ವಿಭವ - ವಿಜ್ಞಾನ ಪತ್ರಿಕೆಯಲ್ಲಿ ೨೦೧೮ ಮತು ೨೦೧೯
ಸೃಷ್ಟಿವಿಜ್ಞಾನ - ನಡೆದು ಬಂದ ದಾರಿ
ಪಾಲಹಳ್ಳಿ ವಿಶ್ವನಾಥ್
( ವಿಜ್ಞಾನ ಬೆಳೆಯುತ್ತ ಮಾನವನಿಗೆ ತನ್ನ ಮತ್ತು ಭೂಮಿಯ ಮಿತಿಗಳೂ ಅರಿವಾದವು. (ಅ) ಕೋಪರ್ನಿಕಸ್ ನ ಸೂರ್ಯಕೇಂದ್ರೀಯವಾದ (ಆ) ೨೦ನೆಯ ಶತಮಾನದ ಎರಡನೆಯ ದಶಕದಲ್ಲಿ ಹ್ಯಾರ್ಲೊ ಶ್ಯಾಪ್ಲೀಯ ಸಂಶೋಧನೆಗಳೊಂದಿಗೆ ಸೂರ್ಯ ಈ ಕ್ಷೀರಪಥ ಗ್ಯಾಲಕ್ಸಿಯ ಅಂಚಿನ ಸಾಮಾನ್ಯ ನಕ್ಷತ್ರ ಎಂಬ ಅರಿವು (ಇ) ಅನಂತರ ಕೆಲವೇ ವರ್ಷಗಳಲ್ಲಿ ಎಡ್ವಿನ್ ಹಬಲ್ ಮತ್ತು ಸಂಗಡಿಗರಿಂದ ನಮ್ಮ ಗ್ಯಾಲಕ್ಸಿಯೂ ಒಂದು ಸಾಮಾನ್ಯ ಗ್ಯಾಲಕ್ಸಿ ಎಂಬ ಅರಿವು . ಅಂತೂ ಮನುಷ್ಯ ವಿಶ್ವದ ಸಾಮಾನ್ಯ ಗ್ಯಾಲಕ್ಸಿಯ ಸಾಮಾನ್ಯ ತಾರೆಯೊಂದರ ಗ್ರಹವೊಂದರ ನಿವಾಸಿ ಎಂದಾಯಿತು.. ಆ ಸಮಯದಲ್ಲಿಯೇ ವಿಶ್ವ ವಿಸ್ತಾರದ ಪರಿಕಲ್ಪನೆಯೊಂದಿಗೆ ಮಹಾಸ್ಫೋಟ ಸಿದ್ಧಾಂತವೂ ಜನ್ಮ ತಾಳಿತು. ೧೯೬೦ರ ದಶಕದಲ್ಲಿ ವಿಶ್ವ ವಿಕಿರಣದ ಆನ್ವೇಷಣೆಯೊಂದಿಗೆ ಅದಕ್ಕೆ ಪ್ರಬಲ ಸಾಕ್ಶಿಯೂ ದೊರಕಿತು. ನಿಖರ ಪ್ರಯೋಗಗಳಿಂದ ವಿಶ್ವ ೧೩.೭ ಬಿಲಿಯ ವರ್ಷ್ಗಳ ಹಿಂದೆ ಹುಟ್ಟಿತು ಎಂದು ತಿಳಿಯಿತು. ಮಹಾಸ್ಫೋಟ ಸಿದ್ಧಾಂತದಲ್ಲಿ ಪ್ರಗತಿಗಳು ನಡೆಯುತ್ತಲೇ ಇದ್ದರೂ ಆ ' ಮೊದಲ ಕ್ಷಣ ' ದ ಬಗ್ಗೆ ಇನ್ನೂ ವಾದ ವಿವಾದಗಳು ಇದ್ದೇ ಇವೆ)
(೧) ಹಿಂದಿನವರ ವಿಶ್ವ :
ಪ್ರಕೃತಿಯ ವಿದ್ಯಮಾನಗಳನ್ನು ವಿಜ್ಞಾನದ ಸಹಾಯದಿಂದ ಅರ್ಥಮಾಡಿಕೊಳ್ಳಬಹುದೆಂಬುದು ಗ್ರೀಕ್ ಚಿಂತನೆಯ ಹೆಗ್ಗಳಿಕೆಯಾಗಿದ್ದು ಅಲ್ಲಿಯ ವಿದ್ವಾಂಸರು ವೈಜ್ಞಾನಿಕ ಮನೊಧರ್ಮದ ಅವಶ್ಯಕತೆಯನ್ನು ಪ್ರತಿಪಾದಿಸಿದರು . ಗ್ರೀಕರಲ್ಲಿ ಖ್ಯಾತರಾದವರು ಥಾಲೆಸ್ ( ಕ್ರಿಪೂ ೬೨೪-೫೪೬), ಗಣಿತ್ಜ್ ಪೈಥಾಗರಸ್ (ಕ್ರಿಪೂ ೫೭೦-೪೯೫), ತತ್ವಶಾಸ್ತ್ರಜ್ಞ. ಪ್ಲೇಟೋ (ಕ್ರಿಪೂ ೪೨೮-೩೪೮), ಪ್ಲೇಟೋವಿನ ಶಿಷ್ಯ ಸಕಲ್ ವಿದ್ಯಾ ಪಾರಂಗತ ಅರಿಸ್ಟಾಟಲ್ ( ಕ್ರಿಪೂ ೩೮೩- ೩೨೨). ಗ್ರಹಗಳ ಚಲನೆ ಅಡ್ಡಾದಿಡ್ಡಿ ಎಂದು ಕಂಡುಬಂದದ್ದರಿಂದ ಗ್ರೀಕರು ಅವುಗಳನ್ನು ' ಪ್ಲಾನೆಟ್ಸ್ ' (ಅಲೆಮಾರಿಗಳು) ಎಂದು ಕರೆದರು. ಉಷೆಯಲ್ಲಿ ಆಕಾಶದಲ್ಲಿ ಅವತರಿಸುವ ಪ್ರಕಾಶಮಾನವಾದ ಮತ್ತು ಸಂಜೆಯ ಅಷ್ಟೇ ಪ್ರಕಾಶಮಾನವಾದ ಗ್ರಹಗಳೆರಡೂ ಒಂದೇ ಎಂದು ಪರಿಗಣಿಸಿ ಅದಕ್ಕೆ ಶುಕ್ರನೆಂಬ ಹೆಸರು ಕೊಟ್ಟವನು ಪೈಥಾಗರಸ್; ಭೂಮಿ ಒಂದು ಗೋಳವೆಂದು ಪ್ರತಿಪಾದಿಸಿದವನೂ ಅವನೇ. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯ ನೆರಳು ವೃತ್ತಾಕಾರವಿರುವುದನ್ನು ಭೂಮಿಯ ಗೋಳದ ಆಕಾರಕ್ಕೆ ಸಾಕ್ಷಿ ಎಂದು ಅರಿಸ್ಟಾಟಲ್ ಪ್ರತಿಪಾದಿಸಿದನು.
ವೃತ್ತ ಮತ್ತು ಗೋಳಗಳನ್ನು ಸುಂದರ ಎಂದು ಪ್ಲೇಟೋ ಮತ್ತು ಇತರರು ಗಣಿಸಿದ್ದು ಅದೇ ಶಾಲೆಗೆ ಸೇರಿದ್ದು ಗಣಿತದಲ್ಲಿ ಪರಿಣಿತಿ ಗಣಿಸಿದ್ದ ಯುಡೋಕ್ಸ್ಕಸ್ ಗ್ರಹಗಳ ಚಲನೆಗಳಿಗೆ ಮೊತ್ತ ಮೊದಲ ಮಾದರಿಯನ್ನು ಕೊಟ್ಟನು. ಭೂಮಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ವಿವಿಧ ದೂರಗಳಲ್ಲಿ ಅನೇಕ ಪಾರದರ್ಶಕ ಗೋಳಗಳಿದ್ದು , ಇತರ ಎಲ್ಲ ಆಕಾಶಕಾಯಗಳು ಆ ಗೋಳಗಳ ಮೇಲೆ ಕೇಂದ್ರವನ್ನು ಸುತ್ತುತ್ತವೆ.
ಯುಡೋಕ್ಸಸ್ ನ ಮಾದರಿಯಲ್ಲಿ ೨೭ ಗೋಳಗಳಿದ್ದವು . ಅರಿಸ್ಟಾಟಲ್ ಗೀಕರ ಈ ಚಿಂತನೆಗಳನ್ನೆಲ್ಲಾ ಕ್ರಮಬದ್ಧವಾಗಿ ಬರೆದಿಟ್ಟನು.. ಆನಂತರ ಈ ಮಾದರಿಯಿಂದ ವೀಕ್ಷಣೆಗಳಲ್ಲಿ ವ್ಯತ್ಯಾಸಗಳು ಕಾಣುತ್ತಿದರಿಂದ ಅಲೆಗ್ಸಾಂಡ್ರಿಯ ನಗರದಲ್ಲಿ ಕ್ರಿ.ಶ.೨ನೆಯ ಶತಮಾನದಲ್ಲಿದ್ದ ಕ್ಲಾಡಿಯಸ್ ಟಾಲೆಮಿ (ಕ್ರಿ.ಶ. ೯೦-೧೬೮) ಎಂಬ ಖಗೋಳಜ್ಞ ಗ್ರೀಕರ ಭೂಕೇಂದ್ರಮಾದರಿಯನ್ನು ತಿದ್ದಿ ಗೋಳಗಳ ಸಂ ಖ್ಯೆಯನ್ನು ಹೆಚ್ಚುಮಾಡಿ ಉಪವೃತ್ತಗಳನ್ನು ಸೇರಿಸಿದನು. ಇದರಿಂದ ಈ ಮಾದರಿ ಬಹಳ ಜಟಿಲವಾದರೂ ಅರಿಸ್ಟಾಟಲ್/ಟಾಲೆಮಿ ಭೂಕೇಂದ್ರೀಯವಾದವೆಂದು ಪ್ರಸಿದ್ಧಿ ಯಾಗಿದ್ದು ಕ್ರಿ.ಶ.೧೬ನೆಯ ಶತಮಾನದ ತನಕ ಉಪಯೋಗದಲ್ಲಿದ್ದಿತು . ಅನೇಕರು ಭೂಕೇಂದ್ರಮಾದರಿಯನ್ನು ಒಪ್ಪಿಕೊಂಡಿದ್ದರೂ ಹಲವರು ಅದನ್ನು ನಿರಾಕರಿಸಿ ಸೂರ್ಯಕೇಂದ್ರೀಯವಾದವನ್ನು ಪ್ರತಿಪಾದಿಸಿದ್ದು ಅವರಲ್ಲಿ ಮುಖ್ಯವಾದವನು ಕ್ರಿ.ಪೂ ೩ನೆಯ ಶತಮಾನದ ಸಮೋಸ್ ನಿವಾಸಿ ಅರಿಸ್ಟಾರ್ಕಸ್.
-----------------------------------------------------------
ಚಿತ್ರ ೧ : ಗ್ರೀಕರು ಪ್ರತಿಪಾದಿಸಿದ್ದ ವಿಶ್ವದ ಮಾದರಿ. ಭೂಮಿ ಮಧ್ಯದಲ್ಲಿದ್ದು ಬೇರೆ ಎಲ್ಲ ಆಕಾಶಕಾಯುಗಳು ವಿವಿಧ ದೂರಗಳಲ್ಲಿ ಪಾರದರ್ಶಕ ಗೋಳಗಳ ಮೇಲೆ ಚಲಿಸುತ್ತವೆ. ಇದನ್ನು ಮೊದಲು ಪ್ರತಿಪಾದಿಸಿದವನು ಯುಡೊಕ್ಸಸ್ ; ಅನಂತರ ಅರಿಸ್ಟಾಟಲ್, ಟಾಲೆಮಿ ಮುಂತಾದವರು ಇದನ್ನು ಸುಧಾರಿಸಿದರು ಚಿತ್ರ ೨ ;ಅರಿಸ್ಟಾಟಲ್ (ಕ್ರಿ.ಪೂ ೩೮೪-೩೨೨)
--------------------------------------------------------
ಗ್ರೀಕರಲ್ಲಿ ಖಗೋಳ ಇರುವಹಾಗೇ ಸಂಪೂರ್ಣವಾಗಿದೆಯೆಂದೂ ಮತ್ತು ನಕ್ಷತ್ರಗಳು ದೂರದಲ್ಲಿ ಎಲ್ಲೋ ಆಚೆ ಭೂಮಿಯನ್ನು ಸುತ್ತುತ್ತಿವೆ ಎಂಬ ನಂಬಿಕೆ ಇದ್ದಿತು. ಆದ್ದರಿಂದ ಕಾಣಿಸುವ ನಕ್ಷತ್ರಗಳನ್ನು ಬಿಟ್ಟು ಬೇರೆ ಆಕಾಶಕಾಯಗಳು ಇರುವ ಸಂಭವವನ್ನೂ ಅವರು ನಿರಾಕರಿಸಿದ್ದರು. ಆದ್ದರಿಂದ ಆಗಾಗ್ಗೆ ಆಕಾಶದಲ್ಲಿ
ಅವತರಿಸುತ್ತಿದ್ದ ಸೂಪರ್ನೋವಾ ವಿದ್ಯಮಾನಗಳ ಮಹತ್ವವನ್ನು ಟೈಕೊಬ್ರಾಹೆಯ ತನಕ ಪಶ್ಚಿಮದಲ್ಲಿ ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಆಲ್ಲದೆ ಧೂಮಕೇತುಗಳು ಕೂಡ ಭೂಮಿಯ ವಾತಾವರಣದಲ್ಲೇ ನಡೆಯುವ ವಿದ್ಯಮಾನ ಎಂದು ಅವರು ತಿಳಿದಿದ್ದರು. ಇದಲ್ಲದೆ ಅರಿಸ್ಟಾಟಲ್ ಮತ್ತು ಇತರ ಗ್ರೀಕರಿಗೆ ಆಕಾಶಕಾಯಗಳ ಚಲನೆಗಳಿಗೂ ಭೂಮಿಯ ಮೇಲಿನ ವಿದ್ಯಮಾನಗಳಿಗೂ ಬೇರೆ ಬೇರೆ ನಿಯಮಗಳಿರಬೇಕು ಎಂಬ ಅಭಿಪ್ರಾಯವಿದ್ದಿತು . .
