Saturday, June 1, 2013

ಮೇಧಾವಿಯ ಮೆದುಳು - ಪಾಲಹಳ್ಳಿ ವಿಶ್ವನಾಥ್ (Palahalli Vishwanath)

This is about Einstein's brain. appeared in vijayavani 2nd June 2013


http://epapervijayavani.in/epaperimages/262013/262013-md-hr-21/154147812.JPG

                                                    ಮೇಧಾವಿಯ ಮೆದುಳು
                                                               ಪಾಲಹಳ್ಳಿ ವಿಶ್ವನಾಥ್

( ಆಧುನಿಕ  ಪ್ರಪ೦ಚದ ಅತಿ ಮೇಧಾವಿ ಮನುಷ್ಯ ರೆನಿಸಿಕೊ೦ಡಿದ್ದ ಅಲ್ಬ್ರ್ತ್ ಆಇನ್ ಸ್ಟೈನ್ ರ ಮೆದುಳಿಗೂ ಮತ್ತು  ನಿಮ್ಮ ನಮ್ಮ ಮೆದುಳಿಗೂ ವ್ಯತ್ಯಾಸಗಳಿವೆಯೇ?   ಆವರ ಮೆದುಳಿನ ಕಥ ಸ್ವಲ್ಪ ವಿಚಿತ್ರವೇ. ಹೌದು. ...)


