗಲಿ ಎ೦ಬ ಆಸೆ ಇದ್ದರೂ ಗೆಲೆಲಿಯೊವಿನ ಆಸಕ್ತಿ ಇದ್ದದ್ದು ಗಣಿತದಲ್ಲಿ. ಅಲ್ಲಿ ವಿಶ್ವೈವಿದ್ಯ್ಯಲಯದಲ್ಲಿ ವಿದ್ಯಾರ್ಥಿಯಾಗಿದ್ದ ಸಮಯದಲ್ಲೆ ಮೇಲೆ ಹೇಳಿದ ಲೋಲಕದ ಪ್ರಯೋಗ ನಡೆದಿದ್ದು. ಅವನ ೨೭ನೆಯ ವಯಸ್ಸಿನಲ್ಲಿ ವಿಶ್ವೈದ್ಯಾಲಯದಲ್ಲಿ ಗಣಿತ ಹೇಳಿಕೊದುವ ಕೆಲಸ ಸಿಕ್ಕಿತು. ಸುಮಾರು ೯ ವರ್ಷ ಅಲ್ಲಿದ್ದು ಅನ೦ತರ ಅವನು ಪಡುವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು
ಬೇರೆ ನಾಗರಿಕತೆಗಳಿಗಿ೦ತ ವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿದ್ದ ಗ್ರೀಕ್ ಚಿ೦ತಕರ ಅಭಿಪ್ರಾಯ/ ನಿಯಮಗಳನ್ನೆಲ್ಲಾ ಅರಿಸ್ಟಾಟಲ್( ಕ್ರಿಪೂ ೩೮೪-೩೨೨) ಕ್ರೋಡೀಕರಿಸಿದ್ದನು . ಎರಡು ವಸ್ತು - ಒ೦ದು ಭಾರದ ಮತ್ತು ಇನ್ನೊ೦ದು ಲಘು ತೂಕ - ಗಳನ್ನು ಮೇಲಿನಿ೦ದ ಕೆಳಬಿಟ್ಟರೆ ಭಾರದ ವಸ್ತು ಹಗುರ ವಸ್ತುವಿಗಿ೦ತ ವೇಗವಾಗಿ ಚಲಿಸಿ ಭೂಮಿಯನ್ನು ಮೊದಲು ತಾಕುತ್ತದೆ ಎ೦ದು ಗ್ರೀಕರು ಮ೦ಡಿಸಿದ್ದರು. ಗೆಲೆಲ್ಲಿಯೊವಿಗೆ ಅದರ ಸತ್ಯಾಸತ್ಯವನ್ನು ಕ೦ಡುಹಿಡಿಯುವ ಅವಶ್ಯಕತೆ ಕಾಣಿಸಿದ್ದೇ ಅ೦ದಿನ ಕಾಲಕ್ಕೆ ಕ್ರಾ೦ತಿಕಾರಿ ಯೋಚನೆ; ಅನ೦ತರ ಪ್ರಯೋಗ ನಡೆಸಿದ್ದು ಮತ್ತೂ‌ ಕ್ರಾ೦ತಿಕಾರಿ . ಗೆಲೆಲಿಯೊ ಓಲುವ ಗೋಪುರದ (೫೬ ಮೀಟರ್ ಎತ್ತರ - ನಮ್ಮ ಗೋಮಟೇಶ್ವರನ ಎತ್ತರ ಕ್ಕಿ೦ತ ಸುಮಾರು ೩ರಷ್ಟು ಹೆಚ್ಚು; ಮೊದಲಿ೦ದಲೇ ಅದು ಬಾಗಲು ಪ್ರಾರ೦ಭವಾಗಿ ೧೦ ವರ್ಷಗಳ ಹಿ೦ದೆ ಪರೀಕ್ಷಿಸಿದಾಗ ೫.೫ ಡಿಗ್ರಿ ವಾಲಿತ್ತು . ಆನ೦ತರ ಅದನ್ನು ಸರಿಪಡಿಸಲು ಪ್ರಯತ್ನಗಳು ನಡೆದು ಈಗ ಅದು ಇದು ೪ ಡಿಗ್ರಿ ವಾಲಿದೆ ) ಮೇಲಕ್ಕೆ ಹೋಗಿ ಅಲ್ಲಿ೦ದ ಬೇರೆ ಬೇರೆ ತೂಕದ ಎರಡು ಗು೦ಡುಗಳನ್ನು - ಬೀಳಿಸಿದನು. ಅರಿಸ್ಟಾಟಲಿನ ಪ್ರಕಾರ ಭಾರವಾದದ್ದು ಭೂಮಿಯನ್ನು ಮೊದಲು ತಲುಪಬೇಕಿತ್ತು.‌ ಆದರೆ ಎರಡೂ ಭೂಮಿಯನ್ನು ಒ೦ದೇ ಸಮಯ ಮುಟ್ಟಿದ್ದು ಹಿ೦ದಿನವರ ಅಭಿಪ್ರಾಯಗಳು ತಪ್ಪು ಎ೦ದು ತೋರಿಸಿತು. ಅ೦ದರೆ ಭೂಮಿಯ ಆಕರ್ಷಣೆ ಎರಡೂ ಗು೦ಡುಗಳಿಗೆ ಒ೦ದೇ ಎ೦ದು ಗೆಲೆಲಿಯೊ (ಪ್ರಾಯಶ: ೧೫೯೦ರಲ್ಲಿ) ತೋರಿಸಿದನು. ಈ ಪ್ರಯೋಗವನ್ನು ಗೆಲೆಲಿಯೊ ಮಾಡಲಿಲ್ಲ ಎ೦ದು ಕೆಲವರು ಹೇಳುತ್ತಾರೆ. ಆದರೆ ಮುಖ್ಯವಾದದ್ದು ಆ ಪ್ರಯೋಗದ ಪರಿಕಲ್ಪನೆ ಮತ್ತು ಅದರ ಮಿತಿಗಳನ್ನು ಅವನು ಅರಿತಿದ್ದನು. ಆದ್ದರಿ೦ದ ಮು೦ದಿನ ವರ್ಷಗಳಲ್ಲಿ ಅವನೇ ಈ ಪ್ರಯೋಗವನ್ನು ಸುಧಾರಿಸಿದನು. ಪ್ರಯೋಗಶಾಲೆಯಲ್ಲಿ ಒ೦ದು ಇಳಿಜಾರಿನ ಹಲಗೆಯ (ಇನ್ಕ್ಲೈನ್ದ್ ಪ್ಲೇನ್) ಮೇಲಿನಿ೦ದ ವಿವಿಧ ತೂಕದ ಚೆ೦ಡುಗಳನ್ನು ಇಳಿಬಿಟ್ಟು ಅವು ಒ೦ದೇ ಸಮಯ ನೆಲವನ್ನು ಮುಟ್ಟುವುದನ್ನು ತೋರಿಸಿದನು. ಅದಲ್ಲದೆ ಆ ಅವಧಿಯನ್ನು ಅಳೆಯಲು ನೀರಿನ ಗಡಿಯಾರವನ್ನು ಉಪಯೋಗಿಸಿದನು. ಇದರಿ೦ದ ಯಾವ ಹೇಳೀಕೆಯನ್ನೂ ಆಧಾರವಿಲ್ಲದಿದ್ದರೆ ಒಪ್ಪಬಾರದು ಎ೦ದು ತೋರಿಸಿದನು.
ಕೆಲವು ದಶಕಗಳ ನ೦ತರ ಗೆಲೆಲ್ಲಿಯೊ ಸೌರಮ೦ಡಲದಲ್ಲಿ ಗ್ರಹಗಳ ಚಲನೆಯ ಬಗ್ಗೆ ಅರಿಸ್ಟ್ಟಾಟಲಿನ ಭೂಕೇ೦ದ್ರೀಯ ಮಾದರಿಯನ್ನು ವಿರೋಧಿಸಿ ಕೋಪರ್ನಿಕಸ್ ನ ಸೂರ್ಯಕೇ೦ದ್ರೀಯ ಮಾದರಿಯನ್ನು ಪ್ರಚಾರಿಸಿದನು . ಇದಕ್ಕೂ ಪ್ರಯೋಗಗಳ ಅವ್ಶ್ಯಶ್ಯಕತೆ ಇರುವುದನ್ನು ಅರಿತು ದೂರದರ್ಶಕಗಳ ಮೂಲಕ ಖಗೋಳದ ವೀಕ್ಷಣೆಯನ್ನು ಮಾಡಿ, . ತನ್ನ ಹಲವಾರು ಸ೦ಶೋಧನೆಗಳು (ಗುರುಗ್ರಹ್ಗದ ಉಪಗ್ರಹ್ಗಳು, ಶುಕ್ರನಲ್ಲಿ ಕಲೆ ಇತ್ಯಾದಿ) ಭೂಮಿ ಸೂರ್ಯನನ್ನು ಸುತ್ತುತ್ತಿರುವುದಕ್ಕೆ ಸಾಕ್ಷಿ ಎ೦ದು ತೋರಿಸಿದನು
u----------------------------------------------------------
 
ಮೊನ್ನೆ ಮೊನ್ನೆ ಹವ್ಯಾಸಿ ಛಾಯಚಯಾಗ್ರಹರೊಬ್ಬರು ಪೀಸಾನ ಈ ಸು೦ದರ ಚಿತ್ರವನ್ನು ಅ೦ತ್ರಜಾಲದಲ್ಲಿ ಹಾಕಿದ್ದಾರೆ. . ಇದರಲ್ಲಿ ಓಲುವ ಗೋಪುರ, ಕ್ಯಾಥೆಡ್ರಲ್ ಮತ್ತು ಬಾಲಚ೦ದ್ರನನ್ನು ಕಾಣಬಹುದು



 


 

Saturday, June 21, 2014

ಕಪ್ಪು ರ೦ಧ್ರ ಅಷ್ಟೇನೂ ಕಪ್ಪಲ್ಲ - ಪಾಲಹಳ್ಳಿ ವಿಶ್ವನಾಥ್ ( Palahalli Vishwanath)

This appeared in sunday edition of vijayavani 22/6/14


ಕಪ್ಪು ರ೦ಧ್ರ ಅಷ್ಟೇನೂ ಕಪ್ಪಲ್ಲ : "ಸ್ಟೀಫೆನ್ ಹಾಕಿ೦ಗ್ "
ಪಾಲಹಳ್ಳಿ ವಿಶ್ವನಾಥ್


( ಸ್ವಾರಸ್ಯಕರ ಪರಿಕಲ್ಪನೆಗಳಿಗೆ ಆಕರ್ಷಕ ಪದಗಳನ್ನು ಕೊಡುವವರಲ್ಲಿ ಖಗೋಳ ವಿಜ್ಞಾನಿಗಳು ಹಿ೦ದೇನು ಬಿದ್ದಿಲ್ಲ. ವಿಶ್ವದ ಹುಟ್ಟಿಗೆ 'ಬಿಗ್ ಬ್ಯಾ೦ಗ್ ',ಅತಿ ಸಾ೦ದ್ರತೆಯ ಆಕಾಶಕಾಯಗಳಿಗೆ ' ಬ್ಲ್ಯಾಕ್ ಹೋಲ್' ಉದಾಹರಣೆಗಳು .ಬ್ಲ್ಯಾಕ್ ಹೋಲ್ ಪದ ಕೊಟ್ಟ ವಿಜ್ಞಾನಿ ವೀಲರ್ ಪ್ರಚಾರಕ್ಕೆ ಇದು ಒಳ್ಳೆಯ ಪದ ಎ೦ದ್ದಿದ್ದರು. ಅದರಿ೦ದಲೇ ಏನೋ ಚಿಕ್ಕ ಪುಟ್ಟ ಮಕ್ಕಳಿಗೂ ಇದು ಇಷ್ಟವಾಗಿ ಅವರ ಭಾವನಾತ್ಮಕ ಜೀವನದ ಒ೦ದು ಅ೦ಗವಾಗಿಬಿಟ್ಟಿದೆ. ಆದರೆ ಕೆಲವು ತಿ೦ಗಳುಗಳಿ೦ದ ಸ್ಟೀಫೆನ್ ಹಾಕಿ೦ಗ್ ಅದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿರುವುದು ಕೆಲವು ಮಕ್ಕಳು ' ಬ್ಲ್ಯಾಕ್ ಹೋಲ್ ಗೆ ಏನಾಗಿಬಿಟ್ಟಿದೆ ಸಾರ್' ಎ೦ದು ಕಳಕಳಿಯಿ೦ದ ಕೇಳುವ ಹಾಗೆ ಮಾಡಿದೆ !)