ಈ ವಿಷಯದಲ್ಲಿ ಕ್ರಿ.ಶ ೬ನೆ ಶತಮಾನದ ಭಾರತದ ಆರ್ಯಭಟನ ಕೊಡುಗೆ ಅಪಾರ ಮತ್ತು ವಿಜ್ಞಾನದ ಚರಿತ್ರೆಯಲ್ಲಿ ಇದು ಇನ್ನೂ ಬೇರೂರದಿರುವುದು ದುರಂತ . ಅವನು ಭೂಮಿ ಗುಂಡಗಿದೆ ಎಂದು ಒತ್ತಿ ಹೇಳಿ ಭೂಮಿ ತನ್ನ ಅಕ್ಷದ ಸುತ್ತ ತಿರುಗುವುದನ್ನು ( ಭ್ರಮಣೆ) ಪ್ರತಿಪಾದಿಸಿದನು . ಇದು ಕ್ರಾಂತಿಕಾರಿಕ ಪರಿಕಲ್ಪನೆ. ಭ್ರಮಣದ ಅವಧಿಯನ್ನೂ ಆರ್ಯಭಟ ೨೩:೫೬;೪.೧ ಗಂಟೆಗಳು ಎಂದು ದಾಖಲಿಸಿದ್ದು ಅದು ಇಂದು ತಿಳಿದಿರುವ ಅವಧಿಗೆ ಬಹಳ ಹತ್ತಿರವಿದೆ. ಆದರೆ ಅವನು ಸೂರ್ಯಕೇಂದ್ರೀಯ ಮಾದರಿಯ ನ್ನೂ ಪ್ರತಿಪಾದಿಸಿದ್ದ ಎಂಬ ಹೇಳಿಕೆಗಳಿದ್ದರೂ ಅದಕ್ಕೆ ಸರಿಯಾದ ಪುರಾವೆಯಿಲ್ಲ. ಆರ್ಯಭಟನ ನಂತರ ಬಂದ ಮಹಾ ಗಣಿತಜ್ಞ ಬ್ರಹ್ಮಗುಪ್ತ ಆರ್ಯಭಟನ ಸಿದ್ಧಾಂತವನ್ನು ಒಪ್ಪಲಿಲ್ಲ . ಕಾರಣಗಳೆ ಏನೇ ಇರಲಿ, ಆರ್ಯಭಟನ ಸಿದ್ಧಾಂತಕ್ಕೆ ಪ್ರಚಾರ ಸಿಗದೆ ಅದು ಪಶ್ಚಿಮವನ್ನು ಮುಟ್ಟಲಿಲ್ಲ. ಹಲವಾರು ಶತಮಾನಗಳ ನಂತರ - ೧೫-೧೬ ಶತಮಾನದಲ್ಲಿ - ಕೇರಳದಲ್ಲಿ ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರವನ್ನು ಗಹನವಾಗಿ ಅಧ್ಯಯನ ಮಾಡುತ್ತಿದ್ದವರು ಇದ್ದರು. ~೧೫೦೦ರಲ್ಲಿ ನೀಲಕಂಠ ಸೋಮಯಾಜಿ ಎಂಬ ವಿದ್ವಾಂಸರು ಆರ್ಯಭಟನ ಸಿದ್ಧಾಂತಗಳನ್ನು ಮತ್ತೆ ಪರಿಷ್ಕರಣೆ ಮಾಡಿದ್ದು ಭೂಕೇಂದ್ರೀಯ ಮಾದರಿಯನ್ನು ತಿರಸ್ಕರಿಸಿ ಅರ್ಧ ಸೌರಕೇಂದ್ರೀಯ ಮಾದರಿಯನ್ನು ಪ್ರತಿಪಾದಿಸಿದ್ದರು. ಇದು ಸುಮರು ನೂರುವರ್ಷಗಳ ನಂತರ ಟೈಕೊ ಬ್ರಾಹೆ ಪ್ರತಿಪಾದಿಸಿದ ಮಾದರಿಯ ತರಹವೇ ಇದ್ದಿತು
೨. ನವೋದಯ ಮತ್ತು ಆನಂತರ
ಭೂಕೇದ್ರಮಾದರಿಯಲ್ಲಿ ಗ್ರಹಗಳ ವಕ್ರಗತಿ (ಹಠಾತ್ತನೆ ಪಥ ಬದಲಾಗಿ ಹಿಂದೆ ಹೋಗುವಂತೆ ಕಾಣುವುದು ) ಯನ್ನು ಅರ್ಥಮಾಡಿಕ್ಕೊಳ್ಳಲು ಆಗುತ್ತಿರಲಿಲ್ಲ. ಇದನ್ನು ಸರಿಪಡಿಸಲು ೧೬ನೆಯ ಶತಮಾನದಲ್ಲಿ ಪೋಲೆಂಡಿನ ನಿಕೊಲಾಸ್ ಕೋಪರ್ನಿಕಸ್ ತನ್ನ ಸೂರ್ಯಕೇಂದ್ರಮಾದರಿಯನ್ನು ಪ್ರತಿಪಾದಿಸಿದನು. ಇದರಲ್ಲಿ ಸೂರ್ಯ ಪ್ರಪಂಚದ ಕೇಂದ್ರದಲ್ಲಿದ್ದು ಎಲ್ಲ ಗ್ರಹಗಳು ಸೂರ್ಯನನ್ನು ವೃತ್ತಾಕಾರದ ಕಕ್ಷೆಗಳಲ್ಲಿ ಪರಿಭ್ರಮಿಸುತ್ತವೆ. ಮತ್ತು ಎಲ್ಲ ಗ್ರಹಗಳಿಗೂ ತಮ್ಮದೇ ಅಕ್ಷದ ಸುತ್ತ ಭ್ರಮಣ ಕೂಡ ಉಂಟು. . ತನ್ನ ಜೀವನದ ಕಡೆಯಲ್ಲಿ ಈ ವಿಷಯದ ಬಗ್ಗೆ ಕೋಪರ್ನಿಕಸ್ ತನ್ನ ಪುಸ್ತಕವನ್ನು ಪ್ರಕಟಿಸಿದನು. ಈ ಪರಿಕಲ್ಪನೆ ಕ್ರಾಂತಿಕಾರಿಯಾಗಿದ್ದು ಅವನ ಪ್ರತಿಪಾದನೆಯಲ್ಲಿ ಸ್ವಲ್ಪ ಹಿಂಜರಿಕೆಯೂ ಇದ್ದಿದ್ದರಿಂದ ಕೋಪರ್ನಿಕಸ್ ಮಾದರಿ ಎಲ್ಲರಿಗೂ ಒಪ್ಪಿಗೆಯಾಗಲು ಬಹಳ ಸಮಯ ತೆಗೆದುಕೊಂಡಿತು. ಈ ಸಿದ್ಧಾಂತ ವಿಜ್ಞಾನದಲ್ಲಿ ಕ್ರಾಂತಿಯನ್ನು ತಂದದ್ದಲ್ಲದೆ ಮಾನವ ಜೀವನದಲ್ಲಿ ಭೂಮಿಗೆ ಕೊಟ್ಟಿದ್ದ ಪ್ರಾಮುಖ್ಯತೆಯನ್ನು ಕಡಿಮೆಮಾಡಿತು . ಇದಲ್ಲದೆ ಆ ಸಮಯದಲ್ಲಿ ಆಕಾಶದಲ್ಲಿ ಅವತಾರ ತಳೆದ ಎರಡು ಸೂಪರ್ನೋವಾಗಳು ದೂರದ ನಕ್ಷತ್ರಗಳು ಎಂದು ಟೈಕೊ ಬ್ರಾಹೆ ಸಾಬೀತುಮಾಡಿದಾಗ ಗ್ರೀಕರ ಬದಲಾಗದ ವಿಶ್ವದ ಪರಿಕಲ್ಪನೆ ತಪ್ಪು ಎಂದು ತಿಲಿಯಿತು. ಆಗ ಬಂದ ಕೆಲವು ಧೂಮಕೇತುಗಳೂ ಈ ಅಭಿಪ್ರಾಯಕ್ಕೆ ಒತ್ತು ಕೊಟ್ಟವು. ಈ ಎಲ್ಲ ವಿದ್ಯಮಾನಗಳಿಂದ ಗ್ರೀಕರ ವೈಜ್ಞಾನಿಕ ಸಿದ್ಧಾಂತಗಳು ಹಿಂದೆ ಸರಿದವು.
-------------------------------------------------------------------------
ಚಿತ್ರ ೩: .೧೬ನೆಯ ಶತಮಾನದಲ್ಲಿ ನಿಕೊಲಾಸ್ ಕೋಪರ್ನಿಕಸ್ ಗ್ರೀಕರ ಭೂಕೇಂದ್ರ ಮಾದರಿಯನ್ನು ತಿರಸ್ಕರಿಸಿ ತನ್ನ ಸೂರ್ಯ ಕೇಂದ್ರೀಯ ಮಾದರಿಯನ್ನು ಪ್ರತಿಪಾದಿಸಿದನು.. ಆ ಸಮಯದಲ್ಲೂ ನಕ್ಷತ್ರಗಳು ಬಹು ದೂರ ವೆಂಬ ಅಭಿಪ್ರಾಯವಿದ್ದು ಅವುಗಳ ಬಗ್ಗೆ ಹೆಚ್ಚು ಕುತೂಹಲಗಳಿರಲಿಲ್ಲ. ಚಿತ್ರ್ರ ೪ : ನಿಕೊಲಾಸ್ ಕೋಪರ್ನಿಕಸ್ ( ೧೪೭೩-೧೫೪೩)
-------------------------------------------------------------------------------
೧೬ನೆಯ ಶತಮಾನದ ಕಡೆಯ ದಶಕಗಳಲ್ಲಿ ಗೆಲೆಲಿಯೊ ತನ್ನ ಖ್ಯಾತ ಪ್ರಯೋಗಗಳನ್ನು ನಡೆಸಿ ಚಲನವಿಜ್ಞಾನದಲ್ಲಿಯೂ ಗ್ರೀಕರ ತಪ್ಪು ಅಭಿಪ್ರಾಯಗಳನ್ನು ತೋರಿಸಿದನು. ಅದಲ್ಲದೆ ಅದ್ಭುತ ವೀಕ್ಷಣೆಗಳನ್ನು ನಡೆಸಿ ಕೋಪರ್ನಿಕಸ್ಸನ ಸೌರಮಂಡಲದ ಮಾದರಿಯನ್ನು ಪ್ರಚಾರಿಸಲು ಪ್ರಯತ್ನಿಸಿ ಚರ್ಚಿನ ಕೋಪಕ್ಕೆ ತುತ್ತಾದನು. ಗ್ರಹಗಳ ಕಕ್ಷೆಗಳು ವೃತ್ತಾಳು ಎಂಬ ಗ್ರೀಕರ ಮತ್ತೊಂದು ಅಭಿಪ್ರಾಯವನ್ನು ಪ್ರಶ್ನಿಸಿ ಆ ಕಾಲದ ಅದ್ಭುತ ವೀಕ್ಷಕ ಟೈಕೊಬ್ರಾಹೆಯಿಂದ ದೊರಕಿದ ಗ್ರಹಗಳ ಸ್ಥ್ತಿತಿಗತಿಗಳ ಬಗ್ಗೆಯ ಅಂಕಿಅಂಶಗಳನ್ನು ಬಳಸಿಕೊಂಡು ಯೊಹಾನಸ್ ಕೆಪ್ಲರ್ (೧೫೭೧-೧೬೩೦ ) ಕಕ್ಷೆಗಳು ಅಂಡಾಕಾರವಿರಬೇಕು ಎಂದು ಪ್ರತಿಪಾದಿಸಿದನು. ಗೆಲೆಲಿಯೊ ತನ್ನ ಆಕಾಶವೀಕ್ಷಣೆಗಳಿಂದ ಗ್ರಹಗಳಿಗೂ ದ್ರವ್ಯರಾಶಿ ಇದೆಯೆಂದೂ ಅವುಗಳಿಗೆ ಬೇರೆ ಬೇರೆ ಗುಣಗಳಿವೆಯೆಂದೂ ಪರೋಕ್ಷವಾಗಿ ಗುರುತಿಸಿದ್ದು ಸೌರಕೆಂದ್ರೀಯ ಮಾದರಿಗೆ ಭೌತವಿಜ್ಞಾನದ ತಳಹದಿ ಕೊಟ್ಟಿತು. ಅಲ್ಲಿಯವರೆವಿಗೆ ಸೌರಮಂಡಲದ ಮಾದರಿಗಳೆಲ್ಲಾ ಒಂದು ರೀತಿಯಲ್ಲಿ ಜ್ಯಾಮಿತಿಯ ಮಾದರಿಗಳು ಮಾತ್ರ ಆಗಿದ್ದ್ವು. ಯಾವುದೋ ಕಾಂತಶಕ್ತಿಯ ತರಹದ ಪ್ರಭಾವ ಗ್ರಹಗಳ ಚಲನೆಗೆ ಕಾರಣವಿರಬಹುದೆಂದು ಕೆಪ್ಲರ್ ತಪ್ಪಾಗಿ ಯೋಚಿಸಿದರೂ ಖಗೋಳದ ವಿದ್ಯಮಾನಗಳಿಗೆ ಭೌತಿಕ ಕಾರಣಗಳನ್ನು ಹುಡುಕಬೇಕು ಎಂಬ ಅವನ ಪರಿಕಲ್ಪನೆ ಮುಖ್ಯ. " ನಾನು (ಇಂತಹ) ದೈತ್ಯರ ಹೆಗಲ ಮೇಲೆ ಕುಳಿದಿದ್ದರಿಂದ ನನಗೆ ಇದೆಲ್ಲಾ ಸಾಧ್ಯವಾಯಿತು " ಎಂದು ಐಸಾಕ್ ನ್ಯೂಟನ್ನನ ಹೇಳಿಕೆ ಗುರುತ್ವದ ಬಗ್ಗೆ ನೈಜ ಸ್ಥಿತಿಯನ್ನು ತಿಳಿಸುತ್ತದೆ. . ಗೆಲೆಲಿಯೊವಿನ ಚಲನ ಶಾಸ್ತ್ರದ ಪ್ರಯೋಗಗಳನ್ನು ಅರಿತು ಅವುಗಳನ್ನು ತನ್ನ ಸಿದ್ಧಾಂತಕ್ಕೆ ತಳಹದಿಯನ್ನಾಗಿ ಸ್ವೀಕರಿಸಿ ಕೆಪ್ಲರನ ಆಕರ್ಷಣೆಯ ಪರಿಕಲ್ಪನೆಯನ್ನೂ ಉಪಯೋಗಿಸಿಕೊಂಡನು.. ಗುರುತ್ವಾಕರ್ಷಣೆಯ ಮೂಲಕವೇ ಒಂದು ಸೇಬಿನ ಹಣ್ಣು ನೆಲಕ್ಕೆ ಬೀಳುತ್ತದೆ ಮತ್ತು ಚಂದ್ರ ಭೂಮಿಯ ಸುತ್ತ ಪರಿಭ್ರಮಿಸುವುದು ಎಂದು ಅವನು ಹೇಳಿದ್ದಲ್ಲದೆ ಅವುಗಳು ವಿಲೋಮ ವರ್ಗ ನಿಯಮ (ಇನ್ವರ್ಸ್ ಸ್ಕೇವ್ರ್ ಲಾ) ವನ್ನು ಪಾಲಿಸುತ್ತವೆ ಎಂದು ಲೆಕ್ಕ ಮಾಡಿ ತೋರಿಸಿದನು.. ಇದರಿಂದ ಗುರುತ್ವಾಕರ್ಷಣಾ ನಿಯಮ ಜಗತ್ತಿನಲ್ಲಿ ಎಲ್ಲೆಲ್ಲೂ ಪರಿಪಾಲಿಸಲ್ಪಡುತ್ತವೆ ಎಂಬುದು ನ್ಯೂಟನ್ ಸಿದ್ಧಾಂತದ ತಿರುಳು. ಅಂತೂ ೧೮ನೆಯ ಶತಮಾನದ ಮೊದಲ ದಶಕಗಳಲ್ಲಿ ವಿಶ್ವ ಮುಖ್ಯವಾಗಿ ಸೌರಮಂಡಲಕ್ಕೆ ಸೀಮಿತವಾಗಿದ್ದು ಅದನ್ನು ವಿಜ್ಞಾನಿಗಳು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.