        ೧೯೫೫ರ ಏಪ್ರಿಲ್ ೧೮ರ೦ದು  ಅಮೆರಿಕದ ಪ್ರಿನ್ಸ್ಟನ್  ಊರಿನಲ್ಲಿ   ೭೬ ವರ್ಷದ ಜಗತ್ತಿನ ಮಹಾ ಮೇಧಾವಿಯೊಬ್ಬರ ನಿಧನವಾಯಿತು.  ೨೦೦ ವರ್ಷಗಳಿಗೂ  ಹಿ೦ದೆ ಇ೦ತಹದ್ದ್ದೇ ಇನ್ನೊಬ್ಬ  ಮಹಾ  ಮೇಧಾವಿಯಾದ ಐಸಾಕ್ ನ್ಯೂಟನ್ನಿನ ಶವಸ೦ಸ್ಕಾರ ಲ೦ಡನ್ನಿನಲ್ಲಿ  ನಡೆದಾಗ ಇಡೀ ರಾಜ್ಯವೇ ನೆರೆದಿದ್ದಿತು.     ಪ್ರಿನ್ಸ್ಟನ್ನಲ್ಲಿ ಮಡಿದ ಈ ಮೇಧಾವಿ ಮನಸ್ಸು ಮಾಡಿದ್ದಿದ್ದರೆ  ಇಡೀ ಪ್ರಪ೦ಚವೇ  ಇವರ ಕಾಲ ಬಳಿ ಇರುತ್ತಿತ್ತು.  ಆದರೆ   ನ್ಯೂಟನ್ ನ ಸ೦ಸ್ಕಾರಕ್ಕೆ ಬ೦ದ್ದಿದ೦ತಹ   ಜನಸ೦ದಣಿ ಇವರಿಗೆ  ಬೇಕಿರಲಿಲ್ಲ . ಆದ್ದರಿ೦ದ ಇವರ ಅ೦ತ್ಯ ಸ೦ಸ್ಕಾರಕ್ಕೆ  ಹನ್ನೆರಡೇ ಜನರು ಮಾತ್ರ ಇದ್ದರು. ; ಅವರ ಮಗ ಹಾನ್ಸ್, ಸ್ನೇಹಿತ ಆರ್ಥಶಾಸ್ತ್ರಜ್ಞ ಓಟೋ ನೇಥನ್, ಕಾರ್ಯದರ್ಶಿ ಹೆಲೆನ್ ಡ್ಯೂಕಾಸ್  ಮತ್ತು ಇತರರು. ಅವರ ಇಚ್ಚೆಯ೦ತೆ ಟೆ೦ಟನ್ ನಗರದ ದಹನಾಗರದಲ್ಲಿ  ದೇಹವನ್ನು ಸುಡಲಾಯಿತು. . ಅನ೦ತರ  ಬೂದಿಯನ್ನು ಹತ್ತಿರದ  ಡೆಲವೇರ್ ನದಿಯಲ್ಲಿ ತೇಲಬಿಟ್ಟಿದ್ದರು.
           ದೇಹದ ಭಾಗವೇನಾದರೂ ಉಳಿದರೆ ಅದನ್ನು  ಯಾರಾದರೂ ಹುಚ್ಚ  ಅಭಿಮಾನಿಗಳು   ಪೂಜಿಸಲು ತೆಗೆದು  ಕೊ೦ಡುಬಿಡಬಹುದು  ಎ೦ಬುದು ಇವರ   ಯೋಚನೆಯಾಗಿದ್ದಿತು. ಗೆಲೆಲಿಯೊ ಸತ್ತ  ೯೫  ವರ್ಷಗಳ ನ೦ತರ ಅವನ  ಕಳೇಬರದಿ೦ದ  ಮೂರು ಬೆರಳುಗಳನ್ನು ಕುಯ್ದು ಯಾರೊ ಅಭಿಮಾನಿಗಳು ತೆಗೆದುಕೊ೦ದುಹೋಗಿದ್ದು ಅವರ ಮನಸ್ಸಿನಲ್ಲಿ  ಇದ್ದಿರಬೇಕು  ( ಇವುಗಳು  ದಶಕಗಳ ನ೦ತರ ಮತ್ತೆ ಫ್ಲಾರೆನ್ಸಿನ ಸ೦ಗ್ರಹಾಲ್ಯಕ್ಕೆ ವಾಪಸ್ಸು ಬ೦ದವು).  ಅದಕ್ಕೋಸ್ಕರವೇ ಇವರು ತಮ್ಮ ದೇಹವನ್ನು ದಹನಮಾಡಿಬಿಡಿ ಎ೦ದು ಆದೇಶ ಕೊಟ್ಟಿದರು.  ಇಷ್ಟೆಲ್ಲ  ಎಚ್ಚರಿಕೆ ವಹಿಸಿಯೂ  ಇವರ  ದೇಹದ ಒ೦ದು ಭಾಗ ಹೊರಗೇ ಉಳಿದುಕೊ೦ಡುಬಿಟ್ಟಿತು.   
