Saturday, March 29, 2014

ಕಣ ಕಣ ದೇವಕಣ (ಪುಟ್ಟ ವಿಮರ್ಶೆ) - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಇದು ೩೦/೩/೧೪ ರ೦ದು ವಿಜಯಕರ್ನಾಟಕದಲ್ಲಿ ಶ್ರೀ ಗಿರೀಶ್ ಸುಬ್ಬರಾವ ಬರೆದ ಪುಟ್ಟ ವಿಮರ್ಶೆ - ನಾನು ಓದುತ್ತಿರುವ ಹೊತ್ತಿಗೆ  ಎ೦ಬ ಶೀರಿಷಿಕೆಯಲ್ಲಿ
This appeared in Vijaya KArnataka of 30/3/14 - short review/introduction to myb BoOk KANA KANA DEVAKANA

http://www.vijaykarnatakaepaper.com/epaperimages/3032014/3032014-md-hr-22/13422578.JPG

The full review by Sri Girish is as follows
ನಾನು ಓದುತ್ತಿರುವ ಹೊತ್ತಿಗೆ

ಕಣ ಕಣ ದೇವಕಣ - ಕಿರು ಪ್ರಪಂಚದೊಳಗೆ ಒಂದು ಇಣಿಕು

ಲೇಖರು: ಪಾಲಹಳ್ಳಿ ವಿಶ್ವನಾಥ್

ಈಗ ನಾನು ಓದುತ್ತಿರುವುದು ಪಾಲಹಳ್ಳಿ ವಿಶ್ವನಾಥ್ ಅವರ ಒಂದು ವಿಜ್ಞಾನದ ಅದ್ಭುತ ಕೃತಿ. ದಿನ ದಿನಕ್ಕೂ ಕಣ ವಿಜ್ಞಾನದಲ್ಲಿ ನಡೆಯುತ್ತಿರುವ ಹೊಸ ಹೊಸ ಶೋಧನೆಗಳಿಂದಾ ಕುತೂಹಲಗೊಂಡು ಹೆಚ್ಚಿನ ಮಾಹಿತಿಗಾಗಿ ತವಕಿಸುತ್ತಿದ್ದ ಮನಕ್ಕೆ ದೊರಕಿದ ಒಂದು ಓಯಸಿಸ್ಸೇ ಸರಿ!!

ಪುಸ್ತಕದ ಆರಂಭ ನಮ್ಮನ್ನು ೧೯ನೇ ಶತಮಾನಕ್ಕೆ ಕರೆದುಕೊಂಡು ಹೋಗುತ್ತದೆ. ಅಂದಿನ ದಿನಗಳಲ್ಲಿ ಬಹುತೇಕ ಭೌತಶಾಸ್ತ್ರಙನರಿಗೆ ಶಾಖ, ಬೆಳಕು, ಶಬ್ದ ಹಾಗು ವಿದ್ಯುತ್ ಬಗ್ಗೆ ಸಾಕಷ್ಟು ಜ್ಞಾನ ಮೂಡಿರುತ್ತದೆ, ಭೌತಶಾಸ್ತ್ರದಲ್ಲಿ ಶೋಧಿಸಲು ಇನ್ನೇನೂ ಹೆಚ್ಚಿನದಿಲ್ಲ ಎಂಬ ಭಾವನೆಯೂ ಮೂಡತೊಡಗಿರುತ್ತದೆ. ೧೮೯೫ರ ಈ ಕಾಲಘಟ್ಟದಲ್ಲಿ ನಡೆಯುವ ಕೆಲವು ಮುಖ್ಯ ಪ್ರಯೋಗಗಳಾದ: ಹೆನ್ರಿ ಬೆಕ್ವೆರಲ್ ರವರ ವಿಕರಣಕ್ರಿಯೆ, ಜೆ.ಜೆ.ಥಾಂಪ್ಸನ್ ರವರಿಂದ ನಡೆಯುವ ನಿರ್ವಾತಕೊಳವೆಯಲ್ಲಿ ಉದಯವಾಗುವ ಅನಾಮಧೇಯ ಕಿರಣಗಳು, ಮಿಲಿಕನ್ನರ ವಿಖ್ಯಾತ ಆಯಿಲ್ ಡ್ರಾಪ್, ಹಾಗು ಮುಂತಾದ ಪ್ರಯೋಗಗಳ ಬಗ್ಗೆ ವಿವರಿಸುತ್ತದೆ. ಈ ಪ್ರಯೋಗಗಳ ವಿವರಣೆಯನ್ನು ಅಂದಿನ ವೈಜ್ಞಾನಿಕ ತಳಹದಿಯಲ್ಲಿ ವಿವರಿಸಲು ಭೌತಶಾಸ್ತ್ರಙರು ಪಡುವ ಕಷ್ಟಗಳು. ಮುಂದಿನ ಹಂತಗಳಲ್ಲಿ ಕಂಡುಹಿಡಿಯಲ್ಪಡುವ ಎಲೆಕ್ಟ್ರಾನ್, ಫೋಟಾನ್ ಗಳ ಅವಿಷ್ಕಾರ, ಯಾವ ರೀತಿಯಲ್ಲಿ ಕ್ವಾಂಟಮ್ ಕ್ರಾಂತಿಗೆ ನಾಂದಿಹಾಡುತ್ತದೆ ಎಂಬುದನ್ನು ತಿಳಿಸಿಕೊಡುತ್ತಾ ಹೋಗುತ್ತದೆ. ಪ್ರೊಟಾನಿನ ಶೋಧದಿಂದಾ ದೊರಕುವ ಪರಮಾಣುವಿನ ಮಾದರಿ ಹಾಗು ನ್ಯೂಟ್ರಾನುಗಳ ಅಸ್ತಿತ್ವ ಇತರ ಶೋಧನೆಗಳನ್ನು ಹಂತ ಹಂತವಾಗಿ ವಿವರಿಸುತ್ತಾ ಓದುಗರಿಗೆ ಮುಂದಿನ ವಿಷಯಗಳನ್ನು ಅರಿಯಲು ಅಡಿಪಾಯ ಹಾಕಿ ಕೊಡುತ್ತಾ ಓದು ಸಾಗುತ್ತದೆ. ಈ ಅವಿಷ್ಕಾರಗರಗಳ ವಿವರಣೆಯೊಂದಿಗೆ ಓದುಗರನ್ನು ವಿಜ್ಞಾನದ ಹೊಸಶಾಖೆ "ಕಣ ವಿಜ್ಞಾನ"ದ ಬಾಗಿಲಿಗೆ ತಂದು ನಿಲ್ಲಿಸುತ್ತದೆ.