೩. ಗ್ಯಾಲಕ್ಸಿ ಮತ್ತು ನೀಹಾರಿಕೆಗಳು :
-------------------------------------------------------------------------
ಚಿತ್ರ ೫: ನೀಹಾರಿಕೆಗಳು ಮತ್ತು ಕ್ಷೀರ ಪಥದತ್ತ ಗೆಲೆಲಿಯೊ ತನ್ನ ದೂರದರ್ಶಕವನ್ನು ತಿರುಗಿಸಿದಾಗ ಅವನಿಗೆ ಹಿಂದೆ ಕಾಣದಿದ್ದ ಅನೇಕ ಹೊಸ ನಕ್ಶತ್ರಗಳು ಕಾಣಿಸಿದವು.. ಇದರಿಂದ ವಿಶ್ವ ನಾವು ಹಿಂದೆ ತಿಳಿದಿದ್ದಕ್ಕಿಂತ ಬಹಳ ದೊಡ್ಡದು ಎಂಬ ಅರಿವು ಹುಟ್ಟಿತು ಚಿತ್ರ ೬: ಗೆಲೆಲಿಯೊ ( ೧೫೬೪-೧೬೪೨)
-----------------------------------------------------------------------
ಗೆಲೆಲಿಯೊ ನಡೆಸಿದ ಅನೇಕ ಸಂಶೋಧನೆಗಳಲ್ಲಿ ಆಕಾಶಗಂಗೆಯ ಪ್ರಥಮ ವೀಕ್ಷಣೆಗೆ ತನ್ನದೇ ಮಹತ್ವವಿದೆ. ಆಕಾಶದ ಕ್ಷೀರಪಥದತ್ತ ಗೆಲೆಲಿಯೊ ತನ್ನ ದೂರದರ್ಶಕವನ್ನು ತಿರುಗಿಸಿ ಅದರಲ್ಲಿ ಅಗಾಧ ಸಂಖ್ಯೆಯ ನಕ್ಷತ್ರಗಳಿವೆ ಎಂದು ತೋರಿಸಿದನು. . ಇಡೀ ವಿಶ್ವ ತಿಳಿದದ್ದಕ್ಕಿಂತ ದೊಡ್ಡದಿದೆ ಎಂದು ತೋರಿಸಿದ ಆ ಸಂಶೋಧನೆ ಯ ಪ್ರಾಮುಖ್ಯತೆಯನ್ನು ವಿಜ್ಞಾನಿಗಳು ಬಹಳ ಕಾಲ ಗುರುತಿಸಲಿಲ್ಲ. ೧೯ನೆಯ ಶತಮಾನದ
ಮೊದಲ ದಶಕಗಳ ತನಕ ವಿಜ್ಞಾನಿಗಳಿಗೆ ನಕ್ಷತ್ರಗಳಲ್ಲಿ ಹೆಚ್ಚು ಆಸಕ್ತಿಯೂ ಇರಲಿಲ್ಲ. ಸೂರ್ಯ, ಚಂದ್ರ ಮತ್ತು ಗ್ರಹಗಳ ಸ್ಥಳಗಳನ್ನು ಮತ್ತು ಚಲನೆಗಳನ್ನು ನಿಖರವಾಗಿ ನಿರ್ಧರಿಸಲು ಮಾತ್ರ ನಕ್ಷತ್ರಗಳನ್ನು ಬಳಸಿಕೊಳ್ಳುತ್ತಿದ್ದರು... ಖಗೋಳವಿಜ್ಞಾನದ ಮುಂದಿನ ಬೆಳೆವಣಿಗೆಗೆ ಬಹಳ ಮುಖ್ಯವಾದದ್ದು ದೂರದರ್ಶಕಗಳ ಸುಧಾರಣೆ.
ದೂರದರ್ಶಕದ ಎರಡು ಮುಖ್ಯ ಗುಣಗಳು (೧) ವರ್ಧನಾ ಸಾಮರ್ಥ್ಯ ಮತ್ತು (೨) ವಿಘಟನಾ ಸಾಮರ್ಥ್ಯ - ಒಂದು ವಸ್ತು ದೊಡ್ಡದಾಗಿ ಕಾಣಿಸಿದರೆ ಮಾತ್ರ ಸಾಲದು; ಅದರ ವಿವರಗಳೂ ಚೆನ್ನಾಗಿ ಕಾಣಿಸಬೇಕು ! ಗೆಲೆಲಿಯೊ ಮಸೂರಗಳನ್ನು ಬಳಸಿ ತಯಾರಿಸಿದ್ದ ದೂರದರ್ಶಕದ ವರ್ಧನಾ ಸಾಮರ್ಥ್ಯ ~ ೩೩ ಇದ್ದಿತು. ಮಸೂರಗಳನ್ನು ದೊಡ್ಡದುಮಾಡುತ್ತ ವರ್ಧನಾ ಸಾಮರ್ಥ್ಯವನ್ನು ಹೆಚ್ಚಿಸಿದರೂ ಅವುಗಳ ಮೂಲನ್ಯೂನತೆ ಯಾದ ಅಪಸರಣವನ್ನು ನಿರ್ಮೂಲಮಾಡಲು ಆಗುವುದಿಲ್ಲ ವೆಂದು ತಿಳಿದು ನ್ಯೂಟನ್ ಮಸೂರಗಳ ಬದಲು ಕನ್ನಡಿಗಳನ್ನು ಬಳಸಿದನು. ಅನಂತರ ಅವನ ಮಾದರಿಯನ್ನೇ ಎಲ್ಲ ಖಗೋಳಜ್ಞರೂ ಅನುಸರಿಸಿದರು.
--------------------------------------------------------------------------------------------------------------------
ಚಿತ್ರ ೭ : ಹರ್ಷೆಲನ ಪ್ರಕಾರ ನಮ್ಮ ಕ್ಷೀರಪಥ ಗ್ಯಾಲಕ್ಸಿ; ಗ್ಯಾಲಕ್ಸಿಯ ಸ್ವರೂಪದ ಬಗ್ಗೆ ಹರ್ಷೆಲನ ಯೋಜನೆ ತಪ್ಪಿದ್ದರೂ ಅದು ಸೃಷ್ಟಿವಿಜ್ಞಾನದ ಒಂದು ಮುಖ್ಯ ಹೆಜ್ಜೆ. ಚಿತ್ರ ೮: ವಿಲಿಯಮ್ ಹರ್ಷೆಲ್ (೧೭೩೮-೧೮೨೨)
---------------------------
ಗೆಲೆಲಿಯೊವಿನ ನಂತರ ಖಗೋಳ ವಿಜ್ಞಾನದಲ್ಲಿ ವಿಲಿಯಮ್ ಹರ್ಷೆಲನ ಹೆಸರು ಮುಖ್ಯ. ಜರ್ಮನಿಯಿಂದ ಇಂಗ್ಲೆಂಡಿಗೆ ಬಂದು ಅಲ್ಲಿಯೇ ನೆಲೆಸಿ ಪ್ರಮುಖ ಸಂಗೀತಗಾರನಾಗಿದ್ದ ಹರ್ಷೆಲ್ ನ ಮುಖ್ಯ ಆಸಕ್ತಿ ಖಗೋಳವಿಜ್ಞಾನವಾಗಿದ್ದು ಅವನು ಉತ್ತಮ ದೂರದರ್ಶಕಗಳನ್ನು ನಿರ್ಮಿಸಿ ಅವುಗಳನ್ನು ಬಳಸಿಕೊಂಡು ಹೊಸ ಗ್ರಹ ಯುರೇನಸ್ ಅಲ್ಲದೆ ಹಲವಾರು ಮುಖ್ಯ ಆವಿಷ್ಕಾರಗಳನ್ನು ಮಾಡಿದನು. ಕ್ಷೀರಪಥದ ತಾರೆಗಳನ್ನು ಅವನು ಪರಿಶೀಲಿಸಿದಾಗ ಅವನಿಗೆ ಅವುಗಳು ಸೂರ್ಯ/ ಭೂಮಿಯ ಸುತ್ತ ಪರಿಭ್ರಮಿಸುತ್ತಿರುವ ಹಾಗೆ ಕಂಡು ಬಂದು ಅದು ಒಂದು ಫಲಕ ಸ್ವರೂಪವಿರಬಹುದೆಂದು ಪರಿಗಣಿಸಿದನು. ತಾರೆಗಳೆಲ್ಲವೂ ಒಂದೇ ಪ್ರಕಾಶವನ್ನು ಹೊಂದಿದೆ ಎಂದು ಊಹಿಸಿ ಈ ನಕ್ಷತ್ರ ಸಮೂಹಗಳ ಕೇಂದ್ರ ಸೂರ್ಯ ಎಂದು ಅವನು ವ್ಯಾಖ್ಯಾನಿಸಿ ಆ ಸಮೂಹಕ್ಕೆ ಒಂದು ರೂಪವನ್ನು ಕೊಟ್ಟನು . ಇಂದು ಅದು ಸರಿಯಲ್ಲವೆಂದು ತಿಳಿದಿದ್ದರೂ ಹರ್ಷೆಲನ ಈ ಪ್ರಥಮ ಪ್ರಯತ್ನ ಶ್ಲಾಘನೀಯವೆ !
ವಿಲಿಯಮ್ ಹರ್ಷೆಲನ ತಂಗಿ ಕೆರೋಲಿನ್ ಮೊದಲು ಅವನಿಗೆ ಸಹಾಯಮಾಡಿಕೊಂಡಿರುತ್ತಿದ್ದರೂ ನಿಧಾನವಾಗಿ ತಾನೇ ನುರಿತ ವೀಕ್ಷಕಳಾದಳು. ಪ್ರಪಂಚದ ಮೊದಲ ಖಗೋಳಜ್ಞೆ ಅನಿಸಿಕೊಂಡ ಈಕೆ ಎಂಟು ಧೂಮಕೇತುಗಳಲ್ಲದೆ ಆಂಡ್ರೊಮೆಡಾ ಹತ್ತಿರದ ಆಕಾಶಕಾಯವನ್ನೂ ಕಂಡುಹಿಡಿದಳು . ಆ ಸಮಯದಲ್ಲೆ ಫ್ರಾನ್ಸಿನ ಚಾರ್ಲ್ಸ್ಮೆಸ್ ಮೆಸ್ಸಿಯೆ ಕೂಡ ಕೆಲವು ಹೊಸಗುಣಗುಳ್ಳ ಆಕಾಶಕಾಯಗಳನ್ನೂ ಕಂಡುಹಿಡಿದನು. ಈ ಆಕಾಶಕಾಯಗಳಲ್ಲಿ ಪ್ರಕಾಶವು ನಕ್ಷತ್ರಗಳ ತರಹ ಕೇಂದ್ರದಲ್ಲಿ ಗರಿಷ್ಟ ವಾಗಿರದೆ ಪೂರ್ತಿ ಹರಡಿಕೊಂಡು ಇರುತ್ತಿದ್ದು ಇವುಗಳಿಗೆ ನೀಹಾರಿಕೆ (ನೆಬ್ಯುಲ)ಎಂಬ ಹೆಸರು ಬಂದಿತು. ಅದರೆ ಇವು ಯಾವ ತರಹ ಆಕಾಶಕಾಯಗಳೆಂಬುದು ದೊಡ್ಡ ಸಮಸ್ಯೆಯಾಗಿದ್ದು ಅನೇಕ ವಿದ್ವಾಸರು ಇವುಗಳ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹೊಂದಿದ್ದರು. ಜರ್ಮನ್ ತತ್ವಶಾಸ್ತ್ರಜ್ಞ ಇಮ್ಯಾನ್ಯುಎಲ್ ಕಾಂತ್ ಮತ್ತು ಮತ್ತು ಇಂಗ್ಲೆಂಡಿನ ಥಾಮಸ್ ರೈಟ್ ಈ ನೀಹಾರಿಕೆಗಳು ನಮ ಕ್ಶೀರಪಥದಂತೆಯೆ ಇತರ ವಿಶ್ವಗಳು ಎಂದು ಪ್ರತಿಪಾದಿಸಿ ಇವಕ್ಕೆ ದ್ವೀಪವಿಶ್ವಗಳೆಂಬ ಹೆಸರನ್ನೂ ಕೊಟ್ಟಿದ್ದರು. ಆದರೆ ಕೆಲವರು ಇವುಗಳು ನಮ್ಮದೇ ಕ್ಶೀರಪಥದ ಲ್ಲಿಯೇ ಬೇರೆಯ ಗುಣಗಳುಳ್ಳ ಸದಸ್ಯರು ಎಂದು ನಂಬಿದ್ದರು.