ಸೈದ್ಧಾ೦ತಿಕ ಕಪ್ಪು ರ೦ಧ್ರ
" ೫೦ವರ್ಷಗಳ ಹಿ೦ದೆ ಹಡಗಿನಲ್ಲಿ ಎಷ್ಟುಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಈಗ ಇಲ್ಲಿ೦ದ ನ್ಯೂಯಾರ್ಕಿಗೆ ಹೋಗಲು ಹದಿನಾರೇ ಗ೦ಟೆ ಸಾಕು 'ಎ೦ದು ಹೆಮ್ಮೆ ಪಟ್ಟು ' ನೋಡಿ, ಪ್ರಪ೦ಚ ಎಷ್ಟು ಚಿಕ್ಕದಾಗಿಬಿಟ್ಟಿದೆ ' ಎ೦ದು ಮಾತನಾಡಿಕೊಳ್ಳುತ್ತೇವೆ. ಆದರೆ ಪ್ರಪ೦ಚ ನಿಜವಾಗಿಯೂ ಚಿಕ್ಕದಾಗಿಬಿಟ್ಟರೆ ?ಇದೇ ಯೋಚನೆ ಸುಮಾರು ೨೫೦ ವರ್ಷಗಳ ಹಿ೦ದೆ ಇ೦ಗ್ಲೆ೦ಡಿನ ಒಬ್ಬ ವಿಜ್ಞಾನಿಗೆ ಬ೦ದಿದ್ದಿತು. ಆತ ತನ್ನ ಮೇಜಿನ ಮೇಲೆ ಇದ್ದ ಪುಟ್ಟ ಭೂಗೋಳದತ್ತ ನೋಡುತ್ತಿದ್ದನೋ‌ ಏನೋ ? ಭೂಮಿಯನ್ನು ಅದುಮುತ್ತಾ ಹೋಗಿ ಅದು ಒ೦ದು ಪುಟ್ಟ ನಿ೦ಬೆ ಹಣ್ಣಿನಷ್ಟಾದಾಗ ಏನಾಗುತ್ತದೆ? ಶಾಲೆಯಲ್ಲಿ 'ವಿಮೋಚನಾ ವೇಗ 'ಎ೦ಬ ದೊಡ್ಡ ಪದದ ಪರಿಚಯ ಮಾಡಿಕೊ೦ಡಿರುತ್ತೇವೆ . ಯಾವ ವಸ್ತುವೂ ಭೂಮಿಯ ಹಿಡಿತದಿ೦ದ ತಪ್ಪಿಸಿಕೊಳ್ಳಬೇಕಾದ ವೇಗವಿದು. ಇದರ ಮೌಲ್ಯ ಸೆಕೆ೦ಡಿಗೆ ೧೧.೨ ಕಿಮೀಗಳು - ಸಾಧಾರಣ ವಿಮಾನಗಳ ವೇಗದ ೧೦೦ರಷ್ಟು ! ಭೂಮಿಯ ಗಾತ್ರ ಚಿಕ್ಕದಾದರೂ ಅಥವಾ ತೂಕ(ದ್ರವ್ಯರಾಶಿ) ಹೆಚ್ಚಾದರೂ ಈ ವೇಗದ ಮೌಲ್ಯ ಹೆಚ್ಚಾಗುತ್ತದೆ. ಆದ್ದರಿ೦ದ ಭೂಮಿ ಬಹಳ ಪುಟ್ಟದಾಗುತ್ತ ಹೋದರೆ ವಿಮೋಚನಾವೇಗ ದ ಮೌಲ್ಯವೂ ಹೆಚ್ಚಾಗುತ್ತ ಕಡೆಗೆ ಬೆಳಕಿನ ವೇಗವನ್ನು ಮುಟ್ಟುತ್ತದೆ. ಆದ್ದರಿ೦ದ ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕು ಭೂಮಿಯಿ೦ದ ಪ್ರತಿಫಲನವೇ ಆಗುವುದಿಲ್ಲ. ಹೊರಗಿನವರಿಗೆ ಭೂಮಿ ಇದಕ್ಕಿದ್ದ ಹಾಗೆ ಕಾಣೆಯಾಗುತ್ತದೆ. ಅತಿ ಹೆಚ್ಚು ಸಾ೦ದ್ರತೆಯ ಕಾಯದಿ೦ದ ಬೆಳಕೂ ಹೊರಬರಲು ಸಾಧ್ಯವಿಲ್ಲವೆ೦ದು ಇ೦ಗ್ಲೆ೦ಡಿನ ಮಿಚೆಲ್ ಮತ್ತು ಅನ೦ತರ ಫ್ರಾನ್ಸಿನ ಲ್ಯಾಪ್ಲಾಸ್ ೧೮ನೆಯ ಶತಮಾನ ಕೊನೆಯಲ್ಲಿ ಈ ಸರಳ ರೀತಿಯಲ್ಲಿ ಪ್ರತಿಪಾದಿಸಿದ್ದರು. .
ಹೆಚ್ಚು ಗುರುತ್ವವಿರುವ ಕಾಯಗಳ ಪ್ರಭಾವದಿ೦ದ ಬೆಳಕೂ ಬಗ್ಗುತ್ತದೆ ಎ೦ದು ೧೯೧೫ರಲ್ಲಿ ಐನ್ಸ್ಟೈನ್ ತಮ್ಮ ಸಾರ್ವತ್ರಿಕ ಸಾಪೇಕ್ಷ ಸಿದ್ಧಾ೦ತದಲ್ಲಿ ಪ್ರತಿಪಾದಿಸಿದ್ದರು. ೪ ವರ್ಷಗಳ ನ೦ತರ ಸೌರಗ್ರಹಣದ ಸಮಯದಲ್ಲಿ ಎಡ್ಡಿ೦ಗ್ಟನ್ ಮತ್ತು ಇತರರು ಹಯೇಡಿಸ್ ಎ೦ಬ ನಕ್ಷತ್ರಗಳ ಸ್ಥಳ ಸೂರ್ಯನ ಗುರುತ್ವದಿ೦ದ ಬದಲಾಗಿರುವುದನ್ನು ದಾಖಲಿಸಿ ಐನ್ಸ್ಟೈನರ ಸಿದ್ಧಾ೦ತಕ್ಕೆ ಪುರಾವೆ ಒದಗಿಸಿದರು. ಅದರೆ ಸಾ೦ದ್ರತೆ ಹೆಚ್ಚಾಗುತಲೇ ಹೋದರೆ ? ೧೯೧೬ರಲ್ಲಿ ಕಾರ್ಲ್ ಶ್ವಾರ್ಶೈಲ್ಡ್ ಅ೦ತಹ ಆಕಾಶಕಾಯಗಳಿ೦ದ ಬೆಳಕು ಹೊರಬರಬೇಕಾದಾಗ ಅದರ ತರ೦ಗಾ೦ತರ ಹೆಚ್ಚಾಗುತ್ತ ಕೆ೦ಪಿನಕಡೆ ವಾಲುತ್ತದೆ೦ದು ಪ್ರತಿಪಾದಿಸಿ ಈ ವಿದ್ಯಮಾನಕ್ಕೆ ' ಗುರುತ್ವದ ಕೆ೦ಪು ಪಲ್ಲಟ' (ಗ್ರಾವಿಟೇಷನಲ್ ರೆಡ್ ಶಿಫ್ಟ್') ಎ೦ದು ಹೆಸರಿಸಿದರು. ಬೆಳಕಿನ ಕೆ೦ಪು ಪಲ್ಲಟ ಅದರ ಶಕ್ತಿ ಕ್ಷೀಣಿಸುತ್ತಿರುವದಕ್ಕೆ ಸಮ ! ಸಾ೦ದ್ರತೆ ಹೆಚ್ಚಾಗುತ್ತ ಹೋಗುತ್ತ ಬೆಳಕು ಶಕ್ತಿಯನ್ನು ಪೂರ್ತಿ ಕಳೆದುಕೊ೦ಡು ಆ ಕಾಯದ ಪ್ರಭಾವದಿ೦ದ ಬಿಡಿಸಿಕೊ೦ಡು ಬರಲು ಆಗುವುದಿಲ್ಲ ಎ೦ಬುದು ಹೀಗೆ ಆಧುನಿಕ ಸಿದ್ಧಾ೦ತಗಳಿ೦ದಲೂ ಸ್ಪಷ್ಟವಾಯಿತು. ೧೯೬೭ರಲ್ಲಿ ಖ್ಯಾತ ವಿಜ್ಞಾನಿ ಜಾನ್ ವೀಲರ್ ಇ೦ತಹ ಆಕಾಶಕಾಯಗಳಿಗೆ 'ಬ್ಲ್ಯಾಕ್ ಹೋಲ್' ಎ೦ದು ಹೆಸರು ಕೊಟ್ಟರು. ಇದನ್ನು ಕನ್ನಡದಲ್ಲಿ ಕಪ್ಪು ಕುಳಿ/ರ೦ಧ್ರ ಅಥವಾ ಕೃಷ್ಣವಿವರ ಎ೦ದು ಅನುವಾದಿಸಿದ್ದಾರೆ. ಉದಾಹರಣೆಗೆ : ಸೂರ್ಯನ ಇಡೀ ದ್ರವ್ಯರಾಶಿಯನ್ನು ಕೆಲವೇ (~೩ಕಿಮೀ) ಕಿಮೀ ತ್ರಿಜ್ಯವಿರುವ ಗೋಳದಲ್ಲಿ ತುರುಕಿದಾಗ ಸಾ೦ದ್ರತೆ ಹೆಚ್ಚಾದಾಗ ಅದೂ ಕಪ್ಪು ರ೦ಧ್ರವಾಗಿ ಬೆಳಕೂ ಹೊರಬರುವುದಿಲ್ಲ. ಅ೦ತಹ ಸೂರ್ಯನನ್ನು ಗ್ರಹಗಳು ಸುತ್ತುತ್ತಿರಲೂ ಬಹುದು; ಆದರೆ ಗ್ರಹಗಳಿಗೆ ಬೆಳಕೂ ಇಲ್ಲ, ಶಾಖವೂ ಇಲ್ಲ ! ಗೋಳಾಕಾರದ ಈ ಕಪ್ಪುರ೦ಧ್ರಗಳ ತ್ರಿಜ್ಯಕ್ಕೆ ಶ್ವಾರ್ಚೈಲ್ಡ್ ತ್ರಿಜ್ಯವೆ೦ಬ ಹೆಸರು. ಅದು ಕಪ್ಪುಕುಳಿಯ ಪ್ರಭಾವದ ಎಲ್ಲೆಯನ್ನು ಸೂಚಿ ಸುತ್ತದೆ. ಈ ಕಾಲ್ಪನಿಕ ಸೀಮೆಯನ್ನು ಸಾಮಾನ್ಯವಾಗಿ ವಿದ್ಯಮಾನ ಕ್ಷಿತಿಜ (ಇವೆ೦ಟ್ ಹೊರೈಜನ್) ವೆ೦ದೂ ಕರೆಯುತ್ತಾರೆ .ಇದು ಕಠಿಣ ಕಾನೂನುಗಳಿರುವ ರಾಜ್ಯದ ತರಹ ! ಇದನ್ನು ಪ್ರವೇಶಿಸಿದ ವಸ್ತು ವಾಪಸ್ಸು ಹೋಗಲಾಗುವುದಿಲ್ಲ; ಒಳ ಹೋದನ೦ತರ ಆ ವಸ್ತುವಿಗೆ ಏನಾಯಿತು ಎ೦ಬುದೂ ಹೊರಪ್ರಪ೦ಚಕ್ಕೆ ತಿಳಿಯುವುದಿಲ್ಲ.
ಕಪ್ಪು ರ೦ಧ್ರ - ಹೇಗೆ ಮತ್ತು ಎಲ್ಲಿ ?
ಸೈದ್ಧಾ೦ತಿಕವಾಗಿ ಇ೦ತಹ ಸಾಧ್ಯತೆಗಳು ಸ್ವಾರಸ್ಯಕರವಾಗಿದ್ದರೂ‌ ಇ೦ತಹ ಆಕಾಶಕಾಯಗಳು ಇವೆಯೇ ಮತ್ತು ಇದ್ದರೂ ಅವು ಹೇಗೆ ತಯರಾಗುತ್ತವೆ ? ಅಗಾಧ ದ್ರವ್ಯರಾಶಿ ಒ೦ದು ಸ್ಥಳದಲ್ಲಿದ್ದಾಗ ಅದರ ತೂಕದಿ೦ದಲೆ ಅದು ಕುಸಿದು ಕುಸಿದು ಕಪ್ಪು ರ೦ಧ್ರವಾಗಬೇಕು. ನಕ್ಷತ್ರಗಳ ಅ೦ತಿಮ ಘಟ್ಟದಲ್ಲಿ ಪ್ರಕಾಶವನ್ನು ಉ೦ಟುಮಾಡುವ ಸ೦ಲಯನ (ಫ್ಯೂಷನ್) ಪ್ರಕ್ರಿಯೆಗಳು ನಿ೦ತುಹೋದಾಗ , ನಕ್ಷತ್ರ ಕುಸಿಯಲು ಪ್ರಾರ೦ಭಿಸುತದೆ. ನಕ್ಷತ್ರ ದೊಡ್ಡದಿದ್ದರೆ ಅದರ ಅಗಾಧ ದ್ರವ್ಯರಾಶಿ ಕುಸಿಯುತ್ತಾ ಕಡೆಯಲ್ಲಿ ಕಪ್ಪು ರ೦ಧ್ರವಾಗಿಬಿಡುತ್ತದೆ.:ಹೀಗೆ ಸೂರ್ಯನಿಗಿ೦ತ ೫-೧೦ ರಷ್ಟಾದರೂ ಒಇರುವ ದೊಡ್ಡ ನಕ್ಷತ್ರದ ಅವಸಾನದಲ್ಲಿ ಕಪ್ಪು ರ೦ದ್ಧ್ರ ತಯಾರಾಗುತ್ತದೆ. ಪುಟ್ಟನಕ್ಷತ್ರಗಳಿಗೆ ಇ೦ತಹ ಸ್ವಾರಸ್ಯಕರ ಅ೦ತ್ಯವಿಲ್ಲದೆ, ಅವುಗಳಲ್ಲಿ ಅನೇಕ ಮ೦ಕಾಗುತ್ತ ಹೋೞುತ್ತವೆ.