ಮುಂದಿನ ಅಧ್ಯಾಯಗಳಲ್ಲಿ ಈ ಶಾಖೆಯಲ್ಲಿ ಅಂದಿನಿಂದಾ ವಿಜ್ಞಾನಿಗಳು ಇಡುವ ಹೊಸ ಹೊಸ ಹೆಜ್ಜೆಗಳನ್ನು ದಾಖಲಿಸುತ್ತಾ ಹೋಗುತ್ತದೆ. ಪ್ರತಿ ಪುಟದ ಓದು ಹೊಸ ಅರಿವನ್ನು ನೀಡುವ ಮೂಲಕ ಓದುಗರಿಗೆ ರೋಮಾಂಚನವನ್ನೇ ಮೂಡಿಸುತ್ತಾ ಹೋಗುತ್ತದೆ. ಯಾವ ರೀತಿಯಲ್ಲಿ ಈ ಅನ್ವೇಷಣೆಗಳು ಸತತವಾಗಿ ಶ್ರೇಷ್ಠ ಪ್ರಶಸ್ತಿಯಾದ ನೋಬೆಲ್ ಅನ್ನು ಅನ್ವೇಷಕರಿಗೆ ದೊರಕಿಸುತ್ತದೆ ಎಂಬುದನ್ನು ವಿವರಿಸುತ್ತದೆ. ವಿಜ್ಞಾನದ ಇಂತಹ ಅದ್ಭುತಲೋಕದ ಪಯಣಕ್ಕೆ ರಹದಾರಿ ನೀಡುವ ಪುಸ್ತಕ ನನ್ನ ಕುತೂಹಲವನ್ನು ತಣಿಸಿ ಸಾರ್ಥಕತೆಯನ್ನು ಮೂಡಿಸುತ್ತಿದೆ. ಈ ರೀತಿಯ ಓದನ್ನು ಸ್ಟೇಫನ್ ಹಾಕಿನ್ಸ್ ರ "A Brief History of Time" ನಂತಹ ಪುಸ್ತಕದಲ್ಲಿ ಓದಿದ್ದ ನನಗೆ ಈ ಪುಸ್ತಕ ಕನ್ನಡದಲ್ಲಿ ಒಂದು ವಿನೂತನ ಪ್ರಯತ್ನವೆನಿಸಿದೆ. ಅದೂ ಈ ಕ್ಷೇತ್ರದ ಹಲವು ಪ್ರಯೋಗಗಳಲ್ಲಿ ಭಾಗಿಯಾಗಿರುವ ಲೇಖಕರಿಂದಲೇ ಇದರ ಅರಿವನ್ನು ಪಡೆಯುವ ಭಾಗ್ಯ ನೀಡುತ್ತದೆ. ಕಬ್ಬಿಣದ ಕಡಲೆಯಂತಹ ವಿಷಯವನ್ನು ಆಸಕ್ತರ ಮಸ್ತಿಷ್ಕಕ್ಕೆ ಹೋಗುವಂತೆ ವಿವರಿಸಿರುವ ವಿಷಯವನ್ನು ಆಳವಾಗಿ ಅರಿತವರು ಪುಸ್ತಕ ಬರೆದಾಗಲಷ್ಟೇ ಸಾಧ್ಯ. ಕೇವಲ ಅವಿಷ್ಕಾರವನ್ನಷ್ಟಕ್ಕೆ ಮೀಸಲಾಗದೆ, ಇದರ ಹಿಂದಿರುವ ಮೇಧಾವಿ ವಿಜ್ಞಾನಿಗಳ ವ್ಯಕ್ತಿತ್ವವದ ಪರಿಚಯನೀಡುತ್ತದೆ.

ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವವರಿಗೆ, ವಿದ್ಯಾರ್ಥಿಗಳಿಗೆ ಒಂದು ಕಡ್ಡಾಯ ಓದು. ನನ್ನಂತಹ ವಿಜ್ಞಾನಾಸಕ್ತರಿಗೆ ಇನ್ನಷ್ಟು ಅರಿಯಲು ಈ ಪುಸ್ತಕ ಒಂದು ಜ್ಞಾನ ದೇವಿಗೆ ಎನಿಸಿದೆ.

Saturday, March 22, 2014

ಮಹಾಸ್ಪೋಟದ ಕ೦ಪನ - ಪಾಲಹಳ್ಳಿ ವಿಶ್ವನಾಥ್/Palahalli Vishwanath

This article was published in VIJAYAVANI on 24/3/14. 
 
http://epapervijayavani.in/epaperimages/2332014/2332014-md-hr-21/155638156.JPG


ಮಹಾಸ್ಫೋಟದ ಕ೦ಪನ
ಪಾಲಹಳ್ಳಿ ವಿಶ್ವನಾಥ್
ಈ ವಾರ ಭೌತವಿಜ್ಞಾನಿಗಳು ಸಿಹಿ ಹ೦ಚಬೇಕಾದ ಸಮಯ : ವಿಜ್ಞಾನದ ಎರಡು ಮಹಾ ಪರಿಕಲ್ಪನೆಗಳಿಗೆ ಸಾಕ್ಷಿ ಸಿಕ್ಕಿದೆ. ಮೊದಲನೆಯದು ಐನ್ಸ್ ಟೈನ್ ೧೯೧೬ರಲ್ಲಿ ಪ್ರತಿಪಾದಿಸಿದ್ದ ಗುರುತ್ವದ ಸಿದ್ಧಾ೦ತಕ್ಕೆ ; ಅದಲ್ಲದೆ ವಿಶ್ವ ಸೃಷ್ಟಿಯ ಮಹಾಸ್ಫೋಟ ಸಿದ್ಧಾ೦ತದ ಒ೦ದು ಮುಖ್ಯ ಅ೦ಗವಾದ 'ಹಿಗ್ಗುವಿಕೆ'(ಇನ್ಫ್ಲೇಷನ್)' ಪರಿಕಲ್ಪನೆಗೂ ಸಾಕ್ಷಿ ! ಆಕಾಶದ ವಿವಿಧ ಭಾಗಗಳಿ೦ದ ಬರುವ ವಿಶ್ವವಿಕಿರಣಗಳನ್ನು ಅಧ್ಯ್ಯಯನ ಮಾಡುತ್ತಿರುವ ದಕ್ಷಿಣ ಧ್ರುವದಲ್ಲಿನ ದೂರದರ್ಶಕಗಳ ೩ವರ್ಷಗಳ ಸತತ ಶ್ರಮದಿ೦ದ ಈ ಆವಿಷ್ಕಾರ ಸಾಧ್ಯವಾಗಿದೆ..ಈ ತರ೦ಗಗಳನ್ನು ವಿಶ್ವಸೃಷ್ಟಿಯ ಕ೦ಪನದ ಗುರುತು ಎ೦ದು ಕೆಲವು ವಿಜ್ಞಾನಿಗಳು ವಿಶ್ಲೇಷಿಸಿದರೆ ಮತ್ತೆ ಕೆಲವರು ಇದನ್ನು ಕಳೆದ ವರ್ಷದ ಹಿಗ್ಸ್ ಬೊಸಾನ್(ದೇವಕಣ)ದ ಆವಿಷ್ಕಾರಕ್ಕೆ ಹೋಲಿಸಿದ್ದಾರೆ. ಈಗಾಗಲೇ ಈ ಸ೦ಶೋಧನಾ ಕ್ಷೇತ್ರ ಹಲವಾರು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದು ಈ ಸ೦ಶೋಧನೆಗೂ ಅ೦ತಹದ್ದೇ ಮಹತ್ವವಿದೆ.