೪. ವಿಶ್ವದ ವಿಸ್ತಾರ
(ಅ) ವೀಕ್ಷಣೆಗಳು
೨೦ನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಅಮೆರಿಕದ ಕ್ಯಾಲಿಫೋರ್ನಿಯ ಪ್ರಾಂತ್ಯದಲ್ಲಿ ಎರಡು ದೊಡ್ಡ ದೂರದರ್ಶಕ - ೧.೫ ಮೀ ಮತ್ತು ೨.೫ ಮೀ ವ್ಯಾಸ - ಗಳನ್ನು ಸ್ಥಾಪಿಸಲಾಯಿತು. ಮೌಂಟ್ ವಿಲ್ಸನ್ ಎಂಬ ಪರ್ವತ ಪ್ರದೇಶದಲ್ಲಿ ಸ್ಥಾಪಿತವಾದ ಮೊದಲನೆಯ ದೂರದರ್ಶಕವನ್ನು ಬಳಸಿಕೊಂಡು ಹ್ಯಾರ್ಲೊ ಶ್ಯಾಪ್ಲೀ (೧೮೮೫-೧೯೭೨) ಎಂಬ ಖಗೋಳಜ್ಞ ರು ನಮ್ಮ ಗ್ಯಾಲಕ್ಸಿಯ ಆಕಾರ ಮತ್ತು ಇತರ ಗುಣಗಳನ್ನು ಕಂಡುಹಿಡಿದರು. ಇದರಿಂದ ನಮ್ಮದು ಸುರುಳಿ ಆಕಾರದ ೧ ಲಕ್ಷ್ಯ ಜ್ಯೋತಿರ್ವರ್ಷಗಳ ಅಗಲದ ಗ್ಯಾಲಕ್ಸಿ ಮತ್ತು ಸೂರ್ಯ ಕೇಂದ್ರದಿಂದ ೨೭೦೦೦ ಜ್ಯೋತಿರ್ವರ್ಷಗಳು ದೂರ ಎಂದೂ ತಿಳಿಯಿತು.
೧೯೨೦ರಲ್ಲಿ ನಡೆದ ಒಂದು ಮಹಾ ಚರ್ಚೆಯಲ್ಲಿಯೂ ಶ್ಯಾಪ್ಲೀ ಭಾಗವಹಿಸಿದ್ದರು. ಚರ್ಚೆಯ ವಿಷಯ : ಕಳೆದ ಶತಮಾನದಲ್ಲಿ ಖಗೋಳಜ್ಞರು ಕಂಡುಹಿಡಿದ ಅನೇಕ ನೀಹಾರಿಕೆಗಳು ನಿಜವಾಗಿಯೂ ಹೊರಗಿನ ದ್ವೀಪ ವಿಶ್ವಗಳೇ ( ಕಾಂತ್ ಪ್ರತಿಪಾದಿಸಿದಂತೆ) ಅಥವಾ ಅವು ನಮ್ಮದೇ ಗ್ಯಾಲಕ್ಸಿಯ ಸದಸ್ಯರೇ? ಶ್ಯಾಪ್ಲೀಯವರು ಈ ನೀಹಾರಿಕೆಗಳು ಹತ್ತಿರದಲ್ಲಿಯೇ ಇವೆ ಎಂದೂ ಕರ್ಟಿಸ್ ಎಂಬ ಖಗೋಳಜ್ಞರು ಅವು ದೂರವಿದ್ದು ಹೊರಗಿನ ಗ್ಯಾಲಕ್ಸಿಗಳೆಂದೂ ವಾದಿಸಿದರು. ಆದರೆ ಈ ಚರ್ಚೆಯಲ್ಲಿ ಈ ವಿಷಯ ಇತ್ಯರ್ಥವಾಗದೆ ಮುಂದಿನ ದಶಕದ ವೀಕ್ಷಣೆಗಳಿಗಾಗಿ ಕಾಯಬೇಕಾಯಿತು.
------------------------------------------------------------------------------------------------
ಚಿತ್ರ ೯ : ನಮ್ಮ ಗ್ಯಾಲಕ್ಸಿಯ ಇಂದಿನ ಚಿತ್ರ ; ೧ ಲಕ್ಶ ಜ್ಯೋತಿರ್ವರ್ಷಗಳ ಅಗಲ ; ಕೆಂದ್ರದಿಂದ ೨೭೦೦೦ ಜ್ಯೋತಿರ್ವರ್ಷಗಳು ದೂರದಲ್ಲಿ ಸೂರ್ಯ ಚಿತ್ರ ೧೦ : ನಮ್ಮಗ್ಯಾಲಕ್ಸಿಯ ಇಂದಿನ ರೂಪವನ್ನು ಸ್ಪಷ್ಟೀಕರಿಸಿದ ಹ್ಯಾರ್ಲೋ ಶ್ಯಾಪ್ಲೀ ( ೧೮೮೫-೧೯೭೨)
---------------------------------------------------------------------
ಶ್ಯಾಪ್ಲಿಯ ನಂತರ ಎಡ್ವಿನ್ ಹಬಲ್ ( ೧೮೮೯-೧೯೫೩) ಸಹೋದ್ಯೋಗಿ ಹ್ಯುಮಾಸನ್ ರ ಜೊತೆ ಸೇರಿ ೧೯೨೦ರ ದಶಕದಲ್ಲಿ ಮೌಂಟ್ ವಿಲ್ಸನ್ ವೇಧಶಾಲೆಯ ೨.೫ ಮೀ ( ೧೦೦ ಇಂಚು) ವ್ಯಾಸದ ) ದೂರದರ್ಶಕವನ್ನು ಬಳಸಿಕೊಂಡು ಹಲವು ಆಕಾಶಕಾಯಗಳ ವೀಕ್ಷಣೆಗಳನ್ನು ನಡೆಸಿದರು. ಹಿಂದೆ ಹೆನ್ರಿಯೆಟಾ ಲೆವಿಟ್ ಸೆಫೈಡ್ ಎಂಬ ಚಂಚಲ ನಕ್ಷತ್ರಗಳ ಪ್ರಕಾಶಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಅಳೆದು ಅದರಿಂದ ದೂರವನ್ನು ಕಂಡುಹಿಡಿಯಬಹುದೆಂದು ತೋರಿಸಿದ್ದರು. ಇದೇ ವಿಧಾನವನ್ನು ಹಬಲ್ ಉಪಯೋಗಿಸಿ ಆಂಡ್ರೊಮೆಡಾ ಎಂಬ ಆಕಾಶಕಾಯ ಹತ್ತಿರವಿಲ್ಲವೆಂದೂ ಮತ್ತು ಅದರ ದೂರ ೯ ಲಕ್ಷ ಜ್ಯೋತಿರ್ವರ್ಷವೆಂದು ( ಈಗ ಅದರ ಸರಿಯಾದ ಮೌಲ್ಯ ೨೫ ಲಕ್ಷ ಜ್ಯೋತಿರ್ವರ್ಷಗಳು ಎಂದು ತಿಳಿದಿದೆ) ನಿರ್ಧರಿಸಿ ಇದು ಹೊರಗಿನ ಗ್ಯಾಲಕ್ಸಿಯೇ ಇರಬೇಕು ಎಂದು ೧೯೨೪ರಲ್ಲಿ ಪ್ರತಿಪಾದಿಸಿದರು. ಹೀಗೆಯೇ ಹಿಂದೆ ಹತ್ತಿರವೇ ಇದೆ ಎಂದು ತಿಳಿದಿದ್ದ ಹಲವಾರು ನೀಹಾರಿಕೆಗಳು ಅತಿ ದೂರದ ಗ್ಯಾಲಕ್ಸಿಗಳು ಎಂದು ಹಬಲ್ ತೋರಿಸಿದರು. ಹೀಗೆ ವಿಶ್ವದಲ್ಲಿ ನಮ್ಮ ಕ್ಷೀರಪಥ (ಮಿಲ್ಕಿವೇ) ಒಂದೇ ಗ್ಯಾಲಕ್ಸಿ ಯಲ್ಲ ಎಂದು ತೋರಿಸಿ ವಿಶ್ವದ ಸೀಮೆಯನ್ನು ಹೊರದೂಡಿದರು. ಕೋಪರ್ನಿಕಸ್ ಭೂಮಿ ವಿಶ್ವದ ಕೇಂದ್ರವಲ್ಲ ಎಂದು ೧೬ನೆಯ ಶತಮಾನದಲ್ಲಿ ತೋರಿಸಿದನು; ಹ್ಯಾರೊ ಶ್ಯಾಪ್ಲಿ ೨೦ನೆಯ ಶತಮಾನದ ಮೊದಲನೆಯ ದಶಕದಲ್ಲಿ ನಮ್ಮ ಸೂರ್ಯನೂ ನಮ್ಮ ಗ್ಯಾಲಕ್ಸಿಯ ಸಾಧಾರಣ ತಾರೆ ಎಂದು ತೋರಿಸಿದರು; ಹಬಲ್ ಅವರ ಈ ಆವಿಷ್ಕಾರದೊಂದಿಗೆ ನಮ್ಮ ಗ್ಯಾಲಕ್ಸಿಯಲ್ಲೂ ಏನೂ ಆತಿಶಯವಿಲ್ಲ ಎಂದಾಯಿತು. ಹಬಲ್ ಅವರ ಮುಂದಿನ ಹೆಜ್ಜೆ ಇನ್ನೂ ಕ್ರಾಂತಿಕಾರಿಯಾಗಿದ್ದಿತು.
----------------------------------------------------------------------------
ಚಿತ್ರ ೧೧: : ಹಬಲ್ ಕಂಡುಹಿಡಿದ ನಿಯಮವನ್ನು ತೋರಿಸುವ ರೇಖಾಚಿತ್ರ: ದೂರ ವನ್ನು ಎಕ್ಸ್ - ಅಕ್ಷದಲ್ಲೂ ಮತ್ತು ವೇಗವನ್ನು ವೈ- ಅಕ್ಷದಲ್ಲೂ ತೋರಿಸಿದೆ . ಇಲ್ಲಿ ಪ್ರತಿಯೊಂದು ಬಿಂದುವೂ ಒಂದೊಂದು ಆಕಾಶಕಾಯದ ದೂರ ಮತ್ತು ವೇಗವನ್ನು ತೋರಿಸುತ್ತದೆ. ದೂರ ಹೆಚ್ಜ್ಚಿದ್ದರೆ ಆಕಾಶಕಾಯದ ವೇಗವೂ ಹೆಚ್ಚಿರುವುದನ್ನು ಚಿತ್ರದಲ್ಲಿ ನೋಡಬಹುದು.. ಇದರಿಂದ ಆಕಾಶಕಾಯದ ದೂರ (ದೂ) ಕ್ಕೂ, ಅದು ಹೊರಸರಿಯುತ್ತಿರುವ ವೇಗಕ್ಕೂ (ವೇ) ಸಂಬಂಧ - (ವೇ) = ( ಎಚ್) * (ದೂ) ವಿದೆಯೆಂದು ಗೊತ್ತಾಗುತ್ತದೆ. ಈ ಸಮೀಕರಣದಲ್ಲಿ ' ಎಚ್ ' ನಿಯತಾಂಕಕ್ಕೆ ಹಬಲ್ ನಿಯತಾಂಕ ಎಂಬ ಹೆಸರಿದೆ. . ಇದರ ಮೌಲ್ಯ ಒಂದು ಮೆಗಾ ಪಾರ್ಸೆಕ್ ದೂರಕ್ಕೆ ೭೩.೮ +/- ೨.೪ ಕಿಮೀಗಳು (ಅಂದರೆ ಅದರ ಮೌಲ್ಯ ೭೧.೪ ರಿಂದ ೭೬.೨ - ಪ್ರಯೋಗಗಳಲ್ಲಿ ಇಂತಹ ಅನಿಶ್ಚಿತತೆ ಇದ್ದೇ ಇರುತ್ತದೆ) ಈ ನಿಯತಾಂಕದಿಂದ ವಿಶ್ವದ ವಿಸ್ತಾರದ ವೇಗವನ್ನು ಮತ್ತು ವಿಶ್ವದ ವಯಸ್ಸನ್ನು ಹೇಗೆ ನಿರ್ಧರಿಸಬಹುದು ಎಂದು ಮುಂದೆ ನೋಡೋಣ. ಚಿತ್ರ ೧೨ : ಖ್ಯಾತ ಖಗೋಳಜ್ಞ ಎಡ್ವಿನ್ ಹಬಲ್ ( ೧೮೮೯-೧೯೫೩ )
---------------------------------------------------------------------
ಒಂದು ಆಕಾಶಕಾಯದಿಂದ ಹೊರಬರುವ ರೋಹಿತವನ್ನು ಪ್ರಯೋಗಶಾಲೆಯಲ್ಲಿ ರೋಹಿತದ ಜೊತೆ ಹೋಲಿಸಿದಾಗ ಕೆಂಪುಪಲ್ಲಟ (ರೆಡ್ ಶಿಫ್ಟ್)ವನ್ನು ಕಂಡುಹಿಡಿಯಬಹುದು; ಇದು ರೇಖೆಗಳ ತರಂಗಾಂತರ ದ ವ್ಯತ್ಯಾಸ ದ ಅಳತೆ, ಇದರ ಮೌಲ್ಯವನ್ನು ತಿಳಿದು ಆಕಾಶಕಾಯದ ವೇಗವನ್ನು ಕಂಡುಹಿಡಿಯಬಹುದು; ಸ್ಲಿಫರ್ ೧೯೧೨ರಲ್ಲಿ ಕೆಲವು ನೀಹಾರಿಕೆಗಳ ಕೆಂಪು ಪಲ್ಲಟವನ್ನು ಅಳೆದು ಅವುಗಳು ವೇಗದಿಂದ ದೂರ ಹೋಗುತ್ತಿರುವುದನ್ನು ತೋರಿಸಿದರು . ಈ ಸಂಶೋಧನೆಯನ್ನು ಎಡ್ವಿನ್ ಹಬಲ್ ಮುಂದುವರಿಸಿ ೪೬ ಗ್ಯಾಲಕ್ಸಿಗಳಿಂದ ಮಾಹಿತಿಯನ್ನು ಸಂಗ್ರಹಿಸಿ. ಎಲ್ಲ ಆಕಾಶಕಾಯಗಳೂ ವೇಗದಿಂದ ದೂರಹೋಗುತ್ತಿರುವುದಲ್ಲದೆ ದೂರ ಇರುವ ಆಕಾಶಕಾಯಗಳ ವೇಗ ಹತ್ತಿರ ಇರುವ ಆಕಾಶಕಾಯಗಳ ವೇಗಕ್ಕಿಂತ ಹೆಚ್ಚು ಎಂದು ಅವರು ೧೯೨೯ರಲ್ಲಿ ತೋರಿಸಿದರು.. ಇದರಿಂದ ಅವರು ಆಕಾಶಕಾಯದ ವೇಗಕ್ಕೂ ಅದರ ದೂರಕ್ಕೂ ಒಂದು
ಸಂಬಂಧವನ್ನು ಕಂಡುಹಿಡಿದರು . ಈ ಸಮೀಕರಣದಿಂದ ವಿಶ್ವ ವಿಸ್ತಾರವಾಗುತ್ತಿದೆ ಎಂದು ಹಬಲ್ ಪ್ರತಿಪಾದಿಸಿದರು. ಆ ಪ್ರತಿಪಾದನೆಯನ್ನು ಹೀಗೆ ಅರ್ಥಮಾಡಿಕೊಳ್ಳಬಹುದು : ಒಂದು ಬೆಲೂನಿಗೆ ಗಾಳಿ ತುಂಬಿ ಅದು ಉಬ್ಬುತ್ತ ಹೋದರೆ ಅದರ ಮೇಲಿನ ಚುಕ್ಕಿಗಳ ಮಧ್ಯೆ ಯ ದೂರ ಹೆಚ್ಚಾಗುತಾ ಹೋಗುತ್ತದೆ. ಇಲ್ಲಿ ವೇಗಕ್ಕೂ ದೂರಕ್ಕೂ ಸಂಬಂಧ ತರುವ ಒಂದು ನಿಯತಾಂಕ - ಹಬಲ್ ನಿಯತಾಂಕ- ದಿಂದ ವಿಶ್ವದ ವಯಸ್ಸನ್ನು ನಿರ್ಧರಿಸಬಹುದು. ಈ ಆವಿಷ್ಕಾರ ಜಗತ್ತು ಕ್ಷಣ ಕ್ಷಣಕ್ಕೂ ವಿಸ್ತಾರವಾಗುತ್ತಿದೆ ಎಂದು ತೋರಿಸಿ ಅದಕ್ಕೂ ಒಂದು ನಿಯಮವನ್ನು ಕೊಡುತ್ತಿದ್ದು ಇದನ್ನು ಆಧುನಿಕ ವಿಜ್ಞಾನದ ಒಂದು ಅತಿ ಮಹತ್ವದ ಪ್ರಯೋಗವೆಂದು ಪರಿಗಣಿಸಲಾಗಿದೆ.