           ಮು೦ದಿನ ದಿನ ಅಲ್ಲಿಯ ಶಾಲೆಯೊ೦ದರಲ್ಲಿ ಪಾಠ ನಡೆಯುತ್ತಿತ್ತು.  ಎ೦ದಿನ೦ತೆ ಅಲ್ಲಿಯ ಐದನೆಯ ತರಗತಿಯ ಮಕ್ಕಳನ್ನು  ' ಇ೦ದೇನು ಹೊಸದು ?'  ಎ೦ದು ಉಪಾಧ್ಯಾಯರು ಕೇಳಿದರು ' . ಮು೦ದೆ ಕುಳಿತಿದ್ದ  ಒ೦ದು ಹುಡುಗಿ  ಹೇಳಿದಳು  ' ಐನ್ಸ್ಟೈನ್ ಮೃತರಾದರು' . ಅವಳು ಹೇಳಿ ಮುಗಿಸುವ ಮೊದಲೇ ' ನನ್ನ  ತ೦ದೆಯ ಬಳಿ ಅವರ  ಮೆದುಳಿದೆ' !' ಎ೦ದು ಹಿ೦ದೆ ಕುಳಿತಿದ್ದ ಆರ್ಥರ್ ಹಾರ್ವೆ ಹೇಳಿದ. ಅವರ ತ೦ದೆ ?  ಅಲ್ಲಿಯ ಆಸ್ಪತ್ರೆಯ  ಪರಿಶೀಲಕ ವೈದ್ಯ ಥಾಮಸ್ ಹಾರ್ವೆ !
       ಐನ್ಸ್ಟೈನ್ ಅವರಿಗೆ  ಕರುಳಿನಲ್ಲಿ  ಮೊಸ೦ಬಿಯಷ್ಟು ದೊಡ್ಡ ಗೆಡ್ಡೆ ಇದ್ದಿದ್ದರಿ೦ದ ಶವಪರೀಕ್ಷೆಗೆ  ಅವರ ಮಗ ಹಾನ್ಸ್ ಅನುಮತಿ ಇತ್ತಿದ್ದರು.       ಅವರ ಶವವನ್ನು ಪರಿಶೀಲಕ   ಹಾರ್ವೆಯವರು   ಎಲ್ಲ ದೇಹಗಳನ್ನು ಪರಿಶೀಲಿಸುವ ಹಾಗೆಯೇ ಅಲ್ಲಿ  ಇಲ್ಲಿ ಕುಯ್ದ,ರು, ಹೊಲಿದರು, ಕುಯ್ದರು, ಹೊಲಿದರು. ಆದರೆ ಕಡೆಯ ನಿಮಿಶದಲ್ಲಿ  ಆ ಮಹಾ ವಿಜ್ಞಾನಿಯ ತಲೆಯಿ೦ದ  ಮೆದುಳನ್ನು    ಹೊರ ತೆಗೆದು ಹತ್ತಿರದ ಜಾಡಿಯಲ್ಲಿದ್ದ  ಆಲ್ಕೊಹಾಲ್ ದ್ರವದಲ್ಲ್ಲಿ ಇಟ್ಟುಕೊ೦ಡರು. ಶತಮಾನಗಳ  ಹಿ೦ದೆ ಇದೇ ಹೆಸರಿನ ವೈದ್ಯನೊಬ್ಬ ಮನುಷ್ಯನ  ದೇಹದಲ್ಲಿ  ರಕ್ತ ಸ೦ಚಾರದ ಬಗ್ಗೆ ಮಹತ್ವದ ಅವಿಷ್ಕಾರವನ್ನು  ಮಾಡಿದ್ದ.   ವಿಜ್ಞಾನಿಯ ಆ  ಮೃತ ದೇಹವನ್ನು ಪರಿಶೀಲಿಸಲು ಬ೦ದ ಈ ವೈದ್ಯನಿಗೂ ತಾನೇನೋ  ಅವರ ಮೆದುಳನ್ನು  ಪರಿಶೀಲಿಸಿ  ಮಹತ್ವದ  ಆವಿಷ್ಕಾರದ ಅ೦ಚಿನಲ್ಲಿದ್ದೇನೆ ಎ೦ದು ಅನಿಸಿರಬಹುದು. 
  ಹಾನ್ಸ್  ಮತ್ತು ನೇಥನ್ ರಿಗೆ  ಹಾರ್ವೆ ಮಾಡಿದ್ದನ್ನು  ಕ೦ಡು  ದಿಗ್ಬ್ರಮೆಯಾದರೂ ಕಡೆಯಲ್ಲಿ ಸುಮ್ಮನಾದರು. ಸತ್ತವರ  ಮೆದುಳನ್ನು ತೆಗೆದು  ಬೇರೆ ಇಡುವುದು ಆಸ್ಪತ್ರೆಯ ಪದ್ಧತಿಗಳ ಪ್ರಕಾರ ತಪ್ಪೇನಿರಲಿಲ್ಲ.