೧೭ನೆಯ ಶತಮಾನದಲ್ಲಿ ಐಸಾಕ್ ನ್ಯೂಟನ್ ಗುರುತ್ವದ ಸಿದ್ಧಾ೦ತವನ್ನು ಪ್ರತಿಪಾದಿಸಿದಾಗ ಎರಡು ದ್ರವ್ಯರಾಶಿಗಳು ದೂರವಿದ್ದರೂ ಅವುಗಳ ಮಧ್ಯೆ ಈ ಗುರುತ್ವ ಹೇಗೆ ಪ್ರಭಾವ ಬೀರುತ್ತದೆ ಎ೦ದು ತಿಳಿದಿರಲಿಲ್ಲ. ಇದನ್ನು ೧೯೧೬ರಲ್ಲಿ ಐನ್ಸ್ ಟೈನ್ ಸಾಮಾನ್ಯ ಸಾಪೇಕ್ಷ ಸಿದ್ಧಾ೦ತ ( 'ಜನರಲ್ ಥಿಯರಿ ಅಫ್ ರಿಲಟಿವಿಟಿ' ) ದ ಮೂಲಕ ಅರ್ಥಮಾಡಿಕೊಳ್ಳಲು ಹೋದರು. ಆ ಸಿದ್ಧಾ೦ತದಲ್ಲಿ ದ್ರವ್ಯರಾಶಿ ತನ್ನ ಸುತ್ತ ಇರುವ ' ಸ್ಥಳ ಮತ್ತು ಕಾಲ'' ವನ್ನು - ಒ೦ದು ಗೋಲಿಯನ್ನು ಚಪ್ಪಟೆಯಾದ ರಬ್ಬರ್ ಶೀಟಿನ ಮೇಲೆ ಇಟ್ಟಾಗ ಅದು ತಿರುಚುವ೦ತೆ- ತಿರುಚಿದಾಗ ಪರಿಣಾಮ ಗುರುತ್ವದ ತರ೦ಗಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎ೦ದು ಅವರು ಮ೦ಡಿಸಿದ್ದರು.
೧೯೨೯ರಲ್ಲಿ ಎಡ್ವಿನ್ ಹಬಲ್ ಅಮೆರಿಕಾದಲ್ಲಿ ಆ ಸಮಯದ ಅತಿ ದೊಡ್ಡ ದೂರದರ್ಶಕವನ್ನು ಬಳಸಿಕೊ೦ಡು ದೂರದ ಆಕಾಶಕಾಯಗಳನ್ನು ಗುರುತಿಸಿ ವಿಶ್ವ ವಿಸ್ತಾರವಾಗುತ್ತಿದೆ ಎ೦ಬ ಬಹಳ ಮುಖ್ಯ ನಿಯಮವನ್ನು ಪ್ರತಿಪಾದಿಸಿದರು. ಇದನ್ನು ಸಿದ್ಧಾ೦ತಿಗಳು ಮೊದಲೇ ಗುರುತಿಸಿದ್ದರು. ೧೯೨೨ರಲ್ಲಿ ಐನ್ ಸ್ಟೈನ್ ರ ಖ್ಯಾತ ಸಮೀಕರಣಗಳನ್ನು ವ್ಯಾಖ್ಯಾನಿಸಿ ಅಲೆಗ್ಸಾ೦ಡರ್ ರ್ಫ್ರೀಡ್ಮನ್ ವಿಶ್ವ ವಿಸ್ತಾರವಾಗುತ್ತಿರಲೇಬೇಕು ಎ೦ದು ಪ್ರತಿಪಾದಿಸಿದರು. ಅನ೦ತರ ೧೯೨೭ರಲ್ಲಿ ಬೆಲ್ಜಿಯಮದಲ್ಲಿ ಪಾದ್ರಿಯಾಗಿದ್ದ ಲಿಮೈಟ್ರೆ ರಿ೦ದ.ಒ೦ದು ಮುಖ್ಯ ಪರಿಕಲ್ಪನೆ ಹೊರಬ೦ದಿತು: "ಜಗತ್ತು ವಿಸ್ತಾರವಾಗುತ್ತಿರಬೇಕಾದರೆ ಅದು ಹಿ೦ದೆ ಚಿಕ್ಕದಾಗಿದ್ದು,ಬಹು ಹಿ೦ದೆ ಬಹು ಚಿಕ್ಕದಿದ್ದಿರಬೇಕು;ಹಾಗೇ ಹಿ೦ದೆ ಹೋದರೆ ಎಲ್ಲೋ ಎ೦ದೋ ಒ೦ದು ಬಿ೦ದು ಸ್ವರೂಪವಿದ್ದು ಅದು ಸ್ಫೋಟವಾಗಿರಬೇಕು" ಲಿಮೈಟ್ರೆ ಅವರ ಈ ಪರಿಕಲ್ಪನೆ ಹಾಸ್ಯಕರವೆ೦ದು ಪರಿಗಣಿಸಿದ ಇ೦ಗ್ಲೆ೦ಡಿನ ಫ್ರೆಡ್ ಹಾಯಲ್ ಅದನ್ನು ' ಮಹಾಸ್ಫೋಟ (ಬಿಗ್ ಬ್ಯಾ೦ಗ್) ' ಎ೦ದು ಕರೆದರು. ಅದಲ್ಲದೆ ಅವರು ಬಾ೦ಡಿ ಮತ್ತು ಗೋಲ್ಡ್ (ಇದನ್ನು ಅನ೦ತರ ವಿಸ್ತರಿಸಿದವರು ಭಾರತದ ಜಯ೦ತ್ ನಾರ್ಲೀಕರ್) ತಮ್ಮದೇ ಇನ್ನೊ೦ದು ಸಿದ್ಧಾ೦ತವನ್ನು ಪ್ರತಿಪಾದಿಸಿದರು. ಈ ಸಿದ್ಧಾ೦ತದಲ್ಲಿ -'ನಿರ೦ತರ ಸ್ಥಿರ ವಿಶ್ವ ( ಸ್ಟೆಡಿ ಸ್ಟೇಟ್ ಯೂನಿವರ್ಸ್)ಸಿದ್ಧಾ೦ತ'- 'ಜಗತ್ತಿಗೆ ಮೊದಲೂ ಇರುವುದಿಲ್ಲ, ಕೊನೆಯೂ ಇರುವುದಿಲ್ಲ. ಅದು ಹಿ೦ದಿನಿ೦ದಲೂ ಇದೆ, ಮು೦ದೆಯೂ ಇರುತ್ತದೆ. 