(ಆ) ಸಿದ್ಧಾಂತಗಳು
ನ್ಯೂಟನ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸಿದ ನಂತರ ದೂರದಲ್ಲಿರುವ ಎರಡು ವಸ್ತುಗಳ ಮಧ್ಯೆ ಪರಸ್ಪರ ಆಕರ್ಷಣೆ ಹೇಗೆ ಹುಟ್ಟುತ್ತದೆ ಎಂಬುದನ್ನ್ಯು ನಾನು ಅರ್ಥಮಾಡಿಕೊಳ್ಳಲಾಗಲಿಲ್ಲ ಎಂದು ಹೇಳಿದ್ದನು. . ಅದರ ವಿವರಣೆಗೆ ೨ಂನೆಯ ಶತಮಾನದ ತನಕ ಕಾಯಬೇಕಾಯಿತು. ೨೦ನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಆಲ್ಬರ್ಟ್ ಐನ್ಸ ಟೈನ್ ಗುರುತ್ವಕ್ಕೆ ಹೊಸ ವ್ಯಾಖ್ಯಾನ ಕೊಟ್ಟರು.. ಗೆಲೆಲಿಯೊವಿನ ಪ್ರಯೋಗಗಳನ್ನು ಮೂಲವಾಗಿಟ್ಟುಕೊಂಡು ತಮ್ಮ ಖ್ಯಾತ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ೧೯೧೫ರಲ್ಲಿ ಪ್ರತಿಪಾದಿಸಿದರು. -----------------------------------------------------------------------------
ಚಿತ್ರ ೧೩,೧೪,೧೫ : ಮಹಾಸ್ಫೋಟ ಸಿದ್ಧಾಂತದ ಹರಿಕಾರರಾದ ಪಾದ್ರಿ ಲೆಮೈತ್ (೧೮೯೪-೧೯೬೬) , ಜಾರ್ಜ್ ಗ್ಯಾಮೋವ್ ( ೧೯೦೪-೧೯೬೮) ಅನೇಕ ಜನಪ್ರಿಯ ವೈಜ್ಞಾನಿಕ ಪುಸ್ತಕಗಳನ್ನೂ ರಚಿಸಿದರು) ಮತ್ತು ರಾಬರ್ಟ್ ಡಿಕಿ (೧೯೧೬-೧೯೯೭)
-----------------------------------------------------------------------
೧೯೧೭ರಲ್ಲಿ ಆಲ್ಬರ್ಟ್ ಐನ್ಸ್ ಟೈನ್ ತಮ್ಮ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ವಿಶ್ವಕ್ಕೆ ಅಳವಡಿಸಿಕೊಂಡು
ಸಮೀಕರಣಗಳನ್ನು ಮಂಡಿಸಿದರು. ಆಗಿನ (೧೯೧೬) ತಿಳುವಳಿಕೆಯ ಪ್ರಕಾರ ವಿಶ್ವ ಅಚಲ ಎಂಬ ಅಭಿಪ್ರಾಯವಿದ್ದಿತು. ಆದರೆ ಐನ್ಸ್ಟೈನ್ ಸಮೀಕರಣಗಳು ಗುರುತ್ವ ಎಲ್ಲವನ್ನು ಕುಗ್ಗಿಸುತ್ತದೆ ಎಂದು ತೋರಿಸಿದ್ದು ವಿಶ್ವವೂ ಕುಗ್ಗುತ್ತ ಹೋಗಬೇಕಾಗುತ್ತದೆ ಎಂದು ತೋರಿಸಿದವು . ಆದ್ದರಿಂದ ಅದನ್ನು ಎದುರಿಸಲು ಒಂದು ವಿಕರ್ಷಣಾ ಬಲವನ್ನು ಪ್ರತಿಪಾದಿಸಿ ಅದರ ಸಂಕೇತವಾಗಿ ಲ್ಯಾಮ್ದ ಎಂಬ ನಿಯತಾಂಕವನ್ನು ಐನ್ ಸ್ಟೈನ್ ಸೇರಿಸಿದ್ದರು. ಅದು ಗುರುತ್ತ್ವದ ವಿರುದ್ಧ ಕೆಲಸಮಾಡಿ ಜಗತ್ತನ್ನು ಅಚಲ ವಾಗಿ ಇಡುತ್ತದೆ. ಈ ನಿಯತಾಂಕ ಗುರುತ್ವವನ್ನು ಎದುರಿಸಿ ವಿಶ್ವವನ್ನು ಹಿಗ್ಗಿಸುವ ಶಕ್ತಿಯ ಸಂಕೇತವಾಗಿದ್ದಿತು.
----------------------------------------------------------------------------
ಚಿತ್ರ ೧೬ : ಸ್ಥಿರ ವಿಶ್ವ (ಕೆಳಗೆ) ಮತ್ತು ಮಹಾಸ್ಫೋಟ (ಮೇಲೆ) ಸಿದ್ಧಾಂತಗಳ ಹೋಲಿಕೆ . ವಿಶ್ವ ವಿಸ್ತಾರವಾದರೂ ಒಂದು ಸಿದ್ಧಾಂತದಲ್ಲಿ ಸಾಂದ್ರ್ತತೆ ಬದಲಾಗುವುದಿಲ್ಲ; ; ಆದರೆ ಇನ್ನೊಂದರಲ್ಲಿ ಸಾಂದ್ರತೆ ಕಡಿಮೆಯಾಗುತ್ತ ಹೋಗುತ್ತದೆ ಚಿತ್ರ ೧೭ : ಫ್ರೆಡ್ ಹಾಯಲ್ (೧೯೧೫-೨೦ಂ೧)
ಆನಂತರ ೧೯೨೨ರಲ್ಲಿ ಐನ್ ಸ್ಟೈನ್ ರ ಅದೇ ಸಮೀಕರಣಗಳನ್ನು ವ್ಯಾಖ್ಯಾನಿಸಿ ಅಲೆಗ್ಸಾಂಡರ್ ರ್ಫ್ರೀಡ್ಮನ್ ವಿಶ್ವ ವಿಸ್ತಾರವಾಗುತ್ತಿರಲೇಬೇಕು ಎಂದು ಪ್ರತಿಪಾದಿಸಿದರು. ಇದೇ ವಿಷಯದಲ್ಲಿ ೧೯೨೭ರಲ್ಲಿ ಬೆಲ್ಜಿಯಮದಲ್ಲಿ ಪಾದ್ರಿಯಾಗಿದ್ದ ಲಿಮೈಟ್ರೆ ರಿಂದ ಒಂದು ಮುಖ್ಯ ಪರಿಕಲ್ಪನೆ ಹೊರಬಂದಿತು: "ಜಗತ್ತು ವಿಸ್ತಾರವಾಗುತ್ತಿರಬೇಕಾದರೆ ಅದು ಹಿಂದೆ ಚಿಕ್ಕದಾಗಿದ್ದು,ಬಹು ಹಿಂದೆ ಬಹು ಚಿಕ್ಕದಿದ್ದಿರಬೇಕು;ಹಾಗೇ ಹಿಂದೆ ಹೋದರೆ ಎಲ್ಲೋ ಎಂದೋ ಒಂದು ಬಿಂದು ಸ್ವರೂಪವಿದ್ದು ಅದು ಸ್ಫೋಟವಾಗಿರಬೇಕು" ಆದಿಯಲ್ಲಿ ಅಗಾಧ ಸಾಂದ್ರತೆ ಇದ್ದ ' ಮೂಲ ಪರಮಾಣು'' ಸ್ಫೋಟವಾಗಿ ವಿಶ್ವ ಹುಟ್ಟಿತು ಎಂದು ಅವರು ಪ್ರತಿಪಾದಿಸಿದರು. ಇದನ್ನು ಗ್ಯಾಮೋವ ಮತ್ತಿತರರು ಮುಂದೆ ತೆಗೆದುಕೊಂಡುಹೋಗಿ ಲಘು ಪರಮಾಣುಗಳು ಹೇಗೆ ತಯಾರಾಗಿರಬಹುದೆಂದು ಲೆಕ್ಕಮಾಡಿದರು. ಪ್ರಪಂಚ ಇದ್ದಕ್ಕಿದ್ದ ಹಾಗೆ ಎಂದೋ ಸೃಷ್ಟಿಯಾಯಿತು ಎನ್ನುವ ಈ ಅಭಿಪ್ರಾಯ ಹಾಸ್ಯ್ಕಕರವೆಂದು ಕಂಡ ಹಾಯಲ್ ಇದಕ್ಕೆ ' ಬಿಗ್ ಬ್ಯ್ಂಗ್'' ಸಿದ್ಧಾಂತ ಎಂಬ ಹೆಸರಿಟ್ಟರು.