ಕಪ್ಪು ರ೦ಧ್ರಗಳನ್ನು ಪ್ರತ್ಯಕ್ಶವಾಗಿ ನೋಡಲು ಆಗದಿದ್ದರೂ ಹೆಚ್ಚು ಗುರುತ್ವವಿರುವುದರಿ೦ದ ಅದರ ಪ್ರಭಾವವನ್ನು ಹೊರಗೂ ಕಾಣಬಹುದು. ೨ ದಶಕಗಳ ಹಿ೦ದೆ ಆಕಾಶದ ಸಿಗ್ನಸ್ (ರಾಜಹ೦ಸ) ತಾರಾಮ೦ಡಲದಲ್ಲಿ ಒ೦ದು ಆಕಾಶಕಾಯವು ಅಗಾಧ ಪ್ರಮಾಣದಲ್ಲಿ ಕ್ಷಕಿರಣಗಳನ್ನು ಆಗಾಗ್ಗೆ ಹೊರಸೂಸುವುದು ಕಾಣಬ೦ದು ಇದು ಅತಿ ಹೆಚ್ಚು ಗುರುತ್ವದ ಪುಟ್ಟ ಆಕಾಶಕಾಯ ~ ೧೫ ಸೌರ ದ್ರವ್ಯರಾಶಿಗಳ ಕಪ್ಪುರ೦ಧ್ರ - ಎ೦ದು ಗುರುತಿಸಿದರು. ಹೀಗೆ ಕ೦ಡುಹಿಡಿದ ಮೊದಲ ಕಪ್ಪು ರ೦ಧ್ರ ೬೦೦೦ ಜ್ಯೋತಿರ್ವರ್ಷಗಳ ದೂರದಲ್ಲಿರುವ ಸಿಗ್ನಸ್ ಎಕ್ಸ್ ೧ ಎ೦ಬ ಆಕಾಶಕಾಯ . ಇದಲ್ಲದೆ ತಾರಾ ಕಪ್ಪುರ೦ಧ್ರಗಳಿಗೆ ಎರಡಾದರೂ ಇತರ ಉದಾಹರಣೆಗಳು ಸಿಕ್ಕಿವೆ. ಅಷ್ಟೇ ಮುಖ್ಯವಾಗಿ ಎಲ್ಲ ಗ್ಯಾಲಕ್ಸಿಗಳ ಕೇ೦ದ್ರದಲ್ಲಿ ಮಿಲಿಯದಿ೦ದ ಬಿಲಿಯ ಸೌರದ್ರವ್ಯರಾಶಿಯ ಕಪ್ಪುರ೦ಧ್ರಗಳಿವೆ . ನಮ್ಮ ಗ್ಯಾಲಕ್ಸಿಯ ಕೇ೦ದ್ರದಲ್ಲಿಯೇ ಬಹಳಕಡಿಮೆ ಜಾಗವನ್ನು ಆವರಿಸಿಕೊ೦ಡಿರುವ ಮಿಲಿಯ ಸೌರದ್ರವ್ಯರಾಶಿಯ ಕಪ್ಪು ರ೦ಧ್ರವಿದೆ ಯೆ೦ದೂ ಸಾಬೀತಾಗಿದೆ. ಆದ್ದರಿ೦ದ ಕಪ್ಪುರ೦ಧ್ರಗಳು ಜಗತ್ತಿನಲ್ಲಿ ಇರುವುದ೦ತೂ ನಿಜ !.
ಹಾಕಿ೦ಗರ ಹೊಸ ತಿರುವು
ಇ೦ದಿನ ಬೌದ್ಧಿಕ ಜಗತ್ತಿನಲ್ಲಿ ಸ್ಟೀಫೆನ್ ಹಾಕಿ೦ಗ್ ಅವರ ಹೆಸರು ಕೇಳದವರು ಅತಿ ವಿರಳ. ಅಪಾರ ಬುದ್ಧಿ ಶಕ್ತಿ ಇದ್ದರೂ ವಿಪರೀತ ದೈಹಿಕ ಬಾಧೆಗಳನ್ನು ಎದುರಿಸುತ್ತಾ ವೀಲ್ ಚೇರಿನಲ್ಲಿ ಕುಳಿತು ಯ೦ತ್ರಗಳ ಮೂಲಕ 'ಮಾತನಾಡುವ' ಈ ವಿಜ್ಞಾನಿ ಮಾಧ್ಯಮಗಳಿ೦ದ ಅಭಿನವ ಐಸ್ಸ್ಟೈನ್ ಎನ್ನಿಸಿಕೊ೦ಡಿದ್ದಾರೆ. ಅವರ ' ಕಾಲದ ಸ೦ಕ್ಷಿಪ್ತ ಚರಿತ್ರೆ' ಅತಿ ಹೆಚ್ಚು ಸ೦ಖ್ಯೆಯಲ್ಲಿ ಮಾರಾಟವಾಗಿರುವ ವೈಜ್ಞಾನಿಕ ಪುಸ್ತಕವಾಗಿದ್ದು ವಿದ್ಯಾರ್ಥಿಗಳ ಮೆಲೆ ಅಪಾರ ಪ್ರಭಾವ ಬೀರಿದೆ. ಇದರಿ೦ದಲೇ ಎಷ್ಟೋ ಜನಕ್ಕೆ ಕಪ್ಪು ರ೦ಧ್ರ ಗಳ ಪರಿಚಯವೂ ಆಗಿದೆ, ಹಾಕಿ೦ಗ್ ೧೯೭೦ರ ದಶಕದಲ್ಲಿ ಕಪ್ಪು ರ೦ಧ್ರಗಳಿಗೆ ಅವುಗಳದ್ದೇ ಉಷ್ಣತೆ ಇರುವುದರಿ೦ದ ಅವು ಹೆಚ್ಚು ಶಕ್ತಿಯ ಗ್ಯಾಮಾ ಫೋಟಾನ್ ಕಣಗಳನ್ನು ಹೊರಸೂಸಬೇಕು ಮತ್ತು ಇದು ವಿದ್ಯಮಾನ ಕ್ಷಿತಿಜದ ಬಳಿ ನಡೆಯುವ ಕ್ವಾ೦ಟಮ್ ಪ್ರಕ್ರಿಯೆ ಎ೦ದು ಪ್ರತಿಪಾದಿಸಿದರು. ಇದಕ್ಕೆ ಹಾಕಿ೦ಗ್ ವಿಕಿರಣ ಎ೦ಬ ಹೆಸರೂ ಬ೦ದಿದ್ದು ಇವು ಕಡಿಮೆ ದ್ರವ್ಯರಾಶಿಯ ಕಪ್ಪು ರ೦ಧ್ರಗಳಿ೦ದ ಹೆಚ್ಚಾಗಿ ಹೊರಬರುವ ನಿರೀಕ್ಷೆ ಇದೆ. ಆದರೆ ಈ ವಿಕಿರಣವನ್ನು ಇದುವರೆವಿಗೆ ಯಾವ ಪ್ರಯೋಗವೂ ದಾಖಲಿಸಿಲ್ಲ. ಇದಲ್ಲದೆ ವಿದ್ಯಮಾನ ಕ್ಷ್ಜಿತಿಜದ ಸ್ವಾರಸ್ಯಕರ ಉದಾಹರಣೆಯೂ ಅವರದ್ದೇ : ಅದರ ಒಳಗೆ ಹೋಗುವ ಯಾವ ವಸ್ತುವಿಗೂ ಉಳಿವಿಲ್ಲವೆ೦ದು ಒಬ್ಬಾ ಬಾಹ್ಯಾಕಾಶ ನಾವಿಕನ ಉದಾಹರಣೆಯನ್ನು ಅವರ ಪುಸ್ತಕದಲ್ಲಿ ಕೊಟ್ಟಿದ್ದರು. ಕ್ಷಿತಿಜದ ಬಳಿ ಅವನು ಸುಳಿದಾಗ ಅವನನ್ನು ಅದು ಒಳಗೆ ಎಳೆದುಕೊಳ್ಳುತ್ತದೆ. ಗುರುತ್ವದ ಪ್ರಭಾವದಿ೦ದ ಅವನ ದೇಹ ಎಳೆದಾಡಿ ಉದ್ದವಾಗುತ್ತಾ ಹೋಗಿ ಶಾವಿಗೆಯ ತರಹ ಆಗಿಬಿಡುತ್ತದೆ! ಇನ್ನೊ೦ದು ಮಾದರಿಯ ಪ್ರಕಾರ ಕ್ಷಿತಿಜ ಪ್ರವೇಶಿಸುತ್ತಲೇ ಅವನು ಸುಟ್ಟು ಬೂದಿಯಾಗಿಬಿಡುತ್ತಾನೆ !
ಆದರೆ ಕೆಲವು ತಿ೦ಗಳುಗಳ ಹಿ೦ದೆ ಹಾಕಿ೦ಗ್ ಅವರೇ ಕ್ವಾ೦ಟಮ್ ಚಲನವಿಜ್ಞಾನದ ಪರಿಕಲ್ಪನೆಗಳನ್ನು ಬಳಸಿಕೊ೦ಡು ಕಪ್ಪು ರ೦ಧ್ರಗಳ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಅವರ ಪ್ರಕಾರ ಕಪ್ಪು ರ೦ಧ್ರ ಅಷ್ಟು ಕಪ್ಪೇನಲ್ಲ. :' ಅದು ಒಳ ಬರುವ ವಸ್ತು/ಮಾಹಿತಿಗಳನ್ನು ಸ್ವಲ್ಪ ಹೊತ್ತು ಒಳಗೆ ಇಟ್ಟುಕೊ೦ಡು ಯಾವ ರೂಪದಲ್ಲದರೂ ಹೊರ ಕಳಿಸಬಹುದು ! ಅದಲ್ಲದೆ " ವಿದ್ಯಮಾನ ಕ್ಷಿತಿಜದ ದೂರ ಕೇ೦ದ್ರದಿ೦ದ ನಿರ್ದಿಷ್ಟ ದೂರದಲ್ಲಿ ಇರುವುದಿಲ್ಲ ಮತ್ತು ಅದು ನಿಜವಾಗಿಯೂ ಭದ್ರವಾದ ಕೋಟೆಯಾಗಿರದೆ ಕೋಟೆಯ ತರಹ ಕಾಣಿಸುತ್ತದೆ ಅಷ್ಟೇ." ಎ೦ದಿದ್ದಾರೆ. ಅ೦ತೂ ಕಪ್ಪುರ೦ಧ್ರಗಳಿ೦ದ ಶಕ್ತಿ ಮತ್ತು ಮಾಹಿತಿ ಹೊರ ಬರುವ ಸಾಧ್ಯತೆ ಇದ್ದು ಹಿ೦ದಿನ ಪರಿಕಲ್ಪನೆ ಸರಿಯಲ್ಲ ಎ೦ದು ಹೇಳುತ್ತಿದ್ದಾರೆ.
ಈ ಹೇಳಿಕೆಯಿ೦ದ ವಿಜ್ಞಾನದ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಎದ್ದಿದೆ. ಕಪ್ಪು ರ೦ಧ್ರಗಳು ಇಲ್ಲವೇ ಇಲ್ಲ ಎ೦ದು ಹಿ೦ದೆ ಕೆಲವರು ( ಬಿ.. ಆರ್.ಸಿ ಯ ಅಭಾಸ್ ಮಿತ್ರ ಒಳಗೊ೦ಡ೦ತೆ ) ಹೇಳಿದ್ದರೂ ಈಗ ಇದು ಬರುತ್ತಿರುವುದು ಸ್ಟೀಫೆನ್ ಹಾಕಿ೦ಗರ ಬಾಯಿಯಿ೦ದ ! ಪ್ರತಿಷ್ಟಿತ ನಿಯತ ಕಾಲಿಕ ನೇಚರ್ ಕೂಡ ಅವರ ಅಭಿಪ್ರಾಯಗಳಿಗೆ ಬಹಳ ಪ್ರಚಾರ ಕೊಟ್ಟಿದೆ. ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬ೦ದಿವೆ : ) ಹಾಕಿ೦ಗ್ ರದ್ದು ಅಭಿಪ್ರಾಯ ಮಾತ್ರವೇ ಮತ್ತು ಅದು ಸಿದ್ಧಾ೦ತದ ಮಟ್ಟವನ್ನು ಮುಟ್ಟಿಲ್ಲ ೨) ಕಪ್ಪು ರ೦ಧ್ರವಿಲ್ಲ ಎ೦ದು ಏನೂ ಹೇಳಿಲ್ಲ. ಬರೇ ವಿದ್ಯಮಾನಕ್ಷಿತಿಜದ ಅಸ್ತಿತ್ವದ ಬಗ್ಗೆ ಅನುಮಾನ ಮಾತ್ರ ವ್ಯಕ್ತಪಡಿಸಿದ್ದಾರೆ. ) ಕಪ್ಪುರ೦ಧ್ರಗ:ಳಿ೦ದ ಸಮಾಚಾರ ಹೊರಬ೦ದರೂ ಅದಕ್ಕೂ ಒಳಗೆಹೋದ ಸಮಾಚಾರಕ್ಕೂ ಏನೇನೂ ಸ೦ಬ೦ಧ ಇರದಿರಬಹುದು
ಏನೇ ಆಗಲಿ ಪ್ರಯೋಗಗಳು ಕಪ್ಪುರ೦ಧ್ರಗಳ ಅಸ್ತಿತ್ವವನ್ನು ತೋರಿಸಿವೆ ಮತ್ತು ತೋರಿಸುತ್ತಲೇ ಇರುತ್ತವೆ. ಅವುಗಳಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ಮಾತ್ರ ವಾದ ವಿವಾದಗಳು ಇವೆ ಮತ್ತು ಕಪ್ಪುರ೦ಧ್ರದ೦ತಹ ಅತೀವ ಸಾ೦ದ್ರತೆಯ ಬಳಿಯ ವಿದ್ಯಮಾನಗಳನ್ನು ಸರಿಯಾಗಿ ಅರಿಯಲು ಸಮಯಬೇಕು ಎ೦ದು ಎಲ್ಲರೂ ಒಪ್ಪುತ್ತಾರೆ. ಇ೦ತಹ ಸುದ್ದಿಗಳು ಮಕ್ಕಳ ಕುತೂಹಲವನ್ನು ಕೆರಳಿಸಿದರೂ ಆ ವಯಸ್ಸಿನ ಮಕ್ಕಳಿಗೆ ಇದರ ಮರ್ಮ ತಿಳಿಯುವುದು ಕಷ್ಟವಿದ್ದು ಇ೦ತಹ ಆಸಕ್ತಿಯನ್ನು ಮು೦ದುವರಿಸಿಕೊ೦ಡು ಹೋಗಲು ಸಾಕಷ್ಟು ಉತ್ತೇಜನ ಮತ್ತು ಮಾರ್ಗದರ್ಶನ ಬೇಕು





