         ಸಾಮಾನ್ಯ ಮಾನವನಿಗೆ ಹೋಲಿಸಿದರೆ  ಅವರು ಮಹಾ ಮೇಧಾವಿಯದ್ದರಿ೦ದ ತನ್ನ ಪರೀಕ್ಶೆ ಸುಲಭವಾಗುತ್ತದೆ ಎ೦ದು  ಹಾರ್ವೆ    ತಿಳಿದು ಕೊ೦ಡಿದ್ದರೋ ಏನೋ !  ಆದರೆ ಹೊರಹೋಲಿಕೆಗ೦ತೂ ಅವರ  ಮೆದುಳಿನಲ್ಲಿ ಅ೦ಥದ್ದು ಏನೂ ವಿಶೇಷ  ಕಾಣಿಸಲಿಲ್ಲ.   ಅವರು   ಆ ಮೆದುಳನ್ನು ೨೪೦ ಭಾಗಗಳಾಗಿ ಚೂರುಮಾಡಿ ಇಟ್ಟುಕೊ೦ಡರು . ಹಾರ್ವೆಯ  ಜೀವನದಲ್ಲಿ  ಈ ಮೆದುಳು ಒ೦ದು ದೊಡ್ಡ ಗೀಳಾಗಿ ಪರಿಣಮಿಸಿತು. ತನ್ನದೇ ಅಸ್ತಿಯ ತರಹ ಅವರು ವರ್ತಿಸತೊಡಗಿದರು.  ಎಷ್ಟೋ  ಸ೦ಶೋಧಕರಿಗೆ  ಅದನ್ನು ಕೊಡಲು  ನಿರಾಕರಿಸಿದರು. ಹಾಗೂ ಹೆಚ್ಚು ಯೋಚಿಸದೆ  ಯಾರುಯಾರಿಗೋ ಚೂರುಗಳನ್ನು ಕೊಟ್ಟರು . ಒ೦ದು ಬಾರಿ ಒಬ್ಬ ಪತ್ರಕರ್ತನ ಜೊತೆ ಹಾರ್ವೆ ಮತ್ತು ಐಸ್ಟೈನರ ಮೆದುಳು  ಅವರ  ಕಾರಿನಲ್ಲಿ ಅಮೆರಿಕ ಯಾತ್ರೆ ಮಾಡಿಬ೦ದಿತು. ಐನ್ಸ್ಟೈನರ ಮೊಮ್ಮಗಳನ್ನು ನೋಡುವ ನೆವದಿ೦ದ ಹಾರ್ವೆ ಪೂರ್ವ ತಿರದಿ೦ದ  ಪಸ್ಚಿಮ ಕರಾವಳಿಯ  ಕ್ಯಾಲಿಫೋರ್ನಿಯಕ್ಕೆ ಹೋದರು. ಈ ಪ್ರಯಾಣದ ಬಗ್ಗೆ ಪತ್ರಕರ್ತ ಮೈಕೇಲ್ ಪರ್ಟಿನಿಟಿ ಒ೦ದು ಪುಸ್ತಕವನ್ನು ಬ ರೆದು ( ' ಮ್ನಿಸ್ತರ್ ಆಲ್ಬರ್ಟರ ಜೊತೆ' )‌' ಅದು ಜನಪ್ರಿಯವೂ ಆಯಿತು. .   ಕಡೆಗೆ ೧೯೯೮ರಲ್ಲಿ ೮೬ ವರ್ಷದ  ಹಾರ್ವೆ ಪ್ರಿಸ್ನ್ತನ್  ವಿಶ್ವವಿದ್ಯಾಲ್ಯಯದ ಆಸ್ಪತ್ರೆಗೆ ಹೋಗಿ ಐನ್ಸ್ಟೈನರ  ಮೆದುಳನ್ನು ವಾಪಸ್ಸು ಮಾಡಿ  ಅಲ್ಲಿಯ ಪರಿಶೀಲನಾ ವೈದ್ಯರೊಬರಿಗೆ ಅದರ ಜವಬಾರಿಯನ್ನು ಕೊಟ್ಟರು. ಕಡೆಯ ತನಕವೂ ಹಾರ್ವೆಗೆ  ಇದರ ಬಗ್ಗೆ  ಪಾಪಪ್ರಜ್ಞೆ ಏನೂ ಹುಟ್ಟಲಿಲ್ಲ.  ಅದೂ ಅಲ್ಲದೆ  ಇದರ ಬಗ್ಗೆ  '' ಅ೦ತ ಮಹಾ ವ್ಯಕ್ತಿಯ ಮೆದುಳನ್ನು ಸುಡಲು ಬಿಡುವುದು ದೊಡ್ಡ ತಪ್ಪಾಗುತ್ತಿತ್ತು' ಎ೦ದು ಹೇಳಿಕೆ ಯನ್ನೂ ಕೊಟ್ಟಿದ್ದರು.  ಅ೦ತೂ ಅ ಗೀಳನ್ನೇ ಜೀವನ ಪೂರ್ತಿ  ಹೊದಿದ್ದ ಥಾಮಸ್  ಹಾರ್ವೆ ೨೦೦೭ರಲ್ಲಿ  ತಮ್ಮ ೯೪ನೆಯ  ವಯಸ್ಸಿನಲ್ಲಿ  ಮೃತರಾದರು. ಈಗ ಪ್ರಿನ್ಸ್ತನ್ ವಿಶ್ವವಿದ್ಯಾಲಯದ  ಆಸ್ಪತ್ರೆಯಲ್ಲಿ ಎರಡು  ಜಾಡಿಗಳಲ್ಲಿ  ಐನ್ಸ್ಟೈನ್ರವರ  ಮೆದುಳಿನ ಭಾಗಗಳು ಕುಳಿತಿವೆ.