ಅದೇ ಸಮಯದಲ್ಲಿ ವಿಶ್ವವಿಜ್ಞಾನದಲ್ಲಿ ಮತ್ತೊಂದು ಸಿದ್ಧಾಂತವನ್ನೂ ಪ್ರಸ್ತಾಪಿಸಲಾಗಿತ್ತು ಅದರ ಹೆಸರು . ನಿರಂತರ ಸ್ಥಿರ ವಿಶ್ವ (' ಸ್ಟೆಡಿ ಸ್ಟೇಟ್ ಯೂನಿವರ್ಸ್') ಸಿದ್ಧಾಂತ . ಇದರ ಪ್ರಕಾರ 'ಜಗತ್ತು ಹಿಂದಿನಿಂದಲೂ ಇದೆ, ಮುಂದೆಯೂ ಇರುತ್ತದೆ'' . ಇಂಗ್ಲೆಂಡಿನಲ್ಲಿ ಹುಟ್ಟಿ ಬೆಳೆದ ಈ ಸಿದ್ಧಾಂತದ ಪ್ರತಿಪಾದಕರು ಖಗೋಳ ವಿಜ್ಞಾನದಲ್ಲಿ ಖ್ಯಾತರಾದ ಫ್ರೆಡ್ ಹಾಯಲ್, ಗೋಲ್ಡ್ ಮತ್ತು ಬಾಂಡಿ. ಯಾವ ದಿಕ್ಕಿನಿಂದ ನೋಡಿದರೂ ವಿಶ್ವ ಒಂದೇ ತರಹ ಕಾಣಿಸುತ್ತದೆ ಎನ್ನುವ ಒಂದು ಮೂಲ ತತ್ವವನ್ನು ಈ ಸಿದ್ಧಾಂತ ಆಧರಿಸಿದೆ. ಹಾಗಿರಬೇಕಿದ್ದರೆ ಅದಕ್ಕೆ ಮೊದಲೂ ಇರುವುದಿಲ್ಲ, ಕೊನೆಯೂ ಇರುವುದಿಲ್ಲ. ವಿಶ್ವ ವಿಸ್ತಾರವಾಗುತ್ತಿದ್ದರೂ ಹೊಸ ದ್ರವ್ಯರಾಶಿ ಸೃಷ್ಟಿಯಾಗುತ್ತಲೇ ಇರುತ್ತದೆ. ಆದ್ದರಿಂದ ವಿಶ್ವದಲ್ಲಿನ ಸಾಂದ್ರತೆ ಯಾವಾಗಲೂ ಒಂದೇ ಇರುತ್ತದೆ ಎಂದು ಅವರು ಪ್ರ್ತತಿಪಾದಿಸಿದರು . ಅನೇಕ ವಿಜ್ಞಾನಿಗಳಲ್ಲಿ ಸಿದ್ಧಾಂತಗಳಲ್ಲಿ ತಾತ್ವಿಕ ಸೌಂದರ್ಯವೂ ಇರಬೇಕು ಎನ್ನುವ ಆಳವಾದ ನಂಬಿಕೆ ಇದ್ದು ಸ್ಥಿರ ವಿಶ್ವ ಸಿದ್ಧಾಂತ ಅಂತಹ ಸಿದ್ಧಾಂತಕ್ಕೆ ಉದಾಹರಣೆ. . ಹಾಯಲ್ ನೊಬೆಲ್ ಪ್ರಶಸ್ತಿ ಪಡೆಯದಿದ್ದರೂ ಅಷ್ಟೇ ಪ್ರಭಾವಶಾಲಿ ವಿಜ್ಞಾನಿಯಾಗಿದ್ದರು . ಈ ಸಿದ್ಧಾಂತವನ್ನು ವಿಸ್ತರಿಸಿದವರು ನಮ್ಮವರೇ ಆದ ಜಯಂತ್ ನಾರ್ಲೀಕರ್ .
. ಈ ಎರಡು ಸಿದ್ಧಾಂತಗಳಲ್ಲೂ ಹಬಲ್ ಕಂಡುಹಿಡಿದ ವಿಶ್ವದ ವಿಸ್ತಾರಕ್ಕೆ ಎಡೆ ಇದ್ದರೂ,ಯಾವುದು ಸರಿ ಎಂಬುದು ನಿಷ್ಕರ್ಷೆಯಾಗಿರಲಿಲ್ಲ. ಆದರೆ ಹಬಲರ ವೀಕ್ಷಣೆಗಳಿಂದ ವಿಶ್ವ ಅಚಲವಲ್ಲ ಮತ್ತು ವಿಸ್ತಾರವಾಗುತ್ತಿದೆ ಎಂದು ತಿಳಿದ ನಂತರ ಐನ್ಸ್ ಟೈನ್ ತಮ್ಮ ಸಮೀಕರಣಗಳಲ್ಲಿನ ನಿಯತಾಂಕ ಉಪಯೋಗವಿಲ್ಲ ಮತ್ತು ಅದು ನನ್ನ ತಪ್ಪು ಎಂದಿದ್ದರು.
---------------------------------------------------------------------------
ಚಿತ್ರ ೧೮ : ಜಗತ್ತಿನ ವಿವಿಧ (ಗೋಚರ, ಅಗೋಚರ) ಶಕ್ತಿ/ರಾಶಿಗಳ ಪ್ರಮಾಣ (೨೦೧೫ ಪ್ಲಾಂಕ್ ಉಪಗ್ರಹದ ಮಾಹಿತಿ) ಚಿತ್ರ ೧೯ : ವೆರಾ ರೂಬಿನ್ (೧೯೨೮ - ೨೦೧೬)
೫. ಮಹಾಸ್ಫೋಟ ಸಿದ್ಧಾಂತ
(ಅ) ಪುರಾವೆಗಳು
೧೯೬೫ರಲ್ಲಿ ಸೂಕ್ಷ್ಮಕಿರಣಗಳ ಅನ್ವೇಷಣೆ ನಡೆಸುತ್ತಿದ್ದ ಪೆನ್ಜಿಯಾಸ್ ಮತ್ತು ವಿಲ್ಸನ್ ಎಂಬ ನ್ಯೂಜರ್ಸಿಯ ಇಬ್ಬರು ಖಗೋಳಜ್ಞರು ಆಕಾಶದ ವಿವಿಧ ಭಾಗಗಳಿಂದ ಬರುತ್ತಿರುವ ಮತ್ತು ಎಲ್ಲ ಕಡೆಯೂ ಕಾಣಿಸಿಕೊಂಡ ೨.೭ ಡಿಗ್ರಿ (ಕೆಲ್ವಿನ್ = -೨೭೩ ಡಿಗ್ರಿ ಸೆಲ್ಸಿಯಸ್))ತಾಪಮಾನವನ್ನು ಸೂಚಿಸುವ ಸೂಕ್ಷ್ಮತರಂಗ (ಮೈಕ್ರೊವೇವ್) ಗಳನ್ನು ಕಂಡುಹಿಡಿದರು. . ಈ ವೀಕ್ಷಣೆ ವಿಶ್ವದಲ್ಲಿ ಎಲ್ಲೆಲ್ಲೂ ಈ ತಾಪಮಾನವಿದೆ ಎಂದು ತೋರಿಸಿತು (ಸೂರ್ಯ ಅಥವಾ ಗ್ಯಾಲಕ್ಸಿಗಳ ಬಳಿ ಉಷ್ಣತೆ ಹೆಚ್ಚೇ ಇರುತ್ತದೆ.ಇದು ಬಾಹ್ಯಾಕಾಶದ ತಾಪಮಾನ). ವಿಶ್ವದಲ್ಲಿ ಎಲ್ಲೆಲ್ಲೂ ಹರಡಿರುವ ಈ ಕಿರಣಗಳಿಗೆ ' ವಿಶ್ವ ಹಿನ್ನ್ಲೆಲೆ ವಿಕಿರಣ (ಕಾಸ್ಮಿಕ್ ಮೈಕ್ರೊವೇವ್ ಬ್ಯಾಕ್ ಗ್ರೌಂಡ್ ರೇಡಿಯೇಷನ್)' ಗಳೆಂದು ಹೆಸರು ಬಂದಿತು. ಹುಟ್ಟಿನಲ್ಲಿ ಸುಮಾರು ಬಿಲಿಯ ಡಿಗ್ರಿಗಳ ಉಷ್ಣತೆ ಇದ್ದ ವಿಶ್ವ ವಿಸ್ತಾರವಾಗುತ್ತಾ , ಉಷ್ಣತೆಯ ಮೌಲ್ಯ ಕಡಿಮೆಯಾಗುತ್ತ, ಈಗ ಪ್ರಾಯಶ: ೫-೨೦ ಡಿಗ್ರಿ ಕೆಲ್ವಿನ್ ಇರಬಹುದು ಎಂದು ಮಹಾಸ್ಫೋಟ ಪ್ರಚಾರಿಸುತ್ತಿದ್ದ ಸಿದ್ಧಾಂತಿಗಳು ಲೆಕ್ಕ ಮಾಡಿದ್ದರು. ಬೆಳಕಿನ ಕಣಗಳ ಶಕ್ತಿ ಮೊದಲು ಹೆಚ್ಚಿದ್ದು ಜಗತ್ತು ವಿಸ್ತಾರವಾಗುತ್ತ ಕಡಿಮೆಯಾಗುತ್ತ ಹೋದವು ಎಂದೂ ಅರ್ಥ . ಆದ್ದರಿಂದ ನ್ಯೂಜರ್ಸಿಯ ಪ್ರಯೋಗದ ಫಲಿತಾಂಶವನ್ನು ಮಹಾಸ್ಫೋಟ ಸಿದ್ಧಾಂತಕ್ಕೆ ಸಾಕ್ಷಿ ಎಂದು ಗುರುತಿಸಿಲಾಯಿತು. . ಈ ಶಾಖ ಬಹಳ ಹಿಂದೆಯೇ ಉತ್ಪನ್ನವಾಗಿದ್ದರೆ ಮಾತ್ರ ಉಷ್ಣತೆಯ ಮೌಲ್ಯ ಅತಿ ಕಡಿಮೆ ಇದ್ದು ಎಲ್ಲೆಲ್ಲೂ ಅದು ಒಂದೇ ಮೌಲ್ಯವನ್ನು ಪಡೆದಿರುತ್ತದೆ. . ಆದ್ದರಿಂದ ಮಹಾ ಸ್ಫೋಟ ಸಿದ್ಧಾಂತಕ್ಕೆ ಈ ಶೀತಲ ಬೆಳಕಿನ ಅವಿಷ್ಕಾರ ಬಲವಾದ ಸಾಕ್ಷಿಯಾಗಿ ಪರಿಣಮಿಸಿ ೧೯೭೮ರಲ್ಲಿ ಇದಕ್ಕೆ ನೊಬೆಲ್ ಪ್ರಶಸ್ತಿಯೂ ದೊರಕಿತು. ಎಷ್ಟೇ ತಾತ್ವಿಕ ಸೌಂದರ್ಯವಿದ್ದರೂ 'ನಿರಂತರ ಸ್ಥಿರ ವಿಶ್ವ ಸಿದ್ಧಾಂತ' ಈ ವಿಕಿರಣದ ಅಸ್ತಿತ್ವವನ್ನು ವಿವರಿಸಲಾಗದಿದ್ದರಿಂದ ನಿರಾಕರಿಸಲ್ಪಟ್ಟಿತು.
ಆದರೆ ಮಹಾಸ್ಫೋಟ ಎಂದು ನಡೆಯಿತು , ಗ್ಯಾಲಕ್ಸಿಗಳು ಹೇಗೆ ಹುಟ್ಟಿದವು ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಲು ಉಪಕರಣಗಳಲ್ಲಿ ಪ್ರಗತಿ ನಡೆದು ಹೊಸ ಪ್ರಯೋಗಗಳು ಬೇಕಾದವು ೧೯೯೨ರಲ್ಲಿ ಕೋಬೆ ಎಂಬ ಉಪಗ್ರಹ.ದಲ್ಲಿನ ಉಪಕರಣ ಈ ಬೆಳಕಿನ ಉಷ್ಣತೆಯಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸಗಳನ್ನು ಕಂಡುಹಿಡಿಯಿತು. ಇದು ಮಹಾಸ್ಫೋಟದ ಮೊದಲ ಕ್ಷಣಗಳಲ್ಲಿ ಇದ್ದ ಸಾಂದ್ರತೆಯ ವ್ಯತ್ಯಾಸಗಳನ್ನು ತೋರಿಸುತ್ತಿದ್ದು ಈ ವ್ಯತ್ಯಾಸಗಳೇ ಗ್ಯಾಲಕ್ಸಿಗಳ ಉದ್ಭವಕ್ಕೆ ಕಾರಣವಾಗುತ್ತವೆ ಎಂದು ತಿಳಿಯಿತು. ಇದನ್ನು ವಿಶ್ವವಿಜ್ಞಾನದ ಪ್ರಥಮ ನಿಖರ ಪ್ರಯೋಗವೆಂದು ೨೦೦೬ರಲ್ಲಿ ಈ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಯನ್ನು ನೀಡಲಾಯಿತು. ಅನಂತರ ಈ ಅಧ್ಯಯನದಲ್ಲಿ ನ್ಯಾಸಾ ಸಂಸ್ಥೆಯ ' ಡಬ್ಲ್ಯುಮ್ಯಾಪ್ ' ಮತ್ತು ಯೂರೋಪಿನ ' ಮ್ಯಾಕ್ಸ್ ಪ್ಲಾಂಕ್' ಎಂಬ ಉಪಗ್ರಹಗಳಿಂದ ಅನೇಕ ನಿಖರ ಮಾಹಿತಿಗಳು ಸಿಕ್ಕಿವೆ. ಪ್ಲಾಂಕ್ ಉಪಗ್ರಹದ ಉಪಕರಣದ ಪ್ರಕಾರ . ಶೀತಲ ಬೆಳಕಿನ ಉಷ್ಣತೆಯ ಸರಾಸರಿ ಮೌಲ್ಯ ೨.೭೩೫೪೮ ಡಿಗ್ರಿಗಳು ; ಇದು ಇದುವರೆವಿಗಿನ ಅತಿ ನಿಕರ ಪ್ರಯೋಗ ! ಇದರಿಂದ ವಿಶ್ವ್ದದ ವಯಸ್ಸು ೧೩.೭೯೮ ಬಿಲಿಯ ವರ್ಷಗಳು ಎಂದೂ ಗೊತ್ತಾಗಿದೆ. .
ಈ ಮಹಾ ಸ್ಫೋಟ ಸಿದ್ಧಾಂತಕ್ಕೆ ಮೊದಲ ಸಾಕ್ಷಿ ಹಬಲರ ವಿಶ್ವ ವಿಸ್ತಾರದ ಆವಿಷ್ಕಾರಗಳು. ಅನಂತರ ವಿಶ್ವ ಹಿನ್ನೆಲೆ ವಿಕಿರಣಗಳ ಆವಿಷ್ಕಾರ ಮಹಾಸ್ಪೋಟ ಸಿದ್ಧಾಂತದ ಪ್ರಬಲ ಸಾಕ್ಷಿ . ವಿಶ್ವದಲ್ಲಿನ ಹೀಲಿಯಮ್(೨೪%) ಪ್ರಮಾಣ ಕೂಡ ಈ ಸಿದ್ಧಾಂತಕ್ಕೆ ಪುರಾವೆ ಒದಗಿಸಿದೆ. ಅದಲ್ಲದೆ ಹಿಂದಿನ ವಿಶ್ವಕ್ಕೂ ಇಂದಿನ ವಿಶ್ವಕ್ಕೂ ಅನೇಕ ವ್ಯತ್ಯಾಸಗಳಿವೆ: ಹಿಂದೆ ಅತಿ ಶಕ್ತಿಯುತಗ್ಯಾಲಕ್ಸಿಗಳಾದ ಕ್ವೇಸಾರ್ ಗಳು ಅಧಿಕ ಸಂಖ್ಯೆಯಲ್ಲಿ ಇದ್ದವು ಎಂಬುದು ಒಂದು ಉದಾಹರಣೆ. ಮಹಾ ಸ್ಫೋಟ ಸಿದ್ಧಾಂತ ಮಾತ್ರ ಇದನ್ನು ಪ್ರತಿಪಾದಿಸುತ್ತದೆ.