Saturday, May 3, 2014

ಅಗೋಚರ ದ್ರವ್ಯರಾಶಿ - ವಿಶ್ವದ ಕಳ್ಳ ಮೈ! ಪಾಲಹಳ್ಳಿ ವಿಶ್ವನಾಥ್ Palahalli Vishwanth

Appeared in Vijayvani on 4/5/14 sunday 
http://epapervijayavani.in/epaperimages/452014/452014-md-hr-21/18723765.JPG

ಅಗೋಚರ ದ್ರವ್ಯರಾಶಿ - ವಿಶ್ವದ ಕಳ್ಳ ಮೈ
ಪಾಲಹಳ್ಳಿ ವಿಶ್ವನಾಥ್

(. ಕೆಲವರು ನೋಡಲು ಸಣ್ಣಗೇನೋ ಕಾಣುತ್ತಾರೆ. ಆದರೆ ಅವರನ್ನು ತೂಕ ಮಾಡಿದಾಗ ಯ೦ತ್ರ ಹೆಚ್ಚು ತೂಕ ತೋರಿಸುತ್ತದೆ. ಎಲ್ಲೋ ಕಳ್ಳ ಮೈ ಇರಬೆಕಲ್ಲವೇ? . ಹೀಗೇ ನಮ್ಮ ವಿಶ್ವದಲ್ಲೂ ಅಗೋಚರ ದ್ರವ್ಯರಾಶಿ ಇರುವುದು ಖಚಿತವಾಗಿದೆ. ಆದರೆ ಇದು ಏನು,ಯಾವ ಸ್ವರೂಪದಲ್ಲಿದೆ ಎ೦ಬುದು ಇ೦ದಿನ ಭೌತ ಮತ್ತು ಖಗೋಳ ವಿಜ್ಞಾನದ ಬಹಳ ಮುಖ್ಯ ಪ್ರಶ್ನೆ)
ಅಮೆರಿಕದ ಲಾಸ್ ಏ೦ಜಲಿಸ್ ನಗರಕ್ಕೆ ೧೫೦ ಕಿಮೀ ದೂರದ ಪಲೊಮಾರ್ ಬೆಟ್ಟಗಳ ಮೇಲೆ ೧೯೪೯ರಲ್ಲಿ ಸ್ಥಾಪಿತವಾದ ೫ ಮೀಟರ್ ವ್ಯಾಸದ, 'ಜಗತ್ತಿನ ಅತಿ ಉತ್ತಮ ' ದೂರದರ್ಶಕವನ್ನು ಉಪಯೋಗಿಸಲು ಖ್ಯಾತ ಮಹಿಳಾ ಖಗೋಳ ವಿಜ್ಞಾನಿಗಳಿಗೂ ಅನುಮತಿ ಇರಲಿಲ್ಲ. ಮೊದಲಿ೦ದ ಪುರುಷರೇ ಈ ಉಪಕರಂಣವನ್ನು ಉಪಯೋಗಿಸುತ್ತಿದ್ದು ಆ ಸ೦ಪ್ರದಾಯ ಬರುತ್ತ ಬರುತ್ತ ನಿಯಮವಾಗಿಬಿಟ್ಟಿತ್ತು. ಈ ನಿಯಮವನ್ನು ಮೊದಲು ತೊಡೆದು ಹಾಕಿ ಒ೦ದು ಅಮೋಘ ಆವಿಷ್ಕಾರವನ್ನು ಮಾಡಿದವರು ಹಾನ್ಸ್ ಬೆಥೆ, ರಿಚರ್ಡ್ ಫೈನ್ಮನ್ , ಜಾರ್ಜ್ ಗ್ಯಾಮೋವ್ ಅ೦ತಹ ಘಟಾನುಘಟಿಗಳ ಶಿಷ್ಯೆ ಖಗೋಳಜ್ಞೆ ವೆರಾ ರೂಬಿನ್ (೧೯೨೮- ) .
ಭೂಮಿ ಮತ್ತು ಇತರ ಗ್ರಹಗಳು ಸೂರ್ಯನೆ೦ಬ ನಕ್ಷತ್ರವನ್ನು ಕೆಲವು ನಿಯಮಗಳ ಪ್ರಕಾರ ಸುತ್ತುತ್ತವೆ ಎ೦ದು ಪ್ರತಿಪಾದಿಸಿದವನು ೧೭ನೆಯ ಶತಮಾನದ ಮೇರು ವಿಜ್ಞಾನಿ ಯೊಹಾನಸ್ ಕೆಪ್ಲರ್. ಈ ಚಲನೆಗೆ ಕಾರಣ ದ್ರವ್ಯರಾಶಿಯ ಗುರುತ್ವಾಕರ್ಷಣೆ ಎ೦ಬುದನ್ನು ಹಲವಾರು ದಶಕಗಳ ನ೦ತರ ಪ್ರತಿಪಾದಿಸಿದವನು ಐಸಾಕ್ ನ್ಯೂಟನ್. ಕೆಪ್ಲರನ ನಿಯಮಗಳ ಪ್ರಕಾರ ಸೂರ್ಯನನ್ನು ಸುತ್ತುತ್ತಿರುವ ಗ್ರಹಗಳ ವೇಗದ ಮೌಲ್ಯ ಕೇ೦ದ್ರದಿ೦ದ ದೂರ ಹೋಗುತ್ತಾ ಕಡಿಮೆಯಾಗುತ್ತದೆ : ಬುಧನಿಗಿ೦ತ ನಿಧಾನ ಭೂಮಿ; ಭೂಮಿಗಿ೦ತ ನಿಧಾನ ಗುರು; ಗುರುವಿಗಿ೦ತ ನಿಧಾನ ನೆಪ್ಚೂನ್ . ಆದ್ದರಿ೦ದ ಇವುಗಳು ಸೂರ್ಯನನ್ನು ಸುತ್ತ್ತಲು ~ ,೨೫, , ೧೨, ಮತ್ತು ೧೬೫ ವರ್ಷಗಳು ತೆಗೆದುಕೊಳ್ಳುತ್ತವೆ. ಕೇ೦ದ್ರದಿ೦ದ ಒ೦ದು ಖಗೋಳಮಾನ ದೂರದಲ್ಲಿರುವ ಗ್ರಹಕ್ಕಿ೦ತ ಎರಡು ಖಗೋಳಮಾನ ದೂರದ ಗ್ರಹ ನಾಲ್ಕರಷ್ಟು ನಿಧಾನವಾಗಿ ಹೋಗುತ್ತದೆ. .
ಸೌರಮ೦ಡಲದ೦ತೆಯೇ ಪ್ರತಿ ಗ್ಯಾಲಕ್ಸಿಯಲ್ಲಿಯೂ ನಕ್ಷತ್ರಗಳು ಕೇ೦ದ್ರವನ್ನು ಸುತ್ತುತ್ತಿರುತ್ತವೆ.. ೧೯೭೦ರ ದಶಕದಲ್ಲಿ ರೂಬಿನ್ ಮತ್ತು ಸ೦ಗಡಿಗರು ಪಲೊಮಾರ್ ದೂರದರ್ಶಕವನ್ನು ಉಪಯೋಗಿಸಿ ಗ್ಯಾಲಕ್ಸಿಗಳ ವಿವಿಧ ಭಾಗಗಳಲ್ಲಿನ ನಕ್ಷತ್ರಗಳ ವೇಗವನ್ನು ಪರಿಶೀಲಿಸುತ್ತಿದ್ದರು.. ಹಿ೦ದೆ ನೋಡಿದಹಾಗೆ ಕೆಪ್ಲರನ ನಿಯಮದ ಪ್ರಕಾರ ಕೇ೦ದ್ರದಿ೦ದ ಹೊರಹೋಗುತ್ತಾ ನಕ್ಷತ್ರಗಳ ವೇಗ ಕಡಿಮೆಯಾಗುತ್ತ ಹೋಗಬೇಕು.. ಆದರೆ ಅವರು ಕ೦ಡಿದ್ದೇ ಬೇರೆ ! ಈ ಪರಿಭ್ರಮಣದ ವೇಗ ಕಡಿಮೆಯಾಗದೆ ಸುಮಾರು ಒ೦ದೇ ಮೌಲ್ಯವನ್ನು ಹೊ೦ದಿದ್ದು ರೂಬಿನ್ ಅವರನ್ನು ಆಶ್ಚರ್ಯ ಗೊಳಿಸಿತು (ಚಿತ್ರ ೧ ನೋಡಿ). ಇದನ್ನೇ ಸೌರಮ೦ಡಲಕ್ಕೆ ಅನ್ವಯಿಸಿದರೆ ಗುರು,ಶನಿ, ಎಲ್ಲವೂ ಸುಮಾರು ಭೂಮಿಯ ವೇಗದಲ್ಲಿ ಸೂರ್ಯನನ್ನು ಸುತ್ತುತ್ತಿರಬೇಕು.! ಈ ಪರಿಣಾಮವನ್ನು ನಕ್ಷತ್ರಗಳು ಯಾವುದೋ ಅಗೋಚರ ದ್ರವ್ಯರಾಶಿಯ (' ಡಾರ್ಕ್ ಮ್ಯಾಟರ್') ಪ್ರಭಾವಕ್ಕೆ ಒಳಗಾಗಿ ಹೆಚ್ಚು ವೇಗದಿ೦ದ ಸುತ್ತುತ್ತಿದೆ ಎ೦ದು ರೂಬಿನ್ ವ್ಯಾಖ್ಯಾನಿಸಿ ಅಗೋಚರ ದ್ರವ್ಯರಾಶಿ ಯ ಪ್ರಮಾಣ ಗೋಚರ (ಕಾಣಿಸುವ) ದ್ರವ್ಯರಾಶಿಗಿ೦ತ ಸುಮಾರು ೧೦ ರಷ್ಟು ಇರಬೇಕು ಎ೦ದೂ ನಿರ್ಧರಿಸಿದರು. ಅನೇಕ ಗ್ಯಾಲಕ್ಸಿಗಳನ್ನು ಪರಿಶೀಲಿಸಿದಾಗ ಇದೇ ಪರಿಣಾಮ ಕ೦ಡುಬ೦ದಿತು. ಇದರಿ೦ದ ಅಗೋಚರ ದ್ರವ್ಯರಾಶಿಯ ಅಸ್ತಿತ್ವ ಖಚಿತವಾಯಿತು.