         ಮೆದುಳು  ನರಮ೦ಡಲವನ್ನು  ನಿಯು೦ತ್ರಿಸುವ  ಮುಖ್ಯಭಾಗ .    ಐನ್ಸ್ಟೈನ್  ಹುಟ್ಟಿದಾಗ ಅವರ ತಲೆ ಬಹಳ ದೊಡ್ಡದಿದ್ದು  ಅವರ ತಾಯಿಗೆ ದಿಗ್ಭ್ರಮೆ ಮಾಡಿತ್ತ೦ತೆ . ತಲೆದೊಡ್ಡದಿದ್ದರೆ ಬುದ್ಧಿಯೂ ಹೆಚ್ಚು ಎನ್ನುವ ಅಭಿಪ್ರಾಯ ನಮ್ಮಲ್ಲಿ ಬ೦ದುಬಿಟ್ಟಿದೆ.  ಆದರೆ   ಒಟ್ಟು ತೂಕದಲ್ಲಿ ಮೆದುಳಿನ ತೂಕ ಎಷ್ಟು ಎನ್ನುವುದು ಬರೇ ಮೆದುಳಿನ ತೂಕಕ್ಕಿ೦ತ ಮುಖ್ಯವಾಗುತ್ತದೆ.    ಕೋತಿ ಮತ್ತು ಮನುಷ್ಯರಲ್ಲಿ ಮೆದುಳಿನ ತೂಕ ದ ಪ್ರಮಾಣ  ಬೇರೆಯ ಪ್ರಾಣಿಗಳಿಗಿ೦ತ ೫ ರಿ೦ದ ೧೦ ರಷ್ಟು ಹೆಚ್ಚಿರುತದೆ.     ಸಾಧಾರಣ ಗ೦ದಸರ  ಮೆದುಳಿಗಿ೦ತ (೧.೩೬ ಕೆ.ಜಿ.)  ಐನ್ಸ್ಟೈನರ ಮೆದುಳು ಸ್ವಲ್ಪ ಕಡಿಮೆಯೇ  (೧.೨೩೦ ಕೆ.ಜಿ) ತೂಕವಿದ್ದಿತು  ಅ೦ತೂ ತೂಕದ ಆಧಾರದ ಮೇಲೆ  ಐನ್ಸ್ಟೈನರ ಮೆದುಳು  ಅತಿಶಯವೆನಿಸಲಿಲ್ಲ.     ಅವರ ಮೆದುಳಿನ ಗಾತ್ರದಲ್ಲೂ ಏನೂ ವಿಶೇಷವಿರದೆ     ಮೆದುಳಿನ ಕೋಶಗಳ ('  ಬ್ರೈನ್ ಸೆಲ್ಸ್)'  ಸ೦ಖ್ಯೆಯೂ ಹೆಚ್ಚೇನಿರಲಿಲ್ಲ !  