--------------------------------------------------------------------------
ಚಿತ್ರ ೨೦ : ಎಕ್ಸ್ ಅಕ್ಷಾಂಶದಲ್ಲಿ ಮಹಾಸ್ಫೋಟದ ಜೊತೆ ಶುರುವಾದ ಕಾಲ ಮತ್ತು ವೈ ಅಕ್ಷಾಂಶದಲ್ಲಿ ತಾಪಮಾನ (ಕೆಲ್ವಿನ್ ಡಿಗ್ರಿಗಳಲ್ಲಿ). ಆದಿಯಲ್ಲಿ ವಿಶ್ವದ ಉಷ್ಣತೆ ಬಹಳ ಹೆಚ್ಚಿದ್ದು ಪ್ಲಾಂಕ್ ಕಾಲ (೧೦ **(-೪೩) ಸೆಕೆಂಡುಗಳು) ದಲ್ಲಿ ತಾಪಮಾನ ೧೦**(೩೨) ಡಿಗ್ರಿ ಕೆಲ್ವಿನ್ ಇದ್ದಿರಬೇಕು. ಅನಂತರ (೧೦**(-೧೨) ಸೆಕೆಂಡಿನ ಹೊತ್ತಿಗೆ ತಾಪಮಾನ ~ ೧ ಟ್ರಿಲಿಯ ಡಿಗ್ರಿ ಇದ್ದಿರಬಹುದು. ಹೀಗೆ ವಿಶ್ವ ವಿಸ್ತಾರವಾಗುತ್ತ ತಾಪಮಾನ ಕಡಿಮೆಯಾಗುತ್ತ ಹೋಗುತ್ತದೆ. ಮೊದಲಲ್ಲಿ ಬರೇ ಕಣಗಳಿದ್ದು ಉಷ್ಣತೆ ಕಡಿಮೆಯಾಗುತ್ತ ನಿಧಾನವಾಗಿ ಪರಮಾಣು ಬೀಜಗಳು ಮತ್ತು ಪರಮಾಣುಗಳು ಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚಿನ ನಿಖರ ಪ್ರಯೋಗಗಳ ಪ್ರಕಾರ ಈಗ ವಿಶ್ವದ ಉಷ್ಣತೆ. ೨.೭೩೫೪೮ ಡಿಗ್ರಿಗಳು ಚಿತ್ರ ೨೧: ಮೈಕ್ರೊವೇವ್/ಸೂಕ್ಷ್ಮ ತರಂಗಗಳನ್ನು ದಾಖಲಿಸಲು ತಯಾರಿಸಿದ್ದ ಹೊಸ ರೇಡಿಯೊ ಟೆಲೆಸ್ಕೋಪ್ ಮತ್ತು ಸಂಶೋಧನೆಗಳನ್ನು ನಡೆಸಿದ ಪೆನ್ಜಿಯಾಸ್ ಮತ್ತು ವಿಲ್ಸನ್
--------------------------------------------------------------------------
೧೯೬೦-೧೯೭೦ರ ದಶಕದಲ್ಲಿ ಹಲವಾರು ಸಂಶೋಧನೆಗಳಿಂದ ಗೋಚರ ( ಕಣ್ಣುಗಳಿಗೆ ಮತ್ತು ಉಪಕರಣಗಳಿಗೆ ತಿಳಿಯುವ) ದ್ರವ್ಯರಾಶಿ ~ ೫% ಇದ್ದು, ಉಳಿದ ಎಲ್ಲವೂ ಅಗೋಚರ ದ್ರವ್ಯರಾಶಿ ಎನ್ನುವ ಅಭಿಪ್ರಾಯ ಬಂದಿತು. ೧೯೯೦ರ ದಶಕದಲ್ಲಿ ದೂರದ ಸೂಪರ್ನೋವಾ ವೀಕ್ಷಣೆಗಳು ಜಗತ್ತು ನಿರೀಕ್ಷಿಸಿದ ದೂರಕ್ಕಿಂತ ಹೆಚ್ಚು ದೂರದಲ್ಲಿದ್ದು ಅದು ಯಾವುದೋ ತಿಳಿಯದ ವೇಗೋತ್ಕರ್ಷದ ಪರಿಣಾಮ ಎಂದು ತೋರಿಸಿದವು. ಇದು ಯಾವುದೋ ಚೈತನ್ಯ /ಎನರ್ಜಿ ದಿಂದ ಹುಟ್ಟುತ್ತಿದೆ ಎಂದೂ ಮತ್ತು ಅದು ಏನು ಎಂದು ತಿಳಿಯದ್ದರಿಂದ ಅದನ್ನು ಡಾರ್ಕ್ ಎನರ್ಜಿ ಅಥವಾ ಅಗೋಚರ ಚೈತನ್ಯವೆಂದು ಕರೆಯಲಾಯಿತು.
!ಪ್ಲಾಂಕ್ ಉಪಗ್ರಹದ ಮಾಹಿತಿಗಳ ಪ್ರಕಾರ ಅಗೋಚರ ಶಕ್ತಿ ೬೭ %, ಅಗೋಚರ ರಾಶಿ ೨೯%, ಪ್ರೋಟಾನ್ ಮತ್ತು ಇತರ ಬೇರಿಯಾನ್ ಗುಂಪಿನ ಕಣಗಳು ೪ %, , ನ್ಯೂಟ್ರಿನೊ ಕಣ ಂ.೧% ,
(ಆ)ಮಹಾಸ್ಫೋಟ ಸಿದ್ಧಾಂತದ ವಿವರಗಳು
ಈ ಸಿದ್ಧಾಂತದ ಪ್ರಕಾರ ಮಹಾಸ್ಫೋಟವು ಯಾವುದೋ ಹಿಂದಿನ ಸಮಯದಲ್ಲಿ ಅನಂತ ಸಾಂದ್ರತೆ ಮತ್ತು ಉಷ್ಣತೆ ಇದ್ದಾಗ ನಡೆಯಿತು. ಇದರಲ್ಲಿ ಪ್ಲಾಂಕ್ ಸಮಯ (೧೦**(-೪೩) ಸೆಕೆಂಡುಗಳು)ದ ಮುಂಚೆ ಏನಾಗಿರಬಹುದು ಎಂದು ಇಂದಿನ ಭೌತ ವಿಜ್ಞಾನದ ಪರಿಕಲ್ಪನೆಗಳಿಂದ ಊಹೆ ಮಾಡಲು ಆಗುವುದಿಲ್ಲ. ಪ್ಲಾಂಕ್ ಸಮಯದಲ್ಲಿ ಉಷ್ಣತೆ ೧೦ ** (೩೨) ಕೆಲ್ವಿನ್ ಇದ್ದು ವಿಶ್ವ ೧೦ **(-೩೩) ಸೆಂಟಿಮೀಟರ್ ಅಗಲವಿದ್ದಿತು ಮೊಟ್ಟ ಮೊದಲಲ್ಲಿ ಒಂದೇ ಶಕ್ತಿ ಕ್ಷೇತ್ರವಿದ್ದು ಪೂರ್ಣ ಸಮ್ಮಿತಿ ( ಸಿಮೆಟ್ರಿ) ಇದ್ದು ಅದು ಕೆಲ ಕ್ಷಣಗಳ ನಂತರ (ಸೆಕೆಂಡುಗಳ ಹೊತ್ತಿಗೆ) ಶಕ್ತಿ ಕ್ಷೇತ್ರಗಳೆಲ್ಲಾ ಬೇರೆ ಬೇರೆ ಯಾಗಿ ಬಿಟ್ಟಿರುತ್ತವೆ. ಪೂರ್ತಿ ಸಮ್ಮಿತಿಯಿದ್ದು ಒಂದೇ ಶಕ್ತಿಕ್ಷೇತ್ರವಿದಿದ್ದರೆ ನಮ್ಮ ಇಂದಿನ ವಿಶ್ವ ವಿಕಾಸವಾಗುತ್ತಿರಲಿಲ್ಲ! ಇದರಿಂದಾಗಿ ಇಂದು ಇಂದು ಪ್ರಕೃತಿಯಲ್ಲಿ ಗುರುತ್ವಾಕರ್ಷಣೆ, ವಿದ್ಯುತಕಾಂತತ್ವ ,ಬೈಜಿಕ ಆಕರ್ಷಣೆ .ಕ್ಷೀಣ ವರ್ತನೆ ಎಂಬ ವಿವಿಧ ಬಲಗಳು ಕಾಣಬರುತ್ತವೆ. ಮೊದಲು ಪ್ರತಿಪಾದಿಸಿದ್ದ ಮೂಲ ಮಹಾಸ್ಫೋಟ ಸಿದ್ಧಾಂತ ದಲ್ಲಿ ಹಲವಾರು ತೊಡಕುಗಳಿದ್ದವು. ಅದರಲ್ಲಿ ಮುಖ್ಯವಾದದ್ದು ಇದರಿಂದ ಹುಟ್ಟುವ ವಿಶ್ವದ ಒಂದು ಕೊನೆಯಲ್ಲಿನ ಕಾಯಕ್ಕೂ ಇನ್ನೊಂದು ಕೊನೆಯಲ್ಲಿಯ ಕಾಯಕ್ಕೂ ಯಾವ ಸಂಬಂಧವೂ ಕಾಣುತ್ತಿರಲಿಲ್ಲ.
_____________________________________________
ಚಿತ್ರ ೨೨ ; ಮಹಾ ಸ್ಫೋಟ ( ಕಲ್ಪನೆ) ಚಿತ್ರ ೨೩ : ವಿಶ್ವದ ಹಿಗ್ಗುವಿಕೆ (' ಇನ್ಫ್ಲೇಷನ್'); ಕಾಲವನ್ನು ಎಕ್ಸ್ ಅಕ್ಷಾಂಶದಲ್ಲೂ , ವಿಶ್ವದ ತ್ರಿಜ್ಯವನ್ನು ವೈ ಅಕ್ಷಾಂಶದಲ್ಲೂ ತೋರಿಸಿದೆ. ಸಿದ್ಧಾಂತಗಳ ಪ್ರಕಾರ ವಿಶ್ವಕ್ಕೆ ೧೦ **(-೩೭) ಸೆಕೆಂಡುಗಳಿದ್ದಾಗ ಅದು ಅಪಾರವಾಗಿ ಹಿಗ್ಗಿತು. ಮೊದಲಿಗಿಂತ ವಿಶ್ವ ಈಗ ೧೦**೮೦ ರಷ್ಟು ಹೆಚ್ಚಿದೆ .