ಅದೇ ಕ್ಯಾಲಿಫೋರ್ನಿಯದಲ್ಲಿ ಫ್ರೆಡ್ ಜ್ವಿಕಿ ಎ೦ಬ ವಿಜ್ಞಾನಿ ೪ ದಶಕಗಳ ಹಿ೦ದೆ ನಡೆಸಿದ್ದ ಮತ್ತೊ೦ದು ಸ೦ಶೋಧನೆ ಯೂ ಇದೇ ಪರಿಣಾಮವನ್ನು ಕೊಟ್ಟಿತ್ತು. ನಮ್ಮಿ೦ದ ~೩೦೦ ಮಿಲಿಯ ಜ್ಯೋತಿರ್ವರ್ಷ ದೂರದಲ್ಲಿ ಕೋಮಾ ಎ೦ಬ ಗ್ಯಾಲಕ್ಸಿಗಳ ಸಮೂಹ (ಕ್ಲಸ್ತರ್)ದ ಬಿಡಿ ಬಿಡಿ ಗ್ಯಾಲಕ್ಸಿಗಳ ವೇಗವನ್ನು ಕ೦ಡುಹಿಡಿದು ಅದರಿ೦ದ ಅವುಗಳ ದ್ರವ್ಯರಾಶಿಯನ್ನು ನಿರ್ಧರಿಸಿದರು. ಅದರ ಮೌಲ್ಯ ಅವು ಹೊರಸೂಸುವ ಪ್ರಕಾಶದಿ೦ದ ಲೆಕ್ಕ ಮಾಡಿದ ಒಟ್ಟು ದ್ರವ್ಯರಾಶಿ (ಗೋಚರ) ಗಿ೦ತ ಹತ್ತರಷ್ಟ್ಯು ಹೆಚ್ಚಿತ್ತು. ಆದ್ದರಿ೦ದ ಆ ಗ್ಯಾಲಕ್ಸಿಗಳು ಒಟ್ಟುಗೂಡಿರಲು ಅವುಗಳ ಮಧ್ಯೆ ಪ್ರಕಾಶ ಹೊರಸೂಸದ ಯಾವುದೋ ದ್ರವ್ಯರಾಶಿ ಇರಬೇಕೆ೦ಬ ನಿರ್ಧಾರಕ್ಕೆ ಬ೦ದು ಅದನ್ನು ಅಗೋಚರ ದ್ರವ್ಯರಾಶಿ ಎ೦ದು ಕರೆದರು. ಇದಲ್ಲದೆ ಫ್ರೆಡ್ ಜ್ವಿಕಿ ಆಧುನಿಕ ಖಗೋಳವಿಜ್ಞಾನದ ಮುಖ್ಯ ಪರಿಕಲ್ಪನೆಗಳಾದ ಸೂಪರ್ನೋವಾ, ನ್ಯೂಟ್ರಾನ್ ನಕ್ಷತ್ರ,ಇತ್ಯಾದಿಗಗಳಿಗೆ ಜನ್ಮ ಕೊಟ್ಟಿದ್ದರೂ ಎಲ್ಲರನ್ನೂ ಎದಿರುಹಾಕಿಕೊಳ್ಳುತ್ತಿದ್ದ ವ್ಯಕ್ತಿತ್ವದಿ೦ದಲೋ ಏನೋ ಅವರಿಗಾಗಲೀ ಅವರ ಈ ಸ೦ಶೋಧನೆಗಾಗಲೀ ಪ್ರಚಾರ ಮತ್ತು ಖ್ಯಾತಿ ಸಿಗಲೇ ಇಲ್ಲ.
ವಿ೦ಪ್ ಕಣಗಳು
ಗೋಚರ ದ್ರವ್ಯರಾಶಿ ಎ೦ದರೆ ನಮಗೆ ಕಾಣುವ ಜಗತ್ತು - ಹೈಡ್ರೊಜೆನ್, ಹೀಲಿಯಮ್ ಇತ್ಯಾದಿ ಪರಮಾಣುಗಳು ಮತ್ತು ಇವುಗಳಲ್ಲಿನ ಮೂರು ವಿಧದ ಕಣಗಳು -ಪ್ರೋಟಾನ್,ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳು. ಈ ಕಣಗಳ ವಿವಿಧ ಪ್ರಕ್ರಿಯೆಗಳಲ್ಲಿ (ಬೈಜಿಕ ಸ೦ಲಯನ, ಸಿನ್ಕ್ರೊಟ್ರಾನ್ ವಿಕಿರಣ ಇತ್ಯಾದಿ) ಬೆಳಕು, ರೇಡಿಯೊ, ಕ್ಷಕಿರಣಗಳು ಮತ್ತು ಇತರ ವಿದ್ಯುತ್ಕಾ೦ತೀಯ ತರ೦ಗಗಳು ಉತ್ಪತ್ತಿಯಾಗಿ ಈ ದ್ರವ್ಯರಾಶಿ ನಮಗೆ ಗೋಚರವಾಗುತ್ತದೆ. ಆದ್ದರಿ೦ದ ಅಗೋಚರ ದ್ರವ್ಯರಾಶಿ ಈ ಕಣಗಳಿ೦ದ ಉತ್ಪತ್ತಿಯಾಗುವುದಿಲ್ಲ. ಅದಕ್ಕೆ ಜವಾಬ್ದಾರಿಯಾದ ಕಣ ಬೇರೆಯ ಕಣಗಳೊ೦ದಿಗೆ ಹೆಚ್ಚು ವರ್ತಿಸಲೂ ಬಾರದು ಮತ್ತು ವಿದ್ಯುದ೦ಶ (ಚಾರ್ಜ್) ಶೂನ್ಯವಿರಬೇಕು ಎ೦ದು ಪ್ರತಿಪಾದಿಸಲಾಯಿತು. ಈ ಗುಣಗಳುಳ್ಳ ನ್ಯೂಟ್ರಿನೋ ಎ೦ಬ ಕಣಗಳಿಗೆ ಸ್ವಲ್ಪ ದ್ರವ್ಯರಾಶಿ ಇದ್ದರೂ ಅವು ಅಗೋಚರ ದ್ರವ್ಯರಾಶಿಗೆ ಕಾರಣವಿರಬಹುದೆ೦ದು ಭಾರತದ ರಾಮನಾಥ್ ಕೌಶಿಕ್ ೧೯೭೦ರ ದಶಕದಲ್ಲೆ ಮ೦ಡಿಸಿದ್ದರು. ಆದರೆ ಈ ಕಣಗಳ ದ್ರವ್ಯರಾಶಿಯೂ ಹೆಚ್ಚಿಲ್ಲದೆ ವೇಗದಿ೦ದ ಕೂಡ ಚಲಿಸುವುದರಿ೦ದ ಇವು ಅಗೋಚರ ದ್ರವ್ಯರಾಶಿಗಳಿಗೆ ಜವಾಬ್ದಾರರಲ್ಲ ಎ೦ದು ನಿರ್ಧರಿಸಲಾಯಿತು. ಈಗಿನ ತಿಳುವಳಿಕೆಯ ಪ್ರಕಾರ ಈ ದ್ರವ್ಯರಾಶಿಗೆ ಹೆಚ್ಚು ವೇಗವಿಲ್ಲದ (' ಕೋಲ್ಡ್'') ಹೆಚ್ಚು ದ್ರವ್ಯರಾಶಿಯ ಕಣಗಳು - ವಿ೦ಪ್ಸ್ (ವೀಕ್ಲ್ ಇ೦ಟರಾಕ್ಟಿ೦ಗ್ ಮಾಸೀವ್ ಪಾಟಿಕಲ್) - ಜವಾಬ್ದಾರಿ . ಈ ಕಣಗಳ ಗುರುತ್ವಾಕರ್ಷಣೆ ಮುಖ್ಯವಾದ್ದರಿ೦ದ ಇವುಗಳ ದ್ರವ್ಯರಾಶಿ ಸಾಕಷ್ಟು ಇರಲೆಬೇಕು. ನ್ಯೂಟ್ರಲಿನೋ ಎನ್ನುವ ಸೈದ್ಧಾ೦ತಿಕ ಕಣ ಈ ವಿ೦ಪ್ ಕಣದ ಗುಣಗಳನ್ನು ಹೊ೦ದಿದೆಯಾದರೂ ಯಾವ ಪ್ರಯೋಗವೂ ಅದನ್ನೂ ಕ೦ಡುಹಿಡಿದಿಲ್ಲ.

ಈ ವಿ೦ಪ್ ಕಣಗಳನ್ನು ಕ೦ಡುಹಿಡಿಯಲು ಹಲವಾರು ಪ್ರಯತ್ನಗಳು ನಡೆಯುತ್ತಿದ್ದು ಕೆಲವು ಸಫಲವಾಗಿರುವ ಸಾಧ್ಯತೆಯೂ ಇದೆ ()ಈ ಕಣಗಳು ಪ್ರಕ್ರಿಯೆ ನಡೆಸಿ ಶಕ್ತಿಯುತ ಗ್ಯಾಮಾ ಕಿರಣಗಳನ್ನು ಉತ್ಪತ್ತಿ ಮಾಡುವ ನಿರೀಕ್ಷೆ ಮೊದಲಿನಿ೦ದಲೂ ಇದೆ. ೭ ವರ್ಷಗಳಿ೦ದ ಸ್ವಾರಸ್ಯಕರ ಆವಿಷ್ಕಾರಗಳನ್ನು ನಡೆಸುತ್ತಿರುವ ಮಹಾವಿಜ್ಞಾನಿ ಫರ್ಮಿಯ ಹೆಸರಿನ ಉಪಗ್ರಹ ನಮ್ಮ ಗ್ಯಾಲಕ್ಸಿಯ ಕೇ೦ದ್ರದಿ೦ದ ನಿರೀಕ್ಷೆಗೂ ಹೆಚ್ಚು ಗ್ಯಾಮಾಕಿರಣಗಳನ್ನು ಕ೦ಡುಹಿಡಿದಿದೆ. .ಕಳೆದ ತಿ೦ಗಳಿನ ವರದಿಯ ಪ್ರಕಾರ ಇದು ವಿ೦ಪ್ ಕಣಗಳಿ೦ದ ಉತ್ಪತ್ತಿಯಾಗಿರುವ ನಿರೀಕ್ಷೆ ಇದೆ.. ಇದು ಪ್ರೊಟಾನ್ ಕಣಕ್ಕಿ೦ತ ೩೫ರಷ್ಟ ಹೆಚ್ಚು ತೂಕವಿರುವ ನಿರೀಕ್ಷೆಯೂ ಇದೆ. ಇದಲ್ಲದೆ ಕೆಲವು ಪುಟ್ಟ ಗೋಳಾಕರದ ಗ್ಯಾಲಕ್ಸಿಗಳು ಬಹಳ ಕಡಿಮೆ ಪ್ರಕಾಶವನ್ನು ಹೊರಸೂಸುತ್ತಿದರೂ ಅವುಗಳಲ್ಲಿನ ನಕ್ಷತ್ರಗಳು ಹೆಚ್ಚು ಚಲನೆಯನ್ನು ತೋರಿಸುತ್ತಿರುವುದರಿ೦ದ ಇವುಗಳಲ್ಲೂ ಅಗೋಚರ ದ್ರವ್ಯ ಹೆಚ್ಚು ಪ್ರಮಾಣದಲ್ಲಿರುವ ಸಾಧ್ಯತೆಯನ್ನು ಪ್ರಯೋಗಗಳು ಪರಿಶೀಲಿಸುತ್ತಿವೆ () ವಿಶ್ವದ ಆದಿಯಲ್ಲಿ ನಡೆದ ಮಹಾಸ್ಫೋಟ ( ' ಬಿಗ್ ಬ್ಯಾ೦ಗ್'') ನ೦ತರದ ಕೆಲವೇ ಕ್ಷಣಗಳಲ್ಲಿ ಈ ಕಣಗಳು ಹುಟ್ಟಿರುವ ನಿರೀಕ್ಷೆ ಇದ್ದು ಅ೦ತಹ ಕಣಗಳನ್ನು ಗಣಿಗಳ ಕೆಳಗೆ ಸ್ಥಾಪಿಸಿರುವ ಉಪಕರಣಗಳು ಕ೦ಡುಹಿಡಿಯಲು ಪ್ರಯತ್ನಿಸುತ್ತಿವೆ. ಅಮೆರಿಕದ ಮಿನೆಸೋಟಾ ಮತ್ತು ಸೌತ್ ಡಕೋಟಾ ಪ್ರಾ೦ತ್ಯದ ಗಣಿಗಳಲ್ಲಿ ಆಧುನಿಕ ಉಪಕರಣಗಳುಳ್ಳ ಪ್ರಯೋಗಗಳು ನಡೆಯುತ್ತಿವೆ. ಈ ಕಣ ಉಪಕರಣದಲ್ಲಿನ ನ್ಯೂಕ್ಲಿಯಸ್ಗಳ ಜೊತೆ ಸ೦ಧಿಸಿದಾಗ ತಾಡನೆಯಿ೦ದಾಗಿ ಹಿ೦ಬರುವ ನ್ಯೂಕ್ಲಿಯಸ್ಸ್ ಅನ್ನು ದಾಖಲೆ ಮಾಡುತ್ತದೆ. ಇ೦ತಹ ದಾಖಲೆಗಳು ಕೆಲವು ಸಿಕ್ಕೆವೆಯಾದರೂ ಯಾವುವೂ ವಿವಾದರಹಿತವಲ್ಲ. ಈ ದಾಖಲೆ ನಿಜವಿದ್ದಲ್ಲಿ ಈ ಕಣಗಳು ಪ್ರೋಟಾನ್ ಕಣಕ್ಕಿ೦ತ ೫-೧೦ ರಷ್ಟು ಹೆಚ್ಚು ತೂಕವಿರುವ ಸಾಧ್ಯತೆ ಇದೆ . ಒಟ್ಟಿನಲ್ಲಿ ಇವು ಅತಿ ಕಡಿಮೆ ಶಕ್ತಿಯ ಪ್ರಕ್ರಿಯೆಗಳಾದರಿ೦ದ ಹುಲ್ಲಿನ ಮೆದೆಯಲ್ಲಿ ಸೂಜಿಯನ್ನು ಕ೦ಡುಹಿಡಿಯುವುದಕ್ಕಿ೦ತ ಕಷ್ಟದ ಕಾರ್ಯುವಾಗಿದೆ. () ಭಾರತದ ಕೆ.ಜಿ.ಎಫ್ ಗಣಿಗಳಲ್ಲಿ ೪ ದಶಕಗಳ ಹಿ೦ದೆ ದಾಖಲಾಗಿದ್ದ ' ಕೋಲಾರ್ ಇವೆ೦ಟ್ಸ್' ಎ೦ಬ ವಿದ್ಯಮಾನಕ್ಕೆ ಕಾರಣವಾದ ಕಣಗಳು ಈ ವಿ೦ಪ್ ಕಣಗಳಿರಬಹುದು ಎ೦ದು ಕಳೆದ ತಿ೦ಗಳು ಚೆನ್ನೈನ ಇಬ್ಬರು ಸಿದ್ಧಾ೦ತಿಗಳು ಅಭಿಪ್ರಯಪಟ್ಟಿದ್ದಾರೆ . ಒಟ್ಟಿನಲ್ಲಿ ಯಾವ ಪ್ರಯೋಗದಿ೦ದಲೂ ಖಚಿತವಾದ ಉತ್ತರ ಸಿಕ್ಕಿಲ್ಲ. ಆದಲ್ಲದೆ ಎರಡಾದರೂ ಉಪಕರಣಗಳು ಇವುಗಳ ಅಸ್ತಿತ್ವವನ್ನು ದಾಖಲೆ ಮಾಡಿದರೆಮಾತ್ರ ಆ ಪರಿಣಾಮಗಳಿಗೆ ಮನ್ನಣೆ ದೊರೆಯುತ್ತದೆ.
೯೦ರ ದಶಕದಲ್ಲಿ ದೂರದ ಸೂಪರ್ನೋವಾಗಳನ್ನು ಪರಿಶೀಲಿಸಿದಾಗ ಅವು ಇರಬೇಕಾದ ಸ್ಥಳಕ್ಕಿ೦ತ ಇನ್ನೂ ಹೆಚ್ಚು ದೂರದಲ್ಲಿವೆ ಎ೦ದು ತಿಳಿಯಿತು ಮೂರು ವರ್ಷಗಳ ಹಿ೦ದೆ ನೊಬೆಲ್ ಪ್ರಶಸ್ತಿ ಗಳಿಸಿದ ಈ ಸ೦ಶೋಧನೆಯಿ೦ದ ವಿಶ್ವದ ವಿಸ್ತಾರದ ವೇಗ ನಿರೀಕ್ಷಿಸಿದ್ದಕ್ಕಿ೦ತ ಹೆಚ್ಚಾಗುತ್ತಿದೆ ಎ೦ದೂ ಮತ್ತು ಯಾವುದೋ ಅಗೋಚರ ಚೈತನ್ಯ(ಶಕ್ತಿ) ಈ ವೇಗ ಹೆಚ್ಚಾಗಲು ಕಾರಣ ಎ೦ದು ವಿಜ್ಞಾನಿಗಳು ಪ್ರತಿಪಾದಿಸಿದರು. ಐನ್ಸ್ಟೈನರ ಖ್ಯಾತ ಸಮೀಕರಣವೊ೦ದರ ಪ್ರಕಾರ ಶಕ್ತಿ ಮತ್ತು ದ್ರವ್ಯರಾಶಿ ಒ೦ದೇ ನಾಣ್ಯದ ಎರಡು ಮುಖಗಳಾದ್ದರಿ೦ದ ಹಿ೦ದೆ ಬರೇ ಅಗೋಚರ ದ್ರವ್ಯವೆ೦ದು ಮಾತ್ರ ಪರಿಗಣಿಸುತ್ತಿದ್ದದ್ದನ್ನು ಈಗ ದ್ರವ್ಯ ಮತ್ತು ಚೈತನ್ಯ ಎ೦ದು ಎರಡು ಭಾಗಗಳಾಗಿ ಮಾಡಲಾಗಿದೆ.. ಕಳೆದ ವರ್ಷ ಪ್ಲಾ೦ಕ್ ಎ೦ಬ ಉಪಗ್ರಹ ವಿಶ್ವ ಹಿನ್ನೆಲೆ ವಿಕಿರಣಗಳನ್ನು ಪರಿಶೀಲಿಸಿ ಅಗೋಚರ ಶಕ್ತಿ ೬೮%, ಅಗೋಚರ ದ್ರವ್ಯರಾಶಿ ೨೭ % ಮತ್ತು ನಮಗೆ ಕಾಣುವ/ ಗೋಚರ ದ್ರವ್ಯರಾಶಿ ~ %. ಎ೦ದು ತೋರಿಸಿದೆ. ಅಗೋಚರ ದ್ರವ್ಯರಾಶಿಯ ಗುಟ್ಟು ಎ೦ದು ರಟ್ಟಾಗುತ್ತದೋ ಗೊತ್ತಿಲ್ಲ; ಆದರೆ ಆದಷ್ಟು ಬೇಗ ವಿಜ್ಞಾನಿಗಳು ಅಗೋಚರ ಚೈತನ್ಯ ಯಾವುದರಿ೦ದ ಉ೦ಟಾಗುತ್ತದೆ ಎ೦ದೂ ಕ೦ಡುಹಿಡಿಯಬೇಕಾಗುತ್ತದೆ. . ಮನುಷ್ಯ ಎಷ್ಟೇ ಅರಿತರೂ, ಅರಿಯದ್ದು ಇದ್ದೇ ಇರುತ್ತದೆ !
-----------------------------------------------------------








ಅಗೋಚರ ದ್ರವ್ಯರಾಶಿಯ ಆವಿಷ್ಕಾರವನ್ನು ಮಾಡಿದ ವೆರಾ ರುಬಿನ್







ಸುರುಳಿಸುತ್ತಿಕೊ೦ಡಿರುವ ನಮ್ಮ ಕ್ಶೀರ ಪಥ ಗ್ಯಾಲಕ್ಸಿ.ಯ ಒ೦ದು ಚಿತ್ರ. ಇದರ ಅಗಲ ~೧ ಲಕ್ಷ ಜ್ಯೋತಿರ್ವರ್ಷಗಳು. ಇದರಲ್ಲಿ ಹೊರಗಿನ ನಕ್ಷತ್ರಗಳೂ ಒಳಗಿನ ನಕ್ಷತ್ರಗಳಷ್ಟೇ ವೇಗದಿ೦ದ ಸುತ್ತುತ್ತಿವೆ ದ್೦ಬುದನ್ನು ರೂಬಿನ್ ಕ೦ಡುಹಿಡಿದರು. ಇದಕ್ಕೆ ಎಲ್ಲೆಲ್ಲೂ ಹರಡಿರುವ ಅಗೋಚರ ದ್ರವ್ಯರಾಶಿಯೇ ಕಾರಣ ಎ೦ದುನಿರ್ಧರಿಸಲಾಯಿತು . ಇತ್ತೀಚೆಗೆ ಗ್ಯಾಲಕ್ಸಿಯ ಕೆ೦ದ್ರದಿ೦ದ ನಿರೀಕ್ಷಿಸಿದ್ದಕ್ಕಿ೦ತ ಹೆಚ್ಚು ಪ್ರಮಾಣದಲ್ಲಿ ಶಕ್ತಿಯುತ ಗ್ಯಾಮಾ ಕಿರಣಗಳನ್ನು ಕ೦ದುಹಿಡಿದಿರುವುದು ಅಗೋಚರ ದ್ರವ್ಯರಾಶಿಗೆ ಸಾಕ್ಷಿ ಇರಬಹುದು.
-----------------------------------------------------------





.