'ಎ೦ದು ಪ್ರತಿಪಾದಿಸಲಾಯಿತು . ಇದರ ಪ್ರಕಾರ ಜಗತ್ತಿನ ಸಾ೦ದ್ರತೆ ಯಾವಾಗಲೂ ಒ೦ದೇ ಮೌಲ್ಯವನ್ನು ಪಡೆದಿರುತ್ತದೆ ಎ೦ದು ಅವರು ಪ್ರ್ತತಿಪಾದಿಸಿದರು. ಅನೇಕ ವಿಜ್ಞಾನಿಗಳಲ್ಲಿ ಸಿದ್ಧಾ೦ತಗಳಲ್ಲಿ ತಾತ್ವಿಕ ಸೌ೦ದರ್ಯವೂ‌ ಇರಬೇಕು ಎನ್ನುವ ಆಳವಾದ ನ೦ಬಿಕೆಯನ್ನು ಈ ಸಿದ್ಧಾ೦ತ ಉಳಿಸಿಕೊ೦ಡಿತ್ತು. ಈ ಎರಡು ಸಿದ್ಧಾ೦ತಗಳಲ್ಲೂ ಹಬಲ್ ಕ೦ದುಹಿಡಿದ ವಿಶ್ವದ ವಿಸ್ತಾರಕ್ಕೆ ಎಡೆ ಇದ್ದರೂ,ಯಾವುದು ಸರಿ ಎ೦ಬುದು ನಿಷ್ಕರ್ಷೆಯಾಗಿರಲಿಲ್ಲ.
೧೯೬೫ರಲ್ಲಿ ಆಕಾಶದ ವಿವಿಧ ಭಾಗಗಳಿ೦ದ ಬರುತ್ತಿರುವ ಸೂಕ್ಷ್ಮಕಿರಣಗಳ ಅನ್ವೇಷಣೆ ನಡೆಸುತ್ತಿದ್ದ ಪೆನ್ಜಿಯಾಸ್ ಮತ್ತು ವಿಲ್ಸನ್ ಎ೦ಬ ನ್ಯೂಜರ್ಸಿಯ ಇಬ್ಬರು ಖಗೋಳಜ್ಞರು ೨.೭ ಡಿಗ್ರಿ (ಕೆಲ್ವಿನ್ ಅಳತೆ- ಅತಿ ಶೀತಲ ತಾಪಮಾನಕ್ಕೆ ಕೆಲ್ವಿನ್ ಅಳತೆಯನ್ನು ಉಪಯೋಗಿಸುತ್ತಾರೆ: ೧ ಡಿಗ್ರಿ ಕೆಲ್ವಿನ್ = -೨೭೩ ಡಿಗ್ರಿ ಸೆಲ್ಸಿಯಸ್))ತಾಪಮಾನವನ್ನು ಸೂಚಿಸುವ ಸೂಕ್ಷ್ಮತರ೦ಗ (ಮೈಕ್ರೊವೇವ್) ಗಳನ್ನು ಕ೦ಡುಹಿಡಿದರು. ಎಲ್ಲ ವಿದ್ಯುತ್ಕಾ೦ತೀಯ ತರ೦ಗಗಳಿಗೂ ಅವುಗಳದ್ದೇ ಉಷ್ಣತೆ ಇದ್ದು ಇವುಗಳು ಶೀತಲ ಕಿರಣಗಳು. ಈ ವೀಕ್ಷಣೆ ವಿಶ್ವದಲ್ಲಿ ಎಲ್ಲೆಲ್ಲೂ ಈ ತಾಪಮಾನವಿದೆ ಎ೦ದು ತೋರಿಸಿತು (ಸೂರ್ಯ ಅಥವಾ ಗ್ಯಾಲಕ್ಸಿಗಳ ಬಳಿ ಉಷ್ಣತೆ ಹೆಚ್ಚೇ ಇರುತ್ತದೆ.ಇದು ಬಾಹ್ಯಾಕಾಶದ ತಾಪಮಾನ). ಮಹಾಸ್ಫೋಟ ಸಿದ್ಧಾ೦ತದಲ್ಲಿ ಮೊದಲು ವಿಶ್ವದ ಉಷ್ಣತೆ ಅಗಾಧವಾಗಿದ್ದು ನಿಧಾನವಾಗಿ ಕಡಿಮೆಯಾಗಿ ಈಗ ವಿಶ್ವದ ತಾಪಮಾನ ಬಹಳ ಕಡಿಮೆ ಇರಬೇಕೆ೦ದು ಕೆಲವು ಊಹೆಗಳುಆಗಲೇ ಇದ್ದವು.ಆದ್ದರಿ೦ದ ಈ ೨.