-------------------------------------------------------------------
ಆದರೆ ಎಲ್ಲ ದಿಕ್ಕುಗಳಲ್ಲೂ ವಿಶ್ವ ಒಂದೇ ತರಹ ಇರಬೇಕು. ವಿಶ್ವದ ಈ ಗುಣವನ್ನು ಕಾಪಾಡಿಕೊಳ್ಲಲು ಹಿಗ್ಗುವಿಕೆ (' ಇನ್ಫ್ಲೇಷನ್ ' ') ಯನ್ನು ಪ್ರತಿಪಾದಿಸಲಾಯಿತು. ವಿಶ್ವಕ್ಕೆ ೧೦ **(-೩೭) ಸೆಕೆಂಡುಗಳಾದಾಗ ಅದು ಅತಿ ವೇಗದಿಂದ ಹಿಗ್ಗ ತೊಡಗಿ ವಿಶ್ವದ ಗಾತ್ರ ಮೊದಲಿದ್ದಕ್ಕಿಂತ ೧೦**(೭೮) ರಷ್ಟು ಹೆಚ್ಚಾಯಿತು (ಒಂದು ಪ್ರೋಟಾನ್ ಅನ್ನು ಚಕ್ಕೋತ ಹಣ್ಣಿನಷ್ಟು ಹಿಗ್ಗಿಸಿದಾಗ) . ಈ ಹಿಗ್ಗುವಿಕೆಗೆ ಪ್ರಾಯಶ: ೧೦-೧೦೦ ಸೆಕೆಂಡುಗಳು ತೆಗೆದುಕೊಂಡಿರಬಹುದು. ಇದರ ನಂತರ ಎಲ್ಲ ದಿಕ್ಕುಗಳಲ್ಲೂ ವಿಶ್ವ ಒಂದೇ ತರಹ ಕಾಣುವ ಗುಣವನ್ನು
ಹೊಂದಿತು. . (೩) ಹಿಗ್ಗುವಿಕೆ ನಿಂತ ನಂತರ ವಿಶ್ವ ತಣ್ಣಗಾಗಲು ಪ್ರಾರಂಭವಾಯಿತು. ಆಗ ಇದ್ದ ಶಕ್ತಿ/ಚೈತನ್ಯವು ವಿವಿಧ ಸಮಯಗಳಲ್ಲಿ ಬೇರೆ ಬೇರೆ ಕಣಗಳಾಗಿ ಪರಿವರ್ತನೆಗೊಂಡವು. ಮೊದಲಲ್ಲಿ ಬರೆ ಕ್ಕ್ವಾರ್ಕುಮತ್ತು ಎಲೆಕ್ಟ್ರಾನ್ಗಳಿದ್ದು ನಿಧಾನವಾಗಿ ವಿಶ್ವ ತಣ್ಣಗಾಗುತ್ತ ಪ್ರೋಟಾನ್, ನ್ಯೂಟ್ರಾನ್ ಗಳು . ಆನಂತರ ಲಘು ದ್ರವ್ಯರಾಶಿಯ ನ್ಯೂಕ್ಲಿಯಸ್ ಗಳು - ಡ್ಯುಟೀರಿಯಮ್ ಮತ್ತು ಅನಂತರ ಹೀಲಿಯಮ್ - ತಯಾರಾಗುತ್ತವೆ ( ವಿಶ್ವದಲ್ಲಿ ಡ್ಯುಟೀರಿಯಮ್ ಇರುವುದೇ ಈ ಮಹಾಸ್ಫೋಟ ಸಿದ್ಧಾಂತಕ್ಕೆ ಮತ್ತೊಂದು ಸಾಕ್ಷಿ) . ಹೀಲಿಯಮ್
---------------------------------------------------------------------------
ಚಿತ್ರ ೨೪ : ಮಹಾಸ್ಪ್ಜೋಟದತ್ತ ಇನ್ನೊಂದು ನೋಟ; ಎಡಗಡೆ ಹಿಗ್ಗುವಿಕೆ (ಇನ್ಫ್ಲೇಷನ್) ಯ ಮೊದಲು ಕ್ವಾಂಟಮ್ ಏರಿಳಿತ ( ಫ್ಲಕ್ ಚುಯೇಷನ್) ವನ್ನು ತೋರಿಸಿದೆ. ಚಿತ್ರ ೨೫ : ಸ್ಟೀಫೆನ್ ಹಾಕಿಂಗ್ (೧೯೪೨-೨ಂ೧೭)
-----------------------------------------------------------------------
ಪರಮಾಣು ಬೀಜವೂ ಉತ್ಪತ್ತಿಯಾಗಲು ತಾಪಮಾನ ೧ ಮಿಲಿಯ ಡಿಗ್ರಿ ಇರಬೇಕಾಗುತ್ತದೆ ಬಿಡಿ ನ್ಯೂಟ್ರಾನ್ ಗಳು ಕ್ಷಯಿಸುವುದರಿಂದ ಇದಕ್ಕಿಂತ ಹೆಚ್ಚು ದ್ರವ್ಯರಾಶಿಯ ಮೂಲಧಾತುಗಳನ್ನು ತಯಾರಿಸಲು ಸಾಧ್ಯವಾಗಲಿಲ್ಲ. ಶಾಖ ಕಡಿಮೆಯಾಗುತ್ತಲೇ ಹೋಗುವುದರಿಂದ ಇದರ ಮುಂದೆ ಸಂಲಯನ (ಫ್ಯೂಷನ್) ಪ್ರಕ್ರಿಯೆಗಳು ನಡೆಯುವುದಿಲ್ಲ. ನಂತರ ತಾಪಮಾನ ಇನ್ನೂ ಕಡಿಮೆಯಾದಾಗ (~ ೩೦೦೦ ಡಿಗ್ರಿ ಕೆಲ್ವಿನ್) ಪರಮಾಣು ಬೀಜ ಮತ್ತು ಎಲೆಕ್ಟ್ರಾನ್ಗಳು ಸೇರಿ ಪ್ರಪಂಚದ ಮೊದಲ ಪರಮಾಣುಗಳು ಹುಟ್ಟಿದವು . ಅನಂತರ ಮೊದಲ ನಕ್ಷತ್ರ್ಗಗಳು ಹುಟ್ಟುವ ತನಕ ' ಅಂಧಕಾರ ಯುಗ' ಎಂಬ ಹೆಸರು. ಅಂದಿನಿಂದ ತಾರೆಗಳು ಬೆಳಕು ಕೊಡಲು ಶುರುಮಾಡುತ್ತಾ ವಿಶ್ವದಲ್ಲಿ ಬೆಳಕು ಉಂಟಾಗುತ್ತದೆ.ವಿಶ್ವ ಒಟ್ಟಿನಲ್ಲಿ ವಿಕಿರಣ ಮತ್ತು ದ್ರವ್ಯರಾಶಿ ಎರಡನ್ನೂ ಹೊಂದಿದ್ದು, ಮೊದಲಿಂದ ೩೮೦೦೦೦ ವರ್ಷಗಳ ತನಕ ವಿಕಿರಣ ಪ್ರಧಾನ ವಿಶ್ವವಾಗಿದ್ದು ಅನಂತರ ದ್ರವ್ಯರಾಶಿ ಪ್ರಧಾನವಾಗುತ್ತದೆ.
(ಇ) ಮೊದಲ ಕ್ಷಣಗಳು
ಮಹಾಸ್ಫೋಟದ ಪ್ರಾರಂಭದ ಬಗ್ಗೆ ಮೊದಲಿನಿಂದಲೂ ಕೆಲವು ತಾತ್ವಿಕ ಮತ್ತು ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ರೋಜರ್ ಪೆನ್ರೋಸ್ ಎಂಬ ಮತ್ತೊಬ್ಬ ಮಹಾ ಸಿದ್ಧಾಂತಿಯ ಜೊತೆ ಸೇರಿ ೧೯೭೦ರ ದಶಕದಲ್ಲಿ ಸ್ಟೀಫೆನ್ ಹಾಕಿಂಗ್ ಕೆಲವು ಮುಖ್ಯ ವಿಷಯಗಳನ್ನು ಮಂಡಿಸಿದರು. ಎಲ್ಲ ದ್ರವ್ಯರಾಶಿ ಒಂದು ಬಿಂದುವಿನಲ್ಲಿ ಕೇಂದೀಕೃತವಾದರೆ ಅದಕ್ಕೆ ಏಕೈಕತೆ (ಸಿಂಗುಲಾರಿಟಿ) ಎಂಬ ಹೆಸರು. ಈ ವಿದ್ಯಮಾನಕ್ಕೆ ಕಪ್ಪು ಕುಳಿ ಒಂದು ಖ್ಯಾತ ಉದಾಹರಣೆ. ಕಪ್ಪುಕುಳಿಯಲ್ಲಿ ರಾಶಿಎಲ್ಲಾ ನಿಧಾನವಾಗಿ ಒಂದು ಬಿಂದು (ಹೆಸರು: ವಿಚಿತ್ರ ಬಿಂದು) ವಿನಲ್ಲಿ ಒಟ್ಟುಗೂಡುವಂತೆ ಮಹಾಸ್ಫೋಟದಲ್ಲಿ ಅಂತಹದ್ದೆ ಒಂದು ಬಿಂದುವಿನಿಂದ ಶಕ್ತಿ ಹೊರಬಂದು ಜಗತ್ತು ಪ್ರಾರಂಅಭವಾಗುತ್ತದೆ. ಐನ್ ಸ್ಟೈನರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ ಕ್ಕೆ ಅನೇಕ ಪುರಾವೆಗಳು ಸಿಕ್ಕಿದ್ದು ಅದು ಸರಿ ಎಂದು ನಮಗೆ ಇಂದು ತಿಳಿದಿರುವದರಿಂದ ಅದನ್ನು ಒಪ್ಪಿಕೊಂದರೆ ನಮ್ಮ ಈವಿಶ್ವ ಮಹಾಸ್ಫೋಟದ ಸಮಯದಲ್ಲಿ ಒಂದು ಏಕೈಕತೆಯಿಂದಲೇ ಪ್ರಾರಂಭವಾಗಿರಬೇಕು ಎಂದು ಹಾಕಿಂಗ್ ಪ್ರತಿಪಾದಿಸಿ ಮುಂದೆ ಏನೇ ನಡೆದರೂ ಪ್ರಾರಂಭ ಇದೇ ರೀತಿ ಇರುತ್ತದೆ ಎಂದು ಅವರು ಒತ್ತಿ ಹೇಳಿದರು. . ಇಂತಹ ಸನ್ನಿವೇಶದಲ್ಲಿ ನಮಗೆ ತಿಳಿದಂತಹ ಭೌತವಿಜ್ಞಾನದ ಯಾವ ನಿಯಮದ ಪಾಲನೆಯೂ ನಡೆಯುವುದಿಲ್ಲ. ಉದಾಹರಣೆಗೆ ಹಿಂದಿದ್ದ ದ್ರವ್ಯರಾಶಿ ಮುಂದೆಯೂ ಇರಲೇಬೇಕೆಂದೇನಿಲ್ಲ. ಆದ್ದರಿಂದ ಅನಂತರ ಏನಾಗುತ್ತದೆ ಎಂಬುದನ್ನು ಯಾವ ನಿಶ್ಚಿತತೆಯಿಂದಲೂ ಹೇಳಲಾಗುವುದಿಲ್ಲ.
ಆದರೆ ಹಲವು ದಶಕಗಳ ನಂತರ ಹಾಕಿಂಗ್ ತಮ್ಮ ನಿಲುವನ್ನು ಸ್ವಲ್ಪ ಬದಲಾಯಿಸಿದರು. ಏಕೈಕತೆ ಬಹಳ ಚಿಕ್ಕ ಜಾಗದಲ್ಲಿ ಇರುವುದರಿಂದ (ಬಿಂದು ಸ್ವರೂಪ) ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದ ನಿಯಮಗಳು ಅಲ್ಲಿ ಸರಿಹೋಗುವುದಿಲ್ಲ. ಆದ್ದರಿಂದ ಇಲ್ಲಿ ನಾವು ಕ್ವಾಂಟಮ್ ಚಲನವಿಜ್ಞಾನವನ್ನು ಅನುಸರಿಸಬೇಕಾಗುತ್ತದೆ.
ಅದಕ್ಕೋಸ್ಕರ ಭೌತವಿಜ್ಞಾನದ ಎರಡು ಮಹಾ ಸಿದ್ಧಾಂತಗಳನ್ನೂ ಸೇರಿಸಿ ಕ್ವಾಂಟಮ್ ಗ್ರಾವಿಟಿ ಅಥವಾ ಕ್ವಾಂಟಮ್ ಗುರುತ್ವ ಎಂಬ ಅಧ್ಯಯನ ಕ್ಷೇತ್ರವನ್ನು ಹಾಕಿಂಗ್ ಮತ್ತು ಇತರರು ಹುಟ್ಟುಹಾಕಿದರು.
ಒಟ್ಟಿನಲ್ಲಿ ಕ್ವಾಂಟಮ್ ಗುರುತ್ವ ಏಕೈಕತೆಯನ್ನು ಒಪ್ಪದೆ ಅದರ ಬಗ್ಗೆ ಇನ್ನೂ ವಾದ ವಿವಾದಗಳು ನಡೆಯುತ್ತಲೇ ಇದ್ದು ಕೆಲವು ಪರಿಕಲ್ಪನೆಗಳು ಅತ್ಯಂತ ಸಂಕೀರ್ಣವಾಗಿಯೂ ಇರುವುದರಿಂದ ಇಲ್ಲಿ ಒಂದು ಪುಟ್ಟ ಸಾರಾಂಶವನ್ನು ಕೊಡಲು ಮಾತ್ರ ಸಾದ್ಯ. . ಶೂನ್ಯತೆ (ವ್ಯಾಕ್ಯುಮ್) ನಿಜವಾಗಿ ಶೂನ್ಯವಲ್ಲ ಎಂದು ಹಲವರು ದಶಕಗಳಿಂದ ಗುರುತಿಸಲಾಗಿದೆ. ಶೂನ್ಯತೆಯಲ್ಲಿ ಚೈತನ್ಯ ಅಡಗಿದ್ದು ಆ ಚೈತನ್ಯದಲ್ಲಿ ಏರಿಳಿತಗಳು (ಫ್ಲಕ್ಚುಯೇಷನ್) ನಡೆಯುತ್ತಲೆ ಇದ್ದು ಕಣ ಪ್ರತಿಕಣಗಳು ಹುಟ್ಟಿ ನಾಶವಾಗುತ್ತಲೆ ಇರುತ್ತದೆ ಆದ್ದರಿಂದ
ಎಂದೋ ಒಂದು ಕ್ಷಣದಲ್ಲಿ ಶೂನ್ಯತೆಯ ಚೈತನ್ಯದ ಏರಿಳಿತವೇ ಹೆಚ್ಚಿದ್ದು ಕೋಟಿಗಟ್ಟಲೆ ಕಣಪ್ರತಿಕಣಗಳ ನಾಶವಿನಾಶ ಮಹಾಸ್ಫೋಟವಾಗಿ ಪರಿಣಮಿಸಿರಬಹುದು ಎಂದು ಕೆಲವು ಸಿದ್ಧಾಂತಿಗಳು ಪ್ರತಿಪಾದಿಸಿದ್ದಾರೆ. .
ಕಾಲ ಮಹಾಸ್ಫೋಟದ ಜೊತೆ ಪ್ರಾರಂಭವಾದ ನಂತರ ಒಂದೇ ದಿಕ್ಕಿನಲ್ಲಿ ಒಂದೇ ವೇಗದಿಂದ ಚಲಿಸುತ್ತದೆ. ಆದರೆ ಹಾಕಿಂಗ್ ರ ಪ್ರಕಾರ ಅದಕ್ಕೆ ಮುಂಚೆ ಕಾಲದ ಬಾಣ ಬಗ್ಗಿ ಬಗ್ಗಿ ಏಕೈಕತೆಯ ವಿಚಿತ್ರ ಬಿಂದುವನ್ನು ನಿಧಾನವಾಗಿ ಸೇರುತ್ತಲೆ ಹೋಗುತ್ತದೆ; ಆದ್ದರಿಂದ ಕಾಲ ರೇಖೀಯವಾಗಿಯಲ್ಲದೆ ಬಗ್ಗಲು ಶುರುಮಾಡುತ್ತದೆ ಎಂದು ಅವರು ಮಂಡಿಸಿದ್ದರು. " ಉತ್ತರ ಧ್ರುವದ ಉತ್ತರ ಏನಿದೆ ಎಂಬ ಪ್ರಶ್ನೆಗೆ ಎನು ಉತ್ತರ ಕೊಡಲಾಗುತ್ತದೆ? . ಹಾಗೆಯೇ ಮಹಾಸ್ಫೋಟದ ಮೊದಲು ಏನೂ ಇರಲಿಲ್ಲ ಎಂದು ಮಾನವ ರಾದ ನಮಗೆ ಅನಿಸಬಹುದು. ಅದರೆ ಮಾನವನ ಸೀಮಿತ ಬುದ್ಧಿಯಿಂದ ನಾವು ಹೊರ ಬಂದಾಗ ನಿಜ ತಿಳಿಯಬಹುದು" ಮಹಾಸ್ಫೋಟದ ರಹಸ್ಯ ಹೊರಬರಲು ಇನ್ನೂ ಸಮಯ ಬೇಕೆಂದಿನಿಸುತ್ತದೆ.!
------------------------------------------------------------
.
No comments:
Post a Comment