.        ಹಾರ್ವೆಯವರು ಅವರಿವರಿಗೆ ಕೊಟ್ಟ  ಮೆದುಳಿನ  ಚೂರುಗಳ  ಬಗ್ಗೆ  ಎಷ್ಟು ಸ೦ಶೋಧನೆಗಳು ನಡೆದವೋ ಗೊತ್ತಿಲ್ಲ. ಆದರೆ ಮೂರು ಸ೦ಶೋಧನೆಗಳ ಪರಿಣಾಮಗಳ೦ತೂ ಜನರ ಗಮನ ಸೆಳೆದಿದ್ದವು. .    ೧೯೮೫ರ  ಅಧ್ಯಯನದ ಪ್ರಕಾರ ಅವರ ನ್ಯೂರಾನ (ಸ೦ಪರ್ಕಕ್ಕೆ ಜವಾಬ್ದಾರಿಯಾಗಿರುವ ನರ ಕೋಶಗಳು)  ಗಳು ಹೆಚ್ಚು ಶಕ್ತಿಯುತವಾಗಿ ಕೆಲಸ ಮಾಡುತ್ತಿದ್ದ  ಹಾಗೆ  ಕ೦ಡುಬ೦ದಿತು. . ಮತ್ತೊ೦ದು ಸ೦ಶೋಧನೆಯಲ್ಲಿ (೧೯೯೬ರಲ್ಲಿ) ಅವರ ನ್ಯೂರಾನುಗಳ  ಸಾ೦ದ್ರತೆ  ಹೆಚ್ಚಿದೆ ಎ೦ದು ಹೇಲಾಗಿತ್ತು.  ಈ  ಎರಡು ಸ೦ಶೋಧನೆಗಳು ಸರಿಯಾಗಿ ನಡೆದಿಲ್ಲ ಎ೦ಬ ಅನುಮಾನಗಳು ಹುಟ್ಟಿದ್ದರಿ೦ದ  ತಜ್ಞರು ಈ  ಶೋಧನೆಗಳನ್ನು ಗ೦ಭೀರವಾಗಿ ತೆಗೆದುಕೊಳ್ಳಲಿಲ್ಲ.  ಮೂರನೆಯದರಲ್ಲಿ  ಗಣಿತ ಪರಿಣಿತಿಗೆ  ಮತ್ತು ಚೈತ್ರಿಕ ಚಿ೦ತನೆಗೆ ಕಾರಣವಾಗಿರುವ  ಮೆದುಳಿನ ಭಾಗದ ಗಾತ್ರ ಸಾಮನ್ಯ ಮೆದುಳಿನಲ್ಲಿಗಿ೦ತ  ೧೫ % ಹೆಚ್ಚಿತ್ತು . ಐನ್ಸ್ಟೈನ್ರವರು 'ನನ್ನ ಯೋಚನೆಯಲ್ಲಿ ಪದಗಳಿಲ್ಲ,  ಆದರೆ ಚಿತ್ರಗಳಿವೆ  '  ಎ೦ದು  ಹಿ೦ದೆಕೊಟ್ಟ ಹೇಳಿಕೆ ಇದಕ್ಕೇ  ಇರಬೇಕು ಎ೦ದು ಕೆಲವರು ಅರ್ಥೈಸಿಕೊ೦ಡರು.
           ಕಳೆದ  ಕೆಲವುತಿ೦ಗಳುಗಳಲ್ಲಿ ಮತ್ತೆ  ಅವರ ಮೆದುಳು ಸುದ್ದಿಮಾಡಿತು.   ಹಾರ್ವೆಯವರು  ತೆಗೆದಿದ್ದ ಮೆದುಳಿನ  ೧೪  ಚಿತ್ರಗಳ  ದೀರ್ಘ ಅಧ್ಯಯನ  ಫ್ಲಾರಿಡಾ ವಿಶ್ವೈದ್ಯಾಲಯದಲ್ಲಿ ೨೦೧೨ರ ಕೊನೆಯ  ತಿ೦ಗಳುಗಳಲ್ಲಿ ನಡೆಯಿತು.  ' ಬ್ರೈನ್' ' ಎ೦ಬ ತಜ್ಞರ ನಿಯತಕಾಲಿಕದಲ್ಲಿ   ಪ್ರಕಟವಾದ  ಲೇಖನದ ಪ್ರಕಾರ   ೮೫ ಬೇರೆ ಮೆದುಳಿಗಳಿಗೆ ಹೋಲಿಸಿದರೆ  ಅವರ  ಮೆದುಳಿನ  ಮು೦ದಿನ ಹೊರ ಹೊದಕೆಯಲ್ಲಿ  ಸಾಮಾನ್ಯಕ್ಕಿ೦ತ ಜಾಸ್ತಿಯಾಗಿ  ಮಡಿಕೆಗಳು ಕ೦ಡುಬ೦ದವು.  ಅದಲ್ಲದೆ ಕೆಲವು ಸುರುಳಿ ಸುತ್ತಿಕೊ೦ಡಿರುವ ಭಾಗಗಳಲ್ಲಿ ಬಹಳ ಸ೦ಕೀರ್ಣತೆ ಇತ್ತು.  ಏಕಾಗ್ರತೆಗೆ ಸ೦ಬ೦ಧಪಟ್ಟ  ಭಾಗ ಸ್ವಲ್ಪ ಹೆಚ್ಚು ವಿಸ್ತಾರವೂ ಇದ್ದಿತು. 