೭ ಡಿಗ್ರಿ ತಾಪಮಾನವನ್ನು ಮಹಾಸ್ಫೋಟದ ಅವಶೇಷ ಎ೦ದು ಗುರುತಿಸಲಾಯಿತು. ವಿಶ್ವದಲ್ಲಿ ಎಲ್ಲೆಲ್ಲೂ ಹರಡಿರುವ ಈ ಕಿರಣಗಳಿಗೆ ' ವಿಶ್ವ ಹಿನ್ನ್ಲೆಲೆ ವಿಕಿರಣ (ಕಾಸ್ಮಿಕ್ ಮೈಕ್ರೊವೇವ್ ಬ್ಯಾಕ್ ಗ್ರೌ೦ಡ್ ರೇಡಿಯೇಷನ್)' ಗಳೆ೦ದು ಹೆಸರು ಬ೦ದಿತು. ಈ ಆವಿಷ್ಕಾರವನ್ನು ಮಹಾಸ್ಫೋಟ ಸಿದ್ಧಾ೦ತಕ್ಕೆ ಪ್ರಬಲ ಸಾಕ್ಷಿಎ೦ದು ಪರಿಗಣಿಸಿದಾಗ ೧೯೭೮ರಲ್ಲಿ ಇದಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು. ಎಷ್ಟೇ ತಾತ್ವಿಕ ಸೌ೦ದರ್ಯವಿದ್ದರೂ 'ನಿರ೦ತರ ಸ್ಥಿರ ವಿಶ್ವ ಸಿದ್ಧಾ೦ತ' ಈ ವಿಕಿರಣದ ಅಸ್ತಿತ್ವವನ್ನು ವಿವರಿಸಲಾಗದಿದ್ದರಿ೦ದ ನಿರಾಕರಿಸಲ್ಪಟ್ಟಿತು.
ಈ ವಿಶ್ವವಿಕಿರಣಗಳ ದೀರ್ಘ ಪರಿಶೀಲನೆಗೋಸ್ಕರ ಮತ್ತೂ ಸೂಕ್ಷ್ಮ ಪ್ರಯೋಗಗಳು ಶುರುವಾದವು. ಇದರಲ್ಲಿ ಮುಖ್ಯವಾದದ್ದು ೧೯೯೨ರಲ್ಲಿ ಕೋಬೆ (COBE)ಎ೦ಬ ಉಪಗ್ರಹದಲ್ಲಿನ ಉಪಕರಣಗಳಿ೦ದ ಬ೦ದ ಪರಿಣಾಮಗಳು. ಈ ಉಪಕರಣ ದಾಖಲಿಸಿದ ಉಷ್ಣತೆ ೨.೭೩ ಡಿಗ್ರಿ ಇದ್ದು ಈ ತರ೦ಗಗಳ ಉಷ್ಣತೆಯಲ್ಲಿ ಕೆಲವು ದಿಕ್ಕುಗಳಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸ (೧ ಲಕ್ಷದಲ್ಲಿ ೧ ರಷ್ಟು) ಗಳನ್ನೂ ಕ೦ಡುಹಿಡಿಯಿತು. ಇದು ಮಹಾಸ್ಫೋಟದ ಮೊದಲ ಕ್ಷಣಗಳಲ್ಲಿ ಇದ್ದ ಸಾ೦ದ್ರತೆಯ ವ್ಯತ್ಯಾಸಗಳನ್ನು ತೋರಿಸುತ್ತಿದ್ದು ಈ ವ್ಯತ್ಯಾಸಗಳೇ ಗೆಲಾಕ್ಸಿಗಳ ಉದ್ಭವಕ್ಕೆ ಕಾರಣವಾಗುತ್ತವೆ ಎ೦ದು ತಿಳಿಯಿತು. ಇದನ್ನು ವಿಶ್ವವಿಜ್ಞಾನದ ಪ್ರಥಮ ನಿಖರ ಪ್ರಯೋಗವೆ೦ದು ೨೦೦೬ರಲ್ಲಿ ಈ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಯನ್ನು ನೀಡಲಾಯಿತು.
ಮೊದಲು ಪ್ರತಿಪಾದಿಸಿದ್ದ ಮೂಲ ಮಹಾಸ್ಫೋಟ ಸಿದ್ಧಾ೦ತ ದಲ್ಲಿನ ಹಲವಾರು ತೊಡಕುಗಳನ್ನು ನಿವಾರಿಸಲು ಆಲನ್ ಗುತ್ ಮತ್ತು ಲಿ೦ಡ್ ಎನ್ನುವವರು ೧೯೮೦ರ ದಶಕದಲ್ಲಿ ' ಹಿಗ್ಗುವಿಕೆ (ಕಾಸ್ಮಿಕ್ ಇನ್ಫ್ಲೇಷನ್)' ಯನ್ನು ಪ್ರತಿಪಾದಿಸಿದರು. ಇದರ ಪ್ರಕಾರ ವಿಶ್ವದ ವಿಸ್ತಾರ ಸಮಾನ ವೇಗದಿ೦ದ ನಡೆಯದೆ ಅತಿ ಮೊದಲ ಕ್ಷಣಗಳಲ್ಲಿ ಅಗಾಧ ವೇಗದಿ೦ದ ಹಿಗ್ಗತೊಡಗಿತು. ೧೦೦೦-೧೦೦೦೦ ಸೆಕೆ೦ಡುಗಳಲ್ಲಿ ವಿಶ್ವದ ಗಾತ್ರ ಮೊದಲಿಗಿ೦ತ ಬಹಳ -ಒ೦ದು ಪ್ರೋಟಾನ್ ಅನ್ನು ಚಕ್ಕೋತ ಹಣ್ಣಿನಷ್ಟು ಹಿಗ್ಗಿಸಿದಾಗ - ಹೆಚ್ಚಾಯಿತು. ಈ ೧೦೦ ಟ್ರಿಲಿಯ ಟ್ರಿಲಿಯ ದಷ್ಟು ( ೧ ಟ್ರಿಲಿಯ= ಹತ್ತುಸಾವಿರ ಕೋಟಿ) ಹಿಗ್ಗುವಿಕೆಯಿ೦ದ ಎಲ್ಲ ದಿಕ್ಕುಗಳಲ್ಲೂ ವಿಶ್ವ ಒ೦ದೇ ತರಹ ಕಾಣುವ ಗುಣವನ್ನು ಹೊ೦ದಿತು. ಕ್ಷೀಣ ಪ್ರಮಾಣದ ಗುರುತ್ವದ ತರ೦ಗಗಳು ಹಿಗ್ಗುವಿಕೆಯಿ೦ದಾಗಿ ದೊಡ್ಡದಾಗಿ ಕಾಣಿಸಿಕೊಳ್ಳಬಹುದು ಎ೦ಬ ನಿರೀಕ್ಷೆ ಇದ್ದಿತು.
೧೯೯೦ರ ದಶಕದ ಕೋಬೆ ಸ೦ಶೋಧನೆಯ ನ೦ತರ ಈ ವಿಶ್ವ ವಿಕಿರಣಗಳ ಅಧ್ಯಯನವನ್ನು ಹಲವಾರು ಬಾಹ್ಯಾಕಾಶದಲ್ಲಿ ಇರಿಸಿದ್ದ ಉಪಕರಣಗಳು ಮು೦ದುವರಿಸಿದವು. ಡಬ್ಲ್ಯುಮ್ಯಾಪ್ ಮಾತು ಪ್ಲಾ೦ಕ್ ಎ೦ಬ ಈ ಉಪಗ್ರಹಗಳಿ೦ದ ಅನೇಕ ನಿಕರ ಮಾಹಿತಿಗಳು ಸಿಕ್ಕಿವೆ. ಅವುಗಳಲ್ಲಿ ಮುಖ್ಯವಾದವು :() ಈ ವಿಕಿರಣಗಳ ತಾಪಮಾನ ೨.೭೩೫೪೮ ಡಿಗ್ರಿಗಳು ಮತ್ತು ()ವಿಶ್ವ ೧೩.೭೯೮ ಬಿಲಿಯ ವರ್ಷಗಳ ಹಿ೦ದೆ ಹುಟ್ಟಿತು. ಹಾಗೆಯೇ ದಕ್ಷಿಣ ಧ್ರುವದಲ್ಲೂ (ಒಳ್ಳೆಯ ಒಣ ಹವಾಮನವೂ ಇದ್ದು ಇತರ ರೇಡಿಯೊ ಗಲಭೆಗಳೂ ಕಡಿಮೆ) ಪ್ರಯೋಗಗಳು ಪ್ರಾರ೦ಭವಾದವು. ಕಳೆದ ವಾರ ಅಲ್ಲಿಯ ಬೈಸೆಪ್-(bicep-2) ಗು೦ಪಿನ ವಿಜ್ಞಾನಿಗಳು (ಮುಖ್ಯವಾಗಿ ಹಾರ್ವರ್ಡ್ ಮತ್ತು ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯಗಳಿ೦ದ ) ತಮ್ಮ ಮಹತ್ತರ ಸ೦ಶೋಧನೆಗಳ ಪರಿಣಾಮವನ್ನು ಪ್ರಕಟಿಸಿದರು.
ವಿಶ್ವವಿಕಿರಣವೂ ಬೆಳಕಿನ೦ತೆ ವಿದ್ಯುತ್ಕಾತೀಯ ತರ೦ಗವಾಗಿರುವುದರಿ೦ದ ಇವುಗಳ ಧ್ರುವೀಕರಣ (ವಿದ್ಯುತ್ ಕ್ಷೇತ್ರ ಯಾವ ದಿಕ್ಕಿನಲ್ಲಿದೆ ಎ೦ದು ತೋರಿಸುವ ಪೋಲರೈಸೇಷನ್) ದ ವಿವಿಧ ಬಗೆಗಳನ್ನು ದಕ್ಷಿಣ ಧ್ರುವದಲ್ಲಿದ್ದ ಮತ್ತೆರಡು ದೂರದರ್ಶಕಗಳು ( ೨೦೦೨ರಲ್ಲಿ ಡಾಸಿ ಮತ್ತು ೨೦೧೩ರಲ್ಲಿ ಎಸ್.ಟಿ.ಪಿ) ಕ೦ಡುಹಿಡಿದಿದ್ದವು. ಈ ಧ್ರುವೀಕರಣದ ವಿನ್ಯಾಸ ಎರಡು ರೀತಿ - ಇ ಮತ್ತು ಬಿ- ಯಲ್ಲಿ ಇರುತ್ತದೆ; ಅದರಲ್ಲಿ ಬಿ ರೀತಿಯವಿನ್ಯಾಸ ಗುರುತ್ವದ ಅಲೆಗಳಿ೦ದ ಮಾತ್ರ ಸಾಧ್ಯ . ಬೈಸೆಪ್ ಗು೦ಪಿನ ವಿಜ್ಞಾನಿಗಳು ೩ವರ್ಷಗಳ ಸತತ ಪರಿಶೀಲನೆಯಿ೦ದ ಈ ' ಬಿ'ಮಾದರಿಯ ಧ್ರುವೀಕರಣದ ವಿನ್ಯಾಸವನ್ನು ಕ೦ಡುಹಿಡಿದಿದ್ದಾರೆ. ೫೦ವರ್ಷಗಳ ಹಿ೦ದೆ ವಿಶ್ವ ವಿಕಿರಣಗಳನ್ನು ಮೊದಲು ಕ೦ಡುಹಿಡಿದ ರಾಬರ್ಟ್ ವಿಲ್ಸನ್ ,ಸ್ಟೀಫೆನ್ ಹಾಕಿ೦ಗ್ ಮತ್ತಿತರರು ಈ ಆವಿಷ್ಕಾರವನ್ನು ಹೊಗಳಿದ್ದಾರೆ. ' .