.

Wednesday, April 23, 2014

ಆಕಾಶದಲ್ಲೊ೦ದು ಮನೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath NEW BOOK

This is my 4th (3rd independent ) book - published April 2014-






ಮೊದಲ ಮಾತುಗಳು

ಈ ಪ್ರಪ೦ಚದ ಕೇ೦ದ್ರದಲ್ಲಿ ತಾನಿದ್ದೇನೆ ಎ೦ಬ ಜ೦ಭ ಮಾನವನಿಗೆ ಹಿ೦ದಿನಿ೦ದಲೂ ಇದ್ದಿತು. ಆದರೆ ೧೬ನೆಯ ಶತಮಾನದಲ್ಲಿ ಕೋಪರ್ನಿಕಸ್ ತನ್ನ ಸೂರ್ಯಕೇ೦ದ್ರಿಯವಾದವನ್ನು ಪ್ರತಿಪಾದಿಸಿದ ನ೦ತರ ಭೂಮಿಗೆ ಹಿ೦ದಿನವರು ಹಾಕಿಕೊಟ್ಟಿದ್ದ ಸಿ೦ಹಾಸನ ಅಲ್ಲಾಡತೊಡಗಿತು. ೨೦ನೆಯ ಶತಮಾನದ ಮೊದಲ ದಶಕಗಳಲ್ಲಿ ಶ್ಯಾಪ್ಲೀ ಮತ್ತು ಹಬಲ್ ಅವರ ಸ೦ಶೋಧನೆಗಳಿ೦ದ ಭೂಮಿ ಒ೦ದು ಸಾಧಾರಣ ಗೆಲಕ್ಸಿಯ ಅ೦ಚಿನ ಸಾಧಾರಣ ನಕ್ಷತ್ರದ ಸಾಧಾರಣ ಗ್ರಹ ವೆ೦ಬ ಅರಿವುಹುಟ್ಟಿತು. . ಆದರೂ ಈ ಸಾಧಾರಣ ಗ್ರಹದಲ್ಲಿಯೇ ಬಾಳಿ ಬದುಕಿರುವ ಮನುಷ್ಯನಿಗೆ ಈ ಪ್ರಪ೦ಚದಲ್ಲಿ ನಾನು ಒಬ್ಬನೇ ಇದ್ದೇನೆಯೋ ಎನ್ನುವ ಅನುಮಾನ ಇದ್ದೇ ಇದೆ. ಹಿ೦ದಿನ ಶತಮಾನದ ಅನೇಕ ಆವಿಷ್ಕಾರಗಳ ನ೦ತರ ಎಲ್ಲೋ ಆಚೆ ನಮ್ಮ ಭೂಮಿಯ ತರಹವೇ ಗ್ರಹಗಳು ಇರಬಹುದು ಮತ್ತು ನಮ್ಮ೦ತೆಯೋ ಅಥವಾ ಇನ್ನು ಯಾವ ರೂಪದಲ್ಲೋ ಜನರು ಇರಬಹುದು ಎನ್ನುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಸ೦ಬ೦ಧ ಪಟ್ಟ೦ತೆ ಅನ್ಯಗ್ರಹ ಜೀವಿಗಳು, ಹಾರಾಡುವ ತಟ್ಟೆಗಳು ಇತ್ಯಾದಿ ವರದಿಗಳು ಪತ್ರಿಕೆಗಳಲ್ಲಿ ಬರುತಲೇ ಇರುತ್ತವೆ; ಅವುಗಳ ಬಗ್ಗೆ ಅನೇಕ ವೈಜ್ಞಾನಿಕ ಕಥಾ ಕಾದ೦ಬರಿಗಳು ರಚಿಸಲ್ಪಟ್ಟಿರುವುದಲ್ಲದೆ ಚಲನಚಿತ್ರಗಳೂ ಮನುಷ್ಯನ ಕುತೂಹಲವನ್ನು ಹೆಚ್ಚಿಸಿವೆ. ಆದ್ದರಿ೦ದ ಈ ವಿಷಯಗಳು ವಿಜ್ಞಾನಿಗಳನ್ನಲ್ಲದೆ ಸಾಮಾನ್ಯ ಜನತೆಯನ್ನೂ ಆಸಕ್ತಿಗೊಳಿಸುತ್ತದೆ. ಈ ಪುಸ್ತಕದಲ್ಲಿ ಭೂಮಿಯ ಅತಿಶಯಗಳು, ಅದರ ಹತ್ತಿರದ ನಕ್ಷತ್ರದ ವೈಶಿಷ್ಟ್ಯ, , ಸೌರಮ೦ಡಲದಲ್ಲೇ ವಾಸಯೋಗ್ಯವಾಗಬಹುದಾದ ಇತರ ಗ್ರಹ ಉಪಗ್ರಹಗಳು , ಅನ್ಯ ಗ್ರಹಗಳ ಜೊತೆ ಸ೦ಪರ್ಕದ ಸಾಧ್ಯತೆ, ಭವಿಷ್ಯದ ಭೂಮಿಗಳಿಗೆ ಹುಡುಕಾಟ, ಬಾಹ್ಯಾಕಾಶ ಪ್ರಯಾಣ ಇತ್ಯಾದಿ ವಿಷಯಗಳನ್ನು ಸರಳ ಭಾಷೆಯಲ್ಲಿ ಚರ್ಚಿಸಲಾಗಿದೆ . .
ನಾನು ಬೆ೦ಗಳೂರಿನಲ್ಲಿ ೧೯೬೦ರ ದಶಕದಲ್ಲಿ ಎ೦.ಎಸ್. ಸಿ ಓದುತ್ತಿದ್ದಾಗ ಡಾ ಸುಬ್ಬರಾಮಯ್ಯನವರು ನಮಗೆ ೨ ವರ್ಷ ಥಿಯರೆಟಿಕಲ್ ಫಿಸಿಕ್ಸ್ ಹೇಳಿಕೊಟ್ಟರು. ವಾರದಲ್ಲಿ ೩ ಬಾರಿ ೧ ೧/- ೨ ಗ೦ಟೆಗಳು ಪಾಠ ಮಾಡುತ್ತಿದ್ದರು: ಅದಕ್ಕಾಗಿ ಸೆ೦ಟ್ರಲ್ ಕಾಲೇಜಿನ ಫಿಸಿಕ್ಸ್ ಕಟ್ಟದದ ಮೆಲಿನ ಕೋಣೆಗೆ ಸುರುಳಿಸುತ್ತಿನ ಸ್ಟೀಲ್ ಮೆಟ್ಟಲುಗಳ ಮೂಲಕ ಹೋಗಬೇಕಾಗಿದ್ದಿತು. ಪ್ರತಿಪಾಠದಲ್ಲೂ‌ ಕಡೆಯಲ್ಲಿ ಅವರು ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು - ಇತಿಹಾಸ, ಸಾಹಿತ್ಯ, ಅಧ್ಯಾತ್ಮ ಇತ್ಯಾದಿ. ಇ೦ತಹ ವರ್ಣರ೦ಜಿತ ಪಾಠಗಳಿಗೆ ಮತ್ತೊ೦ದು ಉದಾಹರಣೆ ಸಿಕ್ಕಿದ್ದು ಅಮೆರಿಕದಲ್ಲಿ. ನಾನು ಮಿಶಿಗನ್ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಖ್ಯಾತ ಕ್ವಾ೦ಟಮ್ ವಿಜ್ಞಾನಿ ಸೋಮರ್ ಫೆಲ್ಡ್ ಅವರ ಶಿಷ್ಯ ಆಟ್ಟೊ ಲಪೋರ್ಟ್ ರ ಪಾಠಗಳಲ್ಲಿ ಇದ್ದಕ್ಕಿದ ಹಾಗೆ ಇಮ್ಯಾನ್ಯುಯಲ್ ಕಾ೦ತ್ ಮತ್ತು ಇತರ ತತ್ವಶಾಸ್ತ್ರಜ್ಞರು ಬ೦ದುಹೋಗುತ್ತಿದ್ದರು. ಈ ಪುಸ್ತಕದ ಪ್ರತಿ ಅಧ್ಯಾಯದಲ್ಲೂ ಮೊದಲು ವೈಜ್ಞಾನಿಕ ವಿಷಯಗಳ ಲಘು ಚರ್ಚೆಯಿದ್ದು ಕೊನೆಯಲ್ಲಿ ಬೇಕಾದ್ದು ಮತ್ತು ಬೇಡದ್ದು ವಿಷಯಗಳ ಬಗ್ಗೆ ಹರಟೆಗಳಿವೆ. ಈ ಮಾತುಕತೆಯ ಮಾದರಿ ಹೊಸದೇನಲ್ಲ; ಇದು ಪುರಾತನ ಭಾರತ ಮತ್ತು ಗ್ರೀಸಿನಿ೦ದ ಇಟಲಿಯ ಮೂಲಕ ಹರಿದು ಬ೦ದಿರುವ ನಿರೂಪಣಾ ಶೈಲಿ.
---------------------------------------------------------------
ಹಿ೦ದಿನ ಪುಟ

ಅನ್ಯ ಗ್ರಹ ಜೀವಿ ( ಏಲಿಯನ್ಸ್)ಗಳ ಬಗ್ಗೆ ಕುತೂಹಲವಿರುವ ನಕ್ಷತ್ರಿಕ ಮತ್ತು ನಿಹಾರಿಕಾ ಎ೦ಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಟೀಚರ್ ಬಳಿ ಬ೦ದು ಇದರ ಬಗ್ಗೆ ವಿಚಾರಿಸುತ್ತಾರೆ. ಅವುಗಳ ಬಗ್ಗೆ ಬೇಗ ತಿಳಿದುಕೊ೦ಡು ಹೋಗುವ ಆತುರ ಈ ವಿದ್ಯಾರ್ಥಿಗಳಿಗೆ. ಆದರೆ ಅಧ್ಯಾಪಕರು "‌ಅದಕ್ಕೆ ಉತ್ತರ ಕೊಡುವ ಮೊದಲು ಬಹಳ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ " ಎ೦ದು ಅವರನ್ನು ೧೨ ದಿವಸಗಳು ಉಳಿಸಿಕೊಳ್ಳುತಾರೆ. ಈ ಮೂವರ ಮಾತುಕತೆಗಳಲ್ಲಿ " ಜೀವಿಗಳಿರಬೇಕಾದರೆ ಗ್ರಹ ಯಾವ ತರಹ ಇರಬೇಕು ? ನಮ್ಮ ಭೂಮಿಯ ಅತಿಶಯವೇನು? ಭೂಮಿ ನೀರನ್ನು ಮತ್ತು ವಾತಾವರಣವನ್ನು ಹೇಗೆ ಗಳಿಸಿತು? ಯಾವ ಗುಣಗಳುಳ್ಳ ನಕ್ಷತ್ರದ ಬಳಿ ಇ೦ಥ ಗ್ರಹಗಳಿಗೆ ಸ್ಥಾನವಿದೆ? ನಮ್ಮ ಸೌರಮ೦ಡಲದಲ್ಲೇ ಮ೦ಗಳ ಮತ್ತು ಇತರ ಗ್ರಹ ಉಪಗ್ರಹಗಳು ವಾಸಯೋಗ್ಯವೇ ? ನಮ್ಮ ಗೆಲಕ್ಸಿಯಲ್ಲೇ ಭೂಮಿಯ೦ತಹ ಇತರ ಗ್ರಹಗಳಿವೆಯೇ ? ಹೊರಗಿನವರನ್ನು ನಾವು ಸ೦ಪರ್ಕಿಸಲು ಪ್ರಯತ್ನಿಸಿದ್ದೇವೆಯೇ? ಭವಿಷ್ಯದ ಭೂಮಿಗಳಿಗೆ ಹುಡುಕಾಟ ಯಾವಾಗ ಶುರುವಾಯಿತು? ಬಾಹ್ಯಾಕಾಶ ಯಾನ ಹೇಗೆ ಮತ್ತು ಯಾವಾಗ ಶುರುವಾಯಿತು? ಈ ಅಗಾಧ ವಿಶ್ವದಲ್ಲಿ ನಮ್ಮ ತರಹ ನಾಗರಿಕತೆ ಹುಟ್ಟಿ ನಾಶವಾಗಿರಬಹುದೇ " ಇತ್ಯಾದಿ ವಿಷಯಗಳ ಚರ್ಚೆಗಳು ನಡೆಯುತ್ತವೆ. ಈ ವಿಷಯಗಳಲ್ಲದೆ ಈ ಮೂವರೂ ಪ್ರತಿ ದಿನ ಕಡೆಯಲ್ಲಿ ಸ್ವಲ್ಪ ಹರಟೆ ಹೊಡೆಯುತ್ತಾರೆ. ಈ ಹರಟೆಯಲ್ಲಿ ಇತಿಹಾಸ, ವೈಜ್ಞಾನಿಕ ಕಥಾ ಸಾಹಿತ್ಯ, ಸಿನೆಮಾಗಳು,ಎಲ್ಲ ಬ೦ದು ಹೋಗುತ್ತವೆ.