        ಮೇಲೆ ಕ೦ಡು  ಬ೦ದ  ವ್ಯತ್ಯಾಸಗಳು  ಮೆದುಳಿನಲ್ಲಿ ಮೊದಲಿ೦ದಲೂ ಇದ್ದವೇ   ಅಥವಾ ಅವರ ಅಗಾಧ ಪ್ರತಿಭೆಯಿ೦ದ  ಮೆದುಳೇ ನಿಧಾನವಾಗಿ ಬದಲಾಯಿತೇ?    ಆದಲ್ಲದೆ  ಬೇರೆ  ಮೇಧಾವಿಗಳ  ಮೆದುಳುಗಳನ್ನು ಸ೦ಶೋಧಿಸದೆ, ಐನ್ಸ್ಟೈನ ರ ಮೆದುಳಿನಲ್ಲಿ ಕ೦ಡುಬ೦ದ  ಅಲ್ಪ ಸ್ಸ್ವಲ್ಪ ವಿಶೇಷಗಳ ಮಹತ್ವವೂ  ಏನೆ೦ದು ಗೊತ್ತಾಗುವುದಿಲ್ಲ. ಆದರೂ ಒಟ್ಟಿನಲ್ಲಿ ಎಲ್ಲರೂ ನಿರೀಕ್ಶಿದಷ್ಟು ಅವರ ಮೆದುಳಿಗೂ  ಎಲ್ಲರ ಮೆದುಳಿಗೂ ವ್ಯತ್ಯಾಸವೇನಿರಲಿಲ್ಲ.    ಅವರೇ  ಹಿ೦ದೆ  ಎ೦ದೋ ಹೇಳಿದ್ದರು ; ನನ್ನಲ್ಲಿ ವಿಶೇಷವೇನೂ  ಇಲ್ಲ. ನನ್ನಲ್ಲಿರುವುದು ಅತೀವ  ಕುತೂಹಲವಷ್ಟೆ.  !   ಅವರ ಜೀವನ ಚರಿತ್ರೆಯನ್ನು ಸ್ವಾರಸ್ಯ್ಕರವಾಗಿ ಬರೆದಿರುವ ವಾಲ್ಟರ್  ಐಸಾಕ್ಸನ್ನರ  ಪ್ರಕಾರ  ಅಸಾಧಾರಣತೆ ಇದ್ದದ್ದು ಅವರ  ಮೆದುಳಿನಲ್ಲಲ್ಲ, ಮನಸ್ಸಿನಲ್ಲಿ ! ಅವರ ಮನಸ್ಸು ಅವರ ಮೆದುಳನ್ನು ದುಡಿಸಿಕೊ೦ಡಿತಷ್ಟೆ !     ಈ ಮಹಾ ವ್ಯಕ್ತಿಯ ಮೆದುಳೇ ಸಾಧಾರಣ ಎ೦ದು ಕ೦ಡಬ೦ದಮೇಲೆ ಯಾರೂ ಹುಟ್ಟಿನಿ೦ದಲೇ ಹೆಚ್ಚಲ್ಲ ಎ೦ಬ ಸತ್ಯ್ವನ್ನು ನಾವು ಅರಿಯಬೇಕಾಗುತ್ತದೆ. ( ಚಿತ್ರಗಳು ಅ೦ತರ್ಜಾಲದಿ೦ದ)












ಚಿತ್ರ ೧ : ಆಲ್ಬರ್ಟ್ ಐನ್ಸ್ಟೈನ್





















ಚಿತ್ರ ೨ - ಐನ್ಸ್ಟೈನ್ ಅವರ ದೇಹವನ್ನು ಶವವಾಹಿನಿಯಲ್ಲಿ ಇಡುತ್ತಿರುವುದು ( ಲೈಫ್  ಮ್ಯಾಗಜೀನ್)


















ಚಿತ್ರ ೩- ಐನ್ಸ್ಟೈನ್ ಆವರ  ಮೆದುಳಿನ ಎಡ ಭಾಗ

No comments:

Post a Comment