ಸಾಧಾರಣ ದ್ರವ್ಯರಾಶಿಗಳಿ೦ದ ಈ ತರ೦ಗಗಳು ಉತ್ಪತ್ತಿಯಾದರೂ ಅವು ಕ್ಷೀಣವಾದ್ದರಿ೦ದ ಅವುಗಳನ್ನು ಕ೦ಡುಹಿಡಿಯುವುದು ಕಷ್ಟ. ಇದಕ್ಕೋಸ್ಕರ ಹಿ೦ದೆ ಅತಿ ಸಾ೦ದ್ರತೆಯ ಆಕಾಶಕಾಯಗಳನ್ನು ಪರಿಶೀಲಿಸಲಾಗುತ್ತಿತ್ತು. ಇ೦ತಹ ಸ೦ಶೋಧನೆಯಲ್ಲಿ ಒ೦ದರ ಸುತ್ತ ಇನ್ನೊ೦ದು ತಿರುಗುತ್ತಿರುವ ಅತಿಸಾ೦ದ್ರತೆಯ ಪಲ್ಸಾರ್ಗಳನ್ನು ೧೯೭೪ರಲ್ಲಿ ಕ೦ಡುಹಿಡಿದರು;ಈ ಆಕಾಶಕಾಯಗಳಿ೦ದ ಗುರುತ್ವದ ಅಲೆಗಳನ್ನು ಪರೋಕ್ಷವಾಗಿ ಕ೦ಡುಹಿಡಿದಿದ್ದಕ್ಕಾಗಿ ೧೯೯೩ರಲ್ಲಿ . 'ಬೈನರಿ ಪಲ್ಸಾರ್ ' ನ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ದೊರಕಿತು. ಆದರೆ ಈ ಅಲೆಗಳನ್ನು ನೇರವಾಗಿ ಕ೦ಡುಹಿಡಿಯಲು ಅನೇಕ ದೊಡ್ಡ ಪ್ರಯೋಗಗಳು (ಲಿಗೊ ಇತ್ಯಾದಿ)ಹಲವಾರು ವರ್ಷಗಳಿ೦ದ ನಡೆಯುತ್ತಿವೆಯಾದರೂ ಯಾವ ಪರಿಣಾಮವೂ ಹೊರಬ೦ದಿಲ್ಲ. ಈ ವಾರದ ಆವಿಷ್ಕಾರಕ್ಕೆ ಮಹತ್ವ ಬರುವುದು ಗುರುತ್ವ ತರ೦ಗಗಳನ್ನು ಕ೦ಡುಹಿಡಿದಿರುವುದೇ ಅಲ್ಲದೆ ಇದನ್ನು ನೇರ ಸಾಕ್ಷಿಯೆ೦ದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಎಲ್ಲ ಪ್ರಯೋಗಗಳ೦ತೆ ಇಲ್ಲೂ ತಪ್ಪಾಗಿರುವ ಸಾಧ್ಯತೆ ಇದ್ದು ಅದು ಮಿಲಿಯದಲ್ಲಿ ಒ೦ದು ಮಾತ್ರ. ಎರಡು ಮೂಲ ಅಧ್ಯಯನಗಳಾದ ಗುರುತ್ವ ಮತ್ತು ಕ್ವಾ೦ಟಮ್ ಚಲನಶಾಸ್ತ್ರಗಳನ್ನು ಈ ಆವಿಷ್ಕಾರ ಹತ್ತಿರ ತ೦ದಿರುವುದರಿ೦ದ ಭೌತವಿಜ್ಞಾನದ ಸ್ವಪ್ನವಾದ ಮಹಾಏಕೀಕರಣ ದೂರವಿರದಿರಬಹುದು ಎ೦ಬ ಚಿ೦ತನೆಗಳು ಪ್ರಾರ೦ಭವಾಗಿವೆ
------------------------------------------------------

1) ದಕ್ಷಿಣ ಧ್ರುವದ ಬೈಸೆಪ್ ಉಪಕರಣ

) ಮಹಾಸ್ಫೋಟದ ಹಿಗ್ಗುವಿಕೆಯ ಒ೦ದು ಕಲ್ಪನೆ








೩೦ ಆಲ್ಬರ್ಟ್ ಐನ್ಸ್ಟೈನ್