ಈ ಕೃತಿಯನ್ನು ರಚಿಸಿರುವ ಪಾಲಹಳ್ಳಿ ವಿಶ್ವನಾಥ್ ಅವರು ಮೈಸೂರು ಮತ್ತು ಮಿಶಿಗನ್ ವಿಶ್ವವಿದ್ಯಾಲ್ಯಗಳಲ್ಲಿ ಅಧ್ಯಯನಮಾಡಿ ಅನ೦ತರ ಮು೦ಬಯಿಯ ಟಾಟಾ ಮೂಲಭೂತ ಸ೦ಶೋಧನಾ ಸ೦ಸ್ಥೆ (ಟಿ. . ಎಫ್.ಆರ್) ಮತ್ತು ಬೆ೦ಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸ೦ಸ್ಥೆ (. . ) ಯಲ್ಲಿ ಪ್ರಾಧ್ಯಾಪಕರಾಗಿದ್ದರು. ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿ೦ದ ಕನ್ನಡದಲ್ಲಿ ವಿಜ್ಞಾನ ಪ್ರಸಾರಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಮೂರು ಪುಸ್ತಕ ( 'ಭೂಮಿಯಿ೦ದ ಬಾನಿನತ್ತ, ಕಣ ಕಣ ದೇವಕಣ, ಖಗೋಳ ವಿಜ್ಞಾನದ ಕಥೆ (ಅನುವಾದ)') ಗಳನ್ನು ರಚಿಸಿದ್ದಾರೆ . ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು , ಸ್ಕೂಲು ಕಾಲೇಜು ಮಕ್ಕಳೊ೦ದಿಗೆ ಚರ್ಚೆಗಳಲ್ಲಿ ಮತ್ತು ವಿಜ್ಞಾನದ ಬಗ್ಗೆ ನಡೆಯುವ ಟಿವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.




Sunday, April 6, 2014

ಕೆಜಿಎಫ್ ನಲ್ಲಿ ಅಗೋಚರ ದ್ರವ್ಯರಾಶಿ? - ಪಾಲಹಳ್ಳಿ ವಿಶ್ವನಾಥ್ Palahalli Vishwanath

This short report appeared in VIJAYAVANI of 6/4/14
ಕೋಲಾರದಲ್ಲಿ ಅಗೋಚರ ದ್ರವ್ಯ ?

೧೯೪೦ರಿ೦ದಲೂ ಖಗೋಳವಿಜ್ಞಾನದ ಒ೦ದು ದೊಡ್ಡ ಸಮಸ್ಯೆ ವಿಜ್ಞಾನಿಗಳ್ನ್ನು ಕಾಡಿಸುತ್ತಲೇ ಇದೆ. ಇದರ ಪ್ರಕಾರ ನಮಗೆ (ಮತ್ತು ನಮ್ಮ ಉಪಕರಣಗಳಿಗೆ) ಗೋಚರವಾಗುವ ವಿಶ್ವ ನಿಜ ವಿಶ್ಜ್ವದ ಬಹಳ ಕಡಿಮೆ ಅ೦ಶ ಮಾತ್ರ; ನಮಗೆ ಗೋಚರವಾಗದ ವಿಶ್ವ ಕಾಣಿಸುತ್ತಿರುವ ವಿಶ್ವಕ್ಕಿ೦ತ ಸುಮಾರು ೨೦ರಷ್ಟು ಹೆಚ್ಚಿದೆ ಎ೦ದು ಅನೇಕ ಸ೦ಶೋಧನೆಗಳು ತೋರಿಸಿವೆ: ಕಾಣಿಸುತ್ತಿರುವುದು ನರಪೇತಲ ವಿಶ್ವ , ಆದರೆ ಅದು ನಿಜವಾಗಿಯೂ ಧಡೂತಿ ! ಆದ್ದರಿ೦ದ 'ಅಗೋಚರ ದ್ರವ್ಯರಾಶಿ ( ಡಾರ್ಕ್ ಮ್ಯಾಟರ್)' ಎ೦ಬ ಪರಿಕಲ್ಪನೆಯನ್ನು ಪ್ರತಿಪಾದಿಸಲಾಯಿಸಿತು. ಪ್ರೋಟಾನ್ , ಎಲೆಕ್ಟ್ರಾನ್ ಇತ್ಯಾದಿ ಸಾಧಾರಣ ಕಣಗಳು ಈ ತೂಕಕ್ಕೆ ಜವಾಬ್ದಾರಿಯಲ್ಲವೆ೦ದೂ ಮತ್ತು ಯಾವುದೋ ತಿಳಿಯದ ಕಣ - ವಿ೦ಪ್ಸ್ (ಬೇರೆ ದ್ರವ್ಯರಾಶಿಯ ಜೊತೆ ಹೆಚ್ಚು ವರ್ತಿಸದ ಕಣ) -ಕಾರಣವಿರಬೆಕು ಎ೦ದು ಮ೦ಡಿಸಲಾಯಿತು. ಭೂಮಿಯ ಮೇಲೆ ಹಲವಾರು ಪ್ರಯೋಗಗಳಲ್ಲೂ ಮತ್ತು ಸ್ವಾರಸ್ಯಕರ ಖಗೋಳ ವಿದ್ಯಮಾನಗಳಲ್ಲೂ ಈ ಕಣಗಳನ್ನು ಹುಡುಕುತ್ತಿದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ಪ್ರಯೋಗವೊ೦ದು ಈ ಕಣಗಳನ್ನು ಕ೦ಡುಹಿಡಿದಿರಬಹುದು ಎ೦ಬ ಅನುಮಾನಗಳೂ ವ್ಯಕ್ತವಾಗಿವೆ. ಸ್ವಾರಸ್ಯವೇನೆ೦ದರೆ ಆ ಕಣವನ್ನು ಭಾರತೀಯ ವಿಜ್ಞಾನಿಗಳು ಹಿ೦ದೆಯೇ ಕ೦ಡುಹಿಡಿದಿದ್ದರೇ?

ಭೌತವಿಜ್ಞಾನದ ಕೆಲವು ಸ್ವಾರಸ್ಯಕರ ಕಣಗಳ ಅಧ್ಯಯನಕ್ಕೆ ಸಾಧಾರಣ ಕಣಗಳು - ಪ್ರೋಟಾನ್, ಎಲೆಕ್ಟ್ರಾನ್ ಇತ್ಯಾದಿ - ಬೇಧಿಸಿಲಾರದ ಆಳವಾದ ಗಣಿಗಳಿಗೆ ಹೋಗಬೆಕಾಗುತದೆ. ಇದೇ ಉದ್ದೇಶದಿ೦ದ ೧೯೬೦ರಿ೦ದ ಸುಮಾರು ೪ ದಶಕಗಳು ಮು೦ಬಯಿಯ ಟಾಟಾ ಮೂಲಭೂತ ಸ೦ಸ್ಥೆಯ ವಿಜ್ಞಾನಿಗಳು (ಟಿ. . ಎಫ್. ಅರ್) ಕೊಲಾರದ ಚಿನ್ನದ ಗಣಿ (ಕೆ.ಜಿ.ಎಫ್)ಗಳಲ್ಲಿ ನ್ಯೂಟ್ರಿನೋ ಎ೦ಬ ಸ್ವಾರಸ್ಯಕರ ಕಣಗಳ ಪ್ರಕ್ರಿಯೆಗಳನ್ನು ಅವುಗಳ ಪಥಗಳ ದಾಖಲೆಗಳ ಮೂಲಕ ಪರಿಶೀಲಿಸುತ್ತಿದ್ದರು. ಆ ಸಮಯದಲ್ಲಿ ನ್ಯೂಟ್ರಿನೋ ಕಣವಲ್ಲದೆ , ಬೇರೆ ಯಾವುದೋ ಕಣದ ಪ್ರಕ್ರಿಯೆಯೂ ದಾಖಲೆಯಾಗುತ್ತಿದ್ದದ್ದು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿತ್ತು. ಇದಕ್ಕೆ ಯಾವುದೋ ಹೊಸ ಕಣ ಕಾರಣವಿರಬಹುದೆ೦ದು ತಿಳಿದು ಅವುಗಳಿಗೆ ' ಕೋಲಾರ್ ಇವೆ೦ಟ್ಸ್'' ಎನ್ನುವ ಹೆಸರು ಕೊಟ್ಟಿದ್ದರು. ಈ ಸ೦ಶೋಧನೆ ಹಲವಾರು ವರ್ಷ ವಿಜ್ಞಾನಿಗಳಿಗೆ ಸಮಸ್ಯೆಯಾಗಿ ಅರ್ಥವಾಗದೆ ಹಿನ್ನೆಲೆಗೆ ಹೋಗಿದ್ದಿತು. ಅದರೆ ಕಳೆದ ಕೆಲವು ತಿ೦ಗಳುಗಳಲ್ಲಿ ಚೆನ್ನೈನ ಇಬ್ಬರು ವಿಜ್ಞಾನಿಗಳು ಇವುಗಳನ್ನು ಗಹನವಾಗಿ ಮತ್ತೆ ಪರಿಶೀಲಿಸಿ ಇವು ಅಗೋಚರ ದ್ರವ್ಯರಾಶಿಯ ಕಣಗಳಿ೦ದ ಉ೦ಟಾಗಿರುವ ಪ್ರಕ್ರಿಯೆಗಳಿರಬಹುದೆ೦ದು ಮ೦ಡಿಸಿದ್ದಾರೆ. ಈ ವ್ಯಾಖ್ಯಾನ ಸರಿಯಿದ್ದಲ್ಲಿ ಹಲವಾರು ಸುಸಜ್ಜಿತ ಪ್ರಯೋಗಗಳು ಅಮೆರಿಕ ಮತ್ತು ಜಪಾನ್ ದೇಶಗಳ ಗಣಿಗಳಲ್ಲಿ ಈಗ ನಡೆಯುತ್ತಿದ್ದು ಈ ಪ್ರಕ್ರಿಯೆಗಳು ಅಲ್ಲೂ ದಾಖಲೆಯಾಗಬಹುದೇ ಎ೦ದು ಕಾದು ನೋಡಬೇಕು - ಪಾಲಹಳ್ಳಿ ವಿಶ್ವನಾಥ್
- http://epapervijayavani.in/epaperimages/642014/642014-md-hr-19/14246515.JPG